ಪದ್ಯಗಳ ಅಸಲು, ಬಡ್ಡಿ ಇತ್ಯಾದಿ

ಯಾಕೆ ಒಂದು ಪದ್ಯ ಇಷ್ಟ ಆಗುತ್ತದೆ ಅಂತ ಹೇಳುವುದು ಎಷ್ಟು ಕಷ್ಟ ಅಲ್ಲವಾ? ಕೆಲವು ಪದ್ಯಗಳು ಮನದ ಭಾವವನ್ನು ಪದಗಳಲ್ಲಿ ಹೇಳಿಬಿಟ್ಟರೆ ಅದರ ಒಳಗೆ ಹುದುಗಿದ ನಾಜೂಕು ಅರ್ಥ ಒಡೆದು ನುಚ್ಚು ನೂರಾಗುತ್ತದೇನೋ ಅನ್ನುವ ತಮ್ಮ ಅತಿ ಸೂಕ್ಷ್ಮತೆಯಿಂದ ಚೆಂದ ಅನ್ನಿಸುತ್ತವೆ. ಆಹಾ ಇದೇ ನೋಡಿ ಪದ್ಯದ “ಅಸಲು” ಗುಣ ಅಂದುಕೊಳ್ಳುವಷ್ಟರಲ್ಲಿ ಇನ್ನೊಂದು ಪದ್ಯ ಬಂದು ನೇರ ನೇರ ಗುಂಡು ಹಾರಿಸಿದ ಹಾಗೆ ಮಾತಾಡಿ ನಾವು ಕಂಡುಕೊಂಡ ಅಸಲು ಬಡ್ಡಿ ಎಲ್ಲವನ್ನೂ ಹುಡಿ ಮಾಡಿಬಿಡುತ್ತದೆ! ಇದು ಯಾವತ್ತೂ ಬಗೆ ಹರಿಯದ, ಅನೇಕಾನೇಕ ಜಗಳಗಳಿಗೆ ಗ್ರಾಸ ಒದಗಿಸಿದ ಹಳೆಯ ಜಿಜ್ಞಾಸೆ….

“ಪೆಂಗ್ವಿನ್  ಬುಕ್ ಆಫ್ ಸೋಶಿಯಸಿಸ್ಟ್ ವರ್ಸ್” ಪುಸ್ತಕ ಓದುತ್ತಾ ಕಾವ್ಯವೆಂಬ ಸೋಜಿಗವ ಬಗ್ಗೆ ಹೀಗೇ ಯೋಚಿಸುತ್ತಿದ್ದೇನೆ. ಎಷ್ಟೊಂದು ಚೆಂದದ ಪದ್ಯಗಳು, ಎಷ್ಟೊಂದು ಧೀಮಂತ ಬದುಕುಗಳು ಅನಿವಾರ್ಯವಾಗಿ ಭಾಷೆಯ ಕಾರಣದಿಂದಲೋ ಅಥವಾ ನಾವೇ ಕೈಯ್ಯಾರ ತೊಟ್ಟುಕೊಂಡ ಕಣ್ಣುಪಟ್ಟಿಯ ಕಾರಣದಿಂದಲೋ ನಮ್ಮನ್ನು ತಲುಪದೆಯೇ ಉಳಿದುಬಿಡುತ್ತವೆ. ಉದಾಹರಣೆಗೆ ಸುಪ್ರಸಿದ್ಧ ಟರ್ಕಿಯ ಕವಿ ನಜೀಮ್ ಹಿಕ್ಮತ್ ನಮ್ಮ ತಲೆಮಾರಿನ ಬಹಳ ಮಂದಿಗೆ ಗೊತ್ತಿಲ್ಲ. ತನ್ನ ೬೧ ವರ್ಷದ ಬದುಕಿನಲ್ಲಿ ೧೮ ವರ್ಷ ಜೈಲಿನಲ್ಲಿ ಕಳೆದ ಈ ಕವಿಯ ಬದುಕು ಮತ್ತು ಕಾವ್ಯ ಎರಡೂ ಅದ್ಭುತ. ಈ ಸಂಕಲನದಲ್ಲಿ ಕೆಲ ಖ್ಯಾತ ನಾಮರ (ನೆರುಡ, ಮಾಯಕೊವಸ್ಕಿ. ಬ್ರೆಕ್ಟ್, ಡಿಲನ್ ತಾಮಸ್, ಹೊ ಚಿ ಮಿನ್…) ಪದ್ಯಗಳು ಇವೆಯಾದರೂ ಹೆಚ್ಚು ಕುತೂಹಲ ಹುಟ್ಟಿಸುವುದು ನಾವು ಹೆಸರೇ ಕೇಳದವರ ಮನ ಕಲಕುವ  ಕವಿತೆಗಳು. ಕೆಲವು ಚರಿತ್ರೆಯ ಒಂದು ಘಟ್ಟದಲ್ಲಿ ಬರೆದವು (ಸ್ಪಾನಿಶ್ ಸಿವಿಲ್ ಯುದ್ಧ, ಮಹಾ ಯುದ್ಧ ಇತ್ಯಾದಿ). ಇದರಲ್ಲಿ ಅನೇಕವು ಈ ಸಂದರ್ಭಗಳ ಆಚೆಗೂ, ಇಂದಿಗೂ ನಮಗೆ ತಲುಪುವಂತವು.

ಈ ಪುಸ್ತಕದ ಮುನ್ನುಡಿಯಲ್ಲಿ ಸಂಪಾದಕ ಮತ್ತು ಕವಿ ಅಲೆನ್ ಬೋಲ್ಡ್ ಹೇಳುವ ರಾಜಕೀಯ ಮತ್ತು ಕಾವ್ಯದ ನಡುವಿನ ಸಂಬಧದ ಬಗ್ಗೆ ಬರೆದ ಒಂದೆರಡು ಮಾತುಗಳು ಹೇಗಿವೆ:

“…Art is a research into life, and life is contained in societies, and societies are governed by political institutions. This makes a political choice imperative for thinking individuals. The choice may be to opt out of politics (as far as this is possible) but it will still be a choice. Or it may be accepting that ‘whatever is, is right’. Or it may be dissent. These choices and the implications involved in them are part of the research into life that is  art…”

“…The difficulty of absorbing political material into art is not confined to the occasional poets who explode with moral indignation with the impact of each distant bomb. Sympathy with the sufferings and aspirations of other people is simply not enough; one must do justice to artistic problems, and not expect art to acquiesce when approached by political material…”

ಈ ಪುಸ್ತಕದ ಕೆಲವು ಪದ್ಯಗಳನ್ನು ಇಲ್ಲಿ ಅನುವಾದ ಮಾಡಿದ್ದೇನೆ. ಇವು ಕೇವಲ ಉದಾಹರಣೆಗಳಷ್ಟೇ. ಓದದೆ ಇರುವವರು ಓದಲು ಯೋಗ್ಯವಾದ ಪುಸ್ತಕ. (ಇಲ್ಲಿ ಫೈಜ್ ಮತ್ತು ಇಕ್ಬಾಲ್ ಬಿಟ್ಟು ಇನ್ಯಾವುದೇ ಉಪಖಂಡದ ಕವಿಗಳ ಪ್ರಸ್ತಾಪ ಇಲ್ಲದಿರುವುದು ಮಾತ್ರವೇ ನನ್ನ ಕಂಪ್ಲೆಂಟು.)

 

ಹೊ ಚಿ ಮಿನ್ (ವಿಯೆಟ್ನಾಂ)

ನಿರ್ಬಂಧ

ಸ್ವಾತಂತ್ರ್ಯ ಇಲ್ಲದ ಬದುಕು ನಿಜವಾಗಿಯೂ ಕಷ್ಟ ಕಣ್ರೀ
ಒಂದಾ ಮಾಡುವುದಕ್ಕೂ ಇಲ್ಲಿ ರೂಲ್ಸುಗಳ ಕಾಟಾನ್ರೀ
ಬಾಗಿಲು ತೆರೆದಾಗ ಬರುವುದೇ ಇಲ್ಲಲ್ರಿ ಉಚ್ಚೆ
ಬೀಗ ಜಡಿದ ಮೇಲೆ ನುಗ್ಗಿ ಬರತ್ತಲ್ರೀ ಹಿಡಿದು ರಚ್ಚೆ!

 

ನಜೀಮ್  ಹಿಕ್ಮತ್  (ಟರ್ಕಿ)

ಅಸಲು ಸವಾಲು

ಹರಡುತ್ತಿರುವ ಬೆಳಕಿನ ನಟ್ಟನಡುಬಿಂದುವಿನಲ್ಲಿ ನಾನು.
ಲೋಕ ಚೆಂದದ ರಾಶಿ, ಬೆರಳುಗಳಿಗೆ ಭೀಕರ ಹಸಿವೆ.

ಮರಗಳ ಕಂಡಷ್ಟೂ ಇನ್ನೂ ಕಾಣುವ ಹಪಹಪಿಕೆ ಕಣ್ಗಳಿಗೆ.
ಅದೆಷ್ಟು ಪಚ್ಚೆಹಸಿರು, ಅದೆಷ್ಟು ಭರವಸೆಗಳ ತೋರಣ.

ಹಿಪ್ಪುನೇರಳೆ ಸಾಲಿನುದ್ದಕ್ಕೂ ಕಿರಣಗಳ ಹಾದಿ.
ಜೈಲಿನಾಸ್ಪತ್ರೆಯ ಕಿಟಕಿಯ ಮುಂದೆ ನಿಂತಿದ್ದೇನೆ.

ಮೂಗಿಗೆ ಔಷಧಿಗಳ ವಾಸನೆ ಬಡಿಯುತ್ತಿಲ್ಲ.
ಇಲ್ಲೇ ಎಲ್ಲೋ ಸಂಪಿಗೆ ಅರಳಿರಬೇಕು.

ವಿಷಯವಿಷ್ಟೇ:

ಸಿಕ್ಕಿಬಿದ್ದು ಜೈಲು ಸೇರುವುದೆಲ್ಲ ಇದ್ದದ್ದೇ ಮಾಮೂಲು.
ಶರಣಾಗದೆ ಉಳಿಯುವುದು ಹೇಗೆನ್ನುವುದು ಅಸಲು ಸವಾಲು.

ಹತ್ತು ವರ್ಷ

ನಾನು ಈ ಕತ್ತಲ ಕೊಂಪೆಗೆ ಬಂದು ಬಿದ್ದ ಮೇಲೆ
ಭೂಮಿ ಸೂರ್ಯನಿಗೆ ಹತ್ತು ಪ್ರದಕ್ಷಿಣೆ ಸುತ್ತಿಯಾಗಿದೆ.
ಭೂಮಿಗೆ ಕೇಳಿದರೆ
ಹತ್ತು ವರ್ಷ ಎಲ್ಲ ಅದ್ಯಾವ ಲೆಕ್ಕ ಬಿಡಿ ಅಂದೀತು.
ನನಗೋ ಬದುಕಿನ ಹತ್ತು ವರ್ಷ ಕಿತ್ತು ಎಸೆದ ಲೆಕ್ಕ.

ನನ್ನನ್ನು ಈ ಕತ್ತಲ ಕೊಂಪೆಗೆ ತಂದು ಎಸೆದ ದಿನ
ಕೈಯ್ಯಲ್ಲಿ ಒಂದು ಮುಂಡು ಪೆನ್ಸಿಲ್ಲಿತ್ತು.
ಒಂದೇ ವಾರದಲ್ಲಿ ಸವೆಸವೆದು ಹೋಯಿತು.
ಪೆನ್ಸಿಲ್ಲನ್ನು ಕೇಳಿದರೆ
ಅಯ್ಯೋ ನನ್ನ ಅಯಸ್ಸೇ ತೀರಿತು ಅಂತ ಅತ್ತೀತು.
ನನಗೆ ಬರೀ ಜುಜುಬಿ ಒಂದು ವಾರದ ಲೆಕ್ಕ.

ನಾನು ಈ ಕತ್ತಲ ಕೊಂಪೆಗೆ ಬಂದು ಬಿದ್ದಾಗ
ಕೊಲೆಯ ಆರೋಪ ಹೊತ್ತು ಇಲ್ಲೇ ಇದ್ದ ಓಮರ್
ಏಳುವರೆ ವರ್ಷ ಕಳೆದು ಹೊರಟುಬಿಟ್ಟ.
ಒಂದಷ್ಟು ದಿನ ಹೊರಗೆ ಮಜಾ ಮಾಡಿ
ಮತ್ತೆ ಕಳ್ಳಸಾಗಣೆ ಮಾಡಿ ಸಿಕ್ಕಿ ಬಿದ್ದು
ಒಂದಾರು ತಿಂಗಳು ಮರಳಿ ಬಂದಿದ್ದು ಹೊರಟ.
ನೆನ್ನೆ ಬಂದ ಸುದ್ದಿ: ಓಮರನಿಗೆ ಲಗ್ನವಾಗಿದೆಯಂತೆ.
ಬರುವ ಬೇಸಿಗೆಗೆ ಒಂದು ಮಗುವೂ ಆಗುವುದಂತೆ.

ನಾನು ಈ ಕತ್ತಲ ಕೊಂಪೆಗೆ ಬಂದು ಬಿದ್ದ ದಿನ
ಗರ್ಭ ದರಿಸಿದ ಅಮ್ಮಂದಿರ ಮಕ್ಕಳಿಗೆಲ್ಲ
ಈಗ ಹತ್ತರ ಹುಟ್ಟು ಹಬ್ಬದ ಸಂಭ್ರಮ.
ಅಂದು ಹುಟ್ಟಿದ ನಡುಗುವ ಕಡ್ಡಿ ಕಾಲಿನ
ಕುದುರೆ ಮರಿಗಳು ಈಗ
ಅಂಡು ಕುಣಿಸಿ ವಯ್ಯಾರ ನಡೆವ ಕುದುರೆಗಳು.
ಆಲಿವ್ ಮರದ ಚಿಗುರುಗಳು ಮಾತ್ರ
ಇಂದಿಗೂ ಎಳೆಎಳೆ ಹಸಿರು.

ನನ್ನನ್ನು ಈ ಕತ್ತಲ ಕೊಂಪೆಗೆ ಎಸೆದ ನಂತರ
ದೂರದ ನನ್ನೂರಲ್ಲಿ ಹೊಸಹೊಸ ಸ್ಮಾರಕಗಳೆದ್ದಿವೆಯಂತೆ.
ನನ್ನ ಇಡೀ ಸಂಸಾರ ಆ ಪುಟ್ಟ ಮನೆ ಬಿಟ್ಟು ಗುಳೆ ಹೋಗಿ
ಈಗ ನಾನು ಕಾಣದ ಬೀದಿಯಲ್ಲಿ,
ಕಾಣದ ಮನೆಯಲ್ಲಿ ಇದೆಯಂತೆ.

ನನ್ನನ್ನು ಈ ಕತ್ತಲ ಕೊಂಪೆಗೆ ಎಸೆದ ದಿನ
ಬ್ರೆಡ್ಡು ಹತ್ತಿಯಷ್ಟು ಬಿಳಿ ಇತ್ತು.
ನಂತರ ಬ್ರೆಡ್ಡಿಗೂ ರೇಷನ್ನು ಶುರುವಾಯಿತು.
ಇಲ್ಲಿ, ಈ ಕೊಂಪೆಯಲ್ಲಿ,
ಬ್ರೆಡ್ಡಿನ ಹಳಸು ತುಂಡಿಗೆ ನಡೆದಿವೆ ಕೊಲೆಗಳು.
ಈಗ ಪರಿಸ್ಥಿತಿ ಸ್ವಲ್ಪ ಪರವಾಗಿಲ್ಲ.
ಆದರೂ ಇಲ್ಲಿನ ಬ್ರೆಡ್ಡಿಗೆ ರುಚಿಯೇ ಇಲ್ಲ.

ನನ್ನನ್ನು ಈ ಕತ್ತಲ ಕೊಂಪೆಗೆ ಎಸೆದ ದಿನ
ಎರಡನೇ ಮಹಾಯುದ್ಧ ಶುರುವಾಗಿರಲಿಲ್ಲ.
ಡಾಶಾವ್ ಪಟ್ಟಣದಲ್ಲಿ ಯಹೂದಿಗಳ ಬೇಯಿಸುವ
ಒಲೆಗೆ ಬೆಂಕಿ ಒಟ್ಟಿ ಇನ್ನೂ ಸಜ್ಜು ಮಾಡಿರಲಿಲ್ಲ.
ಹಿರೋಶಿಮಾದಲ್ಲಿ ಅಣುಬಾಂಬು ಸ್ಫೋಟಿಸಿರಲಿಲ್ಲ.
ನೋಡಿ, ಹೀಗೆ ಕಾಲ ಹರಿದು ಹೋಗಿದೆ…
ಕೊಲೆಯಾದ ಹಸುಳೆಯ ರಕ್ತದ ಹಾಗೆ.
ಈಗ ಅದೆಲ್ಲ ಮುಗಿದಿದೆ.
ಅಮೆರಿಕಾದ ಡಾಲರ್ರು ಆಗಲೇ
ಮೂರನೇ ಯುದ್ಧದ
ಮಾತು ಶುರು ಮಾಡಿದೆ.

ಅದೇನೇ ಇರಲಿ…
ನನ್ನನ್ನು ಈ ಕತ್ತಲ ಕೊಂಪೆಗೆ ಎಸೆದ ದಿನಕ್ಕಿಂತ
ಈಗ ಎಷ್ಟೋ ಬೆಳಕಾಗಿದೆ.
ಈಗ ನನ್ನ ಜನ ಕೈಗಂಟು ಊರಿ
ಅರ್ಧ ಎದ್ದಿದ್ದಾರೆ.
ಭೂಮಿ ಸೂರ್ಯನಿಗೆ  ಹತ್ತು ಪ್ರದಕ್ಷಿಣೆ ಸುತ್ತಿಯಾಗಿದೆ.

ಅದೇ ಉಮೇದಿನಲ್ಲಿ ಇಂದೂ ಹೇಳುತ್ತೇನೆ
ನನ್ನ ಜನರಿಗೆ ನಾನು ಅಂದು ಹೇಳಿದ ಮಾತು:
ಭೂಮಿಯ ಮೇಲಿನ ಇರುವೆಗಳಂತೆ,
ಸಾಗರದ ಮೀನುಗಳಂತೆ,
ಆಕಾಶದ ಹಕ್ಕಿಗಳಂತೆ
ಅಕ್ಷೋಹಿಣಿ ಸೈನ್ಯ ನೀವು.
ರಣಹೇಡಿಗಳೋ, ವೀರರೋ
ಜಾಣರೋ, ದಡ್ಡರೋ,
ಕಟ್ಟುವವರು, ಕೆಡವುವವರು ಎಲ್ಲ ನೀವೇ.
ಅದಕ್ಕೇ ನನ್ನ ಹಾಡಿನಲ್ಲೆಲ್ಲ ನಿಮ್ಮದೇ ಮಾತು.

ಇನ್ನು
ಹತ್ತು ವರ್ಷ ನಾನು ಇಲ್ಲಿ ಕಳೆದ ಬಗೆ…
ಇತ್ಯಾದಿ ವಿಷಯವೆಲ್ಲ
ಸುಮ್ಮನೆ ಹೀಗೇ ಹರಟೆ ಮಾತು.

ಮತ್ತೆ ಸಾವನ್ನು ನೆನೆದು

ನನ್ನ ಸಂಗಾತಿ,
ನನ್ನ ಜೀವದ ಜೀವ,
ನನ್ನ ಪಿರಾಯೇ,
ನಾನಿಂದು ಸಾವಿನ ಬಗ್ಗೆ ಯೋಚಿಸುತ್ತಿದ್ದೇನೆ.
ನನ್ನ ಧಮನಿಗಳಲ್ಲೋಡುವ ರಕ್ತದ ಗತಿ
ನಿಧಾನವಾಗುತ್ತಿದೆ.
ಒಂದು ದಿನ,
ಹಿಮ ಬೀಳುತ್ತಿರುವಾಗಲೋ,
ಕಗ್ಗತ್ತಲು ಕವಿದಿರುವಾಗಲೋ,
ನಟ್ಟ ನಡು ಮಧ್ಯಾಹ್ನದ ಸುಡು ಬಿಸಿಲಲ್ಲೋ…
ನಮ್ಮಿಬ್ಬರಲ್ಲಿ ಯಾರ ಜೀವ ಮೊದಲು
ಹಾರಿ ಹೋದೀತು?
ಎಲ್ಲಿ… ಎಂದು… ಹೇಗೆ?
ಸಾವಿಗೆ ಒಂದು ಗಳಿಗೆ ಮುಂಚೆ
ಕೇಳಿದ ಕೊನೆಯ ಶಬ್ದ,
ನೋಡಿದ ಕೊನೆಯ ಬಣ್ಣ,
ಅದಾವುದಿರಬಹುದು?
ಇಲ್ಲೇ ಉಳಿದು ಹೋದವರ
ಮೊದಲ ಹೆಜ್ಜೆ ಎಲ್ಲಿಗಿದ್ದೀತು?
ಮೊದಲ ಮಾತು ಯಾವುದಿದ್ದೀತು?
ನಾಲಿಗೆ ಮೇಲಿನ ರುಚಿ ಹೇಗಿದ್ದೀತು?
ನಾವು ದೂರ ದೂರ ಸಾಯಬಹುದೇ?
ಸಾವಿನ ಸುದ್ದಿ
ಗಂಟಲೊಡೆದು ಚೀರಿತ್ತಲೋ,
ಮೆಲ್ಲ ಪಿಸು ಮಾತಿನಲ್ಲಿಯೋ ತಲುಪಿ
ನಮ್ಮಲ್ಲೊಬ್ಬರನ್ನು ಒಬ್ಬಂಟಿ ಬಿಟ್ಟು
ತಿರುಗಿ ಹೋಗಿಬಿಡಬಹುದು.
ಉಳಿದವರು ಗುಂಪಿನಲ್ಲಿ ಏಕಾಕಿ.
ಜೀವನವೇ ಅಷ್ಟು ಬಿಡು.
ಎಷ್ಟೆಲ್ಲಾ ಸಾಧ್ಯತೆಗಳು…
ಇಪ್ಪತ್ತನೆ ಶತಮಾನದ
ಯಾವ ವರ್ಷ, ಯಾವ ತಿಂಗಳು,
ಯಾವ ದಿನ, ಯಾವ ಘಂಟೆ?
ನನ್ನ ಸಂಗಾತಿ,
ನನ್ನ ಜೀವದ ಜೀವ,
ನನ್ನ ಪಿರಾಯೇ,
ನಾನಿಂದು ಸಾವಿನ ಬಗ್ಗೆ,
ಕಳೆದ ಜೀವನದ ಬಗ್ಗೆ
ಯೋಚಿಸುತ್ತಿದ್ದೇನೆ.
ದುಃಖ, ನೆಮ್ಮದಿ, ಹೆಮ್ಮೆ
ಎಲ್ಲ ಅನ್ನಿಸುತ್ತಿದೆ.
ನಮ್ಮಿಬ್ಬರಲ್ಲಿ ಯಾರೇ ಮೊದಲು
ಎಲ್ಲಿ, ಹೇಗೆ, ಎಂದು ಸತ್ತರೂ
ಈ ಮಾತಂತೂ ಗಟ್ಟಿ:
ಒಬ್ಬರನ್ನೊಬ್ಬರು ಪ್ರೀತಿಸಿದ್ದೇವೆ,
ಜೀವನದ ಅತಿದೊಡ್ಡ ಮೌಲ್ಯಕ್ಕಾಗಿ
ಜೊತೆಗೂಡಿ ಹೋರಾಡಿದ್ದೇವೆ,
ಬದುಕಿದ್ದೇವೆ.

 

ನೆಲ್ಲಿ ಸಾಕ್ಸ್ (ಜರ್ಮನಿ-ಸ್ವೀಡನ್)

ಗೊತ್ತಿದ್ದರೆ…

ನಿನ್ನ ಕೊನೆಯ ನೋಟ ನೆಟ್ಟಿದ್ದು ಎಲ್ಲಿ?

ಅದೆಷ್ಟೋ ರಕ್ತ ಕುಡಿಕುಡಿದು ಕುರುಡಾಗಿ
ನಿಂತ ಕಲ್ಲಿನ ಮೇಲೆ
ಹರಿದಾಡಿತೆ ನಿನ್ನ ಮಂಜಾದ ಕಣ್ಣು?

ಕೊಲೆ, ವಿಭಜನೆಗಳ ಕಂಡು ಕರಿಗಟ್ಟಿದ
ಹೆಜ್ಜೆಯಳತೆ ಭೂಮಿಯ ಮೇಲೆ
ನಿಂತಿತೇ ನಿನ್ನ ಅಂತಿಮ ದೃಷ್ಟಿ?

ನಿನ್ನನಿಲ್ಲಿಗೆ ಕರೆ ತಂದು ಎಲ್ಲ ಹಾದಿಗಳ
ಮುಚ್ಚಿದ ಆ ಕೊನೆ ಹಾದಿಯ ಕಡೆಗೆ
ಕೊನೆ ಬಾರಿ ಹಾಯಿತೆ ನಿನ್ನ ಕಣ್ಣು?

ನಿಂತ ನೀರು, ಹೊಳೆವ ಲೋಹದ ಚೂರು…
ವೈರಿಯ ಬೆಲ್ಟಿನ ಲೋಹವಾದರೂ ಸರಿಯೇ…
ಕಂಡಿತೆ ಒಂದಾದರೂ ಸಿಗುವ ಸ್ವರ್ಗದ ಕುರುಹು?

ಅಥವಾ…
ಪ್ರೀತಿಸದೆ ಯಾರನ್ನೂ ಬೀಳ್ಕೊಡದ ಈ ಭೂಮಿ
ಇತ್ತಿತೆ ನಿನಗೆ ಹಾರುವ ಹಕ್ಕಿ ಸಾಲಿನ ಕಾಣ್ಕೆ?
ಸುಡು ಯಾತನೆಯ  ದೇಹದ ಗೂಡ ಒಳಗೆ
ತೋರಿಸಿತೆ ನಿನಗೆ ಮಿಣುಕುವ ಆತ್ಮದ ತಾವ?

… ನನಗೆ ಗೊತ್ತಿದ್ದರೆ!

 

ಹಾನ್ಸ್ ಮ್ಯಾಗ್ನಸ್ ಎನ್ಸೆನ್ಸ್ ಬರ್ಗರ್ (ಜರ್ಮನಿ)

ಮಧ್ಯಮ ವರ್ಗದ ಹಾಡು

ದೂರವುದಕ್ಕೆ ಕಾರಣ ಇಲ್ಲ
ಕೆಲಸ ಇಲ್ಲ ಅಂತೇನಿಲ್ಲ.
ಹೊಟ್ಟೆ ಏನೂ ಹಸಿದಿಲ್ಲ
ಗಡದ್ದಾಗಿ ತಿಂದಾಗಿದೆ.

ಹುಲ್ಲು ಬೆಳೀತಾ ಇದೆ.
ರಾಷ್ಟ್ರೀಯ ಉತ್ಪನ್ನ,
ಉಗುರು, ಭವ್ಯ ಪರಂಪರೆ,
ಎಲ್ಲವೂ ಬೆಳೀತಿದೆ.

ರೋಡಿನಲ್ಲಿ ಜಾಸ್ತಿ ಜನ ಇಲ್ಲ.
ವ್ಯಾಪಾರ ವಹಿವಾಟು ಕುದುರಿದೆ.
ಸೈರನ್ನುಗಳು ಹೊಡೆದುಕೊಳ್ಳುತ್ತಿಲ್ಲ
ಎಲ್ಲವೂ ಇದ್ದಂತೆಯೇ ಇದೆ.

ಸತ್ತವರು ವಿಲ್ಲು ಬರೆದಿಟ್ಟಿದ್ದಾರೆ.
ಮಳೆ ಜೋರಿಲ್ಲ, ಬರೀ ಜಿನುಗುತ್ತಿದೆ.
ಯುದ್ಧ ಇನ್ನೂ ಸಾರಿಲ್ಲ.
ಅದಕ್ಕೆ ಏನು ಅವಸರವೂ ಇಲ್ಲ.

ಹುಲ್ಲು ತಿನ್ನುತ್ತೇವೆ.
ರಾಷ್ಟ್ರೀಯ ಉತ್ಪನ್ನ,
ಉಗುರು, ಭವ್ಯ ಪರಂಪರೆ,
ಎಲ್ಲವನ್ನೂ ಮೆಲ್ಲುತ್ತೇವೆ.

ಮುಚ್ಚಿಡುವಂಥದ್ದೇನಿಲ್ಲ.
ಹಂಬಲಿಸುವಂಥದ್ದೇನಿಲ್ಲ.
ಹೇಳುವುದಕ್ಕೆ ಏನಿಲ್ಲ.
ಎಲ್ಲವೂ ಇದೆ.

ಗಡಿಯಾರಕ್ಕೆ ಕೀಲಿ ಕೊಟ್ಟಾಗಿದೆ.
ಬಿಲ್ಲು ಪಾವತಿ ಆಗಿದೆ.
ಬಟ್ಟೆ ಒಗೆದು ಒಣಸಿಯಾಗಿದೆ.
ಕೊನೆಯ ಬಸ್ಸು ಹೊರಟಿದೆ.

ಖಾಲಿ ಇದೆ.

ದೂರವುದಕ್ಕೆ ಕಾರಣ ಇಲ್ಲ

ಕಾಯುವುದಕ್ಕೆ ಏನಿದೆ?

 

ಹ್ಯೂ ಮ್ಯಾಕ್ ಡಿಯರ್ಮಿಡ್ (ಸ್ಕಾಟ್ಲ್ಯಾಂಡ್)

ಯುರೋಪಿಯನ್ನರಿಗೆ ಕಿವಿ ಮಾತು

ಭವ್ಯ ನಾಗರೀಕತೆಯನ್ನ ಉಳಿಸೋದಕ್ಕೆ ಈ ಯುದ್ಧ ಅಂದ್ರಾ?
ಅಲ್ಲ, ನಿಮಗೂ ಅದಕ್ಕೂ ಯಾವ ಬಾದರಾಯಣ ಸಂಬಂದಾರೀ?
ಉಳಿಸಕ್ಕೆ ಹೊರಟಿರೋದನ್ನ ಮೊದಲು ಸ್ವಲ್ಪ ಗಳಿಸ್ಕೊಳ್ಳೋದು
ಗೊತ್ತೇ ಇಲ್ಲದ ವಿಷಯದ ಬಗ್ಗೆ ಹೊಡ್ಕೊಂಡು ಸಾಯೋಕಿಂತಾ ವಾಸಿ ರೀ.

 

ಜೋ ಕೊರೀ (ಸ್ಕಾಟ್ಲ್ಯಾಂಡ್)

ವಿರಳ!

ಕೈ ಕೆಸರಾಗದ, ಓದಿ ನಾಲಿಗೆ ಹರಿತ ಆದ ಮಂದಿ
ನಮ್ಮಂತ ದುಡಿವ ಸೋದರರ ಜೊತೆ
ಹೆಗಲಿಗೆ ಹೆಗಲು ಕೊಟ್ಟು, ಆದ ಅನ್ಯಾಯಗಳ
ತಿದ್ದುತ್ತಾ ನಡೆಯುವುದು ಅದೆಷ್ಟು ವಿರಳ!

ಒಂದಷ್ಟು ದೂರ ಜೊತೆಗೆ ನಡೆದವರೂ ಉಂಟು
ಆದರೆ ಧೈರ್ಯ ಮಾತ್ರ ಸ್ವಲ್ಪ ಖೋತಾ.
ಶಿಲುಬೆ ಹೊತ್ತು, ಮುಳ್ಳಿನ ಕಿರೀಟ ಧರಿಸಿದವರ
ಕಂಡೊಡನೆ ಹಿಮ್ಮೆಟ್ಟಿ ಓಡುವವರೇ ಬಹಳ!

 

ಲೆಜ್ ಒಜೆರೊವ್ (ರಷಿಯಾ)

ಹುಟ್ಟಿನ ಕತೆ

ಕಡಲ ತಡಿಯ ಮೇಲೆ ಒಂದು ಹುಟ್ಟು ಸುಮ್ಮನೆ ಬಿದ್ದಿದೆ.
ಚಲನೆ, ಅಗಾಧತೆಗಳ ಬಗ್ಗೆ ಈ ಹುಟ್ಟು ಹೇಳುವ ಕತೆ
ಅದನ್ನಿಲ್ಲಿಗೆ ತಂದು ಎಸೆದ ಕೊನೆ ಮೊದಲಿಲ್ಲದ
ಹೊಳೆವ ಸಮುದ್ರ ಹೇಳುವ ಪ್ರವರಕ್ಕಿಂತ ಹೆಚ್ಚು ಸ್ಪಷ್ಟ.

P.S: “ಪೆಂಗ್ವಿನ್  ಬುಕ್ ಆಫ್ ಸೋಶಿಯಸಿಸ್ಟ್ ವರ್ಸ್” ಪುಸ್ತಕದ ಕೆಲವು ಪದ್ಯಗಳನ್ನು ತುಂಬ ಹಿಂದೆ ಸುಗತ ಶ್ರೀನಿವಾಸರಾಜು (ಈಗ ಔಟ್ ಲುಕ್ ದಕ್ಷಿಣ ಭಾರತದ ಸಂಪಾದಕ) ಹತ್ತಿರ ಇಸಕೊಂಡು ಓದಿದ್ದೆ. ಇತ್ತೀಚಿಗೆ ಎಂ.ಎಸ್. ಪ್ರಭಾಕರ (ಪತ್ರಕರ್ತ, ಲೇಖಕ ಮತ್ತು ನಾನು ಕಂಡ ಅತ್ಯಂತ ಭಾರಿest ಪುಸ್ತಕ ಪ್ರೀತಿಯ ವ್ಯಕ್ತಿ!) ತಮ್ಮ ಪ್ರತಿಯನ್ನು ನನಗೆ ದಾನ ಮಾಡಿದ್ದರಿಂದ ಮತ್ತೆ ಓದುವ ಅವಕಾಕಾಶ ಬಂತು. ಇಬ್ಬರಿಗೂ ನಾನು ಋಣಿ.

Advertisements

3 ಟಿಪ್ಪಣಿಗಳು »

 1. Rishi said

  Are you sure these are translations? I had begun reading them thinking they were originals.

 2. keshrad said

  I likes ‘madhyama vargada haadu’ the best. Thanks for the post.

  – Keshav (www.kannada-nudi.blogspot.com)

 3. ಅಲ್ಲಾ ಕಣ್ರಿ…. ಓದೋಕೇ ಟೈಮಿಲ್ಲ ಅಂತ ಒದ್ದಾಡ್ತಾ ಇರುವಾಗ, ಇದೆಲ್ಲಾ ಮಾಡೋಕೆ ಎಲ್ರೀ ಟೈಮ್ ಸಿಕ್ತು ನಿಮ್ಗೆ?
  ಸ್ವಾತಂತ್ರ್ಯ ಇಲ್ಲದ ಬದುಕು ನಿಜವಾಗಿಯೂ ಕಷ್ಟ ಕಣ್ರೀ
  ಒಂದಾ ಮಾಡುವುದಕ್ಕೂ ಇಲ್ಲಿ ರೂಲ್ಸುಗಳ ಕಾಟಾ ಕಣ್ರೀ…… ಅಂತ ನಾನೂ ನಂಬಿದ್ದೆ. ಯಾಕೋ, ನಿಮ್ಮ ಬ್ಲಾಗ್ ಓದಿದ ಮೇಲೆ ಅದು ತಪ್ಪು ಅನ್ನಿಸ್ತಿದೆ ಕಣ್ರಿ.

  ಏನೇ ಆಗ್ಲಿ… ಬರಿತಾ ಇರಿ

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: