ಕಣ್ಣು ಪಿಳಿಪಿಳಿ, ಬಾಯಿ ಪಚಪಚ…

ಮೊನ್ನೆ ಟೈಗರ್ ಸೆನ್ಸಸ್ ಮಾತು ಆಫೀಸಿನಲ್ಲಿ ಚರ್ಚೆ ಆಗುತ್ತಿದ್ದಾಗ ನನಗೆ ನಮ್ಮ ತಾತ ಹೇಳುತ್ತಿದ ಹುಲಿ ಬೇಟೆಯ ಕತೆ, ಅಜ್ಜಿ ಅಮ್ಮ ಚಿಕ್ಕಮ್ಮಂದಿರು ಹೇಳುತ್ತಿದ್ದ “ಕೆಂಪು ಕಣ್ಣಜ್ಜಿ” ಕತೆ ನೆನಪಾಗಿ ನಾವು ಈಗ ಹುಲಿಯ ಬಗ್ಗೆ ಮಾತಾಡುವ ರೀತಿಗೂ ಬಾಲ್ಯದಲ್ಲಿ ನನಗಿದ್ದ ಹುಲಿಯ ಕಲ್ಪನೆಗೂ ಎಷ್ಟು ಅಜಗಜಾಂತರ ಅನ್ನಿಸಿತು.

ನಾನು ಹುಟ್ಟುವ ಹೊತ್ತಿಗೆ ಕೊಟ್ಟಿಗೆಗೆ ಹುಲಿ ಬಂದು ಹಸುವನ್ನೋ ಕರುವನ್ನೋ ಎತ್ತಿಕೊಂಡು ಹೋಗುವ ಜಮಾನ ಮುಗಿದಿತ್ತು. ಆದರೆ ನಮ್ಮ ಅಜ್ಜ ಹೀಗೆ ಎತ್ತುಕೊಂಡು ಹೋಗುವ ಹುಲಿಗಳನ್ನು ಹೇಗೆ ಹೊಂಚು ಹಾಕಿ ಹೊಡೆಯುತ್ತಿದ್ದರು ಅಂತ ಹೇಳುತ್ತಿದ್ದ ಕತೆಗಳು ಅತ್ಯಂತ ರೋಚಕ ಅನ್ನಿಸುತ್ತಿದ್ದವು. ಪುಟ್ಟವರಾಗಿದ್ದಾಗ ನನ್ನ ಮಾವಂದಿರು ಇದೇ ಹುಲಿ ಕತೆ ಕೇಳಿ ಹೇಗೆ ಹೆದರಿ ಉಚ್ಚೆ ಹುಯ್ಕೊಳ್ಳುತ್ತಿರು ಅಂತ ಅವರು ಹೇಳುವ ಉಪಕಥೆಗಳು ಒಂದು ತರದ comic relief. ಕರೆಂಟ್ ಇಲ್ಲದ ಆ ಕಾಲದಲ್ಲಿ ನನ್ನ ಮಾವ, ಅಮ್ಮ, ಚಿಕ್ಕಮ್ಮ ಎಲ್ಲರೂ ಅಡಿಗೆ ಮನೆಯ ಒಲೆಯ ಸುತ್ತಾ ಕೂತು ಕತೆ ಕೇಳುತ್ತಿದ್ದರಂತೆ. ಕತೆ ಕೇಳಿಯಾದ ಮೇಲೆ ಮಲೆನಾಡಿನ ಜಡಿ ಮಳೆಯಲ್ಲಿ ಹಿಂದೆ ಜಗಲಿಯವರೆಗೆ ಹೋಗಿ ಕೈ ತೊಳೆದುಕೊಳ್ಳು ವುದಕ್ಕೂ  ನಮ್ಮ ಭಾರಿ brave ಅಂತ ನಾವು ಅಂದುಕೊಂಡಿದ್ದ  ಇಬ್ಬರೂ ಮಾವಂದಿರಿಗೆ (ಹಕ್ಕೆ ಮನೆಯಲ್ಲಿ ರಾತ್ರಿ ಕೂತು ಕಾಡು ಹಂದಿ ಕಾಡಿಗೆ ಬರದಂತೆ ಕಾಯುವುದು ಸಣ್ಣ ಮಾತಾ?!!) ಹೆದರಿಕೆ ಆಗುತ್ತಿತ್ತಂತೆ… ನಮಗೆಲ್ಲ ಅದೇ ದೊಡ್ಡ ತಮಾಷೆಯ ವಿಷಯ.

ನಮ್ಮ ಅಜ್ಜ ಸತ್ತಾಗ ನನಗೆ ಹತ್ತು ವರ್ಷ ಇರಬಹುದು. ಈಗ ನನಗೆ ಬಹಳಷ್ಟು ಕತೆಗಳು ಮರೆತು ಹೋಗಿದೆ. “ಯಾರದ್ರೂ ಇದಾರಾ ಅಂತ ಹುಲಿ ಒಂದು ಹೆಜ್ಜೆ ಮುಂದಿಟ್ರೆ ನಾಲ್ಕು ಹೆಜ್ಜೆ ಹಿಂದಿಡ್ತಾ ಇತ್ತು… ಬಾಲ ಮೇಲೆ, ಕೆಳಗೆ, ಮೇಲೆ ಕೆಳಗೆ ಮಾಡ್ತಾ ಇತ್ತು…” ಅಂತ ಹುಲಿ ತಾನು ಬಚ್ಚಿಟ್ಟ ಅರ್ಧ ತಿಂದ ಕರುವನ್ನೋ ಹಸುವನ್ನೋ ಮತ್ತೆ ತಿನ್ನಲು ಬಂದಾಗ ಎಷ್ಟು ಹುಷಾರಾಗಿ ಬರ್ತಾ ಇತ್ತು ಅಂತ ಅಜ್ಜ ಹೇಳುತ್ತಿದ್ದು ಮಾತ್ರ ಚೆನ್ನಾಗಿ ನೆನಪಿದೆ. ಆಮೇಲೆ ಹುಲಿ ಹೊಡೆಯುವುದು ತಪ್ಪು ಅಂತ ಕಾನೂನು ಬಂದ ಮೇಲೆ ಹುಲಿ ಬೇಟೆ ನಿಂತು ಹೋಯಿತು ಅಂತ ಅಜ್ಜ ಹೇಳುವಾಗ “ಅಯ್ಯೋ ಛೆ, ಎಂಥ ಲಾಸಾಯ್ತಪ್ಪ” ಅನ್ನಿಸುತ್ತಿತ್ತು!

ಮತ್ತೆ ಮನೆಯ ಹೆಂಗಸರು ಉಟಕ್ಕೆ ಅದು ಇದು ಚೊರೆ ಮಾಡುವ ಮಕ್ಕಳಿಗೆ ಒಂದು ಹುಲಿ ಕತೆ ಹೇಳುತ್ತಿದ್ದರು. ಒಂದಾನೊಂದು ಕಾಲದಲ್ಲಿ ಒಬ್ಬ ಅಜ್ಜಿ ಮತ್ತು ಮೊಮ್ಮಗ ಇಬ್ಬರೇ ಒಂದು ದೂರದ ಉರಿನಲ್ಲಿ ಮನೆ ಮಾಡಿಕೊಂಡು ಇದ್ದರಂತೆ. ಸುತ್ತ ದಟ್ಟ ಕಾಡು. ಒಂದು ದಿನ ಅಜ್ಜಿ ಮನೆಯಲ್ಲಿ ಒಂದೇ ಒಂದು ರೊಟ್ಟಿ ಮಾಡಿದ್ದಳಂತೆ. ಹುಡುಗ ಇಡೀ ರೊಟ್ಟಿ ತನಗೊಬ್ಬನಿಗೆ ಬೇಕು ಅಂತ ಹಠ ಮಾಡಿದಕ್ಕೆ ರೋಸಿ ಹೋದ ಅಜ್ಜಿ ಅವನನ್ನು ಹೊರಗೆ ಹಾಕಿ ಬಾಗಿಲು ಹಾಕಿಬಿಡುತ್ತಾಳೆ. ರಾತ್ರಿ ಕವಿದಂತೆ ಒಂದು ಹುಲಿ ಅಲ್ಲಿಗೆ ಬರುತ್ತದೆ. ಅದರ ಆಕಾರ ಕಂಡು ಹೆದರಿದ ಹುಡುಗ ಅಜ್ಜಿಗೆ ಗೋಗರೆಯುತ್ತಾನೆ: “ಕಣ್ಣು ಪಿಳಿಪಿಳಿ, ಬಾಯಿ ಪಚ ಪಚ, ಬಾಲ ಪಟಪಟ, ಬೇಲಿ ಸರಸರ… ಕೆಂಪು ಕಣ್ಣಜ್ಜಿ ಬಂತು, ಅರ್ಧ ರೊಟ್ಟಿನೇ ಸಾಕು  ಬಾಗಿಲು ತೆಗಿ…”

ಅಜ್ಜಿ ಏನೋ ತಲೆಹರಟೆ ಮಾಡುತ್ತಿದೆ ಹುಡುಗ ಅಂತ ಅಂದುಕೊಂಡು ಬಾಗಿಲು ತೆರೆಯುವುದೇ ಇಲ್ಲ. ಬೆಳಗ್ಗೆ ಅಜ್ಜಿ ಬಾಗಿಲು ತೆಗೆಯುವಷ್ಟರಲ್ಲಿ ಹುಡುಗ ಇರುವುದಿಲ್ಲ.

ಈ ಕತೆಯ ಬಗ್ಗೆ ನಮಗೆ ಒಂದು ಥರದ ವಿಚಿತ್ರ fascination ಇತ್ತು. ನಮ್ಮಲ್ಲಿ “ಪುಸ್ಕಿ” ಅಂತ ಕರೆಯುತ್ತಿದ್ದ ಕೆಲವು ಕಸಿನ್ನುಗಳಿಗೆ ಈ ಕತೆ ಕೇಳಿ ಅಳು ಬರುತ್ತಿತ್ತು. ಆಗ ಸಾಂದರ್ಭಿಕವಾಗಿ ಕೆಲವು ಹೆಂಗರುಳಿನ ಆಂಟಿಯರು ಅಜ್ಜಿ ಇನ್ನೇನು ಹುಲಿ ತಿನ್ನಬೇಕು ಅನ್ನುವಷ್ಟರಲ್ಲಿ ಹುಡುಗನನ್ನು ಅಜ್ಜಿ ಒಳಕ್ಕೆ ಎಳೆದುಕೊಂಡಳು, ಇನ್ಯಾವತ್ತೂ ಆ ಹುಡುಗ ಊಟದ ವಿಷಯದಲ್ಲಿ ಹಠವನ್ನೇ ಮಾಡಲಿಲ್ಲ ಅಂತೆಲ್ಲಾ ತಲೆ ಬಾಲ ಸೇರಿಸಿ ಹೇಳುತ್ತಿದ್ದರು.

ಮತ್ತೆ ನಮಗೆ ಅಳು ತರಿಸುವ ಕತೆ ಅಂದರೆ ಪುಣ್ಯಕೋಟಿಯ ಕತೆ. ಪುಣ್ಯಕೋಟಿ ಪಾಪ, ಪಾಪ ಅಂದುಕೊಂಡು ಪೂರ್ತಿ ಕತೆ ಕೇಳಿದ ಮೇಲೆ ಕೊನೆಗೆ  ಅರ್ಬುದನೆ ಪಾಪ ಅನ್ನಿಸಿಯೂ ಬಿಡುತ್ತಿತ್ತು. ಮೊನ್ನೆ ನನ್ನ ಮಗಳು ಈ ಕತೆ ಕೇಳಿ (ಅವಳ ಸ್ಕೂಲಿನ ಕನ್ನಡ ಪುಸ್ತಕದಲ್ಲಿ ಈ ಪದ್ಯ ಇದೆ) “ಅಲ್ಲಮ್ಮಾ ಟೈಗರ್ರಿಗೆ ಹಸು ಪ್ರೇ ಅಲ್ಲವಾ? ಯಾಕೆ ತಿನ್ನಬಾರದು?” ಅಂತ ಪ್ರಶ್ನೆ ಕೇಳಿ ಸ್ವಲ್ಪ ಬೆಪ್ಪು ಮಾಡಿದಳು. ಅವಳಿಗಿಂತ ಸ್ವಲ್ಪ ಸಣ್ಣ ವಯಸ್ಸಿನ ನನ್ನ ಸೋದರ ಸೊಸೆ ಅದಕ್ಕೆ “ಅಲ್ಲ ಕಣೆ, ಅದು ಹಸುನ ಮನೆಗೆ ಬಿಟ್ಟರೆ ಬಿಡಲಿ. ಆದರೆ ಸೂಯಿಸೈಡ್ ಯಾಕೆ ಮಾಡ್ಕೊಬೇಕೆಮ್ಮಾ? ಲೂಸ್ ಅಲ್ಲವಾ?” ಅಂತ ರಾಗವಾಗಿ ಕೇಳಿದಳು.  ಈ ಕತೆಯ ಬಗ್ಗೆ ನಮ್ಮ ಸಾಹಿತ್ಯಿಕ ಪ್ರಪಂಚದಲ್ಲಿ ಬಹಳಷ್ಟು ಚರ್ಚೆ ಆಗಿದೆ. ಆದರೆ ಇವರದ್ದು ತುಂಬಾ ಸರಳ ಲಾಜಿಕ್ಕಿನ ಪ್ರಶ್ನೆ. ಅದೇನೇ ಇರಲಿ ನಾನಾಗಲಿ ನನ್ನ ಕಸಿನ್ನುಗಳ ದಂಡಿನ ಯಾರಾಗಲಿ ತುಂಬ ಭಯಭಕ್ತಿಯಿಂದ ಕತೆ ಕೇಳುತ್ತಿದ್ದೆವೆ  ಹೊರತು ಈ ಥರದ ಪ್ರಶ್ನೆಗಳನ್ನೇ ಕೇಳಿರಲಿಲ್ಲ.

ಒಟ್ಟಲ್ಲಿ ಹುಲಿ ಕತೆ ಸುಮಾರಿದೆ ಹೇಳುತ್ತಾ ಹೋದರೆ…

ಈಗ ನಾನು ಇಷ್ಟು ದೊಡ್ಡ ಪೀಠಿಕೆ ಹಾಕುತ್ತಾ ಇರುವುದು ಈ ಕೆಳಗಿನ ಅನುವಾದಕ್ಕೆ. ಇದು “ದಿ ವೀಕ್” ಪತ್ರಿಕೆಯಲ್ಲಿ ಪ್ರಕಟವಾಗಿರುವ ಹುಲಿ ಬೇಟೆಗಾರನಾಗಿ ಹೊರಟು ಕೊನೆಗೆ ಪರಿಸರ ಪ್ರೇಮಿಯಾಗಿ ಕನ್ವರ್ಟ್ ಆದ ಜಿಮ್ ಕಾರ್ಬೆಟ್ ಬಗೆಗಿನ ಲೇಖನದ ಅನುವಾದ. ಜಿಮ್ ಕಾರ್ಬೆಟ್ ಲೇಖನಗಳು ಕನ್ನಡಿಗರಿಗೆ ತೇಜಸ್ವಿ ಮೂಲಕ ಪರಿಚಿತ. ಇದು ಕಾರ್ಬೆಟ್ ಸುತ್ತಿದ ಕಾಡಿನಲ್ಲಿ ಮತ್ತೆ ಸುತ್ತುಹೊಡೆದು ಭಾನುತೇಜ್ (incidentally ನನ್ನ ಗಂಡ) ಬರೆದ ಲೇಖನ.

ಸಿಕ್ಕಾಪಟ್ಟೆ ಉದ್ದ ಇರುವುದರಿಂದ ಇದನ್ನ ಎರಡು ಭಾಗ ಮಾಡಿ, ಇನ್ನೊಂದು ಭಾಗವನ್ನು ಮುಂದಿನ ವಾರ ಹಾಕುತ್ತೇನೆ.

ಕಾರ್ಬೆಟ್ ನ ಕಾಡಿನಲ್ಲಿ

1. ಪ್ರವೇಶ

ಕಾಡೆಂದರೆ ಮೈ ಜುಮ್ಮೆನ್ನುವ ನಿಗೂಢತೆ ಅಂತ ಅನ್ನಿಸುವ ಮಂದಿಯಲ್ಲಿ ನೀವೂ ಒಬ್ಬರಾದಲ್ಲಿ ಜಿಮ್ ಕಾರ್ಬೆಟ್ ನೀವು ಮಿಸ್ ಮಾಡದೆ ಓದಬೇಕಾದ ವ್ಯಕ್ತಿ.

ಕಾರ್ಬೆಟ್ ಬರೆದ ಪುಸ್ತಕಗಳು ಕಾಡಿನ ರೀತಿ-ರಿವಾಜುಗಳ, ಪ್ರಾಣಿ ಪಕ್ಷಿಗಳ, ಸಾಹಸಗಳ ರೋಚಕ ಕಥೆಗಳ ಸರಮಾಲೆ. ಕಾಡಿನ ವೈಜ್ಞಾನಿಕ ಅಧ್ಯಯನ ಮಾಡುಲು ಆಸಕ್ತಿ ಉಳ್ಳವರಿಗೆ ಕೈಪಿಡಿಯೂ ಹೌದು. ಒಮ್ಮೊಮ್ಮೆ ಕಾಡಿನ ಬಗ್ಗೆ ಪರಿಸರವಾದಿಗಳಿಗೆ ಗೊತ್ತಿರುವುದಕ್ಕಿಂತಾ ಹೆಚ್ಚು ಬೇಟೆಗಾರರಿಗೆ ತಿಳಿದಿರುತ್ತದೆ! ಬೇಟೆಗಾರನಾಗಿ ಬಹಳಷ್ಟು ಹುಲಿಗಳನ್ನು ಕೊಂದ ಕಾರ್ಬೆಟ್ ತನ್ನ ಜೀವನದ ಉತ್ತರಾರ್ಧದಲ್ಲಿ ಪರಿಸರವಾದಿಯಾಗಿ ಮತಾಂತರಗೊಂಡವನು. ಹಾಗಾಗಿ ಕಾಡನ್ನು ಅನೇಕ ಕಣ್ಣುಗಳಲ್ಲಿ  ಕಂಡವನು. ಈಗ ಉತ್ತರಾಖಂಡದಲ್ಲಿರುವ ಕುಮಾವ್ ಅರಣ್ಯಗಳಲ್ಲಿ ನರ ಭಕ್ಷಕ ಹುಲಿ ಚಿರತೆಗಳ ಜಾಡು ಹಿಡಿದು ಹೊಡೆದು ಹಾಕುವುದರಲ್ಲಿ ಕಾರ್ಬೆಟ್ ನಿಷ್ಣಾತನಾಗಿದ್ದ. ಹೀಗೆ ಕಾಡಿನ ಜೊತೆಗೆ ನಿರಂತರ ಒಡನಾಡುತ್ತಾ ಇದ್ದ ಕಾರ್ಬೆಟ್ ಗೆ ಕಾಡು ಮತ್ತು ಅಲ್ಲಿನ ಪ್ರಾಣಿಗಳು ದಿನೇದಿನೇ ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಕ್ಷೀಣಿಸುತ್ತಾ ಹೋಗುತ್ತಿದುದು ಕಾಣದೆ ಇರಲಿಕ್ಕೆ ಸಾಧ್ಯ ಇರಲಿಲ್ಲ. ತೀರ ಹತ್ತಿರದಿಂದ ಕಂಡ ಈ ಸತ್ಯವೇ ಇವನನ್ನು ಪರಿಸರವಾದಿಯನ್ನಾಗಿ ಪರಿವರ್ತಿಸಿತ್ತು.

ಕಾರ್ಬೆಟ್ ಕಾಲದ ಪರಿಸ್ಥಿತಿ ಮತ್ತು ಮಾನದಂಡಗಳೇ ಬೇರೆ.  ಅದು ಬ್ರಿಟಿಷರ ಆಳ್ವಿಕೆಯ ಕಾಲ. ಕಾಡಿನ ಸಂಪತ್ತಿನ, ವಿಶೇಷವಾಗಿ ಮರಗಳ, ಬಲು ದೊಡ್ಡ ಲೂಟಿಗಾರರು ವಸಾಹತು ಸರ್ಕಾರ. ಸಾವಿರಾರು ಮಂದಿ ಕೆಲಸಗಾರನ್ನು ನೇಮಿಸಿ ಮರಗಳನ್ನು ಇಂಗ್ಲಿಶ್ ಸರ್ಕಾರ ಹಿಗ್ಗಾಮುಗ್ಗಾ ಕಡಿಸುತ್ತಿತ್ತು. ಕೋಸಿ ಮತ್ತು ರಾಮಗಂಗಾ ನದಿಗಳಲ್ಲಿ ಕಡಿದ ಮರದ ದಿಮ್ಮಿಗಳನ್ನು ಹರಿಬಿಟ್ಟು ಕೆಳಗಿನ ತಪ್ಪಲು ಪ್ರದೇಶಕ್ಕೆ ಇವುಗಳನ್ನು ತರಲಾಗುತ್ತಿತ್ತು. ಈ ನಿರಂತರ ಮತ್ತು ನಿರ್ಲಜ್ಜ ಲೂಟಿ ಕಾಡು ಮತ್ತು ಅಲ್ಲಿನ ಪ್ರಾಣಿಗಳ ಪ್ರಪಂಚವನ್ನು ಅಲ್ಲೋಲ ಕಲ್ಲೋಲ ಮಾಡಿತು ಅನ್ನುವುದು ನಿಸ್ಸಂದೇಹ. ಹೀಗೆ ತಮ್ಮ ತಾಣವನ್ನು ಕಳೆದುಕೊಂಡ ಕಾಡುಪ್ರಾಣಿಗಳು ಆಹಾರ ಹುಡುಕುತ್ತಾ ಮನುಷ್ಯ ಪ್ರಪಂಚದ ಇನ್ನಷ್ಟು, ಮತ್ತಷ್ಟು ಹತ್ತಿರ ಸುಳಿಯಲಾರಂಭಿಸಿದವು. ಇದು ಪ್ರಾಣಿ-ಮನುಷ್ಯ ಸಂಘರ್ಷಗಳಿಗೆ ನಾಂದಿ ಹಾಡಿತು.

ಅಷ್ಟೇ ಅಲ್ಲದೆ ಆಗಿನ ಕಾಲದ ಕೋವಿ ಹಿಡಿದು ಟೀವಿಯಿಂದ ಓಡಾಡುವ ಪ್ರತಿಯೊಬ್ಬ ಬಿಳಿ ತೊಗಲಿನ ಶಿಕಾರಿಗೂ ಹುಲಿಯನ್ನೋ ಚಿರತೆಯನ್ನೋ ಹೊಡೆದು ಅದರ ಚರ್ಮವನ್ನೋ, ಚರ್ಮದೊಳಗೆ ಹುಲ್ಲು ತುಂಬಿ ಮಾಡಿದ ಗೊಂಬೆಯನ್ನೋ ತಮ್ಮ ಸಂಗ್ರಹಕ್ಕೆ ಸೇರಿಸಿಕೊಳ್ಳುವುದು ಮಹಾ ಹೆಮ್ಮೆಯ ವಿಚಾರ.  ಕಲ್ಕತ್ತಾದಲ್ಲಿದ್ದ ಬ್ರಿಟನ್ನಿನ ಬಂದೂಕು ತಯಾರಿಕಾ ಕಂಪನಿಯೊಂದು ಭಾರತದ ಬೆಟ್ಟ ಪ್ರದೇಶಗಲ್ಲಿ ಮಾಡುವ ಶಿಕಾರಿಗಳಿಗೆ ಅನುಕೂಲಕರವಾಗಲೆಂದೇ ವಿಶೇಷ ಬಂದೂಕನ್ನು ತಯಾರಿಸುತ್ತಿತ್ತು ಎಂದು ಕಾರ್ಬೆಟ್ ಒಂದು ಲೇಖನದಲ್ಲಿ ಉಲ್ಲೇಖಿಸುತ್ತಾನೆ. ಇಂಥ ಶಿಕಾರಿಗಳು ಎಷ್ಟು ಮಂದಿ ಇದ್ದಿರಬಹುದು ಅನ್ನುವುದಕ್ಕೆ ಇದೊಂದು ಮಾಪನವನ್ನು ಒದಗಿಸುತ್ತದೆ.

ಇಷ್ಟೊಂದು ಜನ ಶಿಕಾರಿಗಳಲ್ಲಿ ಕೆಟ್ಟ ಶಿಕಾರಿಗಲಿಗೇನೂ ಬರ ಇರಲಿಲ್ಲ. ಇವರೆಲ್ಲಾ ಸರಿಯಾಗಿ ಗುರಿ ಇಡಲಾರದೆ  ಹುಲಿಯನ್ನು ಸಾಯಿಸಲಾರದೆ ಬರಿ ಗಾಯ ಮಾಡಿಬಿಡುವ ಯೋಗ್ಯತೆ ಮಾತ್ರ ಇದ್ದವರು. ಹೀಗೆ ಮಾಂಸಾಹಾರಿ ಪ್ರಾಣಿಯನ್ನು ಅರ್ಧಂಬರ್ಧ ಸಾಯಿಸಿ, ದೊಡ್ಡ ಗಾಯ ಮಾಡಿ ಬಿಟ್ಟುಬಿಡುವುದು ಅಪಾಯವನ್ನು ಆಹ್ವಾನಿಸಿದಂತೆಯೇ ಸರಿ. ತಾನು ಕೊಂದ ಬಹಳಷ್ಟು ನರಭಕ್ಷಕ ಹುಲಿಗಳು ಹೀಗೆ ಯಾವುದೋ ಕೆಟ್ಟ ಶಿಕಾರಿಯಿಂದ ಘಾಸಿಗೊಂಡವೋ ಅಥವಾ ಮುಳ್ಳುಹಂದಿಯ ಮುಳ್ಳಿನ ಪ್ರಹಾರ ಎದುರಿಸಿದವೋ ಆಗಿದ್ದವು ಅನ್ನುವ ಮಾತನ್ನು ಕಾರ್ಬೆಟ್ ಬರೆಯುತ್ತಾನೆ.

ಕಾರ್ಬೆಟ್ ವನ್ಯಪ್ರಾಣಿ ರಕ್ಷಣೆಯ ಬಗ್ಗೆ ಮಾತನಾಡಿ ಒಂದು ಶತಮಾನ ಕಳೆದಿದೆ. ಈಗ ಇವನ ಹೆಸರಿನ ಜಿಮ್ ಕಾರ್ಬೆಟ್ ರಾಷ್ಟ್ರೀಯ ಅರಣ್ಯ ಧಾಮದಲ್ಲಿ ೧೦೦ ಚದರ ಕಿಲೋಮಿಟರ್ರುಗಳಿಗೆ ಸರಾಸರಿ ೨೦ ಹುಲಿಗಳು ಉಳಿದಿವೆ. ಅಸ್ಸಾಮಿನ ಕಾಸಿರಂಗಾ ಅರಣ್ಯಧಾಮ ಮತ್ತು ಇದು ನಮ್ಮ ದೇಶದಲ್ಲಿ ಅತಿ ಹೆಚ್ಚು ಹುಲಿಗಳು ಉಳಿದಿರುವ ಪ್ರದೇಶಗಳು. ಆದರೆ ಈ ಧಾಮದ ಈಗಿನ ಒಟ್ಟು ವಿಸ್ತೀರ್ಣ ಕಾರ್ಬೆಟ್ ಆ ಕಾಲದಲ್ಲಿ ಓಡಾಡಿದ ದಟ್ಟ, ನಿಗೂಢ ಕಾಡಿನ ವಿಸ್ತಿರ್ಣದ ಒಂದು ಅತಿ ಸಣ್ಣ ಭಾಗ ಮಾತ್ರ. ಹೀಗಾಗಿ ಕಾರ್ಬೆಟ್ ನ ಜಾಡು ಹಿಡಿದು ಹೊರಡುವುದೆಂದರೆ ಅವನ ಭವ್ಯ ಭಯಾನಕ ಪಯಣದ ಒಂದು ಸಣ್ಣ ಭಾಗವನ್ನು ಕ್ರಮಿಸುವ ಪ್ರಯತ್ನವಷ್ಟೇ ಆಗಲಿಕ್ಕೆ ಸಾಧ್ಯ. ಆದರೂ…

2.  ಹೆಜ್ಜೆ ಗುರುತು…

ಹುಲಿಯೊಂದರ ಹೆಜ್ಜೆ ಗುರುತಿನ ಜಾಡು ಹಿಡಿದು ನಾವು ಹೊರಟಿದ್ದೇವೆ.

ಪಕ್ಕದ ಭೆಲ್ಗಟ್ಟಿ ಗ್ರಾಮದ ವ್ಯಕ್ತಿಯೊಬ್ಬ ಹಳ್ಳಿ ಮುಗಿದು ಕಾಡು ಆರಂಭವಾಗುವ ದಿಕ್ಕಿಗೆ ಬೆರಳು ಮಾಡಿ ತೋರಿಸಿ “ಊರಿನ ಕೆಲವು ಜನ ಬೆಳಿಗ್ಗೆ ಕಾಡಿನ ಕಡೆಗೆ ಹೊರಟಾಗ ಹುಲಿ ಅಲ್ಲೇ ಮಲಗಿತ್ತು  ಸಾಬ್. ಇಲ್ಲೇ ಎಲ್ಲೋ ಇರಬೇಕು, ಹುಷಾರು” ಅಂತ ಹೇಳಿದ. ನಮ್ಮೊಟ್ಟಿಗೆ ಬರ್ತಿಯಾ ಅಂತ ಕೇಳಿದೆ. “ಇಲ್ಲ ಸಾಬ್. ಎಮ್ಮೆ ಹೊಡೆದುಕೊಂಡು ಹೋಗಬೇಕು” ಅಂದ.

ಹಾಗಂತ ನಮಗೆ ಜೊತೆಗಾರರಿಗೇನು ಕಡಿಮೆ ಇರಲಿಲ್ಲ. ಗುಲಾಂ ನಬಿ ಅನ್ನುವ ೧೮ ವರ್ಷದ ಹುಡುಗ ಮತ್ತು ಅವರಮ್ಮ ಸಗೀನ ಬೀಬೀ ನಮ್ಮ ಜೊತೆ ಬಂದರು. ಹಿಂದಿನ ದಿನವಷ್ಟೇ ಇವರ ಎರಡು ಎಮ್ಮೆಗಳನ್ನು ಹುಲಿ ಕೊಂದು ಹಾಕಿತ್ತು. ಕಾರ್ಬೆಟ್ ಫೌಂಡೆಶನ್ ಸಂಸ್ಥೆಗೆ ಸೇರಿದ ಇದ್ರಿಸ್ ಮತ್ತು ಜೋಷಿ ಅನ್ನುವ ಮತ್ತಿಬ್ಬರು ನಮ್ಮ ಜೊತೆ ಇದ್ದರು. ಅರಣ್ಯ ಧಾಮದ ಸುತ್ತಲಿನ “ಬಫರ್ ಜೋನ್”ನಲ್ಲಿ ಹುಲಿ ಚಿರತೆಗಳಿಂದ ಸತ್ತ ಜಾನುವಾರುಗಳ ಲೆಕ್ಕ ಇಡುವುದೇ ಈ ಇಬ್ಬರ ಕೆಲಸ. ಈ ಕೆಲಸ ಸುಲಭದ್ದಲ್ಲ ಅನ್ನುವುದರಲ್ಲಿ ಅನುಮಾನವೇ ಇಲ್ಲ. ಹುಲಿಯೋ, ಚಿರತೆಯೋ ಕೊಂದು ಅರ್ಧ ತಿಂದು ಬಿಟ್ಟು ಹೋದ ಪ್ರಾಣಿಯ ಚಿತ್ರ ತೆಗೆದು, ಅದನ್ನು ತಿಂದದ್ದು ಹುಲಿಯೇ ಅನ್ನುವುದಕ್ಕೆ ಒಂದಷ್ಟು ಪುರಾವೆ ಒಟ್ಟು ಮಾಡಿ ತಕ್ಷಣ ಜಾನುವಾರು ಕಳೆದುಕೊಂಡ ಕುಟುಂಬಕ್ಕೆ ಪರಿಹಾರ ದೊರಕಿಸಿಕೊಡುವುದು ಇವರ ಪಾಲಿನ ಕೆಲಸ.

ಜೀಪನ್ನು ಸುಮಾರು ಕಾಡಿನ ಅಂಚಿನವರೆಗೆ ತೆಗೆದುಕೊಂಡು ಹೋದೆವು. ಅದಕ್ಕಿಂತ ಮುಂದೆ ಹೋಗುವುದು ಸಾಧ್ಯ ಇರಲಿಲ್ಲ. ಉಳಿದ ಹುಡುಕಾಟ – ಅಂದರೆ ನಿಜವಾದ ಹುಡುಕಾಟ – ಕಾಲ್ನಡಿಗೆಯಲ್ಲಿ ಮಾತ್ರ ಸಾಧ್ಯ. ಜೀಪಿನ ಒಳಗೆ ಸುರಕ್ಷಿತವಾಗಿ ಕೂತು ಬೈನಾಕ್ಯುಲರ್ ಕಣ್ಣಿಗೆ ಅಂಟಿಸಿಕೊಂಡು ಹುಲಿಯನ್ನು ಹುಡುಕುವುದು ಯಾವಾಗಲೂ ಒಳ್ಳೆ ಮಜಾ ಕೊಡುವ ಅನುಭವ. ಆದರೆ ಲಾಂಟಾನ ಗಿಡಗಳ ದಟ್ಟ ಪೊದೆಗಳಿಂದ ತುಂಬಿ ಹೋದ, ಮರದ ಅತಿ ಕೆಳಗಿನ ರೆಂಬೆ ನೆಲದಿಂದ ಕನಿಷ್ಠ ೧೨ ಅಡಿ ಮೇಲೆ ಇರುವಂತ ಕಾಡಿನಲ್ಲಿ ನಡೆದುಕೊಂಡು ಹೊರಟಾಗ ನಾವು ಆತ್ಮಹತ್ಯೆ ಮಾಡಿಕೊಳ್ಳಲಿಕ್ಕೆ ಹೊರಟಿದ್ದೇವಾ ಅನ್ನುವ ಅನುಮಾನ ಖಂಡಿತ ಕಾಡದೆ ಬಿಡಲಾರದು!

ಲಾಂಟಾನ ಪೊದೆಗಳು ಹುಲಿಗೆ ಒಳ್ಳೆಯ ಅಡಗುವ ಅವಕಾಶಗಳನ್ನು ಒದಗಿಸುತ್ತದೆ. ಹಾಗೆಯೇ ನಮ್ಮ ಮುಂದಿನ ಕಾಡಿನ ಚರ್ಯೆಯನ್ನು ಸಂಪೂರ್ಣ ಮಸುಕುಗೊಳಿಸುತ್ತವೆ. ಅದೂ ಅಲ್ಲದೆ ಈ ಹುಲಿ ಅರ್ಧ ಎಮ್ಮೆಯನ್ನು ತಿಂದು ಉಳಿದರ್ಧ ಊಟವನ್ನು ಇನ್ಯಾವುದೋ ಪ್ರಾಣಿ ಕದ್ದಿತೆಂದು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾಯುತ್ತಾ ಇರಬೇಕು ಅನ್ನುವುದೇ ಎಲ್ಲರ ಅನುಮಾನವಾಗಿತ್ತು. ಹುಲಿಯ ದೃಷ್ಟಿಯಲ್ಲಿ ನಾವೂ ಅದರ ಊಟ ಕಸಿಯಲು ಬಂದ ಪ್ರಾಣಿಗಳೇ. ನಮ್ಮ ಪರಿಸ್ಥಿತಿ ಒಟ್ಟಾರೆ ಹುಲಿಯ ಬಾಯಿಗೆ ಹೋಗುವ ಪುಣ್ಯಕೋಟಿಯಂದದಲ್ಲಿ ಇತ್ತು.

ಆದರೆ ಪ್ರಯಾಣ ಮುಂದುವರಿಸದೆ ಬೇರೆ ದಾರಿ ಇರಲಿಲ್ಲ. ಇದ್ರಿಸ್ ಮತ್ತು ಜೋಷಿಗೆ ಪುರಾವೆಗಳನ್ನು ಕಲೆಹಾಕುವುದು, ಹಲ್ಲು ಮತ್ತು ಉಗುರಿನ ಗುರುತುಗಳನ್ನು ಪರಿಶೀಲಿಸುವುದು, ಗುಲಾಂ ನಬಿಯ ಕೈಯ್ಯಲ್ಲಿ ಒಂದು ಅವನ ಹೆಸರು ಬರೆದ ಸ್ಲೇಟ್ ಹಿಡಿಸಿ ಕಳ್ಳ ಕಾಕರನ್ನು ಪೊಲೀಸರು ನಿಲ್ಲಿಸುವಂತೆ ಸತ್ತ ಎಮ್ಮೆಯ ಪಕ್ಕ  ನಿಲ್ಲಿಸಿ ಫೋಟೋ ತೆಗೆಯುವುದು  ಅನಿವಾರ್ಯ ಕರ್ಮ. ನಮ್ಮ ಪ್ರಯಾಣಕ್ಕೆ ಈ ರೀತಿಯ ಕೆಲಸದ ತುರ್ತಿರಲಿಲ್ಲದಿದ್ದರೂ ಒಂದು ರೀತಿಯ ಹುಚ್ಚು ತೆವಲಿನ ತುರ್ತಂತೂ  ಇತ್ತು.

ಇದ್ರಿಸ್ ಮತ್ತು ಜೋಶಿಗೆ ಎಷ್ಟೇ ಅನುಭವ ಇದ್ದರು, ಈ ಕೇಸಿನಲ್ಲಿ ಸ್ವಲ್ಪ ಕಂಗಾಲಾದವರಂತೆ, ದಿಕ್ಕುತೊಚದವರಂತೆಯೇ ನಮ್ಮ ಕಣ್ಣಿಗಂತೂ ಕಾಣುತ್ತಿದ್ದರು. ಅವರ ಹೃದಯದ ಬಡಿತ ನನಗೆ ಕೇಳುತ್ತಿದೆ ಅಂತ ನನಗೆ ಅನ್ನಿಸುತ್ತಿತ್ತು. ಅವರಿಗೂ ಅಷ್ಟೇ ಸ್ಪಷ್ಟವಾಗಿ ನನ್ನ ಹೃದಯದ ಬಡಿತ ಕೇಳುತ್ತಿದ್ದೀತು.

ಕಾಡಿನೊಳಗೆ ಸ್ವಲ್ಪ ದೂರ ಕ್ರಮಿಸುವಷ್ಟರಲ್ಲಿಯೇ ನಮ್ಮ ಮುಂದೆ ಒಂದಷ್ಟು ಜಾಗದಲ್ಲಿ ಹುಲ್ಲು ಇದ್ದಕ್ಕಿದ್ದಂತೆ ಬಾಗಿರುವುದು ಕಾಣಿಸಿತು. ಬಾಗಿದ ಭಾಗವನ್ನು ಹತ್ತಿರದಿಂದ ನೋಡಿದ ಯಾರಿಗಾದರು ಅದು ಈಗಷ್ಟೇ ಹುಲಿ ಮಲಗಿ ಎದ್ದು ಹೋಗಿರುವ ಜಾಗ ಅಂತ ಗೊತ್ತಾಗುವುದು ಕಷ್ಟ ಇರಲಿಲ್ಲ. ಬೆಳಿಗ್ಗೆಯ ಊಟ ಮುಗಿಸಿ ಹಾಗೆ ಇಲ್ಲಿ ಸ್ವಲ್ಪ ಹೊತ್ತು ಒರಗಿ ಹುಲಿ ಎದ್ದು ಹೋಗಿರಬೇಕು. ಮನೆಯ ಬೆಕ್ಕು ಹೊಟ್ಟೆ ತುಂಬಿಸಿಕೊಂಡು ಸೋಮಾರಿತನದಿಂದ ಮೈ ಮುರಿದು ಬಿಸಿಲಲ್ಲಿ ಮಲಗುವ ಹಾಗೆಯೇ ಹುಲಿ ಮಲಗಿ ತನ್ನ ಮುಂದಿನ ದೃಶ್ಯವನ್ನು ಅರ್ಧನಿಮೀಲಿತ ನಯನಗಳಿಂದ ನೋಡುತ್ತಾ ಇರುವ ಚಿತ್ರ ನನ್ನ ತಲೆಯಲ್ಲಿ ಓಡುತ್ತಿತ್ತು. ಅಲ್ಲಿಂದ ಹೊರಟ  ಹುಲಿಯ ಹೆಜ್ಜೆ ಗುರುತುಗಳು ಲಂಟಾನ ಪೊದೆಯ ಪಕ್ಕದವರೆಗೂ ಇತ್ತು.

ಅದಕ್ಕೂ ಸ್ವಲ್ಪ ಮುಂದೆ ಕಾಳಗ ನಡೆದ ಕುರುಹುಗಳಿದ್ದವು. ಸುಮಾರು ಐದು ಮೀಟರ್ರಿನಷ್ಟು ಸುತ್ತಳತೆಯ ಜಾಗದಲ್ಲಿ ಹುಲ್ಲು, ಲಂಟಾನ ಪೊದೆ ಎಲ್ಲಾ ಹರಿದು ಚೆಲ್ಲಾಪಿಲ್ಲಿ ಆಗಿತ್ತು. ಬಡಪಾಯಿ ಎಮ್ಮೆ ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾ ದಿಕ್ಕಾಪಾಲಾಗಿ ಓಡಿದ್ದು ಸ್ಪಷ್ಟವಾಗಿ ಗೊತ್ತಾಗುತ್ತಿತ್ತು.  ಎಮ್ಮೆಗಳು ಗೋಧೂಳಿಯ ಸಮಯಕ್ಕೆ ಹಳ್ಳಿಗೆ ಹಿಂದಿರುಗುವ ಹೊತ್ತಿಗೆ ಹುಲಿ ಅಡ್ಡ ಹಾಕಿದ್ದೀತು. ಮಳೆ ಬಂದಿದ್ದರಿಂದ ಕಾಲು ದಾರಿಗಳು ಅಳಿಸಿಹೋದಂತೆ ಆಗಿತ್ತು.

ಒಂದು ಹುಲಿ ಎರಡು ಎಮ್ಮೆಗಳನ್ನು ಒಂದೇ ಬಾರಿಗೆ ಹಿಡಿದುಕೊಂಡಿರಲಿಕ್ಕೆ ಸಾಧ್ಯವೇ ಅನ್ನುವ ಅನುಮಾನ ನನ್ನನ್ನು ಕಾಡುತ್ತಿತ್ತು. ಅದರಲ್ಲಿಯೂ ಈ ಘಟನೆ ನಡೆದ ಹಿಂದಿನ ದಿನವಷ್ಟೇ ಇನ್ನೊಂದು ಎಮ್ಮೆಯನ್ನು ಬೇಟೆಯಾಡಿ, ತಿನ್ನದೇ ಪೊದೆಯಲ್ಲಿ ಊರಿನ ದಕ್ಷಿಣ ಸರಹದ್ದಿನ ಹತ್ತಿರ ಅಡಗಿಸಿ ಇಟ್ಟಿದ್ದನ್ನು ಹಳ್ಳಿಗರು ಪತ್ತೆ ಹಚ್ಚಿದ್ದರು.

ಸ್ವಲ್ಪ ಮುಂದೆ ಹುಲಿ ಹಿಕ್ಕೆ ಹಾಕಿತ್ತು. ಹಿಂದೆಯೂ ನಾನು ಹುಲಿಯ ಹಿಕ್ಕೆಯನ್ನು ನೋಡಿದ್ದುಂಟು. ಆದರೆ ಇಷ್ಟು ಭಾರಿ ಪ್ರಮಾಣದ ಅಥವಾ ಇಷ್ಟು ಫ್ರೆಶ್ ಆದದ್ದನ್ನು ಖಂಡಿತ ಕಂಡಿಲ್ಲ! ಕಳೆದ ಒಂದೂವರೆ ದಿನಗಳಲ್ಲಿ ಹುಲಿರಾಯ ಭರ್ಜರಿ ಭೋಜನವನ್ನೇ ಮಾಡಿರುವುದು ಸ್ಪಷ್ಟವಾಗಿ ಕಾಣುತ್ತಿತ್ತು. ಇನ್ನು ಸ್ವಲ್ಪ ಮುಂದೆ ನೆಲವನ್ನು ತನ್ನ ಉಗುರುಗಳಿಂದ ಕೆರದು ಹೊಂಡಮಾಡಿ ಮಹಾಶಯ ಉಚ್ಚೆ ಹುಯ್ದಿದ್ದ. ಇನ್ನೂ ಒದ್ದೆ ಇದ್ದ ಈ ಉಚ್ಚೆ ನಮ್ಮಲ್ಲೂ ಉಚ್ಚೆ ಹೊಯ್ದುಕೊಳ್ಳುವ ಮನಸ್ಥಿತಿಯನ್ನೇ ಸೃಷ್ಟಿಸಿತ್ತು. ನಾವು ಬರುತ್ತಿರುವ ಸದ್ದು ಕೇಳಿ ಹುಲಿ ಈಗಷ್ಟೇ ಜಾಗ ಖಾಲಿ ಮಾಡಿರಬಹುದು.

ಅಷ್ಟರಲ್ಲಿ ನಮ್ಮ ಜೊತೆಗಿದ್ದ ಅಮ್ಮ ಮಗನ ಜೋಡಿ ಗುಜ್ಜಾರ್ ಭಾಷೆಯಲ್ಲಿ ಏನೋ ಮಾತಾಡಿಕೊಳ್ಳಲಿಕ್ಕೆ ಶುರು ಮಾಡಿದರು. ಗುಲಾಂ ಬಾಯಿಯ ಸುತ್ತ ವೃತ್ತಾಕಾರದಲ್ಲಿ ಅಂಗೈಯ್ಯನ್ನು ಇಟ್ಟುಕೊಂಡು ಕಂಠ ಬಿರುಯುವಷ್ಟು ಜೋರಾಗಿ ಒದರಲು ಪ್ರಾರಂಭಿಸಿದ. ಅಮ್ಮನೂ ಅವನ ಜೊತೆ ಜುಗಲ್ಬಂದಿ ಶುರು ಮಾಡಿದಳು.

ಹುಲಿ ಹತ್ತಿರದಲ್ಲಿಯೇ ಇರುವುದು ಎಲ್ಲರಿಗಿಂತಾ ಮೊದಲು ಅವರಿಗೆ ಗೊತ್ತಾಗಿತ್ತು. ಅದನ್ನು ಓಡಿಸುವ ಪ್ರಯತ್ನದಲ್ಲಿ ಗುಲಾಮ್ ತೊಡಗಿದ್ದ. ಈ ಇಬ್ಬರು ಹುಲು ಮಾನವರು ಸೇರಿ ಮಾಡುತ್ತಿದ್ದ ಗಲಾಟೆ ಯಾವುದೇ ಬರೋಬರಿ ಸೈನ್ಯ ಯುದ್ಧ ಮಾಡುವಾಗ ಎಬ್ಬಿಸುವ ದೊಂಬಿಗಿಂತ ಸ್ವಲ್ಪವು ಕಡಿಮೆ ಇರಲಿಲ್ಲ. ಹುಲಿಯನ್ನು ಕಣ್ಣಾರೆ ಕಂಡೇವೆಂಬ ಆಸೆ ಅಲ್ಲಿಗೆ ಮುಕ್ತಾಯವಾಯಿತು. ಈ ಅಮ್ಮ ಮಗನ ಗಲಾಟೆ ಸೈನ್ಯವನ್ನು ಎದುರಿಸಿಯೂ ತಾನು ಬೇಟೆಯಾಡಿದ ಎಮ್ಮೆಯನ್ನು ಕಾಯ್ದುಕೊಳ್ಳುವ ಛಾತಿ ಆ ಹುಲಿಗೆ ಇದ್ದ ಪಕ್ಷದಲ್ಲಿ ಕತೆಯೇ ಬೇರೆ!

ಹೆಜ್ಜೆ ಗುರುತುಗಳು ದಕ್ಷಿಣದ ದಿಕ್ಕೆಗೆ ಮುಂದುವರೆಯುತ್ತಿದ್ದವು. ಗುಲಾಂನ ಕಣ್ಣು ಮಾತ್ರ ಪೂರ್ವ ದಿಕ್ಕಿಗೇ ನೆಟ್ಟಿತ್ತು. ಸತ್ತ ಎಮ್ಮೆಯ ಸುಳಿವಿರಲಿಲ್ಲ. ಇನ್ನೊಂದೆರಡು ನಿಮಿಷ ಲಾಂಟಾನ ಪೊದೆಗಳ ಮಧ್ಯೆ ನಡೆಯುವಷ್ಟರಲ್ಲಿ ನಮ್ಮ ಮೂಗು ಎಮ್ಮೆಯ ಕಳೇಬರ ಎಲ್ಲಿರಬಹುದು ಎಂದು ನಮಗೆ ಹೇಳತೊಡಗಿತು. ತಗ್ಗಿ ಬಗ್ಗಿ ಅತ್ತ ಇತ್ತ ಒಂದೆರಡು ನಿಮಿಷ ಹುಡುಕುವಷ್ಟರಲ್ಲಿ ಒಂದು ಎಮ್ಮೆ ಕಾಣಿಸಿತು. ಹುಲಿ ಸುಮಾರಷ್ಟು ತಿಂದು ಮುಗಿಸಿತ್ತಾದರೂ ಅದು ಮತ್ತೆ ಬಂದು ತಿನ್ನುವುದಕ್ಕೆ ಪ್ರೇರೆಪಿಸುವಷ್ಟು ಮಾಂಸ ಇನ್ನು ಉಳಿದಿತ್ತು. ಸ್ವಲ್ಪ ಮುಂದೆ ಎರಡನೆಯ (ಸಣ್ಣ ಗಾತ್ರದ) ಎಮ್ಮೆಯ ಕಾಲು ಮಾತ್ರ ಬಿದ್ದಿತ್ತು.

ಭಯದಿಂದ ಒಂದು ಥರದ ಭ್ರಮೆಗೆ ಎಲ್ಲರೂ ಒಳಗಾಗಿದ್ದರಿಂದಲೋ ಏನೋ, ವನ್ಯ ಮೃಗಗಳ ಬಗ್ಗೆ ಪರಿಣತಿ ಇದ್ದ ಇದ್ರಿಸ್ ಮತ್ತು ಜೋಷಿ ಮತ್ತೆ ಮತ್ತೆ ಗುಲಾಂನನ್ನು “ಉಳಿದ ಎಮ್ಮೆ ಏನಾಯ್ತು?! ಉಳಿದ ಎಮ್ಮೆ ಎಲ್ಲಿ?!” ಅಂತ ಕೇಳಲಿಕ್ಕೆ ಶುರು ಮಾಡಿದರು. ಗುಲಾಂ ಅತಿ ವಿನಯದ ಧಾಟಿಯಲ್ಲಿ “ಈ ಪ್ರಶ್ನೆಯನ್ನು ಮಾತ್ರ ನೀವು ಹುಲಿಯನ್ನೇ ಕೇಳಬೇಕಾದೀತು ಸಾಬ್!”  ಅಂದ. ನಗುವ ಸಂದರ್ಭ ಅದಲ್ಲದಿದ್ದರೂ ನಗು ಬಂದದ್ದಂತು ಹೌದು.

ಒಂದು ಹುಲಿ ಒಂದೂವರೆ ದಿನದಲ್ಲಿ ಎರಡು ಎಮ್ಮೆಗಳನ್ನು ತಿಂದು ಮುಗಿಸುವ ಸಾಧ್ಯತೆ ಇರಲಿಲ್ಲ. ಈ ಪ್ರಶ್ನೆಯ ಬಗ್ಗೆ ನಾವು ಗಹನವಾಗಿ ಚರ್ಚೆ ಪ್ರಾರಂಭಿಸಿದಾಗ ಗುಲಾಂ ಇದೇನು ಮಹಾ ಪ್ರಶ್ನೆ ಅನ್ನುವ ಧಾಟಿಯಲ್ಲಿ “ಒಂದಲ್ಲ ಎರಡು ಹುಲಿಗಳಿದ್ದಾವೆ ಸಾಬ್. ನಮ್ಮಪ್ಪ ಮರದ ಮೇಲಿಂದ ಇವತ್ತು ಬೆಳಗ್ಗೆ ನೋಡಿದನಂತೆ. ಅವನು ಓಡಿಸಲಿಕ್ಕೆ ಪ್ರಯತ್ನ ಮಾಡಿದರೂ ಓಡಿ ಹೋಗುವುದಿರಲಿ ಇದ್ದ ಜಾಗದಿಂದ ಅಲ್ಲಾಡಲಿಲ್ಲವಂತೆ” ಅಂದ.

ಫೋಟೋ ಸೆಶನ್ ಇತ್ಯಾದಿಗಳನ್ನು ಮುಗಿಸಿಕೊಂಡು ನಾವು ಹಿಂದಿರುಗುತ್ತಾ ಇರುವಾಗ ನಾನು ಗುಲಾಂನನ್ನು ಈ ಭಾಗಗಳಲ್ಲಿ ಹುಲಿಗಳನ್ನು ಸುಮಾರು ಎಷ್ಟು ಸಲ ಕಾಣುತ್ತೀರಿ ಅಂತ ಕೇಳಿದೆ. ಏನೋ ಅವನ ಪಕ್ಕದ ಮನೆಯ ಹುಡುಗಿಯ ಬಗ್ಗೆ ವಿಚಾರಿಸುತ್ತಿದ್ದೀನೇನೋ ಅನ್ನುವ ಧಾಟಿಯಲ್ಲಿ “ದಿನಾ ಸಾಬ್” ಅಂದ.

ಅಂದು ಬೆಳಗ್ಗೆ ತಾನೇ ಈ ಅರಣ್ಯ ಧಾಮಕ್ಕೆ ಗುಂಪು ಗುಂಪಾಗಿ ಬರುವ ಪ್ರವಾಸಿಗರಲ್ಲೊಬ್ಬ “ಅಯ್ಯೋ ಹುಲೀನೆ ಕಾಣಲಿಲ್ಲ. ಕಂಡದ್ದು ಬರೀ ಒಂದಷ್ಟು ಜಿಂಕೆ” ಅಂತ ಗೊಣಗಿಕೊಳ್ಳುತ್ತಾ ಇದ್ದದ್ದನ್ನು ಕೇಳಿದ್ದೆ. ಈ ಹುಲಿ ಯಾರ ಕಣ್ಣಿಗೆ ಕಾಣತ್ತೆ, ಯಾರಿಗೆ ಕಾಣಲ್ಲ, ಯಾರಿಗೆ ಏನಾಗಿ ತೋರತ್ತೆ ಎನ್ನುವುದೆಲ್ಲ ಎಂತಾ ಮಾಯೆ ಅಲ್ಲವಾ ಅನ್ನಿಸಿತು. ಗುಲಾಂನಂತ ನೂರಾರು ಜನರ ಜೀವನಾಧಾರವನ್ನೇ ಕಸಿದುಕೊಳ್ಳುವ ಈ ಹುಲಿ ರಾಮನಗರ ಮತ್ತು ಧಿಕುಲಿಯ ಸುತ್ತ ಮುತ್ತ   ಜೀವಕ್ಕೆ ಆಧಾರ. ಯಾಕೆಂದರೆ ಈ ಊರುಗಳ ಇಡೀ ಆರ್ಥಿಕತೆಯೇ ಹುಲಿ-ಕೇಂದ್ರಿತ  ಪ್ರವಾಸೋದ್ಯಮವನ್ನು ಆಧರಿಸಿದೆ.

ಸುಮಾರು ತೊಂಭತ್ತರ ದಶಕದವರೆಗೆ ಈ ಹಳ್ಳಿಗಳ ಜನ ಈ ರೀತಿಯ ಘಟನೆ ನಡೆದಾಗ ಎಮ್ಮೆಯ ಮೇಲೆ ಒಂದಷ್ಟು ವಿಷ ಸಿಂಪಡಿಸಿ ಹುಲಿಯನ್ನು ಸಾಯಿಸಿಬಿಡುತ್ತಿದ್ದರು. ಈಗಿನ ಹೊಸ ಸ್ಕೀಮುಗಳ ಪ್ರಭಾವದಿಂದಾಗಿ ಗುಲಾಂನಂತಹ ಜನ ಈಗ ಮುಂಚಿನ ವಿಧಾನಗಳನ್ನು ಕೈಬಿಟ್ಟಿದ್ದಾರೆ.

ಕಾರ್ಬೆಟ್ ಅರಣ್ಯದ ಸುತ್ತಮುತ್ತಲ “ಬಫರ್ ಝೋನ್” ಪ್ರದೇಶದಲ್ಲಿ ೨೦೦೯-೧೦ ಸಾಲಿನಲ್ಲಿ ೧,೩೦೦ ಜಾನುವಾರುಗಳನ್ನು ಹುಲಿಗಳು ಬೇಟೆಯಾಡಿವೆ ಎಂದು ಅಲ್ಲಿನ ಅಧಿಕಾರಿಗಳು ಲೆಕ್ಕ ಕೊಡುತ್ತಾರೆ. ಅಂದರೆ ದಿನಕ್ಕೆ ಸರಾಸರಿ ಮೂರು! ಒಂದು ಕಾಲದಲ್ಲಿ ನರಭಕ್ಷಕ ಹುಲಿಗಳ ತಾಣವಾಗಿದ್ದ ಈ ಕಾಡು ಈಗ ಜಾನುವಾರು ಭಕ್ಷಕ ಹುಲಿಗಳ ತಾಣವಾಗಿದೆ.

(ಉಳಿದದ್ದು ಇನ್ನೊಂದು ಪೋಸ್ಟ್ ನಲ್ಲಿ)


Advertisements

1 ಟಿಪ್ಪಣಿ »

 1. M. S. Prabhakara said

  ಶ್ರೀಮತಿ ಬಾಗೇಶ್ರೀ, ನಿಮ್ಮ ಬಾಲ್ಯದ ಹುಲಿರಾಯನ ನೆನಪುಗಳು , ಮನೆಯಲ್ಲಿ, ಕಾಡಿನಲ್ಲಿ ಮತ್ತೆಲ್ಲಕ್ಕೂ ಮೀರಿ ಅಜ್ಜಿಅಜ್ಜಂದಿರ ಕತೆಗಳ ಕಲ್ಪನಾ ಸಾಮ್ರಾಜ್ಯದಲ್ಲಿನ ಹುಲಿರಾಯನ ನೆನಪುಗಳು ಬಹಳ ಮಜವಾಗಿವೆ. ಓದಿದಾಗ ಅನ್ನಿಸಿತು, ಎಲ್ಲರ ಬಾಲ್ಯದ ನೆನಪುಗಳೂ ಒಂದು ರೀತಿ ಒಂದೇ ಥರಾನಾ? ನಾನು ಹುಟ್ಟಿಬೆಳೆದ ಈ ಬರಡು ಸೀಮೆಯಲ್ಲಿ ಹುಲಿಗಳು ಬಹಳ ಅಪರೂಪ. ಆದರೆ ಮನೆಯಿಂದ ಎರಡು ಮೈಲಿ ದೂರದಲ್ಲಿನ ಅಂತರಗಂಗೆ ಬೆಟ್ಟ ಒಂದು ಕಾಲದಲ್ಲಿ ಚಿರತೆಗಳ ಮನೆಯಾಗಿತ್ತಂತೆ. ಈ ಕೆಲವು ವರುಷಗಳಿಂದ ಅಲ್ಲಿ ಮನೆಮಾಡಿಕೊಂಡಿರುವ ಆದಿಮ ಸಾಂಸ್ಕೃತಿಕ ಕೇಂದ್ರದಲ್ಲಿ ಈ ದಿನಗಳಲ್ಲೂ ಚಿರತೆಗಳು ಕಂಡುಬಂದಿವೆ. ಒಂದು ಮುಂಜಾನೆ ಚಿರತೆಯೊಂದು ಆದಿಮದ ಕುಟೀರವೊಂದರ ಹತ್ತಿರದ ಬಂಡೆಯಮೇಲೆ ಆರಾಮವಾಗಿ ಕೂತಿತ್ತು. ಇದು ಇತ್ತೀಚಿನ ಘಟನೆ. ಇಲ್ಲಿಂದ ಮೂರು ಮೈಲಿ ದೂರದಲ್ಲಿರುವ ಕೋಲಾರ ಬೆಂಗಳೂರಿನ ಹೆದ್ದಾರಿಯಲ್ಲಿನ ಅರಾಬಿ ಕೊತ್ತನೂರು ಗ್ರಾಮದಲ್ಲಿ ನಾನು ಸಣ್ಣವನಾಗಿದ್ದಾಗ ಚಿರತೆಗಳನ್ನು ಹಳ್ಳಿಯವರೇ ಬೋನಿನಲ್ಲಿ ಹಿಡಿಯುತ್ತಿದ್ದರು. ಒಮ್ಮೆ ಈ ರೀತಿ ಬಂಧಿಸಿದ್ದ ಚಿರತೆಯನ್ನು ನೋಡಲು ಸಾವಿರಾರು ಮಂದಿಯಂತೆ ನಾನೂ ಹೋಗಿದ್ದೆ. ಗುವಾಹತಿಯಲ್ಲಂತೂ ಚಿರತೆಗಳ ಸಂತೆ. ಕೆಲವೊಮ್ಮೆ ಫ್ಲಾಟುಗಳಲ್ಲೂ ಕಂಡುಬಂದಿವೆ. ನಾನು ವಾಸವಾಗಿದ್ದ ಉಜನ್ ಬಜಾರನ್ನು ಆವರಿಸಿಕೊಂಡಿರುವ ಖಾರ್ಗುಲಿ ಬೆಟ್ಟಗಳಲ್ಲಿ ಈಗಲೂ ಚಿರತೆಗಳಿವೆ. ಆದರೆ ಸ್ವಾಭಾವಿಕವಾಗೇ ಚಿರತೆಗಳಿಗಿಂತ ಹುಲಿಗಳ ಬಗ್ಗೆಯೇ ಕುತೂಹಲ, ಆಸಕ್ತಿ ಜಾಸ್ತಿ. ಅದಕ್ಕೇ ನೀವು ತರ್ಜುಮೆ ಮಾಡಿರುವ ಪ್ರಬಂಧದಲ್ಲಿ ಹೇಳಿರುವಂತೆ ಅಸ್ಸಾಮಿನ ಕಾಜೀರಂಗ ರಾಷ್ಟ್ರೀಯ ಉದ್ಯಾನದಲ್ಲಿ ಚದರಮೈಲಿಯೊಂದರಲ್ಲಿನ ಹುಲಿಗಳ ದಟ್ಟತೆ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿನ ಹುಲಿಗಳ ದಟ್ಟತೆಗಿಂತ ಸ್ವಲ್ಪ ಮಾತ್ರ ಕಮ್ಮಿ ಅಂತ ತಿಳಿದು ಬಹಳ ಸಂತೋಷವಾಯಿತು. ಶ್ರೀ ಭಾನುತೇಜರ ಪ್ರಬಂಧ ನಾನು ಇಂಗ್ಲಿಷ್ ನಲ್ಲಿ ಓದಿದ್ದೇನೆ. ಅದರಲ್ಲಿ ಅಪರೂಪವಾದ, ತಿಳಿದುಕೊಳ್ಳಬೇಕಾದ ಇನ್ನೂ ಅನೇಕ ವಿಷಯಗಳಿವೆ. ಅದನ್ನು ಸಹಜವಾಗಿ, ಸರಳವಾಗಿ ಓದಿಸಿಕೊಳ್ಳುವ ತರ್ಜುಮೆ ಮಾಡಿ ಬಹಳ ಒಳ್ಳೆ ಕೆಲಸ ಮಾಡಿದ್ದೀರಿ. Thanks.

  ಈ ಗಹನವಾದ ವಿಷಯಗಳಿಗಿಂತಾ ಮೀರಿ ನಾನು ಪಸಂದಿಸಿರುವುದು ನೀವು ಸಣ್ಣವರಾಗಿದ್ದಾಗ ಕೇಳಿದ ಕತೆಗಳ ನೆನಪುಗಳನ್ನು. ಆವನ್ನು ಓದಿದಾಗ ಅರವತ್ತು ಎಪ್ಪತ್ತು ವರುಷಗಳ ಹಿಂದಿನ ನನ್ನ ಬಾಲ್ಯದಲ್ಲಿ ಹುಲಿ ಚಿರತೆಗಳ ಬೇಟೆಯ ಬಗ್ಗೆ ಕೇಳಿದ ಕೆಲವು ಕತೆಗಳ ನೆನಪನ್ನು ಹಂಚಿಕೊಳ್ಳೋಣ ಅನ್ನಿಸಿತು. ಆವುಗಳಲ್ಲಿ ಈಗಲೂ ನೆನಪಿನಲ್ಲಿರುವುದು ಈಗ ನಾನು ವಾಸವಾಗಿರುವ ನನ್ನ ಅಪ್ಪ ಕಟ್ಟಿದ ಮನೆಯ ಹತ್ತಿರವೇ ವಾಸವಾಗಿದ್ದ ಇಫ್ತಿ ಮಾಮ (ಇಫ್ತಿಕಾರ್ ಅಹಮದ್ಫ್) ಹೇಳುತ್ತಿದ ಕತೆಗಳು.

  ಆ ದಿನಗಳಲ್ಲಿ ಇಫ್ತಿಮಾಮನ ವಯಸ್ಸು ಸುಮಾರು ಐವತ್ತು ಇದ್ದಿರಬಹುತು. ಅವನ ಹಿಂದೆಯೇ ಬೆನ್ನುಬಿದ್ದು ಹಿಂಬಾಲಿಸುತ್ತಿದ್ದ ನಾವು ಏಳೆಂಟು ಮಂದಿ ಹುಡುಗರು. ನಮಗ್ಯಾರಿಗೂ ಹತ್ತು ವರುಷ ಸಹಾ ತುಂಬಿರಲಿಲ್ಲ. ಅವನು ಹೇಳುತ್ತಿದ್ದ ಎರಡು ಕತೆಗಳ ನೆನಪು ಈಗಲೂ ಮಾಸಿಲ್ಲ.

  ಒಮ್ಮೆ ಇಫ್ತಿಮಾಮ ತನ್ನ ಜೋಡುನಾಳಿ ಕೋವಿ ಹೊತ್ತಿಕೊಂಡು ಯಾವಾಗಲೂ ಅವನ ಹಿಂದೆಮುಂದೆ ಓಡಾಡುತ್ತಿದ್ದ ಅವನ ನಾಯಿಯ ಜೊತೆ ಕಾಡಿನ ಕಡೆ ಹೊರಟಾಗ ಜಿಂಕೆಯೊಂದು ಕಂಡು ಬಂತು. ಅವರನ್ನು ಕಂಡಿದ್ದೇ ಜಿಂಕೆ ಓಟ ಕಿತ್ತಿತು. ಇಫ್ತಿ ಮಾಮ ತತ್ಕ್ಷಣವೇ ಕೋವಿ ಹಾರಿಸಿ ನಾಯಿಯನ್ನೂ ಛ್ಹೂ ಬಿಟ್ಟು ತಾನೂ ಅದೇ ವೇಗದಲ್ಲಿ ಅಟ್ಟಿದ. ಇಫ್ತಿಮಾಮ ನಮಗೆ ನೂರಾರು ಬಾರಿ ವರ್ಣಿಸಿದಂತೆ, ಕಭೀ ಗೋಲೀ ಆಗೇ, ಕಭೀ ಕುತ್ತಾ ಆಗೇ, ಕಭೀಗೋಲಿಆಗೇ ಕಭೀಕುತ್ತಾಆಗೇ, ಈ ಬೆಳೆಯುತ್ತಿದ್ದ ರೊಮಾಂಚಕಬೇಟೆ ಮುಗಿಯುತ್ತಿರಲೇ ಇಲ್ಲ. ಅದು ಹೇಗೆ ಮುಕ್ತಾಯವಾಯಿತು ಅಂತ ಕೇಳುವುದರಲ್ಲೂ ನಮಗೆ ಆಸಕ್ತಿ ಇರಲಿಲ್ಲ. ಬೇಟೆಯ ವರ್ಣನೆಯೇ ಕತೆ, ಅದರ ಆದಿ, ಅದರ ಅಂತ್ಯ ಸಹ.

  ಇಫ್ತಿಮಾಮ ಹೇಳುತ್ತಿದ್ದ ಇನ್ನೊಂದು ಕತೆಯಲ್ಲಿ ಹುಲಿ ಬೇಟೆಗೆ ಬಲಿಯಾಗುತ್ತೆ. ಇಫ್ತಿಮಾಮ ಹುಲಿಬೇಟೆಗೆ ಸಜ್ಜು ಮಾಡಿಕೊಂಡ. ಹುಲಿ ಓಡಾಡುತ್ತಿದ್ದ ಕಾಲುದಾರಿಯಲ್ಲಿನ ಮರವೊಂದರಮೇಲೆ ಅಟ್ಟಣಿ ಜೋಡಿಸಿದ್ದಾಯಿತು. ಬೇಟೆಗೆ ಮತ್ತು ಕಾಯಲಿಕ್ಕೆ ಬೇಕಾದ ಸಾಮಾನುಸರಂಜಾಮುಗಳನ್ನು ಅಟ್ಟಣೆಯ ಮೇಲೆ ಜಮಾಯಿಸಿದ್ದಾಯಿತು. ಅಟ್ಟಣೆಯ ಕೆಳಗೆ ದನದ ಕರುವೊಂದನ್ನು ವಧಸ್ತಂಭವೆನ್ನಬಹುದಾದ ಕಂಬವೊಂದಕ್ಕೆ ಕಟ್ಟಿದ್ದೂ ಆಯಿತು. ಸಂಜೆಯಾಗುತ್ತಲೂ ಇಫ್ತಿಮಾಮ ಮರ ಹತ್ತಿ ಕಾದು ಕುಳಿತ. ಕಪ್ಪುಕತ್ತಲೆಯ ರಾತ್ರಿ. ನಕ್ಷತ್ರಗಳ ಮಿಣಕುಬೆಳಕು ಮಾತ್ರ.

  ಬಂದನಾ ಹುಲಿರಾಯ ಬಂದ. ಕೆಂಡದಂತೆ ಹೊಳೆಯುತ್ತಿದ್ದ ಕಣ್ಣುಗಳು. ಹುಲಿ ಸರಿಯಾಗೆ ಕೋವಿಯ ಗುರಿಯಲ್ಲಿದೆ ಅಂತ ಮನಸ್ಸಿಗೆ ಸಿದ್ಧವಾದಾಗ ಇಫ್ತಿಮಾಮ ಕೋವಿ ಹಾರಿಸಿದ. ಎರಡೂ ಕೊಳವಿಗಳು bang bang. ಬೆಳಗಾಗುವರೆಗೂ ಕಾದು ಕೆಳಗೆ ಇಳಿದಾಗ ಹುಲಿಯ ಪತ್ತೆಯೇ ಇಲ್ಲ, ಅದರ ಹೆಣವೂ ಇಲ್ಲ. ಅದು ಗಾಯಗೊಂಡಿದೆ ಅನ್ನುವುದಕ್ಕೆ ಏನೇನೂ ಪ್ರಮಾಣವೂ ಇಲ್ಲ.

  Kya hua? ಮತ್ತೆ ಬಲಿಪಶು ಕಟ್ಟಿದ್ದಾಯಿತು. ಮತ್ತೆ ಅಟ್ಟ ಹತ್ತಿ ಕಾದುಕುಳಿತ. ಮತ್ತ್ತೆ ಹೊಳೆಯುತ್ತಿದ್ದ ಎರಡು ಕಣ್ಣುಗಳು ಕಂಡುಬಂದವು. ಮತ್ತೆ ಹುಷಾರಾಗಿ ಗುರಿ ಇಟ್ಟು bang bang ಕೋವಿ ಹಾರಿಸಿದ. ಬೆಳಗಾದಾಗ ಮತ್ತೆ ಅದೇ ಕತೆ. ಕರು ಭಯದಲ್ಲಿ ನಡುಗುತ್ತಿದೆ. ಹುಲಿರಾಯನ ಪತ್ತೆಯೇ ಇಲ್ಲ. samajhnapaya. Kya horahai? So, ಮೂರನೆಯ ರಾತ್ರಿ ಕೆಲವು ಗಜ ದೂರದಲ್ಲಿನ ಬೇರೊಂದು ಮರದಮೇಲೆ ಅಟ್ಟಣೆ ಕಟ್ಟಿಸಿ ಅದರ ಮೇಲಿನಿಂದ ಕಾಳರಾತ್ರಿಯಲ್ಲೂ ಕೆಲಸಕ್ಕೆ ಬರುವ ದುರ್ಬೀನಿನಲ್ಲಿ ಹುಲಿ ಬರುತ್ತಿದ್ದ ರಸ್ತೆಯನ್ನು ಕಣ್ಣಿಟ್ಟು ಗಮನಿಸಿದ. ಕ್ಯಾ ದೇಖಾ? ಸುನೊ ಬಚ್ಚೊ, ಹಮ್ ದೇಖಾ ಎಕ್ ನೈ ದೋ ಬಾಘೇ. ಎಕ್ ಸಾಲ ಬಾಯೇ ಆಂಖ್ ಬಂದ್ ಕಿಯೇ ಹೈ, ಔರ್ ದೂಸರ ಬಾಘ್ ಡಾಯೇ ಆಂಖ್ ಬಂದ್ ಕಿಯೇ ಹೈ. ಔರ್ ಹಮಾರಾ ಗೋಲೀ ದೊನೋ ಬಾಘೋನ್ಕೇ ಬೀಚ್ಮೆ ದೊನೋ ಬಾರ್ ಚಲೀಗಯೀಥಿ! ಮುಝೇ ಬಹೂತ್ ಘುಸ್ಸ ಆಯೀ. ಇತ್ನೀ ಹರಾಮೀ? ಮುಂದಿನ, ನಾಲ್ಕನೇ ರಾತ್ರಿ ಒಂದು ಬಂಡೆ ಹುಲಿ ಬರೋ ದಾರಿಯಲ್ಲಿ ಇಡಿಸಿದ. ಮತ್ತೆ ಮರದಮೇಲೆ ಕಾದು ಕುಳಿತ. ಮತ್ತೆ ಆ ಎರಡು ಫಳ ಫಳ ಅಂತ ಹೊಳೆಯುವ ಕಣ್ಣುಗಳು ಕಂಡಾಗ ಆ ಬಂಡೆಯ ಮಧ್ಯಕ್ಕೆ ಗುರಿಇಟ್ಟು ಕೋವಿ bang bang ಹಾರಿಸಿದ. ಗೋಲಿ ಠೀಕಾಗಿ ಎರಡು ತುಕಡ ಭಾಗವಾಗಿ ಎರಡೂ ಕಡೆ ಹಾರಿ ಎರಡೂ ಹುಲಿಗಳು ಗೋಲಿ ಏಟುತಿಂದು ಅರಚುತ್ತಾ ಪ್ರಾಣ ಬಿಟ್ಟವು!

  ಈ ಕತೆಗಳನ್ನು ಎಷ್ಟು ಬಾರಿ ಕೇಳಿದ್ದೇನೋ ಹೇಳಲಾರೆ. ಆದರೆ ಎಷ್ಟು ಬಾರಿ ಕೇಳಿದರೂ ಬೇಸರವಾಗುತ್ತಿರಲಿಲ್ಲ. ಆದರೆ ಒಂದು ತಮಾಶೆ ವಿಷಯ ಅಂದರೆ ಇಫ್ತಿಮಾಮನ್ನ ಬಿಡಿ, ನಾವು, ಸಣ್ಣ ಹುಡುಗರಿಗೂ ಇದೆಲ್ಲಾ ಬರೇ ಸುಳ್ಳು ಕತೆಗಳು ಅಂತ ಚೆನ್ನಾಗಿ ಗೊತ್ತಿತ್ತು. ಆದರೂ ಈ ಸುಳ್ಳುಗಳನ್ನು ಮತ್ತೆಮತ್ತೆ ಇಫ್ತಿಮಾಮನ ಬಾಯಿಂದಲೇ ಕೇಳುವ ಉತ್ಸಾಹ ಎಂದೂ ತೀರಲಿಲ್ಲ.

  ಕೊನೆಯಲ್ಲಿ ಈ ಮೇಲಿನ ಮಾತುಗಳಿಗೆ ಸಂಬಂದಿಸಿರುವಂತೆ ಇನ್ನೊಂದು ಮಾತು. ಪುಣ್ಯಕೋಟಿಯ ಕತೆಯಲ್ಲಿನ ಹುಲಿರಾಯ ಹಸುವನ್ನು ಕೊಟ್ಟಿಗೆಗೆ ವಾಪಸಾಗಲು ಬಿಡುವುದು, ಮತ್ತು ಕೊನೆಯಲ್ಲಿ ತನ್ನ ಕ್ರೌರ್ಯ ತಾಳದೆ ಆತ್ಮಹತ್ಯೆ ಮಾಡಿಕೊಳ್ಲುವುದು, ಇವುಗಳ ಬಗ್ಗೆ ನಿಮ್ಮ ಮಗಳು ಮತ್ತು ಸೋದರಸೊಸೆಯರ ಅಪನಂಬಿಕೆಯಿಂದ ತುಂಬಿರುವ ಟೀಕೆ ನನಗೆ ತುಂಬಾ ಸಂತಸ ಕೊಟ್ಟಿದೆ. ಇಫ್ತಿಮಾಮ ಸುಳ್ಳುಗಳನ್ನು ಹೇಳಿದಾಗ ಅವು ಸುಳ್ಳುಗಳು ಅನ್ನುವುದರಲ್ಲಿ ಸಂದೇಹವೇ ಇರಲಿಲ್ಲ. ಆದರೆ ನಂಬಿಕೆ, ಧಾರ್ಮಿಕ ವಿಶ್ವಾಸ ಇವುಗಳ ತಳಪಾಯದ ಮೇಲೆ ಭದ್ರವಾಗಿ ನಿಂತಿರುವ ನಿಜವಾದ ಮಾತುಗಳಿವು ಅನ್ನುವ ಬೂಟಾಟಿಕೆಯ ಸುಳ್ಳುಗಳು ಕಂಡದ್ದು ಕಂಡಹಾಗಿರುವ ಸುಳ್ಳುಗಳಿಗಿಂತ ಅಪಾಯಕಾರಿ. ದೊಡ್ಡದೊಡ್ಡಮನುಷ್ಯರು ಮಂತ್ರಪುರಾಣಗಳೆಂದು ಹೇಳುವ ಸುಳ್ಳುಮಾತುಗಳ ಬಗ್ಗೆ ಮುಂದೆಯೂ ಇದೇ ಅಪನಂಬಿಕೆಯ ಪ್ರವೃತ್ತಿಯನ್ನು ನಿಮ್ಮ ಮಗಳು ಮತ್ತು ಸೋದರಸೊಸೆ ಬೆಳೆಸಿಕೊಳ್ಳಲಿ ಅಂತ ಹಾರೈಸಿ ಈ ನನ್ನ ಅತಿ ಉದ್ದ ಆಗಿಬಿಟ್ಟಿರುವ ಕಾಮೆಂಟ್ ಮುಗಿಸುತ್ತೇನೆ. ಇತಿ, ಪ್ರಭಾಕರ

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: