ಫೈಜ್ ಎಂಬ ಸೂರ್ಯನಿಗೆ ಒಂದು ಟಾರ್ಚು

ಪತ್ರಿಕೆಯಲ್ಲಿ ಕೆಲಸ ಮಾಡುವ ನನಗೆ, ದಿನ ಪತ್ರಿಕೆಯ ಇಂದಿನ ಸುದ್ದಿ ನಾಳೆ ರದ್ದಿಯಾಗುವುದು ಅಭ್ಯಾಸ ಆಗಿದೆ.  ಒಮ್ಮೆ ನನ್ನ “ಭವ್ಯ” ಸ್ಟೋರಿ ಒಂದು ನಾನೇ ಕೊಂಡ ಬಜ್ಜಿಗೆ ಪ್ಯಾಕೆಟ್ ಆಗಿ ಸಿಕ್ಕಿತ್ತು. ಆದರೆ ಪುಸ್ತಕ ಗಿಸ್ತಕ ಪ್ರಕಟಿಸಿ ಅಭ್ಯಾಸ ಇಲ್ಲ ಆದ್ದರಿಂದ ಪುಸ್ತಕ ಅನ್ನುವ ಕಣ್ಣಿಗೊತ್ತಿಕೊಳ್ಳುವ ಸರಸ್ವತಿ ಅಷ್ಟು ಸುಲಭಕ್ಕೆ ರದ್ದಿ ಆಗುವುದುಂಟೇ ಅನ್ನುವ ಭ್ರಮೆ ಇನ್ನೂ ಪೂರ್ತಿ ಬಿಟ್ಟಿಲ್ಲ!

ನಾನು ಅನುವಾದ ಮಾಡಿದ ಫೈಜ್ ಅಹ್ಮದ್ ಫೈಜ್ ಕವನಗಳ ಪುಸ್ತಕ (“ಪ್ರೀತಿ ಮತ್ತು ಕ್ರಾಂತಿ”) ಇತ್ತೀಚಿಗೆ ಬಿಡುಗಡೆ ಆಗಿದೆ. ನನ್ನ ಬಡಪಾಯಿ, ಏಕಾಂಗಿ ಪುಸ್ತಕ ಅಗಣಿತ ಪುಸ್ತಕಗಳ ಮಹಾಸಾಗರದಲ್ಲಿ ಬಿಂದುವಿನಂತೆ ಯಾರೂ ಓದದೆಯೂ ಲೀನವಾದರೆ ಅನ್ನುವ ಭಯದಿಂದ ಸ್ವಲ್ಪ shameless self promotion ಅಂತ ನೀವು ಅಂದುಕೊಂಡರೂ ಪರವಾಗಿಲ್ಲ ಅಂತ ಪುಸ್ತಕದ ನನ್ನ “ಅನುವಾದಕಿಯ ಮಾತು” ಭಾಗವನ್ನು ಇಲ್ಲಿ upload ಮಾಡುತ್ತಿದ್ದೇನೆ. Trailer ನೋಡಿ ಯಾರಾದರೂ ಪುಸ್ತಕ ಕೊಳ್ಳಲು, ಓದಲು inspire ಆಗಬಹುದು ಅನ್ನುವ ಆಸೆಯಿಂದ! ಆಮೇಲೆ ಬೈದುಕೊಂಡರೂ ಪರವಾಗಿಲ್ಲ.

ಸಪ್ನಾ, ನವಕರ್ನಾಟಕ, ಅಂಕಿತ ಮತ್ತು ಪ್ರಕಾಶಕರಾದ ಬಸವನಗುಡಿಯ “ಲಂಕೇಶ್ ” ಆಫೀಸಿನಲ್ಲಿ  ಪುಸ್ತಕ ಸಿಗುತ್ತದೆ. ಲಂಕೇಶ್ ಪ್ರಕಾಶನದ ನಂಬರ್ರು 080-26676427. ಇ-ಮೆಯಿಲ್: lankeshprakashana@gmail.com.

ಪುಸ್ತಕದಿಂದ ಆಯ್ದ ಒಂದೆರಡು ಅನುವಾದಗಳು ಕೊನೆಯಲ್ಲಿ ಇವೆ.

ಯಾವುದೋ ಪಾರ್ಟಿಯಲ್ಲಿ ವ್ಯಕ್ತಿಯೊಬ್ಬ ಫೈಜ್ ನ ಬಳಿ ಬಂದು ತಾನು ಅವರ ಪದ್ಯಗಳನ್ನು ಇಂಗ್ಲಿಶಿಗೆ ಅನುವಾದ ಮಾಡುವುದಾಗಿ ಹೇಳಿದನಂತೆ. ಫೈಜ್ ಅವನ ಮಾತೆಲ್ಲಾ ಕೇಳಿಸಿಕೊಂಡು ಸುಮ್ಮನೆ ಸಣ್ಣ ನಗೆ ನಕ್ಕರಂತೆ. ಆ ವ್ಯಕ್ತಿ ಹೋದ ನಂತರ ಪಕ್ಕದಲ್ಲಿದ್ದ ಗೆಳೆಯರೊಬ್ಬರು ಯಾಕೆ ಹೀಗೆ ಪ್ರತಿಕ್ರಿಯಿಸದೆ ಸುಮ್ಮನಾಗಿಬಿಟ್ಟಿರಿ ಅಂದಾಗ “ಅನುವಾದಕರಿಗೆ ಎರಡರಲ್ಲಿ ಒಂದು ಭಾಷೆಯಾದರೂ ಬರಬೇಕಲ್ಲವಾ?” ಅಂದರಂತೆ. ಹೆಚ್ಚು ಪದಗಳನ್ನು ಪೋಲು ಮಾಡದೆ ಬಹಳ ಹೇಳಿಬಿಡುವುದು ಉರ್ದು ಸಾಹಿತ್ಯಕ್ಕೆ, ವಿಶೇಷವಾಗಿ ಫೈಜ್ ಗೆ, ಸಿದ್ಧಿಸಿದ ಯಕ್ಷಿಣಿ. ಫೈಜ್ ನ ಮಾತನ್ನು ಆ ಪಾಪದ ಅನುವಾದಕ ಪ್ರಾಣಿ ಕೇಳಿಸಿಕೊಳ್ಳದೆ ಇದ್ದದ್ದು ಅವನ ಪುಣ್ಯ!

ಫೈಜ್ ಪದ್ಯಗಳನ್ನು ಅನುವಾದ ಮಾಡುವಾಗ ಬಹಳಷ್ಟು ಸಲ ನನಗೆ ಈ ದೃಷ್ಟಾಂತ ನೆನಪಾಗಿ ನನ್ನ ‘ಜಿಗರ್’ (ಉರ್ದು ಕವಿಗಳು ತುಂಬಾ ಬಳಸುವ ಈ ಪದದ ಲಿಟರಲ್ ಅರ್ಥ ಯಕೃತ್ತು!) ಅಳುಕಿನಿಂದ ಕುಗ್ಗಿದೆ. ಆದರೂ ಭಂಡ ಧೈರ್ಯವೇ ಒಂದು ಹೆಜ್ಜೆ ಮುಂದಾಗಿ ಈ ಪುಸ್ತಕ ನಿಮ್ಮ ಕೈಯ್ಯಲ್ಲಿದೆ. ಪ್ರೀತಿ ಮತ್ತು ಯುದ್ಧದಲ್ಲಿ ಎಲ್ಲವೂ ಮಾಫಿಯಂತೆ. ಇದು ಪ್ರೀತಿಯಿಂದ ಮಾಡಿದ ಕೆಲಸವಂತೂ ಹೌದು. ಮಾಡುತ್ತಾ ಹೋದಂತೆ ಬಹಳಷ್ಟು ಬಾರಿ ಇದು ಗೆಲ್ಲಲಸಾಧ್ಯ ಯುದ್ಧವೇ ಅಂತಲೂ ತೋರಿದ್ದುಂಟು.

ಮೊದಲ ಮುಲಾಕಾತ್

ಫೈಜ್ ಅಹ್ಮದ್ ಫೈಜ್ ನನಗೆ ಮೊದಲು ದೊರಕಿದ್ದು ಅವರ ಪ್ರಖ್ಯಾತ ಕವಿತೆ “ಮೇರೆ ಮೆಹಬೂಬ್ ಮುಝಸೆ ಪೆಹಲೀ ಸಿ ಮೊಹಬ್ಬತ್ ನ ಮಾಂಗ್” ಮೂಲಕ. ನನ್ನ ಕಾಲೇಜು ಗೆಳತಿ ಅಸ್ಮಾ ನಸೀರ್ ಈ ಪದ್ಯವನ್ನು ಅವಳ ಸಹಜ ಭಾವುಕ ಶೈಲಿಯಲ್ಲಿ ಓದಿದಾಗ ಅಷ್ಟೇನೂ ಭಾವುಕಳಲ್ಲದ ನನಗೂ ರೋಮಾಂಚನವಾಗಿದ್ದು  ನೆನಪಿದೆ. ಉರ್ದು ಲಿಪಿ ಓದಲು ಬಲ್ಲ ಅಸ್ಮಾ ನನಗೆ ಒಂದಷ್ಟು ಗಾಲಿಬ್ ಹಾಗೂ ಫೈಜ್ ಪದ್ಯಗಳನ್ನು ಓದಿ ಹೇಳಿದ್ದುಂಟು. ಮತ್ತೆ ನಮ್ಮಿಬ್ಬರಿಗೆ ಶಿವ್ ಕೆ. ಕುಮಾರ್ ಅನುವಾದಿತ ಫೈಜ್ ಕವನ ಸಂಕಲನ  ನಾವು ಅಗ ಕೆಲಸ ಮಾಡುತ್ತಿದ್ದ ಡೆಕ್ಕನ್ ಹೆರಾಲ್ಡ್ ಗ್ರಂಥಾಲಯದಲ್ಲಿ ಅದೃಷ್ಟವಷಾತ್  ಸಿಕ್ಕಿ ಮತ್ತೆ ‘ಕಾಪಿ’ಗಳ ನಡುವಿನ ಸಣ್ಣ ಬಿಡುವುಗಳಲ್ಲಿ ಒಂದಷ್ಟು ಓದಿದ್ದೆವು.

ನನಗೆ ಯಾಕೆ ಮೊದಲ ಭೇಟಿಯಲ್ಲಿಯೇ ಫೈಜ್ ಇಷ್ಟೊಂದು ಆವರಿಸಿಬಿಟ್ಟ ಅಂತ ಈಗ ಹಿಂದಿರುಗಿ ನೋಡಿದಾಗ ೨೦ಕ್ಕೆ ಫೈಜ್ ಇಷ್ಟ ಆಗದೆ ಇರುವುದಕ್ಕೆ ಸಾಧ್ಯವಾ ಅನ್ನಿಸುತ್ತದೆ. ಪ್ರೇಮದ ಬಗ್ಗೆ ಮುಟ್ಟಿದರೆ ಮುದುರೀತು ಅನ್ನುವಷ್ಟು ಕೋಮಲ-ಮಧುರವಾಗಿ ಮತ್ತು ಕ್ರಾಂತಿಯ ಬಗ್ಗೆ ಖಡ್ಗದಷ್ಟು ಕಟ್ಟಿಂಗ್ ಆಗಿ ಬರೆಯಬಲ್ಲ ಕವಿ ಇಷ್ಟ ಆಗದೆ ಇರುವುದು ಕಷ್ಟ. “ಪೆಹಲೀಸಿ ಮೊಹಾಬ್ಬತ್ ನ ಮಾಂಗ್” ನಂತಹ ಕವಿತೆಗಳಲ್ಲಿಯಂತೂ ಫೈಜ್ ಇವನ್ಯಾವ ಮಾಯಕಾರನಪ್ಪ ಅನ್ನಿಸುವ ಹಾಗೆ ಪ್ರೇಮ ಮತ್ತು ರೋಮಾಂಟಿಕ್ ಪ್ರೇಮದಾಚೆಯ ಕ್ರೂರ ಪ್ರಪಂಚ ಎರಡರ ಬಗ್ಗೆಯೂ ಬರೆಯುತ್ತಾನೆ. ಆಧುನಿಕ ಕಾವ್ಯ ಮತ್ತು ಸಾಂಪ್ರದಾಯಿಕ ಉರ್ದು ಕವಿತ್ವದ ಅತಿ ನವಿರು ಪ್ರತಿಮೆಗಳನ್ನು ಒಟ್ಟೊಟ್ಟಿಗೆ ಇಡುತ್ತಾನೆ.

ವೈಯ್ಯಕ್ತಿಕವಾಗಿ, ಕನ್ನಡ ಭಾವಗೀತಗಳ ಪ್ರಪಂಚದ ಮಧ್ಯೆ ಬೆಳೆದು, ಬೆಳೆಯುತ್ತಾ ಹೋದಂತೆ ಅದು ಸ್ವಲ್ಪ ಬೋರ್ ಅಂತಲೂ ಅನ್ನಿಸಿ, ಆದರೂ “ಭಾವಗೀತಾತ್ಮಕತೆ”ಯ ಬಗ್ಗೆ ಆಕರ್ಷಣೆಯನ್ನು ಸಂಪೂರ್ಣ ಕಳಚಿಕೊಳ್ಳದ ನನ್ನಂಥವಳಿಗೆ  ಫೈಜ್ ವಿಶೇಷವಾಗಿ ತಟ್ಟಿದ್ದು ಆಶ್ಚರ್ಯ ಅಲ್ಲವೇನೋ. ಫೈಜ್ ಕವನಗಳು ಏಕಕಾಲದಲ್ಲಿ ನಾನು ಆಗಷ್ಟೇ ಕೇಳಲು ಪ್ರಾರಂಭಿಸಿದ್ದ ಗಜಲ್ಲುಗಳಂತೆಯೂ, ಅವುಗಳನ್ನು ಮೀರಿದಂತೆಯೂ ಇದ್ದವು. ಉರ್ದು ಕಾವ್ಯದ ಪರಂಪರೆಯಲ್ಲಿ ಸಂಪ್ರದಾಯ ಮತ್ತು ಆಧುನಿಕತೆಯ ಪ್ರಪಂಚಗಳನ್ನು ಫೈಜ್ ಹೇಗೆ ಬೆಸೆದ ಅನ್ನುವ ಬಗ್ಗೆ ಫಣಿರಾಜ್ ಸುಧೀರ್ಘವಾಗಿ ಮುನ್ನುಡಿಯಲ್ಲಿ ಬರೆದಿದ್ದಾರೆ. ಅದರ ಪ್ರತಿಫಲನವೋ ಎಂಬಂತೆ ವ್ಯಕ್ತಿ ನೆಲೆಯಲ್ಲಿ ನನ್ನ ಮತ್ತು ನನ್ನಂಥವರ ಮನದೊಳಗೆ  ತಾಕಲಾಡುವ ಎರಡು ಪ್ರಪಂಚಗಳನ್ನೂ ಬೆಸೆಯುವಂಥ ಕವಿ ಫೈಜ್.

ಮರು ಮಿಲನ

ಮತ್ತೆ ನಾನು ಫೈಜ್ ಕವನಗಳನನ್ನು ಓದಲಿಕ್ಕೆ ಶುರು ಮಾಡಿದ್ದು ಹಿರಿಯ ಸ್ನೇಹಿತರಾದ ಎಂ.ಎಸ್. ಪ್ರಭಾಕರ ಅವರು ವಿಕ್ಟರ್ ಕೀರ್ನನ್ ಸಂಪಾದಿಸಿ ಅನುವಾದಿಸಿದ ಫೈಜ್ ಕವನ ಸಂಕಲನವನ್ನು ನನಗೆ ಕೊಟ್ಟ ನಂತರ. ಆ ಪುಸ್ತಕವನ್ನು ಪ್ರಭಾಕರ ಅವರಿಗೆ ಉರ್ದುವಿನ ಪ್ರಖ್ಯಾತ ಬರಹಗಾರ್ತಿ ಇಸ್ಮತ್ ಚುಗ್ ತಾಯ್ ಅವರ ಲಾಹೋರ್ ನ ಸೋದರ ಸೊಸೆ ಅವರ ಮುಂಬೈ ಭೇಟಿಯ ಸಂದರ್ಭದಲ್ಲಿ ಕೊಟ್ಟದ್ದಾದ್ದರಿಂದ ಅದು ಇನ್ನಷ್ಟು ಅಮೂಲ್ಯ.  ಈ ಅಪರೂಪದ ಸಂಕಲನವನ್ನು ಅವರು ನನಗೆ ಕಾಕತಾಲೀಯವಾಗಿ ಫೈಜ್ ನ ೧೦೦ನೆ ಹುಟ್ಟು ಹಬ್ಬದ ವರ್ಷದಲ್ಲಿ (೨೦೧೧) ಕೊಟ್ಟದ್ದು ಇದಕ್ಕೆ ಒಂದು “ನ್ಯೂಸ್ ಪೆಗ್” ಅನ್ನೂ ಒದಗಿಸಿತ್ತು!

ಕೀರ್ನನ್ನನ ಸೂಕ್ಷ್ಮಗ್ರಹಿಕೆಯ ಅನುವಾದ ಮತ್ತು ಫೈಜ್ ನ ಬದುಕು, ಬರಹ ಮತ್ತು ಅವೆರಡರ ಚಾರಿತ್ರಿಕ ಹಿನ್ನೆಲೆಯನ್ನು ವಿಸ್ತೃತವಾಗಿ ಪರಿಚಯಿಸುವ ಮುನ್ನುಡಿ ಫೈಜ್ ನ ಒಟ್ಟು ಕಾವ್ಯ ಪ್ರಪಂಚದ ಪ್ರವೇಶಕ್ಕೆ ಹೊಸ ಬಾಗಿಲನ್ನು ತೆರೆಯುವಂಥದು. ಕೀರ್ನನ್ ತನ್ನ ವಿಸ್ತೃತ ಮುನ್ನುಡಿಯಲ್ಲಿ ಫೈಜ್ ನ ಸಾಹಿತ್ಯಿಕ, ರಾಜಕೀಯ ಜೀವನವನ್ನಷ್ಟೇ ಅಲ್ಲದೆ ಒಟ್ಟಾರೆ ಆ ಚಾರಿತ್ರಿಕ ಕಾಲ ಘಟ್ಟವನ್ನೂ, ಉರ್ದು ಭಾಷೆ-ಸಂಸ್ಕೃತಿ ಬೆಳೆದು ಬಂದ ದಾರಿಯ ಹಿನ್ನೆಲೆಯನ್ನೂ , ಇವುಗಳೆಲ್ಲದರ ನಿಕಟ ಸಂಬಂಧವನ್ನೂ ಬಿಚ್ಚಿಡುತ್ತಾರೆ.

ಫೈಜ್ ನ ಬಿಡಿ ಕವನಗಳನ್ನು ಓದುವುದು ಖುಷಿಯ ಕೆಲಸ. ಮೊದಲ ಬಾರಿ ಒಂದು ಪದ್ಯ ಮತ್ತು ಓದುಗನ ಕಣ್ಣು ಕಲೆತಾಗ ಪದ್ಯದ ಸಂಪೂರ್ಣ ಜಾತಕ, ತಾತ ಮುತ್ತಾತರ ಹಿನ್ನೆಲೆ ಗೊತ್ತಿರಬೇಕಂದಲ್ಲ. ಆದರೆ ದೃಷ್ಟಿ ಸಾಕಷ್ಟು ಹೊತ್ತು ನಿಂತು ಸಂಬಂಧ ಕುದುರಿದ್ದೇ ಆದಲ್ಲಿ ಕಣ್ಣಿನ ಬಣ್ಣ, ನೋಡುವ ಕೋನಗಳಲ್ಲಿ ಕವನ ಹುಟ್ಟಿ ಬಂದ ಬಿರಾದರಿಯ ಛಾಯೆ ಕಾಣದಿರುವುದೂ ಇಲ್ಲ. ಅಂತೆಯೇ ಪದ್ಯದ ಕಣ್ಣ ಕನ್ನಡಿಯಲ್ಲಿ ಓದುಗ ತನ್ನನ್ನು ತಾನು ಕೂಡ ಕಂಡುಕೊಳ್ಳುತ್ತಾನೆ ಅಲ್ಲವೇ? ಈ ಎಲ್ಲ ಛಾಯೆಗಳ ಪರಿಚಯ ಓದಿನ ಅನುಭವವನ್ನು ಹೆಚ್ಚು ಗಾಢ ಮತ್ತು ಸಂಕೀರ್ಣವನ್ನಾಗಿಸುತ್ತದೆ.

ಒಟ್ಟಿನಲ್ಲಿ ಎರಡನೇ ಭೇಟಿಯಲ್ಲಿ ನನಗೆ ಪರಿಚಯವಾದ ಫೈಜ್ ಪ್ರೀತಿ ಮತ್ತು ಕ್ರಾಂತಿಯ ಬಗ್ಗೆ “ವಾವ್” ಅನ್ನಿಸುವ ಸಾಲುಗಳನ್ನು ಬರೆದ ಕವಿಯಷ್ಟೇ ಅಲ್ಲದೆ ಇನ್ನಷ್ಟು ಸಮಗ್ರವಾಗಿ ದಕ್ಕಿದ ವ್ಯಕ್ತಿ. ಆತನ ರಾಜಕೀಯ ನಿಲುವುಗಳು, ಪ್ರಭುತ್ವದ ಜೊತೆ ಅವುಗಳ ತಾಕಲಾಟ, ಸ್ವಾತಂತ್ರ, ನಂತರದ ಹತಾಶೆಗಳು, ಸೆರೆವಾಸ, ಸರ್ಕಾರದ ರಾಯಭಾರಿಯಾಗಿದ್ದ ಕಾಲ, ದೇಶ ಬಿಟ್ಟು ಹೊರೆಗೆ ಅಲೆಯಬೇಕಾಗಿ ಬಂದ ಸಂದರ್ಭ, ಕೊನೆಯ ದಿನಗಳಲ್ಲಿ ಮತ್ತೆ ದೇಶಕ್ಕೆ ಬಂದದ್ದು, ಪ್ರೇಮ,  ಮದುವೆ, ಸಂಸಾರ… ಜೊತೆ ಫೈಜ್ ನ ವಿಶಾಲ ಅನುಭವದ ಪ್ರಪಂಚದ ಘಟ್ಟಗಳ ಸಜೀವ ಪ್ರತಿಫಲನವನ್ನು ಇವರ ಪದ್ಯಗಳಲ್ಲಿ ಕಾಣುತ್ತೇವೆ. ಕವಿಯ ಜೀವನ ಮತ್ತು ಕಾವ್ಯಕ್ಕೆ ನೇರ ಸಮೀಕರಣ ಮಾಡುವ ಅರ್ಥದಲ್ಲಿ ಅಲ್ಲ. ಫೈಜ್ ನ ಅತ್ಯಂತ ಸಫಲ ಕವನಗಳು ಜೀವನ ಅನುಭವದ ವಿವಿಧ ಬಣ್ಣಗಳಲ್ಲಿ ಮಿಂದು ಮಿಂಚುವ ಜೀವಂತ ಮೂರ್ತಿಗಳಾಗಿ ಕಾಣುತ್ತವೆ ಅನ್ನುವ ಅರ್ಥದಲ್ಲಿ.

ಫೈಜ್ ೪೦ರ ದಶಕದಿಂದ ೧೯೮೪ರ ವರೆಗೆ ಪ್ರಕಟಿಸಿದ ಎಂಟು ಕವನ ಸಂಕಲಗಳಲ್ಲಿ  ಅವರ ಜೀವನದ ಮತ್ತು ಪಾಕೀಸ್ತಾನದ ರಾಜಕೀಯದ ಪ್ರಮುಖ ಘಟ್ಟಗಳನ್ನು ಗುರುತಿಸಬಹುದು. ಉದಾಹರಣೆಗೆ ೧೯೪೧ರಲ್ಲಿ ಪ್ರಕಟವಾದ “ನಕ್ಶ್-ಎ-ಫರ್ಯಾದಿ” (ಫಿರ್ಯಾದಿಯ ಚಿತ್ರಣ) ಆಗಿನ್ನೂ ಕವನದಲ್ಲಿ ರಾಜಕೀಯ ನುಸುಳುತ್ತಿರುವ ದಿನಗಳ ಸಂಕಲನ. “ದಸ್ತ್ -ಎ-ಸಬಾ” (ತಂಗಾಳಿಯ ಬೆರಳು) ೧೯೫೩ರಲ್ಲಿ ಬರುವಷ್ಟರಲ್ಲಿ ದೇಶದ ರಾಜಕಾರಣ ಕಾವ್ಯದ ಪ್ರಥಮ ವಸ್ತುವಾಗಿತ್ತು. ೧೯೫೬ರ “ಝಿಂದಾನ್ ನಾಮಾ” ಹೆಸರೇ ಸೂಚಿಸುವಂತೆ (ಝಿಂದಾನ್ ಅಂದರೆ ಸೆರೆಮನೆ) ಸೆರೆವಾಸದ ಸಂದರ್ಭದ ಕವನಗಳು…. ಮತ್ತೆ ೧೯೮೧ರ “ಮೆರೆ ದಿಲ್ ಮೆರೆ ಮುಸಾಫಿರ್” (ನನ್ನ ಮನವೆಂಬ ಪಯಣಿಗ) ಜಿಯಾ-ಉಲ್-ಹಕ್ ಸರ್ವಾಧಿಕಾರಿ ಆಡಳಿತದಲ್ಲಿ ಸ್ವಯಂ ಗಡೀಪಾರು ಮಾಡಿಕೊಂಡು ಬೈರೂತ್ ನಲ್ಲಿ ಕಳೆದ ದಿನಗಳಲ್ಲಿ ಪ್ರಕಟವಾದದ್ದು. ಆ ಸಂಕಲನ ಯಾಸಿರ್ ಅರಾಫಾತ್ ಗೆ ಅರ್ಪಿತವಾಗಿದೆ. ೧೯೮೪ರ “ಗುಬರ್-ಎ-ಅಯ್ಯಾಂ” (ದಿನಗಳೆಬ್ಬಿಸಿದ ಧೂಳು) ಅಂತಿಮ ದಿನಗಳ ಕವನಗಳು. ಹೀಗೆ…

ಪ್ರೀತಿಯ ಕಾಮನಬಿಲ್ಲು

ಈ ಎಲ್ಲ ಸಂಕಲನಗಳಲ್ಲಿ ಒಂದು ಪ್ರಧಾನ ಧಾರೆಯಾಗಿ ಪ್ರೀತಿಯ ಬಗ್ಗೆ ಕವನಗಳಿವೆ. ಈ ಪ್ರೀತಿ ವಿವಿಧ ಕಾಲಗಳಲ್ಲಿ ಪಡೆದುಕೊಳ್ಳುವ ವಿವಿಧ ರಂಗುಗಳು (ಫೈಜ್ ಅನುಭವ, ಭಾವನೆಗಳನ್ನು ಬಣ್ಣಗಳ ಮೂಲಕ ಬಣ್ಣಿಸುವುದು ಹೆಚ್ಚು) ಒಂದು ಪ್ರತ್ಯೇಕ ಅಧ್ಯಯನಕ್ಕೆ ಯೋಗ್ಯವಾದ ವಿಷಯ. ಉರ್ದು ಸಾಹಿತ್ಯದಲ್ಲಿ ಡಾಳಾಗಿ   ಬಳಸುವ ಪ್ರತಿಮೆಗಳನ್ನೇ ಬಳಸಿ ಬರೆದ “ಆಗ…”ದಂತಹ ಬೇಕಾದಷ್ಟು ಚಾರ್ಮಿಂಗ್ ಪ್ರೇಮ, ವಿರಹ, ಮಿಲನದ ಬಗೆಗಿನ ಕವನಗಳನ್ನು ಫೈಜ್ ಬರೆದಿದ್ದಾರೆ. “ಮೇರೆ ಮೆಹಬೂಬ್”ನಂತಹ ಪದ್ಯಗಳಲ್ಲಿ ವ್ಯಕ್ತಿ ಸಮಾಜಮುಖಿಯಾದಂತೆ ಪ್ರೀತಿಯ ರೀತಿಯೂ ಬದಲಾಗಬೇಕು ಅನ್ನುವ ದನಿಯಿದ್ದರೆ, “ಪ್ರತಿದ್ವಂದ್ವಿ”ಯಲ್ಲಿ ಪ್ರೀತಿಯೇ ವ್ಯಕ್ತಿಯೊಬ್ಬನನ್ನು ಸಮಾಜಮುಖಿಯಾಗಿಸಿವ ಬಗೆಯನ್ನು ಬಿಂಬಿಸುತ್ತದೆ. ಇನ್ನೂ ವಿಶೇಷವೆಂದರೆ ಪ್ರೀತಿಯ ಮಾತಾಡುತ್ತ ಆಡುತ್ತಲೇ ಅದೇ ಪ್ರತಿಮೆಗಳನ್ನು ಬಳಸಿ ಸಮಾಜದ ಬಗೆಗೋ, ಸಮುದಾಯಗಳ ನಡುವಿನ ಪ್ರೀತಿ ದ್ವೇಷಗಳ ಬಗ್ಗೆಯೂ ಪದ್ಯವನ್ನು ನಡೆಸಿಕೊಂಡು ಹೋಗುವ ಫೈಜ್ ನ ಬಗೆ. ೧೯೭೪ರ ಬಾಂಗ್ಲಾದೇಶ್ ಭೇಟಿಯ ನಂತರ ಬರೆದ “ಮತ್ತೆ ಎಂದು?” ಅಥವಾ ಭಾರತ ಪಾಕೀಸ್ತಾನದ ಯುದ್ಧದ ಸಂದರ್ಭದಲ್ಲಿ ಬರೆದ “ಬ್ಲಾಕ್ ಔಟ್” ಇತ್ಯಾದಿ ಕವನಗಳು ಫೈಜ್ ನ ಈ ಶೈಲಿಗೆ ಉದಾಹರಣೆಗಳು. ಇದು “ರಾಜಕೀಯ” ಪದ್ಯ ಇದು “ವೈಯ್ಯಕ್ತಿಕ” ಪ್ರೇಮದ ಕವನ ಅಂತ ವಿಭಜನೆಯೇ ಅನೇಕ ಬಾರಿ ಕಷ್ಟ. ಫೈಜ್ ನ ಅತ್ಯುತ್ಕೃಷ್ಟ ಪದ್ಯಗಳು ವೈಯ್ಯಕ್ತಿಕ-ಸಾರ್ವಜನಿಕ ಅನ್ನುವ ಬೇಧ ಅಳಿಸಿ, ಗಂಟಲಲ್ಲಿ ಹುಟ್ಟದೆ ನಾಭಿಯಿಂದ ಎದ್ದು ಬಂದಂತೆ ತೋರುತ್ತವೆ. ಫೈಜ್ ಕಾವ್ಯದ ಈ ವಿಶೇಷತೆಯನ್ನು ಸಂಕಲನದ ಬೆನ್ನುಡಿಯಲ್ಲಿ ರೆಹಮತ್ ತರಿಕೆರೆ ಅಂತರಂಗ ಮತ್ತು ಬಹಿರಂಗ ಅಭಿನ್ನ ಎಂಬ ಬಸವಣ್ಣನ ತತ್ವಕ್ಕೆ ಹೋಲಿಸಿದ್ದಾರೆ.

ಪ್ರಸಿದ್ಧ ಕವಿಗಳಾದ ಅಹ್ಮದ್ ಫಾರಾಜ್ ಮತ್ತು ಇಫ್ತೆಕರ್ ಆರಿಫ್ ನಡೆಸಿ ಕೊಟ್ಟ ಟೀವೀ ಸಂದರ್ಶವೊಂದರಲ್ಲಿ (ಇದರ ಭಾಗಗಳು ಯೂ-ಟ್ಯೂಬ್ ನಲ್ಲಿ ಇದೆ) ಹೊಸ ಬರಹಗಾರರಿಗೆ ನಿಮ್ಮ ಕಿವಿ ಮಾತು ಏನು ಅಂತ ಕೇಳಿದಾಗ ಫೈಜ್ “ಲಿಖೋ ಜೋ ದಿಲ್ ಪೆ ಗುಜ್ರೀ ಹೈ” ಅನ್ನುತ್ತಾರೆ. ಬೇರೆ ಯಾರಾದರೂ ಹೇಳಿದರೆ ಕ್ಲೀಷೆ ಅನ್ನಿಸಬಹುದಾದ ಈ ಮಾತು ಫೈಜ್ ಜೀವನಾನುಭವದ ಮತ್ತು ಅವರ ಕಾವ್ಯಾಭಿವ್ಯಕ್ತಿಯ ಹಿನ್ನೆಲೆಯಲ್ಲಿ ನಿಜವಾಗಿಯೂ ಎದೆ ಹೊಕ್ಕು ಬಂದ ಮಾತಾಗಿ ತೋರುತ್ತದೆ.  ಇದೇ ಸಂದರ್ಶನದಲ್ಲಿ ತನ್ನ ಪ್ರಿಯ ಕವಿ ಗಾಲಿಬ್ ಬಳಸುವ ಪ್ರತಿಮೆಯನ್ನು ಬಳಸಿ, ಕವಿಯೊಬ್ಬ ತಾನು “ದರಿಯಾ”ದ (ಸಮುದ್ರ/ದೊಡ್ಡ ನದಿ) ಒಂದು “ಕತ್ರಾ” (ಬಿಂದು) ಅನ್ನುವ ಮಾತು ಮರೆಯಬಾರದು ಅನ್ನುತ್ತಾರೆ ಫೈಜ್. ಈ “ಬುನಿಯಾದೀ” ವಿಷಯದ ಅರಿವಿರದಿದ್ದರೆ ಯಾವ “ಕಾರಿಗರೀ”ಯೂ (ಕುಶಲ ಕೆಲಸ) ಕೆಲಸಕ್ಕೆ ಬರುವುದಿಲ್ಲ ಎಂಬ ಎಚ್ಚರಿಕೆ ನೀಡುತ್ತಾರೆ. ಗಾಲಿಬ್ ನ  ಪ್ರತಿಮೆಯನ್ನು ಇನ್ನಷ್ಟು ವಿಸ್ತೃತವಾಗಿ ಬಳಸಿ ಕಾವ್ಯ ಮತ್ತು ಜೀವನದ ಸಂಬಂಧದ ಬಗ್ಗೆ “ದಸ್ತ್-ಎ-ಸಬಾ” ಸಂಕಲನದ ಮುನ್ನುಡಿಯಲ್ಲೂ ಫೈಜ್ ಬರೆದಿದ್ದಾರೆ (ಇದರ ಪೂರ್ಣ ಪಾಠ ಸಂಕಲನದ ಕೊನೆಯಲ್ಲಿದೆ.).  ಕಾವ್ಯ ಕೇವಲ ಮನೆಯನ್ನು ಚೆಂದ ಮಾಡುವ ಅಲಂಕಾರದ ವಸ್ತು ಮಾತ್ರ ಆಗಿರದೆ ಕಟ್ಟಡದ ಮೂಲ ದ್ರವ್ಯಗಳಾದ ಇಟ್ಟುಗೆ, ಮರಳು, ಕೂಲಿಯ ದೈಹಿಕ ಶ್ರಮಗಳಂತೆ ಸಮಾಜನ್ನು ಕಟ್ಟುವ ಪ್ರಕ್ರಿಯೆಯಲ್ಲಿ ಪ್ರಮುಖ ಪಾತ್ರವಹಿಸುವಂಥದು ಅನ್ನುವ ಮಾತನ್ನು ಫೈಜ್ ಅನೇಕ ಸಂದರ್ಭಗಳಲ್ಲಿ ಒತ್ತಿ ಹೇಳಿದ್ದಾರೆ.

ಹಾಗಂತ  ಫೈಜ್ ಕವಿತೆಗಳು ಸಾಮಾಜಿಕ ಭದ್ದತೆಯ ಘೋಷಣೆಗಳಲ್ಲ. ಕಾವ್ಯವು ಕೇವಲ ಉಪದೇಶದ ಬಡಬಡಿಕೆಯಾಗುವ ಅಥವಾ ಬಾಹ್ಯ ಸತ್ಯಗಳು ಒಳಗಿನ ಆತ್ಮದೊಡಲಲ್ಲಿ ಹುಟ್ಟಿ ಬೆಳಯದೆ ಕೇವಲ ಪ್ರತಿಫಲಿಸುವ ಕನ್ನಡಿ ಮಾತ್ರ ಆಗಿಬಿಡುವ ಅಪಾಯವನ್ನು ಫೈಜ್ ಮನಗಂಡಿದ್ದರು. ಕೀರ್ನನ್ ತಮ್ಮ ಮುನ್ನುಡಿಯಲ್ಲಿ ಬರೆಯುವಂತೆ ಫೈಜ್ ಮನೋವೃತ್ತಿಯಲ್ಲಿ ಸಾಮಾಜಿಕ ಪ್ರಜ್ನೆ ಮತ್ತು ಕಾವ್ಯಾನುಭೂತಿ ಎರಡೂ ಸದಾ ಎಚ್ಚರದ ಸ್ಥಿತಿಯಲ್ಲಿ ಕಾವ್ಯದ ಆರೋಗ್ಯದ ಸಂಕೇತಗಳಂತೆ ಇದ್ದವು. ಈ ಎಚ್ಚರ “ಚಳವಳಿಗಳ ಬಿರುಗಾಳಿಗಳು ಫೈಜ್ ನನ್ನು ಹಾರಿಸಿಕೊಂಡು ಹೋಗದಂತೆ ನೋಡಿಕೊಳ್ಳಲೂ ಕೂಡ ಪೂರಕವಾಯಿತು” ಅನ್ನುತ್ತಾರೆ ಕೀರ್ನನ್.

ಈ ಕಾರಣದಿಂದಲೇ ಫೈಜ್ ಹೇಳುವ ನಾಳಿನ ಬಗೆಗಿನ “ಭರವಸೆ”ಯ ಮಾತುಗಳು ಅವರ ಸಫಲ ಪದ್ಯಗಳಲ್ಲಿ (ಹಾಗಲ್ಲದ ಕೆಲವೂ ಇವೆ ಅನ್ನುವುದು ಬೇರೆ ಮಾತು) ನಮ್ಮಂತ ೨೧ನ ಶತಮಾನದ ಮಹಾ ಸಿನಿಕರಿಗೂ ಟೊಳ್ಳು ಅನ್ನಿಸುವುದಿಲ್ಲ. ಸೆರೆ ಮನೆಯಲ್ಲಿ ಬರೆದ “ಒಹ್! ದೀಪಗಳ ಆ ನಗರ!” ಅಥವಾ “ಸೆರೆಮನೆಯಲ್ಲೊಂದು ಸಂಜೆ”ಯಂತಹ ಪದ್ಯಗಳಲ್ಲಿ “ಯು ಹ್ಯಾವ್ ನಥಿಂಗ್ ಟು ಲೂಸ್ ಬಟ್ ಯುವರ್ ಚೈನ್ಸ್” ಅನ್ನುವಂತೆ ಭರವಸೆ ಹುಟ್ಟಿ ಬರುತ್ತದೆ. ಜೊತೆ ಜೊತೆಗೆ ಅನೇಕ ಪದ್ಯಗಳಲ್ಲಿ ಈ ಭರವಸೆ ಟೊಳ್ಳಾದ,  ಟೊಳ್ಳಾಗಬಹುದಾದ ಅಥವಾ ಭರವಸೆಯೇ ಇಲ್ಲದ ಪರಿಸ್ಥಿತಿ ತಲುಪುವ ಸಾಧ್ಯತೆಯ ಅರಿವೂ ಇದ್ದೆ ಇದೆ. “ನಾವು ಹೀಗೆ” ಪದ್ಯ ಈ ಅರಿವಿಗೆ ಒಂದು ಉದಾಹರಣೆ.

ಅಲ್ಲದೆ ಭರವಸೆಯ ಬಗ್ಗೆಯೂ, ಭರವಸೆ ಇಲ್ಲದ ಸ್ಥಿತಿಯ ಬಗ್ಗೆಯೂ ಅಷ್ಟು ಮೋಡಿಯ ಭಾಷೆಯಲ್ಲಿ ಫೈಜ್ ಬಿಟ್ಟು ಇನ್ಯಾರಿಗೆ ಹೇಳಲಿಕ್ಕೆ ಸಾಧ್ಯ? “ರಾತ್ರಿ ಕೋಟೆಗೆ ಕನ್ನ ಕೊರೆವ ತಂತ್ರ ಮರೆಯದಿರಲಿ ಆಸೆಗಳ ಸೈನ್ಯ./ ನಿನ್ನ ಪ್ರಿಯ ಲೈಲಾರಿಗೆಲ್ಲ ಒಳ್ಳೆಯದಾಗಲಿ, ಹೇಳವರಿಗೆ ಒಂದು ಮಾತು/ ಇಂದು ರಾತ್ರಿ ದೀಪ ಹಚ್ಚಿದಾಗ ಎತ್ತರವಿರಲಿ ಬತ್ತಿ, ಪ್ರಖರವಿರಲಿ ಬೆಳಕು” ಸಾಲುಗಳಲ್ಲಿ ಕಾಣುವುದು ಎಚ್ಚರಿಕೆಯ ಕೈ ಹಿಡಿದೇ ನಡೆಯುವ ಆಶಾವಾದ. ಜೈಲಿನಲ್ಲಿ ಕೂತ ವ್ಯಕ್ತಿ ದೂರದಲ್ಲಿ ಕಾಣುವ ಲಾಹೋರಿನ ಬಗ್ಗೆ ಬರೆದ ಈ ಪದ್ಯದ ಇಮೇಜುಗಳು ಮತ್ತು ಕೊನೆಯ ಸಾಲಿನಲ್ಲಿ ಪ್ರೀತಿಯ ಸಂಕೇತ ಲೈಲಾಳನ್ನು ಸ್ವಾತಂತ್ರ್ಯದ ಆಶಾವಾದದ  ಸಂಕೇತವನ್ನಾಗಿಸುವುದು ಫೈಜ್ ನ ವಿಶಿಷ್ಟ ಶೈಲಿಗೆ ಉದಾಹರಣೆ.

ಕೀರ್ನನ್ ಹೇಳುವಂತೆ ಕಾವ್ಯ ಎನ್ನುವುದು ಪದ ಪದಗಳನ್ನೂ ನಿಕಷಕ್ಕೆ ಒಡ್ಡುವ ಕಲೆ ಎಂದು ಅರಿತ ಫೈಜ್ ಕುಸುಬಿಷ್ಟೆಯ ತಿಕ್ಕಿ ತೀಡಿ ಹೊಳೆಸುವ ಕಸುಬುದಾರ (“ರೆವೈಸರ್ ಮತ್ತು ಪಾಲಿಶರ್”) ಕೂಡ. ತನ್ನ ಕೊನೆಯ ಅಪೂರ್ಣ ಪದ್ಯ “ಅಗ್ನಿ ಪರೀಕ್ಷೆಯಲ್ಲಿ” ಕಾವ್ಯದ ಕಸುಬು ಎಂಬುದು ಪದಗಳನ್ನು ನೆರೆದ ಜನರ ಮುಂದೆ ಕತ್ತಿಯ ಅಲುಗಿನ ಮೇಲೆ ನೃತ್ಯ ಮಾಡಿಸುವ ಕೆಲಸದಂತೆ ಅನ್ನುತ್ತಾರೆ ಫೈಜ್. ಅವರ ಅತ್ಯುತ್ತಮ ಪದ್ಯಗಳಲ್ಲಿ ನೃತ್ಯಗಾತಿಯ ಲಾಲಿತ್ಯ ಮತ್ತು ಖಡ್ಗದಂಚಿನ ಮೊನಚು ಎರಡೂ ಜೊತೆ ಜೊತೆಗೆ ಕಾಣುತ್ತವೆ. ಇವರು ಜೈಲಿನಲ್ಲಿ ಬರೆದ ಪದ್ಯಗಳಲ್ಲಿ ವಿಶೇಷವಾಗಿ ಈ ರೀತಿ ತೀವ್ರ ಸಾಮಾಜಿಕ ಕಳಕಳಿ, ಆತ್ಮಾವಲೋಕನ ಮತ್ತು ಚೆಂದದ ಕುಸುರಿ ಮೇಳೈಸಿವೆ. ತೀವ್ರ ಸಂವೇದನಾಶೀಲ ಮನಸ್ಸೊಂದು ಸೆರೆಮನೆಯಲ್ಲಿ ಸೃಜನಶೀಲ ಅಭಿವ್ಯಕ್ತಿ ಪಡೆದ ಬಗೆ — ಅಂದರೆ ಅಲ್ಲಿ ಹುಟ್ಟುವ ಏಕಾಂಗಿತನ, ಹಂಬಲಿಕೆ, ಪ್ರತಿರೋಧ ಇವೆಲ್ಲವೂ ಕೇವಲ ವ್ಯಕ್ತಿ ನೆಲೆಯಲ್ಲಿ ಮಾತ್ರವಲ್ಲದೆ ಸಾಮಾಜಿಕ ಮತ್ತು ರಾಜಕೀಯ ಆಯಾಮವನ್ನು ಪಡೆದುಕೊಳ್ಳುವ ರೀತಿ — ಕನ್ನಡ ಓದುಗಳಾಗಿ ನನಗೆ ಅಪರೂಪ ಮತ್ತು ವಿಶೇಷ ಅನ್ನಿಸಿತು.

ಇಷ್ಟೆಲ್ಲಾ ಹೇಳುವಾದ ನನಗೆ ಫೈಜ್ ಜೊತೆ ಇರುವ ಜಗಳದ ಬಗ್ಗೆಯೂ ಹೇಳಿಬಿಡಬೇಕು. ಬದಲಾವಣೆಯ ಗಾಳಿ, ಬಿರುಗಾಳಿಯ ಬಗ್ಗೆ ಇಷ್ಟೆಲ್ಲಾ ಬರೆದ ಫೈಜ್ ನ ಕಾವ್ಯದಲ್ಲಿ ಸ್ತ್ರೀಯರು ಈ ಬದಲಾವಣೆಯ ಗಾಳಿಗೆ ಒಡ್ಡಿಕೊಂಡು ಹೊಸ ಮನುಷ್ಯರಾಗುವುದು ಕಡಿಮೆಯೇ. ಫೈಜ್ ರ ನೇರ ಸ್ತ್ರೀ ಚಿತ್ರಣವಾಗಲೀ, ಒಂದು ಸಾಹಿತ್ಯಿಕ ಸಾಧನವಾಗಿ ಕಟ್ಟುವ ಸ್ತ್ರೀ ಪ್ರಪಂಚ-ಸಂಬಂಧೀ ಪ್ರತಿಮೆಗಾಗಲಿ ಸಂಪ್ರದಾಯದ ಚೌಕಟ್ಟನ್ನು ಮೀರುವುದಿಲ್ಲ. ಇಲ್ಲಿನ ಸ್ತ್ರೀಯರು ಮೃದು ಬೆರಳುಗಳಿಂದ ಮಧುರ ನೋವು ಮೀಟುತ್ತ ಕನಸಿನ ಲೋಕದಲ್ಲಿ ವಿಹರಿಸುವವರು. “ಅರ್ಪಣೆ” ಅಥವಾ “ಲೆನಿನ್ ಗ್ರಾಡ್ ಯೋಧನ ಗೋರಿ” ಯಂತಹ ಕವನಗಳಲ್ಲಿ ಶೋಷಣೆಗೊಳಗಾದ ಬಡ ಸ್ತ್ರೀಯ, ಮರುಗುವ ಅಮ್ಮನ ಚಿತ್ರಣಗಳು ಬರುವುದುಂಟು. ಆದರೆ ಇಲ್ಲಿಯೂ ಇವರಿಗ್ಯಾರಿಗೂ ”ಏಜೆನ್ಸಿ” (ಸಕ್ರಿಯ ಪಾತ್ರ) ಇಲ್ಲ. ಐವತ್ತರ ದಶಕದಲ್ಲಿ ಕೈಫಿ ಅಜ್ಮಿ ಬರೆದ “ಔರತ್”ನಂತಹ ಪದ್ಯಗಳು ಫೈಜ್ ನ ಕಾವ್ಯ ಕಣಜದಲ್ಲಿ ಕಾಣುವುದಿಲ್ಲ ಅನ್ನುವುದು ಸ್ವಲ್ಪ ಸೋಜಿಗದ ವಿಷಯವೇ. ವಿಶಾಲವಾದ ಅರ್ಥದಲ್ಲಿ ಅಜ್ಮಿ ಮತ್ತು ಫೈಜ್ ಒಂದೇ ಸಾಹಿತ್ಯ ಮತ್ತು ರಾಜಕೀಯ ಸಂಪ್ರದಾಯದಿಂದ ಬಂದವರು.

ಕನ್ನಡದತ್ತ…

ಫೈಜ್ ಪದ್ಯಗಳನ್ನು ನಾನು ಕನ್ನಡಕ್ಕೆ ಅನುವಾದಿಸಲು ಶುರು ಮಾಡಿದ್ದು ಏನೋ ಒಂದು ಖಯಾಲಿಯಲ್ಲಿ. ಕೆಲವು ತುಂಬಾ ಇಷ್ಟವಾದ ಕವಿತೆಗಳನ್ನು ಅನುವಾದಿಸಿ ನಾನು ಯಾವಾಗಲೋ ಮನಸ್ಸು ಬಂದಾಗ ಆಪ್ ಡೇಟ್ ಮಾಡುವ ನನ್ನ ಬ್ಲಾಗಿಗೆ ಎರಡು ಕಂತುಗಳಲ್ಲಿ ಹಾಕಿದೆ. ಹೀಗೆಯೇ ವಾರದ ರಜಾ ದಿನದಲ್ಲಿ ಎರಡು, ಬೇಗ ನಿದ್ದೆ ಬರದೆ ಇದ್ದ ರಾತ್ರಿ ಒಂದು, ತುಂಬಾ ಚೆಂದದ ಕವಿತೆ ಓದಿದ ತಕ್ಷಣದ ಖುಷಿಗೆ ಮಾಡಬೇಕನ್ನಿಸಿ ಮತ್ತೊಂದು… ಹೀಗೆ ಈ ಅನುವಾದಗಳು ಕಳೆದ ಫೆಬ್ರವರಿಯಿಂದ ಇಲ್ಲಿಯವರೆಗೆ ನಿಧಾನಕ್ಕೆ ಬೆಳೆದು ಬಂದಿದ್ದು. ಕಲೆಕ್ಷನ್ನು ತರಬಹುದಾ ಅನ್ನುವ ಮೊದಲ ಪ್ರಸ್ತಾಪ ಬಂದಾಗ ಅದು ಹೀಗೆ ಮಾತಿಗೆ ಹೇಳುವ ಮಾತಾಗಿ ಕಂಡಿತೇ ವಿನಃ ನಿಜವಾಗಿಯೂ ಮಾಡಬಹುದಾದ ಕೆಲಸವಾಗಿ ಕಂಡಿರಲಿಲ್ಲ. “ಪುಸ್ತಕ” ಅಂದರೆ ಭಯವೇ! ಕೊನೆಗೂ ಇದು ಹೀಗೆ ಪುಸ್ತಕದ ರೂಪ ತಾಳಿದ  ಶ್ರೇಯ ಫೈಜ್ ನ ಪದ್ಯಗಳು ಎಂಥ ಶತ ಸೋಮಾರಿಗಳ ಮೇಲೂ ಮಾಡುವ ಮೋಡಿಗೆ ಮತ್ತು ಪ್ರಕಾಶಕರ ತಲೆಯ ಮೇಲಿನ ತೂಗುಕತ್ತಿಯಂತಹ ಡೆಡ್ ಲೈನಿಗೆ ಸಲ್ಲಬೇಕು.

ಇಷ್ಟೆಲ್ಲಾ ಪುರಾಣದ ಸಾರಾಂಶ ಇಷ್ಟು: ಈ ಅನುವಾದಕ್ಕೆ ಒಂದು “ವಿಧಾನ” ಅಂತ ನಾನು ಹಾಕಿಕೊಂಡು ಹೊರಟದ್ದಲ್ಲ. ಫೈಜ್ ನ ಪ್ರಾತಿನಿಧಿಕ ಕವನಗಳು ಅಂತ ಒಂದಷ್ಟನ್ನು ಗುರುತಿಸಿ, ಗುಡ್ಡೆ ಹಾಕಿಕೊಂಡು, ನಂತರ ಪಟ್ಟಾಗಿ ದಿನಗಟ್ಟಲೆ ಕೂತು ಒಂದೇ ಲಹರಿಯಲ್ಲಿ ಅನುವಾದ ನಾನು ಮಾಡಿಲ್ಲ. ಆದ್ದರಿಂದ ಆ ರೀತಿಯ ವಿಧಾನಕ್ಕೆ ಇರಬಹುದಾದ ಒಂದು ಶೈಲಿ,  ಅಕ್ಯಾಡೆಮಿಕ್ ಗಾಂಭೀರ್ಯ ಈ ಸಂಕಲನದಲ್ಲಿ ನಿಮಗೆ ಕಾಣಲಾರದು. ಉದಾಹರಣೆಗೆ, ಇಷ್ಟು ಸಾಕು ಅಂತ ಅನುವಾದ ನಿಲ್ಲಿಸಿದ ನಂತರದಲ್ಲಿ ಒಟ್ಟಾಗಿ ಪರಿಷ್ಕರಿಸಿ, ಒಂದು ಅನುಕ್ರಮವನ್ನು ನಿರ್ಧರಿಸಿದೆನಾದರೂ, ಈ ಪದ್ಯಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿಲ್ಲ. ಫೈಜ್ ನ ಅತ್ಯಂತ ಜನಪ್ರಿಯ ಪದ್ಯಗಳು ಮೊದಲು, ನಂತರ ಒಂದೇ ಥೀಮ್ ಅನ್ನಿಸುವ ಪದ್ಯಗಳು ಸ್ವಲ್ಪ ಒಟ್ಟೊಟ್ಟಿಗೆ… ಹೀಗೆ. ಉದಾಹರಣೆಗೆ ಬಂಗ್ಲಾ ದೇಶದ ಪದ್ಯಗಳು, ಜೈಲಿನ್ನು ನೇರ ಪ್ರಸ್ತಾಪಿಸುವ ಪದ್ಯಗಳು, ಫಿಲಿಸ್ತೀನೀ ಪದ್ಯಗಳು ಒಂದೊಂದು ಗುಂಪಿನಲ್ಲಿ ಇವೆ. ಅಲ್ಲಲ್ಲಿ ನಡು ನಡುವೆ ಸಣ್ಣ ಪದ್ಯಗಳಿವೆ. ಅದು ಬಿಟ್ಟರೆ ಪದ್ಯಗಳ ಜೋಡಣೆಗೆ ಪಾಕ್ಕಾ ಅನ್ನಬಹುದಾದ ತರ್ಕ ಇಲ್ಲ. ಹಾಗೆಯೇ ಇನ್ನೊಂದು ಮಾತು. ಶೀರ್ಷಿಕೆಯಲ್ಲಿ “ನೂರೆಂಟು” ಅಂತ ಇದ್ದರೂ ಪಕ್ಕಾ ಲೆಕ್ಕ ಹಾಕಿದರೆ ನೂರು ಪ್ಲಸ್ ಎಂಟು ಅನ್ನುವ ಅರ್ಥದಲ್ಲಿ ನೂರೆಂಟಲ್ಲ. ನೂರಾರು, ನೂರೆಂಟು ಅಂತ ಮಾತಿಗೆ ಹೇಳುತ್ತೇವಲ್ಲ ಹಾಗೆ. ಇಲ್ಲಿ ನೂರೆಂಟು ಪ್ಲಸ್ ಆರು ಇವೆ. ಫೈಜ್ ಶತಮಾನೋತ್ಸವ ವರ್ಷಕ್ಕೆ ನೂರು ಪದ್ಯಗಳನ್ನು ತರದೇ ೧೪ ದಿನ ತಡ ಮಾಡಿದ್ದಕ್ಕೆ ಪ್ರಾಯಶ್ಚಿತ್ತ ಅಂದುಕೊಳ್ಳಿ!

ಬಾರದ ಭಾಷೆಯ ಸಂಗ

ಪದ್ಯ ಅನುವಾದಿಸುವಾಗ ನನಗೆ ಎಲ್ಲದಕ್ಕಿಂತ ದೊಡ್ಡ ಸಮಸ್ಯೆ ಇದ್ದದ್ದು ಮೂಲದ ಭಾಷೆ ಬಾರದೆ ಇರುವುದು. ನನಗೆ ಬರುವುದು ಒಂದಷ್ಟು ಹರುಕುಮುರುಕು ಹಿಂದಿ ಮತ್ತು ಗಜಲ್ಲುಗಳನ್ನು ಕೇಳಿ ಅಲ್ಲಿ ಬಳಕೆ ಆಗುವ ಕೆಲವು ಸ್ಟಾಕ್ ಉರ್ದು ಪದಗಳ ಪರಿಚಯ ಅಷ್ಟೆ. ಹೀಗಾಗಿ ನನ್ನ ಅನುವಾದ ಮೂಲ ಉರ್ದು ಕವಿತೆಯನ್ನು ಒಂದು ರೆಫೆರೆನ್ಸ್  ಆಗಿ ಇಟ್ಟುಕೊಂಡು ಬೇರೆ ಬೇರೆ  ಇಂಗ್ಲಿಶ್ ಅನುವಾದಗಳ ಮೂಲಕ ಫೈಜ್ ನ್ನು ಕಾಣುವ ಪ್ರಯತ್ನ.

ಮೂಲ ಭಾಷೆ ಬಾರದ ಕೊರತೆಯನ್ನು ನೀಗುವ ಪ್ರಯತ್ನವಾಗಿ ಆದಷ್ಟು ಪದ್ಯಗಳ ಒಂದಕ್ಕಿಂತ ಹೆಚ್ಚು ಅನುವಾದಗಳನ್ನು ಓದಿದ್ದೇನೆ. ಕೀರ್ನನ್ ಪುಸ್ತಕದಲ್ಲಿ ಇರುವ ಕವಿತೆಗಳ ವಿಷಯದಲ್ಲಿ ಹೀಗೆ ಮಾಡುವ ಪ್ರಯತ್ನ ಹೆಚ್ಚು ಸುಲಭ. ಯಾಕೆಂದರೆ ಆ ಪುಸ್ತಕದಲ್ಲಿ ಒಂದೇ ಕಡೆ ಉರ್ದು ಮೂಲ, ಮೂಲವನ್ನು ಇಂಗ್ಲಿಶ್ ಅಕ್ಷರಗಳಲ್ಲಿ ಬರೆದದ್ದು, ಪದಕ್ಕೆ ಪದ ಹೊಂದಿಸಿ ಮಾಡಿದ ಸಂಪೂರ್ಣ ಲಿಟರಲ್ ಅನುವಾದ ಮತ್ತು ಸ್ವಲ್ಪ ಸ್ವಾತಂತ್ರ ತೆಗೆದುಕೊಂಡು ಮಾಡಿರುವ ಹೆಚ್ಚು ಕಾವ್ಯಾತ್ಮಕ ಅನುವಾದ ಹೀಗೆ ನಾಲ್ಕು ರೂಪಗಳು ದೊರೆಯುತ್ತವೆ. ಅಲ್ಲದೆ ಇದು ೧೯೭೧ ರ ಸಂಕಲನವಾದ್ದರಿಂದ ಇವು ಫೈಜ್ ನ ಜೊತೆ ಚರ್ಚೆ ಮಾಡಿ ಮಾಡಿದ ಅನುವಾದಗಳು. ಫೈಜ್ ನ ಅತ್ಯಂದ ಪ್ರಸಿದ್ಧ ಕವಿತೆಗಳು – ಉದಾಹರಣೆಗೆ “ಸ್ವಾತಂತ್ರದ ಬೆಳಗು”, “ನಾಯಿಗಳು”, “ಮೇರೆ ಮೆಹಬೂಬ್” ಇತ್ಯಾದಿ – ಇಲ್ಲಿ ಇವೆ. ಇವು ಮುಂದೆ ಬಂದ ಅನೇಕ ಸಂಕಲನಗಳಲ್ಲಿ ಮತ್ತೆ ಮತ್ತೆ ಬೇರೆ ಬೇರೆಯವರು ಅನುವಾದ ಮಾಡಿರುವಂಥದು. ಆದರೆ ೧೯೭೧ ನಂತರದ ಕವಿತೆಗಳು ಇಲ್ಲಿ ಇಲ್ಲದಿರುವುದು ದೊಡ್ಡ ಕೊರತೆ.

ಸರ್ವತ್  ರೆಹಮಾನ್ ರ ೨೦೦೯ರಲ್ಲಿ ಪ್ರಕಟವಾದ ಅನುವಾದದಲ್ಲಿ ೧೯೮೪ರ ವರೆಗಿನ ಫೈಜ್ ಕವನಗಳಿಂದ ಆಯ್ದ ೧೦೦ ಕವಿತೆಗಳಿವೆ ಮತ್ತು ಮೂಲ ಉರ್ದು ಇಂಗ್ಲಿಶ್ ಲಿಪಿಯಲ್ಲಿಯೂ ಇದೆ. ಸರ್ವತ್ ತನ್ನ ಸಂಕಲನದಲ್ಲಿ ಪದ್ಯಗಳನ್ನು ಕಾಲಾನುಕ್ರಮದಲ್ಲಿ ಜೋಡಿಸಿರುವುದರಿಂದ ಫೈಜ್ ನ ಶೈಲಿ, ಚಿಂತನೆ ಪಕ್ವವಾಗುತ್ತಾ ಹೋದದ್ದನ್ನು ಈ ಸಂಕಲನದಲ್ಲಿ  ಸ್ಪಷ್ಟವಾಗಿ ಕಾಣಬಹುದು. ಆದರೆ ಅನುವಾದದಲ್ಲಿ ಕೀರ್ನನ್ ನ ಶಾಸ್ತ್ರೀಯ ಶಿಸ್ತು (ನನ್ನಲ್ಲಿ ಇಲ್ಲದಿದ್ದರೂ ನಾನು ಗೌರವಿಸುವ ಗುಣ ಇದು!) ಇಲ್ಲಿ ಕಾಣುವುದಿಲ್ಲ.  ಶಿವ್ ಕೆ ಕುಮಾರ್, ಆಘಾ ಶಾಹೀದ್ ಅಲಿ, ರಿಜ್ ರಹೀಂ ಅವರ ಸಂಕಲನದಲ್ಲಿಯೂ ೧೯೭೧ರ ಈಚಿನ ಕವನಗಳಿವೆ. ಆದರೆ ಮೂಲ ಕವನ ಇಂಗ್ಲಿಶ್ ಅಥವಾ ದೇವನಾಗರಿ ಲಿಪಿಯಲ್ಲಿಲ್ಲ. ಪುಸ್ತಕಗಳಲ್ಲದೆ ಇಂಟರ್ನೆಟ್ಟಿನಲ್ಲಿ ಸಿಗುವ ರವಿ ಕೊಪ್ರಾ, ನವೋಮಿ ಲಜಾರ್ಡ, ಸಯಿನ್ ಸೂಚಾ ಇತ್ಯಾದಿ ಅನುವಾದಕರ ಅವತರಣಿಗಳನ್ನೂ  ನೋಡಿದ್ದೇನೆ. ಫೈಜ್ ಬರೆದ ಕೆಲವೇ ಪಂಜಾಬಿ ಪದ್ಯಗಳು ಅನುವಾದದಲ್ಲಿ ಸಿಗುವುದು ಅಪರೂಪ. ಈ ಕನ್ನಡ ಸಂಕಲನದಲ್ಲಿ ಸೂಚಾ ಅನುವಾದಿಸಿದ ಒಂದು ಪಂಜಾಬಿ (“ಓ ನನ್ನ ದೇವರೇ”) ಮತ್ತು ಸರ್ವತ್ ಅನುವಾದಿಸಿದ ಒಂದು ಫಾರ್ಸಿ (“ನಾತ್”) ಕವಿತೆಗಳಿವೆ.

ಹೀಗೆ ಮೂಲ ಕವಿತೆ ನನಗೆ ಓದಲು ಬರುವ ಯಾವ ಲಿಪಿಯಲ್ಲೂ ಸಿಕ್ಕದೆ ತಡಕಾಡಿದಾಗ ರಾತ್ರಿ ನಿದ್ದೆ ಕೆಟ್ಟು ಉರ್ದುವನ್ನು ಕನ್ನಡ ಲಿಪಿಯಲ್ಲಿ ಬರೆದುಕೊಟ್ಟವರು ವೃತ್ತಿ ಬಾಂಧವರಾದ ರಫೀಕ್ ವಕೀಲ್. ರಫೀಕ್ ಮತ್ತು ಸಂವರ್ಥ-ಸಾಹಿಲ್ ಅನೇಕ ಕ್ಲಿಷ್ಟ ಉರ್ದು ಪದಗಳ ಅರ್ಥಗಳನ್ನು ಡಿಕ್ಷನರಿಗಳಲ್ಲಿ ಅನೇಕ ಬಾರಿ ಹುಡುಕಿಯೂ ಕೊಟ್ಟಿದ್ದಾರೆ. ಇಷ್ಟಾಗಿಯೂ ಮೂಲ ಉರ್ದು ಓದುಗರ ಹಾಗೆ ನನಗೆ ಫೈಜ್ ಅರ್ಥವಾಗಿದ್ದಾನೆ ಅನ್ನುವ ಭ್ರಮೆ ನನಗಿಲ್ಲ. ಬೇರೆ ಅನುವಾದಗಳ ಮೂಲಕ ನನಗೆ ದಕ್ಕಿದ ಫೈಜನ್ನು ಕನ್ನಡಮುಖಿಯನ್ನಾಗಿ ಮಾಡುವ ಪ್ರಯತ್ನ ಅಷ್ಟೆ ಈ ನನ್ನ ಅನುವಾದ.

ಕಡಿದಾದ ಹಾದಿ  

ಈ ಪ್ರಯತ್ನ ಕಲ್ಲು ಮುಳ್ಳುಗಳ ದಾರಿ ಅನ್ನುವುದನ್ನು ಒತ್ತಿ ಹೇಳುವ ಅಗತ್ಯವೇ ಇಲ್ಲ. ನಿಜ ಹೇಳಬೇಕಂದರೆ ಉರ್ದು ಬಲ್ಲವರಿಗೂ ಇದು ಅಷ್ಟೇನೂ ಸುಲಭ ಇರಲಿಕ್ಕಿಲ್ಲ. ಭಾಷೆ ಅನ್ನುವುದು ಸಂವಹನದ ನಿರ್ಲಿಪ್ತ ಹಾದಿ ಆಗಿರದೆ ಇಡೀ ಸಮಾಜದ ಒಟ್ಟಾರೆ ಸಂಸ್ಕೃತಿಯ ಅಂಗವೇ ಆಗಿರುವುದರಿಂದ  ಯಾವ ಅನುವಾದವೂ ಮೂಲ ಕವನದ ಯಥಾವತ್ ಪ್ರತಿಫಲನವಂತೂ ಅಲ್ಲ. ಭಾಷೆ ಭಾಷೆಗಳ ನಡುವಿನ ತಡೆಗೋಡೆಗಳ ಬಗ್ಗೆ, ಅದರ ಮೇಲೆ ಹರಡಿದ ವಿದ್ಯುತ್ ತಂತಿಗಳ ಬಗ್ಗೆ, ಅದನ್ನು ಹಾರುವ ಬಗೆಯ ಬಗ್ಗೆ, ಹಾರುವಾಗ ಕೈ ಕಾಲು (ಒಮ್ಮೆಮ್ಮೆ ತಲೆಯೂ!) ಮುರಿಯುವ ಬಗ್ಗೆ ನೂರಾರು ಅನುವಾದದ ಥಿಯರಿಗಳು, ಪುಸ್ತಕಗಳು ಇವೆ. “ಮೂಲ” ಅಂದರೆ ಏನ್ರಿ ಅಂತ ದಬಾಯಿಸಿ ಕೇಳುವ ಶೂರ ವಿದ್ವಾಂಸರೂ, ಅನುವಾದಕರೂ ಇದ್ದಾರೆ. ನಮಗೆ ಅನುವಾದದ ಪಾಠ ಹೇಳಿಕೊಡುವಾಗ ವನಮಾಲ ವಿಶ್ವನಾಥ ಮೇಡಮ್ಮು ಯಾವ ಥಿಯರಿಗಳೂ ಅನುವಾದ ಮಾಡಲು ಪೆನ್ನು ಕೈಲಿ ಹಿಡಿದು ಕುಳಿತಾಗ ಎದುರಾಗುವ ಪದ ಪದಕ್ಕೆ ತಿಣುಕುವ ಕಷ್ಟವನ್ನು ಬಗೆಹರಿಸುವುದಿಲ್ಲ ಅಂತ ಹೇಳುತ್ತಿದ್ದರು. ಅದು ಹೌದು ಅನ್ನುವುದು ನನಗೆ ಮತ್ತೆ ಮತ್ತೆ ಅನುಭವಕ್ಕೆ ಬಂದಿದೆ.

ಹೀಗೆ ಕಷ್ಟಪಡುವಾಗೆಲ್ಲ ಸಿಲಬಸ್ಸಿನಲ್ಲಿ ಇಲ್ಲದಿದ್ದರೂ ಮನು ಚಕ್ರವರ್ತಿ ಮೇಷ್ಟು ಓದಿಸಿದ ಯೇಟ್ಸ್ ಪದ್ಯದ ಸಾಲುಗಳೂ ಆಗಾಗ ನೆನಪಾಗಿದೆ: “A line will take us hours may be;/ Yet if it does not seem a moment’s thought,/ Our stitching and unstitching has been naught.” ಎಷ್ಟೇ ಗುಂಡಿ ತೋಡಿ, ಪಾತಿ ಮಾಡಿ, ನೀರೆರೆದು, ಗೊಬ್ಬರ ಹಾಕಿದರೂ ಕೊನೆಗೆ ಪದ್ಯ ಥಟ್ಟನ ಅರಳಿದಂತೆ ತೋರದೆ ಹೋದರೆ ಅಷ್ಟು ಕಷ್ಟಪಟ್ಟೂ ಸುಖ ಇಲ್ಲ. ಅನುವಾದಕ್ಕೂ ಈ ಮಾತನ್ನು ಹೇಳಬಹುದು.

ಕೆಲವು ಅನುವಾದಕರ ಪ್ರಕಾರ ಅನುವಾದ ತೀರ “ಸುಲಲಿತ” ಆಗಿಬಿಟ್ಟರೂ ಕಷ್ಟ. ಅನುವಾದದ ಮೂಲಕ ಹೊಸದೊಂದು ನಮ್ಮ ಭಾಷೆಗೆ ಬರದಿದ್ದರೆ ಅನುವಾದ ಮಾಡಬೇಕಾದರೂ ಯಾಕೆ? ಅದೂ ಸರಿಯೇ. ಆದರೂ ಯಾವುದೇ ಪದ್ಯಕ್ಕೆ ಓದಿಸಿಕೊಂಡು ಮುಂದೆ ಕೊಂಡೊಯ್ಯುವ ಗುಣವೇ ಇಲ್ಲದೆ ಹೋಗಿ ಓದುಗರೇ ಇಲ್ಲವಾದರೆ ಏನು ಹೊಸತು ತಂದು ಏನು ಫಲ? ಆ ಅರ್ಥದಲ್ಲಿ ಅನುವಾದವೂ ಹೊಲಿಗೆಯೇ ಎದ್ದು  ಕಾಣುವ ತೇಪೆ ಬಟ್ಟೆ ಆಗಬಾರದೆಂದು ನನ್ನ ಅಕಾಡೆಮಿ

ಕೇತರ ಬುದ್ಧಿಗಂತೂ ತೋರುತ್ತದೆ. ತೀರ ತೇಪೆ ಕಂಡಾಗ ಒಂದಷ್ಟು ತಿದ್ದಿದ್ದೇನೆ. ಫೈಜ್ ನ ಅಭಿಮಾನಿ ಶಿವಸುಂದರ್ ಅವರು ಅನೇಕ ಬಾರಿ ಈ ರೀತಿಯ ತೇಪೆಗಳ ಕಡೆ ಬೊಟ್ಟು ಮಾಡಿ, ಜಗಳ ಆಡಿ ಸಹಾಯ ಮಾಡಿದ್ದಾರೆ.

ಮೂಲದ ಜೊತೆಯ ಈ ರೀತಿಯ ಆಟ ಪೇಚಾಟಗಳು ಎಷ್ಟು ಸರಿ ಎಷ್ಟು ತಪ್ಪು ಅನ್ನುವುದರ ಬಗ್ಗೆ ವಾದ ಮಾಡಬಹುದು. ಉದಾಹರಣೆಗೆ, ಫ್ರಾನ್ಸಿಸ್ ಡಬ್ಲ್ಯೂ. ಪ್ರಿಶೆಟ್ ಅನ್ನುವ ಅನುವಾದಕ “ನೀ ಬರುವ ಮುಂದು” ಪದ್ಯದ ಆರು ಅವತರಣಿಗಳ  ಸಾಲು ಸಾಲು ಡಿಸೆಕ್ಟ್ ಮಾಡಿ ಆರೂ ಅನುವಾದಕರನ್ನು ಮೂಲಕ್ಕೆ ಬೇರೆ ಬೇರೆ ರೀತಿಯಲ್ಲಿ ಧಕ್ಕೆ ತಂದದ್ದರ ಬಗ್ಗೆ ತರಾಟೆಗೆ ತೆಗೆದುಕೊಳ್ಳುತ್ತಾನೆ. ಮೂಲಕ್ಕೆ ಬದ್ಧತೆ ಎಂದರೆ ಏನು ಮತ್ತು ಬದ್ಧತೆಯನ್ನು ಅಳೆಯುವುದು ಹೇಗೆ ಅನ್ನುವ ಪ್ರಶ್ನೆ ಯಾವತ್ತೂ ಬಗೆ ಹರಿಯದ್ದು. ಬದ್ಧತೆಗೆ ಹಿಂದೆ ಬಿದ್ದು ಕವನದ ಒಟ್ಟಂದಕ್ಕೆ ಕುಂದು ಬಂದರೆ ಏನು ಮಾಡುವುದು? ಅನೇಕ ಬಾರಿ ಅನುವಾದಕರದು ಐದು ಗಂಡರ ದ್ರೌಪದಿಯ ಸ್ಥಿತಿ. ಹತ್ತಿರದ ಸಖ ಸುಂದರ ಅರ್ಜುನನೋ ಕೀಚಕನನ್ನು ವಧಿಸುವ ಭೀಮನೋ ನಿರ್ಧರಿಸುವುದು ಕಷ್ಟ.ನನ್ನ ಪ್ರಯತ್ನ ಫೈಜ್ ನನ್ನು ಪೂರ್ಣ ಕನ್ನಡಿಗನನ್ನಾಗಿಯೇ ಮತಾಂತರ ಮಾಡಿಬಿಡುವುದಲ್ಲ. ಹಾಗೆ ಮಾಡಲೂಬಾರದು ಅಂತ ನನ್ನ ಅಭಿಪ್ರಾಯ. ಆದರೆ ಫೈಜ್ ನನ್ನು ಕನ್ನಡದ ಜಾಯಮಾನಕ್ಕೆ ತೀರ ಹೊರಗಿನವನಂತೆಯೂ ನೋಡದೆ ಸ್ವಲ್ಪ ಆಪ್ತ ದನಿಯಲ್ಲಿಯೇ ಬರಮಾಡಿಕೊಳ್ಳಬೇಕಲ್ಲವಾ? ಫೈಜ್ ನಂತಹ ಆತ್ಮೀಯರನ್ನು ಬೇರೆ ಯಾವ ರೀತಿಯಲ್ಲಿ ಬರ ಮಾಡಿಕೊಳ್ಳಲಿಕ್ಕೆ ಸಾಧ್ಯ ಹೇಳಿ.ಯಾವುದು ಜಾಯಮಾನ?
ಆದರೆ ಈ ಜಾಯಮಾನ ಅನ್ನುವುದೂ ನೋಡಿ ಒಂದು ಥರ ಕ್ಲಿಷ್ಟ ಮತ್ತು ಟ್ರಿಕ್ಕಿ ಆದ ವಿಷಯ. ಸಂಪೂರ್ಣ ನಮ್ಮ ಜಾಯಮಾನಕ್ಕೇ ಕಟ್ಟು ಬಿದ್ದುಬಿಟ್ಟರೆ ನಾನು ಆಗಲೇ ಹೇಳಿದ ಹಾಗೆ ಹೊಸತೇನೂ ದೊರಕದೆ ಹೋಗಬಹುದು. ಹಾಗಂತ ಪದಕ್ಕೆ ಪದ ಮೂಲಕ್ಕೆ ಕಟ್ಟು ಬಿದ್ದರೆ ಅನುವಾದದ ಭಾಷೆಯಲ್ಲಿ ಪದ್ಯ ಜೀವ ಇಲ್ಲದ ಕಳೆಬರದ ಹಾಗೆ ತೋರುವುದು ಖಚಿತ. ಅದಕ್ಕಿಂತಲೂ ಹೆಚ್ಚಾಗಿ ಕನ್ನಡದ ಜಾಯಮಾನದ ಬಗ್ಗೆ ಮಾತಾಡುವಾಗ “ಯಾವ ಕನ್ನಡ”ದ ಜಾಯಮಾನ ಬಗ್ಗೆ ನಾವು ಮಾತಾಡುತ್ತಿದ್ದೇವೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದು ಹಳೆ ಮೈಸೂರಿನ ಕನ್ನಡದ ಜಾಯಮಾನವಾ ಅಥವಾ  ಬೀದರ್ ಜಿಲ್ಲೆಯ ಕನ್ನಡದ ಜಾಯಮಾನವಾ?  ಕನ್ನಡದಲ್ಲಿ ಉರ್ದು ಪದಗಳನ್ನು ಧಾರಾಳ ಬಳಸುವ ಹೈದರಾಬಾದ್-ಕರ್ನಾಟಕ ಪ್ರಾಂತ್ಯದ, ಉರ್ದುವನ್ನು ನೇರವಾಗಿ ಬಲ್ಲ, ಘಜಲ್ಲುಗನ್ನು ಬರೆದ ಶಾಂತರಸರಂತಹ ಲೇಖಕರು ಈ ಅನುವಾದ ಮಾಡಿದ್ದರೆ “ಜಾಯಮಾನ” ಅನ್ನುವ ಪದದ ಅರ್ಥವೇ ಬೇರೆ ಇರುತ್ತಿತ್ತು ಅನ್ನುವುದನ್ನು ಎಂದೂ ನೆನಪಿಟ್ಟುಕೊಳ್ಳಬೇಕು. ಜಾಯಮಾನ ಅನ್ನುವುದು ಆಯಾ ಪ್ರಾಂತ್ಯ-ಭಾಷಿಕ ಬದುಕಿನ ಚಾರಿತ್ರಿಕ ಏಳುಬೀಳುಗಳೊಂದಿಗೆ ಹುಟ್ಟಿ, ಪಾತ್ರ ಕೊರೆಯುತ್ತಾ ಓಡುವ  ನದಿ. ಸಾಹಿತ್ಯದ ಶಿಲ್ಪವೂ ಈ ನದಿಯ ಓಘದೊಂದಿಗೆ ತಳುಕು ಹಾಕಿಕೊಂಡಂತದು. ಇಲ್ಲಿ ನಾನು ಬಳಸಿರುವ ಕನ್ನಡದ್ದು ಮಲೆನಾಡಿನಲ್ಲಿ ಹುಟ್ಟಿ ಬೆಂಗಳೂರಿನಲ್ಲಿ ಬೆಳೆದ ನನ್ನ ಜಾಯಮಾನ. ಈ “ಸೊಗಡು”, “ಜಾಯಮಾನ” ಅನ್ನುವ ಥರದ ಪದಗಳು ಕೇಳಲಿಕ್ಕೆ ಚೆಂದ ಅನ್ನಿಸಿದರೂ ಪದಗಳಲ್ಲಿ ನಿರ್ದಿಷ್ಟವಾಗಿ ಹಿಡಿಯಲಿಕ್ಕೆ ಕಷ್ಟವಾದವೇ ಎಂಬುದು ಎಲ್ಲ ಅನುವಾದಕರೂ ಗೋಡೆ ಹಾರುವ ಪ್ರಕ್ರಿಯೆಯಲ್ಲಿ ಮೈಕೈ ತರಚಿಕೊಂಡು ಕಂಡುಕೊಳ್ಳುವ ಸತ್ಯ!ಥಿಯರಿಗಳು ಹೆಚ್ಚು ಪ್ರಯೋಜನ ಇಲ್ಲ ಅನ್ನುತ್ತಲೇ ನಾನೇ ಇನ್ನೊಂದು ಥಿಯರಿ ಕಟ್ಟುವ ಕೆಲಸಕ್ಕೆ ಕೈ ಹಾಕುವ ಡೇಂಜರ್ ದಿಕ್ಕಿನಲ್ಲಿ ಗಾಡಿ ಓಡುತ್ತಿದೆ ಅಲ್ಲವಾ? ಇರಲಿ. ಈ ವಿಷಯ ಇಷ್ಟಕ್ಕೆ ಬಿಟ್ಟು ನಾನು ಅನುವಾದ ಮಾಡುವಾಗ ಪಟ್ಟ ಪಾಡಿನ ಬಗ್ಗೆ ನಾಲ್ಕು ಮಾತು ಹೇಳಿಬಿಡುತ್ತೇನೆ.ನಾನು ಮೊದಲೇ ಹೇಳಿದ ಹಾಗೆ ಒಂದು ಭಾಷೆ ಮತ್ತು ಅದರ ಸಂಸ್ಕೃತಿಯಲ್ಲಿ ಇನ್ನೊಂದು ಭಾಷೆಗೆ ಯಥಾವತ್ತಾಗಿ ನಾಟಿ ಮಾಡುವುದು ಆಗದ ಮಾತು. ಸ್ಥೂಲ  ಅರ್ಥದಲ್ಲಿ ಮತ್ತು ಸೂಕ್ಷ್ಮ ವಿವರಗಳಲ್ಲಿ ಭಾಷೆಗಳು ತಮ್ಮದೇ ಅಹಮ್ಮುಗಳನ್ನು ಬೆಳೆಸಿಕೊಂಡು ನಿಂತಿರುತ್ತವೆ. ಒಂದು ಉದಾಹರಣೆಯಾಗಿ ಉರ್ದು ಕಾವ್ಯದಲ್ಲಿ ಧಾರಾಳ ಬಳಸುವ ‘ಎ’ ಎಂಬ ವಿಭಕ್ತಿಯ (“ಇಜಾಫತ್”) ವಿಷಯ ನೋಡಿ. ಇದು ಪದಗಳ ಮೇಲೆ ಪದ, ಅರ್ಥಗಳ ಮೇಲೆ ಅರ್ಥ ಪೇರಿಸಲು ತುಂಬ ಸುಲಭಕ್ಕೆ ದೊರಕುವ ಪರ್ಶಿಯನ್ ಮೂಲದಿಂದ ಉರ್ದು ಭಾಷೆಗೆ ಬಂದ ವಿಶಿಷ್ಟ ಬಳಕೆ. ಉದಾಹರಣೆಗೆ ತುಂಬ ಸಲೀಸಾಗಿ ಗಜಲ್ಲುಗಲ್ಲಿ, ಸಿನೆಮಾ ಹಾಡುಗಳಲ್ಲಿ ಬಳಸುವ “ದರ್ದ್-ಎ-ಇಲ್” ಅನ್ನು ಕನ್ನಡದಲ್ಲಿ ಏನೇ ಲಾಗ ಹಾಕಿದರೂ ಸರಿಯಾಗಿ ಅನುವಾದ ಮಾಡುವುದು ಕಷ್ಟವೇ. ಇದು ಎದೆ ನೋವಂತೂ ಅಲ್ಲ. ನೋವೋ, ದುಗುಡವೋ, ದುಃಖವೋ ತುಂಬಿದ ಹೃದಯ ಅಂತ ಅನುವಾದ ಮಾಡಬಹುದು. ಹಾಗೆ ಮಾಡಿದರೆ ಕನ್ನಡದಲ್ಲಿ ಸ್ವಲ್ಪ ಮೇಲೋಡ್ರಾಮ ಅಂತ ಅನ್ನಿಸುವ ಸಾಧ್ಯತೆಗಳಿವೆ.ಇನ್ನು “ದರ್ದ್” ಅನ್ನುವ ಪದವೇ ಸರಳವಲ್ಲ. ಅದಕ್ಕೆ ಮಿಡಿವ, ಭಾವ ತುಂಬಿದ ಅನ್ನುವ ದನಿಯೂ ಇದೆ. ಮುಖೇಶ್ ಧ್ವನಿ “ದರ್ದ್ ಭರೀ” ಅನ್ನುವಾಗ ಅದಕ್ಕೆ ಎದೆ ತಂತಿ ಮೀಟುವ ಶಕ್ತಿ ಇದೆ ಅನ್ನುವ ಅರ್ಥದಲ್ಲಿಯೇ ಅಲ್ಲವೇ ನಾವು ಹೇಳುವುದು? ಹಾಗೆಯೇ “ಬೇದರ್ದಿ ಬಲ್ಮಾ” ಅಂದರೆ ಹೃದಯಹೀನ, ಕರುಣೆ ಇಲ್ಲದವ ಅಂತ. ನಾನು ಅನುವಾದಿಸಿದ ಅತ್ಯಂತ ಸರಳ ಪದ್ಯಗಳಲ್ಲಿ ಒಂದಾದ (ಅಂದರೆ ಕ್ಲಿಷ್ಟ ಪರ್ಷಿಯನ್ ಪದಗಳನ್ನೇ ಬಳಸದ) “ನೆನಪಿನ ಚಿತೆ” ಪದ್ಯದಲ್ಲಿ “ದರ್ದ್” ಮತ್ತು “ಬೇದರ್ದ್” ಪದಗಳನ್ನು ಪಕ್ಕ ಪಕ್ಕ ಇಟ್ಟ ಅತ್ಯಂತ ಸರಳ ಎಂಬಂತೆ ತೋರುವ ಸಾಲು ಸುಮಾರಷ್ಟು ಕಾಟ ಕೊಟ್ಟ ನಂತರವೂ ಅನುವಾದದಲ್ಲಿ ಖುಷಿ ಆಗುವ ಹಾಗೆ ಮೂಡಿ ಬಂದಿಲ್ಲ ಅಂತಲೇ ಅನ್ನಿಸಿದೆ. “ಅರ್ಪಣೆ” ಪದ್ಯದ ಕೊನೆಯ ಚರಣದ “ಫಿದಾ” ಅನ್ನುವ ಪದವೂ ಹಾಗೆಯೇ. ಈ ಪದಕ್ಕೆ ಸಾಮಾನ್ಯ ಬಳಕೆಯಲ್ಲಿ ಪ್ರೀತಿಯಲ್ಲಿ ಹುಚ್ಚನಾದವನು ಅನ್ನುವ ಅರ್ಥವೂ ಮತ್ತು ಧಾರ್ಮಿಕ ನಂಬಿಕೆಯಲ್ಲಿ ಬಲಿದಾನ, ಆತ್ಮಾಹುತಿ (ಫಿದಾಯೀ ಅನ್ನುವ ಪದದ ಮೂಲ ಫಿದಾ)  ಅನ್ನುವ ಅರ್ಥವೂ ಇದೆ. ಅನುವಾದದ ಮಾಡುವಾಗ ಯಾವುದಾದರೂ ಒಂದನ್ನು ಆರಿಸಿಕೊಂಡರೆ ಇವು ತದ್ವಿರುದ್ಧ ಅರ್ಥದ ಧ್ವನಿಗಳನ್ನು ಹೊರಡಿಸಬಲ್ಲವು. ಫೈಜ್ ನ ಮೊದಲ ಕವನ ಸಂಕಲದ ಶೀರ್ಷಿಕೆ “ನಕ್ಶ್-ಎ-ಫಾರ್ಯದಿ” ಯ ಅನುವಾದವನ್ನೇ ಒಬ್ಬೊಬ್ಬ ಇಂಗ್ಲಿಶ್ ಅನುವಾದಕರು ಒಂದೊಂದು ರೀತಿ ಮಾಡಿದ್ದಾರೆ. ಹೀಗೆ ಭಾಷೆಯಲ್ಲಿ ಒಂದು ಪದದ ಅರ್ಥ ಸ್ಪಾಟ್ ಲೈಟ್ ಹಾಕಿದಂತೆ ಇರುವುದಿಲ್ಲ. ಹರಡಿದ ಪ್ರಭೆಯಂತೆ ಇರುತ್ತದೆ. ಗೆರೆ ಕೊರೆದಂತೆ ಇರದ ಈ ಪ್ರಭೆಯ ವಲಯ ಆಯಾ ಭಾಷಿಕರಿಗೆ ಮಾತ್ರ ಗೊತ್ತು.ಬೆವರಿಳಿಸುವ ಶರಾಬುವಿಶೇಷವಾಗಿ ಕ್ಲಿಷ್ಟವಾದದ್ದು ಉರ್ದು ಕಾವ್ಯದ ಶರಾಬು, ಸಾಕಿ, ಪೈಮಾನ, ಮೈಖಾನ ಇತ್ಯಾದಿಗಳ ಸುತ್ತಲ ಮತ್ತಿನ ಪ್ರಪಂಚ. ಉರ್ದು ಕಾವ್ಯದಲ್ಲಿ ಧರ್ಮ ನಿಷಿದ್ಧವಾದ ಶರಾಬು ಮತ್ತು ಅದನ್ನು ಮಾರುವ ಗಡಂಗು ಉನ್ಮತ್ತತೆ, ಪ್ರೇಮ, ಕಟ್ಟುಪಾಡುಗಳನ್ನು ಮೀರುವ ಸ್ವಾತಂತ್ರ್ಯ,ಪಾರಂಪರಿಕ ಧಾರ್ಮಿಕ ಸ್ಥಳಕ್ಕೆ ವ್ಯತಿರಿಕ್ತವಾಗಿ ನಿಜ ಆಧ್ಯಾತ್ಮಿಕ ಅನುಭೂತಿಯನ್ನು ಧ್ವನಿಸುವ ಸಂಕೇತ. ಆದರೆ ಕೀರ್ನನ್ ಹೇಳುವಂತೆ ಇತಿಹಾಸದ  ಹೊಸ ಬಿಂದುವಿನಲ್ಲಿ ನಿಂತಿದ್ದ ಫೈಜ್ ಆ ಪ್ರತಿಮೆಗಳನ್ನು ವ್ಯವಸ್ಥೆಯ ವಿರುದ್ಧ ಪ್ರತಿಭಟನೆಯ ಪರಿಕರವಾಗಿಯೂ, ಸಾಮಾಜಿಕ ವ್ಯವಸ್ಥೆಗೆ ಸವಾಲನ್ನೊಡ್ಡುವ ಸಂಕೇತಗಳನ್ನಾಗಿಯೂ ಧ್ವನಿಸಿದರು. ತನ್ನ ಹೊಸ ರಾಜಕೀಯ ಸಂದರ್ಭ, ನಿಲುವುಗಳನ್ನು ಪಾರಂಪರಿಕ ಮತ್ತು ವ್ಯಕ್ತಿಗತ ನೆಲೆಯ ರೂಪಕಗಳ ಮೂಲಕ ಹೇಳುವುದು ಫೈಜ್ ನ ಕಾವ್ಯದ ನಿರಂತರ ಸೋಜಿಗದ ವಿಷಯಗಳಲ್ಲಿ ಒಂದು. ಸಾಕಿಯೂ, ಮೃದು ಬೆರಳುಗಳ ಪ್ರೇಮಿಯೂ ಆಶಾವಾದದ ಅಥವಾ ಬರುವ ಬದಲಾವಣೆಯ ಸಂಕೇತವೋ ಕೂಡ ಆಗಿ ಧ್ವನಿಸುವ ಪದ್ಯಗಳು ಬೇಕಾದಷ್ಟಿವೆ.

ಅದೂ ಅಲ್ಲದೆ ಫೈಜ್ ನ ಅನೇಕ ಪದ್ಯಗಳಲ್ಲಿ ತನ್ನ ಪೂರ್ವಸೂರಿಗಳ (ವಿಶೇಷವಾಗಿ ಗಾಲಿಬನ) ಸಾಲುಗಳನ್ನು ಉದ್ಧರಿಸುತ್ತಾನೆ. ಉದಾಹರಣೆಗೆ “ಖೂನ್-ಎ-ಜಿಗರ್ ಹೋನೆ ತಕ್” ಎಂಬ ಸಾಲು ಗಾಲಿಬನದು ಎಂದು ಉರ್ದು ಓದುಗರಿಗೆ ತಕ್ಷಣ ಹೊಳೆಯುತ್ತದೆ. ಹೇಗೆಯೇ ಕುರಾನಿನ ಅಥವಾ ಇಸ್ಲಾಂ ಸಂಸ್ಕೃತಿಯಿಂದ ಹೆಕ್ಕಿದ ಪದ ಅಥವಾ ಪ್ರತಿಮೆಗಳ ಬಳಕೆಯೂ ಇದೆ. ಉದಾಹರಣೆಗೆ ಬಾಂಗ್ಲಾದೇಶದ ಬಗ್ಗೆ ಫೈಜ್ ನ ಎರಡನೆಯ ಪದ್ಯ “ರಕ್ತ ಕಣ್ಣೇರು”ನ ಕೊನೆಯಲ್ಲಿ ಬರೀ ಕಣ್ಣನ್ನು ತೊಳೆದುಕೊಳ್ಳಿ ಎಂದು ಕವಿ ಹೇಳುವುದಿಲ್ಲ. “ವಜೂ” ಮಾಡಿಕೊಳ್ಳಿ ಅನ್ನುತ್ತಾನೆ. ಇದಕ್ಕೆ ಒಂದು ವಿಶಿಷ್ಟ ಧಾರ್ಮಿಕ ಆಚರಣೆಯ ಅರ್ಥ ಇದೆ.

ಉರ್ದು ಓದುಗ ಮತ್ತು ಲೇಖಕ ಒಂದು ಭಾಷಾ ಸಂಸ್ಕೃತಿಯ ಭಾಗವಾದ್ದರಿಂದ ಈ ಅರ್ಥ ವಲಯವನ್ನು ವಿವರಿಸುವ ಗೋಜಿಗೆ ಹೋಗದೆ ಕಾವ್ಯ ಪ್ರತಿಮೆಗಳ ಮೂಲಕ ಬಹಳಷ್ಟು ಹೇಳಿಬಿಡಬಹುದು. ಇವು ಹೊಸ ಮತ್ತು ಹಳೆಯ ಅರ್ಥಗಳೆರಡನ್ನೂ ಒಟ್ಟೊಟ್ಟಿಗೆ ಧ್ವನಿಸುವ, ಅನಿರ್ದಿಷ್ಟ ಮತ್ತು ಒಂದಕ್ಕೊಂದು ತಾಕಲಾಡುವ “ambiguous” ವಲಯದಲ್ಲಿ ಇರುತ್ತವೆ.  ಅನುವಾದದಲ್ಲಿ, ವಿಶೇಷವಾಗಿ ವಿವರಗಳಿಗೆ ಆಸ್ಪದ ಇಲ್ಲದ ಪದ್ಯದ ಅನುವಾದದಲ್ಲಿ, ಇದು ಎಷ್ಟರ ಮಟ್ಟಿಗೆ ಓದುಗರನ್ನು ತಲುಪಬಹುದು?

ಇಂಥ ಸಂದರ್ಭಗಳಲ್ಲಿ ಕೆಲವೊಮ್ಮೆ ಒಂದು ಪದವನ್ನು ಸೂಚ್ಯವಾಗಿ ಸೇರಿಸಿಯೋ, ಕೈಬಿಟ್ಟೋ ಮುಂದುವರಿಯಬೇಕಾಗಬಹುದು. ಆದರೆ ಈ ಎಲ್ಲ ಪ್ರಯತ್ನದಲ್ಲಿ ಒಂದು ಅರ್ಥವನ್ನು ಫಿಕ್ಸ್ ಮಾಡಿಬಿಟ್ಟೆವಾ ಎಂಬ ಅಳುಕು ವಿಶೇಷವಾಗಿ ಫೈಜ್ ಅನುವಾದಕರಿಗೆ ಇರುತ್ತದೆ. ನಾನು ಹಿಂದೆ ಪ್ರಸ್ತಾಪಿಸಿದ ಪ್ರಿಷೆಟ್ “carefully ambiguous” ಉರ್ದುವಿನ  “pseudo-specificity” ಅನುವಾದಗಳ ಬಗ್ಗೆ ಹಿಗ್ಗಾಮುಗ್ಗಾ ಬೈಯ್ಯುತ್ತಾನೆ. ಆದರೆ ಬಹಳ ಬೇಗ “ಕುದ್ದು ಕಾವ್ಯ ಆಗುವ” ಗುಣದ (ಅದು ಕೀರ್ನನ್ ಮಾತು) ಉರ್ದುವನ್ನು ಬೇರೆ ಭಾಷೆಗೆ ಮುಕ್ಕಾಗದ ಹಾಗೆ ತರುವುದು ಅಸಾಧ್ಯವೇ.

ಇದಲ್ಲದೆ ಪದ ಪದಗಳ ಅರ್ಥ ವ್ಯತ್ಯಾಸಗಳ ಬಗ್ಗೆ ಅಡುಗಡುಗಿಗೂ ತೊಡಕುಗಳಿವೆ. “ವೋ”, “ಉಸ್ನೆ” ಥರದ ಪದಗಳಿಗೆ ಲಿಂಗದ ಹಂಗಿಲ್ಲ. ಆದರೆ ಕನ್ನಡದಲ್ಲಿ “ಅವಳು”, “ಅವನು” ಅಥವಾ “ಅದು” ಮಾತ್ರವೇ ಆಗಬಲ್ಲದು. ಸಂದರ್ಭಕ್ಕೆ ತಕ್ಕ ಹಾಗೆ ಯಾವುದನ್ನೂ ಒಂದನ್ನು ಆಯ್ಕೆ ಮಾಡದೆ ನಿರ್ವಾಹವಿಲ್ಲ. ಪ್ರಿಯತಮೆಗೆ ಉರ್ದುವಿನಲ್ಲಿ ಕರೆವ ಥರಾವರಿ ಹೆಸರುಗಳನ್ನು ಕನ್ನಡದಲ್ಲಿ ಸಂವಾದಿಯಾಗಿ ಬಳಸಿದರೆ (ಪ್ರಿಯೆ, ಪ್ರಿಯತಮೆ, ಮನದನ್ನೆ…) ಕಂಪನಿ ನಾಟಕದ ದುಷ್ಯಂತನ ಡೈಲಾಗಿನಂತೆ ತೋರುವ ಸಾಧ್ಯತೆಯೇ ಹೆಚ್ಚು. ಹಾಗೆಯೇ “ಜುಲ್ಮ”, “ಸಿತಮ್”ನಂತಹ ಪದಗಳಿಗೆ “ದಬ್ಬಾಳಿಕೆ”, “ಅನ್ಯಾಯ”, ‘ಶೋಷಣೆ” ಈ ಥರದ ಯಾವ ಪದಗಳೂ ಸಂವಾದಿ ಅನ್ನಿಸದೆ ಸ್ವಲ್ಪ ಓವರ್ ಆಕ್ಟಿಂಗ್ ತರದಲ್ಲಿಯೇ ತೋರುತ್ತವೆ.  “ಚಾಕ್-ಎ-ಗಿರೆಬಾನ್” (ಹರಿದ ಕೊರಳ ಪಟ್ಟಿ) ಅಥವಾ “ಕಜ್ ಕುಲಾಹಿ” (ಸೊಟ್ಟ ಕೊಂಕಿಸಿ ಹಾಕಿಕೊಂಡ ಟೋಪಿ) ಇತ್ಯಾದಿ ಉರ್ದು ಪದ ಪುಂಜಗಳ ಅರ್ಥವ್ಯಾಪ್ತಿ  ಅನುವಾದದಲ್ಲಿ ಸಂಪೂರ್ಣವಾಗಿ ಬರುವುದಿಲ್ಲ… ಇನ್ನೂ ಹಲವು.

ಸದೇಹಿ ಸತ್ವ

ಒಟ್ಟಾರೆಯಾಗಿ ಅನುವಾದದಲ್ಲಿ ನಾನು ಪದ್ಯದ ಲಯಕ್ಕೆ (ಪ್ರಾಸಕ್ಕೆ ಅಲ್ಲ) ಮತ್ತು ಅದರಲ್ಲಿ ನಾನು ಕಂಡುಕೊಂಡ “ಮೂಲಸತ್ವ”ಕ್ಕೆ ಆದಷ್ಟು ಹತ್ತಿರ ಇರಲು ಪ್ರಯತ್ನಿಸಿದ್ದೇನೆ. ಈ “ಸತ್ವ” ಎಂಬುದು ವಿದೇಹೀ ಆತ್ಮ ಆಗಿರದೆ ಭಾಷೆಯ ವಿವಿದ ಪರಿಕರಗಳ ಮೂಲಕವೇ ಹುಟ್ಟಿ ಬರುವುದಾದ್ದರಿಂದ ಪದ ಪದಕ್ಕೆ ಬದ್ಧತೆ ಅಲ್ಲದಿದ್ದರೂ ಫೈಜ್ ಕಟ್ಟಿಕೊಡುವ ಭಾಷೆಯ ಚಿತ್ರಗಳಿಗೆ ಒಟ್ಟಂದದಲ್ಲಿ ಬದ್ಧತೆ ಇರಲೇಬೇಕು ಕೂಡ. ಇದು ಹಗ್ಗ ಜಗ್ಗಾಟದ ಹಾಗೆ. ಸ್ವಲ್ಪ ಜಾಸ್ತಿ ಎಳೆದರೆ ಪೂರ್ಣ ಅನುವಾದಕಳೇ ಕಂಡು ಫೈಜ್ ಕಳೆದು ಹೋಗುವ ಸಾಧ್ಯತೆಯೂ ಇದೆ. ನಾಲ್ಕು ಸಾಲಿನ ಚುಟುಕ ಪದ್ಯಗಳಲ್ಲಿ ಫಕ್ಕನೆ ಹೊಳೆವ ಹೈ ವೋಲ್ಟೇಜ್ ಮಾತಿನ ಚಮತ್ಕಾರವೇ ಜೀವಾಳವಾದ್ದರಿಂದ ಮೂಲದ ಜೊತೆ ಸ್ವಲ್ಪ ಹೆಚ್ಚು ಸಲುಗೆ ತೆಗೆದುಕೊಂಡಿದ್ದೇನೆ. ಸಲುಗೆ ಜಾಸ್ತಿಯಾಗಿ “ಅದು ನೀನೋ, ಕನ್ನಡಿಯೊಳಗಿನ ನನ್ನದೇ  ಕಣ್ಣೋ?” ಎಂಬ ಫೈಜ್ ನ ಸಾಲು ನೆನಪಾದಾಗ ಮತ್ತೆ ಸ್ವಲ್ಪ ಮೂಲಕ್ಕೆ ಹತ್ತಿರ ಬರುವ ಪ್ರಯತ್ನ ಮಾಡಿದ್ದೇನೆ.  ಫೈಜ್ ನ ತುಂಬ ಪ್ರಸಿದ್ಧ ಕವಿತೆಗಳನ್ನು ಅನುವಾದಿಸುವಾಗ ಕೈ ಸ್ವಲ್ಪ ಜಾಸ್ತಿಯೇ ಹಿಂಜರಿದು ಮತ್ತೆ ಹೇಗೋ ಸಾವರಿಸಿಕೊಂಡಿದೆ.

ಶಕ್ತಿಯ ಮೂಲವಾದ ಸೂರ್ಯನಿಗೆ ಅತಿ ಹತ್ತಿರದ ಬುಧನಾದರೆ ಸುಟ್ಟು ಬೂದಿ. ತೀರ ದೂರದ ಶನಿಯಾದರೆ ಮಂಜುಗಡ್ಡೆ. ಸರಿದೂರವಿದ್ದು ಹಸಿರು ಹುಟ್ಟುವ ಭೂಮಿಯಾಗುವುದು ಯೋಗಾಯೋಗ!
ಅನುವಾದದ ಬಹುರೂಪ

ಒಂದೇ ಪದ್ಯದ ಸಾಲು ವಿವಿಧ ಅನುವಾದಗಳಲ್ಲಿ ತಾಳುವ ವಿವಿಧ ರೂಪಗಳ ಸಾಮ್ಯ ಮತ್ತು ವ್ಯತ್ಯಾಸಗಳು ಯಾವಾಗಲೂ ಕುತೂಹಲಕಾರಿ. ಕಷ್ಟದ ಪ್ರಾಕಾರವಾದ ಗಜಲ್ಲುಗಳ ಕೆಲ ಅನುವಾದಗಳಂತೂ ಎರಡೂ ಒಂದೇ ಮೂಲದಿಂದಲೇ ಹುಟ್ಟಿದ್ದಾ ಅನ್ನಿಸುವಷ್ಟು ಬೇರೆ ಬೇರೆ ಆಗಿರುವ ಉದಾಹರಣೆಗಳಿವೆ. ಇಲ್ಲಿ ಒಂದು ಉದಾಹರಣೆಯಾಗಿ ಫೈಜ್ ನ ಅತ್ಯಂತ ಜನಪ್ರಿಯ ಮತ್ತು ಸರಳ ಚುಟುಕಾ ಪದ್ಯಗಳಲ್ಲಿ ಒಂದಾದ “ನೆನಪು” ಪದ್ಯದ ಒಂದು ಸಾಲಿನ ಮೂಲ ಮತ್ತು ಆರು  ಅನುವಾದಗಳನ್ನು ನೋಡಿ.

ಇಲ್ಲಿ ಕವಿ ತನ್ನ ಪ್ರೇಯಸಿಯ ಮಬ್ಬಾದ ನೆನಪು ರಾತ್ರಿ ಮತ್ತೆ ಬಂದದ್ದನು ಮೂರು ಉಪಮೆಗಳ ಮೂಲಕ ಬಣ್ಣಿಸುತ್ತಾನೆ. ಇದರ ಮೊದಲ ತುಂಬ ಸಿಂಪಲ್ ಸಾಲು ಮೂಲದಲ್ಲಿ ಹೀಗಿದೆ:

“ರಾತ್ ಯೂ ದಿಲ್ ಮೇ ತೇರಿ ಖೊಯಿ ಹುಯಿ ಯಾದ್  ಆಯಿ”

ಇದರ ಆರು ಅನುವಾದಗಳು ಹೀಗಿವೆ:

1. Last night your faded memory filled my heart (ವಿಕ್ಟರ್ ಕೀರ್ನನ್)
2. Last night a fugitive memory of you slid into my heart (ಶಿವ್ ಕೆ ಕುಮಾರ್)
3. At night my lost memory of you returned (ಅಘಾ ಶಾಹಿದ್  ಅಲಿ)
4. Last night your faded memory came to me (ವಿಕ್ರಂ ಸೇಥ್)
5. Last night your long lost memory came back to me (ಸರ್ವತ್ ರೆಹಮಾನ್)
6. Last night you sneaked into my thoughts (ರಿಜ್ ರಹೀಂ)

ಈ ಸಾಲಿನಲ್ಲಿ ನೆನಪು “ಯೂ ಆಯಿ” (ಹೀಗೆ ಬಂತು) ಅಷ್ಟೇ. ಹೇಗೆ ಅನ್ನುವುದಕ್ಕೆ ಯಾವುದೇ ವಿಶೇಷಣಗಳಿಲ್ಲ. ವಿಕ್ರಂ ಸೇಥ್ ಬಿಟ್ಟು ಉಳಿದ ಅನುವಾದಗಳಲ್ಲಿ “filled”, “slid”, “returned”, “sneaked”, “came back”  ಹೀಗೆ “ಯೂ”ಗೆ ಏನೋ ಒಂದಷ್ಟು ಸೇರಿಕೊಂಡಿದೆ. ನನ್ನ ಅನುವಾದದಲ್ಲಿ ಈ ನೆನಪು “ಸುಮ್ಮಸುಮ್ಮನೆ” ಬಂದದ್ದು. ಈ ನೆನಪಿನ ಬರುವಿಕೆ ಸಹಜ ಮತ್ತು ಅನಾಯಾಸವಾದದ್ದು ಅನ್ನುವ ಭಾವಕ್ಕೆ ಒತ್ತು ಬೇಕು ಅನ್ನಿಸಿದ್ದರಿಂದ ಈ ವಿಶೇಷಣ. ಹೀಗೆ ಅನುವಾದದಲ್ಲಿ ಹೆಜ್ಜೆ ಹೆಜ್ಜೆಗೂ ನಮ್ಮ ಅರ್ಥೈಕೆಯ ಪ್ರಕಾರ ಕೂಡುತ್ತಾ ಕಳೆಯುತ್ತಾ ಹೋಗುತ್ತಿರುತ್ತೇವೆ. ಈ ಕಾರಣಕ್ಕೂ ಓದುಗರಿಗೆ ಮತ್ತು ಅನುವಾದಕರಿಗೆ ಮೂಲದ ತದ್ರೂಪವೇ ಅನುವಾದ ಅನ್ನುವ ಭ್ರಮೆ ಇರಬಾರದು.

ಹೀಗೆ ಅನುವಾದದ ಗೋಳುಗಳ ಬಗ್ಗೆ ಬರೆಯುತ್ತಲೇ ಇರಬಹುದು. ಪ್ರತಿ ಪದ್ಯಕ್ಕೆ ನಾನು ಎಷ್ಟು ಕರಡು ಮಾಡಿದೆ, ಏನೇನು ಬದಲಾವಣೆ ಮಾಡಿದೆ, ಯಾವ್ಯಾವ ಇಕ್ಕಟ್ಟುಗಳನ್ನು ಹೇಗೆ ಬಗೆಹರಿಸಿಕೊಂಡೆ ಅಂತೆಲ್ಲ ಕಥಾ ಕಾಲಕ್ಷೇಪ ಮಾಡಬಹುದು. ಪದ್ಯ ಓದುವುದಕ್ಕೆ ಮೊದಲು ಇಷ್ಟು ಕೇವಿಯೆಟ್ಟುಗಳನ್ನು ಕೇಳಬೇಕಾ ಅನ್ನಿಸುವುದಕ್ಕೆ ಮುಂಚೆ ನಿಲ್ಲಿಸುವುದು ಒಳಿತು. ಮಾಡಿದ ಕೆಲಸಕ್ಕೆ ತಿಂಗಳ ಕೊನೆಯಲ್ಲಿ ಸಂಬಳವೋ ಅಥವಾ ಮಾಡಿದ ಕೆಲಸದಲ್ಲಿಯೇ ಖುಷಿಯೋ ಇಲ್ಲದಿದ್ದರೆ ನಾನಂತೂ ಯಾವ ಕೆಲಸವನ್ನೂ ಮಾಡುವವಳಲ್ಲ. ಹಾಗಾಗಿ ಎಷ್ಟೇ ಗೋಳು ಹೇಳಿಕೊಂಡರೂ ಕೊನೆಯಲ್ಲಿ ಅನುವಾದ ಖುಷಿಯ ಕೆಲಸವೇ. ಅದರಲ್ಲೂ ನನ್ನ ಭಾಷೆ ಅಂತ ಸಲಿಗೆ ಇರುವ ಕನ್ನಡಕ್ಕೆ ಮಾಡುವ ಅನುವಾದ. “ನ್ಯೂಯಾರ್ಕ್ ಟೈಮ್ಸ್” ಪತ್ರಿಕೆಯಲ್ಲಿ ಅನುವಾದದ ಬಗೆಗಿನ ಪುಸ್ತಕವೊಂದರ ವಿಮರ್ಶೆ ಬರೆಯುತ್ತಾ ಆಡಂ ಥರ್ಲ್ ವೆಲ್ ಅನ್ನುವ ಲೇಖಕ ಅನುವಾದದ ಬಗ್ಗೆ ಮಾತಾಡುವವರೆಲ್ಲ ಖುಷಿಯ ಲೇಪವೇ ಇಲ್ಲದೆ ಒಳ್ಳೆ ಯಾಕೆ ಹೀಗೆ ಚರಮ ಗೀತೆಯ ಪ್ರಲಾಪ ಅಥವಾ ಕೋಲು ಹಿಡಿದು ಬೈಯ್ಯುವ ಮೇಡಮ್ಮಿಣಿಯ ದನಿಯಲ್ಲಿಯೇ ಮಾತಾಡುತ್ತಾರೆ ಅಂತ ಕೇಳುತ್ತಾನೆ. ಸ್ವಲ್ಪ ತಮಾಷೆ, ಸ್ವಲ್ಪ ಖುಷಿ ಇದ್ದರೆ ಪಾಪವೇನೂ ಅಲ್ಲ ಅನ್ನುತ್ತಾನೆ. ಅನುವಾದದ ಬಗ್ಗೆ ಆ ಪುಸ್ತಕ ಬರೆದ ಡೇವಿಡ್ ಬೆಲ್ಲೋಸ್ ಅಲ್ಬೇನಿಯನ್ ಮೂಲದ ಕಾದಂಬರಿಯೊಂದನ್ನು ಫ್ರೆಂಚ್ ಮೂಲಕ ಇಂಗ್ಲಿಶಿಗೆ ಅನುವಾದಿಸಿದವನು. ಆತ ಅನುವಾದ ಶಾಲೆಯ ಕ್ವಿಸ್ ನಲ್ಲಿ ಅಥವಾ ಬ್ಯಾಂಕಿನ ಲೆಕ್ಕದಲ್ಲಿ ಇರುವಂತೆ “ಸರಿ” “ತಪ್ಪು” ಆಗಿರುವುದಿಲ್ಲ, ಅದು ಸ್ವಲ್ಪ ಆಯಿಲ್ ಪೇಯಿಂಟಿನಲ್ಲಿ ವ್ಯಕ್ತಿಯೊಬ್ಬನ ಚಿತ್ರ ಬಿಡಿಸಿದ ಹಾಗೆ ಅನ್ನುತ್ತಾನೆ. ಆ ಚಿತ್ರ ವ್ಯಕ್ತಿಯೇ ಅಲ್ಲ, ವ್ಯಕ್ತಿಯ ಹಾಗೆ. ಚಿತ್ರಕಾರನಿಗೆ ಕುಂಚದ ಮೇಲೆ ಹಿಡಿತವಿದ್ದರೆ ಅದರದೇ ಚೆಂದ ಮೂಡಬಹುದು.

ಯಾವುದೇ ಅನುವಾದವನ್ನೂ ಬದಲಿಸುತ್ತಾ, ತಿಕ್ಕುತ್ತಾ, ತೊಳೆಯುತ್ತಾ ಹೋಗಬಹುದು. ಎಲ್ಲ ಅನುವಾದಗಳ ಜೊತೆಗೂ ನಿರಂತರ ಜಗಳ ಕಾಯುತ್ತಲೂ ಇರಬಹುದು. ನಾನೇ ಮಾಡಿದ ಮೊದಲ ಕರಡು ಮತ್ತು ಕೊನೆಯ ಕರಡಿಗೆ ಎರಡೂ ಒಂದೇ ಪದ್ಯದ ಅನುವಾದವಾ ಅನ್ನುವಷ್ಟು ವ್ಯತ್ಯಾಸ ಇದ್ದದ್ದೂ ಉಂಟು. ಈ ಕರಡು ತಿದ್ದುವ ಕೆಲಸವನ್ನು ಯಾವುದೋ ಒಂದು ಹಂತದಲ್ಲಿ ನಿಲ್ಲಿಸಿದಾಗಲೇ ಅದು ಪುಸ್ತಕ. ಆ ಅರ್ಥದಲ್ಲಿ ಪ್ರತಿ ಅನುವಾದ ಕೊನೆಗೂ ಒಂದು “ಸಾಧ್ಯತೆ” ಮಾತ್ರ. ಹಿಂದೆ ಬಂದ ಮತ್ತು ಮುಂದೆ ಬರುವ ಅನುವಾದಗಳ ಸಾಲಿನಲ್ಲಿ “ನಾನೂ ಇದ್ದೇನೆ” ಅಂತ ನಿಲ್ಲುವಂತದು. ಈ ಸರತಿ ನಿಲ್ಲುವ ಪ್ರಕ್ರಿಯೆಯಲ್ಲಿ ಹಲವಂ ಬಲ್ಲವರಿಂದ ಕಲಿತಿದ್ದೇನೆ. ಕಲಿಯದೇ ಉಳಿದ ಮೂರ್ಖತನಗಳಿಗೆ ನಾನೇ ಹೊಣೆ.

ಅನುವಾದಕರು ಮತ್ತು ಲೇಖಕರು ತಮ್ಮ “ನಾಲ್ಕು ಮಾತು”ಗಳ ಅಂತ್ಯದಲ್ಲಿ ತಮ್ಮ ಸಹಾಯಕ್ಕೆ ನಿಂತ ಗೆಳೆಯ, ಗೆಳತಿಯರ ಹೆಸರು ಪಟ್ಟಿ ಮಾಡಿ ವಂದನೆ ಹೇಳುವುದು ವಾಡಿಕೆ. ನಾನು ಈ ಸಂಪ್ರದಾಯ ಕೈ ಬಿಟ್ಟು ನಾನು ಕೆಲಸ ಮಾಡುವ “ದಿ ಹಿಂದೂ” ಪತ್ರಿಕಾಯಾಲಯದ ಒಳಗಿನ ಮತ್ತು ಅದರ ಹೊರಗಿನ ಪ್ರಪಂಚದ ಎಲ್ಲಾ ಸ್ನೇಹಿತರಿಗೂ ಒಟ್ಟಾಗಿ “ಥ್ಯಾಂಕ್ಸ್ ಕಣ್ರೀ” ಅಂತ ಒಂದೇ ಮಾತು ಹೇಳಿಬಿಡುತ್ತೇನೆ. ಪ್ರಕಟಿಸುತ್ತಿರುವ ಗೌರಿ ಲಂಕೇಶ್, ಅನುವಾದಕ್ಕೆ ಅನುಮತಿ ಕೊಟ್ಟ ಫೈಜ್ ಟ್ರಸ್ಟ್, ಮುನ್ನುಡಿ ಬರೆದುಕೊಟ್ಟ ಫಣಿರಾಜ್, ಬೆನ್ನುಡಿ ಬರೆದ ರೆಹಮತ್ ತರಿಕೆರೆ, ಚಿತ್ರ ರಚಿಸಿಕೊಟ್ಟ ಸುಲ್ತಾನ್, ನನ್ನ ದಿನದಿನದ ಉಪದ್ಯಾಪಗಳನ್ನು ಸಹಿಸಿಕೊಂಡು ಜೊತೆಗೆ ಬದುಕುವ ಭಾನು ಮತ್ತು ಗೌತಮಿ ಹಾಗೂ ಆಚೆ ಮತ್ತು ಈಚೆ ಕಡೆಯ ಕುಟುಂಬದ ಸದಸ್ಯರಿಗೆ ಶರಣು.

—–

ಸ್ವಾತಂತ್ರ್ಯದ ಈ ಬೆಳಗು

ಮೈಲಿ ಕಲೆ ಹೊತ್ತ, ಕತ್ತಲು ಕಚ್ಚಿದ ಈ ಬೆಳಗು

ನಾವು ರೆಪ್ಪೆಗೆ ರೆಪ್ಪೆ ಹಚ್ಚದೆ ಕಾದಿದ್ದ ಬೆಳಗಲ್ಲ.

 

ಬಾನ ಬೆಂಗಾಡಲ್ಲಿ ತಾರೆಗಳ ತಾಣ, ಕತ್ತಲ ಕಡಲ ತಡಿ,

ನೋವಿನ ದೋಣಿ ಲಂಗರು ಹಾಕುವ ಬಂದರ

ಹುಡುಕಿಯೇ ತೀರುವ ಛಲದಿಂದ ಹೊರಟ

ನಮ್ಮ ಕಣ್ಣುಗಳು ಹುಡುಕಿ ತಡಕಾಡಿದ್ದು ಈ ಬೆಳಗಲ್ಲ.

 

ಬಿಸಿರಕ್ತದ ತರುಣರು ನಾವು ನುಗ್ಗಿ ನಡೆದಾಗ

ಜಗ್ಗಿ ನಿಲ್ಲಿಸಿದ ಮೃದು ಕರಗಳೆಷ್ಟೋ,

ಬಿಸಿಯುಸಿರು ಪಿಸುಗುಟ್ಟಿದ ಕರೆಗಳೆಷ್ಟೋ.

ಸುಂದರ ಬೆಳಗ ಹೊಳೆವ ಕೆನ್ನೆಯ ಕನವರಿಕೆಯಲ್ಲಿ

ಅದರ ಮಿರುಗು ಸೆರಗ ಹಿಡಿವ ಹಪಹಪಿಕೆಯಲ್ಲಿ

ಎಲ್ಲಕ್ಕೂ ಬೆನ್ನು ಹಾಕಿ ಹೊರಟುಬಿಟ್ಟಿದ್ದೆವು ನಾವು.

ಮಿಲನೋತ್ಸಾಹದ ಅಲೆ ಏರಿ ಏರಿ ಬಂದಿತ್ತು

ಬೆವರು ಬಳಲಿಕೆ ಇಂಗಿ ಇಂಗಿ ಹೋಗಿತ್ತು.

 

ಈಗ ಕತ್ತಲು ಹರಿದು ಬೆಳಕು ಮೂಡಿದೆಯೆಂದು ಸುದ್ದಿ.

ಅರಸಿ ಬಂದ ಹೆಜ್ಜೆ ಗುರಿಯ ತಬ್ಬಿದೆಯೆಂದು ಸುದ್ದಿ.

ನಮ್ಮ ನಾಯಕರ ರೀತಿರಿವಾಜೆಲ್ಲ ಬೇರೆಯೇ ಈಗ.

ಇಲ್ಲಿ ಗೆದ್ದ ಪ್ರೇಮದ ಹಬ್ಬದಾಚರಣೆಗಷ್ಟೇ ಅನುಮತಿ,

ವಿರಹ ಗೀತೆಯ ಗುನುಗುನಿಸುವುದೂ ನಿಷಿದ್ಧ.

ಉರಿವ ಎದೆಯ ಆಕ್ರಂದನ, ಕೆಂಪಡರಿದ ಕಣ್ಣ ಧಗೆ

ಅಗಲಿಕೆಯ ಬೇಗೆ ಯಾವ ಮದ್ಡಿಗೂ ತಣಿವ ಲಕ್ಷಣವಿಲ್ಲ.

 

ಬೆಳಗಿನ ತಂಪು ಗಾಳಿ ಬಂದದ್ದೆಲ್ಲಿಂದ? ಹೋದದ್ದೆಲ್ಲಿಗೆ?

ದಾರಿಯ ಪಕ್ಕದ ದೀಪ ಇನ್ನೂ ಆರಿಲ್ಲ

ಕವಿದ ಕತ್ತಲೆಯ ಭಾರದ ಹೊರೆಯಿನ್ನೂ ಇಳಿದಿಲ್ಲ.

ಕಣ್ಮನಗಳ ಬಂಧನ ಕಳಚಿಲ್ಲ.

ನಡೆ, ನಡೆ, ದಾರಿ ಇನ್ನೂ ದೂರವಿದೆ.
ನೆನಪಿನ ಚಿತೆ

ನೆನಪಿನ ಚಿತೆಯು ಧಗಧಗ ಉರಿದಿದೆ…

ಬರುವಳೋ ಬರಲೊಲ್ಲಳೋ ತಿಳಿಯದೆ
ಕಾದು ಕಾದು ಜೀವ ಸವೆಸಿದ ಪರಿಯ

ಹಾಡು ಕಟ್ಟಿ ಹಾಡೋಣ ಬಾ.

ಅರ್ಧ ಗಳಿಗೆ ರೆಪ್ಪೆ ಮುಚ್ಚಿದ ಕೂಡಲೆ

ಅವಳದೇ ಬಿಂಬ ಕಣ್ಣೊಳಗೆ

ಬಾ, ಭಗ್ನ ಹೃದಯ ಕಿರೀಟವ ತೊಟ್ಟು

ಹೃದಯವಿಲ್ಲದವಳ ಮುಂದೆ ಹಾಜರಾಗೋಣ

ಅಳು ಬಂದಾಗ ನಗೋಣ,
ಎದೆ ಹತ್ತಿ ಉರಿದರೆ ದೀಪ ಬೆಳಗೋಣ.

ಪ್ರೇಮ ಕಥೆಗೆ ಮೊದಲಿಲ್ಲ ಕೊನೆಯಿಲ್ಲ

ಮೊಗೆದಷ್ಟೂ ಕಥೆ ಮುಗಿಯುವುದಿಲ್ಲ.

ಪ್ರೀತಿಯ ರೀತಿಗೆ ಪ್ರೀತಿಯ ರೀತಿಯೇ ಸಾಟಿ
ಬೇಡದೆಯೆ ಏನೆಲ್ಲಾ ಸಿಕ್ಕಿಬಿಟ್ಟಿದೆ ನೋಡಿ!

ಅವಳಿಂದ ಬಚ್ಚಿಟ್ಟ ಮಾತೇ  ಇಲ್ಲದಿರುವಾದ
ಫೈಜ್, ಬೇಡ ನಿನಗೆ
ಬೇಡದ ಮಾತಾಡಿ ಮತ್ತೆ ಪರಿತಪಿಸುವ ರೋಗ.

ನೆನಪಿನ ಚಿತೆಯು ಧಗಧಗ ಉರಿದಿದೆ…

ಫಿಲಿಸ್ತೀನಿ ಮಗುವಿಗೆ ಜೋಗುಳ
ಅಳಬೇಡ ಪುಟ್ಟ ಮರಿ
ಅಳಬೇಡ

ವರುಷ ವರುಷಗಳಿಂದ ಆತ್ತತ್ತು ಈಗಷ್ಟೇ
ಅಮ್ಮ ಕಣ್ಣ ಮುಚ್ಚಿ ಮಲಗಿಹಳು
ಅಳಬೇಡ ಪುಟ್ಟ ಮರಿ
ಅಳಬೇಡ

ನೆಲೆ ಇರದ ಬದುಕಿಗೆ ರಜೆ ಹಾಕಿ ಈಗಷ್ಟೇ
ಅಪ್ಪ ಕಾಲ ಚಾಚಿ ಕೂತಿಹನು
ಅಳಬೇಡ ಪುಟ್ಟ ಮರಿ
ಅಳಬೇಡ

ಕನಸ ಚಿಟ್ಟೆಯ ಅರಸಿ ಹಾರುತ್ತಾ ಈಗಷ್ಟೇ
ಅಣ್ಣ ದೂರದ ಲೋಕ ತಲುಪಿಹನು
ಅಳಬೇಡ ಪುಟ್ಟ ಮರಿ
ಅಳಬೇಡ

ಕೊನೆ ಇರದ ನಾಳೆಗಳ ಕೈ ಹಿಡಿದು ಈಗಷ್ಟೇ
ಅಕ್ಕ ಪಕ್ಕದೂರಿಗೆ ನಡೆದಿಹಳು
ಅಳಬೇಡ ಪುಟ್ಟ ಮರಿ
ಅಳಬೇಡ

ನಿನ್ನ ಮನೆಯಂಗಳದಿ ನೇಸರಗೆ ಕೊನೆಸ್ನಾನ
ಚಂದ್ರಮನೂ ದಫಾನಾಗಿ ಹೋಗಿಹನೋ
ಅಳಬೇಡ ಪುಟ್ಟ ಮರಿ
ಅಳಬೇಡ

ನಿನ್ನಮ್ಮ, ನಿನ್ನಪ್ಪ, ನಿನ್ನಣ್ಣ , ನಿನ್ನಕ್ಕ
ನಿನ್ನ ಬೆನ್ನಿಗೆ ಕಣ್ಣ ಇತ್ತಿಹರೋ
ಅಳಬೇಡ ಪುಟ್ಟ ಮರಿ
ಅಳಬೇಡ

ತಣ್ಣ ತೇಲುವ ಸೂರ್ಯ, ಚಲಿಸದ ಚಂದ್ರಮ
ಕಣ್ಣ ಮಿಟುಕದೆ ನಿನ್ನ ಕಾಯುವರೋ
ಅಳಬೇಡ ಪುಟ್ಟ ಮರಿ
ಅಳಬೇಡ

ಅತ್ತರೆ ಮತ್ತೆ ಮತ್ತೆ ಅಳಿಸುವ ಮಂದಿಯ
ನಕ್ಕು ಹೆದರಿಸಿಬಿಡೋ ಕಂದಮ್ಮ
ಅಳಬೇಡ ಪುಟ್ಟ ಮರಿ
ಅಳಬೇಡ

ಕಳೆದು ಹೋದವರೆಲ್ಲ ಮಾರು ವೇಷದಿ ಬಂದು
ಮತ್ತೆ ಆಡಲುಬಹುದು ನಿನ ಸಂಗ
ಅಳಬೇಡ ಪುಟ್ಟ ಮರಿ
ಅಳಬೇಡ.

ನೀನು ಕೊಟ್ಟದ್ದು

ನೀನು ಕೊಟ್ಟ ಪದಗಳನೆಲ್ಲ ಪೋಣಿಸಿ
ನೋಡು ಕಟ್ಟಿದ್ದೇನೆ ಈ ನಿನ್ನ ಪದ್ಯ.

ನಿನ್ನ ಸಂಗದಿ ಮುಳುಗುವ ಮೊದಲು
ಇದ್ದರೇನು ಬಿಡು ಬೇರೆ ಸ್ಫೂರ್ತಿ

ಈ ಬಣ್ಣ, ಕಂಪು, ಲಯದ ಇಂಪು
ಪ್ರತಿಮೆಗಳ ಒನಪು ಎಲ್ಲ ನಿನ್ನದೇ.

ನಿನ್ನ ಬಯಸಿ ಕಾದು ಹರಳುಗಟ್ಟಿದ
ಒಡವೆಗಳ ಲೆಕ್ಕ ಹಾಕುತ್ತಾ ಕೂತಾಗ
ಕಳಚಿ ಬಂದು ಬಿದ್ದಿದೆ ನನ್ನ ಮಡಿಲಿಗೆ
ಆಗಸದ ಫಲಕದ ಎಲ್ಲ ನಕ್ಷತ್ರಗಳು.

ನೀನು ನನ್ನವಳಾಗಿದ್ದು ಎಷ್ಟು ಗಳಿಗೆ?
ಅದಿರಲಿ ಬಿಡು.
ಏಕೆ ಬೇಕು ಅಮರತೆಯ ಬಯಕೆ?

Advertisements

1 ಟಿಪ್ಪಣಿ »

  1. kantharaju said

    ನಿಮ್ಮ ಅನುವಾದದ ಎಲ್ಲ ಪದ್ಯಗಳನ್ನು ಓದಿದೆ, ಪೈಜ್ ನಿಜಕ್ಕೂ ಅಧ್ಬುತವಾದ ಕವಿ,ಪಣಿರಾಜ್ ರವರ ಮುನ್ನುಡಿ ಚನ್ನಾಗಿದೆ, ನಾನು ತುಮಕೂರಿನಲ್ಲಿ ನಿಮ್ಮ ಪುಸ್ತಕವನ್ನು ಕೊ೦ಡು ಓದಿದ್ದೇನೆ.

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: