ತೇಜಸ್ವಿ ಎಂಬ ‘ಹೀರೋ’ ಬಗ್ಗೆ

ಕೃಷಿ, ಶಿಕಾರಿ, ಚಿತ್ರಗ್ರಹಣ, ಸಂಗೀತ, ಪರಿಸರ ಅಧ್ಯಯನ, ಲೋಹಿಯಾ ಚಳುವಳಿ, ರೈತ ಚಳುವಳಿ, ಕನ್ನಡ ಕಂಪ್ಯೂಟಿಂಗ್… ಕೊನೆಗೆ ಸ್ಕೂಟರ್ ರೆಪೇರಿ… ಹೀಗೆ ಎಲ್ಲದರಲ್ಲೂ ಸೈ ಎನ್ನಿಸಿಕೊಂಡ ಸಕಲಕಲಾವಲ್ಲವನ್ ಪೂರ್ಣಚಂದ್ರ ತೇಜಸ್ವಿ. ನಮ್ಮ ಟೀವಿಗಳಲ್ಲಿ ಎಲ್ಲದರ ಬಗ್ಗೆಯೂ ಮಾಡುವ ಹಾಗೆ ಕನ್ನಡ ಸಾಹಿತ್ಯ ಲೋಕದ  ”ಹೀರೋ”ಗಳ ಬಗ್ಗೆ ರೇಟಿಂಗ್ ಏನಾದರೂ ಮಾಡಿದರೆ ನಮ್ಮಂತ ಮಧ್ಯವಯಸ್ಕ ಹೆಂಗಸರಂತೂ en-masse ಮೊದಲ ಸ್ಥಾನಕ್ಕೆ ತೇಜಸ್ವಿಗೆ ವೋಟ್ ಹಾಕಿಯೇವು . ಹೀರೋತನವನ್ನು ಮೆರೆಯದೆ, ಈ ನಮ್ಮ ಉಳಿದ ಪೇಟೆ ಸಾಹಿತಿ ಹೀರೋಗಳ ಸಹವಾಸ ಜಾಸ್ತಿ ಸಹಿಸಿಕೊಳ್ಳುವುದು ಕಷ್ಟ ಅನ್ನುವ ಧಾಟಿಯಲ್ಲಿ ಮಲೆನಾಡಿನ ಮೂಲೆಗೆ ಹೋಗಿ ಇದ್ದುಬಿಟ್ಟ ಕಾರಣಕ್ಕೆ ತೇಜಸ್ವಿ ಇನ್ನಷ್ಟು ಹೀರೋ!

ಸರಿ. ಊರವರಿಗೆಲ್ಲ ಹೀರೋ ಆಗುವುದು ಅಷ್ಟೇನೂ ಕಷ್ಟ ಅಲ್ಲ. ಆದರೆ ಗಂಡಂದಿರ ನಿಜವಾದ ದಶಾವತಾರಗಳನ್ನು ಬಲ್ಲ ಹೆಂಡತಿಯರ ಹತ್ತಿರ ಹೀರೋ ಅನ್ನಿಕೊಳ್ಳುವುದು ಸುಲಭವಲ್ಲ. ಆದರೆ ನೋಡಿ, ಈ ತೇಜಸ್ವಿ ಈ ಅಸಂಭವವನ್ನೂ ಸಂಭವ ಮಾಡಿ ಇವರ ಸುಧೀರ್ಘ ೫೦ ವರ್ಷ ಜೊತೆಗಿದ್ದ ಹೆಂಡತಿಯ ಕಣ್ಣಿಗೂ ಹೀರೋ ಆಗಿ ಕಂಡಿದ್ದಾರೆಂದರೆ… ಇವರನ್ನು ಹೀರೋ ಅನ್ನದೆ ಮತ್ತ್ಯಾವ ಹೆಸರಿಟ್ಟು ಕರೆಯಲಿಕ್ಕೆ ಸಾಧ್ಯ?ರಾಜೇಶ್ವರಿ ಅವರ ”ನನ್ನ ತೇಜಸ್ವಿ” ಪುಸ್ತಕ ಅರವತ್ತರ ದಶಕದಲ್ಲಿ “ಪೂರ್ಣಚಂದ್ರನಂತೆ” ಹೊಳೆಯುತ್ತಾ ಪಾಪದ ಸಣ್ಣ ಹುಡುಗಿಯರಿಗೆ ಸಿಕ್ಕಾಪಟ್ಟೆ ಬೀಪಿ ಬರುವ ಹಾಗೆ ಮಾಡುತ್ತಿದ್ದ ತೇಜಸ್ವಿಯ ಮೈಸೂರಿನ ಕಾಲೇಜಿನ ದಿನಗಳೊಂದಿಗೆ ಆರಂಭವಾಗುತ್ತದೆ.  ಹೇಗೆ ಬೀಪಿ ಬರಿಸಿಕೊಂಡು ಒದ್ದಾಡಿದವರಲ್ಲಿ ರಾಜೇಶ್ವರಿಯೂ ಒಬ್ಬರು.ಇದು ಪ್ರೇಮಕ್ಕೆ ತಿರುಗಿದ್ದು, ನಿರಂತರ ಒಬ್ಬರೊಬ್ಬರಿಗೆ ಬರೆದ ಪ್ರೇಮಪತ್ರಗಳು, ಬಹು ದಿನಗಳ ಕೋರ್ಟ್ ಶಿಪ್, ವಿಶಿಷ್ಟವಾದ ಮಂತ್ರ ಮಾಂಗಲ್ಯ ಪದ್ಧತಿಯ ಸರಳ ಮಾಡುವೆ, ಮಕ್ಕಳು ಬೆಳೆದು ದೊಡ್ದವರಾದದ್ದು, ಕುವೆಂಪು ಸಂಸಾರದೊಂದಿಗೆ ಒಡನಾಟ… ಹೀಗೆ ಸಾಗುತ್ತಾ ಹೋಗಿ ತೇಜಸ್ವಿಯ ಅನಿರೀಕ್ಷಿತ ಮರಣ ಮತ್ತು ಅದು ಹುಟ್ಟಿಸಿದ ನಿರ್ವಾತದವರೆಗೂ ರಾಜೇಶ್ವರಿ ಸವಿವರವಾಗಿ ಬರೆಯುತ್ತಾರೆ. “ನೆನಪುಗಳೆಲ್ಲಾ ಬಿಡಿ ಬಿಡಿಯಾಗಿ ಪ್ರತ್ಯೇಕ ಘಟನೆಗಳಂತೆ ಕಾಲದ ಸರಪಳಿಯಲ್ಲಿ ಕೂಡಿಕೊಳ್ಳದೆ ಎಳೆ ತುಂಡಾಗಿ ಉರುಳಾಡುವ ಮಣಿಗಳಂತೆ ಸ್ಮೃತಿ ಪಟಲದಲ್ಲಿ ಆವರಿಸಿದವು” ಎಂಬ “ಕರ್ವಾಲೋ” ಕಾದಂಬರಿಯ ಸಾಲಿನೊಂದಿಗೆ ಮುಕ್ತಾಯವಾಗುತ್ತದೆ.ಬರೆದ ಪ್ರೇಮಪತ್ರಗಳಿಂದ ಹಿಡಿದು, ತೇಜಸ್ವಿ ಹಕ್ಕಿ ಪಿಕ್ಚರ್ ತೆಗೆಯಲು ಕಟ್ಟುತ್ತಿದ್ದ ಹೈಡೌಟು, ಮನೆಗೆ ಬಂದು ಹೋದ, ಬಾರದೆ ಹೋದ ವ್ಯಕ್ತಿಗಳ ವಿವರಗಳವರೆಗೆ ಗಂಡ ಹಿಡಿದದ್ದು ಮುಟ್ಟಿದ್ದು ಯಾವುದನ್ನೂ ಬಿಡದೆ ೫೪೮ ಪುಟಗಳಷ್ಟು ಸುಧೀರ್ಘವಾಗಿ (ಕೆಲವು ಸಲ ಅಯ್ಯೋ ಶಿವಾ ಇದೂ ಬರೆಯಬೇಕಾ ಅನ್ನಿಸುವಷ್ಟರ ಮಟ್ಟಿಗೆ) ರಾಜೇಶ್ವರಿ ಬರೆದಿದ್ದಾರೆ.  ಇವರು ಹೆಕ್ಕಿ ತೋರುವ ಪ್ರತಿ ಮಣಿಯಲ್ಲಿ ತೇಜಸ್ವಿ ವ್ಯಕ್ತಿತ್ವದ ವಿವಿಧ ರೂಪ ಕಾಣುತ್ತದೆ.

ಉದಾಹರಣೆಗೆ ಇವರ ಪ್ರೇಮಪತ್ರಗಳ ಕೋಪ, ತಾಪ, ತುಂಟಾಟ, ಉತ್ಕಟ ಹಂಬಲ ಇತ್ಯಾದಿ ವಿವಿಧ ಮೂಡುಗಳು… “ರಾಜೇಶ್, ಲವ್ ಅಂದರೆ ಏನು ಗೊತ್ತಾ. ಒಂದು ವ್ಯಕ್ತಿತ್ವದ ಸಂಪೂರ್ಣ ನಗ್ನತೆಯನ್ನು ಸ್ವೀಕರಿಸುವುದು. ದೈಹಿಕವಾಗಿ, ಮಾನಸಿಕವಾಗಿ. ನೀವು ತಿಳಿದಿರೋ ಅಂತ ಸುಲಭದ್ದಲ್ಲ. ಕೆಲವರು ಮುನ್ನೋಟಕ್ಕೆ ಹೆದರಿ ಅಂಬಿಕೆಯಂತೆ ಬಿಳಿಚಿಕೊಳ್ಳುತ್ತಾರೆ. ಇಲ್ಲ ಅಂಬಾಲಿಕೆಯಂತೆ ಅಂಧರಾಗುತ್ತಾರೆ. ಇದೆಲ್ಲಾ ಯಾಕೆ ಹೇಳಿದೆನಂದರೆ ನಿನ್ನ spiritual ಸ್ಲೋಗನ್ನುಗಳಿಗೆ ಹೆದರಿ ಹೇಳಿದ್ದು ರಾಜೇಶ್. I love you. – ನಿಮ್ಮ ಪೂ.ಚಂ, ತೇ.” ಮತ್ತೊಂದು ಕಡೆ ರಾಜೇಶ್ವರಿ ಸೌಂದರ್ಯವರ್ಧನೆಗೆ ಮುಖಕ್ಕೆ ಮೀನೆಣ್ಣೆ ಪುಸುತ್ತಿದ್ದರ ಬಗ್ಗೆ ಛೇಡಿಸುತ್ತಾ  “ಮದುವೆಯಾದ ನಂತರ ಮಲಗುವಾಗ ಅದನ್ನು ಹಚ್ಚಿಕೊಳ್ಳುವಂತಿಲ್ಲ.  ಏಕೆಂದರೆ ನನಗೇನೋ ಮೀನೆಣ್ಣೆ ನೆಕ್ಕಬೇಕೆಂದು ಡಾಕ್ಟರ್ ಹೇಳಿಲ್ಲವಲ್ಲ…” ಎಂದು ಬರೆಯುತ್ತಾರೆ. ಇನ್ನೇನು ಸುಮಾರು ರೊಮ್ಯಾಂಟಿಕ್ ಆಗುತ್ತಿದ್ದಾರಲ್ಲ ಅನ್ನಿಸುವಷ್ಟರಲ್ಲಿ ವ್ಯಂಗ್ಯದ ಮೊನಚಿನಿಂದ ಚುಚ್ಚಿಬಿಡುವ ಟಿಪಿಕಲ್ ತೇಜಸ್ವಿಯ ಶೈಲಿ ಪ್ರೇಮ ಪಾತ್ರಗಳಲ್ಲೂ ಇದೆ.

ಪುಸ್ತಕದಲ್ಲಿ ತುಂಬ ಖುಷಿ ಕೊಡುವುದು ರಾಜೇಶ್ವರಿ ಅವರು ಕಟ್ಟಿ ಕೊಡುವ ಗಂಡ ಹೆಂಡತಿ ಸೇರಿ ಕಾಡು ಮೇಡು ಸುತ್ತಿದ, ಬೆಟ್ಟ ಗುಡ್ಡ ಅಲೆದ, ಮನೆಯ ಸುತ್ತಲ ತೋಟ ಮಾಡಿದ, ಹೊಸರೀತಿಯ ಪಾಕ ಪ್ರಯೋಗಗಳನ್ನು ಮಾಡಿದ ಚಿತ್ರಣಗಳು. ಮೋಡದಿಂದ ಆವೃತವಾದ ಚಾರ್ಮಡಿ ಘಾಟ್, ಮಲೆನಾಡಿನ ಹನಿ ಕಡಿಯದ ಮಳೆ, ರಾಶಿಗಟ್ಟಲೆ ದೀರ್ಕ ಹಣ್ಣನ್ನು ತಂದು ಇಬ್ಬರೂ ಸೇರಿ ”ಆಡುಳಿ” ತಯಾರಿಸಿದ್ದು, ಬದಲಾಗುತ್ತಾ ಹೋದ ಮೂಡಿಗೆರೆಯ ಚಿತ್ರಣ (ಗೊಬ್ಬೆ ಸೀರೆ ಉಡುವ ಹೆಂಗಸರು ಕಾಣೆಯಾಗಿ ಪುಟ್ಟ ಊರಿಗೆ ೧೩ ಬ್ಯೂಟಿ ಪಾರ್ಲರ್ರುಗಳು ಬಂದದ್ದು!) , ಇಬ್ಬರೂ ಸಿಟ್ ಔಟಿನಲ್ಲಿ ಕುಳಿತು ಸುಮ್ಮನೆ ತೋಟ, ಅದರಾಚೆಯ ಕಾಡು ಬೆಟ್ಟ ಗುಡ್ಡ ನೋಡುತ್ತಿದ್ದದ್ದು… ಹೀಗೆ ಹತ್ತು ಹಲವು ಘಟನೆಗಳನ್ನು ರಾಜೇಶ್ವರಿ ತಣ್ಣಗೆ ಮೆಲುಕು ಹಾಕುತ್ತಾರೆ.

ಹೇಗೆ ಬರೆಯುವಾಗ ಅವರ ಶೈಲಿಯಲ್ಲಿ  ಹೆದರಿಕೆ ಆಗುವಷ್ಟು ಖ್ಯಾತಿಯ ತಮ್ಮ ಗಂಡನನ್ನಾಗಲಿ ಅಥವಾ ಮಾವನನ್ನಾಗಲಿ ಅನುಕರಿಸುವ ಪ್ರಯತ್ನವಾಗಲೀ, ಕೃತಕವಾಗಿ ಆಲಂಕಾರಿಕವಾಗಿಯೋ ಕಾವ್ಯಮಯವಾಗಿಯೋ ಬರೆಯುವ ತಹತಹವಾಗಲಿ ಕಾಣುವುದಿಲ್ಲ. ಅನ್ನಿಸಿದ್ದನ್ನು ನೇರವಾಗಿ, ಅಳುಕಿಲ್ಲದೆ ಬರೆಯುವ ರಾಜೇಶ್ವರಿ ಅವರ ಶೈಲಿ ಚೆಂದ. ಕೆಲವೊಮ್ಮೆ ಪ್ರಯತ್ನಪೂರ್ವಕ ಅನ್ನಿಸದೆ ಕಾವ್ಯ ಧ್ವನಿಸುತ್ತದೆ. ತೇಜಸ್ವಿಯ ಸಾವಿನ ಬಗ್ಗೆ ರಾಜೇಶ್ವರಿ ಬರೆಯುವ ರೀತಿ ಭಾವಾತಿರೇಕಕ್ಕೆ  ಎಡೆಮಾಡದೆ, ಮನಮಿಡಿಯುವಂತಿದೆ. “ನನ್ನ ತೇಜಸ್ವಿ ಕಾಡಿನ ಉಸಿರಿನಲ್ಲಿ ಉಸಿರಾಗಿ ಹೋದರು. ಅವರ ವಾಸನೆ ನನ್ನ ಉಸಿರಿನಲ್ಲಿದೆ, ನನಗೆ ಅವರು ಬೇಕು.” ಅನ್ನುವ ಸರಳ ಮಾತು ಇಡೀ ಜೀವನ ಇಬ್ಬರೂ ಒಟ್ಟಿಗೆ ಏಗಿದ ಕತೆಯನ್ನು ಎರಡೇ ವಾಕ್ಯದಲ್ಲಿ ಹೇಳುತ್ತದೆ.

ಮೊದಲಿಂದ ಕೊನೆಯವರೆಗೂ ರಾಜೇಶ್ವರಿಯವರ ಧ್ವನಿ ಅತ್ಯಂತ ಸಹನಶೀಲ ಸದ್ಗೃಹಿಣಿ ಹಾಗೂ ಸಹಧರ್ಮಿಣಿಯದ್ದು.  ಈ ದೊಡ್ಡ ಪುಸ್ತಕವನ್ನು ಹಿಂದೆ ಮುಂದೆ ತಿರುಗಿಸಿ ಹುಡುಕಿದರೂ ರಾಜೇಶ್ವರಿ ಅವರು ತೇಜಸ್ವಿ ಮೇಲೆ ಸಿಟ್ಟಾಗಿ ಸಿಡುಕಿದ ಪ್ರಸಂಗಗಲಾಗಲಿ, ಅವರ ಜೊತೆ ಯಾವುದೇ ವಿಷಯಕ್ಕೆ ತಗಾದೆ ತೆಗೆದು ತಮ್ಮನ್ನು ತಾವು ಅಸರ್ಟ್ ಮಾಡಿಕೊಂಡು ನಾನೇ ಸರಿ ಎಂದು ವಾದಿಸಿದ ಉದಾಹರಣೆಯಾಗಲಿ ಸಿಗುವುದಿಲ್ಲ (ಕಡೆಯ ದಿನಗಳಲ್ಲಿ ತೇಜಸ್ವಿಗೆ ಇಷ್ಟ ಇಲ್ಲದಿದ್ದರೂ ಕ್ರಿಕೆಟ್ ನೋಡುತ್ತಿದ್ದದ್ದು, ಮೀನಿನ ಕಟ್ಲೆಟ್ಟು ಮಾಡಿ ಮಾಡಿ ಸಾಕಾಗಿ ನೀರಿನಲ್ಲಿ ಮೀನ್ಯಾಕಾದರೂ ಇದೆಯಪ್ಪಾ ಅನ್ನಿಸಿತ್ತು ಅಂತ ಒಮ್ಮೆ ಒಮ್ಮೆ ಹೇಳುವ ತಮಾಷೆಯ ಕಂಪ್ಲೇಂಟು ಬಿಟ್ಟರೆ!). ಎಂ.ಎ. ತತ್ವಶಾಸ್ತ್ರ ಓದಿದ ರಾಜೇಶ್ವರಿ ತನ್ನ ವ್ಯಕ್ತಿತ್ವವನ್ನು ಸಂಪೂರ್ಣವಾಗಿ ತೇಜಸ್ವಿಯ ಪ್ರಖರ ವರ್ಚಸ್ಸಿನ ವ್ಯಕ್ತಿತ್ವದಲ್ಲಿ ಕರಗಿಸಿಕೊಂಡು ಬದುಕಿದ್ದರ ಬಗ್ಗೆ ವಿಷಾದದ ಛಾಯೆ ಎಲ್ಲೂ ಇಣುಕುವುದಿಲ್ಲ. ಯಾವತ್ತೂ ಧನ್ಯತಾ ಭಾವ, ಅರ್ಪಣಾ ಭಾವವೇ ಎದ್ದು ಕಾಣುತ್ತದೆ. ತಾವು ಯಾಕೆ ತಮ್ಮದೇ ಆಸಕ್ತಿಗಳ ಬಗ್ಗೆ ಹೆಚ್ಚು ಗಮನ ಕೊಡಲಿಲ್ಲ ಎಂದು ಬರೆಯುತ್ತಾ ”ಮುಖ್ಯವಾಗಿ ಮನದಾಳದಲ್ಲಿ ‘ನನ್ನ ಗಂಡ ಹೀಗೆಲ್ಲ ಇದ್ದಾನೆ’ ಎನ್ನುವ ಹೆಮ್ಮೆ ಆನಂದವೇ ದೊಡ್ಡದಾಗಿತ್ತು ನನಗೆ” (ಪುಟ ೪೨೮) ಅನ್ನುತ್ತಾರೆ ರಾಜೇಶ್ವರಿ.  ಇನ್ನೊಂದೆಡೆ ”ಉದಯ ರವಿ”ಯಲ್ಲಿ “ಇಬ್ಬರು ಸರಸ್ವತಿ ಸುಪುತ್ರರ ನಡುವೆ ನಾನು ಬದುಕಿದ್ದು, ನನ್ನ ಬಾಳ್ವೆ ಸಾಗಿದ್ದು ನನ್ನ ಬದುಕಿನ ಸಾರ್ಥಕತೆಯ ದೊಡ್ಡ ಹೆಮ್ಮೆ”  ಎಂದು ಉಲ್ಲೇಖಿಸುತ್ತಾರೆ.

ಈ ರಾಜೇಶ್ವರಿಯವರ ಎಂದೂ ಕುಗ್ಗದ ಪ್ರಶಂಸೆಯ, ವಿಮರ್ಶಾರಹಿತ ಆರಾಧನಾ ದೃಷ್ಟಿಕೋನ ವಿಶೇಷವಾಗಿ ಇರುಸುಮುರಿಸು ತರುವುದು ತೇಜಸ್ವಿ ಭಾಗವಹಿಸಿದ ಚಳುವಳಿಗಳು ಮತ್ತು ಕೆಲವು ವಿವಾದಾತ್ಮಕ ಘಟನೆಗಳ ಬಗ್ಗೆ ಇವರು ಬರೆಯುವಾಗ. ಕುದುರೆಮುಖ ಗಣಿಗಾರಿಕೆ ಸಂದರ್ಭದಲ್ಲಿ ತೇಜಸ್ವಿಯ ನಿಲುವು,  ಕುವೆಂಪು ಹಸ್ತಪ್ರತಿ ವಿವಾದ, ರೈತ ಸಂಘ ಮತ್ತು ನವ ನಿರ್ಮಾಣ ಕ್ರಾಂತಿಯ ಸುತ್ತಲಿನ ವಿಷಯ, ವಿವಾದಗಳ ಬಗ್ಗೆ ಬರೆಯುವಾಗ ಒಂದೋ ಸಂಪೂರ್ಣ ತೇಲಿಸಿ ಅಥವಾ ತೇಜಸ್ವಿಯದೆ ಮತ್ತೊಂದು ಕಣ್ಣಿನಂತೆ ರಾಜೇಶ್ವರಿ ನೋಡುವುದರಿಂದ ನಿರಾಸೆಯಾಗುತ್ತದೆ. ಈ ವಿಷಯಗಳ ಬಗ್ಗೆ ರಾಜೇಶ್ವರಿಯವರಿಗೆ ತೇಜಸ್ವಿಯನ್ನು ಅನುಸರಿಸದ ವೈಯ್ಯಕ್ತಿಕ ಅಭಿಪ್ರಾಯ ಏನಾದರೂ ಇದ್ದರೆ ಅದು ಇಲ್ಲಿ ಕಾಣುವುದಿಲ್ಲ. ಉದಾಹರಣೆಗೆ ನವ ನಿರ್ಮಾಣ ಕ್ರಾಂತಿಯ ನಾಯಕತ್ವದ ಬಗ್ಗೆ ಎದ್ದ ವಿವಾದದ ಬಗ್ಗೆ ಮಾತಾಡುತ್ತಾ “ತೇಜಸ್ವಿ ನೊಂದರು. ನಾವು ನೊಂದೆವು”  (ಪುಟ ೨೨೮) ಅನ್ನುತ್ತಾರೆಯೇ ಹೊರತು ತೇಜಸ್ವಿಯ ದೃಷ್ಟಿಕೊನದಿಂದಾಚೆ ಇರಬಹುದಾದ ಯಾವ ಹೊಸ ಹೊಳವೂ ನಮಗೆ ಕಾಣುವುದಿಲ್ಲ.

”ನನ್ನ ತೇಜಸ್ವಿ” ಓದುತ್ತಿರುವಾಗ ಒಮ್ಮೊಮ್ಮೆ ಬರಹಗಾರ್ತಿಗೆ ಅಲ್ಲದಿದ್ದರೂ ಓದುಗರಿಗೆ ತೇಜಸ್ವಿಯ ವ್ಯಕ್ತಿತ್ವ  ಸಿಕ್ಕಾಪಟ್ಟೆ ಸ್ವಕೇಂದ್ರಿತವಾಗಿಯೂ, ಅಸಹನೆ ತುಂಬಿದ್ದಾಗಿಯೂ ತೋರಬಹುದು. ಹೆಂಡತಿಯ ವ್ಯಕ್ತಿತ್ವವನ್ನು ಸಂಪೂರ್ಣ ತಮಗೆ ತಕ್ಕಂತೆ ಹೊಸ ಎರಕದಲ್ಲಿ ಹೊಯ್ದು, ತಿದ್ದಿ, ತೀಡಿಬಿಟ್ಟರಲ್ಲವೇ ಅನ್ನಿಸುತ್ತದೆ. ತಮಗೆ ಇಷ್ಟವಾದ ಕ್ರೋಷಾ ಹಾಕುವಾಗಲೂ (“ಕಸುಬಿಲ್ಲ” ಅನ್ನಿಸಿಕೊಂಡು), ಮನೆಗೆ ಬೀಸೇಕಲ್ಲು ತರುವಾಗಲೂ ಗಂಡನಿಗೆ ಇಷ್ಟವಾಗುತ್ತದೋ ಇಲ್ಲವೋ ಎಂಬ ಯೋಚನೆ ರಾಜೇಶ್ವರಿಯರಿಗೆ ಬರದೆ ಇರುತ್ತಿರಲಿಲ್ಲ! ”ಆ ತೋಟ ತಗೋ, ಈ ಕೆಲಸ ಮಾಡು ಎಂದು ನನಗೆ ಒತ್ತಾಯ ಹೇರಬೇಡ, ನನಗೆ ಬೇಕಾದ ಹಾಗೆ ತಿರುಗಾಡಿ ನನಗೆ ಬೇಕಾದ ಹಾಗೆ ಮಾಡುತ್ತೇನೆ” ಅಂತ ತೇಜಸ್ವಿ “ಬಿರುಸಾಗಿಯೇ” ಹೇಳಿದ್ದನ್ನು (ಪುಟ ೨೪೫) ರಾಜೇಶ್ವರಿ ನೆನೆಯುತ್ತಾರೆ. ಇನ್ನೊಂದು ಪತ್ರದಲ್ಲಿ ತೇಜಸ್ವಿ “ಏನು ರಾಜೇಶ್, ನಿನ್ನ ಉಪಚಾರ ಪ್ರೀತಿಗಳೇ ನನಗೆ ಭಯಂಕರ ಎಡರುಗಲಾಗುತ್ತವೆ. ತಿಳುಕೋ. ಕಾರ್ಯರಂಗವೆಂದರೆ ಜೀವನದೊಂದಿಗೆ ಮುಖಾಮುಖಿ ನಿಲ್ಲುವುದೆಂದರೆ ಅದರಲ್ಲೂ ಈಗ ನಾ ಕೈ ಹಾಕಿದ ಕ್ಷೇತ್ರದಲ್ಲಿ ಅದೊಂದು ಭಯಂಕರ ಕುರುಕ್ಷೇತ್ರ ರಣರಂಗ ಗೊತ್ತಾ. ನೀನೆಲ್ಲೋ ಕಾಡಿನಲ್ಲಿ ಬೆಪ್ಪಾಗಿ ಕೂತುಕೊಂಡು ಯೋಚಿಸುತ್ತಿರಬಹುದು ಅದೇನು ಮಹಾ ಎಂದು…” (ಪುಟ ೧೧೫) ನನ್ನಂಥ ಓದುಗರಿಗೆ ಸ್ವಾರ್ಥದ, ಅಹಮಿಕೆಯ ಧ್ವನಿ ಇದರಲ್ಲಿ ಕಂಡರೂ ರಾಜೇಶ್ವರಿಯವರಿಗೆ ಹಾಗೆ ಅನ್ನಿಸಿದಂತೆ ತೋರುವುದಿಲ್ಲ.

ಈ ಮಾತುಗಳನ್ನೆಲ್ಲಾ ತೇಜಸ್ವಿ ಯಾವ ”ಧ್ವನಿ”ಯಲ್ಲಿ ಹೇಳಿದರೋ ಗೊತ್ತಿಲ್ಲ. ಗೊತ್ತಾಗುವುದಕ್ಕೆ ಸಾಧ್ಯವೂ ಇಲ್ಲ. ಆದರೆ ಈ ಪ್ಯಾಸೆಜುಗಳನ್ನು ಓದಿದಾಗ ನನಗೆ ಲೋಹಿಯಾ ಮಹಿಳೆಯರ ಬಗ್ಗೆ ಮತ್ತು ಸಮಾನ ಸಮಾಜದ ನಿರ್ಮಾಣದಲ್ಲಿ ಅವರ ಪಾತ್ರದ ಬಗ್ಗೆಹೇಳಿದ ಮಾತುಗಳು ನೆನಪಾದದ್ದಂತೂ ಹೌದು. “‘…ಅವತ್ತಿನಿಂದ ಇವತ್ತಿನವರೆಗೆ ಭಾರತೀಯ ಮನಸ್ಸಿನಲ್ಲಿ ತನ್ನ ಪತಿಯ ಶರೀರ, ಮನಸ್ಸು ಅಥವಾ ಆತ್ಮದೊಂದಿಗೆ ತಾದಾತ್ಮ್ಯ ಗೊಂಡಿರುವ” ಮಹಿಳೆಯರು ಇದ್ದ ಹಾಗೆ ಒಬ್ಬ ಗಂಡನೂ ಸಿಗುವುದಿಲ್ಲವಲ್ಲ ಅಂತ “ದ್ರೌಪದಿಯೋ? ಸಾವಿತ್ರಿಯೋ?” ಲೇಖನದಲ್ಲಿ ಹೇಳುತ್ತಾರೆ ಲೋಹಿಯಾ. ಇನ್ನೊಂದೆಡೆ ಕಾಫೀ ಟೇಬಲ್ಲಿನಲ್ಲಿ ಕುಳಿತು ಫ್ರೆಂಚ್ ಕ್ರಾಂತಿಯ ಬಗ್ಗೆ ಮಾತಾಡುತ್ತಿದ್ದ ಗಂಡಸರನ್ನು ನೋಡಿ “ಜಾತಿ, ಲಿಂಗ ಕುರಿತ ಪ್ರತ್ಯೇಕತೆ” ಲೇಖನದಲ್ಲಿ “ನನಗೆ ಮೈ ಉರಿಯತೊಡಗಿತು. ಅಲ್ಲಿ ನೋಡಿದರೆ ಒಬ್ಬ ಶೂದ್ರನಾಗಲಿ, ಹೆಣ್ಣುಮಗಳಾಗಲಿ ಇರಲಿಲ್ಲ. ಇಂಥ ನಿರ್ಜೀವ ಗುಂಪಿನಲ್ಲಿ ನಮ್ಮಂಥ ಗೊಡ್ಡು ಜನರೆಲ್ಲಾ ನೆನ್ನೆಯ ಮೇವನ್ನು ಸುಮ್ಮನೆ ಮೆಲುಕು ಹಾಕುತ್ತಿರುವ ದನಗಳಂತಿದ್ದರು” ಅನ್ನುತ್ತಾರೆ. (ಎರಡೂ ಲೇಖನಗಳ ಅನುವಾದ ”ಸ್ವಾತಂತ್ರದ ಅಂತರ್ಜಲ” ಸಂಕಲನದಲ್ಲಿದೆ.) ಸಹಚರ್ಯ ಎನ್ನುವುದು ಆಧುನಿಕ ಹೋರಾಟಗಾರರ ಮತ್ತು ಚಿಂತಕದ ಬದುಕಿನಲ್ಲೂ ಹದಿಬದೆಯ ಧರ್ಮದ ಚೌಕಟ್ಟನ್ನೂ ಏಕೆ ಮೀರುವುದಿಲ್ಲ ಅನ್ನುವ ಪ್ರಶ್ನೆ ಮನಸ್ಸಿನಲ್ಲಿ “ನನ್ನ ತೇಜಸ್ವಿ” ಓದುವಾಗ ಆಗಾಗ ಏಳುತ್ತದೆ.

ಕೊನೆಯ ದಿನಗಳಲ್ಲಿ ತೇಜಸ್ವಿಯವರಿಗೂ ೫೦ ವರ್ಷ ತನ್ನ ಎಲ್ಲಾ ಚಿತ್ರವಿಚಿತ್ರ ಈಡಿಯೋಸಿಂಕ್ರಸಿಗಳ ನಡುವೆಯೂ ಜೊತೆ ನಿಭಾಯಿಸಿದ ವ್ಯಕ್ತಿಯ ಬಗ್ಗೆ ಮೆಚ್ಚುಗೆ, ಆಶ್ಚರ್ಯ ಎಲ್ಲವೂ ಇದ್ದಂತೆ ತೋರುತ್ತದೆ. ಸಾವಿಗೆ ಕೆಲ ದಿನಗಳ ಮುಂಚೆ “ನೀನು ನನಗೆ ಕಂಪನಿ ಕೊಟ್ಯಲ್ಲೇ ಮಾರಾಯ್ತಿ. ನನಗಂತೂ ಎಲ್ಲವು ಆಶ್ಚರ್ಯವಾಗುತ್ತೆ. ಇವತ್ತು ಈ ತುದಿಯಲ್ಲಿ ನಿಂತು ನೋಡಿದರೆ — ಆ ದಿನ ಭೂತನಕಾಡಿನಲ್ಲಿ ಹುಣ್ಣಿಮೆ ದಿನದಿಂದ ನೆನೆದರೆ — ಆ ತುದಿಯಲ್ಲಿದ್ದಾಗ ನುಗ್ಗುವುದೊಂದೇ. ಆಮೇಲೆ ಏನೇನೆಲ್ಲ ನಡೆಯಿತು ಮಾರಾಯ್ತಿ.” ಅಂದದ್ದನ್ನು ರಾಜೇಶ್ವರಿ ನೆನೆಯುತ್ತಾರೆ.

ಇವತ್ತು ಇಷ್ಟು ಧೀರ್ಘವಾದ ಪುಸ್ತಕವೊಂದನ್ನು ರಾಜೇಶ್ವರಿ ಬರೆದಿರುವುದು ತೇಜಸ್ವಿಯವರಿಗೂ ಆಶ್ಚರ್ಯ ತರುತ್ತಿತ್ತೇನೋ. ಒಮ್ಮೆ ಶಾಂತವೇರಿ ಗೋಪಾಲಗೌಡರು ಮನೆಗ ಬಂದಾಗ ನೀವೇನಾದರೂ ಬರೆಯುತ್ತೀರಾ ಅಂತ ಗೌಡರು ರಾಜೇಶ್ವರಿಯನ್ನು ಕೇಳಿದ್ದರಂತೆ. “ಅವಳೇನು ಬರೀತಾಳೆ, ಮನೆ ಅಗತ್ಯ ಸಾಮಾನಿನ ಪಟ್ಟಿ ಬರೀತಾಳೆ, ಬೇಕಾದರೆ ಸೋಡಚೀಟಿ ಬರೆದಾಳು” ಅಂತ ಅದಕ್ಕೆ ತಾವೇ ಉತ್ತರ ಹೇಳಿ ತೇಜಸ್ವಿ ನಕ್ಕಿದ್ದರಂತೆ. ಆಗ ಯಾವುದೇ ಕಹಿ ಇಲ್ಲದೆ ರಾಜೇಶ್ವರಿಯವರು ತಾವೂ ನಕ್ಕಿದ್ದಾಗಿ ಪುಸ್ತಕದಲ್ಲಿ ದಾಖಲಿಸುತ್ತಾರೆ.

ತೇಜಸ್ವಿಯ ಅತ್ಯಂತ ದೊಡ್ಡ ಫ್ಯಾನ್ ಆಗಿ ಬದುಕಿದ, ಈಗಲೂ ಆಗಿರುವ ರಾಜೇಶ್ವರಿ, “ನನ್ನ ತೇಜಸ್ವಿ” ಬರೆಯುವ ಮೂಲಕ ತೇಜಸ್ವಿಯ ಮಾತನ್ನು ಸುಳ್ಳಾಗಿಸಿರುವುದು ನಿಜವಾಗಿಯೂ ಖುಷಿ ಕೊಡುವ ಸಮಾಚಾರವೆ ಸರಿ!

P.S.: ಮತ್ತೆ ಹೀರೋಗಳ ವಿಷಯದ ಬಗ್ಗೆ ಒಂದು ಮಾತು… ತೇಜಸ್ವಿ “ಸಾಹಿತ್ಯ, ಸಂಸ್ಕೃತಿ, ರಾಜಕಾರಣ” ಎಂಬ ತಮ್ಮ ಲೇಖನದಲ್ಲಿ ತಾನು ಫೋಟೋಗ್ರಾಫಿ ಯಾಕೆ ಆಯ್ಕೆ ಮಾಡಿಕೊಂಡೆ ಅನ್ನುವುದರ ಬಗ್ಗೆ ಮಾತನಾಡುತ್ತಾ ಹೀಗೆ ಹೇಳುತ್ತಾರೆ: “ಫೋಟೋಗ್ರಾಫಿಯಲ್ಲಿ the first discipline is that the photographer cannot be a hero of his statement. ಅವನು ಯಾವಾಗಲೂ ಕ್ಯಾಮರಾ ಹಿಂದೆ ಇರಬೇಕೆ ಹೊರತು ಮುಂದೆ ಹೋಗುವುದಕ್ಕೆ ಆಗುವುದಿಲ್ಲ. Whereas in writing I can be a hero, in photography you can exist only as a perspective, as an interpreter, not as a hero… ಹೀಗೆ ಹಂತಹಂತವಾಗಿ ನನ್ನನ್ನು ನಾನು ಕಳೆದುಕೊಳ್ಳುತ್ತಾ ಬಂದಿರೋದು…” (”ತಲೆಮಾರಿನ ತಳಮಳ” ಸಂಕಲನ) ಹೇಗೆ ಬರೆದ ತೇಜಸ್ವಿಯ ಬಗ್ಗೆ ನಾನು, ನನ್ನಂತವರು, ಅವರ ಹೆಂಡತಿ ಎಲ್ಲರೂ ಸೇರಿ ಎಂತಾ ”mystique” ಬೆಳೆಸಿಬಿಟ್ಟಿದ್ದೇವೆ ಅಲ್ಲವಾ? ಹೇಗೆ ಸಾಹಿತ್ಯ ಲೋಕದಲ್ಲಿ charismatic ಅನ್ನಿಸಿಕೊಳ್ಳುವ ವ್ಯಕ್ತಿಗಳ ಸುತ್ತ ಹುಟ್ಟುವ personality cultಗಳು ಎಲ್ಲಾ ಭಾಷೆಯಲ್ಲೂ ಇದೆಯಾ ಅಥವಾ ಇದು ಕನ್ನಡದಲ್ಲಿಯೇ ಜಾಸ್ತಿಯಾ?

Advertisements

5 ಟಿಪ್ಪಣಿಗಳು »

 1. Girish.S said

  I am a big fan of Thejaswi…have read almost all books of him…syrely i wilL read ‘Nanna Thejaswi’
  written by his wife which will give still more clear picture on his life…

 2. shivasundar said

  ಪ್ರಿಯ ಬಾಗೇಶ್ರೀಯವರೇ,
  ರಾಜೇಶ್ವರಿಯವರ “ನನ್ನ ತೇಜಸ್ವಿ” ಪುಸ್ತಕದ ಬಗ್ಗೆ ತಮ್ಮ ವಿಮರ್ಶೆ ಚೆನ್ನಾಗಿದೆ. ವಾಸ್ತವವಾಗಿ ನೀವು ಪುಸ್ತಕದ ಶಕ್ತಿ ಮತ್ತು ಮಿತಿಗಳ ಬಗ್ಗೆ ಆಸಕ್ತಿಕರವಾದ observationsಗಳನ್ನು ಮಾಡಿದ್ದೀರಿ. ಹೀಗಾಗಿ ಇದು ಕೇವಲ ಪುಸ್ತಕ ವಿಮರ್ಶೆಯ ಚೌಕಟ್ಟಿನಲ್ಲಿ ಕೂರದೆ ಒಂದು ಸಂಸ್ಕೃತಿ ವಿಮರ್ಶೆಯ ಚೌಕಟ್ಟನ್ನು ಪಡೆದುಕೊಂಡಿದೆ. ಅಂಗಡಿ ಸಾಮಾನುಗಳ ಪಟ್ಟಿಯನ್ನು ಬಿಟ್ಟು ರಾಜೇಶ್ವರಿಯವರು ಬೇರೇನೂ ಬರೆಯಲಾರರು ಎಂದು ಕೊಂಡಿದ್ದ ತೇಜಸ್ವಿಯವರ ಊಹೆಗಳನ್ನು ಸುಳ್ಳು ಮಾಡಿ ರಾಜೇಶ್ವರಿಯವರು ತಮ್ಮ ಗಂಡನ ಬಗ್ಗೆ ಇಷ್ಟು ದೊಡ್ಡ ಪುಸ್ತಕವನ್ನೇ ಬರೆದಿರುವುದು ನಿಜವಾಗಿ ಸ್ವಾಗತಾರ್ಹವೇ. ಇದರಲ್ಲಿ ತೇಜಸ್ವಿಯವರ ಬದುಕು ಮಾತ್ರವಲ್ಲದೆ ಅದರ ನೆರಳಿನಂತೆ ಸಾಗಿದ ರಾಜೇಶ್ವರಿಯವರ ಬದುಕಿನ ಮತ್ತು ಅಂದಿನ ಕಾಲಘಟ್ಟದ ರಾಜಕೀಯ-ಸಾಂಸ್ಕೃತಿಕ ತಳಮಳಗಳು ಹಾಗೂ ಅದಕ್ಕೆ ತೇಜಸ್ವಿಯವರು ಪ್ರತಿಕ್ರಿಯಿಸಿದ ರೀತಿ ಎಲ್ಲದರ ದಟ್ಟ ವಿವರಗಳೂ ಸಿಗುತ್ತವೆ.
  ನಿಮ್ಮ ವಿಮರ್ಶೆಯ ಚುಂಗನ್ನು ಹಿಡಿದುಕೊಂಡು ಹೋದರೆ ಇನ್ನು ಒಂದು ಪ್ರಮುಖ ಪ್ರಶ್ನೆಯೆದುರಾಗುತ್ತದೆ. ವಾಸ್ತವವಾಗಿ ತೇಜಸ್ವಿಯವರು ಕರ್ನಾಟಕದ ಪ್ರಮುಖ ಲೋಹಿಯಾವಾದಿ ಚಿಂತಕರು ಮತ್ತು ನಾಯಕರಲ್ಲಿ ಒಬ್ಬರು. ಇಲ್ಲಿ ಚಿತ್ರಿತವಾಗಿರುವುದು ಒಬ್ಬ ಲೋಹಿಯಾವಾದಿಯ ಕೌಟುಂಬಿಕ ಜೀವನ. ಅದರಲ್ಲೂ ಆ ನಾಯಕನ ಸಂಗಾತಿಯೇ ಬರೆದಿರುವ ಜೀವನ ಚಿತ್ರ. ಒಂದು ಚಿಂತನೆ ಅಥವಾ ಚಳವಳಿ ಒಂದು ಪರ್ಯಾಯ ಮೌಲ್ಯ ಸಂಹಿತೆಯನ್ನು ಹುಟ್ಟುಹಾಕುವ ಪ್ರಯತ್ನವೇ ಎಂದು ಅರ್ಥಮಾಡಿಕೊಳ್ಳುವುದಾದರೆ ಆ ಮೌಲ್ಯಗಳು ಚಳವಳಿಯಲ್ಲಿ ಮತ್ತು ನಾಯಕರಲ್ಲಿ ಎಷ್ಟರ ಮಟ್ಟಿಗೆ ಅಂತರ್ಗತವಾಗಿತ್ತು ಎಂಬುದಕ್ಕೆ ಚಳವಳಿಗಾರರ ಕೌಟುಂಬಿಕ ಬದುಕು ಒಂದು ಉತ್ತಮ ನಿಮ್ನ ಮಸೂರವಾಗಿರುತ್ತದೆ. ವಾಸ್ತವವಾಗಿ ಆಂಧ್ರದಲ್ಲಿ ೪೦ರ ದಶಕದ ತೆಲಂಗಾಣ ಚಳವಳಿಯಲ್ಲಿ ಭಾಗವಹಿಸಿದ ಮಹಿಳಾ ಹೋರಾಟಗಾರರ ಕಥನವನ್ನು ದಾಖಲಿಸಿದ ಸೂಸಿ ಥಾರು, ಕೆ. ಲಲಿತಾ ಮತ್ತು ವಸಂತ ಕನ್ನಾಭಿರನ್ ಅಂತ ಮಹಿಳಾವಾದಿಗಳು ಚಳವಳಿಗಾರರ ಕೌಂಟುಂಬಿಕ ಜೀವನದ ಬಗ್ಗೆ ಇಂಥ ಸಾಂಸ್ಕೃತಿಕ ಮತ್ತು ರಾಜಕೀಯ ಮಹತ್ವದ ಪ್ರಶ್ನೆಗಳನ್ನು ಎತ್ತಿದ್ದಾರೆ.
  ನಂತರದಲ್ಲಿ ಮಹಿಳಾವಾದಿ ಚಿಂತನೆ ಬೆಳೆಯುತ್ತಿದ್ದಂತೆ “personal is political” ಎಂಬುದು ಕೂಡಾ ಸ್ಪಷ್ಟಗೊಳ್ಳತೊಡಗಿತು. ಈ ಹಿನ್ನೆಲೆಯಲ್ಲಿ ತೇಜಸ್ವಿಯವರ ಬದುಕು ಅದರಲ್ಲೂ ಅವರ ಕೌಟುಂಬಿಕ ಬದುಕು ಲೋಹಿಯಾವಾದಿ ಚಳವಳಿ ಎಷ್ಟರ ಮಟ್ಟಿಗೆ ಪರ್ಯಾಯ ಮೌಲ್ಯಗಳನ್ನು ಅಳವಡಿಸಿಕೊಂಡಿತ್ತು ಎಂಬುದನ್ನೂ ಸಹ ಅರ್ಥಮಾಡಿಕೊಳ್ಳಲು ಒಂದು ಸಂದರ್ಭವಾಗಬಹುದೇ? ಬಾಳ ಸಂಗಾತಿಯೇ ತೇಜಸ್ವಿಯವರ ಬಗ್ಗೆ ಬರೆದಿದ್ದರೂ ತೇಜಸ್ವಿಯವರ ಬಗೆ ಅದು ಒಂದು ದೃಷ್ಟಿಕೋನವಷ್ಟೆ. ಹೀಗಾಗಿ ಅದನ್ನೇ ಆಧರಿಸಿ ತೇಜಸ್ವಿಯವರ ಬಗ್ಗೆಯಾಗಲೀ, ಲೋಹಿಯಾವಾದಿ ಚಳವಳಿಯ ಮೌಲ್ಯಗಳ ಅಂತರಂಗೀಕರಣದ ಬಗ್ಗೆಯಾಗಲೀ ಅಂತಿಮ ಹೇಳಿಕೆ ಮಾಡಲಾಗುವುದಿಲ್ಲ. ಹಾಗೆ ಮಾಡಲೂ ಬಾರದು. ಆದರೆ ಬಾಳ ಸಂಗಾತಿಯೇ ಬರೆದಿರುವ ಕ್ಟ್ಟೌಟುಂಬಿಕ ಜೀವನದ ವಿವರಗಳಿರುವ ಪುಸ್ತಕವೊಂದು ಆ ನಿಟ್ಟಿನಲ್ಲಿ ಸಾಂಸ್ಖ್ರಿತಿಕವಾಗಿ ಮತ್ತು ರಾಜಕೀಯವಾಗಿ ಮಹತ್ವದ್ದಾಗಿರುವ ಪ್ರಶ್ನೆಗಳನ್ನು ಎತ್ತಲು ಅವಕಾಶವೊಂದನ್ನು ಕೊಡುತ್ತದೆ ಎಂದೆನಿಸುತ್ತದೆ. ಇದು ಕೇವಲ ಲೋಹಿಯಾವಾದಿ ಚಳವಳಿಗಳಿಗೂ ಅನ್ವಯಿಸಬೇಕಾದ ವಿಷಯವೂ ಅಲ್ಲ. ಚಳವಳಿಗಳು ಪರ್ಯಾಯ ಜೀವನ ಮೌಲ್ಯಗಳನ್ನು ಹುಟ್ಟುಹಾಕುವಲ್ಲಿ ವಿಫಲವಾಗಿರುವ ಸಂದರ್ಭದಲ್ಲಿ ಎಲ್ಲಾ ಚಳವಳಿಗಳು ಪುನರ್ ಮನನ ಮಾಡಿಕೊಳ್ಳಬೇಕಾದ ವಿಷಯವೂ ಆಗಿದೆಯಲ್ಲವೇ?
  ಸ್ವಾತಂತ್ರ್ಯ ಚಳವಳಿಯ ಹಿನ್ನೆಲೆಯಲ್ಲಿ ಚಿತ್ರಿಸಲಾದ ಗಿರೀಸ್ ಕಾಸರವಳ್ಳಿಯವರ “ತಾಯಿ ಸಾಹೇಬ” ಚಿತ್ರದಲ್ಲಿ ನಯಕಿ ಜಯಮಾಲಾ ತನ್ನ ಗಂಡ ಮಾಡುತ್ತಿರುವ ಚಳವಳಿಯೇನು ಎಂದು ಅರ್ಥಮಾಡಿಕೊಳ್ಳಲು ಅವನ ಬರಹಗಳನ್ನು ಓದುತ್ತಾ ಅರ್ಥವಾಗದೆ ಆಕಳಿಸುತ್ತಾ ತೂಕಡಿಸುವ ಸನ್ನಿವೇಶವೊಂದು ಬರುತ್ತದೆ. ಅದರ ಸಾಂಸ್ಕೃತಿಕ ಮತ್ತು ರಾಜಕೀಯ ವಿಶ್ಲೇಷಣೆ ಮಾಡುತ್ತಾ ಮನು ಚಕ್ರವರ್ತಿಯವರು ಅದು ಈ ದೇಶದ ಸ್ವಾತಂತ್ರ್ಯ ಚಳವಳಿ ಎಷ್ಟರ ಮಟ್ಟಿಗೆ ಈ ದೇಶದ ಮಹಿಳೆಯನ್ನು ಒಳಗೊಂಡಿತ್ತು ಮತ್ತು ಮಹಿಲಾ ಸಂವೇದನೆಯನ್ನು ಹೊಂದಿತ್ತು ಎಂಬುದನ್ನು ಸಾಂಕೇತಿಕವಾಗಿ ಪ್ರತಿನಿಧಿಸುತ್ತದೆ ಎಂದು ಬರೆದಿದ್ದ ನೆನಪು.
  ಸ್ವಾತಂತ್ರ್ಯಾನಂತರದ ಸಾಮಾಜಿಕ ಚಳವಳಿಗಳು ಎಷ್ಟರ ಮಟ್ಟಿಗೆ ಲಿಂಗ, ಜಾತಿ , ವರ್ಗ ಸಂವೇದನೆಗಳನ್ನು ಹೊಂದಿದ್ದವು ಎಂಬುದು ಸಹ ಈ ಕಾಲಘಟ್ಟದಲ್ಲಿ ಆತ್ಮ ವಿಮರ್ಶಾತ್ಮಕವಾಗಿ ಎಲ್ಲಾ ಚಳವಳಿಗಳು ಎತ್ತಿಕೊಳ್ಳಲೇ ಬೇಕಾದ ಮತ್ತು ಪಾಠ ಕಲಿಯಲೇಬೇಕಾದ ಸಂದರ್ಭವಿದೆ. ಲೋಹಿಯಾರವರ ರಾಜಕೀಯ ಚಿಂತನೆಗಳ ಮಿತಿಗಳೇನೇ ಇದ್ದರೂ ಈ ವಿಷಯದಲ್ಲಿ ಅವರ ಚಿಂತನೆ ಮತ್ತು ಕಾರ್ಯಾಚರಣೆಗಳು ಈ ಎಲ್ಲಾ ಸಂವೇದನೆಗಳನ್ನು ಏಕಕಾಲದಲ್ಲಿ ಒಳಗೊಳ್ಳುವ ಪ್ರಯತ್ನದಲ್ಲಿತ್ತು. ಹಾಗೆ ನೋಡಿದರೆ ಭಾರತದಲ್ಲಿ ಬಿಹಾರವನ್ನು ಬಿಟ್ಟರೆ ಲೋಹಿಯಾ ಚಿಂತನೆ ಅತಿ ಹೆಚ್ಚು ಪ್ರಭಾವ ಬೀರಿರುವುದು ಕರ್ನಾಟಕದ ಸಮಾಜದ ಮೇಲೆ. ಹೀಗಾಗಿ ಅದರ ಪ್ರಮುಖ ನಾಯಕರೊಬ್ಬರ ಕೌಟುಂಬಿಕ ಜೀವನದ ರಾಜಕೀಯ -ಸಾಮಾಜಿಕ ಮೌಲ್ಯಗಳೇನಾಗಿತ್ತು ಎಂಬುದನ್ನೂ ತಾವು ಪರಿಶೀಲಿಸಬಹುದಿತ್ತು ಎಂದು ಅನಿಸಿತು.
  ಮಹಿಳಾವಾದದಿಂದ ಹಾಗೂ ಅದು ಕಾಲ ಕಾಲಕ್ಕೆ ಎತ್ತುತ್ತಿರುವ ಪ್ರಶ್ನೆಗಳಿಂದ ಈಗಲೂ ಪುರುಷಪ್ರಧಾನವೇ ಆಗಿರುವ ಸಾಮಾಜಿಕ ಚಳವಳಿಗಳು ಕಲಿಯಬೇಕಾದದ್ದು, internalise ಮಾಡಿಕೊಳ್ಳಬೇಕಾದದ್ದು, ಬಹಳಷ್ಟಿದೆ. ಅದೇನೇ ಇರಲಿ, ತಮ್ಮ ವಿಮರ್ಶೆ ಆ ನಿಟ್ಟಿನಲ್ಲಿ ಈ ವಿಮರ್ಶೆಯಲ್ಲೂ ತಾವು ಎತ್ತಿರುವ ಹಲವು ಪ್ರಶ್ನೆಗಳ ಬಗೆಗೆ ನನಗೆ ಅತ್ಯಂತ ಸೂಕ್ತವಾಗಿದೆಯೆನಿಸಿತು.

 3. ರವಿಪ್ರಕಾಶ said

  ಬಹಳ ಚೆನ್ನಾಗಿ ಬರೆದಿದ್ದೀರಿ. ವಂದನೆಗಳು.

 4. ರೀ ಭಾಗ್ಯಶ್ರೀ,
  ರಾಜೇಶ್ವರಿಯವರ ಸುತ್ತ ಮಾತಾಡುತ್ತಾ, ತೇಜಸ್ವಿಯವರ ವ್ಯಕ್ತಿತ್ವವನ್ನು ಸರಳವಾಗಿ ಚಿತ್ರಿಸಿದ್ದೀರಿ. ತೇಜಸ್ವಿಯವರು ತೀರಿಕೊಂಡಾಗ, ನಾನೂ ಅವರ ಬಗ್ಗೆ ಒಂದು ಲೇಖನ ಬರೆದು ಇಟ್ಟುಕೊಂಡಿದ್ದೆ. ಇತ್ತೀಚೆಗೆ ಬ್ಲಾಗ್ ನಲ್ಲಿ ಹಾಕಿದೆ.
  ಅದರ ಲಿಂಕ್ ಕಳುಹಿಸಿದ್ದೇನೆ. ಸಮಯವಾದರೆ ಒಮ್ಮೆ ಓದಿ 
  http://www.thirugatada-nenapu.blogspot.in/2011/11/blog-post_6703.html

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: