ಪಾಪಿ ಹೆಂಗಸರು…. ಇನ್ನೊಂದಷ್ಟು

ಇವೆಲ್ಲವೂ ಇಷ್ರತ್ ಆಫ್ರೀನ್ ಪದ್ಯಗಳು. ಕೊನೆಯ ಎರಡು ಪದ್ಯ We Sinful Women ಸಂಗ್ರಹದಿಂದ ಆರಿಸಿದ್ದಲ್ಲ.  ಅನುವಾದಿಸಿದ ಮೂರು (ತುಟಿಗಳು, ಪ್ರಶ್ನೆ ಮತ್ತು ಕ್ರಾಂತಿ ಬೇಡದ ಊರು) ಮೂಲದಲ್ಲಿ ಗಝಲ್ಲುಗಳು. ಆದರೆ ಗಝಲ್ಲಿನ ಕಟ್ಟುನಿಟ್ಟಾದ metrical ವಿನ್ಯಾಸ ಈ ಅನುವಾದದಲ್ಲಿ ಇಲ್ಲವಾದ್ದರಿಂದ ಅದನ್ನು ನಾನು ಗಝಲ್ಲಂತ ಹೆಸರಿಟ್ಟು ಕರೆಯುವ ಧೈರ್ಯ ಮಾಡಿಲ್ಲ.  ಗಝಲ್ಲುಗಳು ಸಾಕಿ, ಶರಾಬ್ ಬಗ್ಗೆಯೇ ಇರಬೇಕಿಲ್ಲ, ಯಾವ ವಿಚಾರದ ಬಗ್ಗೆಯಾದರೂ ಬರೆಯಬಹುದು. ಆದರೂ, ನಾನು ಕೇಳುತ್ತಾ ಬೆಳೆದ ಗುಲಾಮ್ ಅಲಿ, ಮೆಹದಿ ಹಸನ್ ಹಾಡಿದ ಚೆಂದದ ಗಝಲ್ಲುಗಳಲ್ಲಿ ಕೆಂಪು ತುಟಿಯ ನಾಚುವ ನೀರೆಯರ ಓಡಾಟವೇ ಹೆಚ್ಚಾದ್ದರಿಂದ ನನಗೆ ಗಝಲ್ಲೆಂದ ಕೂಡಲೇ ಮೊದಲು ನೆನಪಾಗುವುದು ಒನಪು ಒಯ್ಯಾರದ ಹುಡುಗಿಯರೇ! ಆದ್ದರಿಂದಲೇ ಗಝಲ್ಲುಗಳಲ್ಲಿ ಸಾಮಾನ್ಯ ಬರುವ ಸಂಕೇತಗಳನ್ನು ಇಲ್ಲಿ ತಿರುಗಾಮುರುಗಾ ಮಾಡಿರುವುದು interesting ಅನ್ನಿಸಿತು.

ಆರ್ಪಣೆ

ನಾನು

ಅಪ್ಪನಿಗಿಂತ ಎತ್ತರ ಬೆಳೆದೆ.

ನನ್ನಮ್ಮ ಗೆದ್ದಳು.

ನನ್ನ ಹಿರಿಯರ ಮೊದಲ ಹರಕೆ

ಕತ್ತಲೆಯ ಬಸಿರಿಂದ

ಹುಟ್ಟಿತು ಪುಟ್ಟ ಬೆಳಕಿನ ಕಿರಣ.

ಉಷೆಯ ಮೃದು ಬೆರಳುಗಳನ್ನು ಮೆಲ್ಲನೆ ಬಿಡಿಸಿ

ರೇಖೆಗಳ ಓದಿದ ರಾತ್ರಿ

ಬೀಸುವ ಗಾಳಿಯ ಕಿವಿಗೇನೋ ಉಸುರಿದಾಗ

ಮಂಜು ಕಣ್ಣೀರಿಟ್ಟಿತು.

ಚಂದ್ರ ತಾರೆಯರು ನಕ್ಕು ಅವರವರ ದಾರಿ ಹಿಡಿದರು.

ಪಕ್ಕನೆ ತಿರುಗಿ ನನ್ನನ್ನೊಮ್ಮೆ

ನಿರುಕಿಸಿ ನೋಡಿದಳು ನನ್ನಮ್ಮ.

ಎನೋ ಸನ್ನೆ, ಒಂದೇ ಮಾತು:

“ಒಹ್! ಹೆಣ್ಣಾ?”

ನನ್ನ ಈ ಕಿವಿ ಕೇಳಿದ ಮೊಟ್ಟಮೊದಲ ಮಾತಲ್ಲಿ

ಅದಷ್ಟು ದುಃಖ ತೊಟ್ಟಿಕ್ಕುತ್ತಿತ್ತು.

ನನ್ನ ಮೊದಲ ಉಸಿರಲ್ಲಿ ಸೋಲಿನ

ವಿಷ ಬೀಜ ಬಿತ್ತಿಯೇ ಬಿಟ್ಟಿತ್ತು.

“ಒಹ್! ಹೆಣ್ಣಾ?

ಹೆಣ್ಣು!”

“ಹೆಣ್ಣಾದರೆ ಅವಳ ಹಣೆಬರಹ ಚೆನ್ನಾಗಿರಲಿ ಅಂತ ಪ್ರಾರ್ಥಿಸಿ.”

ಕಲ್ಲಿನಲ್ಲಿ ಕೊರೆದಿಟ್ಟ ಹಾಗೆ ನನ್ನ ಕಿವಿಯಲ್ಲಿ ನಿಂತುಬಿಟ್ಟಿದೆ

ನನ್ನ ಹಿರಿಯರ ಈ ಮೊದಲ ಹರಕೆ.

ತುಟಿಗಳು

ಹಸಿವ ಕಹಿ ಒಗರ ಲೇಪ ಥಂಡಿ ತುಟಿಗಳು

ಒಣಗಿ ಒಡೆದು ರಕ್ತ ಜಿನುಗಿ ಹಳದಿ ತುಟಿಗಳು.

ಒಡೆದ ಬಳೆ ಬರಫ್ ದೇಹ ಸಿಡಿವ ಪ್ರಾಯ

ಹಸಿರು ದೇಹ ಕಲ್ಲು ಕಣ್ಣು ನೀಲಿ ತುಟಿಗಳು.

ಬರಿ ಅಂಗಳ ಒಂಟಿ ಹೆಣ್ಣು ಸರಿದ ಕಾಲವು

ಖಾಲಿ ಕಣ್ಣು ಒದ್ದೆ ಸೆರಗು ತೇವ ತುಟಿಗಳು.

ಕಟು ಪದಗಳ ಹಾಲಾಹಲ ನೆರೆಗೆ ಸಿಲುಕಿದ

ಪಕಳೆ ಎದ್ದು ಎದ್ದು ನುಜ್ಜುಗುಜ್ಜು ತುಟಿಗಳು.

ವಿಷವ ಬಯಸಿ ಹಾಲು ಜೇನು ಏನೂ ಬೇಡದ

ಹಟ ತೊಟ್ಟ ತಲಹರಟೆ ಚಂಡಿ ತುಟಿಗಳು.

ಮನದಲಿ ತಳಮಳ ಬಾಯಲಿ ಕಟಿಪಿಟಿ

ಚೆಂದ ಮೃದು ಮುದ್ದು ಇದೋ ಕೆಂಪು ತುಟಿಗಳು.

ಈ ಥರ ಬಡಬಡ ಮಾತಾಡಿದರೆ ಜನ ಏನಂದಾರು?

“ಹುಡುಗೀರು ತುಟಿಪಿಟಕ್  ಅನ್ನದಿದ್ದರೇ ಚೆನ್ನು!”

ಪ್ರಶ್ನೆ

ಈ ಹುಡುಗಿಯರು ಅಮ್ಮಂದಿರ ಹಣೆಬರಹದ್ದೇ ಜಾಡು ಹಿಡಿಯೋದು ಯಾಕೆ?

ದೇಹ ಬಂಜರು ಮರಳಗಾಡು, ಕಣ್ಣು ಆಳದ ನೀಲಿ ಸಾಗರ. ಅದು ಹೇಗೆ?

ಹೆಂಗಸರು  ಕಬ್ಬಿಣದ ಪೆಟ್ಟಿಗೆಯಲ್ಲಿ ಬಂಗಾರ ಭದ್ರ  ಇಡೋಡು ಯಾಕೆ?

ದುಃಖಗಳ ಭಾರಿ ಗಂಟನ್ನ ಬಿಟ್ಟು ಹೋಗೋದು ಯಾರ ಹೆಸರಿಗೆ?

ಅಂಗೈ ಮೇಲೆ ಜಮ್ಮಂತ ಕೂತು ಪೂಜೆ ಮಾಡಿಸಿಕೊಳ್ಳಬೇಕಾದವರು

ಮಲ್ಲಿಗೆಯಂತ ಬೆರಳುಗಳ ಗಟ್ಟಿ ಮುಷ್ಟಿ ಕಟ್ಟಿ ಕಲ್ಲು ಹಿಡಿದಿರೋದು ಯಾಕೆ?

ಹಸಿವಿಂದ ಚುರುಗುಡುವ ಹೊಟ್ಟೆ ಹೊತ್ತು ಬರಿಗಾಲಲಿ ನಡೆವ ಮಂದಿ

ತಲೆಯ ಮೇಲಿನ ಚಾದರ ಜಾರದಂತೆ ಜಗ್ಗಿ ಹಿಡುಯುವುದು ಯಾಕೆ?

ಮುಚ್ಚಿದ ಬಾಗಿಲುಗಳ ಹಿಂದೆ ಆಗಬಾರದ್ದು ಆಗಿಯೇ ಹೋದಾಗ

ಈ ಗೋಡೆಗಳಿಗೆ ಎಲ್ಲಾ ಗುಟ್ಟು ಗೊತ್ತಿದೆ ಅನ್ನಿಸುವುದು ಯಾಕೆ?

ಮಿಲನದ ನಂತರ ಇಣುಕಿ ಹೊಳೆವ ಬೆಳಗಿನ ಸೂರ್ಯ ಕಿರಣವೆ,

ರಾತ್ರಿ ಚೂಪು ಕತ್ತಿಗಳ ಝಳಪಿಸುತ್ತಲೇ ಬರೋದು ಯಾಕೆ?

ಕ್ರಾಂತಿ ಬೇಡದ ಊರು

ಈ ಊರಿಗೆ ಇನ್ನು ಕ್ರಾಂತಿಯ ಅವಶ್ಯಕತೆ ಇಲ್ಲವಂತೆ.

ಕನ್ನಡಿಗಳಿಗೆ ಕಡಿಮೆ ಇಲ್ಲ, ಆದರೆ  ಕಲ್ಲುಗಳೇ ಉಳಿದಿಲ್ಲ.

ನನ್ನ ಗೆಳೆಯರೆಲ್ಲ ಅವರವರ ಶಿಲುಬೆ ಏರಿಯಾಗಿದೆ

ಉಳಿದವರ ಭುಜಗಳ ಮೇಲೆ ತಲೆಗಳೇ ಮಾಯ.

ಸಾಗರದಾಳವ ಅರಸುತ್ತ ದಂಡೆಗೆ ಬಂದು ಬಿದ್ದಿದ್ದೇವೆ.

ಈಗ ನೋಡಿದರೆ ಬರೀ ಮರಳಿದೆ, ಸಾಗರವೇ ಕಾಣುತ್ತಿಲ್ಲ.

ಇನ್ನೂ ಜನರು ಕವಣೆ ಹಿಡಿದು ತಿರುಗುತ್ತಿರುವುದು ಯಾತಕ್ಕೆ

ಆಜರ (*) ಈ ಊರು ಬಿಟ್ಟು ಯಾವುದೋ ಕಾಲ ಆಯಿತಲ್ಲ.

ಬದಲಾಗುತ್ತಿರುವ ಋತುಗಳು ಮುಖ ಮುಚ್ಚಿ ಅಳುತ್ತಿವೆ.

ಯಾಕಂದರೆ ಬೆಳಕು ಬಟ್ಟೆ ಬಿಚ್ಚಿ ಎಸೆದು ಬೆತ್ತಲೆ ನಿಂತುಬಿಟ್ಟಿದೆ.

(*ರುಕ್ಸಾನ ಅಹ್ಮದ್ ತಮ್ಮ ಇಂಗ್ಲಿಷ್ ಅನುವಾದದಲ್ಲಿ ಅಜರ್ ಬಗ್ಗೆ ಕೊಟ್ಟ footnote ಹೀಗಿದೆ: “Aazar was hounded for sculpting which is forbidden in Islam was hounded for sculpting which is forbidden in Islam.”  ಆಜರ್ ಬಗ್ಗೆ ಇಸ್ಮಾಯಿಲ್ ನನಗೆ ಹೇಳಿದ ಮಾಹಿತಿ ಇದು: “Aazar ಅಂದ್ರೆ ಅಬ್ರಾಹಂ ಅಥವಾ ಮುಸ್ಲಿಮರು ಹೇಳುವ ಇಬ್ರಾಹಿಂನ ತಂದೆ. ಈತನನ್ನು azar ಎಂದೂ ಕರೆಯಲಾಗುತ್ತದೆ. ಈತ ವಿಗ್ರಹಗಳನ್ನು ಕೆತ್ತುವವನು. one and onlyಯೂ ನಿರಾಕಾರನೂ ಆದ ದೇವರ ಬಗ್ಗೆ ಇಬ್ರಾಹಿಂಗೆ ತಿಳಿದ ನಂತರ ತಂದೆ ಕೆತ್ತುತ್ತಿದ್ದ ವಿಗ್ರಹಗಳನ್ನು ಆಟದ ಗೊಂಬೆಗಳಂತೆ ಬಳಸುತ್ತಿದ್ದ ಎಂಬುದು ಕಥೆ.”)

ಗುಲಾಬಿ ಮತ್ತು ಹತ್ತಿ

ಗದ್ದೆಯಲ್ಲಿ ಕೆಲಸ ಮಾಡುವ ಹುಡುಗಿಯರು.

ಬಂಗಾರದಂತ ಮೈಯ್ಯನ್ನು

ಹದವಾಗಿ ಬೇಯಿಸುವ ಹಳದಿ ಸೂರ್ಯ.

ರಾತ್ರಿ ತಲೆಗೆ ಕೊರೆವ ದಿಂಬಿನ ಆಸರೆ.

ಬೆಳಗ್ಗೆ ನೆತ್ತಿಯ ಮೇಲೆ ಮಿರಿಮಿರಿ ಬಿಸಿಲು.

ಚೆನ್ನ.

ಹಸಿರು ಹುಲ್ಲಿನ ಬದಿ ಅಮೃತ ಶಿಲೆಯ ಹಾಸಿನ ಮೇಲೆ ಕೂತು

ಕೂದಲಲ್ಲಿ ಮಲ್ಲಿಗೆ ಮೊಗ್ಗು ಹೆಣೆಯುತ್ತಾ

ಗುಲಾಬಿಯ ನೂರು ಬಣ್ಣ, ಸುಗಂಧದಲ್ಲಿ ಮೈಮರೆತ

ಕಡೆದಿಟ್ಟ ಶಿಲ್ಪದಂತಹ ಸುಂದರಿಯರಿಗಿಂತ

ಅದೆಷ್ಟು ಭಿನ್ನ.

ಬಿಸಿಲು ಕೋಲುಗಳ ಕಟಾವು ಮಾಡುವ

ಈ ಹರೆಯದ ಹುಡುಗಿಯರು

ಕನ್ನಡಿಯ ಕಣ್ಣ ತಪ್ಪಿಸಿಕೊಂಡು ತಿರುಗುವವರು.

ಹುಚ್ಚೆಬ್ಬಿಸುವ ಗುಲಾಬಿಯ ಬಣ್ಣ

ಘಮಘಮಗಳಿರದ ಲೋಕದ

ಹೂವ ಬಿಡಿಸುವ ಈ ಹುಡುಗಿಯರು

ಹೂವ ಮುಡಿಯುವುದಿಲ್ಲ.

ಅವರ ಸೆರಗ ತುಂಬ ಸಾಸಿವೆ ಹೂಗಳ  ಕಡು ವಾಸನೆ.

ಕಣ್ಣಲ್ಲಿ ಹತ್ತಿ ಹೂವಿನ ಹೊಳಪು.

ಮಧ್ಯಂತರ

ಪ್ರೀತಿ ವಿರಹಗಳ ನಡುವಿನ ಭಾವಕ್ಕೂ ಒಂದು ಕಾಲ ಉಂಟು.

ನಿನ್ನ ಶಾಂತ, ಯಾವುದೋ ಧ್ಯಾನದ ಕಣ್ಣುಗಳ ಹಾಗೆ,

ನನ್ನ ಅರ್ಧ ಬರೆದ ಕವಿತೆಯ ಹಾಗೆ,

ಒಡೆದು ಹೋದ ಹಾಲಿನ ಖಾಲಿ ಲೋಟದ ಹಾಗೆ,

ಕುಂಬಾರನ ಚಕ್ರದ ಮೇಲೆ ಅರ್ಧ ಅರಳಿದ ಮಡಿಕೆಯ ಹಾಗೆ,

ಇನ್ನೊಂದು ಗ್ರಹದ ಆರು ತಿಂಗಳ ಸುಧೀರ್ಘ ರಾತ್ರಿಯ ಹಾಗೆ,

ಕಾವ್ಯ ಹುಟ್ಟುವ ಚೆಂದದ, ನೋವಿನ ಗಳಿಗೆಯ ಹಾಗೆ,

ಕುಡಿದ ಮತ್ತಿನ ಕನಸಿನ ಕಾಮಕೇಳಿಯ ಹಾಗೆ,

ಧಮನಿಯಲ್ಲೋಡುವ ಗುಪ್ತ ಹಾಡಿನ ಖುಷಿಯ ಹಾಗೆ,

ಬೆಂಗಾಡು ಬಸಿರಿನ ಹಸಿರೊಡೆವ ಆಸೆಯ ಹಾಗೆ,

ಯಾರದೋ ಹೆಸರಲ್ಲಿ ಅಂಗೈಯ್ಯಲಿ ಹಬ್ಬಿದ ಮದರಂಗಿಯ ಹಾಗೆ,

ಮೃದು, ಸುಡುಸುಡು ಬೆರಳುಗಳು ತಣ್ಣನೆ ಕಣ್ಣ ಮುಚ್ಚಿದ ಹಾಗೆ,

ಸ್ವಪ್ನದಂತಹ ಮೊದಲ ಸ್ಪರ್ಷದ ಹಾಗೆ,

ಹೇಳುವುದಕ್ಕೋ, ಹೇಳಲಾರದ್ದಕ್ಕೋ ಆಡಿದ ಮಾತಿನ ಹಾಗೆ,

ಹರೆಯದ ಹುಡುಗಿಯ ಮೊದಲ ರಾತ್ರಿಯ ಭಯ ಪುಳಕದ ಹಾಗೆ,

ಈಗಷ್ಟೆ ಹಾಲು ಕುಡಿದು ಅಮ್ಮನೆದೆಯಿಂದ ತುಟಿ ಸರಿಸಿದ

ಕಂದಮ್ಮನ ಕಣ್ಣುಗಳ ಹಾಗೆ.

ಪ್ರೀತಿ ವಿರಹಗಳ ನಡುವಿನ ಭಾವಕ್ಕೂ ಒಂದು ಕಾಲ ಉಂಟು.

ಕದನದ ನಂತರ ಹಾಳು ಬಿದ್ದ ಊರನ್ನೂ ನೋಡುತ್ತಾ

ಕೂತ ಮುದುಕನ ಹಾಗೆ,

ಒಂದಷ್ಟು ಎತ್ತು, ಹರಿಯುವ ನೀರು,

ನೆಲಸಮವಾದ ಒಳ್ಳೆ ಫಸಲು,

ಆಚೆ ಪೊದೆಯಲ್ಲಿ ಹರಿದ ಸೆರಗಿನ ಚೂರು.

ಕಾಡುವ ದಟ್ಟ ಕಾಡಿನ ಹಾಗೆ,

ಕಬೀರನ ಸರಳ ಹಾಡ ಹಾಡುವ

ಕೊಳಲಿನ ದನಿಯ ಹಾಗೆ,

ಕಿಕ್ಕಿರಿದ ಪಂಚಾಯತಿ ಕಟ್ಟೆಯ ಗಾಢ ಮೌನದ ಹಾಗೆ,

ಕತೆಯ ನಡುವೆ ಉಸಿರಿನ ವಿರಾಮದ ಹಾಗೆ,

ಪ್ರೀತಿ ವಿರಹಗಳ ನಡುವಿನ ಭಾವಕ್ಕೂ ಒಂದು ಕಾಲ ಉಂಟು.


Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: