ಅನುವಾದದ ಮಜ

ಅನುವಾದದ ಬಗ್ಗೆ ಬಹಳಷ್ಟು ಥಿಯರಿಗಳು, ದೊಡ್ಡ ದೊಡ್ಡ ಪುಸ್ತಕಗಳು ಎಲ್ಲಾ ಇವೆ. ವಸಾಹತೋತ್ತರ ಸಂದರ್ಭದಲ್ಲಿ ಅನುವಾದ ಒಂದು ರೀತಿಯ ರಾಜಕೀಯ activism ಕೂಡ. ರಷ್ದಿಯಂತ ದೊಡ್ಡ ಜನ Indian-Englishನಿಂದಾಚೆ ಭಾರತೀಯ ಬರವಣಿಗೆಯಲ್ಲಿ ಅಂತಾ ಹೇಳಿಕೊಳ್ಳುವಂತದ್ದೇನೂ ಇಲ್ಲ ಅಂತ ಹೇಳುವಷ್ಟು ಧೈರ್ಯ ತೋರುವುದನ್ನೆಲ್ಲಾ ನೋಡಿದರೆ ಇದು activism ಅನ್ನುವುದನ್ನು ಒಪ್ಪಲೇಬೇಕು.ವಿಶೇಷವಾಗಿ ಭಾರತೀಯ ಭಾಷೆಗಳಿಂದ ಇಂಗ್ಲಿಷಿಗೆ ಮಾಡುವ ಅನುವಾದ.

ಅದೆಲ್ಲದರಿಂದಾಚೆ ಅನುವಾದ ತುಂಬ ಮಜ ಕೊಡುವ ಕೆಲಸ ಕೂಡ. ಒಂದು ಭಾಷೆಯ ನುಡಿಗಟ್ಟನ್ನು ಇನ್ನೊಂದು ಭಾಷೆಯ ನುಡಿಗಟ್ಟಿಗೆ ಒಗ್ಗಿಸಿ ಬಗ್ಗಿಸುವ ಕೆಲಸ ಕಷ್ಟ, ಆದರೂ ಚೆಂದ. ಅದರಲ್ಲೂ ವಿಶೇಷವಾಗಿ ಬೇರೆ ಭಾಷೆಯಿಂದ ಕನ್ನಡಕ್ಕೆ ಅನುವಾದಿಸುವಾಗ. ಎಷ್ಟೇ ಅಂದರೂ ಇಂಗ್ಲಿಷ್ ಪರಭಾಷೆಯಾದದ್ದರಿಂದಲೋ ಅಥವ ಅನುವಾದ ಮಾಡುವಾಗ “ನನ್ನ ಭಾಷೆಯ ಸ್ವತ್ತನ್ನು ಪ್ರಪಂಚದ ಮುಂದೆ ಬಿಚ್ಚಿಡುತ್ತಿದ್ದೇನೆ” ಎಂಬ ದೊಡ್ಡ ಜವಾಬ್ದಾರಿಯ ಭಾರ ಯಾವಾಗಲೂ ಹೆಗಲ ಮೇಲೆ ಕೂತಂತೆ ಅನ್ನಿಸುವುದರಿಂದಲೋ ಇಂಗ್ಲಿಷಿಗೆ ಮಾಡುವ ಅನುವಾದ ನನ್ನ ಮಟ್ಟಿಗಂತೂ ಸ್ವಲ್ಪ ಹುಬ್ಬು ಗಂಟಿಕ್ಕಿ ಮಾಡುವ ಕೆಲಸವೇ. ಆದರೆ ಬೇರೆ ಭಾಷೆಯಿಂದ ಕನ್ನಡಕ್ಕೆ ತರುವಾಗ ಒಂದು ಖುಷಿ ಇರುತ್ತದೆ. ಸ್ವಲ್ಪ ತಿರುಚಿ ಮುರುಚಿ ನಮ್ಮ ಭಾಷೆಗೆ ಸರಿ ಹೊಂದುವಂತೆ ನಾವು ಅನುವಾದ ಮಾಡಿಕೊಳ್ಳುವ ಬಗ್ಗೆ guilty ಅನ್ನಿಸುವುದಿಲ್ಲ!

ಕೆಲವು ಪದ್ಯಗಳನ್ನು ಓದಿದಾಗ ಇವುಗಳನ್ನು ಕನ್ನಡಕ್ಕೆ ತಂದರೆ ಹೇಗಿರುತ್ತದೆ ಎಂದು ನನಗೆ ಯಾವಾಗಲೂ ಅನ್ನಿಸುತ್ತದೆ. ಉರ್ದು ಗಜಲ್ಲುಗಳನ್ನು ಕೇಳಿದಾಗ ಅಥವಾ ಅನುವಾದದಲ್ಲಿ ಓದಿದಾಗ ಆ ಭಾಷೆಯ ಲಾಲಿತ್ಯ, ಅರ್ಥವನ್ನು ಥಟ್ಟನೆ ಮಿಂಚಿನಂತೆ ಹೊಳೆಸಿಬಿಡುವ ಗುಣ ಅನುವಾದದಲ್ಲಿ ಹಿಡಿದಿಡಲು ಸಾಧ್ಯವೇ ಅನ್ನಿಸುತ್ತದೆ. ಕತ್ತಿಯ ಅಂಚಿನಷ್ಟು sharp ಆದ ತೆಲುಗು, ತಮಿಳಿನ ಕೆಲವು feminist ಪದ್ಯಗಳನ್ನು ಕೇಳಿದಾಗಲೂ ಹಾಗೆಯೇ ಯೋಚಿಸುವುದುಂಟು. ಉರ್ದುವಿನಿಂದಾದ ಅನುವಾದಗಳಿವೆ, ಉರ್ದು ಗಜಲ್ಲುಗಳನ್ನು ಅನುಸರಿಸಿ ಬರೆದ ಕನ್ನಡದ ಗಜಲುಗಳಿವೆ. ಆದರೆ feminist ಪದ್ಯಗಳು ಕನ್ನಡಕ್ಕೆ ಬಂದದ್ದು ಕಡಿಮೆಯೇ. ಅರ್ಧಂಬರ್ಧ ತೆಲುಗು ಬರುವುದರಿಂದ ಅಲ್ಲಿಂದ ಕೆಲವು ಪದ್ಯಗಳನ್ನು ಕನ್ನಡಕ್ಕೆ ತರುವ ಪ್ರಯತ್ನ ಮಾಡಬೇಕು. ಇದು ನನ್ನ really long-term projectಗಳಲ್ಲಿ ಒಂದು.

ಸಧ್ಯಕ್ಕೆ ಗಾಲಿಬನ ನನಗೆ ಪ್ರಿಯಾವಾದ ಗಜಲೊಂದರ ಕನ್ನಡೀಕರಣ. ಇಂಗ್ಲಿಷ್ ಭಾಷಾಂತರದ ಮರು ಭಾಷಾಂತರವಾದ್ದರಿಂದ “ಮೂಲ ಅರ್ಥ” ಎನ್ನುವ ಕಲ್ಪನೆಯೇ ಇಲ್ಲಿ ವಿಚಿತ್ರ ಸ್ವರೂಪದ್ದು. ಅದರ form ಬಗ್ಗೆ ತಲೆ ಕೆಡಿಸಿಕೊಳ್ಳದೆ ಮಾಡಿರುವ ಈ ಪ್ರಯತ್ನಕ್ಕೆ ಗಾಲಿಬ್ ಮತ್ತು ಆತನನ್ನು originalನಲ್ಲಿ ಓದಿದ ಎಲ್ಲರ ಕ್ಷಮೆ ಇರಲಿ.

ಮೊಂಬತ್ತಿ

ಆಕಾಶ ಭೂಮಿಗಳನ್ನು ನನಗಿತ್ತ ಅವನು ನಾನು ಸಂತುಷ್ಟನಾಗಿರುತ್ತೇನೆ ಅಂದುಕೊಂಡ.

ವಾದ ಮಾಡುವುದಕ್ಕೆ ಮುಜುಗರವೆನ್ನಿಸಿ ಏನೂ ಹೇಳದೆ ಸುಮ್ಮನಾಗಿಬಿಟ್ಟೆ.

ಆಧ್ಯಾತ್ಮ ಅರಸಿ ಹೊರಟವರೆಲ್ಲ ಸುಸ್ತಾಗಿದ್ದಾರೆ. ಪ್ರತಿ ತಿರುವಿನಲ್ಲಿ ಬಳಲಿ ಕುಳಿತಿದ್ದಾರೆ.

ಬಸವಳಿದು ಬೆಂಡಾದ ಇವರಿಗೆ ನಿನ್ನ ವಿಳಾಸವೇ ಯಾವತ್ತೂ ಗೊತ್ತಿರಲಿಲ್ಲ.

ಮೊಂಬತ್ತಿಗೆ ಶುಭ ಹಾರೈಸುವ ಬಹಳಷ್ಟು ಮಂದಿ ಇದ್ದಾರೆ ಈ ಕೂಟದಲ್ಲಿ. ಆದರೆ,

ಕರಗುವಿಕೆಯೇ ಇರುವಿಕೆಯಾದ ಮೇಲೆ ಯಾರ ಹಾರೈಕೆಯಿಂದೇನು ಸುಖ?

10 ಟಿಪ್ಪಣಿಗಳು »

  1. navada said

    ಬಾಗೇಶ್ರೀಯವರೇ,
    ಬ್ಲಾಗ್ ಲೋಕಕ್ಕೆ ಬಂದಿದ್ದಕ್ಕೆ ಸ್ವಾಗತ. ಆರಂಭದಲ್ಲೇ ಅನುವಾದದ ಮಜಾದ ಬಗ್ಗೆ ಹೇಳಿ ಒಳ್ಳೆ ಅನುವಾದವನ್ನೇ ನೀಡಿದ್ದೀರಿ.
    ಕರಗುವಿಕೆಯೇ ಇರುವಿಕೆಯಾದ ಮೇಲೆ ಯಾರ ಹಾರೈಕೆಯಿಂದೇನು ಸುಖ?
    ಈ ಸಾಲು ಬಹಳ ಹಿಡಿಸಿತು. ಇಂಥ ಅನುವಾದ ಹೆಚ್ಚಾಗಲಿ, ನಮ್ಮ ತಿಳಿವಿನ ವಿಸ್ತಾರಕ್ಕೆ ಅವಕಾಶ ಮಾಡಿಕೊಡಲಿ.
    ಧನ್ಯವಾದಗಳೊಂದಿಗೆ
    ನಾವಡ

  2. chetana chaitanya said

    ಹೊಸ ಬ್ಲಾಗು, ಹೊಸತೆರಡೂ ಪೋಸ್ಟುಗಳು ಸೊಗಸಾಗಿವೆ.
    ಹೆಚ್ಚಿನದಕ್ಕಾಗಿ ಕಾದಿದ್ದೇನೆ.

    ವಂದೇ,
    ಚೇತನಾ ತೀರ್ಥಹಳ್ಳಿ

  3. **ಆದರೆ ಬೇರೆ ಭಾಷೆಯಿಂದ ಕನ್ನಡಕ್ಕೆ ತರುವಾಗ ಒಂದು ಖುಷಿ ಇರುತ್ತದೆ. ಸ್ವಲ್ಪ ತಿರುಚಿ ಮುರುಚಿ ನಮ್ಮ ಭಾಷೆಗೆ ಸರಿ ಹೊಂದುವಂತೆ ನಾವು ಅನುವಾದ ಮಾಡಿಕೊಳ್ಳುವ ಬಗ್ಗೆ guilty ಅನ್ನಿಸುವುದಿಲ್ಲ!**

    ಅನುವಾದದ ಸ್ವಭಾವವೇ ಹಾಗಲ್ಲವೆ! ನನಗೂ ಕನ್ನಡದಿಂದ ಇಂಗ್ಲಿಶಿಗೆ ಏನಾದರೂ ಅನುವಾದಿಸುವಾಗ ಇದೇ ಸಂಕಟ. ಯಾವ ಭಾಷೆಗೆ ಅನುವಾದಿಸುತ್ತೇವೋ ಅದು ನಮ್ಮ ಸ್ವಂತ ಭಾಷೆಯಾಗಿರಬೇಕು, ಹಾಗೂ ಯಾವ ಭಾಷೆಯಿಂದ ಅನುವಾದಿಸುತ್ತಿದ್ದೇವೋ ಅದರ ಮೇಲೆ ತಕ್ಕಮಟ್ಟಿಗಿನ ಪ್ರಭುತ್ವವಿರಬೇಕು ಅಂತ ಯಾವಾಗಲೂ ಅಂದುಕೊಂಡವನು ನಾನು. ಹಾಗಿದ್ದಾಗಲೇ ಅನುವಾದ ಪರಿಣಾಮಕಾರಿಯಾಗುತ್ತದೆ.

    ಬ್ಲಾಗ್ ಲೋಕಕ್ಕೆ ಸ್ವಾಗತ. ಥ್ಯಾಂಕ್ಸ್!

  4. shankar said

    ಭಾಗೇಶ್ರೀ!
    ಒಂದು ಅದ್ಭುತ ಪ್ರಯತ್ನ ಹಾಗು ನಿಮ್ಮ ಲಾಂಗ್ ಟರ್ಮ್ ಪ್ರಾಜೆಕ್ಟ್‍ಗೆ ನನ್ನ ಸವಿ ಹಾರೈಕೆಗಳು. ಅಂದ ಹಾಗೆ ನಾನೂ ಬಹಳ ದಿನದಿಂದ ಇದೇ ಯೋಚನೆಯಲ್ಲಿದ್ದೆ. ಉರ್ದು ಗಝಲ್‍ಗಳನ್ನು ಕನ್ನಡಕ್ಕೆ ತರಬೇಕು, ಅದಕ್ಕಾಗಿ ಬ್ಲಾಗೊಂದನ್ನು ತೆರೆಯ ಬೇಕು ಎಂದು! ನನ್ನ ಮನಸ್ಸನ್ನೆ ಕನ್ನಡಿಯಲ್ಲಿ ನೋಡಿದಂತಾಯಿತು!! ನೀವಂದುದ್ದು ನಿಜ, ಭಾವವನ್ನು ಕನ್ನಡಕ್ಕೆ ತಂದರೆ ಸಾಕು, ಭಾಷಾನುವಾದ ಮಾಡಿದರೆ ಅರ್ಥ ಅಸಂಬದ್ಧ ಎನಿಸಿಕೊಳ್ಳುವ ಭೀತಿ ಇರುತ್ತದೆ.
    ಗಾಲಿಬ್ ಸಂಪೂರ್ಣವಾಗಿ ದಕ್ಕದ ಕಾರಣದಿಂದ ನನಗೆ ಆತನ ಮೇಲೆ ಪ್ರೀತಿ ಇರಬೇಕು. ಬೇರೆ ಗಝಲ್‍ಗಳು ಒಂದು ಅಥವ ಎರಡು ಆಯಾಮದಲ್ಲಿ ನನ್ನ ನಿಲುವಿಗೆ ಒದಗಿದ ಮೇಲೆ ಅದರ ಮೇಲೆ ಮೊದಲಿದ್ದ ಆಸಕ್ತಿ ಕುತೂಹಲ ಉಳಿಯುವುದಿಲ್ಲ. ಆದರೆ ಗಾಲಿಬ್‍ನ ಗಝಲ್‍ ಹಾಗಲ್ಲ, ಕಣ್ಣಿಗೆ ಕಂಡು, ಇನ್ನೇನು ಕೈಗೆ ಸಿಕ್ಕೆ ಬಿಡ್ತು ಅನ್ನುವಷ್ಟರಲ್ಲಿ ದೂರದ ಚಿಕ್ಕೆ ಯಾಗಿರುತ್ತದೆ! ಮತ್ತೆ ಅದರೆ ಹಿಂದೆಯೆ ನನ್ನ ಓಟ. ಅದಕ್ಕೆ ಇರಬೇಕು ಯಾರು ಹೇಳಿದ್ದ “ನನ್ನ ಯೌವನದಲ್ಲಿ ಪ್ರೀತಿಯನ್ನು ಕಾಣುತ್ತಿದ್ದ ಗಝಲ್‍ಗಳಲ್ಲೇ, ಈ ಇಳಿ ವಯಸ್ಸಿನಲ್ಲಿ ದೇವರನ್ನು ಕಾಣುತ್ತಿದ್ದೇನೆ”
    ಹೌದು ಗಾಲಿಬ್ ಕೇವಲ ತಪಸ್ವಿಗೆ ಮಾತ್ರ ದಕ್ಕಬಲ್ಲ!!
    ನಿಮ್ಮಿಂದ ಕನ್ನಡಕ್ಕೆ ಬರಲಿರುವ ಇನ್ನಷ್ಟು ಗಝಲುಗಳಿಗಾಗಿ ಕಾಯುತ್ತಿರುತ್ತೇನೆ. ಎಂದಾದರೂ ನಾನೂ ಪ್ರಯತ್ನಿಸುತ್ತೇನೆ!
    ಅಬ್ ತೊ ಘಬರಾಕೆ ಯೆ ಕೆಹತೆ ಹೈ ಕಿ ಮರ್ ಜಾಯೇಂಗೆ
    ಮರ್ ಗಯೆ ಪರ್ ನ ಲಗಾ ಜೀ ತೋ ಕಿದರ್ ಜಾಯೇಂಗೆ

  5. Ganesh K said

    ಗಾಲಿಬನ ಗಜಲ್‍ಗಳು ಚೆಂದಗಿವೆ.
    ಮತ್ತಷ್ಟು ಅನುವಾದಗಳು ಬರಲಿ. ಮನದುಂಬಲಿ ಎಂದು ಹಾರೈಸುತ್ತೇನೆ.

    ಒಮ್ಮೆ ನನ್ನ ಬ್ಲಾಗಿಗೂ ಭೇಟಿಕೊಡಿ.
    http://www.punchline.wordpress.com/

    ಗಣೇಶ್.ಕೆ

  6. Ram K said

    Yes, yes. You should also post your poems and let others have a go at translating them.

    Needless to say, will look forward to your posts.

    Ram
    Bangalore

  7. Shree said

    Hi, I too would look forward to your posts… KaNNa thumba baNNa lyrics haakree please…! thumbaane chennaagide adu!

  8. ಹೊಸ ಪೋಸ್ಟ್ ಪ್ಲೀಸ್.. we are hungry… 😉

  9. ಥ್ಯಾಂಕ್ಸ್
    ನೀವೂ ಕನ್ನಡ ಬ್ಲಾಗ್ ಲೋಕಕ್ಕೆ ಬಂದದ್ದಕ್ಕೆ. ಪತ್ರಿಕೆಯಲ್ಲಿ ನಿಮ್ಮನ್ನು ಓದುವುದರೊಂದಿಗೆ ಇಲ್ಲೂ ಸಿಕ್ತೀರಲ್ಲ ಎಂಬ ಖುಷಿ. ಹಾಗೇ ‘ಮೊಂಬತ್ತಿ’ ಸಖತ್ತಾಗಿದೆ. ವಾಹ್ ಅಂತ ಮತ್ತೆ ಮತ್ತೆ ಓದಿದೆ.. ಒಳ್ಳೆಯ ಅನುವಾದ ಕೂಡ. ಮತ್ತೆ ಧನ್ಯವಾದ….

  10. ಶ್ರೀದೇವಿ ಕಳಸದ said

    ಬಾಗೇಶ್ರೀ…
    ಕರಗುವಿಕೆಯೇ ಇರುವಿಕೆಯಾದ ಮೇಲೆ ಯಾರ ಹಾರೈಕೆಯಿಂದೇನು ಸುಖ? ತುಂಬಾ ಅರ್ಥಪೂರ್ಣ ಸಾಲು ಅಲ್ವೆ? ಎನಿವೆ ಖುಷಿಯಾಯ್ತು… ನಿಮ್ಮ ಬ್ಲಾಗ್ ನೋಡಿ…

RSS feed for comments on this post · TrackBack URI

Leave a reply to Ganesh K ಪ್ರತ್ಯುತ್ತರವನ್ನು ರದ್ದುಮಾಡಿ