ಗುಲಾಬಿ ಟಾಕೀಸು ಮತ್ತು ದೊಡ್ಡ ಅಲೆಗಳು

ಗುಲಾಬಿ ಟಾಕೀಸ್ ಸಿನೆಮಾ ನೋಡುವುದಕ್ಕೆ ಮೊದಲು ಒಂದು statutory warning: ಇದೇ ಹೆಸರಿನ ವೈದೇಹಿಯ ಮೂಲ ಕತೆಯನ್ನು ಸಿನೆಮಾ ನೋಡುವುದಕ್ಕೆ ಮುಂಚೆ ಓದಿಕೊಂಡು ಹೋಗಬೇಡಿ. ಈಗಾಗಲೆ ಓದಿಬಿಟ್ಟಿದ್ದರೆ ಅದಕ್ಕೂ ಸಿನೆಮಾಕ್ಕೂ ಏನಾದರೂ ಸಂಬಂಧ ಇರಬಹುದು ಎಂಬ ನಿರೀಕ್ಷೆಯನ್ನು ಇಟ್ಟುಕೊಂಡಂತೂ ಹೋಗಬೇಡಿ. ಕತೆ ಮತ್ತು ಸಿನೆಮಾಗಿರುವ ವ್ಯತ್ಯಾಸ ಸಣ್ಣ ಅಲೆ ಮತ್ತು ಸೈಕ್ಲೋನಿನ ನಡುವಿನ ವ್ಯತ್ಯಾಸದಂತಹದು.

ರೋಲಾಂಡ್ ಬಾರ್ಥ್‌ನ ಹಾಗೆ “death of the author” ಬಗ್ಗೆ ಪೂರ್ತಿ ನಂಬಿಕೆ ಇಟ್ಟು, ಒಂದು ಪಠ್ಯದ ಓದು ಯಾವ್ಯಾವ ದಿಕ್ಕಿನಲ್ಲಿ ಬೇಕಾದರೂ ಹರಿಯಬಹುದು ಎಂದು ಮನದಟ್ಟು ಮಾಡಿಕೊಂಡು, ವೈದೇಹಿ ಕತೆಯ ಹಳೆಯ ಓದಿನ ಭಾರವನ್ನು ಬದಿಗಿಟ್ಟ ನಂತರವೇ ಈ ಸಿನೆಮಾ ನೋಡಲಿಕ್ಕೆ ಸಾಧ್ಯ. ಆದ್ದರಿಂದ ಋಷಿ, ನದಿ, ಸಿನೆಮಾ ಎಲ್ಲದರ ಮೂಲಗಳನ್ನೂ ಬಿಟ್ಟು ಮುಂದಿನ ಮಾತು.

ಕೋಮುವಾದಿ ವಿಷ ನಮ್ಮ ಹೃದಯಕ್ಕೆ, ಮೆದುಳಿಗೆ ತಲುಪಿಯಾಯಿತು ಎಂದು ಅನ್ನಿಸುವಂತಹ ನಮ್ಮ ಸಂದರ್ಭದಕ್ಕೆ ಈ ಚಿತ್ರ ಅತ್ಯಂತ ಪ್ರಸ್ತುತವಾದದ್ದು. ನನ್ನ ದೃಷ್ಟಿಯಲ್ಲಿ, ಕಾಸರವಳ್ಳಿಯವರ ನಾನು ನೋಡಿದ ಎಲ್ಲಾ ಸಿನೆಮಾಗಳಲ್ಲಿ ತನ್ನ ಕಾಲದ ನಾಡಿಯನ್ನು ಅತ್ಯಂತ ಕರಾರುವಾಕ್ಕಾಗಿ ಹಿಡಿಯುವ, ಸಂದರ್ಭದ ಆಯಾಮಗಳನ್ನು ಎಲ್ಲೂ ಸರಳೀಕರಿಸದೆ ಕಟ್ಟಿರುವ ಅತ್ಯಂತ ಗಟ್ಟಿಮುಟ್ಟಾದ ಚಿತ್ರ ಗುಲಾಬಿ ಟಾಕೀಸ್.

ಸಿನೆಮಾದ ಗುಲಾಬಿ ಬ್ಯಾರಿ ಜನಾಂಗದ ಸೂಲಗಿತ್ತಿ ಹೆಂಗಸು. ಅವಳ ಕಿಲಾಡಿ ಗಂಡ ಮೂಸ ತಲಾಕ್ ನೀಡದಿದ್ದರೂ ಇವಳಿಂದ ದೂರವಾಗಿ ಬೇರೆ ಸಂಸಾರ ಹೂಡಿದ್ದಾನೆ. ಎರಡನೆ ಹೆಂಡತಿಯಿಂದ ಒಬ್ಬ ಮಗ ಇದ್ದಾನೆ. ನೂರಾರು ಹೆರಿಗೆ ಮಾಡಿಸುವ ಇವಳಿಗೆ ಮಕ್ಕಳಿಲ್ಲ. ಮಲಮಗ ಅದ್ದುನ ಒಂದು ಪ್ರೀತಿಯ ಮುತ್ತಿಗಾಗಿ ಕಾಡಿ, ಬೇಡಿ, ಲಂಚ ನೀಡಿ ತಹತಹಿಸುತ್ತಾಳೆ. ಬಹಳಷ್ಟು ಸಂದರ್ಭಗಳಲ್ಲಿ ಅದೂ ಸಿಗುವುದಿಲ್ಲ. ಹೀಗೆ ಗುಲಾಬಿ ತನ್ನ ಸ್ವಂತ ಸಂಸಾರದ ಲೆಕ್ಕದಲ್ಲಿ ನೋಡಿದರೆ ಒಂಟಿ. ಆದರೆ ಅವಳಿಗೆ ಇಡೀ ಊರೇ ಸಂಸಾರ. ಅದಕ್ಕಿಂತ ಹೆಚ್ಚು ಸಿನೆಮಾಗಳ ರಂಗುರಂಗಿನ ಪ್ರಪಂಚದ ಊರುಗೋಲು ಅವಳಿಗಿದೆ. ದಿನಾ ತಪ್ಪದೆ ಅವಳು ಸಿನೆಮಾ ನೋಡುತ್ತಾಳೆ. ಒಂದೇ ಸಿನೆಮಾವನ್ನು ದಿನಾ ನೋಡಿಯೂ ಹೊಸ ಹೊಸ ಕನಸುಗಳನ್ನು ನೋಡುವ ಒಳಗಣ್ಣು ಅವಳಿಗಿದೆ. ಅವಳ ವ್ಯಕ್ತಿತ್ವದಲ್ಲಿಯೇ ಅಂತರ್ಗತವಾಗಿ ಎಲ್ಲದರಲ್ಲಿಯೂ ತಮಾಷೆಯ ಎಳೆಯನ್ನು ನೋಡುವ ಶಕ್ತಿ ಮತ್ತು ದಿನದಿನದ ಬದುಕಿನಿಂದಲೇ ಹುಟ್ಟುವ ಸಹಜ ತತ್ವಜ್ನಾನದ ಹೊಳಹೂ ಇದೆ.

ಇವಳ ಸಣ್ಣ ಕಿಟಕಿಯಿಂದಾಚೆ ಕಾಣುವುದು ಹಳ್ಳಿಯ ದೃಷ್ಯಗಳು. ಮೀನುಗಾರರ ಕಷ್ಟದ ಜೀವನ, ಇವರ ಒಳಜಗಳಗಳು, ಬಡತನ, ಇವರ ನಗು, ಅಳು. ಇನ್ನೂ ಆಚೆ ಇವೆಲ್ಲವನ್ನೂ ನಿರ್ವಿಕಾರವಾಗಿ ನೋಡುವ ಸಮುದ್ರ. ಅದರಾಚೆ ಪಟ್ಟಣ.

ಒಂದು ಕಷ್ಟದ ಪ್ರಸವಕ್ಕೆ ಸಹಾಯ ಮಾಡಿದ್ದಕ್ಕೆ ಶ್ರೀಮಂತ ಮಹಿಳೆಯೊಬ್ಬಳು ಗುಲಾಬಿಗೆ ಸ್ಯಾಟಲೈಟ್ ಟೀವಿ ಕೊಟ್ಟ ಮೇಲೆ ಗುಲಾಬಿಯ ವೈಯ್ಯಕ್ತಿಕ ಜೀವನ, ಹಳ್ಳಿಯ ಜೀವನ ಮತ್ತು ಇವೆರಡನ್ನು ಬೆಸೆಯುವ ಬಗೆ ಬದಲಾಗುತ್ತಾ ಹೋಗುತ್ತದೆ. ಹೆಂಗಸರ ಪ್ರಪಂಚಕ್ಕೆ ಒಂದು ಹೊಸಬಗೆಯ ರಂಗಿನ ಲೇಪನವಾಗುತ್ತದೆ. ಈ ರಂಗಿನಲ್ಲಿ ಅವರ ಸ್ವಂತ ಜೀವನಕ್ಕೆ ಟ್ರಾಜಿಡಿ, ಕಾಮೇಡಿ ಎರಡೂ ತರುವ ಸಾಧ್ಯತೆಗಳು ಬೆರೆತಿವೆ.

ಇದೆಲ್ಲವನ್ನು ನಿಧಾನವಾಗಿ ಬಳಸಿಕೊಳ್ಳುತ್ತಾ ಸಾಗುವುದು ೯೦ರ ದಶಕದ ರಾಜಕೀಯ ಸನ್ನಿವೇಶ. ಒಂದು ಕಡೆಯಲ್ಲಿ ಕಾರ್ಗಿಲ್ ಯುದ್ಧ ಶುರುವಾಗಿದೆ. ಇನ್ನೊಂದೆಡೆ ಕರಾವಳಿಯಲ್ಲಿ ಟ್ರಾಲರ್ ಗಳು ತಂದ ಆರ್ಥಿಕ ಜಾಗತೀಕರಣದ ಅಲೆಗಳು ಮೀನುಗಾರಿಕೆಯ ತಳಹದಿಯನ್ನು ಅಲ್ಲಾಡಿಸುತ್ತಿದೆ. ಗಲ್ಫಿನಿಂದ ಬಂದ ದುಡ್ಡಿದೆ. ಅದರ ವಿರುದ್ಧ ಮೀನುಗಾರರಿಗೆ ರೋಷವಿದೆ. ಸರ್ಕಾರ ಇದೇ ಸಮಯಕ್ಕೆ ಬಹುರಾಷ್ಟ್ರೀಯ ಕಂಪನಿಗಳಿಗೆ ಬೇಕಾಬಿಟ್ಟಿ ಮೀನು ಹಿಡಿಯುವ ಲೈಸೆನ್ಸ್ ಕೊಡುತ್ತಿದೆ. ಬಲ ಪಂಥೀಯ ವಿಚಾರ ಧಾರೆಯ ಹರಿಕಾರರು ಈ ಸಂದರ್ಭದಲ್ಲಿ ತಮ್ಮ ರಾಜಕೀಯಕ್ಕೆ ಬೇಕಾದದ್ದನ್ನು ಮಾತ್ರ ಹೆಕ್ಕಿ ಬಳಸಿಕೊಳ್ಳಲು ಮಸಲತ್ತು ನಡೆಸುತ್ತಿದ್ದಾರೆ.

ಇದೆಲ್ಲಾ ಪರ್ಯಾವಸಾನವಾಗುವುದು ಗುಲಾಬಿ “ಹೊರಗಿನವಳು” ಎಂದು ಕುದ್ರುವಿನ ಹೊರಗಿನಿಂದ ಬಂದ ವ್ಯಕ್ತಿಗಳು ತೀರ್ಮಾನ ತೆಗೆದುಕೊಂಡು ಅವಳನ್ನು ಹೊರ ಹಾಕುವುದರೊಂದಿಗೆ. ಆದರೆ ಗುಲಾಬಿಯ ವ್ಯಕ್ತಿತ್ವಕ್ಕೆ ಒಂದು ಒಳಗಣ ಶಕ್ತಿ ಇದೆ. ಈ ಪುಂಡರ ಹಿಕ್ಮತ್ತಿನ ಮುಂದೆ ಅವಳ ದೈಹಿಕ ಶಕ್ತಿ ಸೋತರೂ ಅವಳ ಡಿಗ್ನಿಟಿ ಸೋಲುವುದಿಲ್ಲ. ಔಟ್ ಎಂದು ಇಂಗ್ಲಿಷ್ ಬಳಸಿ ಅವಳನ್ನು ಹೊರದಬ್ಬುವ ಪುಂಡ ಯುವಕನಿಗೆ ನಾನು ನಿನ್ನ ಅಬ್ಬಿ ಹೆರಿಗೆಗೆ ಬರದೆ ಇದ್ದಿದ್ದ್ರೆ ನೀನು ಅವತ್ತೇ ಔಟ್ ಆಗ್ತಿದ್ದೆ ಅನ್ನುತ್ತಾಳೆ. ಊರಿಂದ ಹೊರ ಹೋದರೂ ಹೆಂಗಸರು ಹೆರುವವರೆಗೆ ತನ್ನ ಜೀವನಕ್ಕೆ ಕಷ್ಟ ಇಲ್ಲ ಅನ್ನುವ ಅವಳ ಧೈರ್ಯವನ್ನು ಯಾರೂ ಕಿತ್ತುಕೊಳ್ಳಲಿಕ್ಕೆ ಸಾಧ್ಯವಿಲ್ಲ.

ಗುಲಾಬಿಯ ಜೀವನ, ಹಳ್ಳಿಯ ದಿನದಿನದ ಆಗುಹೋಗುಗಳು, ಬಡತನ, ಸಾಲಸೂಲ, ಜಾತೀಯತೆ, ಕೋಮು-ಕೋಮುಗಳ ನಡುವಿನ ಸಂಬಂಧ, ಹೆಣ್ಣು-ಗಂಡಿನ ನಡುವಿನ ಸಂಬಂಧ, ಪುರುಷ ಪ್ರಧಾನ್ಯತೆ, ಸ್ಯಾಟಲ್ಲೈಟ್ ಟಿವಿ ಊರಿನಲ್ಲಿ ತರುವ ಸ್ಥಿತ್ಯಂತರಗಳು, ತೊಂಬತ್ತರ ದಶಕದಲ್ಲಿ ಕಾರವಳಿಯಲ್ಲಿ ಏಳುತ್ತಿದ್ದ ಕೋಮುವಾದದ ಅಲೆ ದೊಡ್ಡದಾಗುತ್ತಾ ಬೆಳೆದದ್ದು, ಆರ್ಥಿಕ ಜಾಗತೀಕರಣದಿಂದ ಮೀನುಗಾರಿಕೆಯ ವೃತ್ತಿಯ ಮೇಲೆ ಆಗುತ್ತಿದ್ದ ಪರಿಣಾಮಗಳು, ದೂರದ ಕಾರ್ಗಿಲ್ಲಿನಲ್ಲಿ ನಡೆಯುತ್ತಿದ್ದ ಯುದ್ಧ, ಅದನ್ನು ಆಕಾಶ ಮಾರ್ಗೇನ ಕುದ್ರು ಎಂಬ ಕುಗ್ರಾಮದ ಟೀವಿಯಲ್ಲಿ ಬಿಂಬಿಸುವ ಕಣ್ಣಿಗೆ ಕಾಣದ ಶಬ್ದದ ಅಲೆಗಳು, ಇದೆಲ್ಲವನ್ನೂ ಬಳಸಿಕೊಳ್ಳುವ ಕಾಣದ ರಾಜಕೀಯ ಕೈಗಳು… ಹೀಗೆ micro ಮತ್ತು macro ಸ್ತರಗಳಲ್ಲೆರಡರಲ್ಲೂ ಒಮ್ಮೆಲೇ ಸಿನೆಮಾ ಬಿಚ್ಚಿಕೊಳ್ಳುತ್ತಾ, ಒಂದಕ್ಕೊಂದು ಹೊಸೆದುಕೊಳ್ಳುತ್ತಾ ಹೋಗುತ್ತದೆ. ಈ ಸಿನೆಮಾದ ದೊಡ್ಡ ಶಕ್ತಿ ಇರುವುದು ಇದು ಬೇರೆ ಬೇರೆ ಬಣ್ಣದ ಎಳೆಗಳನ್ನು ನಿಧಾನವಾಗಿ ನೂಲುತ್ತಾ, ಅವನ್ನು ಒಟ್ಟಿಗೆ ತಂದು ಒಂದು ಬಲೆಯನ್ನು ನೇಯುವ ಬಗೆ.

ದೊಡ್ಡ ಪ್ರಪಂಚವನ್ನು ತೋರುವ ಟೀವಿಯ ಕಂಡಿ ಮತ್ತು ಗುಲಾಬಿಯ ಮನೆಯಿಂದ ಹೊರಗೆ ಮತ್ತು ಹೊರಗಿಂದ ಒಳಗೆ ನೋಡುವ ಪುಟ್ಟ ತಳಿಕಂಡಿಯನ್ನು ಚಿತ್ರದುದ್ದಕ್ಕೂ ಕಾಸರವಳ್ಳಿಯವರು juxtapose ಮಾಡುತ್ತಾ ಹೋಗುವುದನ್ನು ಗಮನಿಸಬಹುದು. ಹಿಂದಿನ ಹಲವು ಚಿತ್ರಗಳಲ್ಲಿ (ಉದಾಹರಣೆಗೆ ಮನೆ ಮತ್ತು ಕ್ರೌರ್ಯ) ಸಿಂಬಲ್‌ಗಳನ್ನು ತುಂಬ ಪ್ರಯತ್ನಪೂರ್ವಕವಾಗಿ ಬಳಸಿದಂತೆ ನನಗೆ ತೋರುತ್ತಿದ್ದರೆ, ಈ ಚಿತ್ರದಲ್ಲಿ ಕಿಟಕಿ, ಬೆಕ್ಕು ಈ ರೀತಿಯ ಸಿಂಬಲ್ಲುಗಳು ಹೊರತಾಗಿ ನಿಲ್ಲುವುದಿಲ್ಲ ಅನ್ನಿಸಿತು.

ಈ ಚಿತ್ರದ ನೇಯ್ಗೆ ಎಲ್ಲಿಯೂ ಜಾಳಾಗದೆ, ಸುಲಭದ ಕಪ್ಪು-ಬಿಳುಪಿನ ಪ್ಯಾಟರ್ನುಗಳಿಗೆ ಶರಣಾಗದೆ ಸಾಗುವ ರೀತಿ ಇದರ ಇನ್ನೊಂದು ವಿಶೇಷ. ಉದಾಹರಣೆಗೆ, ಈ ಹೊರಗಿನವರು ಜಾತಿ-ಮತ ವೈಷಮ್ಯ ಬಿತ್ತುವುದಕ್ಕೆ ಮೊದಲು ಕುದ್ರುವೇನೂ ಸಮಾನತೆಯೇ ರಾರಾಜಿಸುವ ಕನಸಿನ ರಾಜ್ಯ ಆಗಿರಲಿಲ್ಲ ಎಂಬುದನ್ನು ಕಾಸರಗಳ್ಳಿ ಸೂಕ್ಷ್ಮವಾಗಿ ಸೂಚಿಸುತ್ತಾರೆ. ವಾಸಿಂನ ಜಾತಿ ಬುದ್ಧಿಯನ್ನು ಹಂಗಿಸುವ ಪರಿಪಾಠ, ಯಾರನ್ನು ಯಾರು ಮುಟ್ಟಬಹುದು ಮತ್ತು ಮುಟ್ಟಬಾರದು ಎಂಬ ಕಟ್ಟಳೆಗಳು, ಹೆಂಗಸರನ್ನು ಹದ್ದುಬಸ್ತಿನಲ್ಲಿಡುವುದು ಗಂಡಸ್ತನದ ಸಂಕೇತ ಎಂಬ ನಂಬಿಕೆ ಎಲ್ಲವೂ ಇದ್ದೇ ಇದೆ. ಸ್ಥಳೀಯ ಬಂಡವಾಳಶಾಹಿಯ ಬಿಗಿಮುಷ್ಟಿಯಲ್ಲಿ, ಸಾಲದ ಬಲೆಯಲ್ಲಿಯೇ ಇಲ್ಲಿನ ಎಲ್ಲಾ ಮೀನುಗಾರರೂ ಇರುವುದು. ಸಂಘ ಪರಿವಾರಿಗಳು (ಹಾಗಂತ ನೇರ ಪ್ರಸ್ತಾಪ ಚಿತ್ರದಲ್ಲಿ ಇಲ್ಲದಿದ್ದರೂ ಇದು ಸರ್ವವಿದಿತ) ಈ ಎಲ್ಲ ನೆಲದಲ್ಲೇ ಇದ್ದ ಗುಣಗಳೊಡನೆ ಒಂದಷ್ಟು ಹೊರಗಿನದನ್ನು ಬೆರೆಸಿ, ಗಾಳಿಸುದ್ದಿಗಳನ್ನು ಹಬ್ಬಿಸಿ ಜಾಣ್ಮೆಯಿಂದ ಹೇಗೆ ವೈಷಮ್ಯವನ್ನು ಬಿತ್ತುತ್ತಾರೆ ಎಂಬುದನ್ನು ಕಾಸರವಳ್ಳಿ ಅತ್ಯಂತ ಸಮರ್ಥವಾಗಿ ಚಿತ್ರಿಸುತ್ತಾರೆ.

ಹೀಗೆ ಚಿತ್ರದ ಅಗಲ ಕ್ಯಾನ್ವಾಸನ್ನು ನೋಡುವುದು ಒಂದು ಬಗೆ. ಅದನ್ನು ಬಿಟ್ಟು ಚಿತ್ರದ ಒಂದೊಂದು ಪಾತ್ರದ ಜಾಡು ಹಿಡಿದು ಹೊರಟರೆ ಒಂದೊಂದು ಹೊಸ ಲೋಕಗಳೇ ತೆರೆದುಕೊಳ್ಳುತ್ತವೆ. ಉದಾಹರಣೆಯ ರೂಪದಲ್ಲಿ ನೇತ್ರು ಮತ್ತು ಗುಲಾಬಿ ಪಾತ್ರಗಳ ಸಾಮ್ಯತೆ ಮತ್ತು ವ್ಯತ್ಯಾಸಗಳನ್ನು ನೋಡಬಹುದು. ಇಬ್ಬರೂ ಕನಸುಗಾರರು. ತಮ್ಮ ಸೀಮಿತ ಪ್ರಪಂಚದಿಂದಾಚೆಯ ಬಗ್ಗೆ ಹಂಬಲಿಕೆ ಇರುವವರು. ಟೀವಿ ಧಾರಾವಾಹಿಯ ಪಾತ್ರಗಳಿಗಿರುವ ನಾಟಕೀಯತೆ, ರೊಮಾನ್ಸ್ ಕಂಡು ಹಿಗ್ಗುವವರು. ಬಿಸಿ ರಕ್ತದ ತರುಣಿ ನೇತ್ರು ಈ ಕನಸನ್ನು ನನಸು ಮಾಡಿಕೊಳ್ಳುವ ಸಾಹಸಕ್ಕೆ ಇಳಿಯುತ್ತಾಳೆ. ಕೊನೆಗೆ ಸಂಪೂರ್ಣ ವಿಫಲಳಾಗುತ್ತಾಳೆ. ಬುರ್ಖಾ ಹಾಕಿಕೊಳ್ಳದೆ ದೋಣಿ ಹತ್ತದ, ಜಾತಿ ಮತ್ತು ಕೌಟುಂಬಿಕ ಎರಡೂ ನೆಲೆಯಲ್ಲಿಯೂ ಏಕಾಂಗಿಯಾದ ಗುಲಾಬಿ ನೇತ್ರುವಿನಂತೆ ಸೋಲನ್ನು ಒಪ್ಪಿಕೊಳ್ಳದೆ ಇರುವುದನ್ನು ಚಿತ್ರಿಸುವ ಮೂಲಕ ಮುಸ್ಲಿಂ ಮಹಿಳೆಯರ ಅಸಯಾಕತೆಯ ಬಗ್ಗೆ ನಮ್ಮ ಮನದಲ್ಲಿರುವ ಸ್ಥಿರ ಚಿತ್ರಗಳನ್ನು ಕಾಸರವಳ್ಳಿ ಅಲ್ಲಾಡಿಸುತ್ತದೆ.

ನೇತ್ರುವಿನ ಸೋಲಿನ ಮೂಲ ಇರುವುದು ಅವಳು ನಂಬಿದ ರಂಜಕ ಧಾರಾವಹಿಯ ತರ್ಕದಲ್ಲಿಯೇ? ಗುಲಾಬಿ ಟಾಕೀಸ್ನಲ್ಲಿ ಹೆಂಗಸರು ಮತ್ತು ಗಂಡಸರು ಟಿವಿ ಮುಖೇನ ಕಾಣುವ ಪ್ರಪಂಚ ಸಂಪೂರ್ಣ ಭಿನ್ನವಾದದ್ದು. ಒಂದು ಧಾರವಾಹಿಗಳದಾದರೆ ಇನ್ನೊಂದು ವಾರ್ತೆಗಳದು. ಈ ರೀತಿಯ compartmentalisaiton ತೀರಾ watertight ಆಯಿತೇನೋ, ಈ ಮೂಲಕ ಹೆಂಗಸರು ಯಾವತ್ತೂ ಭಾವನಾತ್ಮಕ ಜೀವಿಗಳು ಎಂಬ stereotype ಇನ್ನಷ್ಟು ಕಾಸರವಳ್ಳಿ ಬಲಗೊಳ್ಳುತ್ತಿದೆಯೇನೋ ಅನ್ನಿಸುವಷ್ಟು ಈ ಎರಡು ಪ್ರಪಂಚಗಳು ಭಿನ್ನ. ಅದೇನೇ ಇರಲಿ, ನೇತ್ರು ಮತ್ತು ಇತರ ಹೆಂಗಸರು ಈ ಧಾರಾವಾಹಿಗಳ ಪ್ರಪಂಚವನ್ನು ಪೂರ್ಣ ನಂಬಿ ಅದರಾಚೆಯ ವಾರ್ತೆಗಳ ಪ್ರಪಂಚದ ಗೋಜಿಗೇ ಹೋಗುವುದಿಲ್ಲ. ರಾಜಕೀಯ ಲೇಪವೇ ಇಲ್ಲದ ಕನಸುಗಾರಿಕೆಯನ್ನು ಮಾರುವ ಸ್ಯಾಟಲೈಟ್ ಟೀವಿಯ ಬಗ್ಗೆ ಮತ್ತು ಬಲ ಪಂಥೀಯ ರಾಜಕೀಯದಲ್ಲಿ ಅಡಕವಾಗಿರುವ ಪುರುಷ ಪ್ರಾಧಾನ್ಯತೆಯ ಬಗ್ಗೆ ಈ ಪಾತ್ರ ಕನ್ನಡಿ ಹಿಡಿಯುತ್ತದೆ. ಈ ಥರದ ಅನೇಕ ಲೇಯರ್ ಗಳನ್ನು ಸಿನೆಮಾದಲ್ಲಿ ನೋಡಬಹುದು.

ನೇತ್ರುವಿನಷ್ಟೇ ಕನಸುಗಳಿಗೆ ಮಾರು ಹೋಗುವ, ಅ-ರಾಜಕೀಯ ನೆಲೆಯಲ್ಲಿಯೇ ನಿಲ್ಲುವ ಗುಲಾಬಿಯ ಶಕ್ತಿ ಎಲ್ಲಿಂದ ಬರುತ್ತದೆ? ಇದು ಅವಳ ವಯಸ್ಸಿನೊಂದಿಗೆ, ಜೀವನಾನುಭವದೊಂದಿಗೆ ಬರುವ ripeness ಇರಬಹುದೆ? ಇದು ಅವಳ ವ್ಯಕ್ತಿತ್ವಕ್ಕೆ ಅಂತರ್ಗತವಾದ ತರ್ಕಕ್ಕೆ ಮೀರಿದ ಶಕ್ತಿಯೇ? ಅಥವಾ ಅವಳ ಸೂಲಗಿತ್ತಿಯ skill ಅವಳಿಗೆ ಒಂದು ವಿಶೇಷ ಆತ್ಮಸ್ಥೈರ್ಯ್ ನೀಡುತ್ತದೆಯೆ? ಯಾವುದಾದರೂ ಇರಬಹುದು ಅಥವ ಎಲ್ಲವೂ ಇರಬಹುದು. ನಿರ್ಣಾಯಕವಾಗಿ ಏನನ್ನೂ ಹೇಳದೆ ಇದನ್ನು ನಮ್ಮ ಯೋಚನೆಗೆ ಸಿನೆಮಾ ಬಿಡುತ್ತದೆ.

ಈ ಸ್ತ್ರೀ ಪ್ರಪಂಚದ ಬಗ್ಗೆ ಮಾತನಾಡುವಾಗ ಸಿನೆಮಾದ ಸಂದರ್ಭದಿಂದ (ಕಾರ್ಗಿಲ್ ಯುದ್ಧದ ಸಮಯ) ಈಚೆಗೆ ನಡೆದ ಕೆಲವು ವಿದ್ಯಮಾನಗಳನ್ನು ಸಿನೆಮಾಗೆ ನೇರ ಸಂಬಂಧವಿಲ್ಲದಿದ್ದರೂ ಪ್ರಸ್ತಾಪಿಸಬೇಕು ಅನ್ನಿಸುತ್ತದೆ. ಇವತ್ತು ನಮ್ಮ ಕೋಮುವಾದಿ ಪರಿಭಾಷೆ ಮತ್ತು ಅದನ್ನು ಕಾರ್ಯಗತ ಮಾಡುವ ಕಾರ್ಯತಂತ್ರಗಳು ಇನ್ನಷ್ಟು ಬದಲಾಗಿವೆ. ಗುಜರಾತ್ ಗಲಭೆಯಲ್ಲಿ, ಒರಿಸ್ಸಾ ಗಲಭೆಯಲ್ಲಿ ಹೆಂಗಸರ ಪ್ರಪಂಚ ಕೋಮುವಾದಕ್ಕೆ ವಿರುದ್ಧವಾಗಿ ನಿಲ್ಲುವಂತದು ಎಂಬ ನಂಬಿಕೆ ಬುಡಮೇಲು ಮಾಡುವ ಅನೇಕ ಘಟನೆಗಳು ನಡೆದಿವೆ. ಇಲ್ಲಿ ಸಂಘ ಪರಿವಾರದ ದುರ್ಗಾವಾಹಿನಿ ಪಡೆಗಳು ವಾತಾವರಣವನ್ನು ಕದಡುವಲ್ಲಿ ತಮ್ಮದೇ ಪ್ರಮುಖ ಪಾತ್ರ ವಹಿಸಿವೆ. ಹೆಣ್ಣಿನ ಗುಣದದಲ್ಲಿಯೇ ಕೋಮುವಾದಕ್ಕೆ ವಿರೋಧವಾಗಿ ನಿಲ್ಲುವ ಸಹಜ ಗುಣ ಎಂಬ ಆಶಾವಾದವನ್ನು ಕಾರ್ಗಿಲ್ ನಂತರದ ವಿದ್ಯಮಾನಗಳು ಸುಳ್ಳು ಮಾಡಿವೆ.

ಹಾಗಾಗಿ ಗುಲಾಬಿ ಟಾಕೀಸಿನ ಹೆಣ್ಣು ಪ್ರಪಂಚದ ಕೋಮುವಾದಿ ಶಕ್ತಿಗಳಿಂದ insular ಆಗಿ ಉಳಿಯುವ ಶಕ್ತಿಯನ್ನು ಈಗಿನ ಸಂದರ್ಭಕ್ಕೆ ಆರೋಪಿಸುವ ತಪ್ಪು ನೋಡುಗರು ಮಾಡಿದರೆ ಅದು ಇಂದಿನ ಸಂದರ್ಭವನ್ನು ಸರಳೀಕರಿಸಿದಂತಾದೀತು ಎಂಬುದು ಸಿನೆಮಾ ನೋಡುವಾಗ ಒಮ್ಮೊಮ್ಮೆ ನೆನಪು ಮಾಡಿಕೊಳ್ಳುವುದು ಒಳಿತು.

ಶುಭಂ ಹೇಳುವುದಕ್ಕೆ ಮುಂಚೆ ಮೂಲಕತೆಯ ವಿಷಯಕ್ಕೆ ಮರಳಿ ಒಂದು ಪ್ರಶ್ನೆ: ಕಾಸರವಳ್ಳಿಯವರ ಹಿಂದಿನ ಚಿತ್ರ ನಾಯಿ ನೆರಳುನ ಉತ್ತರಾರ್ಧಕ್ಕೂ ಮತ್ತು ಭೈರಪ್ಪನವರ ಮೂಲಕತೆಗೂ ಯಾವುದೇ ಸಂಬಂಧವಿರಲಿಲ್ಲ. ಗುಲಾಬಿ… ಸಿನೆಮಾಕ್ಕೂ ಮೂಲ ಕತೆಗೂ ತಲೆಯಿಂದ ಬಾಲದವರೆಗೆ ಏನೂ ಸಂಬಂಧ ಇರುವಂತೆ ಕಾಣುವುದಿಲ್ಲ. ಇದು ಕಾಸರವಳ್ಳಿಯವರದೇ ಕತೆ. ಇಂದಿನ ಸಂದರ್ಭಕ್ಕೆ ತುಂಬ ಪ್ರಸ್ತುತವಾದ ಮತ್ತು ಮನ ಮುಟ್ಟುವ ಕತೆ. ಹಾಗಂತಾದ ಮೇಲೆ ಯಾವುದೋ ಒಂದು ಸಾಹಿತ್ಯ ಕೃತಿಯನ್ನು ಆಧರಿಸಿಯೇ ಚಿತ್ರ ಮಾಡಬೇಕೆಂಬ ಹಠ ಯಾಕೆ ಅಂತ ಅರ್ಥವಾಗುವುದಿಲ್ಲ. ಈ ರೀತಿಯ ಆಧಾರ ಗುಲಾಬಿಗಂತೂ ಅಗತ್ಯ ಇರಲಿಲ್ಲವೇನೋ ಅಂತಲೇ ಅನ್ನಿಸುತ್ತದೆ.

Advertisements

8 ಟಿಪ್ಪಣಿಗಳು »

 1. G N Mohan said

  ವೈದೇಹಿ ಕಥೆಯನ್ನೂ, ಕಾಸರವಳ್ಳಿ ಚಿತ್ರವನ್ನೂ ಕಟಕಟೆಗೆ ಎಳೆದು ತಂದು ತೂಕ ಹಾಕುತ್ತಾ ಕುಳಿತವರಿಗೆ ಎರಡೂ ಬೇರೆಯದೇ ವ್ಯಾಕರಣಗಳು ಎಂದು ಹೇಳಲು ಒದ್ದಾಡುತ್ತಿದ್ದೆ. ನೀವು ಹೇಳಿದಂತೆ ಕಾಸರವಳ್ಳಿ ಅವರ ಒಳಗಡೆಯೇ ಒಬ್ಬ ಉತ್ತಮ ಕಥೆಗಾರನಿದ್ದಾನೆ. ಆದ್ರೆ ಕಾಸರವಳ್ಳಿ ಅದನ್ನು ಗುರುತಿಸಿಕೊಳ್ಳುತ್ತಿಲ್ಲ ಅಥವಾ ಅವರಿಗೆ ವೈದೇಹಿ, ಭೈರಪ್ಪ ಹೆಸರುಗಳು ಆಧಾರವಾಗಿರಬೇಕು ಎನಿಸುತ್ತದೇನೋ- ಗೊತ್ತಿಲ್ಲ

  ಕಾಸರವಳ್ಳಿ ಕರಾವಳಿಯ ನಾಡಿ ಮಿಡಿತವನ್ನು ಹೇಗೆ ಹಿಡಿದಿದ್ದಾರೆಂದರೆ, ನಾನು ಬೆರಗಾಗಿ ಹೋದೆ. ಸುಮಾರು ೯ ವರ್ಷ ಕರಾವಳಿಯಲ್ಲಿದ್ದ, ಅದೂ ಕೋಮುವಾದ ಸುನಾಮಿಯಂತೆ ಕಡಲ ಉದ್ದಕ್ಕೂ ನಾಲಿಗೆ ಚಾಚುತ್ತಾ ಬೆಳೆದ ಸಂದರ್ಭದಲ್ಲಿಯೇ ಅಲ್ಲಿದ್ದ ನನಗೆ ಗುಲಾಬಿ ಟಾಕೀಸ್ ನ ಪ್ರತಿಯೊಂದು ಆಯಾಮವೂ ನಿಜ ಎಂದು ಗೊತ್ತಿದೆ.

  ಕಾಸರವಳ್ಳಿ ಚಿತ್ರಗಳನ್ನು ನಾನು ಹೆಚ್ಚು ನೋಡಿಲ್ಲ. ಆದರೆ ಗುಲಾಬಿ ಟಾಕೀಸ್ ನಲ್ಲಿ ಅವರು ಕರಾವಳಿಯನ್ನು ಹಲವು ದಿಕ್ಕುಗಳಿಂದ ಗ್ರಹಿಸಿರುವ ರೀತಿ ಅವರ ಒಳಗಿನ ಸೃಜನಶೀಲತೆಗೆ ಸಾಕ್ಷಿಯಾಗಿದೆ.

  ಚಿತ್ರದ ಕೊನೆಯಲ್ಲಿ ಟೆಲಿವಿಶನ್ ಯೋಜನೆ, ಹಡಗಿಗೆ ಲೈಸೆನ್ಸ್ ಎಂದು ಹೇಳುತ್ತಾ ಹೋಗಿದ್ದು ಕಾಸರವಳ್ಳಿ ಅವರಿಗೆ ತಮ್ಮ ಚಿತ್ರ ತಾನು ಹೇಳ ಹೊರಟಿರುವುದನ್ನು ತಲುಪಿಸುತ್ತಿದೆಯೇ ಎಂಬ ಅನುಮಾನದಿಂದ ಮೂಡಿ ವಾಚ್ಯವಾಯಿತು ಎನಿಸಿತು.

  ಅಥವಾ ಹೀಗೂ ಇರಬಹುದು: ತಮ್ಮ ಚಿತ್ರಕ್ಕೆ ಸಂಘ ಪರಿವಾರಿಗಳ ಕಾಟ ಇಲ್ಲದಂತಾಗಲು ಕಾಸರವಳ್ಳಿ ಅದನ್ನು ಒಂದು ಕಾಲದ ಕಥೆ ಎಂದು ಬಿಂಬಿಸಲು ಹೊರಟರೆನೋ.

  ಏನೇ ಆಗಲೀ ಕಾಸರವಳ್ಳಿ ಅವರ ಗಂಭೀರ ಕಾಳಜಿ ಎಲ್ಲರನ್ನೂ, ಎಲ್ಲವನ್ನೂ ಮೀರಿ ಎದ್ದು ನಿಂತಿದೆ.
  -ಜಿ ಎನ್ ಮೋಹನ್

 2. […] ಗುಲಾಬಿ ಟಾಕೀಸು ಮತ್ತು ದೊಡ್ಡ ಅಲೆಗಳು […]

 3. […] ಗುಲಾಬಿ ಟಾಕೀಸ್- ಬಾಗೇಶ್ರೀ ಕಣ್ಣಲ್ಲಿ ಗುಲಾಬಿ ಟಾಕೀಸು ಮತ್ತು ದೊಡ್ಡ ಅಲೆಗಳು […]

 4. sudhakara said

  kasaravalli avara gulabi talkis bagegina nimma niluvu sariyagide. ithchige nanu ododida uttama chitra vimrshe.. ondu uttama baraha nidikke vandanegalu..
  by yours
  sudhakara

 5. Devu said

  ಬಹಳ ದಿನಗಳ ನಂತರ ಸಿನಿಮಾ ಬಗ್ಗೆ ಒಂದು ಉತ್ತಮ ಬರಹ ಓದಿದೆ. ನಿಜಕ್ಕೂ ಖುಷಿಯಾಯಿತು. ಸಿನಿಮಾ ಬರವಣಿಗೆ ಎಂದರೆ ಉಂಡ ಮೇಲೆ ತೆಗೆದು ಬಿಸಾಕುವ ಬಾಳೆಎಲೆಯ ಹಾಗೆ ಆಗಿ ಬಿಟ್ಟಿದೆ. ಅದನ್ನು ಮಾಡಿದ್ದು ಯಾರು? ಎನ್ನುವ ಪ್ರಶ್ನೆಗಿಂತ ಹಾಗಾಗಿದೆ ಎನ್ನುವುದು ಮಾತ್ರ ವಿಷಾದದ ಸಂಗತಿ. ಸಾಹಿತ್ಯದ ಇಮೇಜುಗಳನ್ನು ದೃಶ್ಯಭಾಷೆಗೆ ಟ್ರಾನ್ಸ್‌ಲೇಟ್‌ ಮಾಡಲು ಹೊರಡುವ ಕಾಸರವಳ್ಳಿ ಅವರ ಸಿನಿಮಾಗಳ ಬಹುತೇಕ ದೃಶ್ಯಗಳಲ್ಲಿ ಹೊರಗಿನಿಂದ ಸೇರಿಸಿದ ಅನುಭವ ಉಂಟು ಮಾಡುತ್ತಿದ್ದವು. ’ಗುಲಾಬಿ ಟಾಕೀಸ್‌’ ಅವರ ಉಳಿದ ಸಿನಿಮಾಗಳಿಗಿಂತ ಭಿನ್ನ ಆಗಿರುವುದು ಆಶಾದಾಯಕ ಬೆಳವಣಿಗೆ. ಕಾಸರವಳ್ಳಿ ಅವರ ಸಿನಿಮಾಗಳ ಬಗ್ಗೆ ಒಂದು ಒಳ್ಳೆಯ ಚರ್ಚೆ ನಡೆಸಿದ್ದೀರಿ. ಧನ್ಯವಾದಗಳು
  ದೇವು ಪತ್ತಾರ

 6. ನನಗೆ ಗುಲಾಬಿ ಟಾಕೀಸ್ ಮತ್ತು ಸಣ್ಣ ಅಲೆಗಳು ಕಥೆಯ ಮುಂದುವರಿದ ಭಾಗ ಇದು ಅಂತ ಅನಿಸಿತು. ಗುಲಾಬಿ ಟಕೀಸು ಒಂದು ಊರಲ್ಲಿ ಏನು ಅಲೆ ಎಬ್ಬಿಸುತ್ತದೆ ಅಂತ ಆ ಕಥೆ ಹೇಳುತ್ತದೆ, ಆ ಕಾಲ ಘಟ್ಟದ ಕಥೆ. ನಂತರ ಕಾಲ ಬದಲಾಗಿ ಉಪಗ್ರಹ ವಾಹಿನಿಗಳು ಆರಂಭವಾಗಿ ಮನೆಯೊಳಗೇ ಟಾಕೀಸು ಶುರ್ವಾಗುವ, ಮತ್ತು ಕಾಲಾಂತರದ ಬದಲಾವಣೆಗಳ, ಬವಣೆಗಳ ಚಿತ್ರಣ ಇದು. ಹಳೆ ಕಥೆಗೆ ಹೋಲಿಸದೇ ನೋಡಿದರೆ ಚಂದದ ಚಲನಚಿತ್ರ. ವೈದೇಹಿಯವರ ಹರಿತ ಡೈಲಾಗುಗಳು ಇದ್ರಲ್ಲೂ ಇವೆ, ಖುಷಿ ಕೊಡ್ತವೆ.

 7. jomon said

  ಒಳ್ಳೆಯ ಬರಹ. ಸರಳ ನಿರೂಪಣೆ. ಖುಷಿಯಾಯಿತು.

 8. Rajani said

  ತುಂಬಾ ಹಿಂದೆ ಕತೆ ಓದಿದ್ದೆ. ಇತ್ತೀಚೆಗೆ ಸುಬ್ಬಣ್ಣ ಆಪ್ತ ರಂಗಮಂದಿರದಲ್ಲಿ ಚಿತ್ರ ನೋಡಿದೆ. ನಿಮ್ಮ ಅನಿಸಿಕೆ ಸಂಪೂರ್ಣ ನಿಜ. ಅಂದಹಾಗೆ ನಿಮ್ಮ ಬ್ಲಾಗಿನ ಎಲ್ಲ ಲೇಖನಗಳೂ ಇಷ್ಟವಾದವು. ನನ್ನ ಬ್ಲಾಗ್‌‌ನಲ್ಲಿ ಇದರ ಲಿಂಕ್‌‌ ಸೇರಿಸಿಕೊಳ್ಳಲೇ?

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: