ಲಲನಾಮಣಿಯರ ಪಬ್ ಪ್ರಸಂಗ

ಕಲಿಯುಗದಲ್ಲಿ ಆಳುವ ದೊರೆಗಳಕೃಪಾಕಟಾಕ್ಷದಿಂದ ಎಲ್ಲೆಲ್ಲಿ ನೋಡಲಿ ಅಲ್ಲಲ್ಲಿ ಕಾಣುವ ಪಬ್ ಎಂಬ ಪಾಪಕೂಪಕ್ಕೆ ಲಲನಾ  ಮಣಿಯರು ಹೋಗಲಿಕ್ಕೆ ಶುರುಮಾಡಿದಂತಹ ಸಂದರ್ಭದಲ್ಲಿ “ಸಂಭವಾಮಿ ಯುಗೇ ಯುಗೇ” ಎಂಬ ಸನಾತನ ಭರವಸೆಗೆ ಬದ್ಧವಾಗಿ ತ್ರೇತಾಯುಗದಿಂದ ನೇರ ನೇಮಕಾತಿಯಾಗಿ ಬಂದ ಮರ್ಯಾದಾ ಪುರುಷೋತ್ತಮನ ಸೇನೆಯ ಮಂದಿ ಥೇಟ್ ಲಂಕಿಣಿಯರಂತೆ ಕಂಡ ಲಲನೆಯರಿಗೆ ಒಂದಷ್ಟು ಧರ್ಮದೇಟು ಕೊಟ್ಟರಂತೆ. 

ಕುಯ್ಯೋಮರ್ರೋ ಎನ್ನುತ್ತಾ ಲಲನೆಯರು ಈ ಯುಗದ ಆಚಾರ್ಯಪುರುಷರ ಮೊರೆಹೋಗಿ “ಇದ್ಯಾವ ಧರ್ಮ? ಬಿಯರಿಗೂ ಜಾತಿ, ಮತ, ಕುಲ, ಲಿಂಗವುಂಟೇ?” ಅಂತ ಕೇಳಿದಾಗ ಆ ಪುರುಷರು ತೊಟ್ಟ ಬಿಳಿಯ ಪ್ಯಾಂಟನ್ನು ಉದಾಹರಣೆಯ ಉಪಾದಿಯಲ್ಲಿ ತೋರಿಸುತ್ತಾ “ನಮ್ಮ ಧರ್ಮದಲ್ಲಿ ಲಲನೆಯರ ಚಾರಿತ್ರ್ಯವೆಂದರೆ ರಿನ್ ಜಾಹಿರಾತಿಗೆ ಸರಿಗಟ್ಟಬೇಕು. ಸೀತೆಯು ಭಯಂಕರ ಶೀತ ಬಂದಾಗಲೂ ಕುಡಿಯದ ಪೇಯ ನಿಮಗೆ ಬೇಡ ತಾಯಿಯರೆ. ಇದನ್ನು ಸ್ಪರ್ಶಿಸಿದಿರಾದರೆ ಎಡೆಯೂರು ಸಿದ್ಧಿಲಿಂಗೇಶ್ವರನ ಶಾಪಕ್ಕೆ ಗುರಿಯಾಗುವಿರಿ” ಎಂದು ಗುಡುಗಿಬಿಟ್ಟರಂತೆ. 

ಆಗ ಮೈತುಂಬ ಮಾತೃ ವಾತ್ಸಲ್ಯ ತುಂಬಿಕೊಂಡ ಲಲನೆಯರು, “ಮಗನೆ, ಬಿಯರೆಂಬುದು ಹಿಂದಿನ ಕಾಲದಲ್ಲಿ ನಮ್ಮಿಂದ ಪಾಶ್ಚಿಮಾತ್ಯರು ಕದ್ದುಕೊಂಡು ಹೋದ ಸೋಮರಸದ ಫಾರ್ಮುಲಾದಿಂದಲೇ ತಯಾರಿಸಿದ್ದು, ಥೇಟ್ ಪುಷ್ಪಕ ವಿಮಾನದ ಫಾರ್ಮುಲಾ ಕದ್ದು ರೈಟ್ ಸಹೋದರರು ವಿಮಾನ ತಯಾರಿಸಿದ ಹಾಗೆ” ಅಂತೆಲ್ಲಾ ಹೇಳಿದರೂ ಆಚಾರ್ಯ ಪುರುಷರ ಹೊಳೆವ ಬಿಳಿಯ ಕೆನ್ನೆ ಕೊಂಚವೂ ರಂಗೇರಲಿಲ್ಲವಂತೆ. 

ಸರಿ ಹೋಗಲಿ ಒಂದು ಪಿಚ್ಚರ್ ಕುಡಿದರೆ ಹತ್ತು ಬಾರಿ ಬಾತ್ ರೂಮಿಗೆ ಓಡಿಸುವ ಪೇಯದ ಸಹವಾಸವೂ ಬೇಡ, ಈ ಬಿಳಿ ಪ್ಯಾಂಟು, ಪ್ಯಾಂಟ್ ಕೆ ಪೀಛೆಯ ಚಡ್ಡಿ ಯಾವುದರ ಸಹವಾಸವೂ ಬೇಡ ಅಂತ ಲಲನೆಯರು ವೋಡ್ಕಾ ಜೊತೆ ಸ್ವಲ್ಪ ಪೈನ್‌ಆಪಲ್ ಜೂಸು, ಜೊತೆಗೆ ಒಂದು ಸಣ್ಣ ಸೀಳಿದ ಮೆಣಸಿನ ಕಾಯಿಯ ರುಚಿ ಹತ್ತಿಸಿಕೊಂಡು ಆನಂದವಾಗಿ ಇದ್ದರಂತೆ. 

“ಏನಾದರು ಮಾಡುತಿರು ತಮ್ಮ” ಎಂಬ ಕವಿವಾಣಿಗೆ ಬದ್ಧವಾದ ವಾನರ ಸೇನೆಯ ಮಂದಿಗೆ ಸ್ವಲ್ಪ ದಿನವಾದಂತೆ ಚಿವುಟಲಿಕ್ಕೆ ಯಾವ ಚಿಗುರೂ ಸಿಗದೆ ತುಂಬಾ ಬೇಜಾರಾಯಿತಂತೆ. ಹೀಗೆ ಒಂದು ದಿನ ಏಡುಕೊಂಡಲವಾಡನ ಹೆಸರನ್ನೇ ಭಕ್ತಿಯಿಂದ ಇಟ್ಟಿದ್ದ ಬಾರೊಂದರಲ್ಲಿ ರಂ ಎಂಬ ಗಂಡಸರಿಗೆ ಮಾತ್ರ ಚ್ಯವನಪ್ರಾಶದಂತೆ ಶಕ್ತಿ ಕೊಡುವ ಪೇಯವನ್ನು ಹೀರುತ್ತಾ ಕೂತಿದ್ದಾಗ ಸೇನಾ-ಪ್ರೇರಿತನೊಬ್ಬನಿಗೆ ಬಾರಿನ ಅರೆಗತ್ತಲನ್ನು ಸೀಳಿಕೊಂಡು ಮಿಂಚಿನಂತ ಆಲೋಚನೆಯೊಂದು ಬಂತಂತೆ: ಬೆಂಗಳೂರೆಂಬ ನಗರಿಯಲ್ಲಿ ಬುಟ್ಟಿಬುಟ್ಟಿ ಐಟಿ, ಬೀಟಿ, ಕಂಪನಿಗಳಲ್ಲಿ ಹಗಲು ರಾತ್ರಿಯೆನ್ನದೆ ದುಡಿಯುವ ಲಲನೆಯರು ಅಮೆರಿಕದ ಕ್ಲೈಂಟ್ ಗಳ  ಜೊತೆಗೆ ಫೋನಲ್ಲಿ ಅಮೇರಿಕನ್ ಆಕ್ಸೆಂಟ್‌ನಲ್ಲೇ ಮಾತಾಡಲಿ, ಆದರೆ ಭಾರತೀಯ ಸಂಸ್ಕೃತಿಗೆ ಬದ್ಧವಾಗಿ ಸೀರೆ ಉಟ್ಟುಕೊಂಡೇ ಮಾತಾಡಬಹುದಲ್ಲ, ಫೋನಲ್ಲಿ ಸೀರೆ ಹೇಗಿದ್ದರೂ ಕಾಣಿಸುವುದೂ ಇಲ್ಲವಲ್ಲ ಅಂತ! 

ಇಂತಾಗಿ ಬೆಂಗಳೂರಿನ ಬೀದಿಗಳಲ್ಲಿ ಜೀನ್ಸ್ ಪ್ಯಾಂಟ್ ತೊಟ್ಟ ಲಲನೆಯರನ್ನು ಹಿಡಿ ಹಿಡಿದು, ಜಗ್ಗಾಡಿ ಹೊಡೆಯಲಾಯಿತಂತೆ. ಆಚಾರ್ಯಪುರುಷರ ಕೃಪೆಯ ಭರವಸೆಯನ್ನು ತಲೆಯ ಮೇಲೆ ಹೊತ್ತ ಮಂದಿ ಹೀಗೆಲ್ಲಾ ಇಟ್ಟಾಡಿಸಿಕೊಂಡು ಹೊಡೆದರೂ ನಗರದ   ಸಿಕ್ಕಾಪಟ್ಟೆ ಮರ್ಯಾದಾ ಪುರುಷೋತ್ತಮರಾದ ಜನ ತಮ್ಮ ತಮ್ಮ ಟೀವಿ ಸೀರಿಯಲ್ಲುಗಳನ್ನು ನೋಡಿಕೊಂಡು, ಅಳುತ್ತಾ, ನಗುತ್ತಾ ಇದ್ದುಬಿಟ್ಟರಂತೆ. 

ಇನ್ನೇನು ಮಾಡುವುದಪ್ಪಾ ಅಂದ ದಾರಿ ಕಾಣದೆ ಲಲನಾ ಮಣಿಯರು ಕನ್ನಡ ಸಿನೆಮಾದ ಐಟಮ್ ಹಾಡುಗಳನ್ನು ರೀವೈಂಡ್  ಮಾಡಿ, ಮಾಡಿ, ಮತ್ತೆ, ಮತ್ತೆ ನೋಡುತ್ತಾ ಥೇಟ್ ಆ ಉತ್ತರ ಭಾರತದಿಂದ ಫ್ರೆಶ್ ಆಗಿ ಇಂಪೋರ್ಟ್ ಆದವಳಂತೆ ಸೀರೆ ಉಡುವುದಾ ಅಂತ ಸಮಾಲೋಚನೆ ನಡೆಸಲಿಕ್ಕೆ ಶುರು ಮಾಡಿದರಂತೆ. ಇನ್ನೇನು ರಿಹರ್ಸಲ್ ಶುರು ಮಾಡಬೇಕು ಅಷ್ಟರಲ್ಲಿ ವಾನರ ಸೇನೆಯೋ, ಅಥವಾ ಸೇನೆಯ ಜೈತ್ರಯಾತ್ರೆಯಿಂದ ಸ್ಫೂರ್ತಿ ಪಡೆದ ಛೋಟಾ ಮೋಟಾ ತುಕಡಿಯೋ ಲಲನಾ   ಮಣಿಯರನ್ನು ಸೀರೆ, ಚೂಡಿದರ್ ಅಂತಲೂ ಲೆಕ್ಕಿಸದೆ ಕತ್ತಲಲ್ಲಿ ಹೊಡೆದು ಹೋಗುವ ಶೌರ್ಯಕಾರ್ಯ ಶುರು ಹಚ್ಚಿಕೊಂಡಿದ್ದಾರೆ ಎಂಬ ಸುದ್ದಿ ಬಂದಿತಂತೆ. 

ಅಯ್ಯೊ ಶಿವನೆ, ಶಂಕರನೆ ಇನ್ನೇನಪ್ಪಾ ಮಾಡೋದು ಅಂತ ಚಿಂತಾಕ್ರಾಂತರಾದರಂತೆ ಲಲನೆಯರು. ನಾವು ಶರಣೆ ನಮ್ಮೆಲ್ಲರ ಹಿರಿಯಕ್ಕನ ಉಪಾದಿಯಲ್ಲಿ ಎಲ್ಲಾ ಬಿಟ್ಟು ಬರೀ ಕೇಶರಾಶಿಯನ್ನೇ ಮೈತುಂಬಾ ಹೊದ್ದು ಓಡಾಡೋಣ ಅಂದರೆ ಈ ಹಾಳು   ಬೆಂಗಳೂರಿನ ಕೆಟ್ಟ ನೀರು, ಗಾಳಿಯ ದೆಸೆಯಿಂದ ಕೂದಲು ಸೊಂಟದ ಕೆಳಗೆ ಬೆಳೆಯೋದು ಇಲ್ಲವಲ್ಲಾ ಇನ್ನೇನು ಗತಿ ಚೆನ್ನಮಲ್ಲಿಕಾರ್ಜುನದೇವಾ, ಅಂದರಂತೆ. 

ಈ ಲಲನೆಯರ ಒದರಾಟದಿಂದ ಶಂಕರ ಮತ್ತು ಆಚಾರ್ಯಪುರುಷರುನಡೆಸುತ್ತಿದ್ದ ದೀರ್ಘ ಸಮಾಲೋಚನೆಗೆ ಭಂಗವಾಯಿತಂತೆ.  ಮೂರನೆಯ ಕಣ್ಣಿನಿಂದ ಲಲನೆಯರನ್ನು ಗುರಾಯಿಸುತ್ತಾ “ನಿಮ್ಮನ್ನು ಯಾರೋ ನಿಜವಾಗಿಯೂ ಹೊಡೆದಿದ್ದಾರೆ ಅಂತ ನಂಬುವುದಾದರೂ ಹೇಗೆ? ಬ್ರಹ್ಮ, ವಿಷ್ಣು, ಮಹೇಶ್ವರರೆಲ್ಲರಿಗೂ ಒಂದೇ ಏಟಿನಲ್ಲಿ ಕೆಟ್ಟ ಹೆಸರು ತರಬೇಕು ಅಂತ ನೀವು ನಿಮ್ಮಕೆನ್ನೆಗೆ ನೀವೆ ಹೊಡೆದುಕೊಂಡಿಲ್ಲ, ನಿಮ್ಮ ಕಾರಿಗೆ ನೀವೇ ಕಲ್ಲು ಹಾಕಿ ಚಚ್ಚಿಲ್ಲ, ನಿಮ್ಮ ಬಟ್ಟೆ ನೀವೆ ಎಳೆದಾಡಿಕೊಂಡಿಲ್ಲ ಅಂತ  ಯಾವ ಗ್ಯಾರೆಂಟಿ?” ಅಂತ ಶಂಕರನು ಸವಾಲೆಸೆದನಂತೆ. 

ಇನ್ನೇನು ಶಂಕರ ಜಟೆ ಎತ್ತಿ ಕಟ್ಟಿ ತಾಂಡವಕ್ಕೆ ರೆಡಿ ಆಗಬೇಕು ಅನ್ನುವಷ್ಟರಲ್ಲಿ ಬಂದ ದಾರಿಗೆ ಸುಂಕವಿಲ್ಲ ಅಂತ ಲಲನಾಮಣಿಯರ  ಗುಂಪು ಕೈಲಾಸ ಪರ್ವತವನ್ನು ಇಳಿಯಲಿಕ್ಕೆ ಶುರುಮಾಡುತ್ತಿದ್ದಂತೆ, “ಸ್ವಲ್ಪ ತಾಳಿ” ಅಂತ ಹಿಂದಿನಿಂದ ಕೋರಸ್‌ನಲ್ಲಿ ಕೂಗು ಕೇಳಿ ಬಂತಂತೆ. ಹಿಂದೆ ತಿರುಗಿ ನೋಡಲಾಗಿ ಅಲ್ಲಿ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿಯರು ಹ್ಯಾಪು ಮೋರೆ ಹಾಕಿಕೊಂಡು ನಿಂತಿದ್ದರಂತೆ. ಜೊತೆಗೆ ಹೆಸರು ಸರಿಯಾಗಿ ಗೊತ್ತಿಲ್ಲದ ಒಂದೂವರೆ ಕೋಟಿ ಹೆಣ್ಣು ದೇವತೆಗಳ ದಂಡೂ ಇತ್ತಂತೆ. 

ಇದೇನಪ್ಪ ಅಂತ ಲಲನಾ ಮಣಿಯರು ಕೇಳಲಾಗಿ, ದೇವತೆಗಳ ಸ್ಪೋಕ್ಸ್‌ವುಮನ್ ಆದ ಸರಸ್ವತಿ “ಇತ್ತೀಚಿನ ದಿನಗಳಲ್ಲಿ ಜಂಬೂ  ದ್ವೀಪೆ, ಭರತಖಂಡೆ ಆಳುವ ದೊರೆಗಳೆಲ್ಲಾ ದೇವಾದಿದೇವತೆಗಳ ಜೊತೆ ಹಾಟ್‌ಲೈನ್ ಸಂಪರ್ಕ ಹೊಂದಿದ ಲಾಗಾಯ್ತು ನಮ್ಮಗಂಡಂದಿರಿಗೆ ನಮ್ಮನ್ನು ಮಾತಾಡಿಸುವುದಕ್ಕೂ ಪುರುಸೊತ್ತಿಲ್ಲ. ಇವರ ಹೆಸರಿನಲ್ಲಿ ಪೂಜೆ, ಪುನಸ್ಕಾರ, ಅಭಿಷೇಕ, ಬಜೆಟ್ ದುಡ್ಡು ಸ್ಯಾಂಕ್ಷನ್ನು, ಗಲಭೆ, ಜಗಳ ಒಂದಲ್ಲಾ ಒಂದು. ಅದಕ್ಕೆ ನಾವು ಇವರ ಸಹವಾಸ ಸಾಕು ಅಂತ ನಿಮ್ಮ ಜೊತೆ ಬಂದು ಬಿಡೋಣ  ಅಂತ ಇದ್ದೀವಿ” ಅಂದಳಂತೆ. ಎಲ್ಲರಿಗಿಂತ ಸ್ವಲ್ಪ ಜಾಸ್ತಿ ಸಿಟ್ಟಾಗಿ ಕಾಣುತ್ತಿದ್ದಾ ಪಾರ್ವತಿ “ಈ ಗಂಗೆ ಕಾಟ ಬೇರೆ ನನಗೆ ಈಗ ಸೌತ್ ಇಂಡಿಯಾದಲ್ಲೂ ತಂದಿಟ್ಟಿದ್ದಾರಲ್ಲ ನಿಮ್ಮ ದೊರೆಗಳು. ಮೊನ್ನೆ ಶಿವರಾತ್ರಿಗೆ ನಿಮ್ಮಲ್ಲಿ ಯಾರೋ ಶ್ರೇಷ್ಠರು ಬೆಂಗಳೂರಿಗೂ ಗಂಗೆ ತಂದಿದ್ದಾರಂತಲ್ಲ” ಅಂತ ಹಿಡಿಶಾಪ ಹಾಕಿದಳಂತೆ. 

ಲಲನಾ ಮಣಿಯರು ಮತ್ತು ದೇವತೆಗಳು ಕೈಲಾಸದ ಬಾಗಿಲಲ್ಲಿ ಒಂದು ಎಮೆರ್ಜೆನ್ಸಿ ಗೇಟ್ ಮೀಟಿಂಗ್ ಮಾಡಿ ಎಲ್ಲರೂ ಒಟ್ಟಿಗೆಕೆಳಗೆ ಹೋಗುವುದು ಎಂದು ನಿರ್ಧರಿಸಿ ದಬದಬ ಬಂದುಬಿಟ್ಟರಂತೆ. ಸಧ್ಯಕ್ಕೆ ಎಲ್ಲರೂ ಸೇರಿ ಒಂದು ದೊಡ್ದ ಪಾರ್ಟಿ ಇಟ್ಟುಕೊಂಡಿದ್ದಾರಂತೆ. ಮುಂದಿನ ಜಾಯಿಂಟ್ ಏಕ್ಶನ್ ಕಾರ್ಯಕ್ರಮಗಳು ಮುಂದಿನ ದಿನಗಳಲ್ಲಿ ಪ್ರಕಟವಾಗುವ ನಿರೀಕ್ಷೆಯಿದೆಯಂತೆ. 

ಈತನ್ಮಧ್ಯೆ ಭೂ ಕೈಲಾಸಗಳಲ್ಲಿ ಹೆಣ್ಣು ದಿಕ್ಕಿಲ್ಲದೆ ಗಂಡಸರು ಹೆಂಗ್‌ಹೊಂಗೋ ಆಡಲಿಕ್ಕೆ ಶುರು ಮಾಡಿದ್ದಾರಂತೆ. ಬೇರೆ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಬಾರ್‌ನಲ್ಲಿಯೇ ಕಾಲ ಕಳೆಯುವ ಇನ್ನು ಕೆಲವು ಗಂಡಸರು ಕೈಲಾಸ ಭೂಮಿಗಳು ಒಂದಾದ ಪಾರ್ಟಿಯಲ್ಲಿ ಯಾವಯಾವ ಥರದ ಕಾಕ್‌ಟೈಲ್‌ಗಳು ಹುಟ್ಟಬಹುದು ಅಂತ ಆಲೋಚಿಸಿ, ಕುರುಬಿ ಕುರುಬಿ ಸಿಕ್ಕಾಪಟ್ಟೆ ಅಲ್ಸರ್ ಬರಿಸಿಕೊಂಡಿದ್ದಾರಂತೆ.

Advertisements

8 ಟಿಪ್ಪಣಿಗಳು »

 1. M. S. Prabhakara said

  ಪ್ರಿಯ ಶ್ರೀಮತಿ ಬಾಗೇಶ್ರೀ, ಸುದೂರದಲ್ಲಿನ, ಕನ್ನದ ಸೊಗಡು ಸೋಂಕು ಏನೇನೂ ಇಲ್ಲದ ಗುವಾಹತಿಯ ನನ್ನ ಫ್ಲಾಟ್ ನ ಪರಿವೇಶದಲ್ಲಿ ನಿಮ್ಮ ಇತ್ತೀಚಿನ, ಆದರೂ ಬಹಳ, ಬಹಳ ದಿನಗಳನಂತರ ನೀವು ಬರೆದಿರುವ ಬ್ಲಾಗ್ ಓದಿ ನನಗೆ ಎಂತಹ ಆನಂದ ಆಯಿತೋ ಅದನ್ನು ಹೇಳಲಾರೆ, ವರ್ಣಿಸಲಾರೆ. ಮೊನ್ನೆ ಮಧ್ಯ ರಾತ್ರಿಯಲ್ಲಿ ಓದುತ್ತಿದ್ದಾಗ ನಕ್ಕು ನಕ್ಕು ಹೊಟ್ಟೆ ಹುಣ್ಣಾದಂತಾಯಿತು. ಬರವಣಿಗೆಯ ಅಣಕ, ವಿಡಂಬನೆ ಬಹಳ ಚೂಪಾಗಿದೆ, ಚುರುಕಾಗಿದೆ. ಇಂತಹ ಹರಿತ ಬರವಣಿಗೆ ಇಂದಿನ ಪರಿಸ್ಥಿತಿಯಲ್ಲಿ ಬಹಳ ಅಗತ್ಯ. ಮರ್ಯಾದಾಪುರುಷೋತ್ತಮನ ಸೈನಿಕರ ಧರ್ಮದೇಟಿಗೆ ಸರಿಯಾದ ತಿರುಗೇಟು ಕೊಟ್ಟಿದ್ದೀರಿ. ಕೋಪ, ತಮಾಷೆ, ಅಣಕ, ತುಂಟತನ ಇನ್ನೂ ಅನೇಕ ರೀತಿಯ ವ್ಯಂಗ್ಯ ಮತ್ತು ಇತರ ರಸಗಳನ್ನು ಸೇರಿಕೊಂಡಿರುವ ರಸಭರಿತ ಬರವಣಿಗೆ. ಅದರಲ್ಲಿ ಎದ್ದು ಕಾಣಿಸುವ ಮತ್ತು ಹುಡುಕಿ ಆಚೆ ತರಬೇಕಾದ ಅನೇಕ ಮಾರ್ಮಿಕ ವಸ್ತುಗಳನ್ನು ಪೂರ ಪರಿಚಯಿಸಿಕೊಂದು ರುಚಿಸಬೇಕಾದರೆ ಮತ್ತೆ ಮತ್ತೆ ಓದಬೇಕಾದ, ಓದಿಸಿಕೊಳ್ಳುವ ಬರವಣಿಗೆ. ನಿಮ್ಮ ಸಟೈರ್ ಗೆ ಗುರಿಯಾಗಿರುವರಿಗೇ ಅರ್ಥವಾಗದಂತಹ, ಎಲಾ ನಾವುಗಳು ಏಟು ತಿಂದೆವಾ ಅಂತ ಮೂಗಿನ ಮೇಲೆ ಬೆರಳೇರಿಸಿವಂತಹ, ಮೈಕೈಕಾಲು ಗಾಯಮಾಡದಿದ್ದರೂ ಕೆಲಸಕ್ಕೆ ಬರುವ ಏಟುಗಳು, ಕೊಡಲೇಬೇಕಾಗಿದ್ದ ಏಟುಗಳು ಕೊಟ್ಟಿರುವ ಅಹಿಂಸಾಪೂರ್ವಕ ಬರವಣಿಗೆ.

  ಬರವಣಿಗೆಯಲ್ಲಿ ನಾನು ಮೆಚ್ಚಿಕೊಂಡಿರುವುದು ಇನ್ನೂ ಬಹಳ ಇದೆ. ಅದರೆ ಒಂದು ಮಾತು ಹೇಳಿ ಮುಗಿಸುತ್ತೇನೆ. ಬ್ರಹ್ಮ ವಿಷ್ಣು ಮಹೇಶ್ವರರ ಸಂಸಾರಗಳಲ್ಲಿ ನೀವು ತಮಾಷೆಯಾಗಿ ಕಲ್ಪಿಸಿಕೊಂಡು ಚಿತ್ರಿಸಿರುವ ಸಂಧಿಗ್ಧ ಪರಿಸ್ಥಿತಿ ಈಗಲೂ, ನನ್ನ ಕಾಮೆಂಟ್ ಬರೆಯುವಾಗಲೂ, ನನ್ನನ್ನು ನಗಿಸುತ್ತಿದೆ. ಈ ಸಂದರ್ಭದಲ್ಲಿ ಪುರಾತನಕಾಲದ ಗ್ರೀಕ್ ನಾಟಕಕಾರ ಅರಿಸ್ಟೋಫನಿಸ್ ನ ಲೈಸಿಸ್ಟ್ರಟ (Lysistrata by Aristophanes) ನೆನಪಿಗೆ ಬಂತು. ಆ ನಾಟಕದ ಹಿನ್ನೆಲೆ ಅಥೆನ್ಸ್ ಮತ್ತು ಥೀಬ್ಸ್ ಮಧ್ಯೆ ನಡೆಯುತ್ತಿದ್ದ, ಇತಿಹಾಸದಲ್ಲಿ ವಿಖ್ಯಾತ, ಅಥವಾ ಕುಖ್ಯಾತವಾದ. ಕ್ರಿಸ್ತಪೂರ್ವ ೪೩೧ ರಿಂದ ೪೦೪ ರ ವರೆಗೂ ನಡೆದ ಪೆಲೊಪೊನೇಸಿಯನ್ ಯುದ್ಧ (Peloponnesian War). ಆ ಸುದೀರ್ಘ ಯುದ್ಧದ ಅನೇಕ ಪರಿಣಾಮಗಳಲ್ಲಿ ಅತಿ ಮುಖ್ಯವಾದ ಪರಿಣಾಮಗಳು, ಆ ಎರಡೂ ರಾಜ್ಯಗಳ ಪ್ರಜೆಗಳೆಲ್ಲರ ಸರ್ವನಾಶ, ಬೃಹತ್ ಗ್ರೀಕ್ ಸಂಸ್ಕೃತಿಯ ಚಾರಿತ್ರಿಕ ಕೀರ್ತಿಯ ಅಧಃಪತನ, ಈ ಎರಡು ನಗರಗಳ ಮೇಲೆ ಸ್ಪಾರ್ಟ ಆಧಿಪತ್ಯ.

  ಇವುಗಳ ಹಿನ್ನೆಲೆಯಲ್ಲಿ ಬರೆದ ಈ ನಾಟಕದ ವಿಷಯವಸ್ತು ಇಂತಹ ಯುದ್ಧಗಳ ಅನಗತ್ಯತೆ ಮತ್ತು ಭಯಂಕರ ಪರಿಣಾಮಗಳು. ನಾಟಕದಲ್ಲಿ ಅಥೆನ್ಸ್ ನ ಹಲವಾರು ಲಲನಾಮಣಿಗಳು ಈ ಯುದ್ಧವನ್ನು ವಿರೋಧಿಸಿ ಇದನ್ನು ಕೊನೆಗೆ ತರುವ ಒಂದು ವಿಚಿತ್ರ, ಆದರೂ ಬಹಳ ಪರಿಣಾಮಕಾರಿ ಉಪಾಯ (tactic) ಬಳೆಸುತ್ತಾರೆ. ಬಹಳ ಸರಳ, ಎಲ್ಲರಿಗೂ ಅರ್ಥವಾಗುವ ಉಪಾಯ. ಗಂಡು ಯೋಧರಿಗೆ ಒಂದು ಅಲ್ಟಿಮೇಟಂ. ಯುದ್ಧ ನಿಲ್ಲಿಸುವವರೆಗೂ ನಾವು ನಿಮ್ಮಗಳ ಜೊತೆ ಮಲಗೊಲ್ಲ, ನಿಮಗೆ ಸ್ತ್ರೀಸುಖ ದೊರಕುವುದಿಲ್ಲ. ಅಷ್ಟೇ. ಇಂತಹ ಅಲ್ಟಿಮೇಟಂ ಮತ್ತು ಅದು ಸೃಷ್ಟಿಸಿದ ಸಂದಿಗ್ಧತೆಯಿಂದ ಆ ಗಂಡಸರು ಮತ್ತು ಹೆಂಗಸರು ಹೇಗೆ ಪಾರಾದರು, ಇದನ್ನು ನಾಟಕ ಬಹಳ ರಸವತ್ತಾಗಿ ನಿರೂಪಿಸುತ್ತೆ. ನೀವು ಕಲ್ಪಿಸಿಕೊಂಡಿರುವ ತ್ರಿಮಾತೆಯರ ಅಲ್ಟಿಮೇಟಂ ಮತ್ತು ಅದರ ಪರಿಣಾಮವಾಗಿ ಆಗಬಹುದಾತಂತಹ ಆ ಮೂಲ ಸಂಸಾರಗಳನ್ನಿನ ಇಕ್ಕಟ್ಟು ನನಗೆ ಈ ಪುರಾತನ ಗ್ರೀಕ್ ನಾಟಕದ ಕಲ್ಪನೆಗಳ ಶೋಭೆಯನ್ನು ನೆನಪಿಗೆ ತಂದವು. ಒಂದು ರೀತಿ ಕೆಲವು ದಶಕಗಳಿಂದ ಪ್ರಸಿದ್ಧವಾಗಿರುವ ಸ್ಲೋಗನ್, ಕೊಲ್ಲಬೇಡ, ಪ್ರೀತಿ ಮಾಡು, ಇದು ಮೂಲ ಇಂಗ್ಲಿಷ್ ನಲ್ಲಿ ಇನ್ನೂ ಸ್ಪಷ್ಟ, Make Love, Not War, ಇದರ ಮೂಲಪುರುಷ ಅರಿಸ್ಟೊಫನೆಸ್ ಅನ್ನಬೇಕು.

  ಆದರೆ, ಇಂತಹ ಸಮಾಧಾನ ಇಂದಿನ ಮರ್ಯಾದಾಪುರುಷೋತ್ತಮನ ಸೇನೆಗಳ ಯೋಧರು ಸೃಷ್ಟಿಸಿರುವ ಸಮಸ್ಯೆ ಉಪದ್ರವಗಳ ಪರಿಹಾರವನ್ನು ತಮಗೆ ತಾವೇ ದುರ್ಗಾವಾಹಿನಿ ಎಂದು ಪರಿಚಿಸಿಕೊಳ್ಳುವ ಯೋಧೆಯರು ಒತ್ತಾಯಪೂರ್ವಕ ತರುತ್ತಾರೇನು? ತರಬಲ್ಲರೇನು? ಇಲ್ಲ, ಎಂದೆಂದಿಗೂ ಇಲ್ಲ, ಅನ್ನಿಸಿದರೂ ತಮಾಷೆಗಾದರೂ ಈ ಸವಾಲನ್ನು ಮಾಡಬಹುದು, ಅಲ್ಲವಾ?

  ಮುಂದಿನ ಬ್ಲಾಗ್ ಇಷ್ಟು ತಡ ಮಾಡಬೇಡಿ. ನಿಮ್ಮನ್ನು ದೂರದೇಶದಿಂದ ಮೆಚ್ಚಿಕೊಳ್ಳುವ ಓದುಗ, ಪ್ರಭಾಕರ.

 2. ಶ್ರೀ said

  Supperb…

 3. shreenidhids said

  ha ha ha!

  ನಿಮ್ಮ ಬರಹವನೋದಿದ ಸಮಸ್ತರೂ ಹರುಷ ಹೊಂದುವುದರಲ್ಲಿ ಸಂಶಯವಿಲ್ಲ:)

 4. ushabn said

  heheeee, too good!

 5. sugata said

  hey liked it. msp sums it up well.

 6. k.v. subramanya said

  ಸಿ. ಅಶ್ವಥ್ ಭಾಷೆಯಲ್ಲಿ ಹೇಳುವುದಾದರೆ ಲೇಖನ “ಅದ್ಭುತ”
  ಆಚಾರ್ಯ ದೇವೋ ಭವ,
  ಪಬ್ಬಿಗೆ ಬರುವ ಅತಿಥಿ ದೇವೋ ಭವ!
  ಈ ಲಲನೆಯರನ್ನು “ಗಂಡುಬೀರು” ಗಳು ಎನ್ನಬಹುದೇ?

 7. dinakar said

  tumbaa cennaagide…. ನಿಮ್ಮ nise aada hodeta aa sene janarige tagabekaada jaagakke taagide….. ನಿಮ್ಮ hodetada shaili tumbaa cennaagide…..

 8. santosh said

  Very fast and different style of writing. a verygood attempt.

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: