ಕಾಗೆ ನರಿಗಳ ಹೊಸ ಅವತಾರಗಳು

ನಾವು ಸ್ಕೂಲಿಗೆ ಹೋಗ್ತಿದ್ದಾಗ ಏಕಪಾತ್ರಾಭಿನಯ ಬಹಳ popular ಆಗಿತ್ತು. ಈಗ ಬೆಂಗಳೂರಿನ ಸ್ಕೂಲುಗಳಲ್ಲಿ ಮಕ್ಕಳಿಗೆ ಹೀಗೆಂದರೇನಂತಲೂ ನೆಟ್ಟಗೆ ಗೊತ್ತಿದ್ದ ಹಾಗಿಲ್ಲ.   ಧರಣಿ ಮಂಡಲ ಮಧ್ಯದ ಕರ್ನಾಟ ದೇಶದೊಳ್ ಇಂದು ರಾರಾಜಿಸುತ್ತಿರುವ ರಾಜಕಾರಣಿಗಳ ಪ್ರತಿಭೆ ನೋಡಿ ನನಗೆ ನಮ್ಮ ಸ್ಕೂಲಿನಲ್ಲಿ ನಾವು ಆಡುತ್ತಿದ್ದ ಏಕಪಾತ್ರಾಭಿನಯ ನೆನಪಾಯಿತು. “ಇಲ್ಲಿ ನಿಂತರೆ ಪಕ್ಷಕ್ಕೆ ನಿಷ್ಟ, ಇಲ್ಲಿ ನಿಂತರೆ ಭಿನ್ನಮತೀಯ” ಅಂತ ಸಲೀಸಾಗಿ ನಟನೆಯ ಶೈಲಿ, ದನಿಯನ್ನು  ಬದಲಾಯಿಸುವ ವರ್ತೂರ್ ಪ್ರಕಾಶರು, ರೇಣುಕಾಚಾರ್ಯರು…   “ಇಲ್ಲಿ ನಿಂತರೆ ಜಾತ್ಯಾತೀತ, ಇಲ್ಲಿ ನಿಂತರೆ ‘ಜಾತ್ಯಾತೀತ ಅಂದರೆ ಏನ್ರೀ’ ಅಂತ ಕೇಳುವವನು” ಅಂತ ಉವಾಚಿಸುವ ನಮ್ಮ ಅದ್ವಿತೀಯ ಕುಮಾರ ಪ್ರತಿಭೆ… ಇವರಲ್ಲಿ ಯಾರಾದ್ರೂ ನಮ್ಮ   ಸ್ಕೂಲಿನಲ್ಲಿದ್ದಿದ್ದರೆ ಎಂಥಾ ದೊಡ್ಡ ಸ್ಟಾರುಗಳೇ ಆಗ್ತಿದ್ರಲ್ಲ ಅಂತ!

ಒಟ್ಟಾರೆ, ಕೋಟಿಗಟ್ಟಲೆ ದುಡ್ಡು ಹರಿಸಿ ನಡೆದಿರುವ, ನಡೆಯುತ್ತಿರುವ ಶಾಸಕರ ಕೊಡುಕೊಳ್ಳಾಟದ ಘೋರತೆಯನ್ನು ಪಕ್ಕಕ್ಕಿಟ್ಟು ಬರೀ ಟಿವಿಯಲ್ಲಿ ಲೈವ್ ಕವರೇಜ್ ತಮಾಶೆ ನೋಡಿ ನಗಲಿಕ್ಕೆ ಶಕ್ತಿ ಇದ್ದವರು ಸ್ಕೂಲಿನ ತೆನಾಲಿರಾಮ- ಕೃಷ್ಣದೇವರಾಯ ಏಕಪಾತ್ರಾಭಿನಯ ನೋಡಿ ನಕ್ಕ ಹಾಗಿ ನಕ್ಕುಬಿಡಬಹುದು. ಯಾರೋ ಅಂಗಿ ಹರ್ಕೊಂಡಿದ್ದು, ಇನ್ಯಾರೋ ಬೆಂಚ್ ಮೇಲೆ ಹತ್ತಿದ್ದು ಇತ್ಯಾದಿಗಳನ್ನು ಮತ್ತೆ ಮತ್ತೆ ಟಿವಿ ಚಾನೆಲ್ಲುಗಳು ರಂಜನೀಯ ಕಾಮೆಂಟ್ರಿಗಳ ಜೊತೆಗೆ ತೋರಿಸುತ್ತಲೇ ಇವೆ. ಅದನ್ನು ಬೋಂಡಾ ತಿನ್ನುತ್ತಾ ನೋಡುವ ನಮ್ಮಂತವರಿಗೆ ಈ ರೀತಿಯ so-called “ಅಸಭ್ಯ” ವರ್ತನೆಯೇ ಮಹಾಪರಾಧ ಮತ್ತು ತಮಾಶೆ ಎರಡೂ ಆಗಿ ಏಕಕಾಲಕ್ಕೆ ಕಂಡು, ಇದಕ್ಕಿಂತ ದೊಡ್ಡ ರಾಜಕೀಯ  ಕ್ರೈಂಗಳೆಲ್ಲಾ ಮರೆತೇ ಹೋಗತ್ತಾ ಅಂತಲೂ ಅನ್ನಿಸುತ್ತದೆ.

ಅದೇನೆ ಇರಲಿ, ಸಜ್ಜನಿಕೆ ಮತ್ತು ಸುಸಂಸ್ಕೃತಿ ನಮ್ಮ ರಾಜ್ಯದ ನೆಲದ ಸಹಜ ಗುಣ ಅಂತೆಲ್ಲ ಭ್ರಮೆ ನಮ್ಮಲ್ಲಿ ಏನಾದರೂ ಇನ್ನೂ ಉಳಿದಿದ್ದರೆ ಅದು ಇಷ್ಟು ಹೊತ್ತಿಗೆ ಗಣಿಯ ದಟ್ಟ ಕೆಂಪು ಧೂಳಿನಲ್ಲಿ ಉಸಿರು ಕಟ್ಟಿ ಸತ್ತಿರಬಹುದು ಅಂದುಕೊಂಡಿದ್ದೇನೆ. After all, ನಾವು, ನಮ್ಮ ಸಂಸ್ಕೃತಿ, ನಮ್ಮ ರಾಜಕಾರಣ ಬೇರೆ ಬೇರೆ ಕಂಪಾರ್ಟುಮೆಂಟುಗಳಲ್ಲಿ ಹಾಕಿಡುವುದಕ್ಕೆ ಬರುವುದಿಲ್ಲ ಅಲ್ಲವಾ?

ಬೋಂಡಾ ತಿನ್ನುತ್ತಾ ಕೂತಿದ್ದ ನನಗೆ ಈ MLAಗಳು  ನಮಗೆ ಸೇರಿದವರು, ಇಲ್ಲ ನಮಗೆ ಸೇರಿದವರು ಅಂತ ಪಾರ್ಟಿಗಳು ಚಿ ತ್ರವಿಚಿತ್ರ ಹಿಗ್ಗುಜಗ್ಗಾಟದಲ್ಲಿ ತೊಡಗಿರುವುದನ್ನು ನೋಡಿ ಜೇಮ್ಸ್ ಥರ್ಬರನ “Fables for Our Times”ನ ಕೆಲವು ಕತೆಗಳು ನೆನಪಾದವು. ಥರ್ಬರ್ ನಮಗೆಲ್ಲಾ ನಮ್ಮಮ್ಮ ಹೇಳುತ್ತಿದ್ದ ಕಾಗೆ-ನರಿ ಕತೆಯ ಐದು ಆಧುನಿಕ version ಗಳನ್ನು ಹೇಳುತ್ತಾನೆ:

೧. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು. “ನೀನು ಎಷ್ಟು ಚೆಂದ ಇದ್ದೀಯೋ ಅಷ್ಟೆ ಚೆಂದ ನಿನಗೆ ಹಾಡಲಿಕ್ಕೂ ಬಂದರೆ, ನಿನ್ನಷ್ಟು ಸುಂದರಿ ಕಾಗೆ ನಾಲ್ಕು ದಿಸೆಯಲ್ಲೆಲ್ಲೂ ಸಿಗಲಿಕ್ಕಿಲ್ಲ” ಎಂದಿತು. ಕಾಗೆಯ ದನಿಯನ್ನು ಹೊಗಳಿದರೆ ಬಾಯಯಲ್ಲಿನ ಮಾಂಸದ ತುಂಡನ್ನು ಬಿಟ್ಟುಬಿಡುತ್ತದೆ ಅಂತ ನರಿ ಎಲ್ಲೋ ಓದಿತ್ತು.

ಆದರೆ ಈ ಕಾಗೆಯ ಕತೆ ಬೇರೆ. “ನೀನು ಬಹಳ ಪಾಕಡ ಆಸಾಮಿ ಅಂತ ನನಗೆ ಗೊತ್ತು” ಅಂತ ಭದ್ರವಾಗಿ ತುಂಡನ್ನು ಕೊಕ್ಕಿನಿಂದ ತೆಗೆದು ಕಾಲಿನಲ್ಲಿ ಸಿಕ್ಕಿಸಿಕೊಂಡು ಕಾಗೆ ಹೇಳಿತು. “ನಿನಗೆ ಬುದ್ಧಿ ಆಷ್ಟೇ ಅಲ್ಲ ಕಣ್ಣೂ ಐಬಿರಬೇಕು. ಬಣ್ಣದ ರೆಕ್ಕೆ ಪುಕ್ಕ ಕೊಕ್ಕು ಇರೋದು ನನಗಲ್ಲ, ಗಿಳಿಗೆ. ರುಪಾಯಿಗೆ ನೂರು ಕೊಳ್ಳಬಹುದು. ನನ್ನದು ಕಪ್ಪು ಹೊಳೆಯುವ ಪುಕ್ಕ. ಬೇರೆ ಯಾರಿಗೂ ಇಲ್ಲ.” ಅಂತ ಬಿಂಕದಿಂದ ಹೇಳಿ, ಒಂದು ಚೂರೂ ಕೆಳಗೆ ಬೀಳದ ಹಾಗೆ ಮಾಂಸದ ತುಂಡು ತಿನ್ನತೊಡಗಿತು. “ಹೌದು ನೋಡು ನಿನ್ನ ಚೆಂದವೇ ಚೆಂದ. ನಿನ್ನ ಚೆಂದದ ವರ್ಣನೆಯನ್ನು ನಿನ್ನಿಂದಲೇ ಕೇಳಬೇಕಂತ ನನಗೇನೋ ಆಸೆ, ಆದರೆ ಹೊಟ್ಟೆ ಹಸೀತಾ ಇದೆ ನಾನು ಊಟ ಹುಡುಕಲಿಕ್ಕೆ ಹೋಗಬೇಕು” ಅಂದಿತು ನರಿ. “ಹೇ… ಇರು ಇರು. ನನ್ನ ಊಟದಲ್ಲಿ ನೀನೂ ತೊಗೊ” ಅಂತ ಮಾಂಸದ ದೊಡ್ಡ ಚೂರನ್ನು ನರಿಗೆ ಕೊಟ್ಟು ಕಾಗೆ ತನ್ನ ವರ್ಣನೆಯಯಲ್ಲಿ ತಾನೇ ತೊಡಗಿತು. “ಹಕ್ಕಿಗಳು ಹಾರಲು ಕಲಿತದ್ದೇ ನನ್ನಿಂದ….”

“ಹೌದ್ ಹೌದು…” ಅನ್ನುತ್ತಾ ನರಿ ಜಾಗ ಖಾಲಿ ಮಾಡಿತು. ಹಸಿದ ಕಾಗೆ ಟೊಂಗೆಯ ಮೇಲೆ ಕೂತಿತ್ತು.

೨. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು. ಹತ್ತಿರ ಬಂದು “ಒಹೋ ತುಂಡು ಮಾಂಸನಾ… ಅದೇನಿದ್ರೂ ಇಲಿಗಳು ತಿನ್ನೋದು ಬಿಡು” ಅಂತ ಮೂಗು ಮುರಿಯಿತು. ಭದ್ರವಾಗಿ ತುಂಡನ್ನು ಕೊಕ್ಕಿನಿಂದ ತೆಗೆದು ಕಾಲಿನಲ್ಲಿ ಸಿಕ್ಕಿಸಿಕೊಂಡ ಕಾಗೆ “ನೀನು ಯಾವಗಲೂ ಹಾಗೆ. ನಿನಗೆ ಯಾವುದು ಸಿಕ್ಕಲ್ಲವೋ ಅದು ಕೆಲಸಕ್ಕೆ ಬಾರದ್ದು ಅಂತ ಹೇಳ್ತೀಯ. ದ್ರಾಕ್ಷಿತೋಟಕ್ಕೆ ನರಿ ಹೋದ ಕತೆ ನನಗೆ ಗೊತ್ತಿಲ್ಲವಾ?” ಅಂದಿತು. “ಅಯ್ಯೊ, ದ್ರಾಕ್ಷಿ ತಿನ್ನೋದು ಬರಿ ಪಕ್ಷಿಗಳು. ನಾನು ನಳಮಹರಾಜನ ಭೋಜನ ಬಿಟ್ಟು ಬೇರೆ ತಿನ್ನುವವನೇ ಅಲ್ಲ” ಅಂತ ಬೀಗಿತು ನರಿ. ಇಂಥವನ ಮುಂದೆ ಹಳಸಲು ಮಾಂಸ ತಿನ್ನೋದಕ್ಕೆ ನಾಚಿಕೆ ಆಗಿ ಕಾಗಿ ತುಂಡು ಎಸೆದುಬಿಟ್ಟಿತು. ಟಕ್ಕಂತ ಕ್ಯಾಚ್ ಹಿಡಿದ ನರಿ ಜಾಗ ಖಾಲಿ ಮಾಡಿತು. ಹಸಿದ ಕಾಗೆ ಟೊಂಗೆಯ ಮೇಲೆ ಕೂತಿತ್ತು.

೩. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು. ಆದರೆ ಅದರ ಯಾವ ಉಪಾಯವೂ ಕಾಗೆಯ ಹತ್ತಿರ ನಡೆಯಲಿಲ್ಲ. ಇದ್ದಕ್ಕಿದ್ದಂತೆ ಕಾಗೆ ಮಾಂಸದ ತುಂಡನ್ನು ತಾನೇ ಎಸೆದುಬಿಟ್ಟಿತು. ಅಷ್ಟರಲ್ಲಿ ಯಾರ ಅಂಗಳದಿಂದ ಮಾಂಸದ ತುಂಡನ್ನು ಕದ್ದು ತಂದಿತ್ತೋ ಆ ರೈತ ಕೈಯ್ಯಲ್ಲಿ ಕೋವಿ ಹಿಡಿದು ಕಳ್ಳನನ್ನು ಹಿಡಿಯಲು ಬಂದ. ನರಿ ಸತ್ತೆನೋ ಕೆಟ್ಟೆನೋ ಅಂತ ಕಾಡಿಗೆ ಓಡಿತು. “ಅಲ್ಲಿ ಹೋಗ್ತಿದಾನೆ ನೋಡಿ ಕಳ್ಳ!” ಅಂತ ಕಾಗೆ ಒದರಿತು. ಕಾಗೆ ಕಣ್ಣಿಗೆ ಹೊಳೆವ ಕೋವಿ ನಳಿಕೆ ದೂರದಿಂದಲೇ ಕಾಣುತ್ತದೆ ಅಂತ ನರಿಗೆ ಹೇಗೆ ಗೊತ್ತಾಗಬೇಕು?

೪. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು… ಆದರೆ ಈ ಸಲ ಕಾಗೆಯ ಉಪಾಯಗಳಿಗೆ ಪೆಗ್ಗಿಬೀಳಬಾರದೆಂದು ನಿರ್ಧರಿಸಿದ್ದ ನರಿ ರೈತ ಕೋವಿ ಹಿಡಿದು ಬಂದರೂ ಹಂದದೆ ಅಲ್ಲೇ ನಿಂತಿತ್ತು. “ಈ ಮಾಂಸದ ತುಂಡಿನ ಮೇಲಿರುವ ಹಲ್ಲಿನ ಗುರುತೇನೋ ನನ್ನದೇ. ಆದರೆ ಈ ಕೊಕ್ಕಿನ ಗುರುತು ಆ ಮರದ ಮೇಲೆ ಕೂತ ನಿಜವಾದ ಕಳ್ಳನದು. ಇದಕ್ಕೆ ಪುರಾವೆಯಾಗಿ ಈ ಮಾಂಸದ ತುಂಡನ್ನು ನಿಮ್ಮ ಅವಗಾಹನೆಗೆ ಒಪ್ಪಿಸುತ್ತಿದ್ದೇನೆ ಮೈ ಲಾರ್ಡ್” ಅಂತ ಹೇಳಿ, ಅದು ಸಿಗರೇಟು ಹಚ್ಚುತ್ತಾ ಜಾಗ ಖಾಲಿ ಮಾಡಿತು. ಹಸಿದ ಕಾಗೆ ಟೊಂಗೆಯ ಮೇಲೆ ಕೂತಿತ್ತು. ರೈತ ಕೆಳಗೆ.

೫. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು. ನಮ್ಮ ಅಜ್ಜ, ಅಮ್ಮಂದಿರು ಹೇಳುತ್ತಿದ್ದ ಕತೆಯಲ್ಲಿ ಅನಾದಿಕಾಲದಿಂದ ಆಗುತ್ತಾ ಬಂದಂತೆ ಈ ಸಲ ಕಾಗೆ ಹಾಡು ಹೇಳಿತು. ಮಾಂಸದ ತುಂಡು ಕೆಳಗೆ ಬಿದ್ದಿತು. ನರಿ ನರಿಯ ನಗೆ ನಕ್ಕಿತು. “ಅಯ್ಯೊ, ಬೇಗ ಮಾಂಸದ ತುಂಡು ವಾಪಾಸ್ ಕೊಡು, ರೈತ ಕೋವಿ ತಗೊಂಡು ಬರ್ತಿದಾನೆ!” ಅಂತ ಕಾಗೆ ಕಿರುಚಿತು.

“ಯಾಕೆ ಕೊಡಬೇಕು?” ಅಂತ ಉದ್ಧಟ ಪ್ರಶ್ನೆ ನರಿ ಕೇಳಿತು.

“ರೈತನ ಕೈಯ್ಯಲ್ಲಿ ಕೋವಿ ಇದೆ. ನಾನಾದರೆ ಹಾರಿ ಹೋಗಿಬಿಡಬಹುದು. ಬೇಗ ಕೊಡು!”

ನರಿ ಪ್ರಾಣಭಯದಲ್ಲಿ ಮಾಂಸದ ತುಂಡು ವಾಪಾಸು ಎಸೆಯಿತು.

ತಿಂದು ತೇಗಿದ ಕಾಗೆ, “ಅಯ್ಯೊ, ನನ್ನ ಕಣ್ಣೇ ನನ್ನನ್ನ ಮೋಸ ಮಾಡ್ತಾ ಇದೆಯ ಅಥವಾ ನಾನೇ ನಿನ್ನನ್ನ ಮೋಸ ಮಾಡ್ತಾ ಇದೀನಾ? ನನಗಂತೂ ಗೊತ್ತಾಗ್ತಾ ಇಲ್ಲ. ನಿನಗೇನಾದರೂ ಅರ್ಥ ಆಗ್ತಾ ಇದೆಯಾ?” ಅಂತ ಕೇಳಿತು.

ಉತ್ತರ ಇರಲಿಲ್ಲ.

ಥರ್ಬರ್ ತೀರಿ ಹೋದದ್ದು ೧೯೬೧ರಲ್ಲಿ. ನಮ್ಮ ಇಂದಿನ ರಾಜಕೀಯ ನೋಡಿದ್ದರೆ ಈ ಹಳೆ ಕತೆಗೆ ಹೊಸತೇ ಆದ ಆರನೆ twist ಸಿಗುತ್ತಿತ್ತೇನೋ. ಅದು ಹೀಗಿದ್ದಿರಬಹುದು:

೬. ಒಂದು ಕಾಗೆ ಬಾಯಲ್ಲಿ ಮಾಂಸದ ತುಂಡು ಹಿಡಿದು ಮರದ ಮೇಲೆ  ಕೂತಿದ್ದನ್ನು ನೋಡಿದ ನರಿಯ ಕಣ್ಣು, ಮೂಗು ಚುರುಕಾಯಿತು… ಇಷ್ಟೆಲ್ಲ ಬುದ್ಧಿ ಉಪಯೋಗಿಸಿ ಒಬ್ಬರನ್ನೊಬ್ಬರು outsmart ಮಾಡುವ ಗೊಡಗೆ ಎಲ್ಲಾ ಯಾಕೆ ಅಂತ ನರಿ ಒಂದು ಭಾರಿ ಸೂಟ್ ಕೇಸು ಇಟ್ಟುಕೊಂಡು  ಸುಮ್ಮನೆ ಸಿಗರೇಟು ಸೇದುತ್ತಾ ಮರದ ಕೆಳಗೆ ಬಂದು ನಿಂತಿತು. ಸೂಟ್ ಕೇಸನ್ನು ಕಂಡದ್ದೇ ಮಾಂಸದ ತುಂಡಿಗೇ ಜೀವ ಬಂದು , ಅದೇ ಕಾಗೆ ಕೊಕ್ಕನ್ನು ಮುರಿದು, ಜಿಗಿದು ಬಂದು ನರಿಯ ಮಡಿಲಿಗೆ ಬಂದು ಬಿದ್ದಿತು. ಆತ್ತ ಹಸಿದ ಕಾಗೆ ನರಿಯ ಸೂಟ್ ಕೇಸಿಗಿಂತ ಭಾರಿ ಸೂಟ್ ಕೇಸನ್ನು ಹುಡುಕಿಕೊಂಡು VIP ಶೋರೂಮಿಗೆ ಹೋಯಿತು.

P.S.: ನಮ್ಮ ಶ್ರೇಷ್ಠತೆಯ ಭ್ರಮೆಗಳು ಯಾವ ರೀತಿ ಇರಬಹುದು ಮತ್ತು ಈ ಭ್ರಮೆಗಳು ರಾಜಕೀಯವನ್ನು ಅರ್ಥೈಸುವ ಬಗೆಯನ್ನು ಎಷ್ಟು ಮಟ್ಟಿಗೆ ಮಂದ ಮಾಡಬಹುದು ಅನ್ನುವುದಕ್ಕೆ “White Tiger” ಖ್ಯಾತಿಯ ಅರವಿಂದ ಅಡಿಗ ಲೇಖನ ಒಂದು ಉದಾಯಹರಣೆ.  ಇಲ್ಲಿ ಓದಿ: http://timesofindia.indiatimes.com/home/sunday-toi/all-that-matters/Kannadigas-stand-up-for-Karnataka/articleshow/6762547.cms

ಇದಕ್ಕೆ contrast ಆಗಿ ಕರ್ನಾಟಕದ ರಾಜಕಾರಣವನ್ನು ಓದುವ ಇನ್ನೊಂದು ಬಗೆ: http://www.hindu.com/2007/12/04/stories/2007120453210400.htm

 


Advertisements

1 ಟಿಪ್ಪಣಿ »

  1. […] ಪೂರ್ಣ ಓದಿಗೆ- ಬಾಗೇಶ್ರೀ […]

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: