ಗಾಂಧಿತಾತ ಎಂಬ ಬ್ರಾಂಡ್

ಮೊದಲ ಬಾರಿ ಈ ಸುದ್ದಿಯನ್ನು PTI ಟಿಕ್ಕರ್ ನಲ್ಲಿ ನೋಡಿದಾಗ ಇದ್ಯಾವ ತಮಾಷೆ ಅನ್ನಿಸಿತು. ಮರುದಿನ ಪೇಪರ್ರುಗಳಲ್ಲಿ ಇದೇ ಸುದ್ದಿ: ಮೋ ಬ್ಲಾ ಎನ್ನುವ MNC ಸಂಸ್ಥೆ ೧೪೦ನೇ ಗಾಂಧಿಜಯಂತಿಯ ದಿನದಂದು  limited edition ಪೆನ್ನುಗಳನ್ನು ತಂದಿದೆ. ಅದರ ೧೮ ಕ್ಯಾರೆಟ್ ಬಂಗಾರದ ನಿಬ್ಬಿನ ಮೇಲೆ ಗಾಂಧಿ ಚಿತ್ರ ಇದೆ. ಗಾಂಧಿ ದಂಡಿ ಉಪ್ಪಿನ ಸತ್ಯಾಗ್ರಹದಲ್ಲಿ ಕಾಲ್ನಡಿಗೆಯಲ್ಲಿ ಕ್ರಮಿಸಿದ ದೂರದ ದ್ಯೋತಕವಾಗಿ (೨೪೧ ಮೈಲಿಗಳು) ಕೇವಲ ೨೪೭ limited edition ಪೆನ್ನುಗಳನ್ನು ಮಾಡಲಾಗಿದೆ. ಈ ಪೆನ್ನಿಗೆ ಖಾದಿಯ ನೂಲಿನ ಬಟ್ಟೆಯಂತಹ finish ಇದೆ… ಇತ್ಯಾದಿ. ಬೆಲೆ: ಕೇವಲ ೧೪ ಲಕ್ಷ. ಪೆನ್ನನ್ನು ಬಿಡುಗಡೆ ಮಾಡಿದ್ದು ಗಾಂಧಿಯ ಮರಿಮಗ ತುಷಾರ್ ಗಾಂಧಿ.  (http://beta.thehindu.com/news/national/article26755.ece)

ನಮ್ಮ ಪ್ರೈಮರಿ ಶಾಲೆಯ ಕನ್ನಡ ಪುಸ್ತಕಗಳಲ್ಲಿ ಖಾಕಿಯ ಮುಂಡು ಪಂಚೆ ತೊಡುವ, ಆಡಿನ ಹಾಲು ಕುಡಿಯುವ ಸರಳತೆಯ ಸಾಕಾರ ಮೂರ್ತಿ ಅಂತ ಚಿತ್ರಿತವಾಗುವ ಗಾಂಧಿ ಯಾವುದೋ ದಷ್ಟಪುಷ್ಟ ವ್ಯಾಪಾರಿಯ ಕೋಟ್ ಜೇಬಿನಲ್ಲಿ ಸ್ಟೈಲಾಗಿ ಸಿಕ್ಕಿಸಿದ ಪೆನ್ನಿನ ಬಂಗಾರದ ನಿಬ್ಬಿನ ಮೇಲೂ ಕೂರಬಹುದಾದ ಈ ಅಂತರ್ರಾಷ್ಟ್ರೀಯ ಮಾರುಕಟ್ಟೆಯ ಚೋದ್ಯಕ್ಕೆ ಏನನ್ನಬೇಕು? ಇದು  farce, ವಿಪರ್ಯಾಸ ಇತ್ಯಾದಿ ಪದಗಳನ್ನೂ ಮೀರಿದ್ದು ಅಲ್ಲವಾ?

ನಯಗಾಗಿಯಾದರೂ ಗಟ್ಟಿಯಾಗಿ ಗಾಂಧಿಯ ಮೊಮ್ಮಗ ಮತ್ತು ಪಶ್ಚಿಮ ಬಂಗಾಳದ ರಾಜ್ಯಪಾಲರಾದ ಗೋಪಾಲ್ ಗಾಂಧಿ ಇದಕ್ಕೆ ಉತ್ತರ ಬರೆದರು (http://www.hindu.com/2009/10/02/stories/2009100255230900.htm). ಗಾಂಧಿಯನ್ನು ಐಷಾರಾಮಿ ವಸ್ತುಗಳ ಮಾರುಕಟ್ಟೆಗೆ ಬಳಸಿಕೊಳ್ಳುವ ಬಗ್ಗೆ ಇನ್ನೂ ಖಾರವಾದ ಪ್ರತಿಕ್ರಿಯೆಗಳೂ ವ್ಯಕ್ತವಾದವು. ನಾವು ಇದರಿಂದ ಬಂದ ಲಾಭದಲ್ಲಿ ೩೦ ಭಾಗವನ್ನು ದಾನ ಕೊಡ್ತೀವೆ ಅಂತ ಕಂಪನಿಯವರು ಸಮಜಾಯಿಶಿ ಕೊಟ್ಟಿದ್ದು, “ಇದು ಐಷಾರಾಮಿ ವಸ್ತುವಲ್ಲ. ಗಾಂಧಿಗೆ ಪ್ರಿಯವಾದ, ಪವಿತ್ರವಾದ ಬರೆಯುವ ಉಪಕರಣ, ನಾವು ಗಾಂಧಿಯನ್ನು ಗೌರವಿಸುವ ಬಗೆ…” ಹೀಗೆಲ್ಲ ಕಂಪನಿಯ PR ವಕ್ತಾರರು ಹೇಳಿದ್ದೂ ಆಯಿತು.

ಅದೆಲ್ಲಾ ಈಗ ಹಳೆ news. ಈ ವಿಷಯದ ಬಗ್ಗೆ ನನಗೆ ಮತ್ತೆ ಕುತೂಹಲ ಹುಟ್ಟಿದ್ದು ಮೊನ್ನೆ “ವಿ ದ ಪೀಪಲ್” ಅನ್ನುವ ಸುಖಾಸುಮ್ಮನೆ ಮಂದಿ ಕೂತು ಪಟ್ಟಾಂಗ ಹೊಡೆಯುವ ಎನ್ ಡಿ ಟಿ ವಿಯ ಕಾರ್ಯಕ್ರಮದಲ್ಲಿ ಈ ವಿಚಾರವನ್ನು ಮತ್ತೆ ಎತ್ತಿ ಹಿಗ್ಗಾಮಗ್ಗಾ ಎಳೆದು ಮಾತಾಡುತ್ತಿದ್ದಾಗ.

ಅಲ್ಲಿ ಮಾತನಾಡುತ್ತಿದ್ದ ಒಬ್ಬ ಪ್ರಸೂನ್ ಜೋಶಿ ಎಂಬ ಜಾಹಿರಾತು ‘ಗುರು’ವಿನ ಪ್ರಕಾರ ಪ್ರಶ್ನೆ ಗಾಂಧಿಯನ್ನು ಮಾರುಕಟ್ಟೆ ಬಳಸಿಕೊಳ್ಳಬಹುದಾ, ಇಲ್ಲವಾ ಅಂಬುವುದೇ ಅಲ್ಲ. ಪ್ರಶ್ನೆ  ಗಾಂಧಿ ಎಂಬ brand ಮತ್ತು ಒಂದು ಐಷಾರಾಮಿ ಪೆನ್ನಿನ brand ಒಂದಕ್ಕೊಂದು ಹೊಂದಿಕೆ ಆಗುತ್ತದಾ ಇಲ್ಲವಾ ಎಂಬುದು. ಈ ವ್ಯಕ್ತಿಯ ಪ್ರಕಾರ ಗಾಂಧಿಯ brand value ಸರಳತೆ ಮತ್ತು ದೇಸೀಯತೆ ಆದ್ದರಿಂದ ಇವು ಒಂದಕ್ಕೊಂದು ಸರಿಹೊಂದುವುದಿಲ್ಲ.

ಹಾಗಂದರೆ ಏನು?

ಶಿವಾಜಿನಗರದಲ್ಲಿ ಬಿರ್ಯಾನಿ ಮಾರಾಟ ಮಾಡುವವನು ಗಾಂಧಿ ಹೆಸರನ್ನು ತನ್ನ ಹೋಟೆಲ್ಲಿಗೆ ಇಟ್ಟುಕೊಂಡರೆ ಅದು ಅಭಾಸ, ಆದರೆ ಯಾವುದಾದರು organic foods ವ್ಯಾಪಾರಿ ಸಂಸ್ಥೆ ಗಾಂಧಿತಾತನ ಹೆಸರಿನಲ್ಲಿ ಆಡುಹಾಲಿನ ಟೆಟ್ರಾ ಪ್ಯಾಕೆಟ್ಟುಗಳನ್ನು ತಂದರೆ ಅದು ಪರವಾಗಿಲ್ಲ. ಖಾದಿ ಕುರ್ತಾಗೆ ೧,೦೦೦ ರೂ ಲೇಬಲ್ ಹಚ್ಚಿ ಮಾರಿದರೆ ಸರಿ ಹೋದೀತು, ಆದರೆ ನೂರು ರೂಪಾಯಿಯ ಟೆರಲಿನ್ ಶರ್ಟಿಗೆ  ಗಾಂಧಿ ಹೆಸರಿಟ್ಟರೆ  ಶಾಂತಂ ಪಾಪಂ.  ಅರ್ಥಾತ್, ಗಾಂಧಿಯ ಹೆಸರಿನಲ್ಲಿ ವ್ಯಾಪಾರ ಮಾಡಿ ದುಡ್ಡು ಮಾಡಿಕೊಂಡರೆ ಪರವಾಗಿಲ್ಲ. ಆದರೆ brandಮ್ಯಾಚ್ ಮಾಡಿ ವ್ಯಾಪಾರ ಮಾಡಬೇಕಷ್ಟೆ.

ನಾವು ತಲೆಕೆಡಿಸಿಕೊಳ್ಳುವುದು ಈ ರೀತಿ ಮೇಲ್ಮೈ brand value ಬಗ್ಗೆ ಮಾತ್ರವೇ ಆದರೆ brandಗಳು ನಾವು ನಾವು ಇಷ್ಟ ಬಂದಂತೆ ಅರ್ಥೈಸಿಕೊಳ್ಳುತ್ತಾ ಹೋಗಬಹುದು ಅಂತಲೂ ಒಪ್ಪಿಕೊಳ್ಳಬೇಕಾಗುತ್ತದೆ ಅಲ್ಲವಾ? ಹಾಗೆ ನೋಡಿದರೆ ಪುಂಖಾನುಪುಂಖವಾಗಿ ಬರೆದ ಗಾಂಧಿ ಮೋ ಬ್ಲಾದವರಿಗೆ ಹೊಂದುವ brand ಆಗಬಾರದು ಯಾಕೆ? ಆಪಲ್ ಕಂಪ್ಯೂಟರ್ ತನ್ನ “ಥಿಂಕ್ ಡಿಫರೆಂಟ್” ಜಾಹಿರಾತುಗಳಲ್ಲಿ ಗಾಂಧಿಯನ್ನು ಬಳಸಿದ್ದನ್ನು ಗಮನಿಸಿದರೆ ಇದೇನೂ ಅಂಥಾ brand mismatch ಅಲ್ಲ ಬಿಡಿ.

ಆದರೆ ಆರ್ಥಿಕ ವ್ಯವಸ್ಥೆಯ ಬಗ್ಗೆ ಗಾಂಧಿಯ ಪರಿಕಲ್ಪನೆ ಏನಿತ್ತು?  ಆ ವ್ಯವಸ್ಥೆಯ brand ಮತ್ತು ನಮ್ಮ ಜಾಗತಿಕ ಮಾರುಕಟ್ಟೆಯ ವ್ಯವಸ್ಥೆಯ brand ಮ್ಯಾಚ್ ಆಗುತ್ತದೆಯಾ? ಇವೆಲ್ಲಾ ಅಪ್ರಸ್ತುತ ಪ್ರಶ್ನೆಗಳು. ಸಿಂಬಲ್ಲುಗಳು ಸಾಕು ನಮಗೆ. ಅದರ ಹಿಂದಿನ  ಅರ್ಥದ ಬಗ್ಗೆ ಯಾಕೆ ತಲೆ ಕೆಡಿಸಿಕೊಳ್ಳಬೇಕು ಹೇಳಿ. ನಮಗೆ ಇವತ್ತು ಚೆಗುವೆರಾ ಭಾರಿ ಸೆಕ್ಸಿ ಅಡ್ವೆಂಚರ್ ನ brand ಆಗಿ ಬೇರೆ ಎಲ್ಲವೂ ನಗಣ್ಯ ಆಗಿಬಿಟ್ಟಿರುವುದೂ ಇದೇ ತರ್ಕದಲ್ಲಿ. (by the way, ಈ ತಮಾಷೆ ಓದಿ: http://news.bbc.co.uk/2/hi/americas/7062274.stm)

ಇದೇ ಚರ್ಚೆಯಲ್ಲಿ ನಮ್ಮ ಗುಂಡಿನ ಅಧಿಪತಿ ವಿಜಯ್ ಮಲ್ಯ ಗಾಂಧಿಯ ಕನ್ನಡಕ, ಚಪ್ಪಲಿ, ಹಾಲು ಕುಡಿಯುತ್ತಿದ್ದ  ಬಟ್ಟಲನ್ನು ೯ ಕೋಟಿಗೆ ಕೊಂಡು ದೇಶಭಕ್ತಿ ಮೆರೆದ ಬಗ್ಗೆಯೂ ಮಾತು ಬಂತು. ಈ ವ್ಯಾಪಾರದಲ್ಲಿ ಯಾವುದೇ ವಿಪರ್ಯಾಸ   ಜೋಶಿಗೆ  ಕಾಣಲಿಲ್ಲ. ನಮ್ಮ ದೇಶದ ವಸ್ತುವನ್ನು ನಮ್ಮ ದೇಶಕ್ಕೇ ವಾಪಾಸು ತರುವುದು ನ್ಯಾಯಸಮ್ಮತವೇ ಅಲ್ಲವಾ ಅನ್ನುವುದು ಅವರ ಅಂಬೋಣ.

ಇನ್ನೇನು ಹೇಳುವುದಿದೆ?

Leave a Comment