ವೈದೇಹಿ ಕತೆಗಳ ಜಗತ್ತಿನಲ್ಲಿ ಮತ್ತೊಂದು ಸುತ್ತು

ವೈದೇಹಿಗೆ ಪ್ರಶಸ್ತಿ ಸಿಕ್ಕ ಸುದ್ದಿ ಕೇಳಿ ತುಂಬಾ ಖುಶಿ. ಅವರು ನಮ್ಮೂರವರು ಅಂತ ಸ್ವಲ್ಪ extra ಖುಶಿ. ಅವರ best ಕಥೆಗಳಲ್ಲಿ ಗಾಢವಾಗಿರುವುದು ದ.ಕ.ದ ಮಣ್ಣಿನ ವಾಸನೆಯೇ ಆದರೂ ಅವರು ಸುಮಾರು ವರ್ಷ ಶಿವಮೊಗ್ಗದಲ್ಲಿ  ಇದ್ದದ್ದರಿಂದ ನಮ್ಮೂರವರು ಅಂತಲೂ ಅಂದುಕೊಂಡರೆ factually incorrect ಅಂತೂ ಅಲ್ಲ. (ಈಗ ನಾವು ಸುನಿತಾ ವಿಲಿಯಮ್ಸ್ ನಮ್ಮ ದೇಶದವಳು ಅಂತ ಜಂಬ ಪಟ್ಟುಕೊಳ್ಳುವುದಿಲ್ಲವಾ, ಹಾಗೆ!)

ಮುಂಚಿನಿಂದಲೂ ವೈದೇಹಿ ಕತೆಗಳ ಬಗ್ಗೆ ನನಗೆ ವಿಶೇಷ ಆಕರ್ಷಣೆ. ಮ್ಯಾಗಜೀನುಗಳ ದೀಪಾವಳಿ, ಯುಗಾದಿ ವಿಶೇಷಾಂಕಗಳಲ್ಲಿ, ಲಂಕೇಶ್ ಪತ್ರಿಕೆಯಲ್ಲಿ ಪ್ರಕಟ ಆಗುತ್ತಿದ್ದ ಕತೆಗಳನ್ನು ಕಾದು ಓದುತ್ತಿದ್ದೆ. ಪ್ರತಿ ಓದುಗನಿ/ಳಿಗೂ ಇಷ್ಟ ಅನ್ನಿಸುವ ಹತ್ತಿಪ್ಪತ್ತು ಬರಹಗಾರರಿರಬಹುದು. ಆದರೆ ತುಂಬ ಆಪ್ತ ಅನ್ನಿಸುವ, ಮನಸ್ಸನ್ನು ತಟ್ಟುವ ಅಥವಾ ‘ವಾವ್’ ಅನ್ನಿಸಿ ಮೈ ನಿಮಿರೇಳಿಸುವ ಬರಹಗಾರರು ಕೆಲವರೇ. ನನ್ನ ಮಟ್ಟಿಗೆ ವೈದೇಹಿ ಆಪ್ತ ಅನ್ನಿಸುವ categoryಗೆ ಸೇರಿದವರು. ನೆರುಡಾನ “I want to do with you what spring does with the cherry trees” ಥರದ ಸಾಲುಗಳು, ಜಯಂತ್ ಕಾಯ್ಕಿಣಿಯ ಗದ್ಯದ ಕೆಲ ಪದ್ಯದಂತ turns of phrase, ದೇವನೂರರ magical ಅನ್ನಿಸುವ ಭಾಷೆಯ ಓಘ  ‘ವಾವ್’ ಅನ್ನಿಸುವ categoryಯವು.

ಹೀಗೆ ಕೆಲವರು ಮಾತ್ರ ಯಾಕೆ ಆಪ್ತ ಆಗುತ್ತಾರೆ ಅಥವ ಯಾಕೆ ನಮ್ಮಲ್ಲಿ ‘ವಾವ್’ ಅನ್ನುವ ಉದ್ಗಾರ ಹುಟ್ಟಿಸುತ್ತಾರೆ? ಈ ಬಗೆಯ ಜಿಜ್ನಾಸೆಯೇ ಒಂದು ಅರ್ಥದಲ್ಲಿ  ಆಪ್ತತೆ ಅನ್ನುವ conceptಗೆ, ಮೈ ನಿಮಿರೇಳುವ ಅನುಭವಕ್ಕೆ ತದ್ವಿರುದ್ಧ ದಿಕ್ಕಿನಲ್ಲಿ ಹೊರಡುವ ಪಯಣ ಅನ್ನಿಸಬಹುದು. ಆದರೆ “ಇಷ್ಟ “, “ಆಪ್ತ” ಹೀಗೆ ಸುಮ್ಮ ಸುಮ್ಮನೆ ಒಂದೊಂದು ಪದಗಳನ್ನು ಹಾಗೆ ಒಗೆದು ಸುಮ್ಮನಿದ್ದುಬಿಡುವುದು ಪದ್ಯ, ಗದ್ಯ ಯಾವುದನ್ನೂ ಬಗೆವ ಬಗೆಯೇ ಅಲ್ಲ ಅಂತ ಮೊದಲ ಸಾಹಿತ್ಯದ ಪಾಠ ಹೇಳಿಕೊಟ್ಟ ನಮ್ಮ ಮನು ಚಕ್ರವರ್ತಿ ಮೇಷ್ಟ್ರನ್ನು ನೆನೆದು ವೈದೇಹಿ ಯಾಕೆ ನನಗೆ ಆಪ್ತ ಅನ್ನುವ ಪ್ರಶ್ನೆಯನ್ನು ಬಹಳ belated ಆಗಿ ಕೇಳಿಕೊಳ್ಳುತ್ತಿದ್ದೇನೆ.

ವೈದೇಹಿ ಹೇಗೆ ಒಂದು ಹೊಸ ಲೋಕವನ್ನು ಕನ್ನಡ ಸಾರಸ್ವತ ಲೋಕದೊಳಗೆ ತಂದರು ಅನ್ನುವ ಬಗ್ಗೆ ಬಹಳಷ್ಟು ಜನ ಬರೆದಿದ್ದಾರೆ. ಕುಂದಾಪುರದ ಸಣ್ಣ ಜಗತ್ತನ್ನು ಅದರ ಸಂಸ್ಕೃತಿ, ಭಾಷೆಗಳೆಲ್ಲವನ್ನೂ ಒಳಗೊಂಡ ಸೂಕ್ಷ್ಮ ಕಸೂತಿ ಎಳೆಗಳ ಹಾಗೆ ಬಿಡಿಸಿಡುವ ವೈದೇಹಿಯ ಶೈಲಿ ಅನನ್ಯವಾದದ್ದು. ಆ ಜಗತ್ತಿನ ಆಚೆಯ, ಘಟ್ಟದ ಮೇಲಿನ ಓದುಗರಿಗೆ ಇದು  ಹೊಸ (ಪ್ರಾಯಶಃ ‘ವಾವ್’ ಅನ್ನಿಸುವ) ಪ್ರಪಂಚ.

ಆದರೆ ನನ್ನ ವೈದೇಹಿಯ ಓದಿನ ಅನುಭವ ಇದಕ್ಕೆ ವಿರುದ್ಧವಾದದ್ದು. ನಾನು ವೈದೇಹಿಯನ್ನು ಓದಲಿಕ್ಕೆ ಶುರು ಮಾಡಿದ್ದು ಸುಮಾರು ಹದಿನಾಲ್ಕು ಹದಿನೈದನೆ ವಯಸ್ಸಿನಲ್ಲಿ. ಆಗಷ್ಟೇ ಬೆಂಗಳೂರಿಗೆ ಬಂದು ನೆಲೆ ನಿಂತ ನನಗೆ  ಬೆಂಗಳೂರು ನಗರಿಯ ಐಭೋಗ ಸ್ವಲ್ಪ ದಂಗು ಬಡಿಸುವಂಥದಾಗಿತ್ತು. ನಾನು ತುಂಬ miss ಮಾಡುತ್ತಾ ಇದ್ದದ್ದು ಶಿವಮೊಗ್ಗಾ ನಗರಕ್ಕಿಂತಲೂ, ಅದರಾಚೆ ಆಗುಂಬೆ ಕಡೆ ಹೋಗುವ ದಾರಿಯಲ್ಲಿ ಇದ್ದ, ನನ್ನ ಪ್ರತಿ ಬೇಸಿಗೆ ರಜೆಯನ್ನೂ ಕಳೆದಿದ್ದ, ನನ್ನ ಅಜ್ಜಿಯ ಊರು. ಘಟ್ಟದ ಮೇಲಿನ ಊರಾದರೂ, ಘಟ್ಟದ ಕೆಳಗಿನ ಮತ್ತು ಮೇಲಿನ ಸಂಧಿಯಲ್ಲಿ (literally and metaphorically) ಇದ್ದಂಥ ಊರು. ಅಲ್ಲಿ ಮನೆಯಲ್ಲಾಡುವ ಮಾತು ಮಲೆನಾಡಿನ typical  “ಎಂತ  ಮಾರಾಯ್ತಿ” ಭಾಷೆ. ಗದ್ದೆ ತೋಟದಲ್ಲಿ ಕೆಲಸ ಮಾಡುವ ಅಷ್ಟೂ ಜನ ಆಡುತ್ತಿದ್ದದ್ದು ಘಟ್ಟದ ಕೆಳಗಿನ “ಹ್ವಾಯ್ನಿ ಕಾಂಬ” ಭಾಷೆ.

ಈ ಘಟ್ಟದ ಮೇಲಿನ ಮತ್ತು ಕೆಳಗಿನ ಜನರಿಗೆ ಸಾಂಸ್ಕೃತಿಕ ಸಾಮ್ಯಗಳು ಬಹಳಷ್ಟು ಇದ್ದರೂ ಮಲೆನಾಡಿನವರಿಗೆ ಘಟ್ಟದ ಕೆಳಗಿನವರ ಬಗ್ಗೆ ಒಂದು ರೀತಿಯ disdain (ಮಲೆನಾಡಿನ ಭಾಷೆಯಲ್ಲಿ ಸಸಾರ). “ಘಟ್ಟದ ಕೆಳಗಿನ ಬುದ್ಧಿ” ಅಂದರೆ  ಸ್ವಲ್ಪ ಅತಿ ಬುದ್ಧಿವಂತಿಕೆ, ಸ್ವಲ್ಪ ದುಡ್ಡು ಕಾಸಿನ ವಿಷಯದಲ್ಲಿ ಬಿಗಿ ಮುಷ್ಟಿ ಹೀಗೆ ಬೇಕಾದಷ್ಟು prejudiceಗಳನ್ನು ಒಟ್ಟು  ಮಾಡಿ ಹೇಳುವ ಒಂದು phrase. ಕೆಲಸದವರಿಂದ ಹಿಡಿದು ಆ ಕಡೆಯಿಂದ ಮದುವೆಯಾಗಿ ಮಲೆನಾಡಿಗೆ ಸೇರಿದ ಹೆಣ್ಣುಮಕ್ಕಳವರೆಗೆ ಎಲ್ಲರಿಗೂ ಈ ಹಿಯಾಳಿಕೆ (ಸ್ವಲ್ಪ ಮತ್ಸರದ ಜೊತೆ ಜೊತೆಗೆ) ಕಟ್ಟಿಟ್ಟಿದ್ದು. ತನ್ನ ತಾಯಿಯೇ ಘಟ್ಟದ ಕೆಳಗಿನವಳಾದರೂ ನನ್ನ ಅಜ್ಜಿ ಈ “ಬುದ್ಧಿ” ಯ ಬಗ್ಗೆ ಬಹಳಷ್ಟು ಮಾತಾಡುತ್ತ್ತಿದ್ದಳು. (ನನ್ನ ಮುತ್ತಜ್ಜಿ ಮದುವೆ ಆಗಿ ಒಂಭತ್ತೋ ಹತ್ತೋ ವರ್ಷಕ್ಕೆ ಘಟ್ಟ ಹತ್ತಿ ಮೇಲೆ ಬಂದರೂ ಸಾಯುವವರೆಗೂ ಮಾತಾಡುತ್ತಿದ್ದದ್ದು ಕುಂದಾಪುರದ ಭಾಷೆಯನ್ನೇ!)

ಆ ಕತೆಗಳನ್ನು ಹೇಳುತ್ತಾ ಹೋದರೆ ಅದೇ ಉದ್ದವಾದೀತು… ಒಟ್ಟಿನಲ್ಲಿ ವ್ಯತ್ಯಾಸಗಳ ನಡುವೆಯೂ, ವೈದೇಹಿಯ ಕತೆಗಳ ಪ್ರಪಂಚ ಮತ್ತು ನನ್ನ ಬಾಲ್ಯದ nostalgia ಪ್ರಪಂಚಕ್ಕೆ ಬಲವಾದ ಕೊಂಡಿ ಇತ್ತು. ಅವರ ಕತೆಗಳ ಕೋಟಾ ಬ್ರಾಹ್ಮಣರ ಮದುವೆ ಮನೆ, ಶ್ರಾದ್ಧದ sceneಗಳು, ಊಟೋಪಚಾರದ ವಿವರಗಳು ನಾನು ಬಲ್ಲ ಆದರೆ ದೂರವಾಗುತ್ತಿರುವ ಪ್ರಪಂಚದ ತುಣುಕುಗಳಾಗಿದ್ದವು.  ‘ಮಲೆಗಳಲ್ಲಿ ಮದುಮಗಳು’ ಅಥವಾ ‘ಕಾನೂರು ಸುಬ್ಬಮ್ಮ’ ತುಂಬಾ ಇಷ್ಟಪಟ್ಟು ಓದಿದಾಗ್ಯೂ , ಕುವೆಂಪು ನಮ್ಮ ಊರಿಗೆ ಮೈಲಿಗಳ ಅಳತೆಯಲ್ಲಿ ಇನ್ನೂ ಹತ್ತಿದವರಾದರೂ, ವೈದೇಹಿಯ ರೀತಿಯಲ್ಲಿ ನನ್ನಲ್ಲಿ ಇವು nostalgia ಬಡಿದೆಬ್ಬಿಸದೆ ಇದ್ದದ್ದಕ್ಕೆ ಎರಡು ಕಾರಣ ಇರಬೇಕು ಅಂತ ಈಗ ಅನ್ನಿಸ್ತಾ ಇದೆ: ಮೊದಲನೆಯದು ವೈದೇಹಿ ಕಟ್ಟಿ ಕೊಡುವ ಒಂದು ಜಾತಿಯ, ಕೌಟುಂಬಿಕ ಪ್ರಪಂಚದ ಜೊತೆಗೆ ನನಗಿದ್ದ familiarity, ಇನ್ನೊಂದು ಇಲ್ಲಿನ ಪಾತ್ರಗಳ ವಿಶಿಷ್ಟ ಹೆಣ್ತನ.

ಆದರೆ ಈ nostalgia ಕೊಂಡಿಯಷ್ಟೇ ನನ್ನ ವೈದೇಹಿ ಆಕರ್ಷಣೆಯ ಹಿಂದಿನ ಮರ್ಮ ಅಂದುಬಿಟ್ಟರೆ ಅದು ಅವರ ಕತೆ ಕಟ್ಟುವ ಕೌಶಲ್ಯವನ್ನಷ್ಟೇ ಅಲ್ಲ, ಒಬ್ಬ ಹರೆಯದ ಓದುಗಳ ಬುದ್ಧಿ ಶಕ್ತಿಯನ್ನೂ ಗೌಣ ಮಾಡಿಬಿಟ್ಟಂತೆ.  ಈ ಕತೆಗಳು ನನ್ನ ನೆನಪನ್ನು ಜೀವಂತ ಮಾಡುವ ಜೊತೆಜೊತೆಗೆ, ಈ ಹಿನ್ನೋಟಕ್ಕೆ ಒಂದು critical filterನ್ನೂ ಒದಗಿಸಿದ್ದವು. ವೈದೇಹಿ ಈ ಪ್ರಪಂಚವನ್ನು ಅದರೆಲ್ಲಾ ವಿವರಗಳೊಂದಿಗೆ ಕಟ್ಟಿಕೊಡುವುದಷ್ಟೇ ಅಲ್ಲದೆ, ಆ ಪ್ರಪಂಚದ ತಾರತಮ್ಯಗಳು, ಹೆಣ್ಣುಮಕ್ಕಳ ಮೇಲಿನ ಕಟ್ಟುಪಾಡುಗಳು ಇತ್ಯಾದಿ ಹುಳುಕುಗಳನ್ನೂ ಮೆಲ್ಲಮೆಲ್ಲನೆ ಬಿಚ್ಚಿಡುತ್ತಿದ್ದರು. ಅಂತರಂಗದ ಮಾತುಗಳು ಬಹಿರಂಗದ ವಿದ್ಯಮಾನಗಳಿಗೆ ಕನ್ನಡಿಯೂ ಆಗುತ್ತದೆ. ಇಲ್ಲಿನ ಅಕ್ಕು, ಅಮ್ಮಚ್ಚಿಯರ “ಹುಚ್ಚುತನ” ನನ್ನ ಅಮ್ಮ ಹೇಳುತ್ತಿದ್ದ ಬಹಳಷ್ಟು ಕತೆಗಳ ಹಾಗೆಯೇ ತೋರುತ್ತಿತ್ತು. ಉದಾಹರಣೆಗೆ ಒಬ್ಬ ನಶ್ಯದ ಪುಡಿ ಸೇದುವ ಚಟ ಇದ್ದ ಹೆಂಗಸಿಗೆ ನಶ್ಯ ಕೊಡದೆ ಕೊಡದೆ ಅವಳ ಗಂಡನ ಮನೆಯವರು ಹುಚ್ಚಿಯನ್ನಾಗಿಯೇ ಮಾಡಿಬಿಟ್ಟರು ಅಂತ ಒಂದು ಕತೆ ನನ್ನ ಅಮ್ಮ ಸಣ್ಣವಳಿದ್ದಾಗ ನನಗೆ ಹೇಳಿದ್ದಳು. (ಈ ರೀತಿಯ “ಹುಚ್ಚುತನ” ಹೇಗೆ – ವಿಶೇಷವಾಗಿ ಉಸಿರುಕಟ್ಟುವ ಕಟ್ಟುಪಾಡುಗಳ ಜೊತೆ ಏಗುವ ಹೆಣ್ಣಿಗೆ – liberating space ಒದಗಿಸಬಲ್ಲದು ಅನ್ನುವ ಬಗ್ಗೆ ತುಂಬ ಜನ ಬರೆದುಬಿಟ್ಟಿರುವುದರಿಂದ ಆ ಚರ್ಚೆ ಇಲ್ಲಿ ಮತ್ತೆ ಬೇಡ.) ಈಗ “critical insider” ಅನ್ನುವ ಮಾತು ತುಂಬ ಚಾಲ್ತಿಯಲ್ಲಿ ಬಂದಿದೆ. ಆದರೆ ವೈದೇಹಿಯ ಬರಹಗಳಲ್ಲಿ (unlike ಅನಂತಮೂರ್ತಿ) ಇದು ಪ್ರಜ್ನಾಪೂರ್ವಕವಾದ ನಿಲುವು ಅನ್ನಿಸುವುದಿಲ್ಲ. ಒಬ್ಬ ಲೇಖಕನಲ್ಲಿ ಯಾವುದು “ನಿಜ”ವಾಗಿಯೂ ಪ್ರಜ್ನಾಪೂರ್ವಕ ಯಾವುದು ಅಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಸಾಧ್ಯ ಮತ್ತು ಅಪ್ರಸ್ತುತ. ಹಾಗೆ ಅನ್ನಿಸುವುದಿಲ್ಲ ಅನ್ನುವುದೂ ವೈದೇಹಿಯ craftನ ಒಂದು ಭಾಗ.

ಈ ರೀತಿಯ ವಿಶೇಷ balance ವೈದೇಹಿಯ ಎಲ್ಲಾ ಕತೆಗಳಲ್ಲಿ ಇದೆ ಅಂತಲೂ ಅಲ್ಲ. “ಒಂದು ಬಾಗಿಲ ಸದ್ದು”, “ಅವಳು ಮತ್ತು ಮಳೆ”, “ಗುಲಾಬಿ ಮೃದು ಪಾದಗಳು” ತರದ ಕತೆಗಳು  conventionಗಳ ಕಡೆಗೆ ಸ್ವಲ್ಪ ಹೆಚ್ಚಿಗೆಯೇ ವಾಲಿದಂತೆ ಅನ್ನಿಸುತ್ತವೆ. “ಅಭಾ” ತರದ ಕತೆಗಳ ಆಧುನಿಕ ಹೆಣ್ಣಿನ ಚಿತ್ರಣ ಬೇಡ, ಬೇಡ ಅಂದುಕೊಂಡೂ stereotypeಗಳಲ್ಲಿಯೇ ಕಳೆದು ಹೋದಂತೆ ಅನ್ನಿಸುತ್ತದೆ. ಅವರ ಏಕೈಕ  ಕಾದಂಬರಿ “ಅಸ್ಪಶ್ಯರು”ನಲ್ಲಿ ಅವರು ಜಾತಿಪದ್ಧತಿಯ ಬಗ್ಗೆ ತೆಗೆದುಕೊಳ್ಳುವ radical ಅನ್ನಿಸುವ ನಿಲುವು ಕೂಡ ಕತೆಯ ಮೂಲಕವೇ ಸಹಜವಾಗಿ ಹೊಮ್ಮಿ ಬಂದದ್ದು ಅನ್ನಿಸುವುದಿಲ್ಲ. ಈ ಕಾದಂಬರಿಯಲ್ಲಿ ಕಾಣುವ critical insiderತನ ಸ್ವಲ್ಪ ಹೇರಿಕೊಂಡ ಹಾಗೆ ಅನ್ನಿಸುತ್ತದೆ.

ಅಂದರೆ, ನನಗೆ ಒಟ್ಟಾರೆ ವೈದೇಹಿ ಗಟ್ಟಿ ಅನ್ನಿಸುವುದು ಕುಂದಾಪುರದ ಆಸುಪಾಸಿನ ಬ್ರಾಹ್ಮಣ ಕುಂಟುಂಬದ ಒಳಗೆಯೇ ನಿಂತು ತನ್ನ ಸುತ್ತಲಿನ ಜಗತ್ತನ್ನು ಅದರೆಲ್ಲಾ ಸೂಕ್ಷ್ಮತೆಗಳೊಂದಿಗೆ, ಜಗಳಗಳೊಂದಿಗೆ ಸೆರೆ ಹಿಡಿದಾಗ. ಇಲ್ಲಿನ ಪುಟ್ಟಮ್ಮತ್ತೆ, ಬಾಬುಲಿ ಮತ್ತು ಆಕೆಯ ತಾಯಿಯ ಕತೆ ಹೇಳುವ narrator, “ಒಂದು ಕಳ್ಳ ವೃತ್ತಾಂತ” ಎಂಬ brilliant ಕತೆಯ ಬಚ್ಚಿ ಎಲ್ಲರೂ ಈ ಪ್ರಪಂಚದವರೇ. ಅವರ ಪ್ರಶಸ್ತಿ ವಿಜೇತ ಸಂಕಲದ ಚೆಂದದ ಕತೆ “ಕ್ರೌಂಚ ಪಕ್ಷಿಗಳು” ಕೂಡ partition ಸಂದರ್ಭ ಮತ್ತು ಅದು ತಂದ ಪಲ್ಲಟಗಳನ್ನು ಈ ಬಲ್ಲ ಪ್ರಪಂಚದ ನೆಲೆಯಿಂದಲೇ ನೋಡುತ್ತದೆ. ಇದರಾಚೆಯ “neutral” ಅನ್ನಿಸುವ ಪ್ರಪಂಚಕ್ಕೆ ಸೇರಿದ narrative voice ಹೊಂದಿದ ವೈದೇಹಿಯ ಮೊದಲ ಕಥಾ ಸಂಕಲನ “ಮರ ಗಿಡ ಬಳ್ಳಿ”ಯ ಬಹಳಷ್ಟು ಪಾತ್ರಗಳು ಮತ್ತು ಅವುಗಳ ಸುತ್ತಲ ಕತೆಗಳು ನಂತರ ಇವರು ಬರೆದ ಘಟ್ಟದ ಕೆಳಗಿನ setting ಇರುವ ಕತೆಗಳ ಹೋಲಿಕೆಯಲ್ಲಿ flat ಅನ್ನಿಸುತ್ತವೆ, ಪಿಚ್ಚೆನ್ನಿಸುತ್ತವೆ.

ವೈದೇಹಿಯ “ಅಲೆಗಳಲ್ಲಿ ಅಂತರಂಗ” ಸಮಗ್ರ ಕತೆಗಳ ಸಂಪುಟವನ್ನು ಈಗ ಮತ್ತೆ ತಿರುಗಿ ಹಾಕುವಾಗ ಮತ್ತೂ ಒಂದು ಪ್ರಶ್ನೆ ನನ್ನ ಮನಸ್ಸಿನಲ್ಲಿ ಮೂಡುತ್ತಿದೆ: ವೈದೇಹಿಯ ಶ್ರೇಷ್ಠ ಕತೆಗಳಲ್ಲಿ ಬರುವ ಈ ಘಟ್ಟದ ಕೆಳಗಿನ ಲೋಕದ ಚಿತ್ರಣ ಯಾಕೆ ಒಂದು ಕಾಲಘಟ್ಟದಲ್ಲಿ ನಿಂತುಬಿಟ್ಟ ಹಾಗೆ ತೋರುತ್ತದೆ?

ಕಳೆದ ಹತ್ತು ಹದಿನೈದು ವರ್ಷಗಳಲ್ಲಿ ಗುರುತಿಗೆ ಸಿಕ್ಕದ ಹಾಗೆ ಮಾರ್ಪಾಡಾಗಿರುವ ದ.ಕ.ದ ಸಂಕೀರ್ಣ ಚಿತ್ರಣವನ್ನು ಕಟ್ಟಿಕೊಡುವ ವೈದೇಹಿಯ ಕತೆಗಳನ್ನು ನಾನಂತೂ ಓದಿಲ್ಲ (ಇವರ ೨೦೦೪ರ ಕೊನೆಯ ಸಂಕಲನ ‘ಕ್ರೌಂಚ ಪಕ್ಷಿಗಳು’ ವರೆಗೆ).  ನಾವು ದಿನೇದಿನೇ ಪೇಪರ್ರಿನಲ್ಲಿ ಓದುವ ಪಬ್ ಅಟ್ಯಾಕ್ ಅವಾಂತರ, ಹುಡುಗ ಹುಡುಗಿಯರು ಅವರವರದ ಧರ್ಮದವರ ಜೊತೆ ಮಾತ್ರ ಪಾರ್ಕಿನಲ್ಲಿ ಅಲೆಯಬಹುದೆಂದು ತಾಕೀತು ಮಾಡುವ ಸಂಘಟನೆಗಳು, ಪತ್ರೊಡೆಯ ಜೊತೆ ಕೋಕನ್ನೂ ಕುಡಿಯುವ ಹುಡುಗರು… ಇತ್ಯಾದಿಗಳು ವೈದೇಹಿಯ ಕತೆಗಳ ಲೋಕಕ್ಕೆ ಇನ್ನೂ ಇಳಿಯದೆ ಇರುವುದು ಆಶ್ಚರ್ಯ. ಈ ಎಲ್ಲಾ ವಿಷಯಗಳ ಬಗ್ಗೆ ವೈದೇಹಿ ಬಹಳಷ್ಟು ಮಾತನಾಡಿದ್ದಾರೆ, ಕೆಲವು ಪ್ರಬಂಧಗಳಲ್ಲಿ ಚರ್ಚಿಸಿದ್ದಾರೆ (ಉದಾಹರಣೆಗೆ ಮಲ್ಲಿನಾಥನ ಧ್ಯಾನ ಸಂಕಲನದ “ಡೆಸೆಂಬರ್ ಆರರ ಪಾಠ”). ಇವರ “ಗುಲಾಬಿ ಟಾಕೀಸು ಮತ್ತು ಸಣ್ಣ ಅಲೆಗಳು” ಕತೆಯ ಸಿನಿಮಾ ರೂಪದಲ್ಲಿ ಮೂಲ ಕತೆಯಲ್ಲಿಲ್ಲದ ಈ ಎಲ್ಲಾ ವಿಷಯಗಳೂ ಇಳಿದಿವೆ. ಆದರೆ ಇವರ ಹೊಸ ಕತೆಗಳಲ್ಲಿ ಈ ಬದಲಾದ ಪ್ರಪಂಚ ಯಾಕೆ ಇನ್ನೂ ಕಾಣುತ್ತಿಲ್ಲ?ಹಳೆಯ ನೆನಪಿನ ಕೊಂಡಿಗಳು ಓದುಗರಿಗೆ ಕಾಡುವಂತೆ ಬರಹಗಾರರನ್ನೂ ಕಾಡಿ ಹಿಡಿದಿಡುತ್ತವೆಯಾ?

ಒಬ್ಬ ಲೇಖಕಿಗೆ agenda ಹಾಕಿ ಕೊಡುವುದು ಸಾಧ್ಯವಿಲ್ಲ ಮತ್ತು ಸರಿಯಲ್ಲಿ. ನಾನು ನನ್ನ ಅಗತ್ಯಗಳಿಗೆ ಒಗ್ಗಿಸಿಕೊಂಡು ವೈದೇಹಿಯನ್ನು ಹದಿನಾಲ್ಕು-ಹದಿನೈದನೆ ವಯಸ್ಸಿನಲ್ಲಿ ಓದಿದಂತೆ, ಈಗಿನ ನನ್ನ ಅಗತ್ಯಗಳಿಗೆ ಒಗ್ಗಿಸಿಕೊಂಡು ಮತ್ತೆ ವೈದೇಹಿಯನ್ನು ಓದುವ ಪ್ರಯತ್ನ ಮಾಡುತ್ತಿದ್ದೇನೆ ಅಂತಲೂ ಅನ್ನಬಹುದು. ಆದರೂ ಕುತೂಹಲ ಅಂತೂ ಉಂಟು: ಈಗ ಮದುವೆ ಮನೆಯಲ್ಲಿ ವಾಗತ್ತೆ ಕೂತು ಹರಟೆ ಹೊಡೆಯುವಾಗ ಆಚಿ ಮನೆ ಹೆಣ್ಣು ಅದ್ಯಾವುದೋ ಸಾಬರ ಹುಡುಗನ ಜೊತೆ ಓಡಿ ಹೋದದ್ದು ಲವ್ ಜಿಹಾದ್ ಅಂತ ರಂಪ ಎದ್ದು ಹೋದದ್ದರ ಬಗ್ಗೆಯೂ ಮಾತಾಡಬಹುದಾ, ಮದುವೆ ಊಟದಲ್ಲಿ ಅಪ್ಪಿ ಪಾಯಸದ ಜೊತೆಜೊತೆಗೆ ಗರಂ ಮಸಲಾ ಸರಿಯಾಗಿ ಜಡಿದ ಪಲಾವನ್ನೂ ಬಡಿಸಬಹುದಾ ಅಂತ.

Advertisements

10 ಟಿಪ್ಪಣಿಗಳು »

 1. Sindhu said

  Beautiful Write up!

  ವೈದೇಹಿ, ಅವರ ಒಳಾಂಗಣ ಮತ್ತು ಅಂತರಂಗದ ಪರಿಸರದ ಕತೆಗಳ ಆಪ್ತ ವಿಶ್ಲೇಷಣೆ ಮಾಡಿದ್ದೀರಿ.
  ಎಲ್ಲಕ್ಕಿಂತ ಹಿಡಿಸಿದ್ದೆಂದರೆ ನಾನು ಮತ್ತು ನನ್ನ ಕಾಲದ ಓದುಗರು ಅವರಿಗೆ ರಿಲೇಟ್ ಆಗುವ ಪರಿಯನ್ನ ನೀವು ತೆರೆದಿಟ್ಟಿರುವ ಬಗೆ.
  ಲೇಖಕಿಗೆ ಅಜೆಂಡಾ ಹಾಕಲು ನಾವೆಷ್ಟರವರು ಆದರೂ ಆಗ್ರಹಿಸಲು ನಾವೇ ಸರಿ. 🙂 ನೀವು ಬರೆದ ಹಾಗೆ ನನ್ನ ಓದಿನ ಅಗತ್ಯಗಳೂ ನಿತ್ಯನೂತನವಾಗುತ್ತಲೇ ಇವೆ. ಎಷ್ಟೊಳ್ಲೆಯ ಗ್ರಹಿಕೆಗಳನ್ನು ಅಕ್ಷರಕ್ಕಿಳಿಸಿದ್ದೀರಿ ಗೊತ್ತಾ.
  ’ಅಪ್ಪಿ ಪಾಯಸದ ಜೊತೆಜೊತೆಗೆ ಗರಂ ಮಸಲಾ ಸರಿಯಾಗಿ ಜಡಿದ ಪಲಾವನ್ನೂ “is a beautiful musing. 🙂

  ಪ್ರೀತಿಯಿಂದ
  ಸಿಂಧು

 2. ನಮಸ್ಕಾರ.

  ನಾನೂ ವೈದೇಹಿಯವರ ಪುಟ್ಟ ಅಭಿಮಾನಿ. ಅವರ ಕಥೆಗಳೇ ನನ್ನ ಕಥಾಸಂಕಲನಕ್ಕೆ ಸ್ಪೂರ್ತಿಯಾಗಿತ್ತು. ಅವರು ಬಳಸಿದ ಗಟ್ಟದಕೆಳಗಿನ ಭಾಷಾ ಶೈಲಿ ನನ್ನೊಳಗಿನ ಕಥೆಗಾರ್ತಿಯನ್ನು ಹುಟ್ಟಿಹಾಕಿದ್ದು ಮಾತ್ರ ಸುಳ್ಳಲ್ಲ. ಅವರ ಹೆಚ್ಚಿನ ಕಥೆಗಳೆಲ್ಲಾ ನನಗೆ ಬಹು ಮೆಚ್ಚುಗೆಯಾಗಿದ್ದರೂ ತುಂಬಾ ಇಷ್ಟಪಟ್ಟ ಕಥೆಯೆಂದರೆ “ಹಕ್ಕಿಲ್ಲದವರು” (ಸಮಾಜ ಶಾಸ್ತ್ರಜ್ಞೆಯ ಟಿಪ್ಪಣಿಯಿಂದ ಸಂಕಲನದಲ್ಲಿದೆ). ಇದರಲ್ಲಿ ಬರುವ ಸಿರಿಯ ಪಾತ್ರ ಹಲವಾರು ದಿನಗಳವರೆಗೂ ನನ್ನ ಕಾಡಿದ್ದಿದೆ. ಹೆಣ್ತತನದ ಮಾರ್ದವತೆ, ಅದರೊಳಗಿನ ಸೂಕ್ಷ್ಮತೆಯನ್ನು ಸಮರ್ಥವಾಗಿ ಹಿಡಿದಿಡುವಲ್ಲಿ ಅವರು ಬಹು ಸಮರ್ಥರು.

  ನಿಮ್ಮ ಸೂಕ್ಷ್ಮ ನೋತ, ಅವರ ಕಥೆಗಳೊಳಗೆ ನೀವು ಕಂಡ ಬಿಂಬ, ಪ್ರತಿಬಿಂಬ ನನಗೆ ಬಹು ಇಷ್ಟವಾಯಿತು.

  ಧನ್ಯವಾದಗಳು.

 3. Balu said

  ಒಬ್ಬ ಲೇಖಕನಲ್ಲಿ ಯಾವುದು “ನಿಜ”ವಾಗಿಯೂ ಪ್ರಜ್ನಾಪೂರ್ವಕ ಯಾವುದು ಅಲ್ಲ ಎಂಬುದನ್ನು ತಿಳಿದುಕೊಳ್ಳುವುದು ಅಸಾಧ್ಯ ಮತ್ತು ಅಪ್ರಸ್ತುತ. ಹಾಗೆ ಅನ್ನಿಸುವುದಿಲ್ಲ ಅನ್ನುವುದೂ ವೈದೇಹಿಯ craftನ ಒಂದು ಭಾಗ.
  – ಸರಿ ಯಾದ ಮಾತು.
  ವೈದೇಹಿ ಅವರ ಕಥೆಗಳಲ್ಲಿ ನಾವು ನಮ್ಮನ್ನು, ನಮ್ಮ ಸುತ್ತಲನ್ನು ಕಂಡು ಕೊಳ್ಳಬಹುದು, ಆದ್ದರಿಂದ ಅದು ಆಪ್ತ ಆಗುತ್ತಾ ಹೋಗುತ್ತದೆ. ನನಗೆ ಪರಿಚಯವಿದ್ದ ಸಮಾಜದ ಕಥೆ ಆದ್ದರಿಂದ ಇಷ್ಟವಾಯಿತೋ ಏನೋ ಗೊತ್ತಿಲ್ಲ.
  ಮತ್ತೆ ಈಗ ಘಟ್ಟದ ಮೇಲೆ, ಕೆಳಗೆ ಅಂಥಹ ವ್ಯತ್ಯಾಸ ಇಲ್ಲವಾಗುತ್ತಿದೆ. ಕೊಪ್ಪ, ಶೃಂಗೇರಿ, ತೀರ್ಥಹಳ್ಳಿ .. ಶಿವಮೊಗ್ಗ ಗಳಲ್ಲಿ ಓದು ಮುಗಿಸಿರುವ ಹುಡುಗ ಹುಡುಗಿಯರೇ ಇಲ್ಲ, ಎಲ್ಲ ಬೆಂಗಳೂರು ಸೇರಿದ್ದಾರೆ.

  ಲೇಖಕಿ ಬಗ್ಗೆ ಅತ್ಯಂತ ಒಳ್ಳೆಯ ಹಾಗು ಸಮಯೋಚಿತ ಲೇಖನ. ಕೊನೆಯ ಸಾಲುಗಳು ಚೆನ್ನಾಗಿದೆ.

 4. sugata said

  tumbha ishta aytu. neevu jaasthi baribeku. i hope you are working on the foreword for msp’s book. it has been delayed by a month. so you have time.

 5. usha said

  very nice piece u have written.
  I remember reading vaidehi when i was in my BA days. She was one who can write about most radical things without being sloganish and loud, who can capture the world of women with such sensitivity and profoundness …many of her characters made me go back to…grand mothers, aunts, women i have met in my work, friends….she gives a language to feelings and thoughts u are so familiar but unable to say…
  beautiful piece, keep writing

  usha

 6. suresh kota said

  ನೀವೂ ಲಾಯ್ಕ್ ಬರೀತ್ರಿ ಮಾರಾಯ್ರೆ

 7. ಬಸವರಾಜು said

  ವೈದೇಹಿ… ಸಿಂಪ್ಲಿ ಬ್ಯುಟಿಫುಲ್. ಸುಗತರವರು ಹೇಳಿದ್ದಕ್ಕೆ ನನ್ನ ಸಹಮತವಿದೆ. ನೀವು ಇನ್ನೂ ಜಾಸ್ತಿ ಬರೀಬೇಕು.

 8. Guru said

  ಲೇಖನ ಇಷ್ಟವಾಯಿತು. ಚೆನ್ನಾಗಿದೆ.
  ಒಂದೇ ಒಂದು ಕಾಮೆಂಟ್. ನೀವು ಹೇಳುವ “ಓದಿನ ಅಗತ್ಯ”ಕ್ಕೆ ಲೇಖಕ ಸ್ಪಂದಿಸಬೇಕು ಎನ್ನುವುದಕ್ಕೆ ನನ್ನ ಸಹಮತವಿಲ್ಲ. ಪ್ರತಿಯೊಬ್ಬ ಕತೆಗಾರ/ರ್ತಿ (ನಿ) ಗೂ ಒಂದು ಕಥಾಲೋಕ ಇರುತ್ತದೆ. ಈ ಲೋಕದ ಪಾತ್ರಗಳು, ಆ ಲೋಕದಲ್ಲಿದ್ದುಕೊಂಡೇ ಹೇಳುವ ಅವರ ಕಥೆಗೆ ನಾವು ರಿಲೇಟ್ ಆಗುವ ಪರಿ ಮತ್ತು ಆ ಲೋಕದೊಳಗೆ ನಮ್ಮನ್ನು ಬಿಟ್ಟುಕೊಳ್ಳುವ ಪರಿಯೇ ವೈದೇಹಿಯ ಕಥನ ಕಲೆಗೆ ಸಾಕ್ಷಿ. ಈ ದಕ್ಷಿಣ ಕನ್ನಡದ ಸಮಸ್ಯೆಗಳು, ಚರ್ಚ್ ದಾಳಿ ಮಧ್ಯಮವರ್ಗದ ಕತೆಗಾರ್ತಿಗೆ (ವೈದೇಹಿ, the writer ಅಲ್ಲ)ತಟ್ಟದೇ ಇರಬಹುದು. ಈ ರಾಜಕೀಯ, ಸಾಂಸ್ಕೃತಿಕ ಪಲ್ಲಟಗಳ ನಡುವೆಯೂ ಒಂದು neutral stand ಅನ್ನು ನಮ್ಮ ಮಧ್ಯಮ ವರ್ಗದ ಸಂಸಾರ ಅಪ್ರಜ್ಞಾಪೂರ್ವಕವಾಗಿ ತೆಗೆದುಕೊಂಡಿರುತ್ತದೆ. ಈ indifferenceನ ಕಾರಣಗಳು ಹಲವಾರಿರಬಹುದು. ಆದರೆ ಅದನ್ನು ಕಾಪಾಡಿಕೊಂಡು ಬಂದಿರುವುದೇ ಈ critical insider ನ trait. ಅದು ಅಪ್ರಜ್ಞಾಪೂರ್ವಕವಾಗಿ ಬಂದರೇ ಚೆನ್ನು. ’ಇದು ನನ್ನನ್ನು ತಟ್ಟಿದೆ, ಇದರ ಬಗ್ಗೆ ಕತೆ ಬರೆಯುತ್ತೇನೆ’ ಎಂದು ಬರೆದರೆ ’ನಟಿ’ ’ಕ್ರೌಂಚ ಪಕ್ಷಿಗಳು’ ಮೂಡಿಬರುತ್ತಿರಲಿಲ್ಲ.

  ಒಬ್ಬ ಲೇಖಕನಿಂದ ಏನನ್ನೂ ಅಪೇಕ್ಷಿಸದ ಓದು ಅನ್ನುವುದು ಇಲ್ಲವೇ ಇಲ್ಲ ಅನ್ನುವುದನ್ನು ನಾನೂ ಒಪ್ಪುತ್ತೇನೆ. ಆ ಅಪೇಕ್ಷೆಯನ್ನು ಸುಳ್ಳುಮಾಡುವುದರಲ್ಲಿ ಬರಹಗಾರನ ಗೆಲುವಿರುತ್ತದಂತೆ. ಆ ಮಾತನ್ನು ನೀವು ಒಪ್ಪುವುದಾದರೆ ಇದು ವೈದೇಹಿಯವರ ಮಟ್ಟಿಗೆ ಅಪ್ಪಟ ಗೆಲುವು.

  ಒಂದು ಒಳ್ಳೆಯ ಓದಿಗೆ ಥ್ಯಾಂಕ್ಸ್.

  ಗುರುಪ್ರಸಾದ

 9. Poornima said

  Nice writing

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: