ಇನ್ನೂ ಸ್ವಲ್ಪ ನುಗ್ಗುವ ಛಾತಿ ಇರಬೇಕಾ ಅಂತ

ನನ್ನ ಬ್ಲಾಗನ್ನು ನಾನು update ಮಾಡುವ ಚೆಂದ ನೋಡಿದರೆ ಅಮ್ಮ ಯಾವಾಗಲೂ ಹೇಳುವ ಒಂದು ಗಾದೆ ನೆನಪಿಗೆ ಬರ್ತಾ ಇದೆ. ಅಗಸ ಹೊಸತರಲ್ಲಿ ಗೋಣಿಯನ್ನೂ ಎತ್ತಿ ಎತ್ತಿ ಒಗೆದ್ನಂತೆ ಅಂತ. ನಾನೂ ಬ್ಲಾಗ್ ಶುರು ಮಾಡಿದ ವಾರ ಭಾರೀ enthu ಆಗಿ ಎರಡು ಪೋಸ್ಟ್ ಬರೆದವಳು ಇಗ್ಯಾಕೋ ಪೂರ ಟುಸ್ಸ. ಮಾಡದ ಕೆಲಸಕ್ಕೆ ಯಾವಾಗಲೂ ನೂರು ಸಬೂಬುಗಳು ಇದ್ದೇ ಇರ್ತಾವೆ ಅಲ್ವ? ಆಫೀಸಲ್ಲಿ ಕೆಲಸ ಜಾಸ್ತಿ, ಮನೆಗೆ ಬರೋದೇ ಲೇಟು, ಮನೇಲೂ ಸುಮ್ನೆ ಕೂರಕ್ಕೆ ಆಗತ್ತಾ, ಭಾನುವಾರಾನೂ ಬಟ್ಟೆ ಒಗೆಯೋದು, ದೋಸೆಗೆ ನೆನೆಸೋದು ಕೆಲಸ ಇರಲ್ವಾ… ಹೀಗೆ ಏನೇನೋ.

ಅದೆಲ್ಲ ಇರಲಿ ಬಿಡಿ. ಈಗ ನಾನು ಹೇಳಿದ ನಮ್ಮಮ್ಮನ ಗಾದೆಯನ್ನು ಇಂಗ್ಲಿಷಿಗೆ ಅನುವಾದ ಮಾಡುವುದು ಹೇಗೆ ಅಂತ ಒಂದು ಯೋಚನೆ. ಅನುವಾದದ ಬಗ್ಗೆ ಬರೆದ ಪೋಸ್ಟಿಗೆ ತುಂಬ ಜನ ಪ್ರತಿಕ್ರಿಯಿಸಿದ್ದರಿಂದ ತಲೆಯಲ್ಲಿ ಇನ್ನೂ ಅದೇ ಗುಂಗು! ಗೋಣಿ ಅಂದ ಕೂಡಲೆ ಮಲೆನಾಡು-ದಕ್ಷಿಣ ಕನ್ನಡದ ಮಹರಾಯ ಮಹರಾಯ್ತಿಯರು ಹೇಳುವ ಮತ್ತೊಂದು ಗಾದೆ ನೆನಪಿಗೆ ಬರ್ತಿದೆ – ಕಂಡ್ರೆ ಮಾಣಿ, ತಿಂದ್ರೆ ಗೋಣಿ. ಇದರ ಪ್ರಾಸ, ತಮಾಷೆಯನ್ನೆಲ್ಲ ಅನುವಾದ ಮಾಡುವುದು ಹೇಗೆ?

ಆಫ್ರಿಕಾ, ಏಶಿಯಾದ ಇಂಗ್ಲಿಷಿನಲ್ಲಿ ಬರೆಯುವ ಲೇಖಕರಲ್ಲಿ ಭಾಷೆಯನ್ನು ತಿರುಚಿ ಮುರುಚಿ ತಮ್ಮ ಗಾದೆ, ಒಗಟನ್ನೆಲ್ಲಾ ಪರಭಾಷೆಯಲ್ಲಿ ಹೇಳಿಬಿಡುವ ಶಕ್ತಿ ಇರುವವರೂ ಇದ್ದಾರೆ. (ದೇಸಿಯತೆಯನ್ನು ಚೆಂದದ package ಮಾಡುವವರೂ ಇದ್ದಾರೆ ಎನ್ನುವುದು ಬೇರೆ ಮಾತು.) ಇವರ ಈ ಶಕ್ತಿ ಯಾವಾಗಲು ನನಗೆ ತುಂಬ fascianating ಅನ್ನಿಸುತ್ತದೆ. ಚಿನುವಾ ಅಚೆಬೆಯ ಪುಸ್ತಕವನ್ನು ಮೊದಲ ಸಾರಿ ಓದಿದಾಗ ಹೀಗೂ ಭಾಷೆ ಬಳಸಲಿಕ್ಕೆ ಸಾಧ್ಯವಾ ಅನ್ನಿಸಿತ್ತು.

ಎರಡು ಭಾಷೆಗಳಲ್ಲಿ ಸಾಮಾನಾರ್ಥ ಇರುವ ಪದಗಳಿಗೂ ಒಂದೇ ಧ್ವನಿ/ಅರ್ಥ ಇರಲಿಕ್ಕೆ ಸಾಧ್ಯವಿಲ್ಲ. ಇದನ್ನು ಒಪ್ಪಿಕೊಂಡೇ ಸ್ವಲ್ಪ ಭಂಡ ಧೈರ್ಯ ಮಾಡಿ ನುಗ್ಗಿದರೆ ಭಾಷೆಯ, ಅನುವಾದದ ಸಾಧ್ಯತೆಗಳು ಅಪಾರ. ಈ ಥರದ ಧೈರ್ಯದಿಂದಲೇ ಅಲ್ಲವೆ ಭಾಷೆಗಳು ಬೆಳೆಯುವುದು? ಪ್ರೊ. ಜಿ. ವೆಂಕಟಸುಬ್ಬಯ್ಯನವರು ಸಂಪಾದಿಸಿದ “ಎರವಲು ಪದಕೋಶ” ಪುಸ್ತಕದಲ್ಲಿ ನಮ್ಮ ಪೂರಾ ಪೂರಾ ಕನ್ನಡದ “ಉಯಿಲು” ಅನ್ನುವ ಪದ ಇಂಗ್ಲೀಷಿನ “will” ಪದಕ್ಕೆ ಕನ್ನಡದ ತಲೆ ಬಾಲ ಕಟ್ಟಿಂದರಿಂದ ಹುಟ್ಟಿದ್ದು ಅಂತ ಓದಿದಾಗ ತುಂಬಾ ಆಶ್ಚರ್ಯ ಆಯಿತು. ಎಗ್ಗಿಲ್ಲದೆ ನುಗ್ಗಿ, ನುಂಗಿ, ವಾತಾಪಿ ಜೀರ್ಣೋಭವ ಅಂತ ಹೇಳಿ ಬೆಳೆಯುತ್ತಾ ಇರುವ ದೈತ್ಯ ಇಂಗ್ಲಿಷೇ. ನಾವೂ ಸ್ವಲ್ಪ ಮಡಿಮಡಿಮಡಿಯೆಂದು ಅಡಿಗಡಿಗೆ ಹಾರದೆ ನುಗ್ಗುವ ಛಾತಿ ಬೆಳೆಸಿಕೊಳ್ಳಬೇಕು ಅನ್ನಿಸುತ್ತದೆ. ಇಲ್ಲದಿದ್ದರೆ ನಾವು ಈ ದೈತ್ಯನ ಹೊಟ್ಟೆಯೊಳಗಿನ ವಾತಾಪಿಗಳಾಗಿಯೇ ಉಳಿಯುತ್ತೇವೇನೊ. ಹೊಟ್ಟೆಗೆ ಹೋದದ್ದೆಲ್ಲದರ ಗತಿ ಕೊನೆಗೆ ಏನಾಗುತ್ತದೆ ಅಂತ ವಿವರಿಸಿ ಹೇಳಬೇಕಿಲ್ಲ.

ಈ ಮಾತನ್ನು ಅನುವಾದಕ್ಕೆ ಅನ್ವಯಿಸುವುದಾದರೆ ಕನ್ನಡದಲ್ಲಿ ನಾವು ಅನುವಾದಕ್ಕೆ ನಿಲುಕದವರು ಅಂತ ಬಿಟ್ಟುಬಿಟ್ಟವರು ಎಷ್ಟು ಮಂದಿ ಇಲ್ಲ. ಬೇಂದ್ರೆ ಅನುವಾದ ಆದದ್ದು ತೀರ ಕಡಿಮೆ. ಅದೂ ಒಂಥರ ಮಡಿಯಾ ಅಥವಾ “ಬೇಂದ್ರೆ ಅನುವಾದ ಮಾಡಲಿಕ್ಕೆ ಸಾಧ್ಯವಾ? ಶಾಂತಂ ಪಾಪಂ” ಎಂಬ ನೆಪದ ಹಿಂದೆ ಅಡಗಿರುವ ಸೋಮಾರಿತನವಾ ಅಂತ ಅನ್ನಿಸುತ್ತೆ. ಬ್ಲಾಗ್ ಪೋಸ್ಟ್ ಬರೆಯದೆ ಇರುವುದಕ್ಕೆ ನೂರಾರು ಸಬೂಬುಗಳು ಇದ್ದ ಹಾಗೆ ಅನುವಾದ ಮಾಡದೆ ಇರುವುದಕ್ಕೂ!

ಬೇರೆ ಭಾಷೆಯವರು ಈ ವಿಷಯದಲ್ಲಿ ನಮಗಿಂತ ವಾಸಿಯೇನೊ. ಪ್ರಖ್ಯಾತ ಬಂಗಾಳಿ ಲೇಖಕ ಸುಕುಮಾರ್ ರೇ (ಸತ್ಯಜಿತ್ ರೇ ಅಪ್ಪ) ಅವರ “ಆಬೋಲ್ ತಾಬೋಲ್” ಎಂಬ ಪುಸ್ತಕದ nonsense verseಗಳನ್ನೂ ಇಂಗ್ಲಿಷಿಗೆ ಸಂಪೂರ್ಣ ಚಟರ್ಜಿ ಅನ್ನುವ ಲೇಖಕಿ ಅನುವಾದ ಮಾಡಿದ್ದಾರೆ. ಮೂಲ ಹೇಗಿದೆಯೋ ಗೊತ್ತಿಲ್ಲ, ಆದರೆ ಅನುವಾದವಂತೂ ತುಂಬ ಮುದ ನೀಡುತ್ತದೆ. Nonsense verse ಅನುವಾದ ಸಾಧ್ಯವಾ?! ಅಂತ ಹೌಹಾರಿ ಕೂತಿದ್ದರೆ ಸುಕುಮಾರ್ ರೇ ನಮ್ಮಂತವರವರೆಗೆ ಬರುತ್ತಲೇ ಇರಲಿಲ್ಲ.

ಜೆ.ಪಿ. ದಾಸ್ ಎಂಬ ಒರಿಯಾ ಲೇಖಕರ nonsense ಪದ್ಯದ ಈ ಇಂಗ್ಲಿಷ್ ಅನುವಾದ ನೋಡಿ. “The tenth rasa” ಎಂಬ ಭಾರತೀಯ ಭಾಷೆಗಳಿಂದ ಅನುವಾದವಾದ nonsense ಪದ್ಯಗಳ ಪುಸ್ತಕದಲ್ಲಿ ಇದು ಇದೆಯಂತೆ. ನನಗೆ ಸಿಕ್ಕಿದ್ದು ಇಂಟರ್ನೆಟ್ವಿನಲ್ಲಿ. ಇಂಗ್ಲೀಷನ್ನು ನಮ್ಮ ಭಾಷೆಯಲ್ಲಷ್ಟೇ ಅಲ್ಲ, ಇಂಗ್ಲೀಷಿನಲ್ಲಿಯೂ ಲೇವಡಿ ಮಾಡಬಹುದು:

Taught to say ku-ku-du-koo, ku-ku-du-koo
He only said, ‘cock-a-doodle-doo’
Such a vain cock—
You’re in for a shock:
Not tandoori, you’ll only be stew.

ನಾನು ಹಿಂದಿನ postನಲ್ಲಿ ಹೇಳಿದಂತೆ ಇಂಗ್ಲಿಷಿನಿಂದ ಕನ್ನಡಕ್ಕೆ ತರುವಾದ ನಮಗೆ ಅಷ್ಟು ಹಿಂಜರಿಕೆ ಇರುವುದಿಲ್ಲ. ಸಣ್ಣವಳಿದ್ದಾಗ ಅಮ್ಮ ಹೇಳಿ ಕೊಟ್ಟಿದ್ದ  “ಬೆಕ್ಕೆ ಬೆಕ್ಕೆ ಮುದ್ದಿನ ಸೊಕ್ಕೆ ಎಲ್ಲಿಗೆ ಹೋಗಿದ್ದೆ/ ಕರೆದರು ಇಲ್ಲ ಹಾಲು ಬೆಲ್ಲ ಕಾಯಿಸಿ ಇಟ್ಟಿದ್ದೆ…” ಪದ್ಯದ ಮೂಲ ಇರುವುದು ಇಂಗ್ಲೀಷಿನಲ್ಲಿ ಅಂತ ಗೊತ್ತಾದದ್ದು ಸುಮಾರು ದೊಡ್ಡವಳಾದ ಮೇಲೇ! 

Advertisements

10 ಟಿಪ್ಪಣಿಗಳು »

 1. hpn said

  ಸಖತ್! (ಎಂಬ ಪದ ನಾವುಗಳು ಜೀರ್ಣಿಸಿಕೊಳ್ಳಬಲ್ಲೆವು ಎಂಬುದಾದರೆ)
  puristಉಗಳಿಗಾಗಿ ಮತ್ತೊಮ್ಮೆ ಬರೆದುಬಿಡುವೆ – ಲೇಖನ ಬಹಳ ಚೆನ್ನಾಗಿದೆ.

  ಕಂಡ್ರೆ ಮಾಣಿ, ತಿಂದ್ರೆ ಗೋಣಿ. ಇದರ ಪ್ರಾಸ, ತಮಾಷೆಯನ್ನೆಲ್ಲ ಅನುವಾದ ಮಾಡುವುದು ಹೇಗೆ?
  ಕೆಲವು ದಿನಗಳ ಹಿಂದೆ ಡಿವಿಡಿ ತಂದು Lost in translation ಅನ್ನೋ ಸಿನಿಮಾ ನೋಡುತ್ತಿದ್ದೆ. ಭಾಷೆಯಿಂದ ಭಾಷೆಗೆ ಅನುವಾದವಾಗಿ ಹಾರಿದ ಮಾತು ಅರ್ಥ ಕಳೆದುಕೊಂಡು ಹೋಗುವುದಷ್ಟೇ ಅಲ್ಲದೆ ಅಪಾರ್ಥವಾಗಿ ತಮಾಷೆ ಹುಟ್ಟುಹಾಕುವ ಸಂದರ್ಭಗಳನ್ನು ನಿರ್ದೇಶಕ ಫ್ರಾನ್ಸಿಸ್ ಫೋರ್ಡ್ ಕೊಪ್ಪಲಾರವರ ಮಗಳು ಬಹಳ ಚೆನ್ನಾಗಿ ಚಿತ್ರೀಕರಿಸಿದ್ದಾರೆ.

  “The Adventures of Asterix” ಪುಸ್ತಕಗಳನ್ನು ಓದಿದ್ದೀರ? ಪ್ರತಿ ಪುಸ್ತಕವೂ ಇಂಗ್ಲೀಷಿಗೆ ಅನುವಾದ ಮಾಡುವ ಉತ್ತಮ ಪ್ರಯತ್ನ. ಜೋಕು ಬದಲಾಯಿಸಿದ್ದಾರೋ ಇಲ್ಲವೋ ಗೊತ್ತಿಲ್ಲ, ಆದರೆ ತಮಾಷೆ ಹಾರದಂತೆ ನೋಡಿಕೊಂಡಿದ್ದಾರೆ. ಆ ಪುಸ್ತಕಗಳ ಜೀವಾಳ ಪನ್ ಹಾಗೂ ತಿಳಿ ಜೋಕುಗಳು. ನಾನು ಸಣ್ಣವನಿದ್ದಾಗ ಈ ಪುಸ್ತಕಗಳನ್ನು ಬಹಳ ಓದುತ್ತಿದ್ದೆ. ಲೈಬ್ರೆರೀಲಿ ಕುಳಿತು ಪುಸ್ತಕ ಹಿಡಿದು ಜೋರಾಗಿ ನಗುತ್ತಿದ್ದರೆ ಎಲ್ರೂ “ಇವನಿಗೇನಾಯ್ತು. ಇಷ್ಟು ಹೊತ್ತೂ ಚೆನ್ನಾಗಿದ್ದನಲ್ಲ” ಎಂದು ನನ್ನ ಮುಖದ ಕಡೆ ಒಮ್ಮೆ, ನಾ ಹಿಡಿದ ಪುಸ್ತಕದೆಡೆ ಒಮ್ಮೆ ಹುಬ್ಬೇರಿಸಿ ನೋಡುತ್ತಿದ್ದರು. ದೊಡ್ಡವನಾದ ಮೇಲೆ ಇದರ ಹಿಂದಿರುವವರ ಜೀವನದ ಬಗ್ಗೆ ಇಂಟರ್ನೆಟ್ ನಲ್ಲಿ ಹುಡುಕಿದಾಗಲೇ ಈ ಪುಸ್ತಕದ ಮೂಲ ಫ್ರೆಂಚ್ ಎಂಬುದು ತಿಳಿದುಬಂದದ್ದು!
  (ಇದರ ಅನುವಾದ ಮಾಡಿದವರು ಅನುವಾದ ಮಾಡಿದ್ದುದರ ಬಗ್ಗೆಯೇ ಒಂದು ಪುಸ್ತಕ ಹೊರತಂದಿದ್ದಾರೆ. ಆ ಪುಸ್ತಕ ಓದುವ ಅವಕಾಶ ಸಿಕ್ಕರೆ ಅದರಲ್ಲಿರುವ swear words ಬಗ್ಗೆಯ ಟಿಪ್ಪಣಿ ಗಮನಿಸಿ)

 2. bageshree said

  ನಾಡಿಗ್, ನೀವು ಹೇಳಿರೋ ಫಿಲಮ್ ನೋಡಿಲ್ಲ. ಹಾಗೆ ಡೀವೀಡಿ ಸಿಕ್ಕರೆ ‘Babel’ ನೋಡಿ. ಭಾಷೆ, ಸಂಸ್ಕೃತಿಗಳ ನಡುವಿನ ಕಂದರಗಳು, ಅವುಗಳನ್ನು ಮೀರುವ ಸೀಮಿತ ಸಾಧ್ಯತೆಗಳ ಬಗ್ಗೆ ಭಾರೀ ಒಳ್ಳೆ ಸಿನೆಮ. ಅವುಗಳ ನಡುವಿನ power equations ಬಗ್ಗೆ ತುಂಬ subtle ಆದ sub text ಚಿತ್ರದ ಉದ್ದಕ್ಕೂ ಇದೆ. Asterix ನನಗೂ ತುಂಬ ಇಷ್ಟ. ಆದರೆ ಅದರ ಅನುವಾದಕರ ಪುಸ್ತಕ ಓದಿಲ್ಲ. ಅದರ ಹೆಸರೇನು? By the way, ನಮ್ಮಮ್ಮನಿಂದ ಒಂದು correction. ಗಾದೆ “ಕಂಡ್ರೆ ಮಾಣಿ, ಉಂಡ್ರೆ ಗೋಣಿ.” “ತಿಂದ್ರೆ” ಅಂದರೆ ಹಳೆ ಮೈಸೂರು touch ಬಂದು ಬಿಡತ್ತೆ ಅಲ್ವ?

 3. hpn said

  Babel ನೋಡಿದೀನಿ. ಎರಡು ಮೂರು ಸಲ! approach ಅಷ್ಟು ಇಷ್ಟವಾಗಲಿಲ್ಲ. ‘Lost in Translation’ ಆ ಮಟ್ಟಿಗೆ ಹಿಡಿಸಿತು.

  Asterix ಅನುವಾದದ ಕುರಿತ ಪುಸ್ತಕ ನನ್ನ ಬಳಿ PDFನಲ್ಲಿದೆ, ಕಳುಹಿಸಿಕೊಡುವೆ. ಅಲ್ಲಿಯವರೆಗೆ ಇವನ್ನು ನೋಡಿ:

  http://www.literarytranslation.com/workshops/asterix/

  http://en.wikipedia.org/wiki/English_translations_of_Asterix#Lost_in_translation

  ಗಾದೆ “ಕಂಡ್ರೆ ಮಾಣಿ, ಉಂಡ್ರೆ ಗೋಣಿ.” “ತಿಂದ್ರೆ” ಅಂದರೆ ಹಳೆ ಮೈಸೂರು touch ಬಂದು ಬಿಡತ್ತೆ ಅಲ್ವ?

  ಹೌದಲ್ವ! 🙂

 4. Tina said

  ಬಾಗೇಶ್ರೀ,

  ನೀವು ಪೋಸ್ಟು ಮಾಡೋದರ ಬಗ್ಗೆ ಹೇಳಿರೋದು ನಿಜ. ಸುಮಾರು ಜನ ಶುರುಮಾಡೋದು ಮಾಡಿ ಆಮೇಲೆ ತಮ್ಮ ಪೇಜುಗಳನ್ನ ಅನಾಥವಾಗಿ ಬಿಟ್ಬಿಡ್ತಾರೆ. ವಾರಕ್ಕೊಮ್ಮೆಯಾದರು ಬರೆಯಿರಿ. 🙂

  ನೀವು ಅನುವಾದದ ಇಂಟ್ರಿಕೆಸಿಗಳ ಬಗ್ಗೆ ಇಷ್ಟು ಸುಲಲಿತ ಶೈಲಿಯಲ್ಲಿ ಬರಿತಿರೋದು ಖುಶಿ ಕೊಟ್ಟಿತು. ನನ್ನಮ್ಮ ನಾನು ಸುಮಾರು ಐದನೇ ತರಗತಿಯಲ್ಲಿ ಇರೋವಾಗಲೆ ಅನುವಾದದ ಸರಳ ಎಕ್ಸರ್ಸೈಜುಗಳನ್ನ ಮಾಡಿಸೋರು. ನನಗೆ ಅನುವಾದ ಮಾಡುವ ಪ್ರಕ್ರಿಯೆ ಕೊಡೋವಷ್ಟು ಥ್ರಿಲ್ಲು ಇನ್ನ್ಯಾವುದ್ರಲ್ಲು ಸಿಗಲ್ಲ.

  ದಾಸರ ನಾನ್ಸೆನ್ಸ್ ಕವಿತೆ ಓದಿ ನಗು ಬಂತು. ಜತೆಗೆ ಹೀಗೇನೆ ಇರುವ ನಿಸ್ಸಿಮ್ ಎಜೆಕಿಯೆಲರ ಕವಿತೆ ’Goodbye party for Miss Pushpa T.S.’ ನೆನಪಾಯಿತು.

  -ಟೀನಾ.

 5. ಅನುವಾದಗಳಲ್ಲಿ ಎದುರಾಗುವ ಸಾಮಾನ್ಯ(..??!!) ಸಮಸ್ಯೆ ಬಗ್ಗೆ ಚೆನ್ನಾಗಿ ಬರ್ದಿದೀರ. ಪ್ರಾದೇಶಿಕತೆಯ ಸೊಗಡನ್ನ ಅನ್ಯ ಭಾಷೆಗಳಲ್ಲಿ ಪ್ರತಿಬಿಂಬಿಸುವುದು ನಿಜಕ್ಕೂ ಕಷ್ಟಕರ, ಸವಾಲಿನ ಕೆಲಸ.

  ಗಣೇಶ್.

 6. ತುಂಬಾ ಚೆನ್ನಾಗಿದೆ, ಉಯಿಲು, ಬೆಕ್ಕಿನ ಪದ್ಯ – ಆ ಥರ ನುಗ್ಗಿದಾಗ್ಲೇ ಚೆನ್ನ ಅನ್ನಿಸುತ್ತೆ! ಜೆ ಪಿ ದಾಸ್‌ರ ನಾನ್ಸೆನ್ಸ್ ವರ್ಸ್ ಸಖತ್:)) ಅಚಿಬೆ ಓದಿದಾಗ ನನಗೂ ಹಾಗೇ ಅನ್ನಿಸಿತ್ತು… ನಂಗ್ಯಾಕೋ ಫುಟ್‌ನೋಟುಗಳನ್ನು ಹೊತ್ತುಕೊಂಡು ಬರೋ ಸಾಹಿತ್ಯ ಅಕಾಡೆಮಿಯ ಸುಮಾಆಆಆರಾದ ಅನುವಾದಗಳ ಬಗ್ಗೆನೂ ಏನೋ ಪ್ರೀತಿ! ಮತ್ತೆ ಭಾರತೀಯ ಭಾಷೆಗಳಿಂದ ಇಂಗ್ಲೀಷಿಗೆ ಅನುವಾದವಾಗಿರೋ ಪುಸ್ತಕಗಳನ್ನು ಓದೋವಾಗ ನಂಗೆ ವಿಷಯದ ಜೊತೆ ಇಂಗ್ಲಿಷಿಗೆ ಆ ಅನುಭವಗಳನ್ನ ಒಗ್ಗಿಸೋ ಪರಿಯೂ ಕುತೂಹಲದ ವಿಷ್ಯವಾಗುತ್ತೆ….ಒಂದೊಂದ್ಸಲ ಕಳಪೆ ಅನುವಾದಗಳಿದ್ದಾಗ ಅದನ್ನ ಮತ್ತೆ ಕನ್ನಡಕ್ಕೆ ಅನುವಾದಿಸಿಕೊಳ್ತಾ ಅಹಾ ಇದನ್ನ್ ಹೇಳೋಕೆ ಎಷ್ಟೆಲ್ಲಾ ಸರ್ಕಸ್ ಮಾಡಿದಾನಲ್ಲ ಅಂತ ಒಂದು ಕೆಟ್ಟ ಸೇಡಿಸ್ಟ್ ಖುಷಿಯೂ ಆಗಿಬಿಡುತ್ತೆ:p
  ನಿಮ್ಮ ಹಿಂದಿನ ಪೋಸ್ಟೂ ಓದಿದೆ, ತುಂಬಾ ಚೆನ್ನಾಗಿ ಬರತೀರ, ಕನ್ನಡದಲ್ಲಿ ಓದೋಕೆ ಖುಷಿ:)

 7. ismail said

  ನೀವು ನಾ.ಕಸ್ತೂರಿಯವರು ಅನುವಾದಿಸಿರುವ ಅಥವಾ ರೂಪಾಂತರಿಸಿರುವ ಆಲಿಸ್ ಇನ್ ವಂಡರ್ ಲ್ಯಾಂಡ್ ಓದಬೇಕು. ಅವರು ಆಲಿಸ್ ಳನ್ನು ಇಲ್ಲಿ ಪಾಪಚ್ಚಿಯಾಗಿಸಿದ್ದಾರೆ. ಇದರಲ್ಲಿ ಬರುವ ಮೈ ಒಣಗಿಸಿಕೊಳ್ಳಲು ಒಣ ವೇದಾಂತ ಹೇಳುವ ಪ್ರಸಂಗವಂತೂ ಬಹಳ ತಮಾಷೆಯಾಗಿರುವುದರ ಜತೆಗೆ ಮೂಲವನ್ನೂ ತಮಾಷೆ ಮಾಡುವಂತೆ ಇದೆ. ಇದೇ ನಾ. ಕಸ್ತೂರಿ ಮಲಯಾಳಂನ ಚೆಮ್ಮೀನ್ ಅನುವಾದ ಮಾಡುವ ಹೊತ್ತಿಗೆ ಅದನ್ನು ಕೆಂಪು ಮೀನು ಎಂದರು. ಅದೇಕೆ ಎಂಬುದು ನನಗೆ ಈಗಲೂ ಅರ್ಥವಾಗುತ್ತಿಲ್ಲ. ಮಲಯಾಳಂನಲ್ಲಿ ಚೆಮ್ಮೀನ್ ಎಂದರೆ ಕನ್ನಡದ ಸಿಗಡಿ. ಕುಂದಾಪುರದ ಕನ್ನಡದಲ್ಲಿ ಹೇಳುವುದಾದರೆ ಚಟ್ಲಿ. ಇಷ್ಟಕ್ಕೂ ಕಾದಂಬರಿಯ ಹೆಸರಾಗಿ ಕೆಂಪು ಮೀನು ಯಾವ ಸಾಂಕೇತಿಕ ಅರ್ಥವನ್ನೂ ಧ್ವನಿಸುವುದಿಲ್ಲ. ಇಷ್ಟರ ಮೇಲೆ ನಾ ಕಸ್ತೂರಿ ಮಲಯಾಳಂ ಭಾಷೆಯನ್ನು ಚೆನ್ನಾಗಿ ಬಲ್ಲವರು. ಆದರೂ ಈ ತಪ್ಪೇಕೆ ಎಂಬುದು ಇನ್ನೂ ಅರ್ಥವಾಗಿಲ್ಲ.
  -ಇಸ್ಮಾಯಿಲ್

 8. ismail said

  ಅಂದ ಹಾಗೆ ಮತ್ತೊಂದು ವಿಷಯ ಮರೆತೇ ಬಿಟ್ಟಿದ್ದೆ. ಉಂಬರ್ಟೋ ಇಕೋ ನ Mouse or Rat-Translation as negotiation ಕೂಡಾ ಅನುವಾದದ ಕಷ್ಟ, ಮಷೀನ್ ಟ್ರಾನ್ಸ್ ಲೇಷನ್ ನ ಮಿತಿಗಳನ್ನು ಬಹಳ ಚೆನ್ನಾಗಿ ಚರ್ಚಿಸಿರುವ ಪುಸ್ತಕ.

  -ಇಸ್ಮಾಯಿಲ್

 9. hpn said

  ಉಂಬರ್ಟೋ ಬಗ್ಗೆ ಶ್ರೀರಾಂ ಒಂದು ಸಾರಿ ಬರೆದಿದ್ದರು. 🙂

 10. Manjunatha said

  ಬಹಳ ಹಿಂದೆ ಈ ಬರಹ ಓದಿದ್ದೆ, ಕಾಮೆಂಟ್ ಮಾಡಲಾಗಿರಲಿಲ್ಲ. ಅನುವಾದದ ಕಷ್ಟ ಅನುವಾದಿಸಿದವನಿಗೇ ಗೊತ್ತು ಅಲ್ಲವೇ? ಅನುವಾದದ ಸೂಕ್ಷ್ಮಗಳನ್ನು ನವಿರಾಗಿ ಬಿಡಿಸಿಟ್ಟ ಬರಹ. ಸೊಗಸಾಗಿದೆ.

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: