ಫೈಜ್ ಗೆ ನೂರು

ಫೈಜ್ ಅಹಮೆದ್ ಫೈಜ್ ಬದುಕಿದ್ದರೆ ಈ ಫೆಬ್ರವರಿಗೆ ನೂರು ವರ್ಷ ತುಂಬುತ್ತಿತ್ತು. ಫೈಜ್ ತುಂಬಾ ಜನರ ಫೇವರೆಟ್  ಕವಿ. ಪ್ರೇಮದ ಬಗ್ಗೆ ಮುಟ್ಟಿದರೆ ಮುದುರೀತು ಅನ್ನುವಷ್ಟು ಕೋಮಲ-ಮಧುರವಾಗಿ ಮತ್ತು ಕ್ರಾಂತಿಯ ಬಗ್ಗೆ ಖಡ್ಗದಷ್ಟು ಕಟ್ಟಿಂಗ್ ಆಗಿ ಬರೆಯಬಲ್ಲ ಕವಿ ಫೆವರೇಟ್ ಆಗದೆ ಇರಲಿಕ್ಕೆ ಹೇಗೆ ಸಾಧ್ಯ ಅಲ್ಲವಾ? “ಮೇರೆ ಮೆಹಬೂಬ್ ಮುಜ್ಸೆ ಪೆಹಲೀಸಿ ಮೊಹಾಬ್ಬತ್ ನ ಮಾಂಗ್”ನಂತ ಕವಿತೆಗಳಲ್ಲಿಯಂತೂ ಫೈಜ್ ಇವನ್ಯಾವ ಮಾಯಕಾರನಪ್ಪ ಅನ್ನಿಸುವ ಹಾಗೆ ಪ್ರೇಮ ಮತ್ತು ರೋಮಾಂಟಿಕ್ ಪ್ರೇಮದಾಚದ ಕ್ರೂರ ಪ್ರಪಂಚ ಎರಡರ ಬಗ್ಗೆಯೂ ಬರೆಯುತ್ತಾನೆ. ಈ ಪದ್ಯದಲ್ಲಿ ಆಧುನಿಕ ಕಾವ್ಯ ಮತ್ತು ಸಾಂಪ್ರದಾಯಿಕ ಉರ್ದು ಕವಿತ್ವದ ಭಾವುಕ, ಭಾವಗೀತಾತ್ಮಕ ಪ್ರತಿಮೆಗಳನ್ನು ಒಟ್ಟೊಟ್ಟಿಗೆ ಬಳಸುತ್ತಾನೆ ಈ ಮಾರ್ಕ್ಸಿಸ್ಟ್ ಕವಿ.

ಈತ ಕವಿಯಷ್ಟೇ ಅಲ್ಲದೆ ಪತ್ರಕರ್ತ, ಸಂಸ್ಕೃತಿ ಚಿಂತಕ, ಗದ್ಯ ಬರಹಗಾರ, ಅನುವಾದಕ, ಹೋರಾಟಗಾರ ಇತ್ಯಾದಿ. ಪಾಕಿಸ್ತಾನ್ ಟ್ರೇಡ್ ಯೂನಿಯನ್ ಫೇಡರೇಷನ್ನಿನ ಮೊದಲ ಉಪಾಧ್ಯಕ್ಷನಾಗಿ ಮತ್ತು ದೇಶದ ಅಂಚೆ ತೆರಪು ಇಲಾಖೆಯ ನೌಕರರ ಮತ್ತು ರೈಲ್ವೆ ಇಲಾಖಾ ನೌಕಾರರ ಸಂಘಟಕನಾಗಿ ಕೆಲಸ ಮಾಡಿದವ. ಪಾಕಿಸ್ತಾನ ಯುದ್ಧ ಹೂಡಿದಾಗಲೆಲ್ಲಾ ಯುದ್ಧ ವಿರೋಧಿ ಪದ್ಯಗಳನ್ನು ಬರೆದು “ದೇಶದ್ರೋಹಿ” ಅಂತಲೂ ಕೆಲವರಿಂದ ಅನ್ನಿಸಿಕೊಂಡವನು. ಝುಲ್ಫಿಕರ್ ಅಲಿ ಭುಟ್ಟೋ ಆಳ್ವಿಕೆಯ ಕೆಲ ವರ್ಷಗಳು ಪ್ರಭುತ್ವಕ್ಕೆ ಹತ್ತಿರದವನಾದ ಫೈಜ್  ಈ ಸಮಯದಲ್ಲಿ ಪಾಕಿಸ್ತಾನ್ ಆರ್ಟ್ಸ್ ಕೌನ್ಸಿಲ್ ಸಂಸ್ಥಾಪಿಸಿದ. ಭುಟ್ಟೋ ಗಲ್ಲಿಗೇರಿಸಿದ ಜಿಯಾನ ಕಾಲದಲ್ಲಿ ದೇಶ ಬಿಟ್ಟು ಹೋಗಬೇಕಾಯಿತು. ಈ ಸಂದರ್ಭದಲ್ಲಿ ಎಡ್ವರ್ಡ್ ಸಯಿದ್ ಮತ್ತು ಫೈಜ್ ಭೇಟಿ ಆಗಿದ್ದರಂತೆ. ಈ ಭೇಟಿಯ ಬಗ್ಗೆ ಇಬ್ಬರೂ ಬರೆದಿದ್ದಾರೆ… ಒಟ್ಟಾರೆಯಾಗಿ ಫೈಜ್ ನ ವ್ಯಕ್ತಿತ್ವದ ಈ ಎಲ್ಲಾ ಮುಖಗಳು ಅವನ ಪದ್ಯಗಳಲ್ಲಿ ಕಾಣುತ್ತವೆ.

ಶತಮಾನೋತ್ಸವಗಳು ಸಾಮಾನ್ಯವಾಗಿ ತುಂಬಾ ಸುದ್ದಿ, ಸಭೆ ಸಮಾರಂಭಗಳನ್ನು ಹುಟ್ಟಿಹಾಕುತ್ತವೆ. ಆದರೆ ಫೈಜ್ ವಿಷಯದಲ್ಲಿ ಅಲ್ಲೊಂದು ಇಲ್ಲೊಂದು ಬಿಟ್ಟರೆ ಹೆಚ್ಚು ಸುದ್ದಿ ನಮ್ಮಲ್ಲಂತೂ ಕಾಣುತ್ತಿಲ್ಲ. ಎಲ್ಲಾ “ಪಾಕಿ”ಗಳ ಬಗ್ಗೆ ನಮಗೆ ಇರುವ ಅನುಮಾನದ ಅಭಿವ್ಯಕ್ತಿ ಇದಾಗಿರಬಹುದೋ ಅಥವಾ ಅಷ್ಟಾಗಿ ಈ ವಿಷಯ ಯಾರ ಗಮನಕ್ಕೂ ಬಂದಿಲ್ಲವೋ ಗೊತ್ತಿಲ್ಲ. ಪಾಕಿಸ್ತಾನದಲ್ಲಿ ಕತೆ ಏನೋ.

ಫೈಜ್ ಪದ್ಯಗಳು ಸುಮಾರಷ್ಟು ಕನ್ನಡಕ್ಕೆ ಬಂದಿವೆ. ಮೂರು ಸಣ್ಣ ಪದ್ಯಗಳನ್ನು ಇಲ್ಲಿ ಅನುವಾದ ಮಾಡಿದ್ದೇನೆ. ಇನ್ನಷ್ಟು ಪದ್ಯಗಳನ್ನು ಇನ್ನೊಂದು ಕಂತಿನಲ್ಲಿ ಮಾಡುತ್ತೇನೆ.

ನೆನಪು

ಹಾಳು ಬಿದ್ದ ತೋಟಕ್ಕೆ ಮೆಲ್ಲನೆ ವಸಂತ ಕಾಲಿಟ್ಟಂತೆ
ಬೆಳಗಿನ ತಂಗಾಳಿ ಬೆಂಗಾಡಲ್ಲಿ ಕಮ್ಮನೆ ಬಿಸಿದಂತೆ
ನರಳುವ ರೋಗಿ ನೆಪವೇ ಇಲ್ಲದೆ ಗೆಲುವಾದಂತೆ
ನೆನ್ನೆ ರಾತ್ರಿ  ನಿನ್ನ ಕಳೆದು ಹೋದ ನೆನಪು
ಸುಮ್ಮಸುಮ್ಮನೆ ಬಂದು ನನ್ನೆದೆ  ಕದ ತಟ್ಟಿತು.

ಚಿಂತೆ ಇಲ್ಲ

ಮಂದಿ ನನ್ನ ಶಾಯಿ-ಲೇಖನಿ ಕಿತ್ತುಕೊಂಡರೆ ಚಿಂತೆ ಇಲ್ಲ
ಬೆರಳನ್ನೇ ಅದ್ದಿದ್ದೇನೆ ಗುಂಡಿಗೆಯ ಬಿಸಿ ರಕ್ತದಲ್ಲಿ
ನಾಲಿಗೆಗೆ ಸಂಕೋಲೆ ಹಾಕಿದರೆ ಚಿಂತೆ ಏನೇನೂ ಇಲ್ಲ
ಸರಪಳಿಯ ಉಂಗುರುಂಗುರವು ಉಸಿರೀತು ನನ್ನ ಮಾತು.

ಮಾತಾಡು

ತುಟಿಗಳಿಗೆ ಅಂಕೆ ಇಲ್ಲ
ಆಡು ಮಾತಾಡು
ನಾಲಿಗೆ ಇನ್ನೂ ನಿನ್ನದೇ
ಆಡು ಮಾತಾಡು.
ದೇಹ ನಿನ್ನ ಸ್ವಂತದ್ದು
ಆಡು ಮಾತಾಡು.
ಜೀವ ಇನ್ನೂ ಉಳಿದಿದೆ
ಆಡು ಮಾತಾಡು

ನೋಡು ಕಮ್ಮಾರನ ಕುಲುಮೆಯಲಿ
ಜಿಗಿದೆದ್ದಿದೆ ಜ್ವಾಲೆ, ಕೆಂಪೇರಿದೆ ಲೋಹ
ಸಡಿಲಾಗಿದೆ ಎಲ್ಲ ಬೀಗಗಳ ಬಾಯಿ
ತುಂಡಾಗಿ ಬಿದ್ದಿದೆ ಸರಪಳಿ.

ದೇಹ ನಾಲಿಗೆಗಳ ಸಾವಿನ ಮುಂಚಿನ
ಈ ಎರಡು ಗಳಿಗೆ ಸಮಯವೇ ಸಾಕು
ಆಡು ಮಾತಾಡು
ಸತ್ಯ ಇನ್ನೂ ಉಸಿರಾಡುತ್ತಲಿದೆ
ಆಡು ಮಾತಾಡು
ಹೇಳಲೇ ಬೇಕಾದ್ದು ಹೇಳಿಯೇಬಿಡು
ಆಡು ಮಾತಾಡು.

Advertisements

2 ಟಿಪ್ಪಣಿಗಳು »

  1. Usha said

    lovely translation of the poems!

  2. […] ಖಡ್ಗದಷ್ಟು ಕಟ್ಟಿಂಗ್ ಆಗಿ ಬರೆಯಬಲ್ಲ ಕವಿ January 11, 2012 ಭಾಗೇಶ್ರೀ […]

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: