ಗೀತೆಯ ಬಗ್ಗೆ ಸುಮ್ಮನೆ ಹೀಗೇ ಮಾತಿಗೆ

ಜಾಸ್ತಿ ತಿಳಿದುಕೊಳ್ಳದ ವಿಷಯದ ಬಗ್ಗೆ ಮಾತಾಡೋದು ಸರಿ ಅಲ್ಲ ಅನ್ನುವುದು ಸಾಮಾನ್ಯ ಜ್ನಾನ. ಅದರಲ್ಲೂ  ಧರ್ಮಕ್ಕೆ ಸಂಬಂಧಿಸಿದ ವಿಷಯದ ಬಗ್ಗೆ ಮಾತಾಡೋದಂದರೆ ಒಂಥರ ನಾಚಿಕೆ ಮುಳ್ಳನ್ನು ಮುಟ್ಟವುದಕ್ಕೆ ಹೋದ ಹಾಗೆ. ನಮ್ಮ ಈಗಿನ ಪರಿಸರದಲ್ಲಿ ‘ಧ’ ಅಂತ ಬಾಯಿ ಬಿಟ್ಟು ‘ರ್ಮ’ ಅಂತ ಬಾಯಿ ಮುಚ್ಚುವ ಒಳಗಾಗಿ ಮುಳ್ಳು ಚುಚ್ಚುವುದಷ್ಟೇ ಅಲ್ಲ, ಠಕ್ಕನೆ ಎಲೆಗಳೆಲ್ಲಾ ಮುಚ್ಚಿ ಹೋಗಿ ಮಾತಾಡುತ್ತಿದ್ದ ವಿಷಯದ ಸ್ವರೂಪವೇ ಕಾಣದ ಹಾಗೆ ಆಗಿಬಿಡುತ್ತದೆ.  ಅದರಲ್ಲೂ ಭಗವದ್ಗೀತೆಯಂತಹ ಪಠ್ಯದ ಬಗ್ಗೆ ಹೇಳಲಿಕ್ಕೆ ಹೊಸತು ಅಂತ ಏನಿದ್ದೀತು? ನೂರಾರು ಅನುವಾದಗಳಿಗೆ, ತರಾವರಿ ಭಾಷ್ಯಗಳಿಗೆ, ಒಂದಕ್ಕೊಂದು ವಿರೋಧಿಯಾದ ಪಂಥಗಳಲ್ಲಿ ಭಕ್ತಿಗೆ, ನಂಬಿಕೆಯ ಚೌಕಟ್ಟಿನ ಒಳಗೂ ಅದರ ಆಚೆಗೂ ಬಿಸಿಬಿಸಿ ಚರ್ಚೆ-ಜಗಳಗಳಿಗೆ ಮೂಲವಾಗಿರುವ, ಆ ಕಾಲದ ಶಂಕರರಿಂದ ಹಿಡಿದು ಈ ಕಾಲದ ಗಾಂಧಿ, ತಿಲಕ್, ರಾಜಾಜಿಯವರೆಗೆ ಎಷ್ಟಷ್ಟೊಂದು ಜನರು ತುಂಬಾ ತಲೆಕೆಡಿಸಿಕೊಂಡು ಅವರವರ ಭಾವಕ್ಕೆ ಭಕುತಿಕೆ ತಕ್ಕನಾಗಿ ಒಗ್ಗಿಸಿಕೊಂಡ ಗ್ರಂಥ ಅಲ್ಲವಾ ಅದು? ಹೊಸತು ಹೇಳಲೇಬೇಕೆಂದು ಛಲ ಇದ್ದರೆ ಹಳೆಯದ್ದನ್ನೆಲ್ಲಾ ಒಟ್ಟು ಹಾಕಿಕೊಂಡು ಹತ್ತು ವರ್ಷ ಓದಬೇಕಾದೀತು.

ಆದರೆ ಆಸಕ್ತಿ ಕೆರಳಿಸುವ ವಿಷಯ ಕಣ್ಣಿಗೆ ಕಾಣಿಸಿದಾಗ ಬರೆಯದೆ ಇರುವುದಾದರೂ ಹೇಗೆ ಹೇಳಿ. ಅದೂ ಒಂಥರಾ itch. ಈಗ ನನಗೆ itch ಹತ್ತಿಸಿರುವುದು ಇಸ್ಕಾನ್ ಸಂಸ್ಥೆಯ ಪ್ರಕಟಣೆಯಾದ “ಭಗವದ್ಗೀತಾ ಯಥಾರೂಪ” ಪುಸ್ತಕದಲ್ಲಿ ಗೀತೆಯ ಮೂಲ ಶ್ಲೋಕಗಳ ಭಾವಾರ್ಥವನ್ನು ವಿವರಿಸುತ್ತಾ ಹೇಳುವ ಕೆಲವು ಸಾಲುಗಳು:

“…ನಡತೆಯ ವಿಷಯ ಹೇಳುವುದಾದರೆ ಮನುಷ್ಯನ ನಡತೆಗೆ ಮಾರ್ಗದರ್ಶನ ಮಾಡುವ ಅನೇಕ ನಿಯಮ ನಿಬಂಧನೆಗಳಿವೆ. ಉದಾಹರಣೆಗೆ ಮನು ಸಂಹಿತೆಯು ಮನು ಕುಲದ ಕಾನೂನು. ಇವತ್ತಿಗೂ ಹಿಂದೂಗಳು ಮನುಸಂಹಿತೆಯನ್ನು ಅನುಸರಿಸುತ್ತಾರೆ. ಪಿತ್ರಾರ್ಜಿತ ಕಾನೂನುಗಳು ಮತ್ತು ಇತರ ಕಾನೂನು ಅಂಶಗಳು ಈ ಗ್ರಂಥದಿಂದ ಬಂದಿವೆ. ಹೆಂಗಸಿಗೆ ಸ್ವಾತಂತ್ರ್ಯವನ್ನು ಕೊಡಬಾರದೆಂದು ಮನು ಸಂಹಿತೆಯಲ್ಲಿ ಸ್ಪಷ್ಟವಾಗಿ ಹೇಳಿದೆ. ಹೀಗೆಂದರೆ ಹೆಂಗಸರನ್ನು ದಾಸರಂತೆ, ಗುಲಾಮರಂತೆ ನಡೆಸಿಕೊಳ್ಳಬೇಕೆಂದಲ್ಲ. ಆದರೆ ಅವರು ಮಕ್ಕಳು ಇದ್ದಂತೆ. ಮಕ್ಕಳಿಗೆ ಸ್ವಾತಂತ್ರ್ಯವನ್ನು ಕೊಡುವುದಿಲ್ಲ, ಆದರೆ ಅವರು ಗುಲಾಮರಂತೆ ಇರುತ್ತಾರೆ ಎಂದು ಅರ್ಥವಲ್ಲ. ರಾಕ್ಷಸರು ಇಂತಹ ಆದೇಶಗಳನ್ನು ಮರೆತಿದ್ದಾರೆ. ಗಂಡಸರಿಗಿರುವಷ್ಟು ಸ್ವಾತಂತ್ರ್ಯವನ್ನು ಹೆಂಗಸರಿಗೂ ಕೊಡಬೇಕೆಂದು ಅವರು ಯೋಚಿಸುತ್ತಾರೆ. ಹಾಗಿದ್ದರೂ ಜಗತ್ತಿನ ಸಾಮಾಜಿಕ ಸ್ಥಿತಿಯನ್ನು  ಅದು ಸುಧಾರಿಸಿಲ್ಲ. ವಾಸ್ತವವಾಗಿ ಬದುಕಿನ ಪ್ರತಿಯೊಂದು ಹಂತದಲ್ಲಿಯೂ ಹೆಂಗಸರಿಗೆ ರಕ್ಷಣೆಯನ್ನು ಕೊಡಬೇಕು. ಚಿಕ್ಕ ವಯಸ್ಸಿನಲ್ಲಿ ಅವಳ ತಂದೆಯೂ, ಯೌವ್ವನದಲ್ಲಿ ಅವಳ ಗಂಡನೂ ಮತ್ತು ಮುಪ್ಪಿನಲ್ಲಿ ಬೆಳೆದ ಗಂಡುಮಕ್ಕಳೂ ರಕ್ಷಣೆಯನ್ನು ಕೊಡಬೇಕು. ಮನುಸಂಹಿತೆಯ ಪ್ರಕಾರ ಅದು ಯೋಗ್ಯವಾದ ಸಾಮಾಜಿಕ ನಡತೆ. ಆದರೆ ಆಧುನಿಕ ವಿದ್ಯಾಭ್ಯಾಸವು ಹೆಂಗಸಿನ ಬದುಕಿನ ಒಂದು ವಿಸ್ತರಿತ ಪರಿಕಲ್ಪನೆಯನ್ನು ಕೃತಕವಾಗಿ ಸೃಷ್ಟಿಸಿದೆ. ಇದರಿಂದ ಮಾನವ ಸಮಾಜದಲ್ಲಿ ವಾಸ್ತವವಾಗಿ ಮದುವೆಯೆಂಬುದು ಕಲ್ಪನೆಯಷ್ಟೇ ಆಗಿದೆ. ಹೆಂಗಸಿನ ನೈತಿಕ ಸ್ಥಿತಿಯೂ ಈಗ ಅಷ್ಟೇನೂ ಚೆನ್ನಾಗಿಲ್ಲ. ಹೀಗೆ ರಾಕ್ಷಸರು ಸಮಾಜಕ್ಕೆ ಒಳಿತಾಗುವ ಯಾವುದೇ ಬೋಧನೆಯನ್ನೂ ಒಪ್ಪಿಕೊಳ್ಳುವುದಿಲ್ಲ. ಅವರು ಮಹರ್ಷಿಗಳ ಅನುಭವವನ್ನು, ಋಷಿಗಳು ವಿಧಿಸಿದ ನಿಯಮ ನಿಬಂಧನೆಯನ್ನೂ ಅನುಸರಿಸದೆ ಇರುವುದರಿಂದ ರಾಕ್ಷಸೀಜನದ ಸ್ಥಿತಿಯು ಈಗ ತುಂಬ ದುಃಖಕರವಾಗಿದೆ.”  (ಅಧ್ಯಾಯ ೧೬, ಶ್ಲೋಕ  ೭ ರ ಭಾವಾರ್ಥ, ಪುಟ ೬೮೯)

ಮೆಲ್ಕಂಡ ಭಾವಾರ್ಥಕ್ಕೆ ಮೂಲ ಶ್ಲೋಕದ ಅನುವಾದ ಇಂತಿದೆ: “ಅಸುರೀ ಪ್ರಕೃತಿಯವರಿಗೆ ಏನು ಮಾಡಬೇಕು, ಏನು ಮಾಡಬಾರದು ಎಂದು ತಿಳಿಯದು. ಅವರಲ್ಲಿ ಶುಚಿತ್ವವಿಲ್ಲ, ಸನ್ನಡತೆ ಇಲ್ಲ, ಸತ್ಯವಿಲ್ಲ.”

“ರಾಜ್ಯದ ಮತ್ತು ಸಮುದಾಯದ ಸಾಮಾನ್ಯ ಆಧ್ಯಾತ್ಮಿಕ ಬೆಳವಣಿಗೆಗಾಗಿ ಒಳ್ಳೆಯ ಜನರೇ ಪ್ರಭಾವಶಾಲಿಗಳಾಗುವಂತೆ ವರ್ಣಾಶ್ರಮ ಧರ್ಮದ ತತ್ವಗಳನ್ನು ರೂಪಿಸಲಾಗಿತ್ತು. ಇಂತಹ ಜನತೆಗೆ  ಸ್ತ್ರೀಯರ ಪಾತಿವ್ರತ್ಯ ಮತ್ತು ನಿಷ್ಠೆಯೇ ಆಧಾರ. ಮಕ್ಕಳು ಹೇಗೆ ಸುಲಭವಾಗಿ ದಾರಿ ತಪ್ಪಬಹುದೋ ಹಾಗೆ ಸ್ತ್ರೀಯರೂ ಸುಲಭವಾಗಿ ಭ್ರಷ್ಟರಾಗಬಹುದು. ಆದುದರಿಂದ ಮಕ್ಕಳಿಗೂ ಸ್ತ್ರೀಯರಿಗೂ ಕುಟುಂಬದ ಹಿರಿಯರಿಂದ ರಕ್ಷಣೆಯು ಅಗತ್ಯ. ಹಲವಾರು ಧಾರ್ಮಿಕ ವಿಧಿಗಳಲ್ಲಿ ಮಗ್ನರಾದ ಸ್ತ್ರೀಯರು ದಾರಿ ತಪ್ಪಿ ವ್ಯಭಿಚಾರಕ್ಕಿಳಿಯುವುದಿಲ್ಲ. ಚಾಣಾಕ್ಯ ಪಂಡಿತರ ಪ್ರಕಾರ ಸ್ತ್ರೀಯರು ಸಮಾನ್ಯವಾಗಿ ಬಹಳ ಜಾಣರಲ್ಲವಾಗಿ ಅವರು ನಂಬಿಕೆಗೆ ಯೋಗ್ಯರಲ್ಲ. ಆದುದರಿಂದ ಧಾರ್ಮಿಕ ವಿಧಿಗಳ ಹಲವಾರು ಕೌಟುಂಬಿಕ ಸಂಪ್ರದಾಯಗಳಲ್ಲಿ ಅವರು ಸದಾ ಮಗ್ನರಾಗಿರಬೇಕು. ಅವರ ಪಾತಿವ್ರತ್ಯ ಮತ್ತು ನಿಷ್ಟೆಯಿಂದ ವರ್ಣಾಶ್ರಮ ವ್ಯವಸ್ಥೆಯಲ್ಲಿ ಭಾಗವಹಿಸಬಲ್ಲ ಜನತೆಯು ಸೃಷ್ಟಿಯಾಗುತ್ತದೆ. ಇಂತಹ ವರ್ಣಾಶ್ರಮ ಧರ್ಮವು ವಿಫಲವಾದರೆ ಸಹಜವಾಗಿ ಮಹಿಳೆಯರಿಗೆ ಪುರುಷರೊಂದಿಗೆ ಕೆಲಸ ಮಾಡಿ ಬೆರೆಯಲು ಸ್ವಾತಂತ್ರ್ಯ ದೊರೆಯುತ್ತದೆ. ಆಗ ವ್ಯಭಿಚಾರವು ಹೆಚ್ಚಿ ಅನಪೇಕ್ಷಿತ ಜನತೆ ಸೃಷ್ಟಿಯಾಗುವ ಅಪಾಯ ಉಂಟಾಗುತ್ತದೆ. ಹೊಣೆಗೇಡಿ ಪುರುಷರು ಸಮಾಜದಲ್ಲಿ ವ್ಯಭಿಚಾರವನ್ನು ಪ್ರಚೋದಿಸುತ್ತಾರೆ. ಹೀಗೆ ಅನಪೇಕ್ಷಿತ ಮಕ್ಕಳು ಮಾನವಕುಲವನ್ನು ತುಂಬಿ ಯುದ್ಧ ಮತ್ತು ಕ್ಷಾಮಗಳ ಅಪಾಯ ತಲೆದೋರುತ್ತದೆ.” (ಅಧ್ಯಾಯ ೧, ಶ್ಲೋಕ ೪೦ರ ಭಾವಾರ್ಥ, ಪುಟ ೬೧)

ಇದು ಮೂಲ ಶ್ಲೋಕ: “ಹೇ ಕೃಷ್ಣ, ಕುಟುಂಬದಲ್ಲಿ ಅಧರ್ಮವು ಪ್ರಧಾನವಾದಾಗ ಕುಲಸ್ತ್ರೀಯರು ನೀತಿಭ್ರಷ್ಟರಾಗಿ ಅನಿಷ್ಟ ಸಂತಾನ ಸೃಷ್ಟಿಯಾಗುತ್ತದೆ.”

ಇತ್ಯಾದಿ.

ಗೀತೆಯಲ್ಲಿಯೋ, ಮನು ಸ್ಮೃತಿಯಲ್ಲಿಯೋ ಹೆಂಗಸರ, ಶೂದ್ರರ, ಅಸ್ಪ್ರಶ್ಯರ ಬಗ್ಗೆ ಇರುವ ಶ್ಲೋಕಗಳನ್ನು ಉದ್ಧರಿಸಿ ನೋಡಿ ಇಲ್ಲಿ ಹೀಗಿದೆ ಅನ್ನುವುದು ಹಳೆ ಕತೆ. ಈ ಕೆಲಸವನ್ನೆಲ್ಲಾ ಆಗಲೇ ಅನೇಕರು ಮಾಡಿಯಾಗಿದೆ. ಉದಾಹರಣೆಗೆ ಇದು ಗೀತೆಯ ಬಗ್ಗೆ ಅಂಬೇಡ್ಕರ್ ಮಾತು: “I reject the Hindu social philosophy propounded in Bhagvad Gita, based as it is on the Triguna of Sankhya Philosophy which in my judgement is a cruel perversion of the philosophy of Kapila, and which had made the caste system of graded inequality the law of Hindu social life.” ಇಸ್ಕಾನ್ ಲೆಕ್ಕದಲ್ಲಿ ನೋಡುವುದಾದರೆ “ಮೋಸಗಾರ ಕಪಿಲನ ಸಾಂಖ್ಯ ಪ್ರತಿಪಾದನೆ” ಮತ್ತು “ಸರ್ವ ಶೂನ್ಯವಾದ, ಭಕ್ತಿ ಶೂನ್ಯವಾದ ಬೌದ್ಧ ಪಂಥ”ಕ್ಕೆ ಅಂಟಿಕೊಂಡಿರುವ “ಅಮೇರಿಕದಲ್ಲಿ ಜನಪ್ರಿಯವಾಗುತ್ತಿರುವ ಹಲವು ಹುಸಿಧರ್ಮ”ಗಳು ಮಾತ್ರವೇ ಅಲ್ಲದೆ ಗೀತೆಯ ಮಾಯಾವಾದಿ ಅರ್ಥಾತ್ ಅದ್ವೈತ ವ್ಯಾಖ್ಯಾನಗಳೂ ಕೂಡ ಕೆಲಸಕ್ಕೆ ಬಾರದವು.

ಕಾಲಾತೀತ ಅನ್ನಿಸಿಕೊಳ್ಳುವ ಧರ್ಮಗ್ರಂಥಗಳೂ ಸೇರಿದಂತೆ, ಯಾವುದೋ ಒಂದು ಕಾಲಘಟ್ಟದಲ್ಲಿ ಸೃಷ್ಟಿಯಾದ ಪಠ್ಯಗಳಲ್ಲಿ  ಈ ಕಾಲದ ಪುರ್ವಾಗ್ರಹಗಳು ಅಡಕವಾಗಿರುವುದು ಆಶ್ಚರ್ಯ ಅಲ್ಲ. ಆದರೆ ಆಶ್ಚರ್ಯ ಅನ್ನಿಸಿವುದು ಆಧುನಿಕ ಯುಗದಲ್ಲಿ, ಆಧುನಿಕ ಪರಿಕರಗಳನ್ನೆಲ್ಲವನ್ನೂ ಬಳಸಿಕೊಂಡು ದೇಶ ವಿದೇಶಗಳಲ್ಲಿ ಗೀತಾ ಪ್ರಚಾರ ಮಾಡುವ (ಉದಾಹರಣೆಗೆ ಇಸ್ಕಾನಿನ ಇಡೀ ಗೀತಾ ಪಾಠ ನೆಟ್ ನಲ್ಲಿ ಇದೆ. ಇದು ನಾನು ಮೊದಲು ಉದ್ಧರಿಸಿದ ಭಾವಾರ್ಥದ ಇಂಗ್ಲಿಷ್ ಪಠ್ಯ: http://www.asitis.com/16/7.html), ಮಿಶಿನರಿ ಅತ್ಯುತ್ಸಾಹದಿಂದ ಗೀತೆಯನ್ನು ಮನೆಮನೆಗೆ ತಂದು, mobile ವ್ಯಾನುಗಳಲ್ಲಿ ಇಟ್ಟುಕೊಂಡು ಮಾರುವ, ಇಸ್ಕಾನ್ ಸಂಸ್ಥೆ ಈ ಥರದ ಮಾತುಗಳನ್ನು ತನ್ನ ಪುಸ್ತಕಗಳಲ್ಲಿ ಕೊಂಚವೂ ಅಳುಕಿಲ್ಲದೆ ಇದೇ ಗೀತೆಯ ಭಾವಾರ್ಥ, ಇದು ಅಂದಿಗೂ ಇಂದಿಗೂ ಎಂದೆಂದಿಗೂ ಸತ್ಯ ಎಂದು ಹೇಳುತ್ತದಲ್ಲಾ ಎಂಬುದು. ಧಾರ್ಮಿಕ ಗ್ರಂಥದಲ್ಲಿ (ಇದರಲ್ಲಿ ನಿಮಗಿಷ್ಟವಾದ ಧರ್ಮದ ನಿಮಗಿಷ್ಟವಾದ ಗ್ರಂಥದ ಹೆಸರನ್ನು ಹಾಕಿಕೊಳ್ಳಬಹುದು) ಎಂಥಾ ಆಧುನಿಕತೆ ಇದೆ ಗೊತ್ತ ಅಂತ ಹೇಳಿಕೊಳ್ಳುತ್ತಾ ಇದೇ ಆಧುನಿಕ ಮನುಷ್ಯನಿಗೆ ಸರಿ ಹೊಂದುವಂಥದ್ದು ಅನ್ನುವುದು ಈಗ ತುಂಬಾ ಕಂಡುಬರುವ ಸ್ಟೈಲು. ಆಧುನಿಕತೆ ತಂದಿರುವ ರೋಗಗಳಿಗೆಲ್ಲಾ ನಮ್ಮ ಈ ಧರ್ಮಗ್ರಂಥದಲ್ಲಿಯೇ ಔಷಧಿ ಇದೆ ಅನ್ನುವುದು ಇನ್ನೊಂದು ಸ್ಟೈಲು. ಎರಡನೆ ವರಸೆಗೆ ಹೆಚ್ಚು ಹತ್ತಿರವಾಗಿದ್ದು ಮೊದಲನೆಯ ವರಸೆಯನ್ನೂ ಅಗತ್ಯ ಬಿದ್ದಾಗ ಬಳಸಿಕೊಳ್ಳುವಂತ ಸಂಸ್ಥೆಗಳಿಗೂ ಕೊರತೆ ಇಲ್ಲ. ಇದೇ ಗುಂಪಿಗೆ ಸೇರಿದ ಇಸ್ಕಾನ್  ಸಂಸ್ಥೆಯ ಗೀತೆಯ ಅವತರಣಿಯ ಭರ್ಜರಿ ಮಾರಾಟ ಆಗುತ್ತಾ ಇದೆ. ಇಸ್ಕಾನ್ ತಂದಿರುವ ಈ ಪಠ್ಯ ಅತ್ಯಂತ ಸುಲಭಕ್ಕೆ ಸಿಗುವ ಗೀತೆಯ ಪಠ್ಯವಷ್ಟೆ ಅಲ್ಲ, ಅವರೇ ಹೇಳಿಕೊಂಡಿರುವಂತೆ ವಿಶ್ವದ ವಿವಿಧ ಭಾಷೆಗಳಲ್ಲಿ ೨ ಕೋಟಿ ಮಾರಾಟವಾಗಿದೆಯಂತೆ. ಇದರ ಕನ್ನಡ ಅವತರಣಿ ಕಳೆದ ೨೦ ವರ್ಷಗಳಲ್ಲಿ ೩೭ ಮುದ್ರಣಗಲನ್ನು ಕಂಡಿದ್ದು ನಾಲ್ಕು ಲಕ್ಷ ಮಾರಾಟವಾಗಿ ಅತಿ ಹೆಚ್ಚು ಮಾರಾಟವಾದ ಪಠ್ಯೇತರ ಪುಸ್ತಕ ಅಂತ ದಾಖಲೆ ಸ್ಥಾಪಿಸಿದೆ ಅನ್ನುವುದು ಇಸ್ಕಾನ್ ಅವರ ಹೇಳಿಕೆ. ಮಕ್ಕಳಿಗಾಗಿಯೂ ಅನೇಕ ಗೀತಾ ಪಠಣದ ಕಾಂಪಿಟೀಷನ್ನುಗಳನ್ನು, ಕಾರ್ಯಕ್ರಮಗಳನ್ನು ಇವರು ಆಗಾಗ ಹಮ್ಮಿಕೊಂಡು ಪ್ರೈಸ್ ಆಗಿ ಗೀತೆಯ ಪ್ರತಿಗಳನ್ನು ಕೊಡುತ್ತಾರೆ. ಕೊಂಡವರೆಲ್ಲರೂ ಪುಟ ೬೮೯ರ ವರೆಗೂ ಓದಿ  ಒಪ್ಪುತ್ತಾರೆಯೋ ಅಥವಾ ಸುಮ್ಮನೆ ದೇವರ ಮನೆಯಲ್ಲಿಟ್ಟು ಪೂಜೆ ಮಾಡುತ್ತಾರೋ ಎಂಬುದು ಬೇರೆಯೇ ಮಾತು ಬಿಡಿ.

ಪ್ರಶ್ನಾತೀತವಾಗೆ ಯಾವುದನ್ನಾದರೂ ಸಂಪೂರ್ಣ ನಂಬಿ ನೆಚ್ಚುವವರ ಮತ್ತು ಪ್ರಶ್ನೆಗಳ ಜೊತೆಜೊತೆಗೆ ಭಕ್ತಿಯನ್ನು ಮುಚ್ಚಟೆಯಿಂದ ಕಾಪಾಡಿಕೊಳ್ಳುವ ಶಕ್ತಿ ಇರುವವರ ಬಗ್ಗೆ ನಾನು ಏನೂ ಹೇಳುವುದಿಲ್ಲ. ಆದರೆ ನನ್ನಂತಹ ಸ್ಥಾಯಿಭಾವದಲ್ಲಿ ಅನುಮಾನ ಪ್ರವೃತ್ತಿಯವರಾದವರಿಗೆ (ಅ-ಧಾರ್ಮಿಕರು ಅಂತ ಬೇಕಾದರೂ ಅನ್ನಿ) ಗೀತೆ ಮೊದಲೇ ಎನೇನನ್ನೋ ಸಮನ್ವಯ ಮಾಡಲು ಹೋಗಿ ಸಿಕ್ಕಾಪಟ್ಟೆ ಕಲಸಿ ಹೋದಂತೆ, ವಿರೋಧಾಭಾಸಗಳಿಂದ ತುಂಬಿದಂತೆ ಕಾಣುವ, ನಾವೀಗಾಗಲೇ ಇರುವುದಕ್ಕಿಂತ confuse ಮಾಡಿಸುವ ಪಠ್ಯ.  ಅರ್ಜುನನಿಗೂ ನನ್ನಂತೆಯೇ confuse ಆಗಿ ಈ motivational counselling ಕೇಳಿ ಅರ್ಥ ಮಾಡಿಕೊಳ್ಳುವ ಗೋಜಿಗಿಂತ ಯುದ್ಧ ಮಾಡುವುದೇ ಸುಲಭ ಅಂತ ಬಿಲ್ಲು ಎತ್ತಿ ಹೊರಟಿರಲೂಬಹುದು ಯಾರಿಗೆ ಗೊತ್ತು? ಉದಾಹರಣೆಗೆ, ನನ್ನಲ್ಲಿ ಎಲ್ಲವೂ ಇದೆ, ಆದರೆ ಎಲ್ಲದರಲ್ಲೂ ನಾನಿಲ್ಲ, ನಾನು ಅಭಿವ್ಯಕ್ತಿಯ ಭಾಗವಲ್ಲ ಮತ್ತು ಐಹಿಕ ಚಟುವಟಿಕೆಗಳ ಬಗ್ಗೆ ನಿರ್ಲಿಪ್ತನಾಗಿರುವವರು ಎನ್ನುವ ಕೃಷ್ಣ ಪರಮಾತ್ಮನೇ (ಅಧ್ಯಾಯ ೯) ಮತ್ತೊಂದೆಡೆ ಪ್ರತಿಯೊಂದು ಐಹಿಕ ಯಂತ್ರದ ಹೃದಯದಲ್ಲಿ ಕುಳಿತು ಎಲ್ಲಾ ಜೀವಿಗಳ ತಿರುಗಾಟವನ್ನು ನಿರ್ದೇಷಿಸುವನು ನಾನೇ ಅಂತಲೂ ಅನ್ನುತ್ತಾನೆ (ಅಧ್ಯಾಯ ೧೮). ಹದಿನೆಂಟನೆ ಅಧ್ಯಾಯದಲ್ಲಿ “ವಿಮರ್ಶಿಸಿ ನಿನ್ನ ಇಷ್ಟದಂತೆ ಮಾಡು”  ಅನ್ನುವ celebrated ಮಾತೂ ಕೂಡ ಹೇಳಿದ ಸಂದರ್ಭದಲ್ಲಿ  — ಅದಕ್ಕೆ ಐದು ಶ್ಲೋಕದ ಹಿಂದೆ “ನನ್ನ ಮಾತನ್ನು ಕೇಳದೆ ಹೋದರೆ ಮುಳುಗಿ ಹೋಗುತ್ತೀಯೆ” ಎಂದೂ ಹೇಳಿರುತ್ತಾನೆ ಕೃಷ್ಣ —  ನನಗಂತೂ ಸುಮ್ಮನೆ ಒಂದು ಕೇವಿಯಟ್ಟಿನ ಹಾಗೆಯೇ ತೋರುತ್ತದೆ. ಗೀತೆಯಲ್ಲಿ ಈ ವಿರೋಧಾಭಾಸಗಳು ಯಾಕೆ ಅನ್ನುವ ಬಗ್ಗೆ ಸೌಮೇನ್ ಡೇ ಬರೆದ ಲೇಖನ ಚೆನ್ನಾಗಿದೆ ಅನ್ನಿಸಿತು (http://eawc.evansville.edu/essays/de.htm). ಈ ಗ್ರಂಥ ಉದ್ಭವವಾದ ಚಾರಿತ್ರಿಕ ಹಿನ್ನೆಲೆಯ ಬಗ್ಗೆ ಡಿ.ಡಿ. ಕೋಸಾಂಬಿಯವರು ಇನ್ನೂ ವಿಸ್ತ್ರತವಾಗಿ ಸುಮಾರಷ್ಟು ಬರೆದಿರುವುದು ನಮಗೆಲ್ಲಾ ಗೊತ್ತು. ಸತ್ಯ ಹೇಳಬೇಕೆಂದರೆ ರಸಿಕರ ರಾಜ, ಬೆಣ್ಣೆ ಕಳ್ಳ, ರಂಗಿನಾಟದ ಚೆಂದದ ಕೃಷ್ಣ ಹೀಗೆ ಎಡೆಬಿಡದೆ ಇಂದ್ರೀಯ ನಿಗ್ರಹದ ಬಗ್ಗೆ ಮಾತಾಡುವುದೇ ನನ್ನಂತಹ ಯುದ್ಧ ಮತ್ತು ಕ್ಷಾಮಗಳಿಗೆ ಕಾರಣಕರ್ತರಾದ ಹೆಂಗಸರಿಗೆ ಬೇಸರ ತರುತ್ತದೆ.ಅದರ ಮಧ್ಯೆ ಈ ರೀತಿಯ “ಭಾವಾರ್ಥ”ಗಳ ಒಗ್ಗರಣೆ ಇದ್ದರೆ ಇನ್ನೂ ಬೇಜಾರು.

ಇದೆಲ್ಲಾ ತರಲೆ ವಾದಗಳೇ ಬೇಡ ಅನ್ನುವವರು, ಇಡೀ ಚರ್ಚೆಯಿಂದ ಸುಲಭವಾಗಿ “ಅಯ್ಯೋ ಅಷ್ಟೂ ಗೊತ್ತಿಲ್ಲವಾ, ಸತ್ಯ ಯಾವಾಗಲೂ ಹಾಗೆಯೇ. ವಿರೋಧಾಭಾಸಗಳಿಂದ ಕೂಡಿದ್ದು” ಅಂದು ನುಣುಚಿಕೊಂಡುಬಿಡಬಹುದು. ಅಥವಾ ಅನುಮಾನ ಪ್ರವೃತ್ತಿಯವರಿಗೆ ಗೀತೆ ಅರ್ಥ ಆಗುವುದೇ ಇಲ್ಲ ಅಂತ ಗಾಂಧಿ ಹೇಳಿದಂತೆಯೂ ಹೇಳಬಹುದು. ಗೀತೆಯ ಬಗ್ಗೆ ಗಾಂಧಿಯ ಮಾತು ಹೀಗಿದೆ: “The Gita is the universal mother. She turns away nobody. Her door is wide open to anyone who knocks. A true votary of Gita does not know what disappointment is. He ever dwells in perennial joy and peace that passeth understanding. But that peace and joy come not to skeptic or to him who is proud of his intellect or learning. It is reserved only for the humble in spirit who brings to her worship a fullness of faith and an undivided singleness of mind. There never was a man who worshipped her in that spirit and went disappointed. I find a solace in the Bhagavad-Gita that I miss even in the Sermon on the Mount. When disappointment stares me in the face and all alone I see not one ray of light, I go back to the Bhagavad-Gita. I find a verse here and a verse there , and I immediately begin to smile in the midst of overwhelming tragedies — and my life has been full of external tragedies — and if they have left no visible or indelible scar on me, I owe it all to the teaching of Bhagavad-Gita.”  (ದೈವೀ ಕಲ್ಪನೆಯು ವರ್ಣನಾತೀತ ಮತ್ತು ಅಮೂರ್ತ ಎಂದು ಹೇಳಲು ಹೊರಟಾಗಲೂ ಕೂಡ ಅದು ಹೇಗೋ ಪುಲ್ಲಿಂಗವಾಗಿಯೇ ಇರುವಂತೆ ತೋರುವ ಗೀತೆಯನ್ನು ಎಲ್ಲರನ್ನೂ ಆಲಂಗಿಸುವ “ಜಗನ್ಮಾತೆ” ಅಥವಾ universal mother ಎಂದು ಗಾಂಧಿ ಕರೆಯುವುದು ನನಗೆ ತುಂಬ ಕುತೂಹಲಕರ ಅನ್ನಿಸುತ್ತದೆ.)

ಬೇಕಾದಷ್ಟು ಬೇರೆಬೇರೆ ಅನುವಾದಗಳು ಇರುವಾಗ ಇಸ್ಕಾನ್ ಅವತರಣಿಯನ್ನೇ ಓದಿ  ಇಷ್ಟೆಲ್ಲಾ ಮಾತು ಬೆಳೆಸಬೇಕಾ ಅನ್ನಬಹುದು. ಮೊದಲನೆಯದಾಗಿ ಇಸ್ಕಾನ್ ಗೀತೆ ಎಲ್ಲಕ್ಕಿಂತ ಧಾರಾಳವಾಗಿ ಸಿಗುವಂಥದು. ಎರಡನೆಯದಾಗಿ ಈ ಗೀತೆಯ ಜೊತೆ ಕನ್ನಡ ಓದುಗರು ಗೌರವಿಸುವ ಇಬ್ಬರ ಹೆಸರು ತಳುಕು ಹಾಕಿಕೊಂಡಿದೆ.  ಮೂಲದಲ್ಲಿ ಇಸ್ಕಾನ್ ನ ಪ್ರಭುಪಾದರ ಈ “ಯಥಾರೂಪ”ವನ್ನು ಕನ್ನಡಕ್ಕೆ ತಂದಿರುವುದು ಎಲ್.ಎಸ್. ಶೇಷಗಿರಿರಾಯರು. “ವಿಮರ್ಶಕರಿಂದ ಭಗವದ್ಗೀತಾ ಯಾಥಾರೂಪದ ಪ್ರಶಂಸೆ” ಎಂಬ ತಲೆಬರಹದಡಿಯಲ್ಲಿ ಮೊದಲ ಪ್ರಶಂಸೆ ಇರುವುದು ಅನಂತಮೂರ್ತಿಯವರದ್ದು. ಇವರು ಭಗವದ್ಗೀತೆಯ ಬಗ್ಗೆ ಒಟ್ಟಾರೆಯಾಗಿ ಹೇಳುವುದಷ್ಟೇ ಅಲ್ಲದೆ (“ನನ್ನ ಬಾಳಿನ ಬೆಳಕು” , “ಮತೀಯ ಗೆರೆಗಳನ್ನು ಮೀರಿ ನಿಂತಿರುಯ ಗ್ರಂಥ” ಇತ್ಯಾದಿ) ಈ ಕನ್ನಡ ಅವತರಣಿಯ ಬಗ್ಗೆ ಹೀಗಂದಿದ್ದಾರೆ: “ಅನುವಾದಕರು ಸಾಹಿತ್ಯವನ್ನು ಓದಿಕೊಂಡಿದ್ದವರಾದ್ದರಿಂದ, ಪುಸ್ತಕವು ಸಾಹಿತ್ಯಕ ಗುಣಗಳನ್ನು ಅಳವಡಿಸಿಕೊಂಡು ಸಮೃದ್ಧವಾಗಿ ಬಂದಿದೆ.”

ಇರಬಹುದೇನೋ. ಆಧುನಿಕ ವಿದ್ಯಾಭ್ಯಾಸದಿಂದ ರಾಕ್ಷಸೀ ಗುಣಗಳನ್ನು ಪಡೆದುಕೊಂಡ ನನ್ನ ನೇತ್ರಗಳಿಗೆ ಮಾತ್ರ ಈ ಭವ್ಯ ಗುಣಗಳು ಕಾಣಿಸುತ್ತಲೇ ಇಲ್ಲ.

Advertisements

10 ಟಿಪ್ಪಣಿಗಳು »

 1. ismail said

  Maya is the principle of error generically conceived.
  -Ismail

 2. suresh kota said

  Good good!

 3. Nagesh Hegde said

  Quite late in reading and reacting (18 July 2011). This is a fantastic writeup. You have not spared URA, LSS and even Gandhiji. All the more important in the present context of our education minister’s vituperation.
  Kudos.
  nagesh hegde

  • V.R.BHAT said

   ತಮ್ಮ ಬರಹ ನೋಡಿ ತಮ್ಮ ಸ್ಥಾಯೀ ಭಾವದ ಅರ್ಥಗ್ರಹಿಸಿಕೊಂಡೆ. ಭಗವದ್ಗೀತೆ ನೀವು ಹೇಳಿದಹಾಗೇ ಎಲ್ಲರಿಗೂ ಅರ್ಥವಾಗುವ ಕನ್ನಡ ಕವಿ-ಸಾಹಿತಿಯ ಕೃತಿಯಲ್ಲ. ಅದನ್ನು ಆಮೂಲಾಗ್ರ ಆಸ್ವಾದಿಸದೇ ಕೇವಲ ಇಸ್ಕಾನ್ ನ ಅರ್ಥವನ್ನೇ ಇಟ್ಟುಕೊಂಡು ತಾವು ಗೀತೆಯನ್ನೇ ಹೀಗಳೆದಿದ್ದು ಖಂಡನಾರ್ಹ. ಅಂಬೇಡ್ಕರ್ ಅವರಿಗೂ ಅದರ ಅರ್ಥವಾಗಿರಲಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಪೂರ್ವಾಗ್ರಹ ಬಿಟ್ಟುಬಿಡೋಣ, ಪಶ್ಚಿಮಾಗ್ರಹ ಬರುವುದಕ್ಕಿಂತಾ ಮೊದಲು ಭಾರತದ ಇಂದಿನ ಕೌಟುಂಬಿಕ ವ್ಯವಸ್ಥೆ, ಹಿಂದಿನ ದಶಕಗಳಿಗೆ ಹೋಲಿಸಿದರೆ ಆದ ಬದಲಾವಣೆ, ಲಿವ್-ಇನ್ ವ್ಯವಸ್ಥೆ ಇದನ್ನೆಲ್ಲಾ ಏನಂತೀರಿ? ಅಮೇರಿಕಾದಂತಹ ’ಅಣ್ಣಗಳ’ ನಿವಾಸಿಗಳೇ ಶಾಂತಿಯನ್ನರಸಿ ಭಾರತಕ್ಕೆ ಬರುವುದು ಬರಿದೇ ಆಗಿರಲಿಕ್ಕಿಲ್ಲ ಅಲ್ಲವೇ? ತಲೆಹಿಡುಕರೇ ಬರೆದ ಗ್ರಂಥವಾದರೆ ಭಗವದ್ಗೀತೆ ಎಂಬ ಗ್ರಂಥ ಇಲ್ಲಿಯವರೆಗೆ ಬಾಳುತ್ತಿರಲಿಲ್ಲ, ಜಗದಾದ್ಯಂತ ಅದು ನಿಷೇಧಕ್ಕೊಳಗಾಗುತ್ತಿತ್ತು. ಇವತ್ತಿನ ನಮ್ಮ ಅರ್ಜುನನನಿಗೆ ಯಾವ ದಿವ್ಯ ಚಕ್ಷುವೂ ಇಲ್ಲ, ಅದನ್ನು ಅನುಗ್ರಹಿಸಬಲ್ಲ ಮಹಾನುಭಾವರೂ ಇಲ್ಲ, ಹೀಗಾಗಿ ಎಲ್ಲರೂ ತಂತಮ್ಮ ನೇರಕ್ಕೇ ಗೀತೆಯನ್ನು ಎತ್ತಿ ಆಡಿಕೊಳ್ಳಲು ಆರಂಭಿಸಿದ್ದಾರೆ! ಬಾರ್ ಕಲ್ಚರ್ ಗಿಂತ ಗೀತೆಯ ಅಭಿಯಾನ ಉತ್ತಮ: ಯಾಕೆಂದರೆ ಕೆಲವು ಕುಟುಂಬಗಳಾದರೂ ಬೀದೀ ಪಾಲಾಗುವುದು ತಪ್ಪುತ್ತದೆ. ವರ್ಣಾಶ್ರಮಧರ್ಮ ಇರಲೇಬೇಕೆಂಬ ಪ್ರತಿಪಾದನೆಯನ್ನು ಗೀತಾ ಅಭಿಯಾನ ಹೇಳುತ್ತಿಲ್ಲ ಎಂಬುದೂ ಕಣ್ಣರಳಿಸಿ ಕಾಕಳಿಸಿ ನೋಡಬೇಕಾದ ವಿಚಾರ. || ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ಮಾಡುವ ವ್ಯಕ್ತಿಯ ಗುಣ ಮತ್ತು ಕರ್ಮಗಳನ್ನವಲಂಬಿಸಿ ನಾಲ್ಕು ವರ್ಣಗಳನ್ನು ನಾನೇ ಹುಟ್ಟುಹಾಕಿದ್ದೇನೆ ಎಂದ ಭಗವಂತ ಇಂದು ಎದುರಿಗೆ ಬಂದರೆ ಬದುಕಲು ಬಿಡುತ್ತಿದ್ದರೋ ಇಲ್ಲವೋ ಅದು ಕೂಡ ಬೇರೇ ವಿಚಾರ. ನಾಳೆ ಸಾಯುತ್ತೀಯಾ ಈಗಲೇ ಆದರೂ ಆಗಬಹುದು ಎಂದು ಇನ್ಶೂರನ್ಸ್ ಮಾಡಿಸುವ ಕಂಪನಿಗಳವರು ಒಂದೆಡೆಯಾದರೆ ಆರ್ಥಿಕ ಅಭದ್ರತೆಯಿಂದ ಒತ್ತಡಗಳಲ್ಲಿ ಸಿಲುಕಿ ಹೃದಯಾಘಾತದಂತಹ ಮನೋದೈಹಿಕ ಅನಾನುಕೂಲಕ್ಕೆ ಈಡಾಗುವ ವೃತ್ತಿನಿರತ ಜನರಿಗೆ ಸಂದಿಗ್ಧಕಲದಲ್ಲೂ ಉತ್ತರ ಹೇಳಬಲ್ಲ ಮ್ಯಾನೇಜ್ ಮೆಂಟ್ ಪುಸ್ತಕ ಭಗವದ್ಗೀತೆ ಎಂಬುದನ್ನು ಪ್ರತಿಪಾದಿಸುತಿಇದ್ದೇನೆ. ಇಷ್ಟೇ ಸಾಕು, ಹೆಚ್ಚಿನದಾಗಿ ನನ್ನ ಬ್ಲಾಗ್ ನಲ್ಲಿ ಈ ಕುರಿತು ಲೇಖನ ಪ್ರಕಟಿಸುವ ಇಚ್ಛೆ ಇದೆ.

 4. N.S.Sreedhara murthy said

  I have basic doubts about which is real geetha. Iscon transalation is defenetly not, may be `kannada bhagavadhgeetha’ of nagarasa seems to be interesting please refer

 5. Dilip said

  Thought provoking article!

 6. ಶ್ರೀಮತಿ ಬಾಗೇಶ್ರೀ ಅವರಿಗೆ ನಮಸ್ಕಾರಗಳು.
  ನಾನು ಈ ಲೇಖನ ನೋಡಿರಲಿಲ್ಲ.
  ಇಂದಿನ ವಿಜಯ ಕರ್ನಾಟಕದಲ್ಲಿ ಇದರ ಉಲ್ಲೇಖವನ್ನು ನೋಡಿದೆ.
  ರಷ್ಯಾದಲ್ಲಿರಲಿ, ನಮ್ಮ ದೇಶದಲ್ಲಿಯೇ ಮೂಲ ಕೃತಿ ಗೀತೆಯ ಬಗ್ಗೆಯೇ
  ಭಿನ್ನಾಭಿಪ್ರಾಯಗಳಿರುವ ಚರ್ಚೆ ನಡೆದಿದೆ, ನಡೆಯುತ್ತಿದೆ.
  ನಿಮ್ಮ ಲೇಖನವನ್ನು ಪೂರ್ತಿ ಓದಿದೆ.
  ತುಂಬ ಸಂತೋಷವಾಯಿತು.
  ಗೀತೆಯನ್ನು ಪ್ರಾಮಾಣಿಕವಾಗಿ ಓದಿ ಅರ್ಥಮಾಡಕೊಳ್ಳಬಯಸುವವರು ಗೀತೆಯ ಮೇಲೆ ಕೈ ಇರಿಸಿ, ‘ನಾನು ಮೊದಲು ಗೀತೆಯನ್ನು ಮಾತ್ರ ಓದಿ ಅರ್ಥಮಾಡಿಕೊಳ್ಳುತ್ತೇನೆ;
  ಗೀತೆಯಲ್ಲದೆ ಬೇರೆ- ಗಾಂಧಿ, ತಿಲಕ್, ಪ್ರಭುಪಾದ – ಯಾರ ವ್ಯಾಖ್ಯಾನಗಳನ್ನು ಮೊದಲು ಓದುವುದಿಲ್ಲ, ಎಂದು ಪ್ರಮಾಣಮಾಡಿ ಓದಿದರೆ ಅದರ ಪ್ರಾಮಾಣಿಕವಾದ ಅರ್ಥ ತಿಳಿಯಬಹುದು.

 7. HVSN Sharma said

  “ಆಧುನಿಕ ವಿದ್ಯಾಭ್ಯಾಸದಿಂದ ರಾಕ್ಷಸೀ ಗುಣಗಳನ್ನು ಪಡೆದುಕೊಂಡ ನನ್ನ ನೇತ್ರಗಳಿಗೆ ಮಾತ್ರ ಈ ಭವ್ಯ ಗುಣಗಳು ಕಾಣಿಸುತ್ತಲೇ ಇಲ್ಲ”

  You are absolutely right Bageshree. There is a specific verse No. 67 in Bhagavad Geetha Chapter 18. It applies to you and the likes of Ambedkars. Please keep off from Bhagavad Geetha. No harm. Be happy with sensual things, heavens are not going to fall. Any person can understand or misunderstand, interpret and mis-interpret any book according to one’s own SAMSKARA. Sri Ramakrishana Paramahamsa gives a simple example of a fisher women and fragrance of flower.

  • V.R.BHAT said

   Alas ! Mr. HVSN Sharma, its obvious that you couldn’t understand Geetha on your own, I suggest someone Like Sukhabodhaananda or any of Ramakrishna mutt swamiji’s guidance to get the real meaning ! Unless otherwise its not wise to blame Geetha, If one doesn’t know how to play Guitaur or Violin Its that player’s plight, but not actually instrument’s !! People like you must envisage the taste of Geetha to live in harmony but you are against to it having read it in a wrong way !

 8. V.R.BHAT said

  ತಮ್ಮ ಬರಹ ನೋಡಿ ತಮ್ಮ ಸ್ಥಾಯೀ ಭಾವದ ಅರ್ಥಗ್ರಹಿಸಿಕೊಂಡೆ. ಭಗವದ್ಗೀತೆ ನೀವು ಹೇಳಿದಹಾಗೇ ಎಲ್ಲರಿಗೂ ಅರ್ಥವಾಗುವ ಕನ್ನಡ ಕವಿ-ಸಾಹಿತಿಯ ಕೃತಿಯಲ್ಲ. ಅದನ್ನು ಆಮೂಲಾಗ್ರ ಆಸ್ವಾದಿಸದೇ ಕೇವಲ ಇಸ್ಕಾನ್ ನ ಅರ್ಥವನ್ನೇ ಇಟ್ಟುಕೊಂಡು ತಾವು ಗೀತೆಯನ್ನೇ ಹೀಗಳೆದಿದ್ದು ಖಂಡನಾರ್ಹ. ಅಂಬೇಡ್ಕರ್ ಅವರಿಗೂ ಅದರ ಅರ್ಥವಾಗಿರಲಿಲ್ಲ ಎಂಬುದು ಇಲ್ಲಿ ಸ್ಪಷ್ಟವಾಗುತ್ತದೆ. ಪೂರ್ವಾಗ್ರಹ ಬಿಟ್ಟುಬಿಡೋಣ, ಪಶ್ಚಿಮಾಗ್ರಹ ಬರುವುದಕ್ಕಿಂತಾ ಮೊದಲು ಭಾರತದ ಇಂದಿನ ಕೌಟುಂಬಿಕ ವ್ಯವಸ್ಥೆ, ಹಿಂದಿನ ದಶಕಗಳಿಗೆ ಹೋಲಿಸಿದರೆ ಆದ ಬದಲಾವಣೆ, ಲಿವ್-ಇನ್ ವ್ಯವಸ್ಥೆ ಇದನ್ನೆಲ್ಲಾ ಏನಂತೀರಿ? ಅಮೇರಿಕಾದಂತಹ ’ಅಣ್ಣಗಳ’ ನಿವಾಸಿಗಳೇ ಶಾಂತಿಯನ್ನರಸಿ ಭಾರತಕ್ಕೆ ಬರುವುದು ಬರಿದೇ ಆಗಿರಲಿಕ್ಕಿಲ್ಲ ಅಲ್ಲವೇ? ತಲೆಹಿಡುಕರೇ ಬರೆದ ಗ್ರಂಥವಾದರೆ ಭಗವದ್ಗೀತೆ ಎಂಬ ಗ್ರಂಥ ಇಲ್ಲಿಯವರೆಗೆ ಬಾಳುತ್ತಿರಲಿಲ್ಲ, ಜಗದಾದ್ಯಂತ ಅದು ನಿಷೇಧಕ್ಕೊಳಗಾಗುತ್ತಿತ್ತು. ಇವತ್ತಿನ ನಮ್ಮ ಅರ್ಜುನನನಿಗೆ ಯಾವ ದಿವ್ಯ ಚಕ್ಷುವೂ ಇಲ್ಲ, ಅದನ್ನು ಅನುಗ್ರಹಿಸಬಲ್ಲ ಮಹಾನುಭಾವರೂ ಇಲ್ಲ, ಹೀಗಾಗಿ ಎಲ್ಲರೂ ತಂತಮ್ಮ ನೇರಕ್ಕೇ ಗೀತೆಯನ್ನು ಎತ್ತಿ ಆಡಿಕೊಳ್ಳಲು ಆರಂಭಿಸಿದ್ದಾರೆ! ಬಾರ್ ಕಲ್ಚರ್ ಗಿಂತ ಗೀತೆಯ ಅಭಿಯಾನ ಉತ್ತಮ: ಯಾಕೆಂದರೆ ಕೆಲವು ಕುಟುಂಬಗಳಾದರೂ ಬೀದೀ ಪಾಲಾಗುವುದು ತಪ್ಪುತ್ತದೆ. ವರ್ಣಾಶ್ರಮಧರ್ಮ ಇರಲೇಬೇಕೆಂಬ ಪ್ರತಿಪಾದನೆಯನ್ನು ಗೀತಾ ಅಭಿಯಾನ ಹೇಳುತ್ತಿಲ್ಲ ಎಂಬುದೂ ಕಣ್ಣರಳಿಸಿ ಕಾಕಳಿಸಿ ನೋಡಬೇಕಾದ ವಿಚಾರ. || ಚಾತುರ್ವಣಂ ಮಯಾಸೃಷ್ಟಂ ಗುಣಕರ್ಮ ವಿಭಾಗಶಃ || ಮಾಡುವ ವ್ಯಕ್ತಿಯ ಗುಣ ಮತ್ತು ಕರ್ಮಗಳನ್ನವಲಂಬಿಸಿ ನಾಲ್ಕು ವರ್ಣಗಳನ್ನು ನಾನೇ ಹುಟ್ಟುಹಾಕಿದ್ದೇನೆ ಎಂದ ಭಗವಂತ ಇಂದು ಎದುರಿಗೆ ಬಂದರೆ ಬದುಕಲು ಬಿಡುತ್ತಿದ್ದರೋ ಇಲ್ಲವೋ ಅದು ಕೂಡ ಬೇರೇ ವಿಚಾರ. ನಾಳೆ ಸಾಯುತ್ತೀಯಾ ಈಗಲೇ ಆದರೂ ಆಗಬಹುದು ಎಂದು ಇನ್ಶೂರನ್ಸ್ ಮಾಡಿಸುವ ಕಂಪನಿಗಳವರು ಒಂದೆಡೆಯಾದರೆ ಆರ್ಥಿಕ ಅಭದ್ರತೆಯಿಂದ ಒತ್ತಡಗಳಲ್ಲಿ ಸಿಲುಕಿ ಹೃದಯಾಘಾತದಂತಹ ಮನೋದೈಹಿಕ ಅನಾನುಕೂಲಕ್ಕೆ ಈಡಾಗುವ ವೃತ್ತಿನಿರತ ಜನರಿಗೆ ಸಂದಿಗ್ಧಕಲದಲ್ಲೂ ಉತ್ತರ ಹೇಳಬಲ್ಲ ಮ್ಯಾನೇಜ್ ಮೆಂಟ್ ಪುಸ್ತಕ ಭಗವದ್ಗೀತೆ ಎಂಬುದನ್ನು ಪ್ರತಿಪಾದಿಸುತಿಇದ್ದೇನೆ. ಇಷ್ಟೇ ಸಾಕು, ಹೆಚ್ಚಿನದಾಗಿ ನನ್ನ ಬ್ಲಾಗ್ ನಲ್ಲಿ ಈ ಕುರಿತು ಲೇಖನ ಪ್ರಕಟಿಸುವ ಇಚ್ಛೆ ಇದೆ.

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: