ನೀಲುವಿನ ಜಾಡು ಹಿಡಿದು…

ನೀಲು ಪದ್ಯಗಳ ಬಗ್ಗೆ ವಿಮರ್ಶೆ ಬರೆಯುವುದೇ ಒಂಥರಾ ಅಭಾಸ. “ನೀಲಿ ಆಗಸದಸೀರೆ ಉಟ್ಟ ನನ್ನ ಸೆರಗಿನಂಚಿನ ಕುಸುರಿಯನ್ನು ನೆಲದ ಮೇಲೆ ನಿಂತು ಅಳೆಯುವ ಮರುಳೇ!” ಅಂತ ಅವಳ ಟಿಪಿಕಲ್ ಆದ ಸಣ್ಣ ನಗೆ ನಕ್ಕು ನೀಲುವೇ ತಮಾಷೆ ಮಾಡಿಬಿಡಹುದೇನೋ ಅನ್ನಿಸುತ್ತದೆ. ಹಾದಿಮನಿಯ ಚಿತ್ರಗಳ ನಿತ್ಯ ದಿಗಂಬರಿ, ನೀಳ ಕೂದಲ ಹಂಗೂ ಇಲ್ಲದ ಅಕ್ಕ ಜಂಗಮಿ ನೀಲುವಿಗೆ ಮತ್ತು ಸೀರೆಗೆ ಎತ್ತಣಿಂದೆತ್ತ ಸಂಬಂಧ ಅನ್ನುವುದು ಬೇರೆ ಪ್ರಶ್ನೆ.

ಆದರೂ ನೀಲು ಎಂಬ ಮಿಸ್ಟರಿ ಮಹಿಳೆಯ ಕುರಿತು ಕುತೂಹಲವಂತೂ ಇಲ್ಲದಿರಲಿಕ್ಕೆ ಸಾಧ್ಯವಿಲ್ಲ. ಆದ್ದರಿಂದ ವಿದ್ವಾಂಸರು ಸ್ಟಾರ್ಚ್ ಹಾಕಿ ಗಟ್ಟಿ ಮಾಡಿಟ್ಟ ವಿಮರ್ಶೆ ಅನ್ನುವ ಪದವನ್ನು ಬದಿಗಿಟ್ಟು ಈಕೆಯ ಮೀನಹೆಜ್ಜೆಗಳನ್ನು ಅರಸುವ ಪ್ರಯತ್ನ ಮಾಡಿದರೆ ವಾಸಿ. 

ಪದ್ಯಬರೆಯುವ ಹಿಂದಿನ ತಿಣುಕಾಟವೇ ಕಾಣದಂತೆ ಕಾಮ, ಪ್ರೇಮ, ಕಾತರ, ಕಾಯುವಿಕೆ, ಬೆಳದಿಂಗಳು, ಮಾವಿನ ಚಿಗುರು, ಸಣ್ಣ ಗರಿಕೆ, ಪುರಾಣ, ರಾಜಕೀಯ, ಬಡತನ, ಶ್ರೀಮಂತಿಕೆ ಎಲ್ಲದರ ಬಗ್ಗೆ ಮಗುವಿನ ನಗುವಿನಷ್ಟು ಸಹಜವಾಗಿ ಬರೆಯುತ್ತಾ ಯೇಟ್ಸ್‌ನ ‘A line will take us hours maybe;/ Yet if it does not seem a moment’s thought,/ Our stitching and unstitching has been naught.”ಮತ್ತೆ ಮತ್ತೆ ನೆನಪಿಗೆ ತರುವುದು ಲಂಕೇಶ್ ಅವರ ನೀಲು ಪದ್ಯಗಳ ಬಗ್ಗೆ ಮೊಟ್ಟಮೊದಲು ಗಾಢವಾಗಿ ತಟ್ಟುವ ವಿಷಯ.

ತನ್ನ ಮತ್ತು ತನ್ನ ಕಾವ್ಯಶಕ್ತಿಯ ಬಗ್ಗೆ ಅಸೀಮ ಆತ್ಮವಿಶ್ವಾಸ ಹೊಂದಿದ ತುಂಟಿ ನೀಲು ತಿಣುಕುವ ಕವಿಗಳನ್ನು ಛೇಡಿಸುವ ಛಾನ್ಸ್ ಬಿಟ್ಟುಕೊಡುವುದಿಲ್ಲ:

‘ಹುಟ್ಟು ಹಠವಾದಿಯೊಬ್ಬ

ಕವಿಯಾಗಲು ಪಣತೊಟ್ಟು

ನಿತ್ಯ ಪದಭೇದಿಯಲ್ಲಿ ಬಳಲಿ

ಹಲ್ಲು ಕಡಿಯುತ್ತಿರುದ್ದಾಗ

ವಸಂತದ ಮಾವಿನ ಮರ

ಕೋಗಿಲೆಯ ಕಂಠದಲ್ಲಿ ಹಾಡಿ

ತನಗೇ ಗೊತ್ತಿಲ್ಲದೇ

ಕವಿಯಾಯಿತು’ ಎನ್ನುತ್ತಾಳೆ.

ಆಧುನಿಕರಿಂದ ‘ಪುಷ್ಪಕವಿ’ಗಳೆಂದು ಗೇಲಿಗೊಳಗಾದ ಕಾವ್ಯಪರಂಪರೆಯ ಕವಿಗಳು, ‘ಸಂಪಿಗೆ ಮರದ ಹಸಿರೆಲೆ ನಡುವೆ…’ ರೀತಿಯ ಹಾಡುಗಳನ್ನು ಬರೆದ ನಮ್ಮ ಸಿನೆಮಾ ಸಾಹಿತಿಗಳು ಬಳಸಿದ ವಸಂತ, ಮಾವಿನ ಮರ, ಕೋಗಿಲೆ, ನವಿಲು ಇತ್ಯಾದಿ ಸಂಕೇತಗಳನ್ನೇ ಬಳಸುತ್ತಾ ಅವುಗಳಿಂದೆಲ್ಲ ಹೊಸ ಅರ್ಥವೊಂದನ್ನು ಹೊಳೆಸುವ ನೀಲುವಿನ ಸಿದ್ಧಿಗೆ ವಾಹ್ ವಾಹ್ ಅನ್ನದಿರುವುದು ಕಷ್ಟ. ನೀಲು ಪದ್ಯಗಳ ಅತಿ ದೊಡ್ಡ ಶಕ್ತಿ ಇರುವುದು ಕಾವ್ಯವನ್ನು ‘ಓದು’ ಎಂದು ಪರಿಗಣಿಸದ, ಭಾವಗೀತೆ-ಸಿನೆಮಾ ಹಾಡು ಕೇಳಿ ಖುಶಿಪಡುವ ಪತ್ರಿಕೆಯ ಓದುಗನಿಗೆ ಸುಲಭಕ್ಕೆ ಎಟುಕುವ ಭಾಷೆಯನ್ನು ಬಳಸಿಯೇ ಇದರಿಂದಾಚೆಯ ಪ್ರಶ್ನೆಗಳನ್ನು, ಹೊಸ ತಿರುವುಗಳನ್ನು ಓದುಗನ ಎದುರಿಡುವುದು. “ನೀಲು ಕಾವ್ಯ”  ಸಂಕಲನಕ್ಕೆ ಮುನ್ನುಡಿ ಬರೆದ ಕಿ.ರಂ. ನಾಗರಾಜ್ ಹೇಳುವಂತೆ ‘ಸಾಮಾನ್ಯ ವಿವರಗಳಲ್ಲೇ ಅಂತಸ್ಥವಾಗಿರುವ ಥಟ್ಟನೆ ಕಾಣದ ಅನೇಕ ಸೂಕ್ಷ್ಮಗಳು ಹುದುಗಿರುವುದನ್ನು ಪಾರದರ್ಶಕ ಎನಿಸುವ ಭಾಷೆಯ ಬಳಕೆಯ ಮೂಲಕ ಹೇಳುವ ವಿನ್ಯಾಸ’ ಈ ಕವಿತೆಗಳದು.

ನೀಲುವಿಗೆ ಕಾವ್ಯದಲ್ಲಿ ಹಾಡಿ, ಹೊಗಳಿ ಹಳಸಿ ಕ್ಲೀಶೆಯಾಗಿ ಹೋದ ಪ್ರಕೃತಿಯ ಸಂಕೇತಗಳು ಯಾವತ್ತೂ ಸುಂದರ ‘ದೃಶ್ಯ’ಗಳಾಗದೆ ಮಾನವ ಪ್ರಯತ್ನಗಳ ಸೀಮಿತತೆಯನ್ನು ಗುರುತಿಸಲು ಮತ್ತು ಅಹಂಕಾರಕ್ಕೆ ನಿಜದ ಸೂಜಿ ಮೊನೆಯನ್ನು ಮೆತ್ತಗೆ ತಗುಲಿಸಲು ಸಾಧನಗಳಾಗುತ್ತವೆ.

‘ಮೊಗ್ಗು ಬಿರಿವುದ ನೋಡಲು

ಹಠ ಹಿಡಿದು ಕೂತರೆ

ನಿದ್ರೆ ಕ್ರಮೇಣ ಆವರಿಸಿ

ಏಳುವಷ್ಟರಲ್ಲಿ ಹೂ ಅರಳಿ

ದಳ ಬಾಡತೊಡಗಿತು’ ಎನ್ನುವಲ್ಲಿ ಈ ಪ್ರಜ್ಞೆಯನ್ನು ನೋಡಬಹುದು.

ಮನುಷ್ಯ ತಾನೇ ಕಟ್ಟಿಕೊಂಡ ನೀತಿ-ಅನೀತಿಗಳ ಸೀಮೆಗಳ ಹಾಸ್ಯಾಸ್ಪದತೆಯನ್ನು ಹೈಕುವಿನ ಬ್ರೆವಿಟಿ ಮತ್ತು ಚಾಣಾಕ್ಷತೆಯೊಂದಿಗೆ ತನ್ನದೇ ಪೋಲಿತನವನ್ನೂ ಬೆರೆಸಿ ಹೇಳುದಕ್ಕೂ ನೀಲು ಪ್ರಕೃತಿಯ ಸುಂದರ ದೃಶ್ಯವನ್ನೇ ಬಳಸುವುದು:

‘ಚಿಟ್ಟೆಯ ಬಣ್ಣಕ್ಕೆ ಬೆರಗಾದ ಹುಡುಗಿ

ಅದರ ವ್ಯಭಿಚಾರಕ್ಕೆ

ಮಂತ್ರಮುಗ್ಧಳಾದಳು.’

ಆದರೆ ಪಕ್ಕಾ ಆಧುನಿಕಳಾದ ನೀಲುವಿಗೆ ಪ್ರಕೃತಿಯೊಡನೆ ಒಂದಾಗಿ ಗಿಳಿ, ಗೋರಂಕಗಳಂತೆ ಮಾನವ ಬದುಕಬಲ್ಲನೆಂಬ ರೊಮ್ಯಾಂಟಿಕ್ ಕಲ್ಪನೆ ಖಂಡಿತ ಇಲ್ಲ:

‘ಹಕ್ಕಿಯಂತೆ ಹಾರಲು, ಚಿರತೆಯಂತೆ ಓಡಲು

ನದಿಯಂತೆ ಹರಿಯಲು ನನಗೆ ಆಸೆಯಾದರೂ

ನಿಜಕ್ಕೂ

ಹೀಗೆ ಹೆಂಗಸಾಗಿ ಕೂತು

ಹರಟುವುದೇ ನನಗೆ ಇಷ್ಟ’ ಎಂಬ ಸ್ಪಷ್ಟತೆ ನೀಲುವಿಗಿದೆ.

ಪ್ರೇಮಿ-ಕಾಮಿನಿ-ಕವಿ-ತತ್ವಜ್ಞಾನಿ ಹೀಗೆ ಅನೇಕ ಮುಖಗಳನ್ನು ಬೇರೆಬೇರೆ ಪದ್ಯಗಳಲ್ಲಿ, ಕೆಲವೊಮ್ಮೆ ಒಂದೇ ಬಾರಿ ಹೊಳೆಸುವ ನೀಲುವಿಗೆ ಪ್ರಕೃತಿ ಒಂದು ರೀತಿಯ reality checkನ್ನು ತನ್ನೆಲ್ಲಾ ಅನುಭವಗಳಿಗೆ ಒದಗಿಸಿದರೆ ಮತ್ತೊಂದು ರೀತಿಯ ಅಳತೆಗೋಲಾಗಿ ಎಲ್ಲರೀತಿಯ ತೋರಿಕೆ, ಆಡಂಬರಗಳಿಂದಾಚೆಯ ಸಾಮಾನ್ಯರ ಜೀವನ ಕೆಲಸ ಮಾಡುತ್ತದೆ. ಹಿಮಾಲಯವನ್ನು ಹತ್ತಿದ ತೇನ್‌ಸಿಂಗ್‌ನನ್ನು ಕುತೂಹಲದಿಂದ ಕಾಣುವ ಈರವ್ವ ತೇನ್‌ಸಿಂಗ್‌ನನ್ನು ಅವಳ ಹಿತ್ತಲ ತೆಂಗಿನ ಮರ ಹತ್ತಿ ಕಾಯಿ ಕಿತ್ತುಕೊಡಲು ವಿನಂತಿಸಿಕೊಳ್ಳುತ್ತಾಳೆ ನೀಲುವಿನ ಕವಿತೆಯಲ್ಲಿ! ಈ ಅರಿವಿರುವುದರಿಂದಲೇ ತತ್ವಜ್ಞಾನಿ ಜಗತ್ತನ್ನು ಮಾಯೆ ಎಂದರೂ ‘ಕೇವಲ ಹುರಿಗಾಳು ತಿನ್ನುವಾಗ ಕೂಡ’ ನೀಲುವಿಗೆ ‘ಜಗತ್ತು ನಿಜ ಎನ್ನಿಸುವುದು’.

ಒಟ್ಟಿನಲ್ಲಿ ಒಂದು ರೀತಿಯ ವಿಶಿಷ್ಟವಾದ ‘ರೈಪ್‌ನೆಸ್’ ನೀಲುವಿಗೆ ಲಭ್ಯವಾಗಿರುವುದು ಸಂಕಲನದುದ್ದಕ್ಕೂ ಕಾಣುತ್ತಾ ಹೋಗುತ್ತದೆ. ಈ ಮನಸ್ಥಿತಿ ಅವಳಿಗೆ ಸಾಧ್ಯವಾಗಿರುವುದು ಅವಳು ವಯಸ್ಸು ಮತ್ತು ಅನುಭವಗಳೆರಡರ ದೃಷ್ಟಿಯಲ್ಲೂ ಒಂದು ‘ಸುವರ್ಣ ಮಾಧ್ಯಮ’ ಸ್ಥಿತಿಯಲ್ಲಿ ಇರುವುದರಿಂದ ಇರಬಹುದೆ?

ಮಧ್ಯ ವಯಸ್ಸಿಗೆ ಅಡಿ‌ಇಡುತ್ತಿರುವ (ಒಂದು ಪದ್ಯದ ಪ್ರಕಾರ ಇವಳ ವಯಸ್ಸು ೩೮, ಇನ್ನೊಂದರ ಪ್ರಕಾರ ೩೦) ಈ ನೀಲುವಿಗೆ ತುಂಟಾಟ, ಉತ್ಕಟತೆ, ಪೋಲಿತನಗಳ ನಡುವೆ ಅವಳ ಮತ್ತು ಅವಳ ಪ್ರಿಯಕರನ ‘ಅಜರಾಮರ’ ಪ್ರೀತಿಯೂ ಸೇರಿದಂತೆ ಪ್ರಪಂಚದ ಎಲ್ಲ ವಿವರಗಳ ನಶ್ವರತೆಯ ಬಗ್ಗೆ ಗಾಢವಾದ ಅರಿವೂ ಇದೆ. ನೂರಾರು ಕಷ್ಟಕಾರ್ಪಣ್ಯದ ನಂತರ ಪಡೆದ ಲಿಯರ್ ರೀತಿಯ ರೈಪ್‌ನೆಸ್ ಇದಲ್ಲ ಎನ್ನುವುದನ್ನು ಗಮನಿಸಬೇಕು. ಮಧ್ಯವಯಸ್ಕ ಅಂಗ್ಸ್ಕ್ಟ್, ಮುಪ್ಪಿನೆಡೆ ಜಾರುತ್ತಿರುವ ಬಗ್ಗೆ ಅರಿವು, ಆದರ ಜೊತೆಜೊತೆಗೇ ಇನ್ನೂ ಆರದ ಯೌವ್ವನ ಕಾವು ಇವೆಲ್ಲವನ್ನೂ ಒಳಗೊಂಡು ಬಂದಿರುವ ‘ರೈಪ್‌ನೆಸ್’ ಇದು. ಈಕೆ ಭೂಮಿಯ ಮೇಲೆ ಕಳೆದ ಮೂವತ್ತೆಂಟು ಸಂವತ್ಸರಗಳಲ್ಲಿ ನಲ್ಲನ ಸ್ಪರ್ಷ ಮತ್ತು ನೆನೆಪು ಒಂದು ಗಂಟೆಯದು ಮಾತ್ರ ಎಂಬ ‘ಅಂಕಗಣಿತದ ವಿಚಿತ್ರ ಸತ್ಯ’ವನ್ನು ಅರಿತು, ವಸಂತ ಋತುವಿನ ಮೀಸೆಯಲ್ಲಿ ಕೂಡ ಎರಡು ಬಿಳಿ ಕೂದಲ ಕಂಡು, ಮಂಡಿಯೂರಿ ಕೂತ ತನ್ನ ತೊಡೆಯ ಮೇಲೆ ನರ್ತಿಸುತ್ತಿರುವ ನಲ್ಲನ ಬೆರಳುಗಳು ಅವಳ ವಸಂತಗಳ ಎಣಿಸುತ್ತಿದೆ ಎಂಬ ಸಂದೇಹ ಹುಟ್ಟಿ ಎದೆ ಕಂಪಿಸಿದ ನಂತರದಲ್ಲಿ….

‘ಪ್ರೇಮ ಕಾಮಗಳನ್ನು ಧಿಕ್ಕರಿಸುವ

ಹಠ ಮಾಡಬೇಡ;

ಅವೆರಡು ನಿನ್ನತ್ತ ಸುಳಿಯದ

ವರ್ಷಗಳೂ

ಕ್ಯಾಲೆಂಡರಿನಲ್ಲಿ ಕಾಯುತ್ತಿವೆ’ ಎಂದು ಗಂಭೀರವಾಗಿ ಹೇಳುತ್ತಾಳೆ.

ಮತ್ತೆ ಇದೇ ಕಾಲನ ಓಟದ ಅರಿವಿಗೆ ಕೊಂಚ ತುಂಟತನ ಬೆರೆಸಿ…

‘ನೀವು ಪ್ರೇಮ ಅಮರ ಎಂದದ್ದು ನಿಜವಿರಬಹುದು,

ಆದರೆ,

ಎರಡು ಸಾವಿರ ವರ್ಷಗಳ ಹಿಂದೆ ಪ್ರೀತಿಸಿದ ಇಬ್ಬರ

ಎರಡು ಹಲ್ಲುಗಳನ್ನು

ಮೇಕೆದಾಟಿನ ಹತ್ತಿರ ನೋಡಿದೆ.

ಪ್ರೇಮಿಸುವಾಗ ಅವು ಬಿದ್ದಿರಬಹುದೇ?’ ಎನ್ನುವಾಗ ವ್ಯಕ್ತವಾಗುತ್ತದೆ ನೀಲುವಿನ ರೈಪ್‌ನೆಸ್.

ಇಷ್ಟೆಲ್ಲಾ ನೀಲುವಿನ ಕಾವ್ಯದ ಚೆಂದದ ಬಗ್ಗೆ ಮಾತಾಡಿದ ನಂತರವೂ ಆಕೆ ಮತ್ತು ಆಕೆಯ ಸೃಷ್ಟಿಕರ್ತನ ಬಗ್ಗೆ ಒಂದು ಪ್ರಶ್ನೆ ಹಾಗೆಯೇ ಉಳಿದುಕೊಳ್ಳುತ್ತದೆ: ಲಂಕೇಶ್ ನಿರಂತರವಾಗಿ, ಆಪ್ತವಾಗಿ ಮತ್ತು ಪ್ರಾಲಿಫಿಕ್ ಆಗಿ ಬರೆದ ಈ ಕವನಗಳ ಶೃಂಖಲೆಗೆ ಹೆಣ್ಣುದನಿಯನ್ನು ಆರಿಸಿಕೊಂಡಿದ್ದೇಕೆ?

ಈ ಪ್ರಶ್ನೆಯನ್ನು ಸ್ವಲ್ಪ ಭಾವಗೀತಾತ್ಮಕವಾಗಿ ನೋಡುವುದಾದರೆ ಇದು ಜಗಳಗಂಟ, ನಿಷ್ಠುರವಾದಿ ಎಂದು ಹೆಸರಾಗಿದ್ದ ಲಂಕೇಶ್ ತಮ್ಮ ‘ಮಿನಿನ್ ಸೈಡ್’ನ್ನು ಈ ಮುಖವಾಡದ ಮೂಲಕ ಮುಟ್ಟುವ ಪ್ರಯತ್ನ ಮಾಡಿದರು ಅನ್ನಬಹುದು. ಪತ್ರಿಕೆಯ ರಾಜಕೀಯ ವಿಶ್ಲೇಷಣೆ, ತರಲೆ, ಜಗಳಗಳ ನಡುವೆ ನೀಲುವಿನದು ಇದರೆಲ್ಲದರೆಡೆಗೆ ವಾರೆಯಾಗಿ ನೋಡುವ ನೋಟವಾಗಿತ್ತು ಎಂಬುದನ್ನು ಮರೆಯಬಾರದು.

ಲಂಕೇಶರ ದೃಷ್ಟಿಯಲ್ಲಿ ‘ಫೆಮಿನಿನ್’ ಎಂದರೆ ಏನು ಎಂಬುದು ಮುಂದಿನ ಪ್ರಶ್ನೆ. ಇದು ಸರಳರೇಖಾತ್ಮಕವಾದ ಸಿನೆಮಾ ಶೈಲಿಯ ಹದಿನಾರರ ಹರೆಯದ, ನಾಚುವ, ಬಳುಕುವ ‘ಫೆಮಿನಿನಿಟಿ’ ಅಲ್ಲ ಎನ್ನುವುದು ಖಚಿತ. ಸ್ಪರ್ಶ, ಚುಂಬನ, ಆಲಿಂಗನದಲ್ಲಿ ಕರಗುವಾಗಲೂ ಈ ಮೂವತ್ತು ಅಥವಾ ಮೂವತ್ತೆಂಟರ ಹುಡುಗಿಗೆ ‘ಸುಂದರ ಸೊಂಟ ಬಳಸಲು ಜೀವವನ್ನೇ ಕೊಡಬಲ್ಲ ತರುಣನಿಗೆ ಅವಳಿಂದ ಸೊಂಟ ಬೇರ್ಪಟ್ಟರೆ ಅದು ಕೇವಲ ಮಾಂಸವೆಂಬುದೆಂದು ತಿಳಿಯುದುದಿಲ್ಲ’ ಎಂಬುದರ ಬಗ್ಗೆ ಖೇದವಿದೆ. ಪ್ರೇಮದ ಆಟದಲ್ಲಿ ‘ಸಮಾನತೆ ಮತ್ತು ಘನತೆ ಇಲ್ಲದಿದ್ದರೆ ಅಂಪೈರ್‌ಗಳೆ ಇಲ್ಲದಂತೆ’ ಎಂಬ ವಿವೇಕವಿದೆ.

ಆದರೆ ನೀಲುವಿನ ಹೆಣ್ಣುದನಿ ಒಮ್ಮೆಮ್ಮೆ ಇದ್ದಕ್ಕಿದ್ದಂತೆ ಜಾರಿ ಗಡಸು ಗಂಡು ದನಿ ಹೊರಹೊಮ್ಮುವುದೂ ಉಂಟು. ‘ಗಂಡ ಪೂರ್ತಿ ಸ್ವಾತಂತ್ರ್ಯ ಕೊಟ್ಟಾಗ

ಆಗುವ ಖುಶಿಗಿಂತ ಆತ ನನ್ನ ಸ್ವಾತಂತ್ರ್ಯದ ಬಗ್ಗೆ ಸಿಡಿದೆದ್ದಾಗ ಆಗುವ ಹಿಗ್ಗು

ಪ್ರೇಮದ ಗುರುತೆ?’  ಎಂದು ಕೇಳುವಾಗ ಅಥವ ‘ಕಾಮುಕನ ಆಲಿಂಗನ

ಕೊಂಚ ಅಸಹ್ಯವಾದರೂ ಅದೇ ವಾಸಿ’ ಅನ್ನುವಾದ ಇವು ಜಾಣ್ಮೆಯಿಂದ ಹೆಣ್ಣಿನ ದನಿ ಬಳಸಿ ಹೇಳಿದ ‘male fantasy’ಯ ಪರಾಕಾಷ್ಠೆ ಅನ್ನಿಸದೆ ಇರುವುದಿಲ್ಲ. ‘ಗಂಡಿನ ಕ್ರೌರ್ಯ ಮತ್ತು ಹೆಣ್ಣಿನ ಚಂಚಲತೆ ನೀರಿನ ಸರಳತೆಯಷ್ಟು ನಿಜ’ ಅನ್ನುವ ಹೆಣ್ಣುಗಂಡಿನ ಗುಣಗಳನ್ನು ಗಣಿತದ ಸಮೀಕರಣಕ್ಕೆ ಇಳಿಸಿಬಿಡುವ ಮಾತುಗಳೂ ಇದರ ಇನ್ನೊಂದು ರೂಪ.

Sterotypeಗಳಿಗೆ ಕಟ್ಟು ಬೀಳದೆ ಹೆಣ್ಣು ದನಿಯೊಂದನ್ನು ಸೃಷ್ಟಿಸ ಹೊರಟ ಲಂಕೇಶ್ ಅದರಿಂದ ಪೂರ್ಣ ಮುಕ್ತವಾಗಲಿಲ್ಲ ಎಂಬುದು ನೀಲೂ ಪದ್ಯಗಳಲ್ಲಿ ಢಾಳಾಗಿ ಕಾಣುತ್ತದೆ. ಈ ‘ಚಂಚಲೆ’ (ಹೆಣ್ಣಿನ ಮೂಲಗುಣವೆಂದು ಎಲ್ಲರೂ ಹೇಳೂವ ಇದು ಏನು ಎಂಬುದು ಇದುವರೆಗೂ ನಿಗೂಢವಾಗಿಯೇ ಉಳಿದ ವಿಷಯ) ನೀಲುವಿನ ಸ್ತ್ರೀತ್ವ ಉದ್ದಕ್ಕೂ ಅ-ರಾಜಕೀಯ ನೆಲೆಯಲ್ಲಿಯೇ ಗಟ್ಟಿಗೊಳ್ಳುತ್ತಾ ಆಗುತ್ತಾ ಹೋಗುವುದು ಇದಕ್ಕೆ ಒಂದು ಉದಾಹರಣೆ. ಇವಳ ಕಾಲ್ಬೆರಳಿಗೆ ‘ಸೋಶಿಯಲಿಸ್ಟ್ ಮುತ್ತು’ ಇಡುವ ಇವಳ ನಲ್ಲನ ರಾಜಕೀಯ ಆರ್ಭಟ ತನ್ನ ‘ಕಾಮನಬಿಲ್ಲನ್ನು ಕ್ಷಣಕೂಡ ಹಿಡಿದು ನಿಲ್ಲಿಸಲಾರದು’ ಎನ್ನುತ್ತಾಳೆ ನೀಲು. ಗಂಡಸಿನ ರಾಜಕೀಯ ಹಪಹಪಿಕೆಯನ್ನು ಒಂದು ರೀತಿಯ ಕರುಣೆಯಿಂದ ನೋಡುವ ಈ ಸ್ತ್ರೀದನಿಗೆ ಯಾವುದೇ ‘ಇಸಂ’ ಮುಟ್ಟದ ಮಾನವೀಯತೆ ಇದೆ. ಇದೇ ಛಾಯೆಯನ್ನು ಲಂಕೇಶ್ ಕಾವ್ಯದ ಅನೇಕ ಸ್ತ್ರೀಪಾತ್ರಗಳಲ್ಲಿ (‘ಚಿತ್ರ ಸಮೂಹ’ ಸಂಕಲದಲ್ಲಿಸುಳಿದಾಡುವ ಚಂದ್ರಿ, ಸರೋಜ, ಅನ್ನ ಕರೆನಿನ, ಚಂದ್ರಿ ಇತ್ಯಾದಿ) ಎಲ್ಲರಲ್ಲಿಯೂ ಕಾಣಬಹುದು. ಬಂಡಾಯ, ಐಡಿಯೋಲಜಿ, ರಿಯಲ್ ಪಾಲಿಟಿಕ್ ಇವೆಲ್ಲವೂ ಸ್ತ್ರೀತ್ವಕ್ಕೆ ವ್ಯತಿರಿಕ್ತವಾದವು ಎನ್ನುವ ಭಾವ ಉದ್ದಕ್ಕೂ ಕಾಣುತ್ತದೆ. ‘ವಿಧಾನಸೌಧದ ಮೇಲೆ ಹಾಡುವ ಹೃದಯ’ ಹೊಂದಿದ್ದೇನೆ ಎಂಬ ನೀಲುವಿನ ಕಾವ್ಯಮಯ ಹೇಳಿಕೆ ಇದಕ್ಕೆ ಏಕಮಾತ್ರ ಅಪವಾದ.

‘ವೃತ್ತಿಯಾಗಿ ಬಂಡಾಯ ಮಾಡುವ

ನುರಿತ ಹೆಂಗಸರಿಗಿಂತ

ಪಕ್ಕದ ಮನೆಯ ಎಳೆಯ ಹೆಣ್ಣು

ಪ್ರಿಯನ ಬಗ್ಗೆ ರೋಷಗೊಂಡು

ಪರಚುವ ದೃಶ್ಯ ಪ್ರಾಮಾಣಿಕ’ ಎನ್ನುವಲ್ಲಿ

ಮತ್ತು

‘ನನ್ನ ಕ್ರಾಂತಿಯ ಮಾತುಗಳೆಲ್ಲಾ

ನಮ್ಮೂರ ಮಲ್ಲಿಯ

ಸುಖ ತುಂಬಿದ ಕ್ರಾಂತಿರಹಿತ

ಕೆನ್ನೆ ನೋಡಿದೊಡನೆ

ಬಾಲ ಮುದುರಿಕೊಂಡವು’ ಎನ್ನುವಾಗ ಎಲ್ಲಾ ಮುಖವಾಡಗಳನ್ನೂ ಕಳಚಿ ಹೆಣ್ಣಿನ ಬಂಡಾಯವೆಲ್ಲ ಗಂಡಸನ್ನು ಟಿಟಿಲೇಟ್ ಮಾಡುವ ಮಟ್ಟಕ್ಕೆ ಬಂದು ನಿಂತರೆ ಚೆಂದ, ಅದರಿಂದಾಚೆ ಸ್ತ್ರೀತ್ವಕ್ಕೆ ಅಪವಾದ ಎಂಬ ಅಭಿಪ್ರಾಯ ಸ್ಪಷ್ಟವಾಗಿಯೇ ವ್ಯಕ್ತವಾಗುತ್ತದೆ.

ನೀಲು ಪದ್ಯಗಳನ್ನು ಒಟ್ಟಾರೆಯಾಗಿ ನೋಡಿದಾಗ ಈ ಹುಡುಗಿಯ ಸ್ಥಾಯಿಭಾವ ನಲ್ಲನಿಗಾಗೆ (ಒಮ್ಮೆಮ್ಮೆ ಅವನನ್ನು ‘ದೊರೆ’ ಅಂತಲೂ ಕರೆದು ಇರುಸುಮುರುಸು ಮಾಡಿ!) ಕಾಯುತ್ತಾ ಕೂರುವ ಕ್ರೌಂಚಪಕ್ಷಿಯದಾ ಎಂಬ ಅನುಮಾನವೂ ಬರುತ್ತದೆ.

‘ನೀಲು ಯಾರು ಎಂದು ಕೇಳಿದಿರಾ?

ಹುಣ್ಣಿಮೆಯ ಬೆಳದಿಂಗಳು ಕಾಮಿನಿಯಲ್ಲಿ

ಪ್ರೇಮ ಉಕ್ಕಿಸಿದ ವೇಳೆ

ಇನಿಯನಿಲ್ಲದ ಹಾಸಿಗೆಯಲ್ಲಿ

ಬಿಕ್ಕಳಿಸಿ ಅತ್ತು ಅವನಿಗಾಗಿ ಕಾದು

ಆತ ಹಿಂದಿರುಗುವ ಹೊತ್ತಿಗೆ ಅಮಾವಸ್ಯೆ

ಕವಿದಿತ್ತು, ಮತ್ತೆ ಬೆಳದಿಂಗಳ

ಹುಣ್ಣಿಮೆಗೆ ಕಾಯುತ್ತಾ

ಅವಳು ಇಟ್ಟ ನಿಟ್ಟಿಸಿರಿನಲ್ಲಿ

ಹುಟ್ಟಿದವಳು ನೀಲು’

ಹೀಗೆ ಕಾವ್ಯಾತ್ಮಕವಾದ ನೀಲುವಿನ ಹುಟ್ಟಿನಲ್ಲಿಯೇ ಗಂಡಿಗಾಗ ಈ ರೀತಿಯ ಕಾಯುವಿಕೆ ಅಂತರ್ಗತವಾಗಿರುವುದನ್ನು ಗಮನಿಸಬೇಕು. ತನ್ನೆಲ್ಲಾ ಸಾಲುಗಳನ್ನು ನೀಲು ಗುರುತಿಸುವುದು ‘ವಿರಹದ, ಕಾತರದ, ನಿರಾಶೆಯ, ಚಿಂಬನದ, ಆಲಿಂಗನದ ಗುರುತುಗಳು’ ಮತ್ತು ‘ಪ್ರಕೃತಿ ಸೂರ್ಯನನ್ನು ಸ್ವಾಗತಿಸುವಾಗ ನಾನು ಕತ್ತಲೆಯ ಭಿತ್ತಿಯ ಮೇಲೆ ಚಿತ್ರಿಸಿದ ನಿಟ್ಟುಸಿರುಗಳು’ ಎಂಬುದಾಗಿ ಎನ್ನುವುದನ್ನೂ ಇಲ್ಲಿ ಗಮನಿಸಬಹುದು.

ಆದರೆ ಈ ರೀತಿಯ ವಿಮರ್ಶೆಗೂ ಉತ್ತರವನ್ನು ನೂರಾರು ರಂಗುರಂಗಿನ ಪದರಗಳ ನೀಲು ತನ್ನ ಕಾವ್ಯದ ಬತ್ತಳಿಕೆಯಿಂದಲೇ ತೆಗೆದು ತೋರಿಸಿಯಾಳು. ನನಗೂ ಗೊತ್ತು ಇದೆಲ್ಲ. ಈ ಆಲಿಂಗನ ಇತ್ಯಾದೆ ಎಲ್ಲಾ ಬೋರು ಬಂದು ನಾನೂ ಬೇರೆ ದಾರಿ ಹುಡುಕುತ್ತಿದ್ದೇನೆ ಅನ್ನುವಂತೆ ಈ ಸಂಕಲನದ ಕೊನೆಯ ಸಾಲುಗಳಿವೆ:

‘ಪ್ರಿಯಕರ,

ನಿನ್ನ ಅಪ್ಪಿಗೆಯಲ್ಲಿ ಮಲಗಿ

ಪದ್ಯ ರಚಿಸುತ್ತಿರುವ ನನಗೆ

ಕ್ರಮೇಣ ನಿನ್ನ ತೋಳುಗಳು

ಜೈಲಿನ ಹಾಗೆ ತೋರತೊಡಗಿವೆ.’

(ಇದು ‘ದೇಶಕಾಲ’ದಲ್ಲಿ ಪ್ರಕಟವಾದ ವಿಮರ್ಶೆ.)

Advertisements

4 ಟಿಪ್ಪಣಿಗಳು »

 1. […] Posted on November 9, 2008. Filed under: ಬ್ಲಾಗ್ ಮಂಡಲ | ನೀಲುವಿನ ಜಾಡು ಹಿಡಿದು… […]

 2. sumathi said

  ree, madum…
  adestu chennagi bareetheeri…
  nijvaaglu helbekandre.. ee neelu thanna yochnaa lahari moolaka bechchi beelisthale. buddi jeevigala bhrameya pore haridu bisaakthaale. esto sari kanna munde iro sathyavanne saakaara maadthaale. inthaa vichaaravavannu neevanthu…adhbhuthavaagi, arthapoornavaagi…jeevanakke haththiravaagi bardiddeeda…. nimma blog thumba chennagide…bhavanadalli aagagge oduthidda nanage neevu naduve misss agidri. eega nanage santhosha aagide…thank u
  -suma

 3. Manjunatha said

  ಉತ್ತಮ ಬರಹ. ನೀಲುವಿನ ನವಿರುತನ ಹಾಗೆಯೇ ಸಂಕೀರ್ಣತೆಗಳಿಗೆ ಧಕ್ಕೆ ಮಾಡದೇ ಮೂಡಿಬಂದಿದೆ.

 4. aa vaarada chithane gale nilu muduthidavu .
  intha vimashe bagge lankeshge gothe irlilla . vattinalli kannada jana e nilu vininda pulaka padediruvudu kuthuhala….

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: