ಸಲಾಮ್ ಕಮಲಾ

ಕಮಲಾ (ದಾಸ್ ಅಲಿಯಾಸ್ ಸುರಯ್ಯ) ಸತ್ತ ಸುದ್ದಿ ಕೇಳಿ ಒಂಥಾರಾ ಮಂಕಾಗಿ ಕೂತಿದ್ದೀನಿ. ಹಾಗಂತ ಈ ಇಂಗ್ಲಿಷ್-ಮಲಯಾಳಿ ಬರಹಗಾರ್ತಿ ನನ್ನ ಫೇವರೇಟ್ ಲೇಖಕಿ ಅಂತ ಹೇಳಲಾರೆ. ಆದರೆ ಈಕೆ ಜೀವನದುದ್ದಕ್ಕೂ ಯಾರಿಗೂ ಕ್ಯಾರೆ ಅನ್ನದೆ, ಅಡಿಗಡಿಗೂ ಮಧ್ಯಮ ವರ್ಗದ ಮಡಿವಂತಿಕೆಗೆ ಚುರಕ್ ಚುರಕ್ ಅಂತ ಶಾಕ್ ಹೊಡೆಸುತ್ತ ತನ್ನದೇ ದಾರಿಯಲ್ಲಿ ನಡೆದ ಪರಿ ಮೆಚ್ಚಬೇಕಾದದ್ದು.

ಮನೆ ಕೆಲಸ ಎಲ್ಲ ಮುಗಿದ ಮೇಲೆ ತರಕಾರಿ ಹೆಚ್ಚುವ ಟೇಬಲ್ಲನ್ನೇ ಬರವಣಿಗೆಯ ಮೇಜು ಮಾಡಿಕೊಂಡು ಬರೆಯಲಿಕ್ಕೆ ಶುರು ಮಾಡಿದ ಕಮಲ ಮೈಚಳಿ ಬಿಟ್ಟು ಬರೆಯುತ್ತಾ ಹೋದದ್ದು, ಜೀವನದುದ್ದಕ್ಕೂ ಒಂದರ ನಂತರ ಒಂದು ಪ್ರಯೋಗಗಳಿಗೆ ಒಡ್ಡಿಕೊಳ್ಳೂತ್ತಾ, ಅವೆಲ್ಲವನ್ನೂ ಜಗಜ್ಜಾಹೀರು ಮಾಡುತ್ತಾ ಹೋದದ್ದು ಒಂತರ ಸಿನಿಮೀಯ, ರೋಚಕ ಕಥೆ. (ಈಕೆಯ ಇಡೀ ಜೀವನ ಚರಿತ್ರೆ ವಿಕಿಪಿಡಿಯಾದಲ್ಲಿ ಇರುವುದರಿಂದ ಮತ್ತು ಈಕೆ ಸತ್ತ ಸುದ್ದಿ ಬಂದ ಕೂಡಲೆ ಎಲ್ಲರೂ ಇದನ್ನೇ ಕಾಪಿ-ಪೇಸ್ಟ್ ಮಾಡಿ ಹಾಕಿರುವುದರಿಂದ ಇದನ್ನು ಮತ್ತೆ ಇಲ್ಲಿ ಹೇಳುವುದು ಬೇಡ ಅಲ್ಲವಾ?)

ಈಕೆ ‘My Story’ಯಲ್ಲಿ ಹೇಳುವ ಈಕೆಯ ಯೌವ್ವನದ ಬಿಸಿಬಿಸಿ ಕತೆಗಳಿಂದ ಹಿಡಿದು ಇಳಿವಯಸ್ಸಿನಲ್ಲಿ ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡು ಸಂಪ್ರದಾಯಬದ್ಧರಾದ ಹಿಂದೂ ಹಾಗೂ ಮುಸ್ಲಿಂ ಇಬ್ಬರ ಕೆಂಗಣ್ಣಿಗೆ ಗುರಿಯಾದದ್ದರವರೆಗೆ ಈಕೆಯ ಜೀವನದಲ್ಲಿ ಎಲ್ಲವು ಒಂದು ಥರ sensational. ರಿಯಾಲಿಟಿ ಶೋ ಅನ್ನುವ concept ಇಲ್ಲದ ಕಾಲದಲ್ಲೂ ಒಂತರಹ ಅದೇ ಧಾಟಿಯಲ್ಲಿ ಬದುಕಿದಾಕೆ. ಆದರೆ ಯಾವುದೇ popularity ratingಗೆ ತಲೆ ಬಾಗಿದ ಜೀವವಲ್ಲ. ಕೇರಳಿಗರು “ವ್ಯಭಿಚಾರಿಣಿ” ಅಂತ ಹೀಗಳೆದಾಗ ಬಗ್ಗದೆ ಕುಗ್ಗದೆ ಇಂಗ್ಲಿಷ್ ನಲ್ಲಿಯೂ ಬರೆದು ಜೈಸಿಕೊಂಡಾಕೆ. ಒಮ್ಮೆ ಕೃಷ್ಣನಿಗೆ ತಾನು ರಾಧೆಯೆಂದೂ, ಇನ್ನೊಮ್ಮೆ ಧರ್ಮಗಳಿಗೆ ಸಮಸ್ಯೆಗಳನ್ನು ಹುಟ್ಟುಹಾಕುವುದು ಬಿಟ್ಟರೆ ಇನ್ನೇನೂ ಬರುವುದಿಲ್ಲವೆಂದೂ, ಮತ್ತೂ ಒಮ್ಮೆ ಅಲ್ಲಾಹುವಿಗೆ ಸಂಪೂರ್ಣ ಶರಣಾಗಿರುವುದಾಗಿಯೂ ಹೇಳಿದಾಕೆ. ಸ್ತ್ರೀ ಸ್ವಾತಂತ್ರ್ಯದ, ಅದರಲ್ಲೂ ಸ್ತ್ರೀ ಲೈಂಗಿಕ ಸ್ವಾತಂತ್ರ್ಯದ ಹರಿಕಾರಳೇ ಈಕೆ ಎಂದವರಿಗೆ  “Who listens to feminists? Who wants freedom?” ಅಂತ ಹೇಳಿ ಸ್ವಲ್ಪ ತಬ್ಬಿಬ್ಬು ಮಾಡಿದಾಕೆ. ರಾಜಕೀಯ ಪಕ್ಷ ಕಟ್ಟಿಯೂ ಒಂದು ಕೈ ನೋಡಿ ಬಿಡೋಣ ಅಂತ ಆ ಪ್ರಯತ್ನವನ್ನೂ ಮಾಡಿದಾಕೆ. ಯಾಕಮ್ಮಾ ಹೀಗೆಲ್ಲ ಒಂದೊಂದು ದಿನ ಒಂದೊಂದು ತರ ಮಾತಾಡ್ತೀಯಲ್ಲ ಅಂತ ಒಬ್ಬ ಸಂದರ್ಶಕಿ ಕೇಳಿದಾಗ “ಯಾಕೆ ಅಂತ ನನಗೆ ಗೊತ್ತಿಲ್ಲ. ನಾನು ಹಾಗೇ. ನಾನು ಈಗ ಹೇಳುವುದು ಮೊದಲು ಹೇಳುವ ಹಾಗೆ ಇರುವುದಿಲ್ಲ. ಇನ್ನೊಮ್ಮೆ ಹೇಳುವುದು ಈಗ ಹೇಳುತ್ತಿರುವುದಕ್ಕಿಂತ ಬೇರೆಯೇ ಆಗಿರಬಹುದು. ನಾನು ಮತ್ತು ನನ್ನ ನಂಬಿಕೆಗಳು ಬದಲಾಗುತ್ತಿರುತ್ತವೆ” ಅಂತ ನೇರ ಮಾತುಗಳಲ್ಲಿ ಹೇಳಿಬಿಟ್ಟಾಕೆ!

ಅರವತ್ತರ ದಶಕದಲ್ಲಿ “ಸ್ತ್ರೀ ಸಹಜ” ಎಂದು ಕರೆಯಲ್ಪಡುವ ನಾಚಿಕೆ ವೈಯ್ಯಾರಗಳನ್ನು ಬಿಟ್ಟು passionನಿಂದ ಬರೆದ ಈಕೆ ಭಾರತೀಯ ಮಹಿಳಾ ಸಾಹಿತ್ಯದಲ್ಲಿ (ವಿಶೇಷವಾಗೆ ಇಂಗ್ಲಿಷ್ ಪರಂಪರೆಯಲ್ಲಿ) ಒಂದು ಮುಖ್ಯ ಮೈಲಿಗಲ್ಲು ಎನ್ನುವುದದರಲ್ಲಿ ಎರೆಡು ಮಾತಿಲ್ಲ. “ಮಹಿಳಾ ಸಾಹಿತ್ಯ” ಎಂಬ categoryಯನ್ನು ಯಾವತ್ತೂ ಇಷ್ಟಪಡದ ಕಮಲಾ “ಬರವಣಿಗೆಗೆ ಯಾವ ಲಿಂಗಬೇಧ? ಹೆಣ್ಣನ್ನು ಹೆಣ್ಣಾಗಿಸುವ ಅಂಗಗಳಿವೆಯಲ್ಲ ಅವುಗಳಿಂದ ಬರೆಯುತ್ತಾರೇನು ಸ್ತ್ರೀಯರು?” ಅಂತ ಕೇಳಿದ್ದುಂಟು. ಆದರೆ ಆಕೆಯ ಸುತ್ತಲಿನ controversyಗಳು, sensationಗಳೇ ಒಂದು ರೀತಿಯ image trap ಆಗಿ ಹೋಗಿ ಬರಬರುತ್ತಾ ಬರಹಗಳಲ್ಲಿ ಏಕತಾನತೆ ಬಂದುಹೋಯಿತೇ ಅನ್ನಿಸುತ್ತದೆ. ಈಕೆಯ ಮಲಯಾಳಂ ಬರಹಗಳ ಬಗ್ಗೆ ಗೊತ್ತಿಲ್ಲ. ಆದರೆ ಇಂಗ್ಲಿಷ್ ಬರಹ/ಪದ್ಯಗಳ ಬಗ್ಗೆಯಂತೂ ಹೀಗೆ ಅನ್ನಿಸುತ್ತದೆ.

ಅದೇನೇ ಆಗಲಿ ಕಮಲಾ ದಾಸ್ ಇನ್ನು ಇಲ್ಲ ಅಂದರೆ ಒಂದು bold ಆದ, maverick ಆದ, ಸ್ತ್ರೀ ಸಂವೇದನೆ ಎಂದರೇನು ಅನ್ನುವ ಪ್ರಶ್ನೆಗೆ ಒಂದು ಹೊಸ ಆಯಾಮ ಕೊಟ್ಟ ದನಿ ಉಡುಗಿ ಹೋದಂತೆ. ಆಕೆ ಸಂದರ್ಶನವೊಂದರಲ್ಲಿ ಸಾವಿನ ಬಗ್ಗೆ ಹೇಳಿದ ಮಾತುಗಳನನ್ನು ಓದಿ ಇನ್ನಷ್ಟು ದುಃಖ ಆಗುತ್ತಾ ಇದೆ: “ನನಗೆ ಈ ದೇಹ ಅನ್ನುವುದು ಅತ್ಯಂತ ಮುಖ್ಯ. ಸತ್ತಾಗ ಈ ಶರೀರ ಒಂದು ಹಿಡಿ ಬೂದಿಯಾಗಿಬಿಡುವುದಲ್ಲವೇ? ಈ ಬದುಕಿನ ಸಂತೋಷ-ದುಃಖಗಳನ್ನೆರಡನ್ನೂ ಸ್ವೀಕರಿಸಿದ ಈ ಶರೀರವನ್ನು ಕಳೆದುಕೊಳ್ಳುವುದೆಂದರೆ… ನನಗೆ ಆ ಬಗ್ಗೆ ಯೋಚಿಸಿದಾಗಲೇ ದುಃಖವಾಗುತ್ತದೆ.” ಎಂತಹ ಪ್ರಮಾಣಿಕವಾದ, ಸಖತ್ ಆದ ಮಾತಲ್ಲವಾ?

ಸಲಾಮ್ ಕಮಲಾ!

೩೧/೦೫/೨೦೦೯

Advertisements

15 ಟಿಪ್ಪಣಿಗಳು »

 1. Baloo said

  Olle vishleshane. Sad she had to leave Kerala and breathe her last in Pune. Towards the end, some snoopy Keralites did not give her piece.

 2. `ಕಮಲಾ ದಾಸ್ ಅಂದರೆ ಯಾರು, ಅವಳೇನು ಮಹಾ ದೊಡ್ಡ ಕೆಲಸ ಮಾಡಿದಳು’ ಎಂದು ಕೇಳುವವರು ಜಾಸ್ತಿಯಾಗಿ, ಅದಕ್ಕೆ ಉತ್ತರ ಹೇಳುವವರು ಕಡಿಮೆ ಇರುವ ದಿನಗಳಲ್ಲಿ ನೀವು ಇದನ್ನು ಬರೆದು ಒಳ್ಳೆಯ ಕೆಲಸ ಮಾಡಿದಿರಿ.
  ನಿಜ ಹೇಳುವುದು, ಪೂರ್ವಾಗ್ರಹಗಳ ವಿರುದ್ಧ ಮಾತಾಡುವುದು ಕೇವಲ ಸಾಹಿತಿಗಳ ಕೆಲಸ ಹಾಗೂ ಹೆಣ್ಣು ಮಕ್ಕಳ ಬಗ್ಗೆ ಮಾತಾಡುವುದು ಕೇವಲ ಮಹಿಳಾ ಸಾಹಿತಿಗಳ ಕೆಲಸ ಎನ್ನುವುದೇ ನಿಜವಾಗಿ ಹೋಗಿದೆ. ಇಂಥದರಲ್ಲಿ, ನೀವು ಅನ್ನಿಸಿದ್ದನ್ನು ಹೇಳಿಕೊಂಡಿದ್ದು ತುಂಬ ಒಳ್ಳೆಯದು.
  ….ನಡುವೆ ಸುಳಿದಾಡುವ ಆತ್ಮ ಗಂಡೂ ಅಲ್ಲ ಹೆಣ್ಣೂ ಅಲ್ಲ ಎಂದು ಹೇಳಿದ ಅಕ್ಕ ಮಹಾದೇವಿ ಗಂಡಾಗಿದ್ದರೆ ಇಂಥ ಸಾಲು ಬರೆಯುತ್ತಿರಲಿಲ್ಲ ಎಂದು ಫೇಮಸ್ ಸಾಹಿತಿಯೊಬ್ಬರು ನನಗೆ ಹೇಳಿದ್ದರು. ಅವರೊಂದಿಗೆ ನಾನು ವಾದ ಮಾಡಲಿಲ್ಲ. ನಮ್ಮ ನಮ್ಮ ಕೆಲಸ ಅಂಥದಕ್ಕೆಲ್ಲ ಉತ್ತರವಾಗಲಿ.

 3. ಕಮಲಾದಾಸ್ ಸೆನ್ಸೇಷನಲ್ ಆಗಿ ಬದುಕಿದರು ಎಂದು ಹೇಳುವಾಗ ನಾವು ಅರಿಯಬೇಕಾದದ್ದು ಆಕೆಯ ಮುಗ್ಧತೆಯೇ ನಮಗೆ ಸೆನ್ಸೇಷನಲ್ ಆಗಿ ಕಾಣಿಸಿದ್ದು ಎಂಬುದನ್ನು. ಆಕೆ ಸಹಜವಾಗಿ ಬದುಕಿದರು. ತನಗೆ ಅನ್ನಿಸಿದ್ದನ್ನು ನೇರವಾಗಿ ಹೇಳಿದರು. ಬರೆದರು. ಸಹಜವಾಗಿರುವುದು, ನೇರವಾಗಿರುವುದನ್ನು ನಾವು ಸೆನ್ಸೇಷನಲ್ ಎಂದು ಭಾವಿಸುತ್ತಿದ್ದೇವೆ ಅನ್ನಿಸುತ್ತದೆ. ನನ್ನ ದೃಷ್ಟಿಯಲ್ಲಿ ಕಮಲಾದಾಸ್/ಮಾಧವಿ ಕುಟ್ಟಿ/ಕಮಲಾ ಸುರಯ್ಯಾ ವೈಕಂ ಮಹಮ್ಮದ್ ಬಷೀರ್ ರಂತೆಯೇ ಸರಳವಾಗಿ, ನೇರವಾಗಿ ಬರೆದರು. ಆಕೆ ‘ಸೆನ್ಸೇಷನಲ್ ರೈಟರ್’ ಆದದ್ದು ಆಕೆಯ ಬರೆಹಗಳನ್ನು ಪುರುಷ ಕಣ್ಣುಗಳಿಂದ ನೋಡಿದ್ದರಿಂದ ಎನಿಸುತ್ತದೆ.

 4. kamaroopi said

  ಪ್ರಿಯ ಶ್ರೀಮತಿ ಬಾಗೇಶ್ರೀ, ತೀರಿಕೊಂಡ ಕಮಲಾ ದಾಸ್ ಉರುಫ್ ಸುರಯ್ಯ ಬಗ್ಗೆ ನಿಮ್ಮ ಬರವಣಿಗೆ ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳುತ್ತೇನೆ, ಸ್ವಲ್ಪ ಮಟ್ಟಿಗೆ ಒಪ್ಪಿಕೊಳ್ಳಲಾರೆ.

  ಆದರೆ ಇದಕ್ಕೆ ಮುಂಚೆ ನಿಮ್ಮ ಬರವಣಿಗೆಯ ಬಗ್ಗೆ ಒಂದು ಮಾತು ಹೇಳಲೇಬೇಕು. ಬಹಳ ನೇರವಾದ ಬರವಣಿಗೆ, ಯಾವರೀತಿಯ ಫಾಂಗ್ ಫೂಂಗ್ ಇಲ್ಲದ ಬರವಣಿಗೆ. ಫಾಂಗ್ ಫೂಂಗ್ ಅಸ್ಸಾಮಿಯಾ ಭಾಷೆಯ ಒಂದು idiom, ಇಂಗ್ಲಿಷಿನಲ್ಲಿ ಹೇಳಬೇಕೆಂದರೆ ನಿಮ್ಮ
  ಬರವಣಿಗೆಯಲ್ಲಿ no beating about the bush, no waffling. ಬರೆಯಬೇಕಾದ್ದನ್ನು ನೇರವಾಗಿ ಬರೆಯುವುದರಲ್ಲಿ ಏನು ತಾನೇ ವೈಶಿಷ್ಟ್ಯ ಅಂತ ನೀವು ಕೇಳಬಹುದು. ಆದರೆ ಹೇಳಬೇಕಾದ್ದನ್ನು, ಬರೆಯಬೇಕಾದ್ದನ್ನು ನೇರವಾಗಿ ಹೇಳುವುದು, ಬರೆಯುವುದು ಇಷ್ಟು ಸಹಜ ಪ್ರವೃತ್ತಿಯಲ್ಲ. ಈ ಗುಣ, ಈ ಬಲಿಷ್ಟತೆ ನಾನಂತೂ ಈವರೆಗೂ ಸಾಧಿಸಿಕೊಂಡಿಲ್ಲ. ಅದಕ್ಕೇ ಈ ಕಳೆದ ಎಂಠತ್ತ್ತು ತಿಂಗಳುಗಳಲ್ಲಿ ನಿಮ್ಮ ಪ್ರತಿಯೊಂದು ಕನ್ನಡ ಪ್ರಬಂಧವೂ ನಾನು ಮತ್ತೆ ಕಲಿಯಬೇಕೆಂದಿರುವ ಕನ್ನಡ ಬರವಣಿಗೆಯಲ್ಲಿ ಸಹಾಯ ಮಾಡಿದೆ, ಮಾಡುತ್ತಿದೆ. ಇದನ್ನು ಸಾರ್ವಜನಿಕವಾಗಿ ಒಪ್ಪಿಕೊಳ್ಳುತ್ತಿದ್ದೇನೆ.

  ಮಾಧವಿ ಕುಟ್ಟಿ, ಕಮಲಾ ದಾಸ್, ಸುರಯ್ಯ. ಈ ಮಹಿಳೆಯ ಬಹುಮುಖೀ ವ್ಯಕ್ತಿತ್ವ ನಿಮ್ಮ ಪ್ರಬಂಧದಲ್ಲಿ ಎತ್ತಿ ತೋರಿಸಿದ್ದೀರಿ. ಸನ್ ಸಾವಿರದೊಂಭೈನೂರೆಪ್ಪತ್ತೈದನೇ ಇಸವಿ.
  ಅದು ತುರ್ತು ಕಾಲೀನ ಪರಿಸ್ಥಿತಿ ಘೋಷಿಸಲ್ಪಟ್ಟ ಸಮಯ. ಆಗ ನಾನು ಮುಂಬೈನಲ್ಲಿ ಚಾಕರಿ ಮಾಡುತ್ತಿದ್ದೆ. ಆಗ ಕವಿಯಿತ್ರಿಯ ಮತ್ತು ಆಕೆಯ ಪತಿಯ ಪರಿಚಯ ಸ್ವಲ್ಪ ಇತ್ತು. ಎರಡು ಬಾರಿ ಅವರ ಫ್ಲಾಟ್ ನಲ್ಲಿ ಅವರನ್ನು ಕಾಣಲು ಹೋಗಿದ್ದ ನೆನಪು. ಆಗಲೇ ನನಗೆ ಅನ್ನಿಸಿತು, ಈ ಪೃಥಿವಿಯಲ್ಲಿ ಎಲ್ಲಾರೀತಿಯಲ್ಲೂ ಎರಡು ವರ್ಗಗಳಿವೆ. ಅವರ ಶ್ರೇಣಿ ಮತ್ತು ನನ್ನಶ್ರೇಣಿ ಎಂದೆಂದಿಗೂ ಬೆರೆಯುವುದಿಲ್ಲ ಅಂತ. ಆ ಅಂತಸ್ತಿನ ಮತ್ತು ಆ ಅಂತಸ್ತಿಗೆ ಬೇಕಾದ ಕ್ಷಮತೆ, ಒಂದು ರೀತಿ ಆರ್ಥಿಕ ಕ್ಷಮತೆಗಿಂತಾ ಮೀರಿದ ಕ್ಷಮತೆ, ಸಂಪಾದಿಸಿ ಕೊಟ್ಟಿದ್ದ, ಒಂದು ನನಗೇ ಅರ್ಥವಾಗದ ಅವರ ಬದುಕಿನ ರೀತಿ ರಿವಾಜುಗಳ ಪರಿವೇಷ ಅವರುಗಳನ್ನು ಭೇಟಿಯಾದ ಕೆಲವೇ ಕ್ಷಣಗಳಲ್ಲಿ ನನಗೆ ಮನದಟ್ಟಾಯಿತು. Real born aristocracy.

  ಈ ಸಾಮಾಜಿಕ ಕ್ಷಮತೆಯೇ ಕವಿಯಿತ್ರಿಗೆ ತನ್ನ ಸ್ವ ಇಛ್ಹೆಗಳನ್ನು ಪೂರೈಸಿಕೊಳ್ಲಲು, ಇಷ್ಟ ಬಂದ ರಸ್ತೆಯಲ್ಲಿ ಓಡಾಡಲು, ಏನೇನು ಭಯ ಸಂಕೋಚವಿಲ್ಲದೆ ಯಾರೂ ಖುಲಾಮತ್ತಾಗಿ ಮಾತನಾಡದ ವಿಷಯಗಳಬಗ್ಗೆ ಮಾತನಾದುವುದು, ಇವೆಲ್ಲಕ್ಕೂ ಸಹಾಯ, ಅದಕ್ಕೆ ಬೇಕಾದ ಬಲಿಷ್ಟತೆ ಕೊಟ್ಟಿದ್ದವು.

  ಈ ಮಾತನ್ನು ನಾನು ಟೀಕೆಯ ರೂಪದಲ್ಲಿ ಹೇಳುತ್ತಿಲ್ಲ; ಎಷ್ಟೋ ಮಂದಿ ಇದಕ್ಕೂ ಮೀರಿದ ಸಾಮಾಜಿಕ ಮತ್ತು ಆರ್ಥಿಕ ಕ್ಷಮತೆಯನ್ನು ಹೊಂದಿದ್ದರೂ ಅದನ್ನು ಕೆಲಸಕ್ಕೆ ತೆಗೆದುಕೊಂಡು ತಮ್ಮದೇ ರಸ್ತೆಯೊಂದರಲ್ಲಿ ಯಾರಿಗೂ (ನೀವೆನ್ನುವಂತೆ) ಕ್ಯಾರೆ ಅನ್ನದೇ ಅಧವಾ ಅನ್ನಿಸಿಕೊಳ್ಳದೇ ಹೋಗುವುದಿಲ್ಲ. ಇರಬಹುದು, ಪರಿಚವಿಲ್ಲದ ರಸ್ತೆ, ಮುಗ್ಗರಿಸಬಹುದು. ಆದರೂ ತಮ್ಮದೇ ರಸ್ತೆಯೊಂದರಲ್ಲಿ ಪಯಣಿಸಿದೆ ಅನ್ನುವ ಹೆಮ್ಮೆ, ಗೌರವ ಕವಿಯಿತ್ರಿಗೆ ಸಲ್ಲಲೇ ಬೇಕು
  .
  ಅನೇಕ ವಿಷಯಗಳ ಬಗ್ಗೆ, , ಅದರಲ್ಲೂ ಆಕೆಯ ಹೆಣ್ಣೂತನ ಮತ್ತು ಅದನ್ನು ಯಾವ ರೀತಿ ವ್ಯವಹರಿಸಿಕೊಂಡರು ಅನ್ನುವ ವಸ್ತುವಿಷಯಗಳ ಬಗ್ಗೆ ಆಕೆಯ ಅರ್ಥಯುಕ್ತ ಸಂಬಂದ್ಧತೆ ಇರಲಿಲ್ಲದ ಮನೋಮತಗಳನ್ನು ನೀವೇ ಉಲ್ಲೇಖಿಸಿದ್ದೀರಿ. ಇದರ ಬಗ್ಗೆ ನಾನು ಹೇಳುವುದೇನೂ ಇಲ್ಲ. ಆದರೂ ಆಕೆಯ ಬರವಣಿಗೆಯನ್ನು ಕುರಿತು ಒಂದೆರಡು ಮಾತು ಹೇಳಿ ಈ ಕಾಮೆಂಟ್ ಮುಗಿಸುತ್ತೇನೆ.

  ಆಕೆಯ My Life ನಾನು ಮುಂಬೈಗೆ ಬಂದ ಕೆಲವೇ ತಿಂಗಳುಗಳಲ್ಲಿ ಪ್ರಕಟವಾಯಿತು. ಅದಕ್ಕೆ ಸಾಕಷ್ಟು ಪಬ್ಲಿಸಿಟಿ ಸಹ ದೊರಕಿತು. ಇರಬಹುದು, ಇದು ನನ್ನ snobbery. ಆದರೆ ಭಾರತೀಯ ಬರೆಹಗಾರರ ಇಂಗ್ಲಿಷ್ creative ಬರಣಿಗೆಯಲ್ಲಿ ನನಗೆ ಅಂದಿನ ದಿನಗಳಲ್ಲಿ ಸುತರಾಂ ಆಸಕ್ತಿ ಇರಲಿಲ್ಲ. ಈ ನಾಸಕ್ತಿಗೆ ಕಾರಣ ಪ್ರಾಯಶಃ ನನ್ನ ಇಂಗ್ಲಿಷ್ ಸಾಹಿತ್ಯದ ತಿಳುವಳಿಕೆ. ನಿಜವಾಗಿಯೂ ಹೇಳಬೇಕೆಂದರೆ ಭಾರತೀಯಬರೆಹಗಾರರು ಬರೆಯುತ್ತಿದ್ದ ಇಂಗ್ಲಿಷ್ಶ್ ಸಾಹಿತ್ಯದ ಬಗ್ಗೆ ನನ್ನ ತಿರಸ್ಕಾರ ಪ್ರವೃತ್ತಿಯನ್ನು ನಾನು ಎಂದೂ ಸರಿಯಾಗಿ ಚಿಂತಿಸಿ, ಯೋಚಿಸಿ ಒಂದು ನಿರ್ಧಾರಕ್ಕೆ ಬಂದ ಪ್ರವೃತ್ತಿಯಾಗಿರಲಿಲ್ಲ. ಬರೇ ಪ್ರೆಜುಡಿಸ್. ಆದರೂ ಅಂದಿನ ಕಮಲಾ ದಾಸ್ ಅವರ ಜೀವನ ಚರಿತ್ರೆ, ಕವನಗಳು ಓದಿದಾಗ ಇದೇನು ಅಧ್ವಾನ್ನ ಬರವಣಿಗೆಯಯ್ಯಾ, ಅನ್ನಿಸುತ್ತಿತ್ತು. ಅದರಲ್ಲೂ ಅವರ ಜೀವನಚರಿತ್ರೆ, ಪ್ರಾಯಶಃ ನೂರರಲ್ಲಿ ತೊಂಭತ್ತೊಂಭತ್ತು ಜೀವನಚರಿತೆಗಳಂತೆ ಬರೇ ಒಂದು ಸುಳ್ಳುಗಳ ಸರಪಳಿ ಅನ್ನಿಸಿತು. ಅವರ ಇಂಗ್ಲಿಷ್ ಕವಿತೆಗಳನ್ನಂತೂ ಸೀರಿಯಸ್ಸಾಗಿ ಓದಲು ನನಗೆ ಎಂದೆಂದು ಸಾಧ್ಯವಾಗಲಿಲ್ಲ. ಈ ಮಾತು ಇಂಗ್ಲಿಷಿನಲ್ಲಿ ಕವನ ಹೊಸೆಯುವ ಭಾರತೀಯ ಭಾಷೆಗಳ ಮಿಕ್ಕೆಲ್ಲ ಲೇಖಕರಿಗೂ ಅನ್ವಯಿಸುತ್ತ್ತೆ ಅಂತ ಅನ್ನಿಸುತ್ತೆ

  ಆದರೆ ಇವೆಲ್ಲ ಐವತ್ತು ವರುಷಗಳೆಗೂ ಮೀರಿ ಹಿಂದೆ ಶಬ್ದಭಾಷಾರ್ಜನೆ ಮಾಡಿದ್ದ ಮುದುಕನೊಬ್ಬನ ಮಾತುಗಳು. ಅಂದಿನ ಬಿಗಟ್ರಿಯಿಂದ ಕಳಚಿಕೊಳ್ಳಲು ಈಗ ಸಾಕಷ್ಟು ಪ್ರಯತ್ನಿಸುತ್ತಿದ್ದೇನೆ. ಇದರಲ್ಲಿ ನಿಮ್ಮ ಮತ್ತು ನಿಮ್ಮ ಪೀಳಿಗೆಯವರ ಬರವಣಿಗೆಗಳು, ಅದರಲ್ಲೂ ದೆವ್ವಪಿಶಾಚಿಗಳು ಓಡಾಡುವ ಸಮಯದಲ್ಲಿ ಹಠಾತ್ತನೆ ನನ್ನ ಕಂಪ್ಯೂಟರಿನಲ್ಲಿ ಕಣ್ಣಿಗೆ ಬೀಳುವ ಅಪರಿಚಿತ ವ್ಯಕ್ತಿಗಳ ಬರವಣಿಗೆಗಳು ಸಹಾಯ ಮಾಡಿವೆ. ಯಾರಿಗೆ ಗೊತ್ತು, ಕಮಲ ದಾಸ್ ಉರ್ಫ್ ಸುರಯ್ಯ ಅವರ ಬರವಣಿಗೆಗಳನ್ನೂ ನನ್ನ ಪೂರ್ವಗ್ರಹಗಳಿಂದ ಕಳಚಿಕೊಂಡು ಮುಕ್ತನಾಗಿ ಮತ್ತೆ ಓದಿ ಇದುವರೆಗೂ ನಾನು ಕಾಣದಿದ್ದ ಗುಣಗಳನ್ನು ಕಂಡುಕೊಳ್ಳುವುದರಲ್ಲಿ ನಿಮ್ಮ ಪ್ರಬಂಧ ಕೆಲಸಕ್ಕೆ ಬರಬಹುದೇನೋ.

  .

  ಇತಿ, ಪ್ರಭಾಕರ

 5. “ಹೆಣ್ಣನ್ನು ಹೆಣ್ಣಾಗಿಸುವ ಅಂಗಗಳಿವೆಯಲ್ಲ ಅವುಗಳಿಂದ ಬರೆಯುತ್ತಾರೇನು ಸ್ತ್ರೀಯರು?” & “ನನಗೆ ಈ ದೇಹ ಅನ್ನುವುದು ಅತ್ಯಂತ ಮುಖ್ಯ. ಸತ್ತಾಗ ಈ ಶರೀರ ಒಂದು ಹಿಡಿ ಬೂದಿಯಾಗಿಬಿಡುವುದಲ್ಲವೇ? ಈ ಬದುಕಿನ ಸಂತೋಷ-ದುಃಖಗಳನ್ನೆರಡನ್ನೂ ಸ್ವೀಕರಿಸಿದ ಈ ಶರೀರವನ್ನು ಕಳೆದುಕೊಳ್ಳುವುದೆಂದರೆ… ನನಗೆ ಆ ಬಗ್ಗೆ ಯೋಚಿಸಿದಾಗಲೇ ದುಃಖವಾಗುತ್ತದೆ.” ಎಂತಹ ಪ್ರಮಾಣಿಕವಾದ, ಸಖತ್ ಆದ ಮಾತಲ್ಲವಾ?”

  ಇವೆರಡೂ ಸತ್ಯ. ಆದ್ರೆ ಬಹಳಷ್ಟು ಮಂದಿ ಹೇಳಲು ಅಂಜುತ್ತಾರೆ. ಆಕೆ ಅಂಜದ ಕಾರಣಕ್ಕೆ ಹೀಗಾದಳು. ಸಹಜ ಬದುಕು ಬಾಳಿದ ಬಹಳಷ್ಟು ಮಂದಿ ಹೀಗೆ ಇಂಥದ್ದೇ ಮಾತುಗಳನ್ನಲ್ಲವೇ ಕೇಳಿದ್ದು ? ಮುಖವಾಡವೇ ಪ್ರಿಯವಾದ ತಾಣದಲ್ಲಿ ಅದನ್ನು ಕಳಚಿಟ್ಟ ಮಂದಿ ವಿಶೇಷ ಎನಿಸಬೇಕು.. ದುರಂತವೆಂದರೆ ನಮ್ಮಲ್ಲಿ ಅದನ್ನು ವಿಕೃತ ಎನ್ನಲಾಗುತ್ತೆ.. ಚೆಂದಗೆ ಬರೆದಿದ್ದೀರಿ..

  ಶಮ, ನಂದಿಬೆಟ್ಟ

 6. RAJ said

  ಕಮಲಾದಾಸ್ ಅವರ ಕೃತಿಗಳು ಕನ್ನಡಕ್ಕೆ ಬಂದಿವೆಯೆ?

  • Bageshree said

   ನಾನು ಕಮಲಾ ದಾಸ್ ಕನ್ನಡದಲ್ಲಿ ಓದಿಲ್ಲ. ಓದಬೇಕು, ವಿಶೇಷವಾಗಿ ಮಲಯಾಳದಿಂದ ಅನುವಾದವಾದ ಕೃತಿಗಳನ್ನು. ಕನ್ನಡ ಮತ್ತು ಮಲಯಾಳವ ಎರಡರಲ್ಲೂ ಓದಿರುವ ಇಸ್ಮಾಯಿಲ್ ಈ ರೀಡಿಂಗ್ ಲಿಸ್ಟ್ ಕೊಟ್ಟಿದ್ದಾರೆ: ‘ಬಯಲಾದ ನೆನಪುಗಳು’, ‘ಮನೋಮಿ’, ‘ನನ್ನ ಕಥೆ’ ಮತ್ತು ‘ನೀರ್ಮಾದಳ ಹೂ ಬಿಟ್ಟ ಕಾಲ’. ಇದಲ್ಲದೆ ಕೆಲವು ಬಿಡಿ ಕತೆಗಳೂ ಅನುವಾದಗೊಂಡಿವೆ. ನವಕರ್ನಾಟಕದ ‘ಮಲೆಯಾಳದ ಕಥೆಗಾರ್ತಿಯರು’ ಎಂಬ ಸಂಕಲನದಲ್ಲಿ ಇವರ ಸಂದರ್ಶನದ ಜೊತೆಗೆ ‘ಹಕ್ಕಿಯ ವಾಸನೆ’ ಎಂಬ ಕತೆಯೂ ಇದೆ.

   • ನಾನು ಕಂಗ್ಲಿಷ್ ನಲ್ಲಿ ಬರೆದದ್ದು ತಪ್ಪಾಗಿರಬಹುದು. ಅದು ಬಯಲಾದ ನೆನಪುಗಳಲ್ಲ. ‘ಬಾಲ್ಯದ ನೆನಪುಗಳು’.

 7. Bageshree said

  ಹಾಯ್ ಇಸ್ಮಾಯಿಲ್, ಅವರ bulk of writing in Malayalam ಓದಿಲ್ಲವಾದ್ದರಿಂದ ಹೆಚ್ಚು ಹೇಳಲಾರೆ. ಆದರೆ “ಸಹಜ”, ”ಮುಗ್ಧ” ಅನ್ನುವ ಗುಣ ಅಥವ categoryಗಳ ಬಗ್ಗೆಯೇ ನನಗೆ ಅನುಮಾನ. ಒಬ್ಬ ವ್ಯಕ್ತಿಯನ್ನು ನಾವು ಹೊರಗಿನವರಾಗಿ, ಅವರ “manufactured” (literal ಅರ್ಥದಲ್ಲಿ) ಬರವಣಿಗೆ, ಸಂದರ್ಶನ ಇತ್ಯಾದಿಗಳ ಮೂಲಕ ನೋಡುವಾಗ ಸಹಜತೆ/ ಮುಗ್ಧತೆ ಇತ್ಯಾದಿಗಳನ್ನು ಯಾವ ಮಾನದಂಡಗಳಿಂದ ಅಳೆಯುತ್ತೇವೆ ಅನ್ನುವ ಪ್ರಶ್ನೆ. “Sensational” ಅಂತ ಕರೆಯುವುದೂ judgement ಮಾಡಿದಂತೆಯೇ. ಹಾಗೆಯೇ ಸಹಜ ಅಥವ ಮುಗ್ಧ ಅನ್ನುವುದೂ ಕೂಡ judgement ಅಲ್ಲವಾ? ಅನೇಕ ಬಾರಿ ನನಗೆ ರಾಖೀ ಸಾವಂತ್ ಕೂಡ ತುಂಬ ನೇರ ಮತ್ತು ಸಹಜ ಅನ್ನಿಸಿದೆ.

 8. ಬಾಗೇಶ್ರೀ, ಲೇಖನದೊಂದಿಗೆ ಕಮೆಂಟ್‌ ಮೂಲಕ ನಡೆದಿರುವ ಚರ್ಚೆಯೇ ಆಸಕ್ತಿದಾಯಕ ಹಾಗೂ ಉಪಯುಕ್ತ.

 9. Balu said

  ಲೇಖನ ಮತ್ತು ಅದಕ್ಕೆ ಸಂಬಂಧಿಸಿದಂತೆ ನಡೆದಿರುವ ಚರ್ಚೆ ಅರ್ಥ ಪೂರ್ಣ ವಾಗಿದೆ. ಇಸ್ಮಾಯಿಲ್ ಹಾಗು ಪ್ರಭಾಕರ ಅವರ ರಿಪ್ಲೈ ಚೆನ್ನಾಗಿದೆ.
  ಬದುಕನ್ನ ಇಷ್ಟ ಪಟ್ಟ ಹಾಗೆ ಬದುಕಲು ಹೋದರೆ ಜನ ವಿಚಿತ್ರ ನಾಮಾಂಕಿತ ದಿಂದ ಕರೀತಾರೆ, ಮೂಡಿಗೆರೆ ಲಿ ತೇಜಸ್ವಿ ನ ಜನ ಕಾಣುತಿದ್ದ ಹಾಗೆ.

  ಕಮಲ ದಾಸ್ ಹೇಳಿಕೆ ಗಳ ಬಗ್ಗೆ ನನಗೆ ಒಪ್ಪಿಗೆ / ವಿರೋಧ ಎರಡು ಇದೆ. ನೆರಾವಾಗಿ ಹೇಳುವ, ಪ್ರಯೋಗಕ್ಕೆ ತನ್ನನ್ನೇ ಒಳಪಡಿಸಿ ಕೊಂದ ಬದುಕಿನ ಬಗ್ಗೆ ಗೌರವ ಇದೆ.

  ಆಮೇಲೆ ಬಾಗೇಶ್ರೀ ಅವರು ಬಹಳ ದಿನ ಗಳ ಅಜ್ಞಾತ ವಾಸ ಬಿಟ್ಟು ಮತ್ತೆ ಬರೆದಿರುವುದು ಕುಶಿ ಕೊಟ್ಟಿದೆ.

 10. vimala.ks said

  though my coment is after a long time i felt i should tell something on this.I also liked Kamala Das as many.but one thing always i want to ask she is such a bold lady and never cared for anything etc etc but what made her to change her name and shifted to burkha donot you find it little too much!

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: