ಭೈರಪ್ಪನವರು ಬರೆದ ಹೆಂಗಸರ ಹಣೆಬರಹ

“ಕವಲು” ನಂತರ ಭೈರಪ್ಪನವರ ಬಗ್ಗೆ ಸುಮಾರು ಎಷ್ಟು ಕಾಲಮ್ಮು ಸೆಂಟಿಮೀಟರ್ ಲೇಖನಗಳು (ಸುದ್ದಿ, ಸಂದರ್ಶನ, ವಿಮರ್ಷೆ ಎಲ್ಲವೂ ಸೇರಿದಂತೆ) ನಮ್ಮ ಪತ್ರಿಕೆಗಳಲ್ಲಿ ಬಂದಿರಬಹುದು? ಇದನ್ನು ಕೂತು ಲೆಕ್ಕಾ ಹಾಕಬೇಕು ಅನ್ನುವ ನನ್ನ ಮತ್ತು  ನನ್ನ ಸ್ನೇಹಿತರೊಬ್ಬರ ಪ್ರಾಜೆಕ್ಟು ನಮ್ಮ ಸೋಮಾರಿತನದಿಂದ ನಿಂತೇ ಹೋಗಿದೆ. ಸುದ್ದಿ ತಾಜಾ ಇದ್ದಾಗ ಇಂಥ ಕೆಲಸ ಮಾಡಿದರೆ ಇದಕ್ಕೊಂದು ಬೆಲೆ. ಇಷ್ಟು ದಿನ ಆಗಿ ಕಾದಂಬರಿ ಹುಲುಮಾನವರಿಗೆ ಎಣಿಸಲಾಗದಷ್ಟು ಮುದ್ರಣಗಳನ್ನು  ಕಂಡ ಮೇಲೆ ಮತ್ತೆ ಇದರ ಬಗ್ಗೆ ಬರೆಯಲಿಕ್ಕೆ ನ್ಯೂಸ್ ಪೆಗ್ ಆದರೂ ಏನುಂಟು ಅಂತ ನಮಗೆ ನಾವು ಹೇಳಿಕೊಂಡು ಸುಮ್ಮನಾಗಿದ್ದೇವೆ. (ನಿಮಗೆಲ್ಲ ಗೊತ್ತಿರುವ ಹಾಗೆ ಪತ್ರಕರ್ತರಿಗೆ ಪೆಗ್ಗು ಮತ್ತು ನ್ಯೂಸ್ ಪೆಗ್ಗುಗಳೆರಡೂ ತುಂಬ ಮುಖ್ಯ.)

ಆದರೆ, ಮೊದಲಿನಷ್ಟು ದಿನಕ್ಕೆರಡಲ್ಲದಿದ್ದರೂ ಭೈರಪ್ಪನವರ ಬಗ್ಗೆ ಲೇಖನಗಳು ಬರುವುದಂತೂ ನಿಂತಿಲ್ಲ. ಅವರ ಹುಟ್ಟುಹಬ್ಬ ಅಂತಲೋ, ಹಾಸನದ ಅವರ ಊರಿಗೆ ಹೋದರು ಅಂತಲೋ, ಶಿವಮೊಗ್ಗೆಯಲ್ಲಿ ರಸಾನುಭವದ ಬಗ್ಗೆ ಲೆಕ್ಚರ್ ಅಂತಲೋ… ಹೀಗೆ. ಕೊನೆಗೆ ನಾವೆಲ್ಲ ಸೇಬು ತಿನ್ನಬೇಕಾ ಅಥವಾ ಪೇರಳೆಹಣ್ಣು ತಿನ್ನಬೇಕಾ ಅನ್ನುವ ಲೇಖನದಲ್ಲಿಯೂ ಭೈರಪ್ಪನವರ ಪ್ರಸ್ತಾಪ ನಾವು ಕಾಣಬಹುದು. ನ್ಯೂಸ್ ಪೆಗ್ ಅಂತೆಲ್ಲಾ ಹೇಳೋದೂ ನಮ್ಮಂಥ ಸೋಮಾರಿಗಳ ಇನ್ನೊಂದು ಲಕ್ಷಣ ಅನ್ನುವುದಕ್ಕೆ ಈ ಲೇಖನಗಳ ಜಡಿಮಳೆಯೇ ಸಾಕ್ಷಿ.

ಇರಲಿ. ಕಾದಂಬರಿಯ ಮುದ್ರಣಗಳ ಸಂಖ್ಯೆಯನ್ನೂ ಮೀರಿಸುವಷ್ಟು ವಿಮರ್ಷೆಗಳು ಈ ಕಾದಂಬರಿಗೆ ಮತ್ತು ಇದರ ಹಿಂದಿನ “ಆವರಣ”ಕ್ಕೆ ಈಗಾಗಲೆ ಬಂದಿರುವುದರಿಂದ ಮತ್ತೆ ವಿಮರ್ಷೆಯ ಸಾಹಸಕ್ಕೆ ನಾನು ಕೈಹಾಕುವುದಿಲ್ಲ. ನಿಜ ಹೇಳಬೇಕೆಂದರೆ ಕೊನೆಯವರೆಗೂ ಸಹನೆ ಉಳಿಸಿಕೊಂಡು ಓದಿ ಮುಗಿಸುವುದೇ ಒಂದು ಸಾಹಸ ಅನ್ನಿಸುವ ಈ ಕಾದಂಬರಿಗಳು ಚೆನ್ನಾಗಿಲ್ಲ ಅಂತ ಹೇಳುವುದಕ್ಕೆ ವಿಮರ್ಷೆಯ ಭಾಷೆ, ಪರಿಕರಗಳೆಲ್ಲಾ ಬೇಕಾ ಅಂತಲೇ ನನ್ನ ಪ್ರಶ್ನೆ.

ಆಧುನಿಕತೆಯ ಸೊಂಕಿನ ಹೆಂಗಸರನ್ನು ಭೈರಪ್ಪನವರು ಚಿತ್ರಿಸುವ ರೀತಿ ನಮ್ಮ ಏಕ್ತಾ ಕಪೂರ ತನ್ನ ಹಿಂದಿ ಸೀರಿಯಲ್ಲುಗಳಲ್ಲಿ ಚಿತ್ರಿಸುವ ವಿಷಕನ್ಯೆ ಹೆಂಗಸರಿಗಿಂತಲೂ ಒಂದು ಕೈ ಮೀರಿದ್ದು. ಇಬ್ಬರ TRP ರೇಟಿಂಗು ಒಂದನ್ನೊಂದು ಮೀರಿಸುವಂತೆ ಇರುವುದು ಸಹಜವೇ ಏನೊ.  ಸಾಮಾನ್ಯವಾಗಿ ಲೇಖಕರಿಗೆ ತಮ್ಮ ಖಳನಾಯಕ ಪಾತ್ರಗಳ ಬಗ್ಗೆಯೂ ಒಂದು ರೀತಿಯ ಮಾತೃ ವಾತ್ಸಲ್ಯ ಇರುತ್ತದೆ. ಆದ್ದರಿಂದಲೇ ಅವೂ ಕೂಡ ತೀರ ರಟ್ಟಿನ ಗೊಂಬೆಗಳಾಗದೆ ಜೀವ ತುಂಬಿಕೊಂಡಿರುತ್ತವೆ. ಅಮ್ಮ ಕೆಟ್ಟ ಮಕ್ಕಳಿಗೂ ಊಟ ಹಾಕದೆ ಸಾಯಿಸುವುದಿಲ್ಲವಲ್ಲ ನೋಡಿ, ಹಾಗೆ. ಆದರೆ ಥೇಟ್ ಏಕ್ತಾ ಕಪೂರ್ ಸೀರಿಯಲ್ಲುಗಳಲ್ಲಿರುವಂತೆ ಭೈರಪ್ಪನವರೂ ನೀತಿ ಸಂಹಿತೆ ಮೀರಿದ ಪಾತ್ರಗಳಿಗೆ starvation death ಸಜೆ ಕೊಟ್ಟುಬಿಡುತ್ತಾರೆ. (ಇವರಿಬ್ಬರ ಸಂಹಿತೆ ಸಂಪೂರ್ಣ ಒಂದೇ ಅಂತ ಇದರರ್ಥವಲ್ಲ.) ಈ ಕಾರಣಕ್ಕೆ “ಕವಲು” ಓದುವುದು ಕಷ್ಟ. ಇದು ಕಾದಂಬರಿಯ  ಮತ್ತು ಓದುಗಳ/ನ ಸೈದ್ಧಾಂತಿಕ ನಿಲುವಿನ ವೈರುಧ್ಯದ ಪ್ರಶ್ನೆ ಅಲ್ಲ.  ನಮ್ಮ ಸ್ತ್ರೀವಾದಿ, ಪುರುಷವಾದಿ, ಮೂರನೇ ಲಿಂಗವಾದಿ ನಿಲುವುಗಳು ಏನೇ ಇರಬಹುದು. ಕನಿಷ್ಟ ಕಾದಂಬರಿ ಓದಿಸಿಕೊಂಡು ಹೋಗಬೇಕಲ್ಲವಾ? ಇವರ ಹೊಸ ಕಾದಂಬರಿ ಯಾವ ರೀತಿಯ ಬೋರಂದರೆ ನಾನು ಹತ್ತನೆ ಕ್ಲಾಸು ಪರೀಕ್ಷೆ ಮುಗಿದ ನಂತರ ತುಂಬ ಇಷ್ಟ ಪಟ್ಟು ಓದಿದ “ಪರ್ವ”, “ವಂಶ ವೃಕ್ಷ” ಕಾದಂಬರಿಗಳ ಲೇಖಕರು ಇವರೇ ಅಂತ ಒಮ್ಮೊಮ್ಮೆ ನಂಬಲಿಕ್ಕೂ ಕಷ್ಟ. ಈ ಕಾದಂಬರಿಗಳ ಬಗ್ಗೆ ದೊಡ್ಡ ದೊಡ್ಡ ವಿಮರ್ಷಕರ ಅನುಮಾನಗಳೇನೇ ಇರಲಿ, ನನಗಂತೂ ಇವುಗಳು ಹಿಡಿದು ಓದಿಸಿಕೊಂಡು ಹೋದ ಕಾದಂಬರಿಗಳು.

ಆದರೆ “ಕವಲು”ವಿನ ಕತೆಯೇ ಬೇರೆ. ಈ ಕಾದಂಬರಿಯೇ ಅಲ್ಲದ ಕಾದಂಬರಿಯನ್ನು ಓದಬೇಕಾದರೆ ಒಂದೋ ಇಷ್ಟು ಸುದ್ದಿ ಆಗಿದೆಯಲ್ಲ ಇದರಲ್ಲಿ ಅಂಥಾದೇನಿದೆ ಅಂತ ಕಂಡುಹಿಡಿಯಲೇಬೇಕು ಅಂತ ಪಟ್ಟು ಹಿಡಿದು ಹಿಗ್ಗದೆಯೆ, ಕುಗ್ಗದೆಯೆ ನುಗ್ಗಿ ಓದುವ ಛಲ ಇರಬೇಕು ಅಥವಾ ಈ ಕಾದಂಬರಿಯ ಗಂಡು ಪಾತ್ರಗಳಷ್ಟೇ ನಮಗೂ ಗಿಡ್ಡ ಕೂದಲಿನ, ಬೋಳು ಹಣೆಯ, ಆಧುನಿಕ ಶಿಕ್ಷಣದಿಂದ ಕೆಟ್ಟು ಕುಲಟೆಯರಾದ ಹೆಂಗಸರ ಬಗ್ಗೆ ದ್ವೇಷ ಇರಬೇಕು ಅಥವಾ ನಿಜ ಸಂತರ ನಿರ್ಲಿಪ್ತತೆ ಇರಬೇಕು. ಭೈರಪ್ಪನವರ  ದೇಶವಿದೇಶದ ಜನಪ್ರಿಯತೆ ನೋಡಿದರೆ (ಪುಸ್ತಕದ ಬೆಲೆ ರೂಪಾಯಿ ಮತ್ತು ಡಾಲರ್ರುಗಳೆರಡಲ್ಲೂ ಮುದ್ರಿಸಿದ ಬೇರೆ ಯಾವ ಕನ್ನಡ ಪುಸ್ತಕ ನೋಡಿದ್ದೀರಿ?), ನಮ್ಮಲ್ಲಿ ಈ ಮೂರು ರೀತಿಯ ಜನ ಧಂಡಿಯಾಗಿ ಇರಬಹುದೇನೋ ಅಂತ ಅನುಮಾನ ಬರುತ್ತದೆ. ಮೋಸ ಅಂದರೆ ಪಾಪದ ಏಕ್ತಾ ಕಪೂರಳಿಗೆ ಸಾಹಿತ್ಯ-ಸಂಸ್ಕೃತಿ ಇತ್ಯಾದಿ high culture  paradigm ಒಳಗೆ ಪ್ರಚಾರ ದೊರೆಯುವುದೇ ಇಲ್ಲ. ಆದರೆ ಭೈರಪ್ಪನವರನ್ನು, “ಕವಲು” ಕಾದಂಬರಿಯನ್ನು ಬೈಯ್ಯುವವರೂ ಕೂಡ ತುಂಬಾ ಬುದ್ಧಿ ಖರ್ಚು ಮಾಡಿ, ವಿಮರ್ಷೆಯ ಪರಿಭಾಷೆಯನ್ನು ಪೋಲು ಮಾಡಿ ಬೈಯ್ಯುತ್ತಾರೆ! ಯಾಕೆ ಈ ತಾರತಮ್ಯವೋ ಗೊತ್ತಿಲ್ಲ.

ವಿಮರ್ಷೆ ಮಾಡುವುದಿಲ್ಲ ಅಂತ ಭಾಷೆ ಕೊಟ್ಟವಳು ಮತ್ತೆ ನಾನೂ ಅದೇ ಜಾಡು ಹಿಡೀತಾ ಇದ್ದೀನಿ ಅಲ್ಲವಾ?

ಬೇಡ ಬಿಡಿ.

ಇದನ್ನು ಇಲ್ಲಿಗೇ ಬಿಟ್ಟು, ಸುಮ್ಮನೆ ತಮಾಷೆಗೆ ನಾನು ಹೇಗೆ ಓದಲಾರದ “ಕವಲು” ಕಾದಂಬರಿಯನ್ನು ಓದಿ ಮುಗಿಸಿದೆ ಅಂತ ಮಾತ್ರ ಹೇಳ್ತೀನಿ. ಈ ಪುಸ್ತಕದಲ್ಲಿ ಸಿಕ್ಕಾಪಟ್ಟೆ ಕುಂಕುಮ ಇಡದ ಬೋಳು ಹಣೆಯ ಹೆಂಗಸರ ಪ್ರಸ್ತಾಪ ಬರುವುದು ಸರಿಯಷ್ಟೇ? ನಾನು ಪ್ರತಿ ಸಲ ಹಣೆ ಮತ್ತು ಕುಂಕುಮಗಳ ಪ್ರಸ್ತಾಪ ಬಂದಾಗ ಒಂದು ಕಡೆ ಗುರುತು ಹಾಕಿಕೊಳ್ಳುತ್ತಾ ಹೋಗಿ ಕೊನೆಯವರೆಗೆ ಎಷ್ಟಾಗಬಹುದು ಅಂತ ಏಣಿಸಲಿಕ್ಕೆ ಶುರು ಮಾಡಿದೆ. ಹೀಗೆ ನಾನೇ ಕಟ್ಟಿಕೊಂಡ ಆಟ ಪುಸ್ತಕಕ್ಕೆ ಒಂದು page-turner ಗುಣವನ್ನು ತಂದುಕೊಟ್ಟುಬಿಟ್ಟಿತು. ಐದಾರು ಪೇಜಾದರೂ  ಇನ್ನೂ ಮತ್ತೊಂದು ಹಣೆಯ ಪ್ರಸ್ತಾಪ ಬರದೆ ಹೋದಾಗ “ಅಯ್ಯೋ ಇನ್ನೂ ಇಲ್ಲವಾ?” ಅಂತ ತುಂಬಾ ನಿರಾಶೆ, ಚಡಪಡಿಕೆ ಕೂಡ ಆಗಲಿಕ್ಕೆ ಶುರುವಾಯಿತು. ಬೋಳು ಅಂತಷ್ಟೇ ಹೇಳಿ ಅಲ್ಲಿಗೆ ಬಿಡ್ತಾರಾ, ವೈಧವ್ಯದ ಕಳೆ ಅಂತಾರಾ, ಸಾಬರ ಹೆಂಗಸರ ಹಾಗೆ ಅಂತಾರಾ, ಅಪ್ಪಿತಪ್ಪಿ ಯಾವುದಾದರೂ ಕುಂಕುಮ ಇಡುವ ಕೆಟ್ಟ ಹೆಂಗಸರೂ ಸಿಗಬಹುದಾ… ಹೀಗೆ ಕತೆಯಲ್ಲಿಲ್ಲ ಕುತೂಹಲವನ್ನು ಈ ನನ್ನ ಹಣೆಯ ಹುಡುಕಾಟ ನನಗೆ ತಂದುಕೊಟ್ಟಿತ್ತು. ಗುರುತು ಹಾಕಿಕೊಂಡ ಹಾಳೆ ಎಲ್ಲೋ ಹಾಕಿಬಿಟ್ಟಿದ್ದೇನೆ ಆದ್ದರಿಂದ ಯಾವ ಯಾವ ಪೇಜಿನಲ್ಲಿ ಅಂತ ಹೇಳಲಿಕ್ಕೆ ಆಗುತ್ತಿಲ್ಲ (ಹುಡುಕಿ ಮತ್ತೆ ಆ ಪಟ್ಟಿ ಕೊಡುತ್ತೇನೆ). ಆದರೆ ನನಗೆ ನೆನಪಿದ್ದ ಹಾಗೆ ೨೯ ಕುಂಕುಮ ಮತ್ತು ಹಣೆಯ ಪ್ರಸ್ತಾಪಗಳು ಪುಸ್ತಕದಲ್ಲಿ ನನಗೆ ಸಿಕ್ಕವು. ಅಂದರೆ ಸರಾಸರಿ ಹತ್ತು ಪೇಜಿಗೆ ಒಮ್ಮೆ. ಭೈರಪ್ಪನವರು ಹೆಂಗಸರ ಹಣೆ, ಕೂದಲಿನ ಉದ್ದದ ಬಗ್ಗೆ ಇಷ್ಟೊಂದು ತಲೆ ಯಾಕೆ ಕೆಡಿಸಿಕೊಂಡಿದ್ದಾರೆ ಪಾಪ ಅಂತ ನನಗೆ ಗೊತ್ತಿಲ್ಲ. ಒಟ್ಟಿನಲ್ಲಿ ಈ ನನ್ನ ಎಣಿಕೆಯ ಆಟದ ದೆಸಿಯಿಂದ ನಾನಗೆ ಕಾದಂಬರಿ ಓದಿ ಮುಗಿಸಲಿಕ್ಕೆ motivation ಅಂತೂ ಸಿಕ್ಕಿತು.

ಓದುಗರಿಗೆ ಲೇಖರ ಹಂಗು ಇರಬೇಕಿಲ್ಲ ಅಂತ ದೊಡ್ಡ ವಿಮರ್ಷಕರು ಹೇಳಿದ್ದಾರಲ್ಲವಾ? ಆ ಥಿಯರಿಯೂ ಇಂಥದೇ ಯಾವುದೋ ಓದಿನ ಆಟದಲ್ಲಿ ಹುಟ್ಟಿರಬಹುದು!

Postscript: ನನ್ನ ಮೇಲೆ ತುಸು ಕೋಪ ಮಾಡಿಕೊಂಡ ಹಾಗೆ ಕಾಣುವ (despite the smileys!) ಆನಂದ ಅವರಲ್ಲಿ ಕ್ಷಮೆ ಯಾಚಿಸುತ್ತಾ, ತುಂಡು ಕೂದಲಿನ ಆಧುನಿಕ ಸ್ತ್ರೀಯಾದ ನಾನು ಮೊದಲು promise ಮಾಡಿದ ಹಾಗೆ ಕುಂಕುಮ-ಹಣೆ ಪ್ರಸ್ತಾಪ ಬರುವ ಪುಟಗಳ ಪಟ್ಟಿ ಕೊಡುತ್ತಿದ್ದೇನೆ: ೨೨, ೩೬, ೪೦, ೪೨, ೪೪, ೪೭, ೬೪, ೭೦, ೭೧, ೧೦೩, ೧೦೪, ೧೦೭, ೧೨೮, ೧೩೧, ೧೩೨, ೧೩೫, ೧೬೦, ೧೬೮, ೨೦೪, ೨೨೪, ೨೨೭, ೨೩೮, ೨೪೦, ೨೫೬, ೨೬೨, (೨೬೦-೨೭೦ ನಡುವೆ ಇನ್ನೊಂದು ಪ್ರಸ್ತಾಪ ಇದೆ, ಆದರೆ ಆ ಪೇಜ್ ನಂಬರ್ ನಾನು ಮಾಡಿಕೊಂಡ ಪೆನ್ಸಿಲ್ ನೋಟಿನಲ್ಲಿ ಮಸುಕಾಗಿಬಿಟ್ಟಿದೆ. ಒಟ್ಟು ಲೆಕ್ಕ ೨೬, ೨೯ ಅಲ್ಲ. Sorry! ೨೯೫ ನೇ ಪುಟದಲ್ಲಿ ಜಯಕುಮಾರನ ಮಗಳ ಸೀಮಂತದ ವಿವರಣೆಯಲ್ಲಿ ಅವಳ  ಸೀರೆ, ಹೂವು ಮುಡಿದ ಜಡೆ ಎಲ್ಲದರ ವಿವರವಿದೆಯೇ ಹೊರತು ಕುಂಕುಮದ ಬಗ್ಗೆ ಪ್ರಸ್ತಾಪ ಇಲ್ಲ. How disappointing!

Advertisements

24 ಟಿಪ್ಪಣಿಗಳು »

 1. ಕುಮಾರ್ ಬುರಡಿಕಟ್ಟಿ said

  ಓಹೋ! ನೀವು ಹಣೆ – ಕುಂಕುಮ ಹುಡುಕಿ ಪಟ್ಟಿ ಮಾಡುವ, ಸುದ್ದಿಯ ಕಾಲಮ್ಮು-ಸೆಂಟಿಮೀಟರ್ ಕಾಲಮ್ಮು ಲೆಕ್ಕಾ ಹಾಕುವ ಕಿತಾಪತಿಗಳನ್ನೂ ಮಾಡ್ತೀರಾ?
  ಈಗ ನನಗೆ ಗೊಂದಲ ಶುರುವಾಗಿ ಬಿಟ್ಟಿದೆ. “ಕವಲು ಕಾದಂಬರಿ ಕೊಂಡ್ಕೋಬೇಡ, ಸುಮ್ಮನೆ ದುಡ್ಡು ಯಾಕೆ ವೇಸ್ಟ್ ಮಾಡ್ತಿಯ. ನಾನು ಒಂದು ಕಾಪಿ ಕೊಂಡ್ಕೋತೇನೆ. ಓದಿ ನಿನಗೆ ಕೊಡ್ತೇನೆ” ಅಂತ ಗೌರಿ ಲಂಕೇಶ್ ಹೇಳಿದ್ರು. ಯಾಕೋ ಕುತೂಹಲ ಬಂದು ಅವರ ಮಾತನ್ನು ಲೆಕ್ಕಿಸದೆ ಕೊಂಡ್ಕೊಂಡೆ. ಓದಬೇಕೆನ್ನುವಷ್ಟರಲ್ಲಿ ಶಿವಸುಂದರ್ ಬಂದು ಎತ್ತಿಕೊಂಡು ಹೋಗಿದ್ದಾರೆ. ವಾಪಾಸು ಯಾವಾಗ ಬರುತ್ತೋ ಗೊತ್ತಿಲ್ಲ. ಈಗ ಗೊಂದಲ ಆಗ್ತಿರೋದು ಅದನ್ನು ಓದಬೇಕಾ ಅಥವಾ ಬೇಡ್ವಾ ಅಂತ. ಗೌರಿ ಮಾತು ಕೇಳದೆ ಕೊಂಡುಕೊಂಡು ದುಡ್ಡು ವೇಸ್ಟ್ ಮಾಡಿದ್ದಾಯ್ತು. ಈಗ ಮತ್ತೆ ಟೈಮೂ ವೇಸ್ಟ್ ಮಾಡಬೇಕಾ ಅನ್ನೋದು ನನ್ನ ಮುಂದಿರೋ ಪ್ರಶ್ನೆ. ಏನು ಮಾಡ್ಲಿ?

  ಅಂದಹಾಗೆ ಪತ್ರಕರ್ತರಿಗೆ ಸುದ್ದಿ ಪೆಗ್ಗು ಸಿಗದೇ ಇದ್ರೂ ಕೆಲವೊಮ್ಮೆ ನಡೆದುಬಿಡುತ್ತೆ. ಆದ್ರೆ ಪೆಗ್ ಸಿಗದೇ ಹೋದ್ರ ಕೊಂಚ ಕಷ್ಟ!

 2. Usha B N said

  Lovely piece, Bageshree. I too struggled to finish the novel with great difficulty. As you have said, forget the pathetic content of the novel, Bhyrappa does not even have the craftsmanship of telling a story. Thanks for the post. I always like reading your blog.

 3. keshav said

  Although I have not read the novel, I loved your writing! :))

 4. suresh kota said

  nice write up! 🙂 🙂

 5. anand said

  ಮಾಡರ್ನ್ ಸ್ತ್ರೀಗೆ ನಮಸ್ಕಾರ. ಹಂಗೇ ಕುಂಕುಮ ಇಟ್ಟುಕೊಂಡಿರುವ ಹೆಣ್ಣಿನ ಪ್ರಸ್ತಾಪ ಎಷ್ಟು ಕಡೆಗಳಲ್ಲಾಗಿದೆ ಅಂತನೂ ಎಣಿಸಿಟ್ಟುಕೊಳ್ಳಬೇಕಿತ್ತು. ಭೈರಪ್ಪನವರು ಇದರ ಬಗ್ಗೆ ತಲೆಕೆಡಿಸಿಕೊಂಡಿದ್ದಾರೋ ಇಲ್ಲವೋ ಅವರನ್ನೇ ಕೇಳಬೇಕು. ಆದರೆ ಅದು ಒಂದು ಕಾದಂಬರಿ ಅದರಲ್ಲಿ ಜಯಕುಮಾರನೆಂಬ ಪಾತ್ರ ಹಾಗೆ ಯೋಚಿಸುತ್ತದೆ. ಲೇಖಕರ ಬಗೆಗಿನ ಪೂರ್ವಗ್ರಹಗಳನ್ನು ಬಿಟ್ಟು ಒಂದು ಕತೆಯನ್ನು ಕತೆಯಾಗಿ ಓದುವುದನ್ನು ಅಭ್ಯಾಸ ಮಾಡಿಕೊಂಡರೆ ಇದೆಲ್ಲಾ ತಲೆಕೆಡುವುದಿಲ್ಲ. 🙂 ಈ ನಿಮ್ಮ ಪುಟ್ಟ ಬರಹದಲ್ಲೇ ಎಷ್ಟು ಸಾರಿ ಭೈರಪ್ಪ ಭೈರಪ್ಪ ಎಂದು ಕನಲಿದ್ದೀರಿ ಎಣಿಸಿನೋಡಿ 🙂

 6. soorya said

  ನನಗೆ ಅನಂದ್‌ ಅವರ ಪ್ರತಿಕ್ರಿಯೆ ಇಷ್ಟವಾಯಿತು ಹ್ಹ ಹ್ಹ ಹ್ಹ….:೦

 7. maithreyi said

  haven’t read the novel yet. but as usual loved your writing. And for the likes of some people who wonder why you go on and on about ‘teller’ instead of sticking to the ‘tale’, maybe you should consider writing a piece on how a story does not happen and exist in vacuum. what say?

 8. anyamanaska said

  ಹಾದರ ಮಾಡುವ ಗಂಡಸಿಗೆ ಪಾಪ ಅನ್ನೋ ಭೈರಪ್ಪನವರ ಸಮರ್ಥನೆಯೇ ಎಷ್ಟು ಹೇಸಿಗೆ ನೋಡಿ. ನೀವು ಬರೆದ ಹಾಗೇ ಈ ಕೃತಿಯನ್ನು, ಬೈದೋ ಹೊಗಳಿಯೋ ಅಂತು ಭೈರಪ್ಪನವರ ಬಾಲಬಡುಕರು, ಭೈರಪ್ಪನವರ ಸಿದ್ಧಾಂತಪ್ರಿಯರು ಕವಲು ಕಾದಂಬರಿಯನ್ನು ಜೀವಂತವಾಗಿಟ್ಟರು. ನಾವು ಅದನ್ನು ಚರ್ಚೆಯೇ ಮಾಡದೆ ಬಿಟ್ಟಿದ್ದರೆ ಚೆನ್ನಾಗಿತ್ತು. ಆದ್ರೆ ಏನ್ಮಾಡ್ತೀರಾ “ಅಕ್ಷರ ಲೋಕ”ದ ತುಂಬಾ ಭೈರಪ್ಪನವರ ಪ್ರತಿರೂಪಗಳೇ ತುಂಬಿಕೊಂಡಿವೆ. ಲೆಕ್ಕಕ್ಕಿಲ್ಲದಷ್ಟು ಬರೆದು.. ಕವಲು ಸೇಲ್ ಆಗುವಂತೆ ಮಾಡಿ ಬಿಟ್ಟರು. ಕುತೂಹಲಕ್ಕೆಂದು ಓದಿದ ನಾವೆಲ್ಲ ಅದನ್ನೊಂದು ಸಾಮಾನ್ಯ ಪುಸ್ತಕದಂತೆ ಕಡೆಗಣಿಸಿ ಬಿಡಬೇಕಿತ್ತು. ಆಗಲಿಲ್ಲ ಅಷ್ಟೆ.
  ಕುಮಾರ್ ಬುರುಡಿ ಕಟ್ಟಿಅವರು ಇದನ್ನು ಓದದೇ ಬಿಟ್ಟರು, ಯಾವ ಲಾಸೂ ಇಲ್ಲ.

 9. simha sn said

  ಆದರಣೀಯ ಬಾಗೇಶ್ರೀ ಅವರೇ,
  ಓದದೆ ಇರುವ ಹಕ್ಕು ಮತ್ತು ಆಯ್ಕೆಯ ಸ್ವಾತಂತ್ರ್ಯ ಎಲ್ಲರಿಗೂ ಇರುವಾಗ ಕಷ್ಟ ಪಟ್ಟು ಕೊಂಡಾದರೂ ಭೈರಪ್ಪನವರನ್ನು ಓದುವ ಕರ್ಮ ನಿಮಗ್ಯಾಕೆ ಬಂತೋ ಕಾಣೆ! ನೀವು ಅದನ್ನು ಓದಲೇಬೇಕು ಅಂತ ಭೈರಪ್ಪ ಏನಾದ್ರೂ ಹಠ ಹಿಡಿದಿದ್ರಾ? ಎನಿ ಹೌ , ನೀವು ಅವರಿಗಿಂತ ಚಂದದ ಕಾದಂಬರಿ ಬರೆದು ಕೊಟ್ರೆ ನಾನಂತೂ ಕಾಸು ಕೊಟ್ಟು ಕೊಂಡು ಓದುತೀನಪಾ… ಟೀಕೆಗಳಿಗೆ ಬೆಲೆ ಬರುವುದು ಟೀಕಿಸುವವರ ಯೋಗ್ಯತೆಯ ಮೇಲೆ ಅನ್ನೋದಷ್ಟೇ ಭರತ ವಾಕ್ಯ… ಮುಂದಿನ ಜನ್ಮದ ವರೆಗೂ ಕಾಯಲೋ…!

  • ರಮೇಶ್ said

   ಸಿಂಹ… ನೀವು ಹೇಳಿದ ಮಾತಿಗೆ ನನ್ನ ಎರಡು ಪೈಸೆಗಳ ಪ್ರತಿಕ್ರಿಯೆ…. ಸಿನೆಮಾ ನೋಡಿ ಚೆನ್ನಾಗಿಲ್ಲ ಅಂತ ನಾವು ಹೇಳಿದ ತಕ್ಷಣ ಸಿನೆಮಾದ ನಿರ್ದೇಶಕ ನೀವು ಇದಕ್ಕಿಂತ ಚೆಂದವಾದ ಒಂದು ಸಿನಿಮಾ ಮಾಡಿ ಅಂತ ಹೇಳೋದು ತುಂಬಾ ಹಾಸ್ಯಾಸ್ಪದ. ಎಲ್ಲರೂ ಕೊರೆಯೋ, ಕ್ಷಮಿಸಿ, ಬರೆಯೋ ಮಂದಿ ಆಗ್ಹೋದ್ರೆ, ಓದೋ ಮಂದಿ ಯಾರು ಸ್ವಾಮೀ… ?? ಓದಿದ ಮೇಲೆ ಚೆನ್ನಾಗಿದೆ ಅಥ್ವಾ ಚೆನ್ನಾಗಿಲ್ಲ ಅಂತ ಹೇಳೋ ಹಕ್ಕು ಕೂಡ ಒಬ್ಬ ಓದುಗನಿಗೆ ಇಲ್ಲಾ ಅಂದ್ರೆ ತುಂಬಾ ಕಷ್ಟ.. ಎಮೆರ್ಜೆನ್ಸಿ ಸಮಯದ ನೆನಪಾಗುತ್ತೆ.. ಹೌದು ಭೈರಪ್ಪ ಈ ಕಾದಂಬರಿ ಬರೆದು ರೂಪಾಯಿ, ಡಾಲರ್ರು ಎರಡೂ ರೇಟ್ ಹಾಕಿ ಮಾರುಕಟ್ಟೆಗೆ ಬಿಟ್ಟಿದ್ದು ಸುಮ್ಮನೆ ಅಲ್ಲಾ.. ಜನಕ್ಕೆ ನನ್ನ ಕಾದಂಬರಿ ಓದಿ ಅಂತ ಹೇಳಿದ ರೀತಿ ಅದು.. ತಪ್ಪೇನಿಲ್ಲ.. ಅದು ಅವರ ತಪ್ಪಲ್ಲ.. ಹೀಗಾಗಿ “ನೀವು ಅದನ್ನು ಓದಲೇಬೇಕು ಅಂತ ಭೈರಪ್ಪ ಏನಾದ್ರೂ ಹಠ ಹಿಡಿದಿದ್ರಾ?” ಅಂತ ಅನ್ನೋ ಪ್ರಶ್ನೆಗೆ ಪ್ರತ್ಯಕ್ಷವಾಗಿ / ಪರೋಕ್ಷವಾಗಿ ಭೈರಪ್ಪ ಹೇಳಿದ್ರು ಅನ್ನೋದು ನನ್ನ ಅಭಿಪ್ರಾಯ… ನಾನು ನೀವು ಬರೆದದ್ದನ್ನು ಸರಿಯಾಗಿ ಅರ್ಥ ಮಾಡಿಕೊಳ್ಳದೆ ಇದಿಷ್ಟನ್ನೂ ಬರೆದಿದ್ರೆ ಕ್ಷಮೆ ಇರಲಿ…

  • Ganesh K said

   Well said..!!

 10. Uloopi said

  ವಿಮರ್ಶೆ ಮಾಡುವ,ಟೀಕಿಸುವ ಎಲ್ಲರೂ ಕಥೆ,ಕಾದಂಬರಿ ಬರೆಯುವ ಯೋಗ್ಯತೆ ಉಳ್ಳವರಾಗಿರಬೇಕು ಎಂದು ಹೇಳುವುದೇ ಒಂದು ಮೂರ್ಖ ಮತ್ತು ವಿತಂಡವಾದ. ಒಂದು ಕಾಲದ ಅತ್ಯುತ್ತಮ ಕ್ರಿಕೆಟ್ ಬರಹಗಾರರಾಗಿದ್ದ ರಾಜನ್ ಬಾಲ ಅವರು ಒಂದು ಸಂದರ್ಶನದಲ್ಲಿ ಹೀಗೆ ಹೇಳಿದ್ದರು ‘ಮೊಟ್ಟೆ ರುಚಿಯಾಗಿದೆಯೇ ಇಲ್ಲವೇ ಎಂದು ಹೇಳಲು ನೀವು ಮೊಟ್ಟೆ ಇಡಬೇಕಾಗಿಲ್ಲ 🙂 ,ರುಚಿಯ ಬಗ್ಗೆ ತಿಳುವಳಿಕೆ ಇದ್ದರೆ ಸಾಕು’ ಎಂದು.ಇದೇ ಮಾತನ್ನು ನಾನು ಮೇಲಿನ ಪ್ರತಿಕ್ರಿಯೆಗೆ ಹೇಳಬೇಕಾಗುತ್ತದೆ. ಭೈರಪ್ಪನವರನ್ನು ಆರಾಧಿಸುವ, ಅವರ ಎಲ್ಲ ಕೃತಿಗಳನ್ನೂ ಮೆಚ್ಚುವ ಹಕ್ಕು ಮತ್ತು ಅಧಿಕಾರ ಹೇಗೆ ಅವರ ಅಭಿಮಾನಿಗಳಿಗೆ ಇದೆಯೋ ಹಾಗೆ ಅವರನ್ನು,ಅವರ ಕೃತಿಗಳನ್ನು ಟೀಕಿಸುವ ಹಕ್ಕು ಎಲ್ಲರಿಗೂ ಇದೆ.
  ಇನ್ನು ಈ ಕವಲು ಕೃತಿಯ ಬಗ್ಗೆ ಹೇಳಬೇಕಾದರೆ ನನಗೆ ಅನ್ನಿಸುವುದು ಹೀಗೆ ‘ಹೆಂಗಸರ ಚಾರಿತ್ರ್ಯವನ್ನು ಅವರ ಕೂದಲಿನ ಉದ್ದದಲ್ಲಿ ಅಳೆಯುವ’ ಕೃತಿ.ಈ ಕೃತಿಯ ಪ್ರಕಾರ ಹೆಂಗಸರ ಕೂದಲ ಉದ್ದವೂ ಅವರ ಚಾರಿತ್ರ್ಯವೂ directly proportional.!!ಹಾಗೇ ಹೆಂಗಸರ ವಿದ್ಯೆ ಮತ್ತು ಅವರ ಚಾರಿತ್ರ್ಯ ಮಾತ್ರ indirectly proportional.!!! ತನಗಿಂತ ಸುಮಾರು ೧೬ ವರ್ಷಗಳಷ್ಟು ಚಿಕ್ಕವಳಾದ,ಮಾನಸಿಕವಾಗಿ ಇನ್ನೂ ಮಗುವೇ ಆಗಿರುವ ವತ್ಸಲೆಯನ್ನು ಮದುವೆಯಾಗುವ ನಚಿಕೇತನಂಥಹ paedophile ಇಲ್ಲಿ ಆದರ್ಶ ಮೆರೆಯುವ ಹೀರೋ.ಇನ್ನು ಕಥಾನಾಯಕ ಜಯಕುಮಾರ್ ತನ್ನ ಮಗಳ ಆರೈಕೆಗಾಗಿ ಇನ್ನೊಂದು ಮದುವೆ ಮಾಡಿಕೊಳ್ಳಲು ಬಯಸಿದಲ್ಲಿ ಅದು ನ್ಯಾಯ.ಆದರೆ ಹೊರದೇಶದಲ್ಲಿ ಇದ್ದುಕೊಂಡು ಹೆಣ್ಣುಗಳ ಜೊತೆಗೆ ಮೋಜು ಮಾಡುವ ನಚಿಕೇತನ ಎರಡನೇ ಹೆಂಡತಿ ಟ್ರೇಸಿ ಅದೇ ಕರ್ತವ್ಯವನ್ನು ತನ್ನ ಗಂಡ ನಚಿಕೇತನಿಂದ (ಹೌದು ಅವಳು ಅದನ್ನು ಆತನಿಂದ ಅಪೇಕ್ಷಿಸುವುದಿಲ್ಲ ಎಂದು ಮಾತು ಕೊಟ್ಟಿರುತ್ತಾಳೆ) ಬಯಸಿದರೆ ಅವಳು ಮಾಡುತ್ತಿರುವುದು scheming.! ಈ ನಚಿಕೇತ ನಂತೂ ಹೆಣ್ಣುಗಳ ಜೊತೆ ಮೋಜು ಮಾಡುವುದಕ್ಕೆ ಹುಟ್ಟಿರುತ್ತಾನೆ. ಆದರೆ ಅವನು ಮಾತ್ರ ಮಹಾ ಸಭ್ಯ. ಇನ್ನು ಜಯಕುಮಾರನ ಬಗ್ಗೆ ನಾನು ಹೇಳುವುದಕ್ಕಿಂತ,ಕಾದಂಬರಿ ಓದಿ ತಿಳಿದುಕೊಂಡರೆ ವಾಸಿ.ಇದು ನಾನು ದಾಕ್ಷಿಣ್ಯಕ್ಕಾಗಿ ಖರೀದಿಸಿ,ಖರೀದಿಸಿದ್ದಕ್ಕಾಗಿ ಓದಿದ ಕಾದಂಬರಿ.

 11. ನಿಮ್ಮ blog update rate “Posts per week:0.2” ಇದೆ. ಅಂದರೆ ಸರಾಸರಿ ನೀವು ಐದು ವಾರಗಳಿಗೊಮ್ಮೆ ಹೊಸ ಬ್ಲಾಗ್ ಪೋಸ್ಟ್ ಹಾಕುತ್ತೀರಿ. ಭೈರಪ್ಪನವರ ಕಾದಂಬರಿ ನಿಮಗೆ ಅಷ್ಟೊಂದು ಕೇವಲ ಅನ್ನಿಸಿದ್ದರೆ ಅದರ ಮೇಲೆ ಒಂದು ಬ್ಲಾಗ್ ಪೋಸ್ಟ್ ಬರೆಯಬೇಕಿತ್ತೆ? ಐದು ವಾರಗಳಲ್ಲಿ ನಿಮಗೆ ಬೇರೆ ಯಾವ ವಿಷಯವೂ ಸಿಗಲಿಲ್ಲವೆ? 🙂

 12. Ravi said

  ಎಲ್ಲ ಭೈರಪ್ಪ ಮಹಾತ್ಮೆ. ಟಿ.ವಿ.ಯವರಿಗೆ TRP ಥರ, ಎಲ್ಲರಿಗೂ ಅವರವರ ರೇಟಿಂಗ್ ಪಾಯಿಂಟ್ ಅಲ್ಲಿ ಹೆಚ್ಚಳ. ಪುಸ್ತಕ ಪ್ರಕಾಶಕರಿಗೆ, ದಿನಪತ್ರಿಕೆ, ವಾರಪತ್ರಿಕೆ, ಮಾಸಪತ್ರಿಕೆ.. ಹೀಗೆ ಯಾರಿಗೂ ಅವರವರ ರೇಟಿಂಗ್ ಪಾಯಿಂಟ್ ಅಲ್ಲಿ ಮೋಸ ಇಲ್ಲ.. ಕೊನೆಗೆ ‘ಭೈರಪ್ಪ’ ಅನ್ನೋ ಶಬ್ದ ಹಾಕಿದರಂತೂ ಬ್ಲಾಗ್ ಹಿಟ್ಸ್ ಅಲ್ಲೂ ಹೆಚ್ಚಳ 😀 ಅತೀ ಒಂದಾದಮೇಲೊಂದು ಕಾಮೆಂಟ್ಗಳು ಬೇರೆ. ಇಲ್ಲಿವರೆಗೂ ಭೈರಪ್ಪನವರ ಯಾವ ಕಾದಂಬರಿ ಓದಿರದಿದ್ದರೂ, ಎಲ್ಲ ಓದಿದ ಥರ ಅನಿಸ್ತಾ ಇದೆ ನಂಗೆ. Thanks to all columnists, bloggers, and commenters 😀

 13. veda said

  ನನ್ಗಂತು ಜನ ಒಬ್ಬ ಲೇಖಕನ ಬಗ್ಗೆ ಯಾಕೆ ಒಂದೇ ತರದ ಭಾವನೆ ಇಟ್ಟ್ಕೊಂಡ್ ಇರ್ಬೇಕು ಅಂತ ಮೇಲಿನ ಎಲ್ಲ ಪ್ರತಿಕ್ರಿಯೆಗಳನ್ನು ನೋಡಿದಾಗ ಅನ್ಸುತ್ತೆ . ಒಬ್ಬ ಖಳನಟ ಹೀರೋ ಆಗೋದು ಅಥವ ಒಬ್ಬ ಹೀರೋ ಖಳನಟನಾಗೋದು ಎಷ್ಟು ಸಹಜವಾಗಿ ಒಪ್ಕೊಳ್ತ್ಹಿರೋ ಹಾಗೆ ಒಬ್ಬ ಲೇಖಕನೂ ಅಷ್ಟೇ . ಯಾವಾಗಲು ಅತ್ಯುತ್ತಮವಾದ , ಉತ್ಹ್ಕ್ರುಷ್ಟವಾದದ್ದನ್ನೇ ಬರೀಬೇಕು ಅಂತ ಯಾಕೆ ನಿರೀಕ್ಷಿಸಬೇಕು .ಒಬ್ಬ ವ್ಯಕ್ತಿ ಹೀಗೆ ಇರ್ಬೇಕು ಹೀಗೆ ಬರೀಬೇಕು ಅಂತ ಬಯಸೋದೆ ತಪ್ಪು ಅಂತ ನನ್ನ ಅಭಿಪ್ರಾಯ .ಇದು ಹೇಗಿರುತ್ತೆ ಅಂದ್ರೆ ನಾವು ಇಷ್ಟ ಪಡುವ ಮಕ್ಕಳು ಯಾವಾಗಲು ಮೊದಲ್ನೇ ರಾಂಕೆ ಬರಬೇಕು ಅಂತ ಬಯಸಿದ ಹಾಗೆ ಇರುತ್ತೆ .ಹಾಗೆ ಬೈರಪ್ಪನವರು ಒಂದು ಕಾಲದಲ್ಲಿ ಮೊದಲ ದರ್ಜ್ಹೆಯ ಪರ್ವ, ವಂಶವೃಕ್ಷ ಇತ್ಯಾದಿಗಳನ್ನು ಬರೆದರು ಪಾಪ ಈಗ ಅವರ ಯೋಚನೆಗಳೆಲ್ಲ ಕವಲು ಕವಲಾಗಿರುವಾಗ ನಿಮ್ಮೆಲ್ಲರ ಜಟಾ ಪಟಿ ಸುಮ್ಮನೆ ವ್ಯರ್ಥ .

 14. r t sharan said

  I struggled hard to complete the reading of this non-sense article….. Anand’s comments are sensible and right. … Bagesri raaga taala tappide…. …Its a novel… pl. dont compare urself with the characters Bagesri… paatragalive…

 15. simha sn said

  ಪ್ರಿಯ ರಮೇಶ್ ಮತ್ತು ಉಲೂಪಿ ಅವರೇ,
  ನನಗೆ ಹಿಡಿಸಲಿಲ್ಲ, ನನಗೆ ಅರ್ಥವಾಗಲಿಲ್ಲ… ಮುಂತಾದವು ‘ಅಭಿಪ್ರಾಯ’ ಅದನ್ನು ಹೇಳಲಿಕ್ಕೆ ಎಲ್ಲರಿಗೂ ಹಕ್ಕಿದೆ. ಮೊಟ್ಟೆಯ ರುಚಿಯನ್ನು ಯಾರು ಬೇಕಾದರೂ ಹೊಗಳಬಹುದು ಅಥವಾ ತೆಗಳಬಹುದು. ಪರಂತು ಈ ಮೊಟ್ಟೆಯ ಆಕಾರ ಸರಿಯಿಲ್ಲ, ಇದನ್ನು ಸರಿಯಾಗಿ ಬೇಯಿಸಿಲ್ಲ, ಉಪ್ಪುಕಾರ ಹಾಕೋದೇ ಬೇಯಿಸಿದವರಿಗೆ ಗೊತ್ತಿಲ್ಲ… ಮುಂತಾಗಿ ಪದರ ಪದರವಾಗಿ ವಿಮರ್ಶೆ ಮಾಡಿದಾಗ, ಅಂಥವರಿಂದ ‘ಸರಿಯಾದದ್ದು’ ಯಾವುದು ಎಂಬ ನಿದರ್ಶನವನ್ನು ಅಪೇಕ್ಷಿಸಲೇ ಬೇಕಾಗುತ್ತದೆ ಅಲ್ಲವೇ

 16. M. S. Prabhakara said

  ಶ್ರೀಮತಿ ಬಾಗೇಶ್ರೀ, ನಿಮ್ಮ ಇತ್ತೀಚಿನ ಬ್ಲಾಗಲ್ಲಿನ ಕವಲು ಕಾದಂಬರಿಯ ಬಗ್ಗೆ ನಿಮ್ಮ ಟೀಕಾತ್ಮಕ ಅಭಿಪ್ರಾಯಗಳು ಭಾರೀ ಕೋಡಿ ಹರಿಯುವಂತಾ ಕಾಮೆಂಟ್ ಗಳನ್ನು ಪ್ರಚೋದಿಸಿವೆ ಅನ್ನಿಸುತ್ತೆ. ಇವುಗ್ಗಳಲ್ಲಿ ನನಗೆ ಅತಿ ಅಸಂಬದ್ಧ ಅನ್ನಿಸಿರುವುದು ಮತ್ತು ಒಂದು ರೀತಿ ನಗೆಯನ್ನೂ ತಂದಿರುವುದು ನಿಮಗೆ ಮರುಸವಾಲೆನಿಕೊಳ್ಳುವಂತಹ ಪ್ರತಿಕ್ರಿಯೆಗಳು: ನಿಮಗೆ ಆ ಪುಸ್ತಕ ಇಷ್ಟವಾಗಿರದಿದ್ದರೆ ಯಾಕೆ ಓದಿದಿರಿ? ಅಥವಾ ಇದಕ್ಕೂ ಅಸಂಬದ್ಧ ಮರುಸವಾಲು: ಶ್ರೀ ಭೈರಪ್ಪನವರು ಬರೆಯುವಂತೆ ಕಾದಂಬರಿ ಕತೆ ಬರೆಯಬಲ್ಲಿರಾ? ಆ ಕ್ಷಮತೆ ಇಲ್ಲದಿದ್ದರೆ ಅವರನ್ನು ಟೀಕಿಸುವ ಅಧಿಕಾರ ಎಲ್ಲಿಂದ ಬಂತು? ಇತ್ಯಾದಿ. ಮಾರುಕಟ್ಟೆಯಲ್ಲಿ ಹತ್ತಾರು ಸಾವಿರ ವಸ್ತುಗಳು ಬಿಕರಿಯಾಗುತ್ತವೆ. ರೂಪಾಯಿ ಡಾಲರುಗಳಲ್ಲಿ ಮೌಲ್ಯವನ್ನು ಪ್ರ್ದಕಟಿಸಿಕೊಂಡಿರುವ ಪುಸ್ತಕವೂ ಇಂತಹ ಒಂದು ಸರಕು ತಾನೇ? ಗ್ರಾಹಕನಂತೆ ನಾನು ಪೇಟೆಗೆ ಹೋಗಿ ಹಣ್ಣು ತರಕಾರಿ ಖರೀದಿಸಿ ಮನೆಗೆ ವಾಪಸಾದಮೇಲೆ ಆ ಹಣ್ಣು ತರಕಾರಿ ಕೊಳೆತಿದೆ ಅಂತ ಮನದಟ್ಟಾದರೆ ಆ ಬಗ್ಗೆ ನನಗೆ ಬೇಜಾರಿಸಿಕೊಳ್ಳಲಿಕ್ಕೆ, ಆಕ್ಷೇಪಣೆ ಮಾಡಲಿಕ್ಕೆ ಅಧಿಕಾರ ಯಾವಾಗಲೂ ಇದೆ. ಆ ರೀತಿ ನನ್ನ ಅತೃಪ್ತಿಯನ್ನು ಪ್ರಕಟಿಸಿದರೆ ಆ ಸರಕಿನ ಮಾರಾಟಗಾರನೋ ಅಥವಾ ಅವನ ಮಿತ್ರರೋ ನನ್ನ ಮೇಲೆ ಕೋಪಮಾಡಿಕೊಂಡು, ನೀನೇ ಯಾಕೆ ಹಣ್ಣು ತರಕಾರಿ ಬೆಳೆಸಿಕೊಳ್ಳಲಿಲ್ಲ? ಅಂತ ಧಾಳಿ ಮಾಡುವುದು ಕವಲು ಬಗ್ಗೆ ನಿಮ್ಮ ಅಭಿಪ್ರಾಯವನ್ನು ಟೀಕಿಸಿರುವಂತೆ. ಈ ಸಂದರ್ಭದಲ್ಲಿ ಇಂಗ್ಲಿಷ್ ಸಾಹಿತಿ ಸ್ಯಾಮ್ಯುಯಲ್ ಜಾನ್ಸನ್ (Samuel Johnson) ನ ಅತಿ ಔಚಿತ್ಯ ಉಕ್ತಿಯನ್ನು ನಿಮ್ಮ ಕ್ರಿಟಿಕ್ ಗಳ ಗಮನಕ್ಕೆ ತರುತ್ತೇನೆ: ಒಬ್ಬ ಬಡಗಿ ನಾನು ಕೋರಿದ್ದ ಮೇಜೊಂದನ್ನು ವಕ್ರವಾಗಿ ಮಾಡಿ ನನಗೆ ತಲುಪಿಸಿದರೆ ನಾನು ಬಡಗಿಯಲ್ಲದಿದ್ದರೂ, ಮತ್ತು ನನಗೆ ಮೇಜೊಂದನ್ನು ತಯಾರಿಸಲು ಬರದಿದ್ದರೂ, ಆ ಕೆಟ್ಟರೀತಿ ತಯಾರು ಮಾಡಿದ ಮೇಜನ್ನು ತಿರಸ್ಕರಿಸಲು ಮತ್ತು ಅದನ್ನು ತಯಾರಿಸಿದ ಬಡಗಿಯನ್ನೂ ಟೀಕಿಸಲು ನನಗೆ ಹಕ್ಕು ಇದೆ. ಏಕೆಂದರೆ ಮೇಜು ತಯಾರಿಸುವುದು ನನ್ನ ಕಸುಬಲ್ಲ. [ “You may scold a carptnter who had made you a bad table, though you cannot make a table. It is not your trade to make tables”.] ಈ ಒಂದು ಸಾಮಾನ್ಯ ತಿಳುವಳಿಕೆ ಇಲ್ಲದಿದ್ದರೆ ನಿಮ್ಮ ಬ್ಲಾಗು ಪ್ರಹೋದಿಸಿರುವ ಅಸಂಬದ್ಧ ಪ್ರಲಾಪಗಳ ಜಡಿಮಳೆ ಅನಿವಾರ್ಯ.

  ಇದೆಲ್ಲಾ ಇರಲಿ. ನಿಮ್ಮ ಕಾಮೆಂಟ್ ಬಹಳ ಮೆಚ್ಚಿಕೊಂಡೆ. ಇತಿ, ಪ್ರಭಾಕರ

 17. srinivasdeshpande said

  sumne ondistu olle kelasa maadri. yaak thavadu kutheeri

 18. Shastry said

  ನಂಗೆ ಒಂದು ಕಾದಂಬರಿ ಅಥವಾ ಕಥೆ ಯಲ್ಲಿ ಇರಬೇಕಾದದ್ದು “ಅದು ತಾನಾಗೆ ಓದಿಸಿ ಕೊಳ್ಳಬೇಕಾದ” ಗುಣ. ಅದು ಇಲ್ಲ ಅಂದ್ರೆ ಓದೋದು ಹೇಗೆ?

  ಆಮೇಲೆ ಒಂದು ವಿಷ್ಯಾ… ಭೈರಪ್ಪ ನವರ ಪುಸ್ತಕ ಮಾತ್ರ ಅಲ್ಲ, ನೀವು ಅನಂತ ಮೂರ್ತಿ ಅವರ ಪುಸ್ತಕ ನೋಡಿ ಅಲ್ಲೂ ಕೂಡ ರುಪಾಯಿ ಮತ್ತೆ ಡಾಲರ್ ನಲ್ಲಿ ಬೆಲೆ ನ ಮುದ್ರಿಸಿದ್ದಾರೆ.

 19. Varun.Naikar said

  Mahileya adrallu ‘Aadunika’ mahileya bagge Byrappa innondu ‘Kadambari’ baribahudu….Kaadu nodona !!!

 20. ಒಂದು ಕಾದಂಬರಿ ಓದುವ ಆಟ ಇಷ್ಟೊಂದು ಸ್ವಾರಸ್ಯಕರವಾಗಿರುತ್ತೆ ಅಂತ ಗೊತ್ತಿರಲಿಲ್ಲ ಕಣ್ರಿ  ನಾನೂ ಪ್ರಯತ್ನ ಮಾಡ್ತೀನಿ

  • Ganesh K said

   ಯಾರೋ ಸಲಹೆ ಕೊಟ್ಟರು ಅಂತ ಭೈರಪ್ಪನವರ “ಮಂದ್ರ” ಕಾದಂಬರಿ ತಗೊಂಡು ಬಂದೆ, ಪ್ರತಿಸರತಿ ಆ (ಮಂದ್ರ) ಕಾದಂಬರಿ ಓದೋಕ್ಕೆ ಅಂತ ಹಿಡಿದು ಕೂತರೆ ಓದೋದಂತು ದೂರದ ಮಾತು ಆದರೆ ನಿದ್ದೆ ಮಾತ್ರ ಹತ್ತಿರದಲ್ಲೇ ಸುಳಿದಡ್ತಾ ಇರತ್ತೆ, ಪಾತ್ರಗಳು ಎಲ್ಲಿಂದ ಎಲ್ಲಿಗೆ ಹೋಗ್ತಾ ಇವೆ ಅಂತ ಅರ್ಥ ಮಾಡಿಕೊಳ್ಳೋವಷ್ಟರಲ್ಲಿ ನಾನು ಸ್ವಪ್ನಲೋಕದಲ್ಲಿ ವಿಹರಿಸುತ್ತಿರಿತ್ತೇನೆ. ನೀವು ಮೇಲೆ ಬರೆದದ್ದು ಭೈರಪ್ಪನವರ ಕಾದಂಬರಿಗಳಿಗೆ ತುಂಬಾ ಸಮಂಜಸ ಈಗ ಅನ್ನಿಸುತ್ತಿದೆ.
   ಅದರ ಬದಲಾಗಿ ಅನಕೃ ಅಥವಾ ಸು. ರುದ್ರಮೂರ್ತಿ ಶಾಶ್ತ್ರಿಯವರ “ಚಾಣಕ್ಯ” (ಚಾರಿತ್ರಿಕ ಕಾದಂಬರಿ) ಹಿಡಿದು ಕೂತರೆ ಪುಸ್ತಕಾನ ಎತ್ತಿಡಿಲಿಕ್ಕೆ ಮನಸೇ ಒಪ್ಪುವುದಿಲ್ಲ.
   ಹಾಟ್ಸ್ ಆಫ ಟು ಯು ಭಾಗೆಶ್ರೀಯವರೇ.

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: