ಫೈಜ್ ಗೆ ನೂರು – ಭಾಗ ೨

ಕತ್ತಲು  ಕವಿಯುವುದು ಮತ್ತು ಬೆಳಕು ಮೂಡುವುದರ ಬಗ್ಗೆ ಅದೆಷ್ಟು ಕವಿಗಳು ಬರೆದಿದ್ದಾರೋ! ಜಾನ್ ಡನ್ ತನ್ನ ಪ್ರೇಯಸಿಯಿಂದ ತನ್ನನಗಲಿಸುವ ಸೂರ್ಯನನ್ನು “busy old fool” ಅಂತ ಬೈದು ಜಾಲಾಡುವುದರಿಂದ ಹಿಡಿದು “ಬೆಳ್ಳಿ ಮೂಡಿತೋ ಕೋಳಿ ಕೂಗಿತೋ” ಅಂತ ಹಾಡುವ ನಮ್ಮದೇ ಖಾಸಾ ಕವಿರತ್ನ ಕಾಳಿದಾಸನವರೆಗೆ… ಲಕ್ಷಲಕ್ಷ.

ಫೈಜ್ ನ ಸುಮಾರು ಕವಿತೆಗಳೂ  ಬೆಳಕು, ನೆರಳು, ಕತ್ತಲೆಯ ಇಮೇಜುಗಳ ಸುತ್ತ ಹೆಣೆದವು. ಇಲ್ಲಿ ನನಗೆ ಚೆಂದ ಅನ್ನಿಸಿದ ಎರಡು ಸ್ವಲ್ಪ ಧೀರ್ಘ ಮತ್ತು ಒಂದು ಪುಟ್ಟ ಕವನದ ಅನುವಾದ ಇದೆ. ಎರಡನೆಯದು ಟಿಪಿಕಲ್ ಫೈಜ್ ಪದ್ಯ. ತುಂಬಾ ರೊಮ್ಯಾಂಟಿಕ್ ಇಮೆಜುಗಳಿಂದ ಶುರುವಾಗಿ ಮತ್ತೆ ಇನ್ನೆಲ್ಲಿಗೋ ಓದುಗರನ್ನು ಎಳೆದುಕೊಂಡು ಹೋಗುವಂಥದು.

ನಿಜ ಹೇಳಬೇಕೆಂದರೆ ಮೂರನೆಯದು ಅನುವಾದ ಅನ್ನಿಸಿಕೊಳ್ಳಲಾರದೇನೋ. ಅಲ್ಲಿ ಬಳಸುವ “ಸಾಕಿಗರಿ” ಅನ್ನುವ ಶಬ್ದಕ್ಕೆ ಏನು ಹೇಳುವುದಪ್ಪ ಅಂತ ಹುಡುಕ ಹೊರಟು ಅದು ಬೇರೆಯೇ ಆಗಿಬಿಟ್ಟಿದೆ. ಸಾಕಿ ಅನ್ನುವ ಪದವನ್ನು ಕನ್ನಡ ಗಜಲುಗಳಲ್ಲಿ ಬಳಸುತ್ತಾರಾದರೂ ಅದು ಸರಿ ಹೋಗೋದಿಲ್ಲ ಅನ್ನಿಸಿ ಅದನ್ನು ಬಿಟ್ಟು  ಬೇರೆ ಅರಸಿದ್ದರ ಫಲ ಮೂರನೆ ಪದ್ಯ. ಕನ್ನಡದಲ್ಲಿ ನಾವು ಜಾಣತನದಿಂದ ಭಾವಾನುವಾದ ಅನ್ನುವ ಪದ ಬಳಸಿ ಎಂಥ ಆಟ ಆಡಿಯೂ ತಪ್ಪಿಸಿಕೊಳ್ಳಬಹುದಲ್ಲ. ಆ ಧೈರ್ಯದ ಮೇಲೆ ಮೂರನೆಯದನ್ನೂ ಸೇರಿಸುತ್ತಿದ್ದೇನೆ!

ಸೆರೆಮನೆಯಲ್ಲೊಂದು ಸಂಜೆ

ನೀಹಾರಿಕೆಗಳ ಸುರುಳಿ ಸುರುಳಿ ಮೆಟ್ಟಿಲುಗಳ
ಇಳಿಯುತ್ತಾ ಬರುತ್ತಿದೆ ಸದ್ಡಿಲ್ಲದೆ ರಾತ್ರಿ.
ಬೀಸುವ ಗಾಳಿ ಹತ್ತಿರ, ಹತ್ತಿರ ಸುಳಿದಿದೆ
ಯಾರೋ ಪ್ರೀತಿ ಮಾತು ಕಿವಿಯಲುಸುರಿದ ಹಾಗೆ.
ಅಂಗಳದಲಿ ನಿಂತ ನಿರಾಶ್ರಿತ ಮರಗಳು
ನಭದ ಸೆರಗಲಿ ಬಿಡಿಸಿವೆ ಮರಳುವ ನಾಡಿನ ನಕ್ಷೆ.

ಚಾವಣಿಯ ಮೇಲೆ ಮೆರುಗುತ್ತಿವೆ
ಬೆಳದಿಂಗಳ ಕರುಣೆಯ ಬೆರಳು.
ಕಣಕಣದಲಿ ಕರಗಿದೆ ನಕ್ಷತ್ರದ ಹೊಳಪು
ನೀಲಿ ಕದಡಿದೆ ಆಗಸದ ತುಂಬಾ.
ಹಸಿರು ಮೂಲೆಗಳಲ್ಲಿ ಕಡು ನೀಲಿ ನೆರಳು,
ಆವರಿಸಿದಂತೆ ಮನಸ
ಸ್ವಲ್ಪ ಸ್ವಲ್ಪವೇ ವಿರಹದ ನೋವು.

ಆಹಾ! ಎಷ್ಟು ಸಿಹಿ ಈ ಗಳಿಗೆ.
ಗೆಲ್ಲಲಾರದು ಇಂದು ಎಂದೆಂದೂ
ಇಲ್ಲಿ ವಿಷವ ಬೆರೆಸುವ ಮನಸು.
ಮಿಲನದ ಮನೆಯ ದೀಪ
ಆರಿಸಿಯಾರು ಬಿಡಿ.
ಚಂದ್ರನನ್ನಳಿಸುವವರು
ಯಾರಾದರೂ ಇದ್ದರೆ ಹೇಳಿ.

ಸೆರೆಮನೆಯಲ್ಲೊಂದು ಬೆಳಗು

ಚಂದ್ರ ದಿಂಬಿನ ಪಕ್ಕ ನಿಂತು ‘ಏಳು, ಬೆಳಗಾಯಿತು’
ಅಂದಾಗ ಇನ್ನೂ ರಾತ್ರಿ ಸ್ವಲ್ಪ ಬಾಕಿ ಇತ್ತು.
‘ಏಳು! ಈ ರಾತ್ರಿಯ ನಿನ್ನ ಪಾಲಿನ ನಿದ್ದೆಯ ಮದಿರೆ
ತುಟಿಯಿಂದ ಇಳಿದಿಳಿದು ತಳ ಕಂಡಿದೆ’ ಅಂದ.

ಪ್ರಿಯತಮೆಯ ಬಿಂಬಕ್ಕೆ ವಿದಾಯ ಹೇಳಿ ಹೊರಳಿದೆ.
ರಾತ್ರಿಯ ಕರಿ ಹೊದಿಕೆಯ ತೆರೆತೆರೆಗಳ  ಮೇಲೆ
ಅಲ್ಲಿಲ್ಲಿ ಬೆಳ್ಳಿ ಸುಳಿಸುಳಿಗಳ ನರ್ತನ.
ಚಂದ್ರನ ಕೈಯ್ಯಿಂದ ಉದುರುತ್ತಿವೆ
ಒಂದೊಂದೆ ತಾರೆ ತಾವರೆಯ ಪಕಳೆಗಳು.
ಮುಳುಗುತ್ತ, ಏಳುತ್ತ, ಈಜುತ್ತ, ಮುದುಡುತ್ತ, ತೆರೆಯುತ್ತ
ರಾತ್ರಿ ಬೆಳಗನು ತಬ್ಬಿ ಕರಗಿದ್ದು ಅದೆಷ್ಟೋ  ಹೊತ್ತು.

ಸೆರೆಮನೆಯ ಅಂಗಳದಲ್ಲಿ ನನ್ನ ಸಂಗಾತಿಗಳ ಹೊಳೆವ ಮುಖ
ಮೆಲ್ಲನೆ ಮೂಡುತ್ತಿದೆ ಕಪ್ಪು ಕತ್ತಲೆಯ ಮೀರಿ.
ನಿದ್ದೆ ಚೆಲ್ಲಿದ ಮರವಳಿಕೆಯ ಹನಿಹನಿ ಅಳಿಸಿದೆ
ದೇಶದ ಚಿಂತೆ, ಕಾಣದ ಗೆಳತಿಯ ನೆನಪಿನ ನೋವು.
ದೂರದಲ್ಲೆಲ್ಲೋ ನಗಾರಿ ಬಡಿವ, ವಜ್ಜೆ ಹೆಜ್ಜೆ ಎಳೆವ ಸದ್ದು.
ಸತಾಯಿಸುವ ಹಸಿವ ಹೊತ್ತು ಗಸ್ತಿಗೆ ಹೊರಟ ಕಾವಲುಗಾರ.
ಜೊತೆಗೆ ಕೈಕೈ ಹಿಡುದು ನಡೆದಿದೆ ಕೈದಿಗಳ ಆಕ್ರಂದನ.
ಕಮ್ಮನೆ ಕನಸಿನ ಕಂಪ ಇನ್ನೂ ಹೊತ್ತ ಗಾಳಿ ಮೆಲ್ಲನೆದ್ದಿದೆ.
ಎದ್ದಿವೆ ಹಾಲಾಹಲ ಕದಡಿ ಒಡೆದ ಸೆರೆಮನೆಯ ಸದ್ದುಗಳು.
ಅಲ್ಲಿ ಯಾರೋ ಕದ ತೆರೆದ, ಇಲ್ಲಿ ಯಾರೋ ಮುಚ್ಚಿದ ಸಪ್ಪಳ.
ಮೆಲ್ಲ ಮುಲುಕಾಡಿದೆ ಸರಪಳಿ, ಮುಲುಕಿ ಬಿಕ್ಕುತ್ತಿದೆ ಎಲ್ಲೋ.
ಯಾವುದೋ ಬೀಗದ ಎದೆ ಹೊಕ್ಕಿದೆ ಚೂರಿಯ ಚೂಪು.
ಕಿಟಕಿ ಡಬಡಬಡಬ ತಲೆಯ ಚಚ್ಚಿಕೊಂಡಿದೆ  ಇನ್ನೆಲ್ಲೋ.

ನಿದ್ದೆಯಿಂದ ಮತ್ತೆ ಎದ್ದಂತಿದೆ ಜೀವದ  ವೈರಿಗಳು.
ಕಲ್ಲು ಕಬ್ಬಿಣವ ಕಡಿದು ಕೆತ್ತಿದ ಗಟ್ಟಿ ರಕ್ಕಸರು,
ಹಿಂಡಿ ಹಿಪ್ಪೆ ಮಾಡಿ ಅಹೋರಾತ್ರಿ ಅಳಿಸುತ್ತಿದ್ದರೆ
ನನ್ನ ನಾಜೂಕು ಬೆಳಗು ಬೈಗಿನ ಕಿನ್ನರಿಯರ.

ಉರಿವ ಭರವಸೆಯ ಬಾಣ ತುಂಬಿದ ಬತ್ತಳಿಕೆ ಹೊತ್ತು
ಬರುವ ರಾಜಕುವರನ ಹಾದಿ ಕಾದಿವೆ ಹಿಡಿದಿಟ್ಟ ಜೀವಗಳು .

ಒಂಟಿತನ

ಸಂಜೆ ಮಾಗಿದ ಹಾಗೆ ಒಟ್ಟೊಟ್ಟಿಗೆ
ಹೆಂಡ ಹೀರುವ ಹಳೆಯ ಗೆಳೆಯರಂತೆ,
ಇಂದು ನನ್ನ ಜೋಡಿ ನನ್ನ ಒಂಟಿತನ.
ಇಬ್ಬರೂ ಕಾದಿದ್ದೇವೆ ಚಂದ್ರನುದಯಕ್ಕಾಗಿ
ಕಾಣಲು ನಿನ್ನ ಪ್ರತಿಬಿಂಬ ಪ್ರತಿ ಛಾಯೆಯಲ್ಲೂ.

PostScript:

ಮೊನ್ನೆ ಸೆನೆಟ್ ಹಾಲಿನಲ್ಲಿ ನಡೆದ ಪರ್ಯಾಯ ಸಾಹಿತ್ಯ ಸಮ್ಮೇಳನದಲ್ಲಿ ಅಕ್ಷರ ಹೊಸ ಕಾವ್ಯದ ಪ್ರತಿ ಕೊಂಡೆ. ಅದರ ಪೇಜುಗಳನ್ನು ತಿರುವಿ ಹಾಕುವಾಗ ಸುಮಾರಷ್ಟು ಬೆಳಗು ರಾತ್ರಿಯ ಥೀಮಿನ ಪದ್ಯಗಳು ಕಂಡವು. ಉದಾಹರಣೆಗೆ ಇಲ್ಲಿ ಕೆಲವು

ಚಂದ್ರಕಾಂತ ಕುಸನುರರ ಒಂದು ಪದ್ಯ:

ಕೋಳಿ ಕೂಗಿಲ್ಲೆಂದು, ಬೆಳಕು ಹರಿದಿಲ್ಲೆಂದು
ಹಚ್ಚಡದ ಪದರದಲಿ ಮುಖ ಮುಚ್ಚಿಕೊಂಡು ನಾ
ಹಗಲು ಹೆಗಲಿನ ಮೇಲೆ
ಮಲಗಿಕೊಂಡೆ.

ವೈದೇಹಿಯ “ಕಂಡದ್ದು ಹೇಳಿದರೆ”:

ಈಗಿಷ್ಟು ಶಾಂತ ಕಾಣುತ್ತಾನಲ್ಲ
“ರಾತ್ರಿ ಸವಾರಿ ಹೋದದ್ದೆಲ್ಲಿಗೆ?”
ಕೇಳಿ ನೋಡು.
ಹಗಲಿಡೀ
ಉರಿದುರಿದು ಬೀಳುತ್ತಾನೆ.

ಮಂಗೇಶ ನಾಡಕರ್ಣಿ “ಸಂಜೆ ಆಯಿತು” ಪದ್ಯದ ಮೊದಲ ಮೂರು ಸಾಲು. ಪೂರ್ತಿ ಇಲ್ಲಿ ಟೈಪ್ ಮಾಡಲಿಕ್ಕೆ ಬೋರು. ಪೇಜ್ ೧೩೩.

“ನಮ್ಮೂರಲ್ಲಿ
ಅಕಾರಣವಾಗಿ
ಬೆಳಕಾದ ತಪ್ಪಿಗೆ
ಸಂಜೆ ಆಯಿತು…”

ಶ್ರೀಕೃಷ್ಣ ಆಲನಹಳ್ಳಿಯ ‘ಬೆಳಕು’ ಕವಿತೆ ಸ್ವಲ್ಪ ಉದ್ದ. ಉಳಿದದ್ದನ್ನು ಪುಟ ೨೭೯/೮೦/೮೧ ರಲ್ಲಿ ಓದಿಕೊಳ್ಳಬಹುದು.

ಇರುಳು ಬೆತ್ತಲೆ ತೆಕ್ಕೆ ಬಿಡಿಸಿಕೊಂಡೆದ್ದ
ಸೂರ್ಯ ಜಿಬುರುಗಣ್ಣೊರೆಸುತ್ತಾ ಆಕಳಿಸಿ
ಕೊಬ್ಬಿದಾಡು ಕುರಿ ಕೋಳಿ ಸಿಗಿದು ಸೀಳಿ
ಕಂದು ನೀಲಿ ಬಿಳಿ ಕೆಂಪು ಖಂಡಗಳ ತೂಗಿಟ್ಟು
ಬಣ್ಣಬಣ್ಣದ ಮೂಡಲಂಗಳದ ಮಾಂಸದಂಗಡಿ ತೆರೆದಾಗ
ನನ್ನೂರಿನಲ್ಲಿ ಬೆಳಗಾಯಿತು.

(ನಿಮಗೆ ಬೆಳಗು ರಾತ್ರಿಯ ಚೆಂದದ ಪದ್ಯಗಳು ನಿಮಗೆ ಯಾವುದಾದರೂ ನೆನಪಾದರೆ ಈ ಲಿಸ್ಟಿಗೆ ಸೇರಿಸಿ)

Advertisements

3 ಟಿಪ್ಪಣಿಗಳು »

 1. ismail said

  Please translate Garcia lorca’s The Dawn

  ismail

 2. Bageshree said

  Ok, Ismail. ಕಷ್ಟ ಇದೆ! But will try.

 3. R.A. Wakeel said

  Nimma blog noduva mattu oduva sadavkash nange sikkitu. E vichara kainkarya mundevariyali, ade reeti nanaa pratispandane saha irutte……………….

  R.A.Wakeel

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: