ನಮ್ಮ ನಾಲಿಗೆ ಮೇಲಿನ ಸರ್ವಜ್ಞ ಕಲ್ಲಿನ ಪ್ರತಿಮೆ ಆದದ್ದು ಹೇಗೆ?

 ಜಾತಿಹೀನನ ಮನೆಯ ಜ್ಯೋತಿ ತಾ ಹೀನವೆ?

ಜಾತಿ ವಿಜಾತಿ ಎನಬೇಡ

ದೇವನೊಲಿದಾತನೆ ಜಾತ ಸರ್ವಜ್ಞ.

 

ಅಂತೂ ಇಂತು quid pro quo ನ್ಯಾಯದಂತೆ ತಿರುವಳ್ಳುವರ್ ಮೂರ್ತಿ ಬೆಂಗಳೂರಿನಲ್ಲಿ ಸ್ಥಾಪನೆ ಆದ ನಂತರ ಸರ್ವಜ್ಞನ ಮೂರ್ತಿ ತಮಿಳುನಾಡಿನಲ್ಲಿ ಸ್ಥಾಪನೆಯಾದ ದಿನ ಎಲ್ಲಾ ಪತ್ರಿಕೆಗಳಲ್ಲಿ ಸರ್ಕಾರ ನೀಡಿದ ಅರ್ಧ ಪೇಜಿನ ಜಾಹೀರಾತಿನಲ್ಲಿ ಸರ್ವಜ್ಞನ ಈ ತ್ರಿಪದಿ ಪ್ರಕಟವಾಯಿತು. ಇಂಗ್ಲಿಷ್ ಪತ್ರಿಕೆಗಳಲ್ಲಿ ಇದರ ಸತ್ವ ಮತ್ತು ಸುಂದರ ಪದಗಳಾಟದ ಲಾಲಿತ್ಯವನ್ನು ಹಿಡಿದಿಡದ ಇದರ ಅನುವಾದವೂ ಪ್ರಕಟವಾಯಿತು:

The light of the home of a man of despised caste.

Is it despicable? Speak not of this caste or that.

He whom God loves alone is of a noble caste.

 ಈ ಇಡೀ ಪ್ರತಿಮೆ ಅನಾವರಣದ ಹಿಂದಿನ ರಾಜಕೀಯದ ಬಗ್ಗೆ ಹೆಚ್ಚು ಹೇಳುವುದಕ್ಕೇನೂ ಉಳಿದಿಲ್ಲ. ಮರು ಚುನಾವಣೆಯಲ್ಲಿ ಜಾತಿವಾರು ಮತ ವಿಂಗಡಣೆಯ ಬಗ್ಗೆ,  ಮಹಾನಗರಪಾಲಿಕೆಯಲ್ಲಿ ತಮಿಳಿಗರ ಓಟುಗಳ ಬಗ್ಗೆ ಒಂದು ಕೈಯ್ಯಲ್ಲಿ ಲೆಕ್ಕ ಹಾಕುತ್ತಾ, ಇನ್ನೊಂದು ಕೈಯ್ಯಲ್ಲಿ ಪ್ರತಿಮೆ ಅನಾವರಣ ಮಾಡುವವರ ಬಗ್ಗೆ ಹೇಳುವುದಾದರೂ ಏನು? ಹದಿನೆಂಟು ವರ್ಷಗಳ ಹಿಂದೆ ತಿರುವಳ್ಳುವರ್ ಪ್ರತಿಮೆ ಅನಾವರಣದ ಬಗ್ಗೆ ವಿರೋಧಿಸಿದವರು ಆಳುವ ಪಕ್ಷದ ಮೇಲಿನ ಕಕ್ಕುಲತೆಯಿಂದ ಈಗ ಸುಮ್ಮನಿದ್ದುಬಿಟ್ಟದ್ದಾಗಲಿ, ಕನ್ನಡಕ್ಕಾಗಿ ಕೈ ಎತ್ತು ನಿನ್ನ ಕೈ ಕಲ್ಪವೃಕ್ಷವಾಗುವುದು ಎಂಬ ಕವಿವಾಣಿಯನ್ನು literal ಆಗಿ ಅರ್ಥ ಮಾಡಿಕೊಂಡು ಸುಖವಾಗಿರುವ ಕೆಲವು ಕನ್ನಡ ನೇತಾರರು ಒಂದಷ್ಟು ಕಂಠ ಶೋಷಣೆ ಮಾಡಿಕೊಂಡು ಮತ್ತೆ ತೆಪ್ಪಗಾಗಿಬಿಟ್ಟಿದ್ದಾಗಲಿ ಯಾರಿಗೂ ಗೊತ್ತಿರದೆ ಇರುವ ವಿಷಯವಲ್ಲ. In fact, ಇವೆಲ್ಲ ಎಷ್ಟರಮಟ್ಟಿಗೆ ನಮ್ಮ common senseನ ಭಾಗವಾಗಿದೆಯೆಂದರೆ “ಜಾತಿ ವಿಜಾತಿ ಎನಬೇಡ ಅನ್ನುತ್ತಾ  ಸರ್ವಜ್ಞನನ್ನು quote ಮಾಡಿ ಭಾಷಣ ಮಾಡುವ ಮಂದಿಯ ಜಾತಿ ರಾಜಕೀಯದ ಪರಿ ನೋಡಿ” ಅನ್ನುವ ಮಾತೂ ಕೂಡ ಭಾಷಣದಷ್ಟೇ rhetorical ಆಗಿ ತೋರುತ್ತದೆ!

ಈ ಪ್ರತಿಮಾ ನಾಟಕ ರಾಜಕಾರಣ ಒಂದು ಕಡೆಯಾದರೆ, ನನಗೆ ವೈಯ್ಯಕ್ತಿಕವಾಗಿ ಈ ಪ್ರಕರಣ ನನ್ನ ಅಜ್ಜಿಯ ನೆನಪುಗಳನ್ನು ತಾಜಾ ಮಾಡಿದೆ. ನಾನು ಸರ್ವಜ್ಞನ ತ್ರಿಪದಿಗಳನ್ನು ಮತ್ತು ಸೊಮೇಶ್ವರ ಶತಕದ ಸಾಲುಗಳನ್ನು ಮೊದಲು ನಾನು ಕೇಳಿದ್ದು ನನ್ನ ಅಮ್ಮನ ಅಮ್ಮನ ಬಾಯಿಯಿಂದ. ಶಾಲೆಗೆ ಎಂದೂ ಹೋಗದ ನನ್ನಜ್ಜಿ ಅವಳ ಅಣ್ಣ ತಮ್ಮಂದಿರ ಪುಸ್ತಕಗಳನ್ನು ದೇವರ ಮನೆಯ ದೀಪದ ಬೆಳಕಿನಲ್ಲಿ ತಾನೇ ಓದಿಕೊಂಡು ಬರೆಯಲಿಕ್ಕೆ ಓದಲಿಕ್ಕೆ ಕಲಿತಿದ್ದಳು. ಅವರಪ್ಪ ಶಾಲೆಯ ಪ್ರಸ್ತಾಪ ಮಾಡಿದರೆ “ಹೆಣ್ಣು ಮಕ್ಕಳೇನು ಶಾನುಬೋಗಿಕೆ ಮಾಡಬೇಕಾ?” ಅಂತ ಸಿಡಿಮಿಡಿಗೊಂಡಿದ್ದರಂತೆ. ಮದುವೆ, ಮಕ್ಕಳು, ಅಡುಗೆ, ಮನೆ ಹಿತ್ತಲ ಕುಂಬಳ ಗಿಡ, ಅಡಿಕೆ ಕೊಯ್ಲು, ಮೊಮ್ಮೊಕ್ಕಳು… ಹೀಗೆ ಜೀವನ ಬೇರೆ ದಿಕ್ಕಿಗೆ ಎಳೆದುಕೊಂಡು ಹೋದರೂ ಅವಳನ್ನು ಮಿಣುಕು ಬೆಳಕಿನಲ್ಲಿ ಕಲಿಯುವುದಕ್ಕೆ ಪ್ರೇರೇಪಿಸಿದ್ದ  ಅಕ್ಷರದ ಆಕರ್ಷಣೆ ಎಂದೂ ಅವಳಲ್ಲಿ ಸಂಪೂರ್ಣ ಆರಿರಲಿಲ್ಲ. ಮನೆಯ ಗಂಡು ಮಕ್ಕಳಿಗಿಂತ ಚೆನ್ನಾಗಿ ಪದ್ಯಗಳನ್ನು ಬಾಯಿಪಾಠ ಮಾಡಿದ್ದ ನನ್ನಜ್ಜಿ ಇಳಿವಯಸ್ಸಿನಲ್ಲಿಯೂ ಅವೆಲ್ಲವನ್ನು ನೆನ್ನೆಯೇ ಕಲಿತವಳಂತೆ ಪಠಪಠ ಹೇಳುತ್ತಿದ್ದಳು. ರಾತ್ರಿ ಎಲ್ಲರೂ ಮಲಗಿದ ಮೇಲೆ ಬಾವಿಯ ಪಕ್ಕ ಇದ್ದ ವಿದ್ಯುತ್ ದೀಪವಿರದ ಹಳೆಯ ಬಚ್ಚಲಿನ ಮನೆಯಲ್ಲಿಯೋ, ಅತವ ಅವಳು ಹಟಹಿಡಿದು ಕೆಡವಲಿಕ್ಕೆ ಬಿಡದೆ ಇರಿಸಿಕೊಂಡಿದ್ದ ಹಿತ್ತಲಿನ ಹಳೆಯ ಹಂಚಿನ ಮನೆಯಲ್ಲಿಯೋ ಸೇರಿಕೊಂಡು ಎನೋ ಕೆಲಸ ಮಾಡುತ್ತಲೇ ಇರುವುದು ಅವಳಿಗೆ ಜನ್ಮಕ್ಕಂಟಿದ ಅಭ್ಯಾಸ. ಅವಳು ಎಲ್ಲಿದ್ದಾಳೆ ಎನ್ನುವುದ ಸುಳಿವು ನಮಗೆ ನೀಡುತ್ತಿದ್ದುದು ಅವಳ ಗುನುಗುನುಗುನು ಪದ್ಯಗಳ ಪಠಣ. ರಜದಲ್ಲಿ ನಮ್ಮ ಮನೆಗೆ ಬಂದಾಗಲೂ ಕೈಗೆ ಸಿಕ್ಕ ನಮ್ಮ ಕತೆ ಪುಸ್ತಕಗಳನ್ನೆಲ್ಲಾ ಬೇಜಾರಿಲ್ಲದೇ ಕೂತು ಓದುತ್ತಿದ್ದಳು.

ಆಗೆಲ್ಲ ನನಗೆ ಸರ್ವಜ್ಞ ಯಾರು ಅಂತೇನೂ ಗೊತ್ತಿರಲಿಲ್ಲ. ನನ್ನಜ್ಜಿ ತ್ರಿಪದಿಗಳನ್ನು ಹೇಳಿಕೊಳ್ಳುವುದೇ ಅಲ್ಲದೆ ಸಾಂದರ್ಭಿಕವಾಗಿ ಇವುಗಳ ಸಾಲುಗಳನ್ನು ಉದ್ಧರಿಸುತ್ತಿದ್ದಳು.  ಇದರಲ್ಲಿ ವಾಡಿಕೆಯಲ್ಲಿ ಬಂದ ಗಾದೆ ಯಾವುದು, ಸರ್ವಜ್ಞನ ವಚನ ಯಾವುದು ಅಂತ ಗೊತ್ತಾಗುತ್ತಿರಲಿಲ್ಲ.  “ಅಯ್ಯೋ ಉಲ್ಲಮ್ಮ (ಊರಿನ + ಅಮ್ಮ = ಊರಮ್ಮ ದ ಅಪಭ್ರಂಶ) ಹೊಟ್ಟೆ ತುಂಬಿದೆ, ಮೊಸರನ್ನ ಬೇಡ” ಅಂದರೆ ಒಂದು ತ್ರಿಪದಿ ತಯಾರಿರುತ್ತಿತ್ತು:

ಮಜ್ಜಿಗೆ ಇಲ್ಲದ ಊಟ,

ಮಜ್ಜನವ ಕಾಣದಾ ಲಜ್ಜೆಗೆಟ್ಟ

ಹೆಣ್ಣಂತೆ ಸರ್ವಜ್ಞ.

(ಎಂತ ‘ಜ್ಞ’ರೂ ಹೆಂಗಸರ ವಿಷಯ ಬಂದಾಗ ಮಾತ್ರ ಕೊಂಕಿಲ್ಲದೆ ಮಾತಾಡುವುದೇ ಇಲ್ಲ ಅಲ್ಲವಾ?!)

ಹೀಗೆ ನನ್ನ ಅಜ್ಜಿ ಹೇಳುತ್ತಿದ್ದ ಒಂದಷ್ಟು ತ್ರಿಪದಿಗಳನ್ನು ನಾನು ಮತ್ತು ನನ್ನಮ್ಮ ಮೊನ್ನೆ ಕೂತುಕೊಂಡು ನೆನಪಿಸಿಕೊಳ್ಳುತ್ತಾ ಇದ್ದೆವು.

 

ಆರು ಬೆಟ್ಟವ ಹಾರುವೆನೆ೦ದರೆ,

ಅಹುದೆನಬೇಕು. ಮೂರ್ಖರೊಳು

ಕಲಹ ಸಲ್ಲ ಸರ್ವಜ್ನ

ಕರೆಯದೆ ಬರುವವನ, ಬರೆಯದೇ ಓದುವನ,

ಬರಿಗಾಲಲಿ ನಡೆವನ ಕರೆದು ಕೆರದಲ್ಲಿ

ಹೊಡೆ ಎಂದ ಸರ್ವಜ್ಞ

ಹಸಿವಿಲ್ಲದುಣಬೇಡ ಹಸಿದು ಇರಬೇಡ,

ಬಿಸಿ ಬೇಡ ತ೦ಗಳುಣಬೇಡ,

ವೈದ್ಯನ ಋಣ ಬೇಡ ಸರ್ವಜ್ಞ

ಬುದ್ಧಿ ಹೇಳದ ತಂದೆ ವಿದ್ಯೆ ಕಲಿಸದ ಗುರುವು

ಬಿದ್ದಿರಲು ಬಂದು ನೋಡದಾ ತಾಯಿ

ಶುದ್ಧವೈರಿಗಳು ಸರ್ವಜ್ಞ

ವೆಚ್ಚಕ್ಕೆ ಹೊನ್ನು ಬೆಚ್ಚನಾ ಮನೆಯು

ಇಚ್ಚೆಯನರಿತು ನಡೆವ ಸತಿ ಇದ್ದೊಡೆ

ಸ್ವರ್ಗಕ್ಕೆ ಕಿಚ್ಚು ಹಚ್ಚೆ೦ದ ಸರ್ವಜ್ಞ.

ಕಚ್ಚೆ ಕೈ ಬಾಯ್ಗಳು ಇಚ್ಚೆಯಲಿ ಇದ್ದರೆ

ಅಚ್ಯುತನಪ್ಪ ಅಜನಪ್ಪ

ಲೋಕದಲಿ ನಿಶ್ಚಿಂತನಪ್ಪ ಸರ್ವಜ್ಞ

ಹೀಗೆ ಸುಮಾರಷ್ಟು. ಕೆಲವು ಸಾಲುಗಳನ್ನು ಅವಳೇ ಸೇರಿಸಿಕೊಂಡೂ ಹೇಳುತ್ತಿದ್ದಳು ಅಂತಲೂ ನನ್ನ ಅನುಮಾನ.  ನನ್ನಜ್ಜಿಗೆ ಮಜ್ಜಿಗೆ ಊಟದ ಹಿರಿಮೆಯಿಂದ ಹಿಡಿದು ಕಚ್ಚೆ ಗಟ್ಟಿ ಇಟ್ಟುಕೊಳ್ಳುವ ವಿಷಯದವರೆಗೆ ಜೀವನದ ಅನೇಕ ವಿಷಯಗಳ ಬಗ್ಗೆ ಒಂದು ರೀತಿಯ collective wisdomನ ಆಗರ ಸರ್ವಜ್ಞ ಆಗಿದ್ದ. ಇಷ್ಟು ವರ್ಷಗಳ ನಂತರ ಹಿಂತಿರುಗಿ ನೋಡಿದಾಗ ಇನ್ನೊಂದು ವಿಷಯವೂ ನನಗೆ ಸೋಜಿಗ ತರುತ್ತದೆ. ನನ್ನ ಅಜ್ಜಿಯ ಬಾಯಲ್ಲಿ ನಲಿಯುತ್ತಿದ್ದ ಸರ್ವಜ್ಞ ವಚನಗಳಲ್ಲಿ ಬುದ್ಧಿವಾದ ಹೇಳುವ ಅಗ್ರಹಾರದ ತಾತನ ಹಾಗೆಯೇ ಕೇಳುತ್ತಿದ್ದ. ಅವನು ಜಾತಿ ಕುಲಗಳ,  ಪೂಜೆ ಪುನಸ್ಕಾರದ ಅರ್ಥಹೀನತೆಯ ಬಗ್ಗೆ ಹಾಡಿದ ವಚನಗಳು ಅವಳು ಹೇಳಿದ್ದು ನಾನೆಂದೂ ಕೇಳಿರಲಿಲ್ಲ.  After all, ಬೇರೆಯವರ ಮಾತುಗಳನ್ನು ಉದ್ಧರಿಸುವಾಗಲೂ ಎಲ್ಲರೂ ಅವರವರ ಭಾವಕ್ಕೆ, ಅವರವರ ಭಕುತಿಗೆ ಮತ್ತು ಅವರವರ prejudiceಗಳಿಗೆ ತಕ್ಕನಾಗಿಯೇ ಉದ್ಧರಿಸುವುದಲ್ಲವೇ? (ಮಾರ್ಕ್ಸ್ ನ ಪ್ರಸಿದ್ಧ ದೇವರ ಬಗೆಗಿನ ಮಾತುಗಳನ್ನು ಉದ್ಧರಿಸುವಾಗ “Religion is the opium of the people” ಅಂತಷ್ಟೆ ಉದ್ಧರಿಸಿ ಅದಕ್ಕೆ ಹಿಂದೆ ಮತ್ತು ಅವನು ಹೇಳಿದ್ದನ್ನು ಬಿಟ್ಟುಬಿಡುವ ಹಾಗೆ!)

ಸರ್ವಜ್ಞನ ಸಮಾಜ ಸುಧಾರಕ ಮುಖವನ್ನು ನಾನು ಕಂಡದ್ದು ನಂತರ ನಮ್ಮ ಕನ್ನಡ ಪಾಠದ ಪುಸ್ತಕಗಳಲ್ಲಿ ಇದ್ದ (ನಾನು ಶುರುವಿನಲ್ಲಿ ಉದ್ಧರಿಸಿದ ವಚನವೂ ಸೇರಿದಂತೆ) ತ್ರಿಪದಿಗಳ ಮೂಲಕ.

ಚಿತ್ತವಿಲ್ಲಡೆ ಗುಡಿಯ ಸುತ್ತಿದೊಡೆ ಫಲವೇನು,

ಎತ್ತು ಗಾಣವ ಹೊತ್ತು ನಿತ್ಯದಲಿ

ಸುತ್ತಿ ಬಂದಂತೆ ಸರ್ವಜ್ಞ

ಇತ್ಯಾದಿ ತ್ರಿಪದಿಗಳು. ಈಗಲೂ ಈ ತ್ರಿಪದಿಗಳು ಅರೆಬರೆಯಾಗಿಯಾದರೂ ನೆನಪಿರುವುದು ಇವು ನಾಲಿಗೆಯ ಮೇಲೆ ಚೆಂದ ಹೊರಳುವ ಭಾಷೆಯ ಸರಳ ಮತ್ತು ಸುಂದರ ಮೋಡಿಯಿಂದಾಗಿ. ಮನಸ್ಸಿಲ್ಲದಿದ್ದರೂ ಚಾಟಿ ಏಟಿಗೆ ಹೆದರಿ ಮಾಡುವ ಕೆಲಸಕ್ಕೆ ಇದಕ್ಕಿಂತ earthy ಆದ, ನಿಖರವಾದ ಉಪಮೆ ದೊರೆಯಲಾರದೇನೋ. ಸರ್ವಜ್ಞ ಹುಟ್ಟು ವರ್ಣಸಂಕರದಲ್ಲಿ, ಅವನು ಬೆಳೆದದ್ದು ಶೈವ ದ೦ಪತಿಗಳ ಬಳಿಯಲ್ಲಾದರೂ ಅವನ ತ೦ದೆ ಬ್ರಾಹ್ಮಣ ಮತ್ತು ತಾಯಿ ಶೂದ್ರ ಹೆ೦ಗಸು ಇತ್ಯಾದಿ ವಿವರಗಳು ನನಗೆ ಈ ಪ್ರತಿಮೆ ಆವರಣದ ಗಲಾಟೆ ಶುರುವಾಗುವವರೆಗೆ ಗೊತ್ತೇ ಇರಲಿಲ್ಲ!

ಈ ಸರ್ವಜ್ಞ ನನ್ನ ಮತ್ತು ನನ್ನಂತ ಅನೇಕರು referenceನಿಂದಲೇ ಮಾಯ ಆಗುತ್ತಾ ಹೋಗುತ್ತಿರುವುದು, ಪ್ರತಿಮೆ ಗಿತಿಮೆ ಅಂತೆಲ್ಲಾ ಗಲಟೆ ಆದಾಗ ಮಾತ್ರ ಅದರ news valueನಿಂದಾಗಿ ನೆನಪಾಗುವುದು ಯಾಕೆ? ನನ್ನ ಅಜ್ಜಿಯ ಹಾಗೆ ಕನ್ನಡ ಪದ್ಯಗಳನ್ನು ಆಸೆಪಟ್ಟು, ಕಷ್ಟಪಟ್ಟು ಕಲಿತು ಪಠಿಸುವವರು ಈಗ ಬಹಳ ಮಂದಿ ಇರಲಾರರೇನೋ. ಸರ್ವಜ್ಞನ ತ್ರಿಪದಿಗಳು ಮುಂಚೆ ಇದ್ದ ಹಾಗೆ ಕನ್ನಡದ ಪಠ್ಯಪುಸ್ತಕದಲ್ಲಿಯೂ ಹೆಚ್ಚು ಕಾಣುವುದಿಲ್ಲ. ಆದರೆ ಅದೊಂದೇ ಕಾರಣ ಅಂದುಬಿಡುವುದು  ಸರಳೀಕರಣ. ಇದೆಲ್ಲಕ್ಕಿಂತ ಹೆಚ್ಚಾಗಿ ಸರ್ವಜ್ಞ ಯಾವ ಜಾತಿ, ಪಂಥ ಅಥವಾ ಮಠದಲ್ಲಿ ಆರಾಧನೆಗೆ ಯೋಗ್ಯವಾದ ಗುರು ಎಂದು ಸಂಪೂರ್ಣವಾಗಿ institutionalise ಆಗಲಿಲ್ಲ. ಸರ್ವಜ್ಞನ ಹೆಸರಿನಲ್ಲಿಯೂ ಒಂದು ಮಠ ಮತ್ತು ಸ್ವಾಮೀಜಿ ಇರುವುದು ನನಗೆ ಮೊನ್ನೆ ಯಾವುದೋ ಉದಯ ಟಿವಿ ಸಂವಾದ ಕೇಳುತ್ತಿದ್ದಾಗ ಮಾತ್ರವೇ ಗೊತ್ತಾಗಿದ್ದು. ಆದರೆ ಈತನ institutionalisation ಬಸವ, ಅಕ್ಕ, ಪುರಂದರ, ಕನಕ… ಇವರಿಗೆಲ್ಲಾ ಹೋಲಿಸಬಹುದಾದ institutionalisation ಅಲ್ಲ. ಭಕ್ತಿ ಪಂಥದಲ್ಲಿ ಬೇರೆ ಬೇರೆ ಕಾಲದಲ್ಲಿ, ಬೇರೆ ಬೇರೆ ನಂಬಿಕೆಗಳ streamನಲ್ಲಿ ಬಂದ ಇವರೆಲ್ಲರೂ ಕೂಡ ಅಯಾ ಕಾಲದ ಕರ್ಮಟ ನಂಬಿಕೆಗಳ ವಿರುದ್ಧ ದನಿ ಎತ್ತಿದವರೇ ಆದರೂ ಅವರೆಲ್ಲಾ ಕಾಲಕ್ರಮದಲ್ಲಿ ಒಂದೊಂದು institutionಗಳ ಒಳಗೆ ಗಟ್ಟಿಯಾಗಿ ಸೇರಿಹೋಗಿದ್ದಾರೆ. ಒಂದೆಡೆ ಇವರಿಗೆ ‘ಗುರು’ ಪಟ್ಟ ಇದ್ದರೆ ಇನ್ನೊಂದೆಡೆ ಶಾಸ್ತ್ರೀಯ ಮತ್ತು ಲಘು ಸಂಗೀತಗಾರರು ಇವರ ಹಾಡುಗಳನ್ನು ಹಾಡುವ ಮೂಲಕವೂ ಇವರು ನೆನಪಿನಿಂದ ಮರೆಯಾಗದಂತೆ ಇಟ್ಟಿದ್ದಾರೆ. ಇವೆರಡೂ ಸರ್ವಜ್ಞನ ವಿಷಯದಲ್ಲಿ ಆಗಿಲ್ಲ.

ಯಾಕೆ?

ಇದಕ್ಕೆ ಚಾರಿತ್ರಿಕ, ಸಾಮಾಜಿಕ ಕಾರಣಗಳು ಏನು? ಇದರ ಬಗ್ಗೆ ಯಾರಾದರೂ ಅಧ್ಯಯನ ಮಾಡಿರಬಹುದು. ನನಗಂತೂ ಗೊತ್ತಿಲ್ಲ. ಗೊತ್ತಿದ್ದವರು ಹೇಳಿ.

ಆದರೆ ಒಂದು ಮಾತು ಸತ್ಯ. ಒಂದು ಜಾತಿ ಪಂಥದ institution ಒಳಗೆ ಸೇರಿದ ಒಬ್ಬ ಕವಿ/ದಾರ್ಶನಿಕ ಅವನು ಬಳಸಿದ ಭಾಷೆಯನ್ನಾಡುವ ಮಂದಿ ಅವನನ್ನು ಮರೆತರೂ ಪೂರ್ತಿ ಮರೆಯಾಗಿ ಹೋಗುವುದಿಲ್ಲ. ಆದರೆ ಮಂದಿ ತಮ್ಮ ಭಾಷೆಯಲ್ಲಿ, ಜಾತಿ ವಿಜಾತಿಗಳ ಸೋಂಕಿಲ್ಲದೆ (‘ಕನ್ನಡವೊಂದೇ ಜಾತಿ’ ಎಂಬ ಬಾಲಿಶ ಅರ್ಥದಲ್ಲಿ ನಾನೀ ಮಾತು ಹೇಳುತ್ತಿಲ್ಲ) ನಾಲಿಗೆ ಹೊರಳಿಸುವುದನ್ನೇ ಕಡಿಮೆ ಮಾಡುತ್ತಾ ಹೋದ ಹಾಗೆ ಜನರ ನಾಲಿಗೆಯ ಮೇಲೆಯೇ ಜೀವಂತ ಇರುವ  ಸರ್ವಜ್ಞನಂತ ಕವಿ ಎಲ್ಲಿ ಹೋಗಬೇಕು? ಅದಕ್ಕೇ ಏನೋ ಪಾಪ ಬೇಜಾರಾಗಿ ಕಲ್ಲಿನ ಪ್ರತಿಮೆಯಾಗಿ ನಿಮ್ಮಗಳ ಸಹವಾಸವೇ ಬೇಡ ಅಂತ ತಮಿಳುನಾಡಿನಲ್ಲಿ ನಿಂತುಬಿಟ್ಟದ್ದು!

Advertisements

6 ಟಿಪ್ಪಣಿಗಳು »

 1. ಬಾಗೇಶ್ರೀ,
  ನಿಮ್ಮ ಅಜ್ಜಿಯ ಬಗೆಗೆ ತಿಳಿದು ಸಂತೋಷವಾಯಿತು. ಈ ಲೇಖನದಲ್ಲಿರುವ ನಿಮ್ಮ ವಿಚಾರಸರಣಿಯನ್ನು ಗಮನಿಸಿ ನನ್ನ ಸಂತೋಷ ಇಮ್ಮಡಿಯಾಯಿತು. ಆ ವಿಚಾರಸರಣಿಯನ್ನು ಲೇಖನದಲ್ಲಿ ಸಮರ್ಪಕವಾಗಿ ಜೋಡಿಸುವ ನಿಮ್ಮ ಕಲೆ ಉತ್ತಮವಾಗಿದೆ.

 2. Balu said

  ನಿಮ್ಮ ಲೆಖನ ಒದಿ ನನಗೆ “ಕನ್ನಡ ಭಾರತಿ” ನೆನಪು ಆಯಿತು. ಜಾತಿ ಮತ ಬೇಡ ಅ೦ದವರ ಹೆಸರಿನಲ್ಲಿ ಜಾತಿ ಶೃಷ್ಟಿ , ಮಠ ಎಲ್ಲಾ ಆಗಿದೆ. ಮೂರ್ತಿ ಪೂಜೆ ಬೇಡ ಎ೦ದವರ ಮೂರ್ತಿ ಗೆ ಪೂಜಿಸುವುದು ಮಹಪುರುಶರ ತತ್ವ ಗಳಿಗೆ ಅವಮಾನ ಮಾಡಿದ೦ತೆ.

  ಅತ್ಯ೦ತ ಸಮಯೊಚಿತ ಲೇಖನ.

 3. vimala.ks said

  ತುಂಬ಻ ಚೆನಾಗಿದೆ

 4. hneshakumar@gmail.com said

  ಚೆನ್ನಾಗಿದೆ.ನಿಮ್ಮ ಬರಹ ಒಮ್ಮೆ
  sahayaatri.blogspot.com nodi

 5. lakshmi said

  ಮನೋಜ್ಞ ಲೇಖನ. ಈಗಿನ ಮಕ್ಕಳಿಗೆ ಕನ್ನಡವೇ ಕಷ್ಟವಾಗಿದೆ.ಇಂತಹಾ ಶೋಚನೀಯ ಪರಿಸ್ಥಿತಿಯಲ್ಲಿ, ಜಾತಿ, ಧರ್ಮ, ರಾಜಕೀಯ, ವೋಟ್ ಬ್ಯಾಂಕುಗಳ ಮಧ್ಯದಲ್ಲಿ ಕವಿಗಳು, ಜ್ಞಾನಿಗಳು ಮೌನ ಪ್ರತಿಮೆಗಳಾಗದೇ ಇನ್ನೇನು ತಾನೆ ಮಾಡಿಯಾರು ? 😦

 6. mallanagoudar.p.k. said

  alri baagesri avare,
  baree blognallaste beDAARI..dayavittu kannada patrikeyondakke nivu bariri.

  nivu visaya mandane maduva shaili, nirUpane ella chendagive.
  thanks
  -mallanagoudar.p.k

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s

%d bloggers like this: