ಸಮಯವನ್ನು ನುಂಗುವ ಸಮಯ

ಕೇಂಬ್ರಿಡ್ಜಿನಲ್ಲಿ ಜಾನ್ ಟೈಲರ್ ಎಂಬಾತ ಡೆಸೈನ್ ಮಾಡಿದ ಒಂದು ಹೊಸ ತರದ ಗಡಿಯಾರದ ಚರ್ಚೆ ಪೇಪರುಗಳ ತುಂಬೆಲ್ಲಾ ನಡೆಯುತ್ತಿದೆ. ಅದರ ಚಿತ್ರ ನೋಡಿದರೆ ಮುಳ್ಳೇ ಇಲ್ಲದ ಈ ಗಡಿಯಾರದಲ್ಲಿ ಸಮಯ ನೋಡುವುದು ಹೇಗೆ ಅಂತ ಅರ್ಥವಾಗುವುದಿಲ್ಲ. ಅದು ಆಗಾಗ ನಿಧಾನಕ್ಕೆ, ಆಗಾಗ ಬೇಗ ಓಡಿ, ಆಗಾಗ ನಿಂತು ಹೋಗಿ “ಸಮಯ” ಎಂಬುದು ಕಾರಾರುವಾಕ್ಕಾದದ್ದು ಎಂಬ ಕಲ್ಪನೆಯನ್ನು ಪ್ರಶ್ನಿಸುತ್ತದಂತೆ. ಇದರ ಮೇಲೆ ಕೂತ ಬೃಹತ್ ಮಿಡತೆ ಆಗಾಗ ಬಾಲ ಅಲ್ಲಾಡಿಸ್ಸುತ್ತಾ, ಕಣ್ಣುಗಳನ್ನು ಹಳದಿ, ಕೆಂಪು ಬಣ್ಣಕ್ಕೆ ತಿರುಗಿಸುತ್ತಾ ಸಮಯವನ್ನು ಹೊಂಚುಹಾಕಿ ನುಂಗುತ್ತಾ ಕೂತಿರುತ್ತದಂತೆ.
ಅಚಲವಾಗಿ ಕೂತು ನಮ್ಮ ದಿನದ ಓಟವನ್ನು ಅರ್ಥ ಸ್ವಾರ್ಥಗಳಿಗೆ ಎಡೆಗೊಡದೆ ನಿರ್ಭಾವದಿಂದ ಅಳೆಯುವ ನಮ್ಮೆಲ್ಲರ ಮನೆಯ ಗೋಡೆಯ ಮೇಲಿನ ಗಡಿಯಾರ ಎಂಬ ಯಂತ್ರ ಒಂದು installation ಕೃತಿಯೂ, ಮೆಟಫಿಸಿಕಲ್ ಸಿಂಬಲ್ಲೂ ಹೌದಲ್ಲವಾ ಅಂತ ಪೇಪರ್ರಿನ ಸುದ್ದಿ ಓದುವಾಗ ಅನ್ನಿಸುತ್ತಾ ಇದೆ. ಮೇಲೆ ಮಿಡತೆ ಕೂರದ ಮಾಮೂಲು ಗಡಿಯಾರಗಳೂ ನಮ್ಮ ಧಾವಂತವನ್ನು ನೋಡಿ ಒಳಗೊಳಗೇ ನಗುತ್ತಾ “ಓಡು, ಓಡು” ಅಂತ ತಮಾಷೆ ನೋಡುತ್ತಿರಬಹುದು!
ಗಡಿಯಾರದ ಕಣ್ಣು ತಪ್ಪಿಸಿ ಒಂದೆರಡು ಗಳಿಗೆಗಳನ್ನು ಕದ್ದು ಅನುಭವಿಸುವ ವಿಫಲ ಪ್ರಯತ್ನಗಳನ್ನು ನಾವೆಲ್ಲಾ ಮಾಡುತ್ತಿರುತ್ತೇವೆ ಅಲ್ಲವಾ? ಪ್ರೀತಿ, ಕಲೆ, ದೇವರ ಕಲ್ಪನೆ ಅಲ್ಲವೂ ಈ ಕಾಲದ ಚಕ್ರದ ಕೆಳಗೆ ಒಂದು ಪುಟ್ಟ ಕಲ್ಲಿಟ್ಟು ಸ್ವಲ್ಪವಾದರೂ ನಿಧಾನ ಮಾಡುವ ಪ್ರಯತ್ನಗಳೇ ಅನ್ನಬಹುದು.
ನಮ್ಮ ಸಾಹಿತ್ಯದ ತುಂಬೆಲ್ಲಾ ಪ್ರೀತಿಯ ಆಲಿಂಗನದಲ್ಲಿ ಓಡುವ ಸಮಯವನ್ನು ಧಿಕ್ಕರಿಸಿ ಮೈಮರೆತಿರುವ ಪ್ರಿಯತಮ-ಪ್ರಿಯತಮೆಯರು. ಈ ರೀತಿಯ ಪದ್ಯ, ಹಾಡುಗಳಲ್ಲಿ ನನಗೆ ಪ್ರಿಯವಾದದ್ದು “ಆಜ್ ಜಾನೆ ಕಿ ಜಿದ್ ನಾ ಕರೊ” ಎಂಬ ಫರೀದಾ ಖಾನಂ ಹಾಡು. “ಮಾನ್ಸೂನ್ ವೆಡ್ಡಿಂಗ್” ಚಿತ್ರದಲ್ಲಿ ಬಳಸಲಾದ ಈ ಹಾಡಿನ remix ಆಶಾ ಭೊಂಸ್ಲೆ ಹಾಡಿದ್ದಾರೆ. “ವಕ್ತ್ ಕಿ ಕೈದ್ ಮೆ ಜಿಂದಗೀ ಹೈ ಮಗರ್, ಚಂದ್ ಘಡಿಯಾ ಯಹೀ ಹೈ ಜೊ ಆಜಾದ್ ಹೈ,” ಅನ್ನುತ್ತಾಳೆ ಇಲ್ಲಿನ ಪ್ರಿಯತಮೆ. “How soon hath Time, the subtle thief of youth,/ Stol’n on his wing my three-and-twentieth year!” ಎನ್ನುವ ಜಾನ್ ಮಿಲ್ಟನ್ ಕೊನೆಗೆ ದೇವರ ಮೇಲೆ ಭಾರ ಹಾಕಿ ನಿಟ್ಟುಸಿರು ಬಿಡುತ್ತಾನೆ. ಎಲ್ಲದನ್ನೂ ತರಿದು ಹಾಕುವ ಸಮಯದ ಕುಡುಗೋಲಿನ ಬಗ್ಗೆ ಶೇಕ್ಸ್ ಪಿಯರ್ ಅನೇಕ ಸಾನೆಟ್ಟುಗಳನ್ನು ಬರೆದಿದ್ದಾನೆ. ಆದರೆ ಪ್ರೀತಿಗೆ ಈ ಬೀಸುವ ಕುಡುಗೋಲನ್ನು ತಪ್ಪಿಸಿಕೊಳ್ಳುವ ಶಕ್ತಿ ಇದೆ, ಈ ಪ್ರೀತಿಯನ್ನು ಅಜರಾಮರಗೊಳಿಸುವ ಶಕ್ತಿ ತನ್ನ ಬರವಣಿಗೆಗಿದೆ ಅನ್ನುತ್ತಾನೆ.
“Love’s not Time’s fool, though rosy lips and cheeks
Within his bending sickle’s compass come;
Love alters not with his brief hours and weeks,
But bears it out even to the edge of doom.
If this be error, and upon me prov’d,
I never writ, nor no man ever lov’d.”
ಮತ್ತೊಂದು ಸಾನೆಟ್ಟಿನಲ್ಲಿ ಹೀಗೆ ಬರೆಯುತ್ತಾನೆ:
“But thy eternal summer shall not fade,
Nor lose possession of that fair thou owest;
Nor shall Death brag thou wander’st in his shade,
When in eternal lines to time thou growest;
So long as men can breathe, or eyes can see
So long lives this, and this gives life to thee.”
ವಾವ್! ಮೆಚ್ಚಬೇಕಾದ confidence ಅಲ್ಲವಾ?
ಆದರೂ ಎಲ್ಲಾ ಹಾರಟ, ಮಾತುಗಳ ನಂತರ ಮನುಷ್ಯನನ್ನು ಆವರಿಸುವುದು ನಿಸ್ಸಹಾಯಕತೆ ಮತ್ತು ವಿಷಾದ ಇರಬಹುದೆ? ಕೆಲವು ನೀಲು ಪದ್ಯಗಳು ಇದನ್ನು ಎಷ್ಟು ಸರಳವಾಗಿ, ತಟ್ಟುವಂತೆ ಹೇಳುತ್ತವೆ:
“ಹುಟ್ಟು ಸಾವಿನ ಬಗ್ಗೆ ನಡೆವ ಚರ್ಚೆ ಕೂಡ
ಸಾವಿನತ್ತ ಸಾಗುವ
ಪುಟ್ಟ ಗಲಾಟೆ.”
ಇನ್ನೂ ಚೆಂದದ ಪದ್ಯ ಇದು:
“ಕೋಟ್ಯಾಂತರ ವರ್ಷಗಳಿಂದ
ಮೂಡಿ ಮುಳುಗುತ್ತಿರುವ ಸೂರ್ಯನಿಗೆ
ನನ್ನಂಥ ಹೆಣ್ಣು ಕೂಡ
ಅಲ್ಪವಿರಾಮದ ಚಿಹ್ನೆ ಕೂಡ ಅಲ್ಲ.”
ಕಾಲದ ಬಗ್ಗೆಯೇ ಸುಮಾರಷ್ಟು ನೀಲು ಪದ್ಯಗಳಿಗೆ. ತುಂಟತನದಿಂದ ಹಿಡಿದು ವಿಷಾದದವರೆಗೆ ಅನೇಕ ಮೂಡ್ ಗಳಲ್ಲಿ ಕಾಲದ ಬಗ್ಗೆ ಇವು ಚಿಂತನೆಗಳು.
ಏನು ಮಾಡುವುದು ಹೇಳಿ. ಕಾಲ ಓಡತ್ತೆ, ಕಪ್ಪು ತಲೆ ಬೆಳ್ಳಗಾಗತ್ತೆ, ರೇಷ್ಮೆ ನುಣುಪಿನ ಚರ್ಮ ಸುಕ್ಕು ಬೀಳತ್ತೆ, ಸಣ್ಣನೆ ಸೊಂಟದ ಸುತ್ತಾ ಟಯರುಗಳು ಹರಡುತ್ತವೆ, ಒಮ್ಮೆ ಹೆಮ್ಮೆಯಿಂದ ಆಕಾಶ ನೋಡುತ್ತಿದ್ದ ಸ್ತನಗಳು ನಾಚಿಕೆಯಿಂದ ತಲೆ ಬಗ್ಗಿಸಲಾರಂಭಿಸುತ್ತವೆ, ಡಯಾಬಿಟಿಸ್ ಇಲ್ಲದಿದ್ದರೂ ಅದರ ಭೀತಿಯಂತೂ ಶುರುವಾಗುತ್ತದೆ…
ಸರಿ, ಸರಿ. ಹೌದು ಎಲ್ಲಾ ಸರಿ. ಹಾಗಂತ ಹೆದರಿ ಗಡಿಯಾರವನ್ನೇ ನೋಡುತ್ತಾ ಕೂತುಕೊಳ್ಳೂವುದಕ್ಕಾಗುವುದಿಲ್ಲವಲ್ಲ. ಅದಕ್ಕೆ ಇರಬೇಕು ನಾವೆಲ್ಲಾ ಓಟದಲ್ಲಿಯೇ ಮಗ್ನರಾಗಿ ನಮ್ಮ ಅಡುಗಡುಗು ಅಳೆಯುವ ಗಡಿಯಾರದ ಕಡೆ ಓಟದ ಗತಿಯನ್ನು ಇನ್ನೂ ಚುರುಕುಗೊಳಿಸಿಕೊಳ್ಳಬೇಕಾ ಎಂದು ತಿಳಿದುಕೊಳ್ಳುವುದಕ್ಕೆ ಮಾತ್ರ ದೃಷ್ಟಿ ಹಾಯಿಸುವುದು. ಹಿಂದೆ grandfather clockಗಳು ಇಡೀ ಮನೆಗೆ ಕೇಳಿಸುವಂತೆ ಶಬ್ದ ಮಾಡುತ್ತಾ ಇದ್ದವು. ವಾರಕ್ಕೊಮ್ಮೆ ಖಡ್ಡಾಯವಾಗಿ ಅದರ ಮುಂದೆ ನಿಂತು ಕೀಲಿ ಕೊಡಬೇಕಿತ್ತು. ಈಗೀಗ ಗಡಿಯಾರಗಳಿಗೆ ಕೀಲಿ ಕೊಡುವ ಕೆಲಸ ಕೂಡ ಇಲ್ಲ. ತಿರುಗುವ pebdulum ಇಲ್ಲ. ಒಮ್ಮೆ ಬ್ಯಾಟರಿ ತುಂಬಿಸಿ ಬಿಟ್ಟರೆ ಮತ್ತೆ ಅದರ ಜೊತೆ ಯಾವ ಸಂಬಂಧವೂ ಬೇಡ. ಓಲಾಡುವ pendulum ನೋಡುವಾಗ, ಕೀಲಿ ಕೊಡುವಾಗ ಮನುಷ್ಯನಿಗೆ ತನ್ನ ಕ್ಷಣಿಕತೆಯ ಅನುಭವ ಆಗುತ್ತಿತ್ತೇ? ಗೊಡವೆಯೇ ಬೇಡವೆಂದು ಈ ಬ್ಯಾಟರಿ ಗಡಿಯಾರಗಳನ್ನು ಸೃಷ್ಟಿಸಿದನೆ? ಗೊತ್ತಿಲ್ಲ. ಅಂತೂ ಹೀಗೆ ಮಾಡಿದ್ದರಿಂದ ನಮಗೆ ಕೀಲಿ ಕೊಡುವ ಸಮಯವಂತೂ ಉಳಿಯಿತು!
ಇರಲಿ. ಇಷ್ಟೊಂದು ಫಿಲಾಸಫಿ ಮಾತಾಡಿ ಸಮಯ ಹಾಳು ಮಾಡುವುದು ಬೇಡ. ಮತ್ತೊಂದು ನೀಲು ಪದ್ಯ ನೆನಪು ಬರ್ತಾ ಇದೆ:
“ತತ್ವಜ್ನಾನಿ ಜಗತ್ತನ್ನು
ಮಾಯೆ ಎಂದರೂ
ಕೇವಲ ಹುರಿಗಾಳು ತಿನ್ನುವಾಗ ಕೂಡ
ನನಗೆ ಜಗತ್ತು ನಿಜ ಅನ್ನಿಸುವುದು.”
ಬನಶಂಕರಿ ಪಾರ್ಕಿನ ಹತ್ತಿರ ಒಂದು ಎಸ್ ಎಲ್ ವಿ ಹೋಟೆಲ್ ಇದೆ. ಅಲ್ಲಿ ಯಾವಾಗಲೂ ನೂಕು ನುಗ್ಗಲು. ಒಂಭತ್ತು ಗಂಟೆ ಸುಮಾರಿಗೆ ಹೋದರೆ ಪಕ್ಕದವರಿಗೆ ಚಟ್ನಿ ಸ್ನಾನ ಮಾಡಿಸದೆ ಇಡ್ಲಿ ಪ್ಲೇಟು ತೆಗೆದುಕೊಂಡು ಹೊರ ಬರುವುದೇ ಹರಸಾಹಸ. ಕೂರುವುದುಕ್ಕೆ ಅಲ್ಲಿ ಜಾಗ ಇಲ್ಲ. ಅಲ್ಲೇ ಕೊಳಕು ಜಗಲಿಯ ಮೇಲೆ ಕುಳಿತು ಪಕ್ಕದಲ್ಲಿ ಪಾನ್ ಪರಾಗ್ ಜಗಿದು ಉಗಿದ ಗುರುತುಗಳು ಕಂಡರೂ ಕಾಣದಂತೆ ನಟಿಸುತ್ತಾ ತಿನ್ನಬೇಕು. ಆದರೆ ಅಲ್ಲಿ ಕೂರುವ ಮಜ ಏನೆಂದರೆ ಹರಿಬರಿಯಲ್ಲಿ ಬೆಳಗಾಗೆದ್ದು ಅಫೀಸಿಗೆ ಓಡುವವರನ್ನು ಕಾಫಿ ಹೀರುತ್ತಾ ಕೂತು ನೋಡುವುದು. ಪಾಪ ಟಾಯ್ಲೆಟ್ ಗೆ ಹೋಗಲಿಕ್ಕೆ ಟೈಮ್ ಇರಲಿಲ್ಲವೇನೊ ಅನ್ನಿಸುವಂತೆ ಹುಬ್ಬು ಗಂಟಿಕ್ಕಿಕೊಂಡು, “ಪೇಪೇಪೇ” ಎಂದು ಬೇಡವಾದರೂ ಹಾರನ್ನು ಹೊಡೆಯುತ್ತಾ ಹೋಗುತ್ತಿರುತ್ತಾರೆ. ನಾವೂ ಇದೇ ಮೂಡಿಗೆ ಸೇರಿ ರೋಡಿಗೆ ಇಳಿಯುವುದಕ್ಕೆ ಮುಂಚೆ ಈ ಓಡುವ ಜಗತ್ತನ್ನು ನಾವು ಇದಕ್ಕೆ ಸೇರಿದವರಲ್ಲವೇನೋ ಎಂಬಂತೆ ನೋಡುತ್ತಾ ಕಳೆಯ ಈ ಕ್ಷಣಗಳು… ಆಹಾ!
ಇವತ್ತಿನ ಪೇಪರ್ರಿನಲ್ಲಿ ಕೇಂಬ್ರಿಡ್ಜಿನಲ್ಲಿ ಜಾನ್ ಟೈಲರ್ ನ ಗಡಿಯಾರದ ಕೆಳಗೆ ಅದನ್ನು ಬಿಡುಗಡೆ ಮಾಡಿದ ವಿಜ್ನಾನಿ ಸ್ಟೀಫನ್ ಹಾಕಿಂಗ್ ಚಿತ್ರವಿದೆ. ಯಂತ್ರದ ಸಹಾಯವಿಲ್ಲದೆ ಮಾತಾಡಲಿಕ್ಕೂ ಆಗದ ಈತ ಸಮಯದ ಬಗ್ಗೆ ಪುಸ್ತಕ ಬರೆದಿದ್ದಾನೆ. ಆಕಾಶದಲ್ಲಿ ಹಾರಿದ್ದಾನೆ, ಎರಡನೆ ಮದುವೆ ಮಾಡಿಕೊಂಡು ಆಕೆಯನ್ನೂ divorce ಮಾಡಿದ್ದಾನೆ. ಈತನ ತಲೆಯಲ್ಲಿ ಅವನ ತಲೆಯ ಹಿಂದಿನ ವಿಚಿತ್ರ ಗಡಿಯಾರ ಮತ್ತು ಅದರ ಕುಳಿತ ಸಮಯ ನುಂಗುವ ಕೆಂಗಣ್ಣ ಮಿಡತೆಯ ಬಗ್ಗೆ ಏನು ಅನ್ನಿಸುತ್ತಿರಬಹುದು?
ನನ್ನ ಕಂಪ್ಯೂಟರ್ರಿನ ಸದ್ದು ಮಾಡದ ಗಡಿಯಾರದಲ್ಲೀಗ ಒಂದು ಗಂಟೆ ಐವತ್ತು ನಿಮಿಷ. ಇವತ್ತು ಭಾನುವಾರ ಅಂತ ಅಡಿಗೆಗೆ, ಸ್ನಾನಕ್ಕೆ ಎಲ್ಲ ರಜ ಕೊಟ್ಟುಬಿಟ್ಟರೆ ಹೇಗೆ ಅಂತ ಈ ಚಿತ್ರ ನೋಡುತ್ತಾ ಯೋಚಿಸುತ್ತಾ ಇದ್ದೇನೆ.

Advertisements

4 ಟಿಪ್ಪಣಿಗಳು »

 1. M. S. Prabhakara said

  ಸಮಯವನ್ನು ನುಂಗುವ ಸಮಯ

  ಶ್ರೀಮತಿ ಬಾಗೇಶ್ವರಿ ಅವರಿಗೆ ಹೃತ್ಪೂರ್ವಕ ಅಬಿವಂದನೆಘಳು, ಶುಭಾಶಯಗಳು. ನಿಮ್ಮ ಇತ್ತೀಚಿನ ಬ್ಲಾಗ್ ತುಂಬಾ ಮನಸ್ಸಿಗೆ ಹಚ್ಚಿಕೊಂಡಿತು. ಬಹಳ ಅರ್ಥಪೂರ್ಣವಾದ ಮತ್ತು ಚಿಂತನೆಗಳನ್ನು ಪ್ರಚೋದಿಸುವಂತಹ ಬರವಣಿಗೆ. ಕಾಲ ಮತ್ತು ಸಮಯದ ಬಗ್ಯೆ ನೀವು ಸಾಹಿತ್ಯದಿಂದ ಉಲ್ಲೇಖಿಸಿರುವ ಪದ್ಯಗಳು ಮತ್ತು ತುಣುಕುಗಳೂ ಸಹ ಬಹಳ ಉಚಿತವಾಗಿವೆ, ಅರ್ಥ ಮತ್ತು ಗಹನಪೂರ್ಣವಾಗಿವೆ. ಕಾಲ ಸಮಯಗಳ ಬಗ್ಯೆ ನಾನು ಬಹಳ ವರುಷಗಳಿಂದ ಮೆಚ್ಚಿಕೊಂಡಿರುವ ಶೇಕ್ಸಪಿಯರಿನ Troilus and Cressida ನಾಟಕದ ಅಂಕ ಮೂರು, ದೃಶ್ಯ ಮೂರು, ಸಾಲುಗಳು ೧೪೪ ರಿಂದ ಆರಂಭವಾಗುವ ಕೆಲವು ಸಾಲುಗಳನ್ನು ಕೆಳಗೆ ಉಲ್ಲೇಖಿದ್ದೇನೆ: ಈ ಮಾತುಗಳನ್ನು ಯೂಲಿಸಿಸ್ ಎಕಿಲಿಸ್ ಗೆ ಹೇಳುತ್ತಿದ್ದಾನೆ. ಸಂದರ್ಭ: ಗ್ರೀಕ್ ಪಡೆಯ ವೀರಯೋಧ ಎಕಿಲಿಸ್ ತನಗೆ ಸಿಕ್ಕಬೇಕಾಗಿದ್ದ ಮಾನ್ಯತೆ ದೊರಕಲಿಲ್ಲ ಅಂತ ಕೋಪದ ಮುನಿಸಿನಲ್ಲಿ ಟ್ರೋಜನ್ ಸೇನೆಯ ವಿರುದ್ಧ ಯುದ್ಧದಲ್ಲಿ ಪಾಲ್ಗೊಡದೆ ತನ್ನದೇ ಡೇರೆಯಲ್ಲಿ ಕುಳಿತಿದ್ದಾನೆ. ಈ ಮಾತುಗಳು ಊಲಿಸಿಸ್ ನ ಬುದ್ಧಿವಾದ, ಇಂತಹ ಮುನಿಸಿನಲ್ಲಿದ್ದ ಎಕಿಲಿಸ್ ಗೆ.

  Time hath, my lord, a wallet at his back,
  Wherein he puts alms for oblivion,
  A great-sized monster of ingratitude.
  Those scraps are good deeds past, which are devoured
  As fast as they are made, forgot as soon
  As done. Perseverance, my lord,
  Keeps honour bright. To have done is to hang
  Quite out of fashion, like a rusty nail
  In monumental mockery…

  ಇನ್ನೂ ಬಹಳ ಇದೆ, ಆದರೆ ಪೂರ್ತಿ ಉಲ್ಲೇಖಿಸುತ್ತಿಲ್ಲ, ಏಕೆಂದರೆ ಈ ನಾಟಕ ನಿಮಗೆ ಚೆನ್ನಾಗಿ ಪರಿಚಿತವಿರಬೇಕು. ಸಮಯ, ಕಾಲ, ಇವುಗಳ ಬಗ್ಯೆ ಯೂಲಿಸಿಸ್ ನ ಮಾತುಗಳು ನಿಮ್ಮ ಅಭಿಪ್ರಾಯಗಳಿಗೆ ಬಹಳ ಹೊಂದಿಕೊಳ್ಳುತ್ತವೆ ಅನ್ನಿಸುತ್ತದೆ. ಕಾಲ ಎಲ್ಲವನ್ನೂ ನುಂಗಿ ಜೀರ್ಣಿಸಿಕೊಳ್ಳುತ್ತದೆ, ಅಲ್ಲವಾ. ಎಕಿಲಿಸ್ ಎಂತಹ ವೀರ ಯೋಧನಾಗಿದ್ದರೂ ಅವನದಂತಹ ಕೀರ್ತಿಯನ್ನೂ ಕಾಲ ನುಂಗಿಕೊಳ್ಳುತ್ತದೆ. ನಿನ್ನೆಯ ಕೀರ್ತಿ ನಿನ್ನೆಯದು, ಇಂದು ಏನು ಮಾಡಿದೆ, ಮಾಡಬಲ್ಲೆ, ಇದೇ ಕಾಲದ ದಿನಂಪ್ರತಿದಿನದ ಎದುರುಪ್ರಶ್ನೆ. ಈ ರೀತಿ ನಮ್ಮನ್ನು challenge ಮಾಡುವಾಗಲೇ ಕಾಲ ನಮ್ಮನ್ನು ತಿನ್ನಿತ್ತಲೂ ಇದೆ, ಪ್ರತಿ ಕ್ಷಣವೂ ನಮ್ಮ ಮೈಮನಸ್ಸಿನ ಶಕ್ತಿ ಉತ್ಸಾಹ ಜಿಗುಪ್ಸೆಗಳನ್ನೂ, ನಮ್ಮ ದೇಹಗಳ ಒಳಹೊರಗಿನ ಸೌಂದರ್ಯ ವಿರೂಪತೆಗಳನ್ನೂ, ನಮ್ಮ ಪರಾಕ್ರಮ ಹೇಡಿತನಗಳನ್ನೂ ಧ್ವಂಸ ನಾಶ ಮಾಡುತ್ತಿದೆ.

  ಇನ್ನೊಂದು ಮಾತು ಹೇಳಬಯುಸುತ್ತೇನೆ. ಕಾಲಪುರುಷನಗಿಂತ ಮೀರಿ ಯಾರು ತಾನೇ ಭಯ ಪಡಿಸಬಲ್ಲರು. ಆದರೂ ಕಾಲದಂತಹ ಭಯಾನಕ ವಿಷಯಗಳ ಬಗ್ಯೆ ಬರೆಯುವಾಗಲೂ ನಿಮ್ಮ ಬರವಣಿಗೆಯಲ್ಲಿ ಒಂದು ರೀತಿ ತಮಾಷೆ, ತುಂಟತನ ಇದೆ. ಇಂಗ್ಲಿಷ್ ನಲ್ಲಿ ಹೇಳಬಹುದಾದರೆ, a lightness of touch. ಬೆಳಿಗ್ಯೆ ದರ್ಶಿನಿಯೊಂದರಲ್ಲಿ ಇಡ್ಲಿ ತಿನ್ನುತ್ತಾ ಮಂದಿಮೇಲೆಮಂದಿ ಆಫೀಸುಗಳ ಕಡೆ ಓಡುತ್ತಿರುವದನ್ನು ನೋಡುವ ಸೋಮಾರಿತನದ ಮಜದ ಮಧ್ಯೆ ಈ ಮಜ ಸ್ವಾದಿಸುತ್ತಿರುವರೂ ಇದೇ ರೀತಿ ತಾವೂ ನೂಕು ನುಗ್ಗಾಟಗಳಲ್ಲಿ ಸೇರಿಕೊಳ್ಳಲೇಬೇಕು ಎನ್ನುವ ಪ್ರಜ್ನೆಯೂ ಇದೆ. ಈ ರೀತಿಯ ಪ್ರಜ್ನಾವಂತ ತುಂಟತನ ಯಾವ ರೀತಿಯಲ್ಲೂ ನಿಮ್ಮ ವಿಷಯವಸ್ತುವಿನ ದಾರುಣ್ಯತೆಗೆ ಭಂಗ ಮಾಡದಿರುವಂತಹ ಅಪರೂಪದ ಬರವಣಿಗೆ.

  ಅಂದಹಾಗೆ ಇನ್ನೊಂದು ಮಾತು. ಕೈಗಳಿಲ್ಲದ ಗಡಿಯಾರ ಹಿಂದಿನಕಾಲದಲ್ಲೂ ಇತ್ತು, ಮರಳು ಉಪಯೋಗಿಸುತ್ತಿದ್ದ hourglass. ಆದರೂ ಆ ಕೈಗಳಿಲ್ಲದಿದ್ದ hourglass ಮತ್ತು ಈ ಸೈಬರ್ ಯುಗದ ಕೇಂಬ್ರಿಜ್ ನ ಕೈಗಳಿಲ್ಲದ ಗಡಿಯಾರಗಳ ಮಧ್ಯೆ ಒಂದು ಗುರುತರ ಪಾರ್ಥಕ್ಯ ಇದೆ. ಆ ಹಳೆಯಕಾಲದ ಕಾಲಸೂಚಿ ನಿನ್ನೆಇಂದುನಾಳೆಗಳನ್ನು, ಅವುಗಳ ಉತ್ಸಾಹ ನಿರಾಶೆಗಳನ್ನು, ಪ್ರಾಯದ ಸೌಂದರ್ಯ ಮುದಿತನದ ಇಕ್ಕುತಗ್ಗುಗಳನ್ನು ತಾಲತಾರತಮ್ಯವಿಲ್ಲದೆ ನುಂಗಿ ಜೀರ್ಣಿಸಿಕೊಳ್ಳುವ ಕಾಲಪುರುಷನ ಪ್ರತೀಕವಾಗಿದ್ದರೆ ಇಂದಿನ ಸಮಯನಿರೂಪಿಸುವ ಕೈಗಳನ್ನು ಹೊಂದದ ಗಡಿಯಾರ ಅಂತಹ ಭಯಂಕರ ಕಾಲವನ್ನೇ ತತ್ಕಾಲಕ್ಕಾದರೂ ನುಂಗುವ, ಅಥವಾ ಅತಿ ಕಮ್ಮಿ ಅಂದರೂ ಅಡ್ದ ಬಂದು ಕುಂಠಿಸುವ ಕ್ಷಮತೆಯನ್ನು ಹೊಂದಿರುವ ಒಂದು ಪವಾಡ. ಆದರೂ ಈ ಕಾಲವನ್ನು ಒಂದೇಬಾರಿಗೆ ತಿಂದು ಜೀರ್ಣಿಸಿಕೊಳ್ಳದಿದ್ದರೂ ಕಚ್ಚಿ ಜಿಗಿದು ಸ್ವಲ್ಪ ಸಮಯಕ್ಕಾದರೂ ಸಮಯದ ನೇರ ಗತಿಯನ್ನು ವಕ್ರ ಮಾದುವ ಕ್ರಿಮಿ ಮಿಡತೆಗಿಂತಲೂ ಇಲಿ ಆಗಿದ್ದರೆ ಇನ್ನೂ ಉಚಿತವಾಗುತ್ತಿತು ಅನ್ನಿಸುತ್ತದೆ.

  ನಿಮ್ಮ ಬರವಣಿಗೆಗೆ, ನಿಮ್ಮ ಲೇಖಣಿಗೆ ಮತ್ತು ಕಂಪ್ಯೂಟರಿಗೆ, ಇದೆಲ್ಲಕ್ಕಿಂತಲೂ ಮೀರಿ ಇವುಗಳ ಹಿಂದೆ ಅವಿತುಕೊಂಡಿರುವ ನಿಮ್ಮ ಮನೋಬಲ ಮತ್ತು ಮನೋಬುದ್ಧಿ ಇನ್ನೂ ವೃದ್ಧಿಯಾಗಲಿ, ಬಲಿಷ್ಟವಾಗಲಿ ಎಂದು ಹಾರೈಸುತ್ತೇನೆ.

  ಇತಿ, ಪ್ರಭಾಕರ.

 2. Vivek Shanbhag said

  ಬಾಗೇಶ್ರೀ ಅವರಿಗೆ, ನಿಮ್ಮ ಲೇಖನ ಚೆನ್ನಾಗಿದೆ. ಪ್ರಭಾಕರ್ ಅವರ ಪ್ರತಿಕ್ರಿಯೆಯೂ ಚೆನ್ನಾಗಿದೆ. ಈ ಬ್ಲಾಗನ್ನು ನಿಯಮಿತವಾಗಿ ಮುಂದುವರಿಸಿ. ವಿವೇಕ ಶಾನಭಾಗ

 3. Padmini said

  ಬಾಗೇಶ್ರಿಯವರಿಗೆ ನಮಸ್ಕಾರಗಳು. ನನಗೆ ಸ್ವಲ್ಪ ಶೃಂಗಾರ ಸಾಹಿತ್ಯದತ್ತ ಒಲವು ಜಾಸ್ತಿ. ಅಶ್ಲೀಲತೆ ಮತ್ತು ಶೃಂಗಾರಗಳ ಮಧ್ಯದ ಸರಹದ್ದಿನ್ನು ತಾಕಿಕೊಂಡೇ ನನ್ನ ಪಯಣ. ಆದರೆ ವಿಚಾರ-ಚಿಂತನೆಗಳನ್ನು ಪ್ರಚೋದಿಸುವ ಮಾತು, ಸಾಹಿತ್ಯವೂ ನನಗೆ ಅಷ್ಟೇ ರುಚಿಸುತ್ತದೆ. ಅದರಲ್ಲೂ ತಮ್ಮನ್ನು ಸಾಹಿತಿಗಳೆಂದು ಗುರುತಿಸಿಕೊಳ್ಳದೇ ಹವ್ಯಾಸಿ ಸಾಹಿತಿಗಳಾಗಿ blogಗಳನ್ನು ಬರೆಯುವವರೆಂದರೆ ನನಗೆ ಅಕ್ಕರೆ ಜಾಸ್ತಿ. ಕನ್ನಡದಲ್ಲಿ ಇಂಥ blogಗಳು ಎಲ್ಲಿ ಸಿಕ್ಕರೂ ನಾನವುಗಳನ್ನು ಓದುತ್ತೇನೆ. ಇಂದು ನಿಮ್ಮ blogನ್ನು ಮೊದಲ ಸಲ ನೋಡಿದೆ. ನಿಮ್ಮ ವೈಚಾರಿಕತೆಗೆ ನನ್ನ hats off! ನಿಮ್ಮಿಂದ ಇನ್ನೂ ಹೆಚ್ಚು ಲೇಖನಗಳು ಮೂಡಿಬರಲಿ. Englishನ ಹಾವಳಿಗೆ ತನ್ನತನವನ್ನು ತನ್ನ ಜನಪ್ರಿಯತೆಯನ್ನು ಕಳೆದುಕೊಳ್ಳುತ್ತಿರುವ ಕನ್ನಡ ಸಾಹಿತ್ಯಕ್ಕೆ ಇಂಥ ಲೇಖನಗಳ ಅವಶ್ಯಕತೆ ಹಿಂದೆಂದಿಗಿಂತಲೂ ಇಂದು ಹೆಚ್ಚಿದೆ. ನಿಮ್ಮ blogನ್ನು ನನ್ನ “ಪ್ರಣಯಪದ್ಮಿನಿ” (www.pranayapadmini.blogspot.com) ಎನ್ನುವ blog ಮೂಲಕ ನನ್ನ ಓದುಗರಿಗೆ ಪರಿಚಯಿಸುತ್ತಿದ್ದೇನೆ. ಹೀಗೆ ಮಾಡುವುದು ನಿಮಗೆ ಸರಿಯೆನಿಸದಿದ್ದರೆ ನನಗೊಂದು email ಬರೆಯಿರಿ (padmini.kashyapa@gmail.com). ಅಂದಹಾಗೆ, ಇಲ್ಲಿ ನೀವು ಪ್ರಸ್ತಾಪಿಸಿರುವ “ಆಜ ಜಾನೇಕಿ ಜಿದ್ ನಾ ಕರೋ..” ಎಂಬ ಗಜಲ್‌ನ್ನು ಯಾರಾದರೂ free download ಮಾಡಬಯಸಿದರೆ ಈ linkನ್ನು ನೋಡಬಹುದು – http://artmap.wordpress.com/2008/08/06/farida-khanum-aaaj-jaane-ki-zid-na-karo/

 4. vijayasing said

  ನಿಮ್ಮ ಲೇಖನ ಚೆನ್ನಾಗಿದೆ ಈ ಬ್ಲಾಗನ್ನು ನಿಯಮಿತವಾಗಿ ಮುಂದುವರಿಸಿ

  vijayasing

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: