ಕಣ್ಣು ಪಿಳಿಪಿಳಿ, ಬಾಯಿ ಪಚಪಚ… ಭಾಗ ೨

ಕಾಟ್-ಕ-ನಾಲಾದಲ್ಲೊಂದು ಗುಡಿಸಲು

ನೈನಿತಾಲ್ ಮತ್ತು ಕಾಲಧುಂಗಿಯ ಆಚೆಯ ಜನರಿಗೆ ಜಿಮ್ ಕಾರ್ಬೆಟ್ ಬಗ್ಗೆ ಹೆಚ್ಚು ಗೊತ್ತಿಲ್ಲ. ಕಾರ್ಬೆಟ್ ಹೆಸರು ಹೇಳಿದ ಕೂಡಲೆ ಇಲ್ಲಿನ ಜನ ಅವನ ಹೆಸರಿಟ್ಟಿರುವ ರಾಷ್ಟ್ರೀಯ ಅರಣ್ಯಧಾಮದ ಬಗ್ಗೆಯೇ ಮಾತಾಡುತ್ತಿದ್ದೇವೆ ಅಂತ ಅಂದುಕೊಂಡುಬಿಡುತ್ತಾರೆ. ಆದರೆ ನರಭಕ್ಷಕ ಹುಲಿ ಅಂದರೆ ಮಾತ್ರ ಬಹಳ ಉತ್ಸುಕರಾಗಿ ಅವು ಮನುಷ್ಯರನ್ನು ಹೇಗೆ ಕೊಂದು ತಿಂದು ತೇಗಿದವು ಅಂತ ವಿವರವಾಗಿ ಕತೆ ಹೇಳಲಿಕ್ಕೆ ಶುರು ಮಾಡುತ್ತಾರೆ.

ಈ “ಒಂದಾನೊಂದು ಕಾಲದ” ಕತೆಗಳಲ್ಲಿ “ಬಿಳಿ ಸಾಧು”, “ಬಿಳಿ ಘಡವಾಲೀ”,  “ಚಡ್ಡಿ ತೊಟ್ಟ ಸಾಹೇಬ್” ಇತ್ಯಾದಿ ನಾಮಾವಳಿಗಳಿಂದ ಕರೆಯಲ್ಪಡುವ, ಅವರ ಭಾಷೆಯೂ ಬಲ್ಲ ವ್ಯಕ್ತಿಯೊಬ್ಬ ಹೇಗೆ ಕಾಡುಮೇಡಲೆಯುತ್ತಾ ನರಭಕ್ಷಕ ಹುಲಿಗಳನ್ನು ಕೊಲ್ಲುತ್ತಿದ್ದ ಅನ್ನುವ ಪ್ರಸ್ತಾಪಗಳು ಬಹಳಷ್ಟು ಬರುತ್ತವೆ.

ಆದ್ದರಿಂದಲೇ ನಾವು  ಮೋಹನ್ ನರಭಕ್ಷಕ ಹುಲಿಯನ್ನು ಕಾರ್ಬೆಟ್ ಕೊಂದ ಜಾಗ ಹುಡುಕಿ ಹೊರಟಾಗ ನಮಗೆ ದಾರಿ ತೋರಿಸಿದ್ದು ಕಾರ್ಬೆಟ್ಟೆ ತನ್ನ ಪುಸ್ತಕಗಳಲ್ಲಿ ಬರೆದ ಕತೆಗಳ ಜೊತೆಜೊತೆಗೆ ಈ ಸ್ಥಳೀಯ ಜನರು ಪುರಾಣದೋಪಾದಿಯಲ್ಲಿ  ಹೇಳುವ ಈ ಎಲ್ಲ ಕತೆಗಳೂ ಕೂಡ.

ಕಾರ್ಬೆಟ್ ರಾಮನಗರದ ರೈಲು ನಿಲ್ದಾಣದಲ್ಲಿ ಬಂದು ಇಳಿದದ್ದು ಮೇ ತಿಂಗಳ ಒಂದು ಸುಡು ಮಧ್ಯಾಹ್ನ. ಅಲ್ಲಿಂದ ಮೋಹನ್ ೨೨ ಕಿಲೋಮೀಟರ್ರುಗಳ ದಾರಿ. ಅದು ೨೦ ಕುಟುಂಬಗಳಿರುವ ಒಂದು ಸಣ್ಣ ಹಳ್ಳಿ. ಕಾರ್ಬೆಟ್ ಜೊತೆ ಇದ್ದದ್ದು ಇಬ್ಬರು ಕೆಲಸಗಾರರು ಮತ್ತು ಅವರು  ಕ್ಯಾಂಪ್ ಮಾಡಲು ಬೇಕಾದ ಸಾಮಾನುಗಳು ಮತ್ತು ರೇಷನ್ ಸಾಮಾನುಗಳನ್ನು ಹೊತ್ತ ಆರು ಗಟ್ಟಿಮುಟ್ಟಾದ ಘಡವಾಲಿಗಳು.

ರಾಮನಗರ ಇವತ್ತು ಹತ್ತಾರು ಟೂರಿಸ್ಟ್ ಜಿಪ್ಸಿಗಳು ಓಡಾಡುವ ಸುಮಾರು ದೊಡ್ಡದಾಗ ಪಟ್ಟಣ. ಟ್ರಾಫಿಕ್ ಜಾಮುಗಳಿಗೂ ಬರ ಇಲ್ಲ.  ಈಗ ವಾಹನಗಳು ಓಡಾಡಲು ಯೋಗ್ಯವಾದ ರೋಡು ಧಿಕುಲಿಯವರೆಗೆ ಘಟ್ಟ ಹತ್ತುತ್ತಾ ಹೋಗಿ ಅಲ್ಲಿಂದ ಮುಂದೆ ಗಾರ್ಜಿಯಾಗೆ ಇಳಿಜಾರಿನಲ್ಲಿ ಸಾಗಿ ಹೋಗುತ್ತದೆ. ಕೋಸಿ ನದಿಯ ದಡದಲ್ಲಿರುವ ಗಾರ್ಜಿಯಾದಲಿ ಒಂದು ಪ್ರಸಿದ್ಧವಾದ ದೇವಿಯ ದೇವಸ್ಥಾನವಿದೆ. ಅಲ್ಲಿಂದ ಮೋಹನ್ ವರೆಗೂ ಈಗ ರಸ್ತೆ ಇದೆ. ನೈನಿತಾಲ್ ಜಿಲ್ಲೆ ಮತ್ತು ಅಲ್ಮೋರ ಜಿಲ್ಲೆಗಳ ಗಡಿಯಾ ಚೆಕ್ ಪೋಸ್ಟ್ ವರೆಗೂ ರೋಡ್ ಸಾಗುತ್ತದೆ.

ಮೋಹನ್ ನಲ್ಲಿ ಇದ್ದ ನರಭಕ್ಷಕ ಹುಲಿ ಕುಮಾವ್ ನ ಬ್ರಿಟಿಶ್ ಸರ್ಕಾರದ ಕಚೇರಿಯ ಮಂದಿಗೆ ಎರಡನೆಯ ದೊಡ್ಡ ತಲೆನೋವಾಗಿತ್ತು. ಮೊದಲನೆಯದು ಚೌಘರ್ ನಲ್ಲಿ ಇದ್ದ ಜೋಡಿ ನರಭಕ್ಷಕ ಹುಲಿಗಳು.  ಕಾಂಡಾದ ನರಭಕ್ಷಕ ಇವರನ್ನು ಥರಗುಟ್ಟಿಸಿದ  ಇನ್ನೊಂದು  ಹುಲಿ.

ಕಾರ್ಬೆಟ್ ಕಾಲದಲ್ಲಿ ರಾಮನಗರದಿಂದ ಗರ್ಜಿಯಾಕ್ಕೆ ಏರಿನ ಪಯಣ ಕೇವಲ ೧೪ ಕಿಲೋಮಿಟರ್ ಮಾತ್ರವೇ ಆದರೂ ಸುಲಭದ್ದಾಗಿರಲಿಲ್ಲ. ಅಲ್ಲಿಯವರೆಗೆ ಉಸ್ಸಪ್ಪೋ ಅಂತ ಹತ್ತಿಕೊಂಡು ಹೋದರೆ ಅಲ್ಲಿಂದ ಕಡಿದಾದ ಇಳಿಜಾರು. ಕಾರ್ಬೆಟ್ ಕೋಸಿ ನದಿಯ ಪಕ್ಕದಲ್ಲಿಯೇ ನಡೆಯುತ್ತಾ ಗಾರ್ಜಿಯಾ ತಲುಪಿರಬೇಕು. ಇದರ ಬಗ್ಗೆ ಬರೆಯುತ್ತಾ ಕಾರ್ಬೆಟ್ ತಾನು ಸೂರ್ಯಾಸ್ತಕ್ಕೆ ಮುಂಚೆ ಗಾರ್ಜಿಯ ತಲುಪಿದ್ದಾಗಿ ಹೇಳುತ್ತಾನೆ. ಈಗ ರೋಡು ಇರುವ ದಾರಿಯಲ್ಲಿ ಅವನೇನಾದರು ಟ್ರೆಕ್ ಮಾಡಿಕೊಂಡು ಹೋಗಿದ್ದಾರೆ ಅಷ್ಟು ಬೇಗ ತಲುಪುವುದು ಸಾಧ್ಯವೇ ಇಲ್ಲ. ಇವತ್ತು ಹುಲಿಗಳನ್ನು ಅರಸುತ್ತಾ ಬರುವ ಸಾವಿರಾರು ಟೂರಿಸ್ಟುಗಳಿಗಾಗಿ ಇರುವ ಡಜನ್ನುಗಟ್ಟಲೆ ರೆಸಾರ್ಟುಗಳ ಹಿತ್ತಲಿನಲ್ಲಿಯೇ ಕೋಸಿ ನದಿ ಹರಿಯುತ್ತದೆ.

ತನ್ನ ಮೋಹನ್ ಸಾಹಸದ ಬಗ್ಗೆ ಬರೆಯುತ್ತಾ ಕಾರ್ಬೆಟ್ ಗಾರ್ಜಿಯಾ ಕೋಸಿ ದಂಡೆಯಲ್ಲಿ ಟೆಂಟ್ ಹಾಕಿ ಇದ್ದಾಗ ಆದ ಘಟನೆಯ ಬಗ್ಗೆ ಹೇಳುತ್ತಾನೆ. ನಡುರಾತ್ರಿಯಲ್ಲಿ ಅವನಿಗೆ ಒಂದು ವಿಚಿತ್ರವಾದ ಸದ್ದು ಕೇಳಿ ಎಚ್ಚರವಾಗುತ್ತದೆ. ಎರಡು ಕಲ್ಲುಗಳನ್ನು ಬಲವಾಗಿ ಉಜ್ಜಿದರೆ ಯಾವ ಥರದ ಸದ್ದು ಆಗಬಹುದೋ ಥೇಟ್ ಅಂಥಾದ್ದೆ ಸದ್ದು ಅನ್ನುತ್ತಾನೆ. ಸದ್ದಿನ ಜಾಡು ಹಿಡಿದು ಹುಡುಕಿದಾಗ ಅವನಿಗೆ ಅದು ಮೇ ತಿಂಗಳಲ್ಲಿ ಕಪ್ಪೆಗಳು ವಿಚಿತ್ರವಾಗಿ ವಟಗುಟ್ಟುವ  ಸದ್ದು ಅಂತ ಗೊತ್ತಾಗುತ್ತದೆ. ನವೆಂಬರ್ ತಿಂಗಳಲ್ಲಿ ಅಲ್ಲಿ ಹೋಗಿದ್ದ ನನಗೆ ಈ ಥರದ ಯಾವ ಸದ್ದೂ ಕೇಳಲಿಲ್ಲ. ಮೇ ತಿಂಗಳಲ್ಲಿಯೇ ಹೋಗಿದ್ದರೂ ಎಷ್ಟರಮಟ್ಟಿಗೆ ಕೇಳುತ್ತಿತ್ತೋ ಅನುಮಾನ.

ರಾಮನಗರ ಬದಲಾದಷ್ಟು ಮೋಹನ್ ಬದಲಾಗಿಲ್ಲ. ಸುಮಾರಷ್ಟು ಮಟ್ಟಿಗೆ ಕಾರ್ಬೆಟ್ ಅಂದು ವಿವರಿಸಿದಂತೆಯೇ ಇಂದೂ ಮೋಹನ್ ಇದೆ. ಬಜಾರಿನಲ್ಲಿ ಮೂರು ನಾಲ್ಕು ಚಾಯ್ ಬಿಸ್ಕತ್ತು ಮಾರುವ ಅಂಗಡಿಗಳನ್ನು ಬಿಟ್ಟರೆ ಇನ್ನೇನೂ ಇಲ್ಲ. ರಾಣಿಖೇತ್ ವರೆಗೆ ಜನರನ್ನು ಒಯ್ಯುವ ಒಂದೆರಡು ಬಸ್ಸುಗಳು ಆಗೀಗ ಓಡಾಡುವುದು ಬಿಟ್ಟರೆ ಹೆಚ್ಚು ವಾಹನ ಸಂಚಾರ ಇಲ್ಲ.

ಅಲ್ಲಿ ಆರಾಮವಾಗಿ ಕೂತಿದ್ದ ಒಂದು ಗುಂಪು ಮುದುಕರ ಜೊತೆಗೆ ಮಾತಿಗಿಳಿದೆ. ಕಾರ್ಬೆಟ್ ಬಗ್ಗೆ ನಿಮಗೆ ಗೊತ್ತಾ? ಅಂತ ಕೇಳಿದರೆ ನಾನು ಅರಣ್ಯಧಾಮದ ಬಗ್ಗೆ ಕೇಳುತ್ತಾ ಇದ್ದೇನೆ ಅಂದುಕೊಂಡು “ಪಾರ್ಕಾ?” ಅಂತ ಕೇಳಿದರು. ನರಭಕ್ಷಕ ಹುಲಿಗಳ ವಿಷಯ ಗೊತ್ತಾ ಅನ್ನುವ ಪ್ರಶ್ನೆ ಕೇಳಿದಾಗ ಮಾತ್ರ ಉತ್ತರಗಳು ಧಾರಾಕಾರ ಬಂದವು!

ಐದು ವರ್ಷಗಳ ಹಿಂದೆಯಷ್ಟೇ ಹುಲಿಯೊಂದು ಹೇಗೆ ಕಾಡಿನಿಂದ ನಾವು ನಿಂತಿದ್ದ ಮಾರ್ಕೆಟ್ಟಿಗೆ ನುಗ್ಗಿ ಬಂದು ಜನರ ಮೇಲೆ ಧಾಳಿ ಮಾಡಿತ್ತು ಅಂತ ಸವಿವರವಾಗಿ ಹೇಳಿದರು. ಅಲ್ಲೇ ಒಂದು ಕಬ್ಬಿಣದ ನೇಮ್ ಬೋರ್ಡಿನ ಮೇಲೆ ಮೂಡಿದ್ದ ಮೂರು ಆಳವಾದ ಗುರುತುಗಳನ್ನು ತೋರಿಸಿ ಅದು ಹುಲಿಯೇ ಮಾಡಿದ್ದು ಅಂತ ಹೇಳಿದರು. “ಹುಲಿ ಪಂಜಾದಿಂದ ಹೊಡೆದಿದ್ದು” ಅಂತ ನರೇಂದ್ರ ಸಿಂಗ್ ರಾವತ್ ಎಂಬ ಚಾಯ್ ಅಂಗಡಿ ನಡೆಸುವವನೊಬ್ಬ ಹೇಳಿದ. ಇವನ ಅಪ್ಪನಿಗೆ ಗಾಯವೂ ಆಗಿತ್ತಂತೆ. ಆ ಹುಲಿ ನರಭಕ್ಷಕ ಆಗಿರುವುದಕ್ಕೆ ಸಾಧ್ಯವಿಲ್ಲ ಅನ್ನುವುದು ಸ್ಪಷ್ಟವಾಗಿತ್ತು. ಕಾಡಿನಿಂದ ದಾರಿ ತಪ್ಪಿ ಬಂದು ಹಳ್ಳಿಗೆ ನುಸುಳಿಬಿಟ್ಟ ಹುಲಿಯಾಗಿರಬೇಕು.

ಜನರನ್ನು ಹೊತ್ತುಕೊಂಡು ಹೋಗಿ ತಿಂದುಬಿಡುವಂಥ ಹುಲಿಯನ್ನು ಇಲ್ಲಿಯ ಜನ ನೋಡಿ ಎಷ್ಟು ಕಾಲ ಆಗಿತ್ತು?

ಈ ಪ್ರಶ್ನೆ ಕೇಳಿದ ನಂತರ ಸ್ವಲ್ಪ ಕಾಲ ಗುಂಪಿನಲ್ಲಿ ಮೌನ ಆವರಿಸಿತು. ನಂತರ ಮಂಗಲ್ ಸಿಂಗ್ ಅನ್ನುವ ವ್ಯಕ್ತಿ ಹಳೆಯ ಕಾಲದ ಮಸುಕಾಗಿದ್ದ ನೆನಪುಗಳನ್ನು ಕೆದಕುತ್ತಾ ಮಾತಿಗಿಳಿದ. “ನನ್ನ ಚಿಕ್ಕಪ್ಪ ಹಿಂದೆ ಇಲ್ಲಿಯೇ ಇದ್ದುಕೊಂಡು ನಮ್ಮಷ್ಟೇ ಚೆನ್ನಾಗಿ ನಮ್ಮ ಭಾಷೆ ಮಾತಾಡುತ್ತಿದ್ದ ಗೋರಾ ಒಬ್ಬನ ಬಗ್ಗೆ ಹೇಳುತ್ತಾ ಇದ್ದ. ಆ ಘಡವಾಲಿ ಯಾವಾಗಲೂ ಚೆಡ್ಡಿ ಹಾಕಿಕೊಂಡು ಓಡಾಡುತ್ತಾ ಇದ್ದನಂತೆ. ಬಹಳ ದಿಲ್ದಾರ್ ಮನುಷ್ಯ, ಒಳ್ಳೆ ನಿಶಾನೆಬಾಜ್ ಅಂತೆ. ಅವನು ಅಗೋ ಆ ಬೆಟ್ಟದ ಮೇಲೆ ಒಂದು ನರಭಕ್ಷಕ ಹುಲಿ ಹೊಡೆದಿದ್ದ ಅಂತ ಚಿಕ್ಕಪ್ಪ ಹೇಳ್ತಿದ್ದ” ಅಂದ.

ಕಾರ್ಬೆಟ್ ಹುಲಿಯನ್ನು ಆಕರ್ಷಿಸುವುದಕ್ಕೆ ಹೊಲದಲ್ಲಿ ಕೆಲಸ ಮಾಡುವ ಹೆಂಗಸರ ಹಾಗೆ ಸೀರೆ ತೊಟ್ಟು ಹಾಡುತ್ತಾ ಇದ್ದದ್ದೂ ಉಂಟು ಅಂತ ಒಂದು ಪ್ರಚಲಿತ ಕತೆ ಬಹಳ ಹಿಂದಿನಿಂದಲೂ ಇದೆ. ಇದೇ ಕತೆಯನ್ನು ಮಂಗಲ್ ಸಿಂಗ್ ಕೂಡಾ ಮಸಾಲೆಭರಿತವಾಗಿ ಪುನರಾವರ್ತನೆ ಮಾಡಿದ. (ಹುಲಿಗಳಿಗೂ ಸೀರೆಯ ಬಗ್ಗೆ ಆಕರ್ಷಣೆ ಇದೆ ಅಂತ ಜನರಿಗೆ ನಂಬಿಕೆ ಅನ್ನುವುದು ಗಮನಿಸಬೇಕಾದ ಮಾತು!)

ಚಂಪಾವಟ್ ನರಭಕ್ಷಕ ಹುಲಿಯ ಬಗ್ಗೆ ತಾನು ಬರೆದ ಲೇಖನದಲ್ಲಿ ಈ ಗಾಳಿಮಾತಿನ ಬಗ್ಗೆಯೂ ಕಾರ್ಬೆಟ್ ಬರೆಯುತ್ತಾನೆ. ತಾನು ಸೀರೆ ಉಟ್ಟು ಕಾಡಿಗೆ ಹೋಗಿ ಬರೀ ಕತ್ತಿಯಲ್ಲಿ ವೀರ ರಮಣಿಯಂತೆ ಹುಲಿ ಕೊಂದ ಕಥೆಯೆಲ್ಲಾ ಸುಳ್ಳೆಂದೂ, ಒಂದೆರಡು ಬಾರಿ ಸೀರೆ ಹೊದ್ದುಕೊಂಡು ಹುಲ್ಲು ಕೊಯ್ಯುತ್ತಲೋ, ಮರ ಏರಿಯೋ ಹುಲಿಯನ್ನು ಸೆಳೆಯುವ ಪ್ರಯತ್ನ ಮಾಡಿದಾಗಳು ಅದು ಸಫಲವಾಗಿಲ್ಲವೆಂದೂ ಹೇಳುತ್ತಾನೆ. “ಒಂದೆರಡು ಬಾರಿ ನಾನು ಹತ್ತಿದ್ದ ಮರದ ಬಳಿ ಹುಲಿ ಸುಳಿದದ್ದುಂಟು ಅಷ್ಟೇ,” ಅಂತ ಬರೆಯುತ್ತಾನೆ.

ಆ ಗುಂಪಿನ ಮುದುಕರು ಅಲ್ಲಿಂದ ಸುಮಾರು ೧೭ ಕಿಲೋಮೀಟರ್ ದೂರದ ಬೆಟ್ಟದತ್ತ ಬೆರಳು ಮಾಡಿ ತೋರಿಸಿ ಈ ಬಿಳಿ ಆಸಾಮಿ ನರಭಕ್ಷಕ ಹುಲಿ ಕೊಂದದ್ದು ಅಲ್ಲಿಯೇ ಎಂದರು. ಕಾರ್ಬೆಟ್ ಬರೆದ ಲೇಖನದಲ್ಲಿಯೂ ತನಗೆ ಕಾಡಿನ ಗಾರ್ಡ್ ಒಬ್ಬ ಬೆಟ್ಟ ತೋರಿಸಿ ಅಲ್ಲೊಂದು ಪುಟ್ಟ ಫಾರೆಸ್ಟರ್ ಗುಡಿಸಲಿದೆ, ಅಲ್ಲಿ ಇದ್ದು ಹುಲಿ ಬೇಟೆ ಆಡಬಹುದು ಅಂತ ಹೇಳಿದ್ದಾಗಿ ಬರೆಯುತ್ತಾನೆ. ಆ ಗುಡಿಸಲು ಇನ್ನೂ ಇರುವ ಸಾಧ್ಯತೆಗಳಿವೆಯೇ?

ಕಾರ್ಬೆಟ್ ವಿವರಿಸುವ ಕಾಟ್-ಕ-ನಾಲ ಹಳ್ಳಿಯನ್ನು ಇಂದು ಕಾಟ್ಕನೌ ಅಂತ ಚುಟುಕು ಮಾಡಿ ಕರೆಯುತ್ತಾರೆ. ಬೆಟ್ಟದ ಆಚೆಯ ಜನರಿಗೆ ಕಾರ್ಬೆಟ್ ನ ನೆನಪು ಇಲ್ಲ. ಅಲ್ಲಿಯ ಬಾಲಗಂಜೀ ಮಾಸ್ತರ್ ಸಾಬ್ ಅನ್ನುವವರಿಗೆ ಮಾತ್ರ ಒಂದಷ್ಟು ಕತೆಗಳು ಗೊತ್ತು ಅಂತ ಮೋಹನ್ ನ ಜನ ನನಗೆ ಹೇಳಿದರು.  ಆದರೆ ಈ ಮಾಸ್ತರ್ ಸಾಹೇಬರು ಹಳ್ಳಿಯಲ್ಲಿ ಇರಲಿಲ್ಲ. ಅವರ ಕುಟುಂಬದ ಯಾರೋ ತೀರಿಕೊಂಡಿದ್ದರಿಂದ ದೂರದ ಪಟ್ಟಣಕ್ಕೆ ಹೋಗಿದ್ದರಂತೆ. ಅದರರ್ಥ ನಮಗೆ ದಾರಿ ತೋರಿಸುವ ಮಂದಿ ಯಾರೂ ಇಲ್ಲ ಅಂತ.  ಕಾಟ್ಕನೌ ಕಡೆಯಿಂದ ಬೆಟ್ಟ ಹತ್ತಿ ಆ ಗುಡಿಸಲು ಹುಡುಕುತ್ತಾ ಹೊರಟೆವು. ಆ ಬಾವಲಿಗಳು ಮನೆ ಮಾಡಿಕೊಂಡಿದ್ದ ಜಾಗದಲ್ಲಿ ರಾತ್ರಿ ಕಳೆದ ನಂತರ ತನಗೆ ಲ್ಯಾರಿನ್ ಜೈಟಿಸ್ (ಗಂಟಲು ಊತ ಮತ್ತು ನೋವು ಇತ್ಯಾದಿ ಉಂಟು ಮಾಡುವ ಒಂದು ಸೋಂಕು) ಬಂದದ್ದಾಗಿ ಬರೆಯುತ್ತಾನೆ ಕಾರ್ಬೆಟ್.

ಏದುಸಿರು ಬಿಡುತ್ತಾ ಬೆಟ್ಟ ಹತ್ತಿ ಮೇಲೆ ತಲುಪಿದ ನನಗೆ ಮುರುಕಲು ಗುಡಿಸಲು ಕಣ್ಣಿಗೆ ಬಿದ್ದಾಗ ಒಂದು ರೀತಿಯ ರೋಮಾಂಚನ ಆಯಿತು. ಕಾರ್ಬೆಟ್ ವಿವರಿಸುವ ಬಾಗಿಲ ಸರಪಳಿಗಳೂ ಕೂಡ ಇನ್ನೂ ಹಾಗೆಯೇ ಇವೆ! ಗುಡಿಸಲು ಇನ್ನೇನು ಬಿದ್ದು ಹೋಗುವ ಸ್ಥಿತಿಯಲ್ಲಿದೆ. ಗೋಡೆಯ ತುಂಬಾ ಥರಾವರಿ ಆಶುಕವಿಗಳ ಬರಹಗಳು, ನೆಲದ ತುಂಬಾ ಕಾಲು ಇಡಲಾಗದಷ್ಟು ಕಸ. ಆ ಗುಡಿಸಲಿನ ಮಧ್ಯ ಭಾಗದಲ್ಲಿ ಒಂದು ಗೋಡೆಯಿದ್ದು ಅದು ಗುಡಿಸಲನ್ನು ಎರಡು ಭಾಗವನ್ನಾಗಿ ವಿಭಾಗಿಸುತ್ತದೆ ಎಂದು ಕಾರ್ಬೆಟ್ ಬರೆಯುತ್ತಾನೆ. ಆ ಗೋಡೆ ಈಗ ಇಲ್ಲ. ಗುಡಿಸಲಿನ ಪಕ್ಕದಲ್ಲಿ ಒಂದು ಕಾಡಿನ ವಾಚ್ ಟವರ್ ಇದೆ.

ಕಾರ್ಬೆಟ್ ಹೇಳುವಂತೆ ಅಲ್ಲಿಂದ ಸ್ಪಷ್ಟವಾಗಿ ಮೋಹನ್ ನ ಬಜಾರ್ ಕಾಣುತ್ತದೆ. ಅಲ್ಲಿಂದ ಕೆಳಗಿಳಿದರೆ ಕಣಿವೆ. ಅಲ್ಲಿಯೇ ಕಾರ್ಬೆಟ್ ಮೋಹನ್ ನರಭಕ್ಷಕನನ್ನು ಸಾಯಿಸಿದ್ದು. ಆ ರೋಚಕ ಕತೆ ನಡೆದ ದಾರಿಯಲ್ಲಿ ಮುಂದೆ ನಡೆಯುವ ಆಸೆ ನಮಗೆ. ಆದರೆ ಆಗಲೇ ಲೇಟಾಗಿತ್ತು. ಕತ್ತಲೆ ಕವಿಯುವುದಕ್ಕೆ ಅರ್ಧ ಗಂಟೆ ಅಷ್ಟೇ ಇತ್ತು. ಕಾಟ್ಕನೌ ಗೆ ವಾಪಾಸು ಹೋಗುವುದೇನೂ ಸುಲಭದ ದಾರಿಯಾಗಿರಲಿಲ್ಲ. ನಾವು ನಿಂತ ಉತ್ತರ ದಿಕ್ಕಿಗೆ ನಂದಾ ದೇವಿ ಪರ್ವತ ಸಂಜೆಯ ಬೆಳಕಿನಲ್ಲಿ ಬಾಯಿ ಕಟ್ಟಿ ಹೋಗುವಷ್ಟು ಭವ್ಯವಾಗಿ ಕಾಣುತ್ತಿತ್ತು. ನಂದಾ ದೇವಿಯನ್ನು ನೋಡುತ್ತಾ ಮೂಕವಿಸ್ಮಿತರಾಗಿ ಒಂದಷ್ಟು ಹೊತ್ತು ನಿಂತು ಮತ್ತೆ ಕಾಟ್ಕನೌ ಕಡೆಗೆ ಹೆಜ್ಜೆ ಹಾಕಿದೆವು. ಕಾರ್ಬೆಟ್ ನಂದಾ ದೇವಿಯ ಬಗ್ಗೆ ತನ್ನ ಕತೆಯಲ್ಲಿ ಏನೂ ಬರೆಯುವುದಿಲ್ಲವಲ್ಲ ಯಾಕೆ ಅನ್ನುವ ಪ್ರಶ್ನೆ ನನ್ನನ್ನು ದಾರಿಯುದ್ದಕ್ಕೂ ಕಾಡುತ್ತಿತ್ತು.

ಜಿಮ್ ನಿರ್ಮಿಸಿದ ಪುಟ್ಟ ಸ್ವರ್ಗ

ಕಾರ್ಬೆಟ್ ನ ಪುಟ್ಟ ಹಳ್ಳಿ ಛೋಟಿ ಹಲ್ದ್ವಾನಿ  ಕಾಲಾಧುಂಗಿಯ ಹತ್ತಿರ ಇದೆ. ಅವನು ಒಂದು ಶತಮಾನದ ಹಿಂದೆ ಹೇಗೆ ವರ್ಣಿಸಿದ್ದನೋ ಅಷ್ಟೇ ಸುಂದರವಾಗಿ ಇಂದೂ ಇದೆ.

ಆತ ತನ್ನ ಜೊತೆ ಇರಲು ೧೯೧೫ರಲ್ಲಿ ಬೆಟ್ಟ ಪ್ರದೇಶದಿಂದ ಕರೆ ತಂದಿದ್ದ ೪೦ ಕುಟುಂಬಗಳು ಈಗ ಬೆಳೆದು ಅವುಗಳ ಸಂಖ್ಯೆ ಹೆಚ್ಚಿದೆ. ಅವರ ಮಕ್ಕಳು, ಮೊಮ್ಮಕ್ಕಳು, ಮರಿಮಕ್ಕಳು ಇನ್ನೂ ಕಾರ್ಬೆಟ್ ಕೊಟ್ಟ ಒಟ್ಟು ೨೨೧ ಎಕರೆ ಪ್ರದೇಶದಲ್ಲಿ ಕಬ್ಬು, ಸೋಯಾ, ಅರಿಶಿನ, ಶುಂಟಿ, ಟೊಮಾಟೊ, ಹಣ್ಣು ಇತ್ಯಾದಿಗಳನ್ನು ಬೆಳೆಯುತ್ತಾರೆ. ಆತ ಭಾರತದಿಂದ ೧೯೪೭ರಲ್ಲಿ ಕೆನ್ಯಾಗೆ ಹೋಗುವ ಮೊದಲು ಈ ಭೂಮಿಯನ್ನು ೪೦ ಭಾಗ ಮಾಡಿ ಎಲ್ಲರಿಗೂ ಹಂಚಿ ಹೋದ.

ಈಗ ಹಳ್ಳಿಯಲ್ಲಿ ಇರುವವರಲ್ಲಿ ಕಾರ್ಬೆಟ್ ಅನ್ನು ಕಂಡವರು ಕಡಿಮೆ.  ಹಣ್ಣು ಹಣ್ಣು ಮುದುಕಿ
ಜೀವಂತಿ ದೇವಿಗೆ ಕ್ರಿಸ್ಮಸ್ ಸಮಯದಲ್ಲಿ ಮಕ್ಕಳೆಲ್ಲಾ ಕಾರ್ಬೆಟ್ ಮನೆಯ ಮುಂದೆ ಸಾಲಾಗಿ ನಿಲ್ಲುತ್ತಿದ್ದದು ಇನ್ನೂ ಚೆನ್ನಾಗಿ ನೆನಪಿದೆ. ಚಳಿಗಾಲದ ತಿಂಗಳುಗಳಲ್ಲಿ ಮಾತ್ರ ಕಾರ್ಬೆಟ್ ಈ ಮನೆಯಲ್ಲಿ ಬಂದು ಇರುತ್ತಿದ್ದ ಅಂತ ಹೇಳಿದಳು ಜೀವಂತಿ. “ಕಾರ್ಬೆಟ್ ಸಾಬ್ ಮತ್ತು ಅವನ ತಂಗಿ ಮ್ಯಾಗಿ ಮೇಮ್ ಸಾಬ್ ನಮಗೆ ಟಾಫಿ, ಕೇಕು ಎಲ್ಲಾ ಕೊಡ್ತಾ ಇದ್ದರು. ನಮ್ಮ ಹಬ್ಬ ಇದ್ದಾಗ ಅವರಿಗೆ ಸಿಹಿ ಕೊಡ್ತಾ ಇದ್ವಿ” ಅಂದಳು. ಜೀವಂತಿಯ ಗಂಡ ಕೇಶವ್ ದತ್ ಪಾಂಡೆಯ ಕುಟುಂಬವನ್ನು ಕಾರ್ಬೆಟ್ ರಾಣಿಖೇತ್ ಇಂದ ಕರೆದುಕೊಂಡು ಬಂದಿದ್ದ. ಕೇಶವ್ ಇಲ್ಲಿ ಮನೆ ಮಾಡಿ ಬೇಸಾಯ ಶುರು ಮಾಡಿದ ಮೊಟ್ಟ ಮೊದಲ ಗೇಣಿ ರೈತರಲ್ಲಿ ಒಬ್ಬ. ೨೨೩ ಎಕರೆ ಜಾಗವನ್ನು ೧,೫೦೦ ರೂಪಾಯಿಗಳಿಗೆ ಕೊಂಡಿದ್ದ ಕಾರ್ಬೆಟ್ ಕೇಶವ್ ನಂತಹ ಅನೇಕ ಕುಟುಂಬಗಳನ್ನು  ಘಢವಾಲ್, ಕುಮಾವ್ ಪ್ರದೇಶಗಳಿಂದ ಇಲ್ಲಿ ನಿಮ್ಮ ಜೀವನ ಹಸನಾಗುತ್ತದೆ ಅಂತ ಭರವಸೆ ನೀಡಿ ಬೇಸಾಯ ಮಾಡಲಿಕ್ಕೆ ಕರೆತಂದಿದ್ದ. ಈ ಜಾಗಕ್ಕೆ ಛೋಟಿ ಹಲ್ದ್ವಾನಿ — ಅಂದರೆ ಪುಟ್ಟ ಸ್ವರ್ಗ — ಎಂದು ಹೆಸರಿಟ್ಟ. ಇದು ಕಾರ್ಬೆಟ್ ನ ಜಮೀನ್ದಾರಿ ಅವತಾರ.

ಹೇಗೆ ಬಂದ ಕುಟುಂಬಗಳ ಜೀವನ ಇಲ್ಲಿ ಮುಂಚಿಗಿಂತ ಸ್ವಲ್ಪ ಮೇಲಾದ್ದದ್ದಂತೂ ಹೌದು.

ಕಾರ್ಬೆಟ್ ಇಲ್ಲಿ ದೊರಕಿಸಿಕೊಟ್ಟ ಮೊದಲ ಸೌಕರ್ಯಗಳಲ್ಲಿ ಇಲ್ಲಿನ ಭೂಮಿಗೆ ನೀರಿನ ಸೌಕರ್ಯವೂ ಒಂದು.  ಪಕ್ಕದಲ್ಲಿ ಹರಿಯುವ ಬೋರ್ ನದಿಗೆ ಆಣೆಕಟ್ಟು ಕಟ್ಟಿ ಅಲ್ಲಿನ ನೀರನ್ನು ಗದ್ದೆಯ ಕಾಲುವೆಗಳ ಮೂಲಕ ಹಾಯಿಸುವ ವ್ಯವಸ್ಥೆ ಮಾಡಿದ.  ಇಲ್ಲಿ ಹರಿಯುವ ನೀರು ಇಲ್ಲದ ಋತುವೇ ಇಲ್ಲ ಅಂತ ಜೀವಂತಿಯ ಮೊಮ್ಮಗ ಮೋಹನ್ ಪಾಂಡೆ ಹೇಳಿದ. “ನಾವು ಮೊದಲು ಇಲ್ಲಿ ಬಂದಾಗ ತುಂಬಾ ಕಲ್ಲು, ಮುಳ್ಳು ಇತ್ತು. ಕಾರ್ಬೆಟ್ ಸಾಬ್ ಸುಮಾರು ಸಲ ನೆಲವನ್ನು ಉತ್ತಿಸಿದ್ದನಂತೆ. ನಂತರ ಕುದುರೆಗಳನ್ನು ಇಲ್ಲಿ ಒಂದೇ ಸಮನೆ ಓಡಿಸಲಾಯಿತಂತೆ” ಅಂತ ಕತೆ ಶುರುಮಾಡಿದ ಮೋಹನ್.

ಕಾರ್ಬೆಟ್ ನ ಈ ಹಳ್ಳಿಯಲ್ಲಿ ಕತೆ, ಪುರಾಣ, ವಾಸ್ತವ ಇವೆಲ್ಲ ಒಳ್ಳೆ ಎಂತಾ ಕಲಸು ಮೇಲೋಗರ ಅಂದರೆ ಒಂದರಿಂದ ಇನ್ನೊಂದನ್ನು ಬೇರ್ಪಡಿಸುವುದೇ ಕಷ್ಟ.  ದೇವ್ಬನ್ ಗೋಸ್ವಾಮಿ ಎಂಬ ಮುದುಕ ಕಾರ್ಬೆಟ್ ಬಗ್ಗೆ ಮಾತಾಡುವುದು ಕೇಳಿದರೆ ಈತ ಕಾರ್ಬೆಟ್ ಅನ್ನು ನೆನ್ನೆ ತಾನೇ ಭೇಟಿ ಮಾಡಿರಬೇಕು ಅನ್ನಿಸುತ್ತದೆ!

ಪ್ರತಿ ದಿನ ಹಾಲು ಮತ್ತು ಜೇನುತುಪ್ಪವನ್ನು ಕಾರ್ಬೆಟ್ ಮನೆಗೆ ತಾನೇ ಒಯ್ಯುತ್ತಿದ್ದುದಾಗಿ ಗೋಸ್ವಾಮಿ ಹೇಳುತ್ತಾನೆ. “ನವೆಂಬರ್ ಇಂದ ಮಾರ್ಚ್ ವರೆಗೆ ಕಾರ್ಬೆಟ್ ಇಲ್ಲಿ ಇರುತ್ತಿದ್ದ. ನಾನು ಮತ್ತು ಅಪ್ಪ ಹಾಲು ಕೊಡಲಿಕ್ಕೆ ಹೋದಾಗಲೆಲ್ಲ ಮ್ಯಾಗಿ ಮೇಮ್ ಸಾಬ್ ನನ್ನ ಅಪ್ಪ ಪನ್ಬನ್  ಗೋಸ್ವಾಮಿಗೆ ‘ಈ ಸಣ್ಣ ಹುಡುಗನ್ನ ಈ ಚಳಿಯಲ್ಲಿ ಕರೆದುಕೊಂಡು ಬರಬೇಡ. ನ್ಯುಮೋನಿಯ ಬರತ್ತೆ’ ಅಂತ ಹೇಳುತ್ತಿದ್ದರು. ಆದರೆ ನಾನು ಹೋಗುವುದನ್ನು ಯಾವತ್ತೂ ನಿಲ್ಲಿಸಲಿಲ್ಲ,” ಅಂತ ನಮಗೆ ಮತ್ತೊಂದು ಕತೆ ಹೇಳಲಿಕ್ಕೆ ಶುರು ಮಾಡಿದ.
ಅಲ್ಲಿಂದ ಮುಂದೆ ಕತೆ ಇನ್ನಷ್ಟು ಮತ್ತಷ್ಟು ರೋಚಕವಾಗುತ್ತಾ ಹೋಗಿ ಒಂದು ಹಂತದಲ್ಲಿ ನಂಬಲು ಅಸಾಧ್ಯವಾದ ಪುರಾಣವಾಗಿ ತೋರಲಾರಂಭಿಸುತ್ತದೆ. ಕಾರ್ಬೆಟ್ ಹುಲಿ ಬೇಟೆಗೆ ಹೊರಟಾಗಲೆಲ್ಲಾ ತಾನೂ ಹೋಗುತ್ತಿದ್ದೆ ಅಂದ. ಪೋವಲ್ಗರ್ ನ ಏಕಾಂಗಿ ಹುಲಿ (“ಬ್ಯಾಚುಲರ್ ಆಫ್ ಪೋವಲ್ಗರ್”) ಅನ್ನು ಕಾರ್ಬೆಟ್ ಕೊಂದಾಗ ತಾನು ಜೊತೆಗೆ ಇದ್ದುದಾಗಿ ಕೊಚ್ಚಿಕೊಂಡ.  ಕಾರ್ಬೆಟ್ ಹುಲಿಯನ್ನು ಆನೆಯೇರಿ ಕೊಂದ ಅಂತ ಮತ್ತೊಂದು ಸವಿವರ ಕತೆ ಶುರು ಮಾಡಿಕೊಂಡ.

ಕಾರ್ಬೆಟ್ ಅನ್ನು ಅವನ ಪುಸ್ತಕಗಳಿಂದ ಬಲ್ಲವರಿಗೆ ಈತ ನರಭಕ್ಷಕ ಹುಲಿಗಳನ್ನು ಯಾವತ್ತೂ ಒಬ್ಬನೇ, ಕಾಲ್ನಡಿಗೆಯಲ್ಲಿ ಬೇಟೆ ಮಾಡಿದ್ದು ಅಂತಲೂ ಗೊತ್ತಿರುತ್ತದೆ.  ಈ ಪೋವಲ್ಗರ್ ಬ್ರಹ್ಮಚಾರಿಯ ಕತೆಯನ್ನೂ ಹೇಳುವ ತನ್ನ ‘ಮಾನ್ ಈಟರ್ಸ್ ಆಫ್ ಕುಮಾವ್’ ಎಂಬ ಸಂಕಲನದಲ್ಲಿ ಈ ಹುಲಿರಾಯನನ್ನು ಹೆಣ್ಣು ಹುಲಿಯ ಘರ್ಜನೆ ಅನುಕರಿಸಿ ತಾನು ಸೆಳೆದಿದ್ದಾಗಿ ಕಾರ್ಬೆಟ್ ಬರೆಯುತ್ತಾನೆ! ಹುಲಿ ತಾನು ಅಂದುಕೊಂಡದ್ದಕ್ಕಿಂತ ತುಂಬಾ ಮುಂಚಿತವಾಗಿ ಬಂದುಬಿಟ್ಟಾಗ ಕಾರ್ಬೆಟ್ ಗೆ ಹತ್ತಿ ಕೂರಲಿಕ್ಕೆ ಮರ ತಕ್ಷಣಕ್ಕೆ ಸಿಕ್ಕುವುದಿಲ್ಲ. ಹುಲಿ ಮುಂದಿನ ಗಿಡಗಳ ಸಂದಿನಿಂದ ಹೊರಬರಬಹುದು ಎಂದುಕೊಂಡು ಹುಲ್ಲಿನ ಮೇಲೆ ಸಾಪಾಟಾಗಿ ಮಲಗುತ್ತಾನೆ. ಆದರೆ ಆ ಬ್ರಹ್ಮಚಾರಿ ಕಾರ್ಬೆಟ್ ಬಲ ಭಾಗದ ಪೊದೆಗಳಿಂದ ಇದ್ದಕ್ಕಿದ್ದಂತೆ ಪ್ರತ್ಯಕ್ಷ ಆಗಿಬಿಟ್ಟು ಕಾರ್ಬೆಟ್ ಅನ್ನು ಕಕ್ಕಾಬಿಕ್ಕಿ ಮಾಡಿಬಿಡುತ್ತಾನೆ. ಒಂದು ಗುಂಡು ಹಾರಿಸಿ ಬ್ರಹ್ಮಚಾರಿಗೆ ಭಾರಿ ಗಾಯ ಮಾಡುತ್ತಾನೆ. ಅಂದು ತಪ್ಪಿಸಿಕೊಂಡ ಹುಲಿಯನ್ನು ಮುಂದಿನ ದಿನ ಕಾರ್ಬೆಟ್ ಮತ್ತೆ ಹುಡುಕಿ ಸಾಯಿಸುತ್ತಾನೆ.

ದೇವ್ಬನ್ ಹೇಳಿದ ಕಾರ್ಬೆಟ್ ಆನೆಯ ಬನ್ನೇರಿ ಹುಲಿ ಕೊಂದ ಕತೆ ಸಂಪೂರ್ಣ ಸುಳ್ಳು ಅಂತಲೂ ಅಲ್ಲ. ಆ ಮುದುಕ ಘಟನೆಯನ್ನು ಕಣ್ಣಿಗೆ ಕಟ್ಟುವಂತೆ ಸವಿವರವಾಗಿ ಹೇಳಿದ: “ಹುಲಿ ಅಲ್ಲೇ ಇತ್ತು. ಆದರೆ ಅದು ನಮ್ಮನ್ನು ನೋಡೇ ಇರಲಿಲ್ಲ. ಆಗ ಕಾರ್ಬೆಟ್ ಸಾಬ್ ಬೇಕಂತ ಒಂದು ಒಣ ಟೊಂಗೆ ಮುರಿದರು. ಆಗ ಹುಲಿ ಈ ಕಡೆ ತಿರುಗಿ ನಮಗೆ ಸರಿಯಾಗಿ ಗುರಿಗೆ ಸಿಕ್ಕಿತ್ತು. ತಕ್ಷಣ ಕಾರ್ಬೆಟ್ ಸಾಬ್ ಗುಂಡು ಹೊಡೆದರು.”

ದೆವ್ಬನ್ ಜೊತೆ ಇದ್ದ ಬಿಳಿ ಶಿಕಾರಿ ಬೇರೆ ಯಾರೋ ಆಗಿದ್ದಿರಲೂಬಹುದು. ಕಾರ್ಬೆಟ್ ತನ್ನ “ಮೈ ಇಂಡಿಯಾ” ಪುಸ್ತಕದಲ್ಲಿ ಹೇಗೆ ಬಂಡಿಗಟ್ಟಲೆ ಬ್ರಿಟೀಷರು ಯುನೈಟೆಡ್ ಪ್ರಾವಿನ್ಸ್ (ಈಗಿನ ಉತ್ತರ ಪ್ರದೇಶ್ ಮತ್ತು ಉತ್ತರಾಂಚಲ್)ಗೆ ಆನೆ ಮೇಲೇರಿ ಹುಲಿ ಬೇಟೆಯಾಡಲು ಬಂದು ಇಳಿಯುತ್ತಿದ್ದರು ಅಂತ ಬರೆಯುತ್ತಾನೆ. ಇಂತಹ ಬಹಳಷ್ಟು “ಶಿಕಾರಿ ಆಟ”ವನ್ನು ಸ್ಥಳೀಯ ಹಳ್ಳಿಗರ ಸಹಕಾರದಿಂದ ಏರ್ಪಾಟು ಮಾಡಲಾಗುತ್ತಿತ್ತು.

ನಾನು ಇದರ ಬಗ್ಗೆ ಯೋಚನೆ ಮಾಡುತ್ತಿರುವಂತೆ ದೆವ್ಬನ್ ಕತೆ ಇನ್ನೊಂದು ತಿರುವು ಪಡೆದುಕೊಂಡಿತ್ತು. ಪುರಾಣದ ಶೈಲಿ ಬಿಟ್ಟು ವಾಸ್ತವ ಚಿತ್ರಣದ ಶೈಲಿಗೆ ಇಳಿದಿದ್ದ: “ಬ್ಯಾಚುಲರ್ ಆಫ್ ಪೋವಲ್ಗರ್”ನ್ನು ಊರಿಗೆ ತಂದು ಅಳೆದು ನೋಡಿದಾಗ ಅದು ಮೂಗಿನಿಂದ ಬಾಲದ ತುದಿಯವರೆಗೆ ೧೦ ಅಡಿ ಏಳು ಇಂಚು ಇತ್ತಂತೆ! ಇಡೀ ಯುನೈಟೆಡ್ ಪ್ರಾವಿನ್ಸ್ ನಲ್ಲಿ ಇದೇ ಅವನು ಕಂಡ ಅತ್ಯಂತ ದೊಡ್ಡ ಹುಲಿ ಅಂತ ಕಾರ್ಬೆಟ್ ಕೂಡ ಬರೆಯುವುದೇನೋ ಸತ್ಯವೇ. ಈ ಹುಲಿ ಅಸಲಿನಲ್ಲಿ ನರಭಕ್ಷಕ ಆಗಿರಲೇ ಇಲ್ಲ ಸುಮ್ಮನೆ ಸಾಯಿಸಿಬಿಟ್ಟೆ ಅಂತ ಆಮೇಲೆ ಕಾರ್ಬೆಟ್ ಬೇಜಾರು ಮಾಡಿಕೊಳ್ಳುತ್ತಾನೆ.

ಛೋಟಿ ಹಲ್ದ್ವಾನಿಯ ಜನರಿಗೆ  ತಮ್ಮ ಪೈರನ್ನು ಕಾಡು ಪ್ರಾಣಿಗಳ ಕಾಟದಿಂದ ಕಾಪಾಡಿಕೊಳ್ಳಲು ಕಾರ್ಬೆಟ್ ಕೊಟ್ಟ ಬಂದೂಕನ್ನು ಇನ್ನೂ ತುಂಬಾ ಜತನದಿಂದ ಅಲ್ಲಿನ ಜನ ಇಟ್ಟುಕೊಂಡಿದ್ದಾರೆ. ಆಗಿನ ಕಾಲಕ್ಕೆ ಸರ್ಕಾರ ಇಡೀ ನಲವತ್ತು ಕುಟುಂಬಗಳ ಹಳ್ಳಿಗೆ ಒಂದು ಬಂದೂಕು ಇಟ್ಟುಕೊಳ್ಳಲು ಮಾತ್ರ ಪರವಾನಿಗೆ ಕೊಟ್ಟಿತ್ತು. ಆದರೆ ಬಿಳಿ ಸಾಹೇಬ ಕಾರ್ಬೆಟ್ ಹತ್ತಿರ ಬಂದೂಕುಗಳ ಒಂದು ದೊಡ್ಡ ಸಂಗ್ರಹವೇ ಇತ್ತು!

ಕಾರ್ಬೆಟ್ ಕೊಟ್ಟ ಈ ಸಿಂಗಲ್ ಬ್ಯಾರಲ್ ಬಂದೂಕು ಈಗ ತ್ರಿಲೋಕ್ ಸಿಂಗ್ ಕುಟುಂಬದ ಸುಪರ್ದಿಯಲ್ಲಿದೆ. ಅದು ಈಗಲೂ ಕೆಲಸ ಮಾಡುತ್ತದೆ! “ನೀವೇ ನೋಡಿ” ಅಂತ ತ್ರಿಲೋಕ್ ಸಿಂಗ್ ಹೆಂಡತಿ ಪಾರ್ವತೀ ದೇವಿ ನನ್ನ ಕೈಗೆ ಬಂದೂಕು ಕೊಟ್ಟಳು.  ಹ್ಯಾಮರ್ ಬಳಸಿ ಬಳಸಿ ಸವೆದಂತೆ ಕಂಡರೂ, ಬಂದೂಕಿನ ಕುದುರೆ ಮಾತ್ರ ಸ್ವಲ್ಪವೂ ತೊಂದರೆ ಇಲ್ಲದೆ ಸರಿಯಾಗಿ ಕೆಲಸ ಮಾಡುತ್ತಿದೆ!

ಪಾರ್ವತಿಯ ಮನೆಯ ಹಿಂದಿನ ಅಂಗಳ ಕಾರ್ಬೆಟ್ ಕಾಲದ ಸಂಗ್ರಹಾಲಯದ ಮತ್ತೊಂದು ವಸ್ತುವಿನಂತೆ ತೋರುತ್ತದೆ. ಹಿಂದೆ ಎಲ್ಲರೂ ಒಟ್ಟಿಗೆ ಕೂತು ಹಳ್ಳಿಯ ವ್ಯಾಜ್ಯಗಳನ್ನೆಲ್ಲಾ ಪರಿಹರಿಸಿಕೊಳ್ಳುತ್ತಿದ್ದ “ಚೌಪಾಲ್” ಅನ್ನುವ ಮಂಟಪದಂತಹ ಜಾಗ ಇನ್ನೂ ಹಾಗೆಯೇ ಇದೆ. ಸ್ವಲ್ಪ ಎತ್ತರದ ಜಾಗದಲ್ಲಿರುವ ಈ ಸ್ಥಳವನ್ನು ಫಸಲು ಬೆಳೆದು ನಿಂತಾಗ ಅದರ ಮೇಲೆ ಕಣ್ಣಿಟ್ಟು ಕಾಯಲೂ ಬಳಸಲಾಗುತ್ತದೆ. ಇದರ ಮೆಟ್ಟಿಲುಗಳನ್ನು ಹತ್ತುವಾಗ ಈ ಪ್ರಪಂಚ ಕಾರ್ಬೆಟ್ ಕಾಲದಿಂದ ಈಗಿಗೆ ನಿಜವಾಗಿಯೂ ಭೌತಿಕ ಅರ್ಥದಲ್ಲಿ ಅಷ್ಟೇನೂ ಬದಲಾಗಿಲ್ಲವೇನೋ ಅನ್ನಿಸಿತು. ದೂರದಲ್ಲಿ ನೀರಾವರಿ ಪಂಪ್ ಸೆಟ್ ಮತ್ತು ಟ್ರ್ಯಾಕ್ಟರ್ ನ ಛಗ್ –ಛಗ್ ಸದ್ದು ಬಿಟ್ಟರೆ ಇನ್ನೆಲ್ಲ ನೂರು ವರ್ಷದ ಹಿಂದಿನ ಚಿತ್ರದಂತೆ ಕಾಣುತ್ತಿತ್ತು.

ಕಾಡು ಪ್ರಾಣಿಗಳಿಗೆ, ಅದರಲ್ಲೂ ವಿಶೇಷವಾಗಿ ಕಾಡುಹಂದಿಗಳಿಗೆ, ತಡೆಗೋಡೆಯಾಗಿ ಕಾರ್ಬೆಟ್ ಕಟ್ಟಿದ ಗೋಡೆ ಇನ್ನೂ ಹಾಗೆಯೇ ಇರುವುದಷ್ಟೇ ಅಲ್ಲದೆ ಕಟ್ಟಿದ ಉದ್ದೇಶವನ್ನು ಈಗಲೂ ಪೂರೈಸುತ್ತಲೂ ಇದೆ. ಕೆಲವು ಕಡೆ ಸ್ವಲ್ಪ ಹಾಳಾಗಿದ್ದರೂ  ಛೋಟಿ ಹಲ್ದ್ವಾನಿ ಮತ್ತು ಅದನ್ನು ಮೂರು ದಿಕ್ಕುಗಳಲ್ಲಿ ಸುತ್ತಿರುವ ಕಾಡಿನ ಮಧ್ಯೆ ಇರುವುದು ಇದೊಂದೇ ತಡೆಗೋಡೆ.

ತನ್ನ “ಮೋತಿ” ಎಂಬ ಲೇಖನದಲ್ಲಿ ಕಾರ್ಬೆಟ್ ಈ ತಡೆಗೋಡೆ ಇದ್ದರೂ ಮೋತಿ ಸಿಂಗ್ ನ ಆಲೂಗೆಡ್ಡೆ ಬೆಳೆಯನ್ನು ಒಂದು ದೊಡ್ಡ ಹಂದಿ ನಾಶ ಮಾಡಿತು ಎಂದು ಬರೆಯುತ್ತಾನೆ.  ಮೋತಿಯ ಹೆಂಡತಿಗೆ ಆಗ ಕಾರ್ಬೆಟ್ ಸಾಬ್ ಮೇಲೆ ಕೆಂಡಾಮಂಡಲ ಕೋಪ ಬರುತ್ತದೆ. ಅವನಿಗೆ ಶಿಕಾರಿ ಹುಚ್ಚು ಈ ಬಿಳಿ ಸಾಬ್ ಹತ್ತಿಸದೆ ಇದ್ದರೆ ಅವನು ಊರಲ್ಲೇ ಇದ್ದು ಎಲ್ಲ ಗಂಡಸರ ಹಾಗೆ ಹೊಲ ಕಾಯುತ್ತಿದ್ದ, ಆಲೂಗೆಡ್ಡೆಗಳು ಉಳಿಯುತ್ತಿದ್ದವು ಅನ್ನೋದು ಅವಳ ವಾದ.

ಮೋತಿಗಾಗಿ ಕಾರ್ಬೆಟ್ ಕಟ್ಟಿಸಿ ಕೊಟ್ಟ ಪಕ್ಕಾ ಮನೆಯಲ್ಲಿ ಈಗ ಮೋತಿಯ ಮೊಮ್ಮಗ ಭುವನ್ ಸಿಂಗ್ ಇದ್ದಾನೆ. ಭುವನ್ ಮೋತಿಯ ದೊಡ್ಡ ಮಗ ಒಳ್ಳೆ ಶಿಕಾರಿಯಾಗಿದ್ದ ಪಾನ್ ಸಿಂಗ್ ನ ಮಗ. ಪಾನ್ ಸಿಂಗ್ ಗೆ (ಅವನನ್ನು ಕಾರ್ಬೆಟ್ ಪುನ್ವಾ ಎಂದು ಕರೆಯುತ್ತಾನೆ) ತಾನು ಒಮ್ಮೆ ಶಿಕ್ಷೆ ಕೊಟ್ಟದ್ದರ ಬಗ್ಗೆ ಕಾರ್ಬೆಟ್ ಬರೆಯುತ್ತಾನೆ. ಬಂದೂಕನ್ನು ಮರಳಿನ ಮೇಲೆ ಇಟ್ಟಿದ್ದಕ್ಕೆ ಕೋಪಗೊಂಡು ಅವನ ಕೈಯ್ಯಲ್ಲೇ ಬಹಳಷ್ಟು ದೂರ ಆ ಭಾರಿ ತೂಕದ ಬಂದೂಕನ್ನು ಹೊರಿಸುತ್ತಾನೆ.

ಮೋತಿಯ ಮೊಮ್ಮಗನ ಕಣ್ಣಿನಲ್ಲಿ ಕಾರ್ಬೆಟ್ ತುಂಬಾ ಪ್ರೀತಿಯಿಂದ ವರ್ಣಿಸುವ ಮೋತಿಯ ಛಾಯೆಯೇನಾದರು ಕಾಣಬಹುದೇ ಅಂತ  ಸಂಜೆಯ ಬೆಳಕಿನಲ್ಲಿ ಹುಡುಕಿದೆ. ಆದರೆ ಕಾರ್ಬೆಟ್ ಈ ಜನರ ಜೊತೆಗೆ ಒಂದು ಇಡೀ ಜೀವನ ಕಳೆದು ಕಂಡುಕೊಂಡದ್ದನ್ನು ನಾನು  ನನ್ನ ಪ್ರವಾಸಿ ಕಣ್ಣಿನಿಂದ ಒಂದು ಸಂಜೆಯಲ್ಲಿ ಅಳೆಯಲು ಹೇಗೆ ತಾನೇ ಸಾಧ್ಯ?

ನನ್ನ ಕಣ್ಣು ಭುವನ್ ಸಿಂಗ್ ಎತ್ತಿಕೊಂಡಿದ್ದ ನಾಯಿಮರಿಯ ಕಡೆ ಹರಿಯಿತು. ಆ ನಾಯಿ ಕಾರ್ಬೆಟ್ ನ ತುಂಬಾ ಪ್ರೀತಿಯ ಬೇಟೆ ನಾಯಿ ರಾಬಿನ್ ಥರಾನೇ ಇದೆ ಅನ್ನಿಸಿತು.  ನಾನು ಹಾಗೆ ಹೇಳಿದ್ದನ್ನು ಕೇಳಿ ಭುವನ್ ಗೆ ಭಯಂಕರ ನಗು ಬಂತು. “ಇದು ಭುತಿಯ ಎಂಬ ಜಾತಿಯ ಈ ಬೆಟ್ಟಗಳಲ್ಲಿ ಸಾಮಾನ್ಯಾಗಿ ಇರುವ ನಾಯಿ ಅಷ್ಟೇ. ಎಲ್ಲವೂ ಸುಮಾರು ಹಿಂಗೆ ಇರ್ತಾವೆ” ಅಂತ ನಿನಗೆ ಇಷ್ಟೂ ಅರ್ಥ ಆಗೋದಿಲ್ಲವಾ ಎಂಬ ದನಿಯಲ್ಲಿ ಹೇಳಿದ.

ಛೋಟಿ ಹಲ್ದ್ವಾನಿಯಲ್ಲಿರುವ ಕಾರ್ಬೆಟ್ ನ ಮನೆ ಈಗ ಮ್ಯೂಸಿಯಂ ಆಗಿದೆ. ಅಲ್ಲಿ ವಿಶಾಲ ಅಂಗಳದ ಒಂದು ಮೂಲೆಯಲ್ಲಿ ರಾಬಿನ್ ನ ಗೋರಿ ಇದೆ. ಬಂಗಲೆಯ ಒಳಗೆ ಕಾರ್ಬೆಟ್ ಬಳಸಿದ ಅನೇಕ ವಸ್ತುಗಳು ಇವೆ. ಟೇಬಲ್, ಕುರ್ಚಿ, ಬಂದೂಕಿನ ಕೇಸುಗಳು, ಅವನು ಅನೇಕ ಲೇಖನಗಳಲ್ಲಿ ಪ್ರಸ್ತಾಪಿಸುವ ಅವನ ನಲವತ್ತು ಪೌಂಡು ತೂಕದ ಟೆಂಟು, ಬರೆದ ಪತ್ರಗಳ, ಲೇಖನಗಳ ಹಲವು ಪ್ರತಿಗಳು, ಅವನ ಕುಟುಂಬದ ಸದಸ್ಯರ ಚಿತ್ರಗಳು ಇತ್ಯಾದಿ.

ಕೆನ್ಯಾದಿಂದ ೧೯೫೧ರಲ್ಲಿ ಅವನು ಸಾಯುವುದಕ್ಕೆ ಮೂರು ವರ್ಷ ಮುಂಚೆ ಇವನು ಬರೆದ ಪತ್ರದ ಜೆರಾಕ್ಸ್ ಪ್ರತಿ ಇಲ್ಲಿ ಇದೆ. ಅದರಲ್ಲಿ ಅವನ ಗೆಳೆಯರಾಗಿದ್ದ ಸುತ್ತಮುತ್ತಲ ಅನೇಕ ದೇವಾಲಯಗಳ ಅರ್ಚಕರಿಗೆ ದುಡ್ಡು ಕಳಿಸಿದ್ದರ ಬಗ್ಗೆ ಬರೆಯುತ್ತಾನೆ. ಬೆಳೆ ಚೆನ್ನಾಗಿ ಆಗ್ತಾ ಇದೆಯಾ, ಕಾಡು ಹಂದಿಗಳ ಕಾಟ ಇನ್ನೂ ಇದೆಯಾ ಅಂತೆಲ್ಲಾ ವಿಚಾರಿಸಿಕೊಳ್ಳುತ್ತಾನೆ.

ಈ ಎಲ್ಲಾ ಪತ್ರಗಳ ನಡುವೆ ನನ್ನ ಕಣ್ಣಿಗೆ ವಿಶೇಷವಾಗಿ ಬಿದ್ದದ್ದು ಒಂದು ಪುಟ್ಟ ಜೆರಾಕ್ಸ್ ಅಲ್ಲದ ಮೂಲ ಪ್ರತಿಯೇ ಆಗಿದ್ದ ಪೇಪರ್. ಅದರ ಮೇಲೆ ಕಾರ್ಬೆಟ್ ತನ್ನ ಅಷ್ಟೇನೂ ಸುಂದರವಲ್ಲದ ಬರಹದಲ್ಲಿ ಎರಡು ವಾಕ್ಯ ಬರೆದು ಸಹಿ ಹಾಕಿದ್ದ:

“ಎಲ್ಲದರಲ್ಲೂ ತುಂಬಾ ಹುಳುಕು ಹುಡುಕಬೇಡಿ. ಒಬ್ಬ ಕಾಡು ಮನುಷ್ಯ ತನ್ನ ಕತೆಗಳನ್ನು ಕಾಡಿನ ಭಾಷೆಯಲ್ಲಿ ಮಾತ್ರ ಹೇಳಲು ಸಾಧ್ಯ” – ಜಿಮ್ ಕಾರ್ಬೆಟ್.


Advertisements

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: