ನಾವು ಪಾಪಿ ಹೆಂಗಸರು

ಈ ಸ್ಲಿಪ್ಡ್ ಡಿಸ್ಕ್ ಅನ್ನುವ ಹೇಳಲಾಗದ ಅನುಭವಿಸಲಾಗದ conditionನ (ಹೋಗಲಿ ಅಂದರೆ ರೋಗವೂ ಅಲ್ಲ!) ದೆಸೆಯಿಂದ ಕಂಪ್ಯೂಟರ್ ಹತ್ತಿರ ಸುಳಿಯುವುದು ವಿರಳ ಆಗಿಬಿಟ್ಟಿದೆ. ಮಲಗಿಕೊಂಡೇ ಇರುವವಳು ಟಿವಿ ಎಡಬಿಡದೆ ನೋಡಿ ಪೂರಾಪೂರಾ couch potato ಆಗಿಹೋಗದಿರಲಿ ಎಂದು ಬಯಸುವ ನನ್ನ ಕೆಲವು ಹಿತೈಷಿಗಳು ಪುಸ್ತಕಗಳನ್ನು ತಂದುಕೊಟ್ಟಿದ್ದಾರೆ. ಆಕಾರದ ಜೊತೆಜೊತೆಗೆ ಬುದ್ಧಿಯೂ ಆಲೂಗಡ್ಡೆಯ ಹಾದಿಯೇ ಹಿಡಿದರೆ ಕಷ್ಟ ಅಲ್ಲವಾ?

ಹೀಗೆ ನನ್ನ ಕೈ ಸೇರಿದ ಪುಸ್ತಕಗಳಲ್ಲಿ ನಮ್ ಇಸ್ಮಾಯಿಲ್ ಕೊಟ್ಟ “We Sinful Women” ಎಂಬ ಉರ್ದು ಸ್ತ್ರೀವಾದಿ ಕವನಗಳ ಅನುವಾದದ ಸಂಕಲರ ತುಂಬಾ exciting ಅನ್ನಿಸಿತು. ಬಹಳಷ್ಟು ಪದ್ಯಗಳು ಸಖತ್ತಾಗಿವೆ — ಕೆಲವು ಮುಲಾಜಿಲ್ಲದೆ ಹೊಡೆಯುವ ಶೈಲಿಯಲ್ಲಿ ಇನ್ನು ಕೆಲವು ನಯವಾಗಿ ಚುರುಕು ಮುಟ್ಟಿಸುವ ಧಾಟಿಯಲ್ಲಿ. ನನಗೆ ಈ ಪದ್ಯಗಳು ವಿಶೇಷವಾಗಿ ಇಷ್ಟ ಆಗುವುದಕ್ಕೆ ನಾನು ಅವುಗಳನ್ನು ಓದುತ್ತಿದ್ದ ಸಂದರ್ಭವೂ ಕಾರಣ ಇರಬಹುದು.

ಆಗಷ್ಟೆ ಬುರ್ಖಾ ಬಗ್ಗೆ ಕನ್ನಡ ಪ್ರಭದಲ್ಲಿ ಪ್ರಕಟವಾದ ತಸ್ಲೀಮಾ ನಸ್ರೀನ್ ಲೇಖನದ ಅನುವಾದದ ಸುತ್ತಲಿನ ವಿವಾದ ಶಿವಮೊಗ್ಗೆಯಲ್ಲಿ ಕೋಮು ಗಲಭೆಯನ್ನು ಸೃಷ್ಟಿಸಿತ್ತು. ಪತ್ರಿಕೆಗಳಲ್ಲಿ ಪ್ರಾನ್ಸ್, ಬೆಲ್ಜಿಯಮ್ ದೇಶಗಳಲ್ಲಿ ಸಂಪೂರ್ಣ ದೇಹ ಮುಚ್ಚುವ  ಬುರ್ಖಾವನ್ನು ನಿಷೇಧ ಮಾಡುವ ಪರ-ವಿರೋಧ ಚರ್ಚೆಗಳು ನಡೆಯುತ್ತಿದ್ದವು. ಒಟ್ಟಾರೆ ಮುಸ್ಲಿಂ ಮಹಿಳೆ ಅಂದರೆ ಬುರ್ಖಾ, ಬುರ್ಖಾ ಅಂದರೆ ಮುಸ್ಲಿಂ ಮಹಿಳೆ ಅನ್ನುವ ನಮ್ಮ ಮನಸ್ಸಿನೊಳಗಿನ ಕಪ್ಪು-ಬಿಳುಪು ಚಿತ್ರಣವನ್ನು ಇನ್ನಷ್ಟು ಗಟ್ಟಿ ಮಾಡುವ ವಿದ್ಯಮಾನಗಳು. ನಮ್ಮ ಸುತ್ತಮುತ್ತ ಓಡಾಡುವ ನಮ್ಮ ಸ್ನೇಹಿತೆಯರಾದ ಮುಸ್ಲಿಂ ಮಹಿಳೆಯರು, ನಾವು ಓದಿದ ಇಸ್ಮತ್ ಚುಗ್ತಾಯಿ ಕತೆಗಳು, ಮಾರ್ಜಾನೆ ಸತ್ರಾಪಿಯ “ಪರ್ಸಿಪೋಲಿಸ್”… ಇವೆಲ್ಲದರ ನಡುವೆಯೂ ನಮ್ಮ ತಲೆಯೊಳಗಿನ ಈ ಸರಳೀಕೃತ  ಸಮೀಕರಣ ಸಂಪೂರ್ಣ ಅಳಿಯುವುದೇ ಇಲ್ಲ. ಈ ಗಟ್ಟಿ ಬೇರಿನ ಪಿರಿಪಿರಿ ಕಳೆಗೆ ಪರಿವಾರಿಗಳು, ಮುಲ್ಲಾಗಳು ಎಲ್ಲರೂ ಗೊಬ್ಬರ ಹಾಕಿ ಪೋಷಿಸುವವರೇ!

ಸುಮಾರು ಅದೇ ಸಮಯಕ್ಕೆ ಮುನೀಜೆ ಜಹಂಗೀರ್  ನಿರ್ದೇಶಿಸಿದ ಪಾಕೀಸ್ತಾನದಲ್ಲಿ ಇರುವ ನಿರಾಶ್ರಿತ ಅಫ್ಘಾನ್ ಮಹಿಳೆಯರ ಬಗೆಗಿನ ಸಾಕ್ಷ್ಯಚಿತ್ರ NDTVಯಲ್ಲಿ ಪ್ರಸಾರವಾಯಿತು (ಅದರ ತುಣುಕು ಇಲ್ಲಿ ನೋಡಿ: http://www.youtube.com/watch?v=DH-T05WJtMM). ಅದರಲ್ಲಿ ರಾವಾ ಸಂಘಟನೆಯ (Revolution Association of the Women of Afghanistan) ಕಾರ್ಯಕರ್ತೆ ಹೇಳಿದ ಮಾತಿನ ಸಾರಾಂಶ ಹೀಗಿತ್ತು: “ಬುರ್ಖಾ ಒಂದು ತೆಗೆದುಬಿಟ್ಟರೆ ಮುಸ್ಲಿಂ ಮಹಿಳೆಯರ ಕಷ್ಟಗಳೆಲ್ಲಾ ಪರಿಹಾರ ಆಗಿಹೋಗುತ್ತದೆ ಅಂತ ಹೊರಗಿನ ಜನ ಅಂದುಕೊಳ್ಳುತ್ತಾರೆ. ಆದರೆ ಪರಿಸ್ಥಿತಿ ಅಷ್ಟು ಸರಳ ಅಲ್ಲ. ಇವರ ಬಡತನಕ್ಕೂ ಪರಿಹಾರ ಬೇಕಲ್ಲ…” ವೈದ್ಯಕೀಯ ವಿದ್ಯಾರ್ಥಿಯಾದ ಈಕೆ ಆಫ್ಘಾನಿಸ್ತಾನ್ ತಾಲಿಬಾನ್ ವಶವಾದ ಮೇಲೆ ಓದು, ದೇಶ ಎಲ್ಲಾ ಬಿಟ್ಟು ಹೊರಗೆ ಬಂದವಳು. ನಿರಾಶ್ರಿತ ಹೆಣ್ಣು ಮಕ್ಕಳಿಗೆ ಪಾಠ ಹೇಳಿಕೊಡುವ ಜೊತೆಜೊತೆಗೆ ಅವರಿಗೆ ಒಂದು ಔಷದೋಪಚಾರವನ್ನೂ ಮಾಡುತ್ತಾಳೆ. ಒಂದು ದಿನ ಡಾಕ್ಟರ್ ಆಗಿಯೇ ತೀರುತ್ತೇನೆನ್ನುವ ಛಲ ಇನ್ನೂ ಇದ್ದ ಹಾಗಿದೆ.

“We Sinful Women” ಸಂಕಲನದ ಪದ್ಯಗಳನ್ನು ಅನುವಾದ ಮಾಡಬಹುದಲ್ಲಾ ಅಂತ ಹೇಳಿದ್ದೂ ಇಸ್ಮಾಯಿಲ್ಲೇ. ನನಗೆ ಇಷ್ಟವಾದ, ಅನುವಾದವೇ ಅಸಾಧ್ಯ ಅನ್ನಿಸದ ಒಂದು ನಾಲಕ್ಕು ಪದ್ಯಗಳನ್ನು ಅನುವಾದ ಮಾಡಿದೆ. ಭಾಷೆ ಮತ್ತು ಸಂಸ್ಕೃತಿ ಒಂದಕ್ಕೊಂದು ಬೆಸೆದುಕೊಂಡಿರುತ್ತವೆ ಅಂತ ಮಾತಿನಲ್ಲಿ ಹೇಳಿಬಿಡುತ್ತೇವೆ. ಆದರೆ ಅದು ನಿಜವಾಗಿಯೂ ಅನುಭವಕ್ಕೆ ಬರುವುದು  ಅನುವಾದ ಮಾಡಲಿಕ್ಕೆ ಹೊರಟಾಗ. ಉದಾಹರಣೆಗೆ ನನಗೆ ತುಂಬಾ ಇಷ್ಟವಾದ “Chadur aur Deewari” ಪದ್ಯ ಅನುವಾದ ಮಾಡುವುದು ಹೇಗೆ ಅಂತ ಹೊಳೆಯಲಿಲ್ಲ. ಕನ್ನಡದಲ್ಲಿ “ಚಾದರ್” ಅನ್ನುವ ಪದ ಉರ್ದುನಲ್ಲಿ ಹೊಳೆಸುವಂತೆ ವಿವಿಧ ಅರ್ಥಗಳನ್ನು ಹೊಳೆಸುವುದಿಲ್ಲವೇನೋ ಅನ್ನಿಸಿತು. ಇನ್ನಷ್ಟು ಪ್ರಯತ್ನ ಮಾಡಿದರೆ ಮಾಡಬಹುದೇನೋ. After all, ಇದರ ಅನುವಾದವನ್ನು ಇಂಗ್ಲಷಿಗಿ ರುಕ್ಸಾನ ಅಹಮದ್ ಚೆನ್ನಾಗಿಯೇ ಮಾಡಿದ್ದಾರಲ್ಲ! ಈಗ ಸಧ್ಯಕ್ಕೆ ಮಾಡಿದ ನಾಲ್ಕು ಪದ್ಯವಳನ್ನು ಇಲ್ಲಿ ಲಗತ್ತಿಸಿದ್ದೇನೆ.

ಆಪೂರ್ಣ ಗಂಡಸಿನ ಜೊತೆ ಮಾತುಕತೆ

ಕೊನೆಗೂ ಪ್ರಯೋಗದ ಫಲಿತಾಂಶ ಕೈಸೇರಿದೆ:
ನಿನ್ನೆಲ್ಲ ಜಾಣ್ಮೆ, ಗತ್ತು,
ಚೆಂದದ ಗೈರತ್ತಿನ ಹಿಂದೆ
ನೀನೊಬ್ಬ ಸಣ್ಣ ಹುಡುಗ.

ಬಿದ್ದು ಅಳುವ ಹುಡುಗಿ,
ರೆಕ್ಕೆ ಹರಿದ ಚಿಟ್ಟೆ,
ಲಂಗರಿಗೆ ಕಟ್ಟಿಹಾಕಿದ ದೋಣಿ,
ಹಕ್ಕಿಪುಕ್ಕದ ಮೇಲೆ ಹಾರುತ್ತ
ಬಿಕ್ಕುತ್ತಿರುವ ಹತಾಶೆ
ಕಂಡರೆ ನಿನಗದೇನೋ ಕೆಟ್ಟ ಖುಶಿ.

ಚೆಲ್ಲುಚೆಲ್ಲಾಟದ ಬೆನ್ನು ಹತ್ತಿ
ಘನತೆಯ ಗಾಳಿಗೆ ತೂರುವವನು.

ನಿನ್ನೊಡನೆ ನನ್ನ ಚಿಂತೆ ಚಿಂತನೆಗಳ ಹಂಚಿಕೊಂಡೇನು ಹೇಗೆ?
ನಿನ್ನೊಡನೆ ಅರ್ಥಗಳ ಅರಸುತ್ತಾ ಹೊರಟೇನು ಹೇಗೆ?

ನೀನು ನನಗಿಂತ ತುಂಬ ಚಿಕ್ಕವನು.
ಚಿಕ್ಕವನಾಗಿಯೇ ಇರುವವನು.
ನಾನು ನನ್ನ ಮುತ್ತಜ್ಜನ ಅಮ್ಮ.

ಇಷ್ರತ್ ಆಫ್ರೀನ್

ಇವಳ ನಗು

ಕಾರ್ಗಲ್ಲ ಬೆಟ್ಟದ ಚಿಮ್ಮುವ ಬುಗ್ಗೆಯ
ಜೊತೆಜೊತೆಗೆ ಇವಳ ಹಿಗ್ಗಿನ ನಗು.
ಐಶ್ವರ್ಯ, ಅಂತಸ್ತಿನ ಆರ್ಭಟ ಇಲ್ಲ.
ಇವಳೊಳಗೆ ಗುಪ್ತಗಾಮಿನಿ ಸ್ವೇಚ್ಛೆ.
ಮೈಯ್ಯೆಲ್ಲ ಕಿವಿಯಾದ ಈ ಭೂಮಿಯ
ಹೊಸ ಯಜಮಾನರಿಗೆ ಕೇಳುವುದಿಲ್ಲ
ಇವಳ ಸುಖದ ನರಳಿಕೆ.
ಮಾರುಕಟ್ಟೆಯಲ್ಲಿ ಎಲ್ಲವೂ ಬಿಕರಿಗಿದೆ
ಇವಳ ಸುಖದ ಉತ್ತುಂಗವ ಬಿಟ್ಟು.
ಇವಳೂ ಮಾರಲಾರದ ಆ ಆನಂದ
ಇವಳಿಗಷ್ಟೇ ಗೊತ್ತು.

ಕಣಿವೆಯಾಳದ ತುಡುಗು ಗಾಳಿಯೆ,
ಬಾ, ಇವಳ ತುಟಿಗೆ ತುಟಿಯೊತ್ತು.

ಅಗೋ, ಅಲ್ಲಿ ಓಡುತ್ತಿದ್ದಾಳೆ ಬಿರಿಬಿಟ್ಟ ಕೂದಲವಳು
ಸುಂಟರ ಗಾಳಿಯ ಸಂಗಡ ಇವಳ ಹೊಸ ಹಾಡು.

ಫಹ್ಮೀದಾ ರಿಯಾಜ್

ಸೆರೆಮನೆ

ನೂರಾರು ಹೂಗಳರಳಿದ ತೋಟದಲ್ಲಿ ಕೂತವಳಿಗೆ
ಅಗೋ ಅಲ್ಲೊಂದು ಪಂಜರ ಕಾಣಿಸುತ್ತಿದೆ.
ಅದರ ತುಂಬೆಲ್ಲ ಒತ್ತೊತ್ತಾಗಿ ಜೋಲುಮುಖದ,
ಗುಡ್ಡೆ ಕಣ್ಣಿನ, ಬಿಕರು ಮಂಡೆಯ ಮನುಷ್ಯರು.

ಕೆಲವರು ಕೂತಿದ್ದರೆ, ಉಳಿದವರು ಅಡ್ಡಾಗಿದ್ದಾರೆ.

ಎಲ್ಲರಿಗೂ ಅದೇನೋ ಗಾಢ ಯೋಚನೆ.

ಕಾದಿರುವ ಶಿಕ್ಷೆಯ ಬಗ್ಗೆಯೋ,
ಮಾಡಿದ ಅಪರಾಧದ ಬಗ್ಗೆಯೋ,
ಪಂಜರದ ಹೊರಗೆ ಕೂತು ತಾವೆಷ್ಟು ಸ್ವತಂತ್ರ್ಯ
ಅಂತ ಬಿಗುವಿನಿಂದ ಬೀಗುವ ಮಂದಿಯ ಬಗ್ಗೆಯೋ.

ನೀಲ್ಮಾ ಸರ್ವರ್

ಬೆಳದಿಂಗಳ ಹೂವಿನ ಮರ

ನೆನ್ನೆ ರಾತ್ರಿ ಕನಸಲೋ ಎಂಬಂತೆ
ಮತ್ತೆ ನೆನಪಾಯಿತು
ತೋಟದ ಮೂಲೆಯ ಬೆಳದಿಂಗಳ ಹೂವಿನ
ಆ ಮರ.

ಬಿರುಬೇಸಿಗೆ ಮಧ್ಯಾಹ್ನ ಅದರ ನೆಳಲಲಿ
ಆಡಿ, ಕೊಂಬೆಯಲಿ ಜೀಕಿ,
ಹೂ ಮುಟ್ಟಿ ಓಡುತ್ತಿದ್ದ
ಆ ದಿನಗಳು.
ಕಾಂಡದ ತುಂಬ ನೂರಾರು ಮೊಳೆಗಳು
ಮೊಳೆ ಮಾತ್ರ ಮುಟ್ಟಬೇಡ!
ಎಂಬ ಕಟ್ಟೆಚ್ಚರಿಕೆ.

ಈ ಮರಕ್ಕೆ ರಕ್ಕಸನ ಕಾಟವಂತೆ.
ಜಾಣ ಮಾಂತ್ರಿಕ ಮಾಟ ಮಾಡಿ
ರಕ್ಕಸನ ಮರದೊಳಗೆ ಕಟ್ಟಿಟ್ಟು
ಮೊಳೆ ಹೊಡೆದಿಟ್ಟಿದ್ದಾನಂತೆ.
ಒಂದು ಮೊಳೆ ಎಳೆದರೆ ಸಾಕು
ಠಕ್ಕನೆ ಹೊರಬಂದು ಗಹಗಹಿಸಿ
ಹೂವು, ಎಲೆ, ಮನೆ,
ಅದರೊಳಗಿನ ಸಂಸಾರವನ್ನೆಲ್ಲಾ
ಬೆಂಕಿ ನಾಲಿಗೆ ಚಾಚಿ
ನುಂಗಿಬಿಡುತ್ತಾನಂತೆ.

ನನ್ನೊಳಗೆ ಬೆಳೆದುಬಿಟ್ಟಿದೆ
ಅಂತದೇ ಬೆಳ್ಳಿ ಹೊಳಪಿನ ಮರ.
ಇದರೆಲೆಗಳಿಗೆ ಗೊತ್ತು ನನ್ನೆಲ್ಲ ಗುಟ್ಟು.
ಹೂಹೂಗಳೂ ನನ್ನ ಗೆಳತಿಯರು.
ನನ್ನ ಮರದ ತುಂಪು ನೆರಳು
ನನಗದೆಷ್ಟು ಅಚ್ಚುಮೆಚ್ಚು.
ಈಗಲೂ ಅದರೊಳಗೆ ಇದ್ದಾನೆ
ಅದೇ ರಕ್ಕಸ.
ಮೊಳೆ ಮುಟ್ಟಿಯೇನೆಂಬ
ಅದೇ ಭಯ.
ಅವ ಮತ್ತೆ ಹೊರಬಂದರೆ
ಮೂಸದೆ ಬಿಡಬಹುದು ಹೂ, ಎಲೆ.
ಆದರೆ ಉರಿದೀತು ನನ್ನ ಮನೆ.
ಉಳಿದೀತು ಬರಿ ಬೂದಿ.

ಜೆಹ್ರಾ ನಿಗಾಹ್

P.S.: ಈ ಪುಸ್ತಕ ಓದಿದ ಮೇಲೆ ಮುಸ್ಲಿಂ ಮಹಿಳೆಯರ ಸ್ತ್ರೀವಾದೀ ಪದ್ಯಗಳನ್ನು ಇನ್ನಷ್ಟು ಓದಬೇಕು ಅನ್ನಿಸುತ್ತಿದೆ. ಈ ಥರದ ಬೇರೆ ಸಂಕಲನಗಳ ಬಗ್ಗೆ ಯಾರಿಗಾದರೂ ಗೊತ್ತಿದ್ದರೆ ದಯವಿಟ್ಟು ಹೇಳಿ.

Advertisements

8 ಟಿಪ್ಪಣಿಗಳು »

 1. chetana Teerthahalli said

  ಒಳ್ಳೆಯ ಕವಿತೆಗಳಿಗೆ ಧನ್ಯವಾದ. ನೆಟ್ ನಲ್ಲಿ ಮುಸ್ಲಿಮ್ ಮಹಿಳೆಯರ ಸಾಕಷ್ಟು ಸ್ತ್ರೀವಾದಿ ಕವಿತೆಗಳನ್ನು ಓದಿ, ಬರೆದುಕೊಂಡಿದ್ದಿದೆ. ಒಟ್ಟಾರೆ ಸಂಕಲನ ಗೊತ್ತಿಲ್ಲ. ದಯವಿಟ್ಟು ಇಡಿಯ ಸಂಕಲನವನ್ನು ಅನುವಾದಿಸಿ.
  ಬೇಗ ಎದ್ದು ಓಡಾಡುವ ಹಾಗಾಗಿ
  ನಲ್ಮೆ,
  ಚೇತನಾ ತೀರ್ಥಹಳ್ಳಿ

 2. ಉತ್ತಮ ಕವಿತೆಗಳನ್ನು ಅನುವಾದಿಸಿ ನಮಗೆ ನೀಡಿದ್ದಕ್ಕಾಗಿ ನನ್ನಿ.ನಿಮ್ಮ ಆರೋಗ್ಯ ಸುಧಾರಿಸಲಿ.

 3. ನಿಮ್ಮ ಅನುವಾದ ತುಂಬಾ ಚೆನ್ನಾಗಿದೆ. ಕವಿಯ ಸಂವೇದನೆಗಳನ್ನು ನೀವೂ ಅನುಭವಿಸಿ ಅನುವಾದಿಸಿದ್ದಿರಿ. ನಿಮ್ಮಿಂದ ಒಳ್ಳೆಯ ಅನುವಾದಗಳು ಇನ್ನಷ್ಟು ಬರಲಿ ಎಂಬ ಹಾರೈಕೆ.

 4. ತುಂಬಾ ತುಂಬಾ ಚೆನ್ನಗಿರೊ ಕವನಗಳು.
  ಉಳಿದ ಅನುವಾದಗಳಿಗೊಸ್ಕರ ಕಾದಿರುವೆ.
  ದಯವಿಟ್ಟು ಅನುವಾದಿಸಿ.
  ಆದಷ್ಟು ಬೇಗ ನಿಮ್ಮ ಆರೋಗ್ಯ ಸುಧಾರಿಸಲಿ ಎಂಬ ಹಾರೈಕೆಯೊಂದಿಗೆ…

 5. ms said

  how abt using the word ‘koudi’ for Chaddar??
  Get well soon!!!
  anuvaadisida padyagaLu chennagive
  🙂
  malathi S

  • Bageshree said

   Hmmm… ಕೌದಿ work ಆಗಬಹುದು. Try ಮಾಡ್ತೀನಿ. ಓದಿದ, quick recovery ಹೇಳಿದ ಎಲ್ಲರಿಗೂ ಧನ್ಯವಾದಗಳು! 🙂

 6. Tharakeshwar said

  hi,
  Translations have come out well. Wish you the speedy recovery.

 7. Umapathy. D said

  Atyanta samvaedanasheela baravaNige. Ishtu dina haege miss madkonDe EE bloganna anta. Anuvaadadalli padyagaLu ishta aadavu.
  Chadara shabdada anuvaada kannaDada jaayamaanakke ogguvudu kashtavae sari. Ondu arthakoashada prakaara chadarada artha- A cloth used asa head covering (and veil and shawl) by Muslim and HIndu women.

  KannaDada Koudi athava Duppati chadarakke samvaadi aagalaaravu. Ee sandarbhadalli Rajinder Singh Bedi avara atyanta hesaruvaasi urdu kruti ‘ Ek Chadar Maili si’ nenapige banthu. Adae hesaralli oLLeya hindi cinema kooDa aagide. Chadara shabdavannu Bedi krutiya arthadalli ittu noaDidare Koudi athava Duppatige avakaashavae illa.

  Koodalu seeLuva kasarattu ennisidare kshamisi.
  Umapathy.D

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: