ಸರಳುಗಳ ತೂರಿ ಮೇಲೇರುವ ಕಾವ್ಯ…

ಹದಿಮೂರು ಧೀರ್ಘ ವರ್ಷಗಳು — ಅದರಲ್ಲೂ ಒಂದಷ್ಟು ಕಾಲ ಒಬ್ಬಂಟಿಯಾಗಿ ಸೆಲ್ಲಿನಲ್ಲಿ — ಕಳೆಯುವುದು ಹೇಗೆ? ಕಳೆದರೂ, ಧೈರ್ಯ ಮತ್ತು ಬರುವ ದಿನಗಳ ಬಗ್ಗೆ ಭರವಸೆ ಮುರುಟಿ ಹೋಗದಂತೆ ಕಾಯ್ದುಕೊಳ್ಳುವುದು ಹೇಗೆ?

ಟರ್ಕಿಯ ಪ್ರಸಿದ್ಧ ಕವಿ ನಜೇಮ್ ಹಿಕ್ಮೆತ್ (೧೯೦೨-೧೯೬೩) ಜೀವನ ಮತ್ತು ಕಾವ್ಯದ ಬಗ್ಗೆ ಓದುವಾಗ ಈ ಪ್ರಶ್ನೆಗಳು ಮತ್ತೆ ಮತ್ತೆ ಮನಸ್ಸಿನಲ್ಲಿ ಏಳುತ್ತವೆ. ತನ್ನ ಮಾರ್ಕ್ಸಿಸ್ಟ್ ಧೋರಣೆಗಾಗಿ ಜೀವನದುದ್ದಕ್ಕೂ ಸಾಕಷ್ಟು ಕಷ್ಟ ಅನುಭವಿಸಿದ ಹಿಕ್ಮೆತ್ ಅನೇಕ ವರ್ಷಗಳು ಜೈಲಿನಲ್ಲಿ ಕಳೆದವನು. ಇವನ ಅತ್ಯಂತ ಧೀರ್ಘ ಜೈಲುವಾಸ ಜನವರಿ ೧೯೩೮ ರಿಂದ ಡಿಸೆಂಬರ್ ೧೯೪೨ರ ವರೆಗೆ. ಟರ್ಕಿಯ ಸೇನೆಯಲ್ಲಿದ್ದ ಯುವ ಸೈನಿಕರು ಇವನ ಕ್ರಾಂತಿಕಾರಿ ಪದ್ಯಗಳನ್ನು (ವಿಶೇಷವಾಗಿ “ಶೇಖ್ ಬರ್ದ್ರುದ್ದೀನನ ಕಥನ” ಎಂಬ ಸುಧೀರ್ಘ ಪದ್ಯ) ಓದುತ್ತಿದ್ದ ಕಾರಣಕ್ಕೆ ಹಿಕ್ಮೆತ್ ಮೇಲೆ ದಂಗೆ ಪ್ರೇರೇಪಿಸಿದ ಆರೋಪ ಹೊರಿಸಿ ಜೈಲಿಗೆ ಹಾಕಲಾಯಿತು.ಆರೋಪದ ಟ್ರಯಲ್ ನಡೆಯುತ್ತಿದ್ದ ದಿನಗಳಲ್ಲಿ ಹಿಕ್ಮೆತ್ ಪಟ್ಟ ಕಷ್ಟಗಳ ಬಗ್ಗೆ ಪ್ಯಾಬ್ಲೊ ನೆರುಡ ಮತ್ತು ಇನ್ನೂ ಕೆಲವು ಲೇಖಕರು ಬರೆದಿದ್ದಾರೆ. ಯುದ್ಧ ನೌಕೆಯೊಂದರ ಮೇಲೆ ತಿಂಗಳುಗಟ್ಟಲೆ ವಿಚಾರಣೆ ನಡೆದ ಸಂದರ್ಭದಲ್ಲಿ ಹಿಕ್ಮೆತ್ ಅನುಭವಿಸಿದ ಕಷ್ಟಗಳ ಬಗ್ಗೆ ನೆರುಡಾ “Nazim was condemned to the punishments of hell” ಅನ್ನುತ್ತಾನೆ. ಕಕ್ಕಸ್ಸು ತುಂಬಿ ಹೋಗಿದ್ದ ಲೆಟ್ರೀನಿನಲ್ಲಿ ದಿನ ಕಳೆಯಬೇಕಾಗಿ ಬಂದಾಗ ಜೋರಾಗಿ ಹಾಡುತ್ತಾ ವಾಸನೆ ಮರೆಯಲಿಕ್ಕೆ ಪ್ರಯತ್ನಪಟ್ಟ ಅಂತ ನೆರುಡ ವಿವರಿಸುತ್ತಾನೆ.

ನಂತರದ ಜೈಲಿನಲ್ಲಿ ಕಳೆದ ಹದಿಮೂರು ವರ್ಷಗಳ ಅವಧಿಯಲ್ಲಿ ಹಿಕ್ಮೆತ್ ಅನೇಕ ಪದ್ಯಗಳನ್ನು ಬರೆದ, ಬೇರೆ ಕೈದಿಗಳ ಜೊತೆಗೂಡಿ ನೇಯ್ಗೆಯ ಸಹಕಾರಿ ಸಂಘವನ್ನು ಶುರು ಮಾಡಿದ, ಕನ್ನಡಿ ಮಾಡುವ ಸಣ್ಣ ಉದ್ಯಮ ನಡೆಸಿದ… ಹೆಂಡತಿ ಪಿರಾಯೇ ಯನ್ನು ಡೈವೋರ್ಸ್ ಮಾಡಿ ಇನ್ನೊಬ್ಬ ಹುಡುಗಿಯ ಪ್ರೇಮಪಾಶದಲ್ಲೂ ಬಿದ್ದ!

ಹಿಕ್ಮೆತ್ ಬಿಡುಗಡೆಗಾಗಿ ಅಂತರಾಷ್ಟ್ರೀಯ ಹೋರಾಟ ನಡೆಸಿದ ಅನೇಕ ಲೇಖಕ, ಹೋರಾಟಗಾರರಲ್ಲಿ ನೆರುಡಾನೂ ಒಬ್ಬ. ಬಿಡುಗಡೆಯ ನಂತರ ಮತ್ತೆ ಟರ್ಕಿಯಲ್ಲಿ ಕಿರುಕುಳ ಶುರುವಾದಾಗ ತಪ್ಪಿಸಿಕೊಂಡು ಹಿಕ್ಮೆತ್ ರಶಿಯಾಗೆ ಹೋದ. ಅಲ್ಲಿ ಒಂದು ಕಡೆ ನೆಲೆ ನಿಲ್ಲದೆ ಸಾಯುವವರೆಗೂ ದೇಶ ದೇಶಗಳನ್ನು ಅಲೆದ.

ಹಿಕ್ಮೆತ್ ಜೀವನದುದ್ದಕ್ಕೂ ಬೇರೆ ಬೇರೆ ರೀತಿಯ ಪದ್ಯಗಳನ್ನು — ಉತ್ಕಟ ಪ್ರೇಮ ಪದ್ಯಗಳಿಂದ ಹಿಡಿದು ಪಾರ್ಟಿಯ ಪ್ರಾಪಗೆಂಡಾವರೆಗೂ — ಬರೆದಿದ್ದಾನೆ. ನಾಟಕ ಸಿನೆಮಾಗಳಿಗೂ ಸ್ಕ್ರಿಪ್ಟ್ ಬರೆದಿದ್ದಾನೆ. ಹಿಕ್ಮೆತ್ ತನ್ನ ಜೀವನ ಮತ್ತು ಕಾವ್ಯವನ್ನು ಕಂಡ ಬಗೆಯನ್ನು ಅವನ ಈ ಮಾತು ಹಿಡಿದಿಡುತ್ತದೆ:  “I want to write poems that both talk only about me and address just one other person and call out to millions, I want to write poems that talk of a single apple, of the plowed earth, of the psyche of someone getting out of prison, of the struggle of the masses for a better life, of one man’s heartbreaks, I want to write about fearing and not fearing death.”

ಇಲ್ಲಿ ನಾನು ಹಿಕ್ಮೆತ್ ನ ಸೆರೆಮನೆಯ ಅನುಭವ ಕುರಿತ ಮೂರು ಪದ್ಯಗಳನ್ನು ಅನುವಾದ ಮಾಡಿದ್ದೇನೆ. ಪ್ರಪಂಚದ ಅನೇಕ ಭಾಷೆಗಳಲ್ಲಿ ಸೆರೆಮನೆಯ ಪದ್ಯಗಳ ಒಂದು ದೊಡ್ಡ ಪರಂಪರೆಯೇ ಇದೆ. ಪಾಲಿಸ್ಟೈನ್, ಶ್ರೀಲಂಕ, ಪಕ್ಕದ ಆಂಧ್ರದಲ್ಲಿಯೂ ಕಾಣುತ್ತೇವೆ. ಕನ್ನಡದಲ್ಲಿ ಬೆರಳೆಣಿಕೆಯಷ್ಟು ಸೆರೆಮನೆ ಅನುಭವದ ಬಗ್ಗೆ ಗದ್ಯ ಬರಹಗಳಿವೆ, ಆದರೆ ಈ ಅನುಭವದ ಬಗೆಗಿನ ಪದ್ಯಗಳು ಇದ್ದ ಹಾಗಿಲ್ಲ. ಎಮೆರ್ಜೆನ್ಸಿ ಸಮಯದಲ್ಲಿ ಕೆಲವು ದಿನಗಳ ಕಾಲ ಜೈಲಿನಲ್ಲಿ ಕಳೆದ ಚಂದ್ರಶೇಖರ ಪಾಟೀಲ ಮತ್ತು ಕೆಲವರು ಕವಿತೆಗಳನ್ನು ಬರೆದು ಅಲ್ಲೊಂದು ಕಾವ್ಯ ಗೋಷ್ಠಿ ನಡೆಸಿದ್ದರಂತೆ. ಅದು ಬಿಟ್ಟರೆ ಬೇರೆ ಉದಾಹರಣೆಗಳು ನನಗೆ ಗೊತ್ತಿಲ್ಲ.ಕುಂದದ ಜೀವನೋತ್ಸಾಹ ಹೀಗೂ ಇರಬಹುದು ಅನ್ನಿವುದಕ್ಕೆ ಈ ಕೆಳಗಿನ ಪದ್ಯಗಳಿಗಿಂತ ಒಳ್ಳೆಯ ಉದಾಹರಣೆಗಳು ಸಿಗುವುದು ಕಷ್ಟ…

ಏಕಾಂಗಿ ಕೈದಿಯ ಪತ್ರ
ವಾಚಿನ ಪಟ್ಟಿಯ ಮೇಲೆ
ಉಗುರಿನಿಂದ ಕೆತ್ತಿದ್ದೇನೆ
ನಿನ್ನ ಹೆಸರು.
ನಾನಿರುವಲ್ಲಿ ರತ್ನಖಚಿತ ಹಿಡಿಯ
ಚೆಂದದ ಚಾಕು ಇಲ್ಲ.
ಇಲ್ಲಿನ ಮಂದಿ ಚೂಪಾದ ಏನನ್ನೂ
ನನ್ನ ಬಳಿ ಇರಗೊಡುವುದಿಲ್ಲ!
ನಾನಿರುವಲ್ಲಿ ಮೋಡಗಳನ್ನು ತಲೆಯಲ್ಲಿ ಮುಡಿದ
ಪೈನ್ ಮರಗಳೂ ಇಲ್ಲ.
ಮುಂದಿನ ಮೈದಾನದಲ್ಲಿ ಇರಬಹುದು,
ಆಲ್ಲಿ ನಿಂತು ತಲೆಯೆತ್ತಿ
ಆಗಸ ನೋಡುವ ಅವಕಾಶ ನನಗಿಲ್ಲ.
ಇಲ್ಲಿ ನನ್ನಂತೆ ಇನ್ನೆಷ್ಟು ಮಂದಿ ಇರಬಹುದು?
ಗೊತ್ತಿಲ್ಲ.
ನಾನು ಒಬ್ಬಂಟಿ, ಅವರೆಲ್ಲರಿಂದ ದೂರ.
ಅವರೆಲ್ಲ ಒಟ್ಟು, ನನ್ನಿಂದ ಬಲು ದೂರ.
ಸ್ವಗತ ಬಿಟ್ಟು ಇನ್ನೆಲ್ಲ ನಿಷಿದ್ಧ.
ನನ್ನ ಜೊತೆ ನನ್ನದೇ ಮಾತುಕತೆ
ರೇಜಿಗೆಯಾಗಿ ಹಾಡತೊಡಗಿದ್ದೇನೆ ಕಣೆ,
ನನ್ನ ಪ್ರೀತಿಯ ಮಡದಿ!
ನನ್ನ ಶ್ರುತಿ ತಪ್ಪಿದ ದನಿ
ನನ್ನದೇ ಎದೆಯ ಕಲಕಿ
ಹೃದಯ ಚೂರು ಚೂರಾಗಿದೆ.
ಆರ್ದ್ರ ನೀಲಿ ಕಣ್ಣುಗಳ,

ಕೆಂಪು ಸೊರ ಸೊರ ಮೂಗಿನ,

ಕಾಲಿಗೆ ಚಪ್ಪಲ್ಲಿ ಇಲ್ಲದೆ

ಹಿಮದಲ್ಲಲೆವ
ಹಳೆಯ ಕತೆಗಳ ಹುಡುಗನ ಹಾಗೆ
ನಿನ್ನ ಅಪ್ಪುಗೆಯಲ್ಲಿ ಬೆಚ್ಚಗಾಗುವ ಆಸೆ.
ಈ ಗಳಿಗೆಯಲ್ಲಿ ಇಷ್ಟು ಶಕ್ತಿಹೀನ,
ಇಷ್ಟು ಸ್ವಾರ್ಥಿ
ಇಷ್ಟು ಹುಲುಮಾನವನಾಗಿರುವ ಬಗ್ಗೆ
ನಾಚಿಕೆಯೂ ಆಗುತ್ತಿಲ್ಲ.
ನನ್ನ ಈ ಸ್ಥಿತಿಯ ಬಗ್ಗೆ
ವೈದ್ಯಕೀಯ, ಮನಶಾಸ್ತ್ರೀಯ
ವಿವರಣೆಗಳಿರಬಹುದು.
ಕಿಟಕಿಯ ಸರಳುಗಳು,
ಮೂಲೆಯ ಮಣ್ಣಿನ ಹೂಜಿ,
ಎಲ್ಲ ಮನುಷ್ಯ ದನಿಗಳ
ದೂರ ಇಡುವ ಈ ನಾಲ್ಕು ಗೋಡೆಗಳು
ಬುದ್ಧಿಯ ಮೇಲೆ ಹೂಡಿದ ಕುಟಿಲ ಆಟವೇ
ಇದು ಇರಬಹುದು.
ಈಗ ಗಂಟೆ ಐದು.
ಎಲ್ಲ ಬರಡು ಬರಡು.
ನಿಗೂಢ ಪಿಸುಮಾತು.
ಮಣ್ಣಿನ ಚಾವಣಿ.
ದೂರ ಅನಂತದಲ್ಲಿ
ಅಲ್ಲಾಡದೆ ನಿಂತ
ಡೊಂಕು ಕಾಲಿನ ಬಡಕಲು ಕುದುರೆ.
ಒಳಗೊಳಗೇ ದುಃಖದ ಗೆದ್ದಲು ಹಿಡಿದು
ಹುಚ್ಚು ಹಿಡಿಸಲಿಕ್ಕೆ ಇಷ್ಟೇ ಸಾಕು.
ಭವ್ಯ ಮೆಶೀನುಗಳ, ಕವಿ, ಕಾವ್ಯ, ಕಲೆಗಳ
ಆ ಹೊರಗಣ ಮರಗಳಿಲ್ಲದ ಲೋಕದ ಮೇಲೆ
ಹಾಸುತ್ತಿದೆ ಕತ್ತಲೆಯ ಕೌದಿ.
ನೆನ್ನೆಯಂತೆ ಇಂದೂ ಇದ್ದಕ್ಕಿದ್ದಂತೆ ಕವಿಯುತ್ತದೆ ಕತ್ತಲು.
ಬೆಳಕಿನ ಕೊನೆಯ ಕಿರಣ ಬಡಕಲು ಕುದುರೆಯ ಸುತ್ತಿ
ಮತ್ತೆ ಮರೆಯಾಗುತ್ತದೆ.
ಸುಮ್ಮನೆ ಮಲಗಿದ ಗಡಸು ಗಂಡಿನಂತೆ ಕಾಣುವ
ಮರಗಳಿಲ್ಲದ ಈ ಬರಡು ಸೀಮೆ
ಇದ್ದಕ್ಕಿದ್ದಂತೆ ಚುಕ್ಕೆಗಳಿಂದ ತುಂಬಿ ತೂಗುತ್ತದೆ.
ಮತ್ತೂ ಒಮ್ಮೆ ಹಳೆಯದೆಲ್ಲ ಮೆಲುಕು ಹಾಕಲು
ರಂಗ ಸಿದ್ಧ.
ನನ್ನೊಳಗಿನ ಕಲಾವಿದ ಎದ್ದಿದ್ದಾನೆ
ತನ್ನೆಲ್ಲ ಪ್ರತಿಭೆಯ ಮೆರೆದು
ಹಳೆಯ ದುಃಖದ ರಾಗಗಳ
ಬಾಲ್ಯದ ಅದೇ ಕೀರಲು ದನಿಯಲ್ಲಿ
ಮತ್ತೆ ಹಾಡಲಿಕ್ಕೆ.
ಮತ್ತೊಮ್ಮೆ ನನ್ನ ಹತಾಶ ಹೃದಯವ ಬಾಯ್ಮುಚ್ಚಿಸಿ
ನನ್ನ ಮನದೊಳಗೆ ನಿನ್ನ ದನಿಯ ಮೂಡಿಸುವ
ಪ್ರಯತ್ನದಲ್ಲಿ ತೊಡಗಿದ್ದೇನೆ.
ಆದೆಷ್ಟು ದೂರ…
ಕಂಡ ಹಾಗಿದೆ ನಿನ್ನ ರೂಪ
ಒಡೆದ, ಹೊಗೆ ಹಿಡಿದ
ಕನ್ನಡಿಯಲ್ಲಿ.
ಹೊರಗೆಲ್ಲ ವಸಂತದ ಹುಯಿಲು.
ಹಸಿ ಮಣ್ಣಿನ ವಾಸನೆ.
ಹಕ್ಕಿಗಳ ಹಾಡಿನ ಹೊನಲು.
ಬಂದಿದೆ ವಸಂತ, ನನ್ನ ಪ್ರಿಯ ಮಡದಿ.
ಥಳಥಳಿಸುತ್ತಿದೆ ಹೊರಗೆ ಭೂಮಿಯೆಲ್ಲ.
ಒಳಗೆ ಹಾಸಿಗೆಯ ತುಂಬ ತಿಗಣೆಗಳ ಸಂತೆ.
ಹೂಜಿಯ ನೀರು ಇನ್ನು ಹೆಪ್ಪುಗಟ್ಟುವುದಿಲ್ಲ.
ಬೆಳಗ್ಗೆ ಸಿಮೆಂಟು ಗೋಡೆಗಳ ಮೇಲೆ
ಸೂರ್ಯ ಕಿರಣಗಳ ಚೆಲ್ಲಾಟ.
ಮಧ್ಯಾಹ್ನದವರೆಗೂ ಆಗಾಗ
ಬಂದು ಹೋಗುವ ಅತಿಥಿ ಸೂರ್ಯ.
ಸೂರ್ಯನೇರಿದ ಹಾಗೆ
ಸರಸರ ಗೋಡೆ ಹತ್ತುವ ನೆರಳುಗಳು.
ಕಿಟಕಿಯ ಗಾಜಿಗೆ ಹತ್ತಿದೆ ಬೆಳಕ ಬೆಂಕಿ.
ಹೊರಗೆ ಸಂಜೆ ಮಾಗಿ ಕತ್ತಲಾದಂತೆ
ಮೋಡಗಳಿಲ್ಲದ ಶುಭ್ರ ಅಗಸ.
ಒಳಗೆ ವಸಂತದ ಕಾರ್ಗತ್ತಲ ರಾತ್ರಿ.
ಸ್ವಾತಂತ್ರ ಎಂಬ ಮಿರುಗುಯ ಮೈಯ್ಯ
ಬೆಂಕಿ ಕಣ್ಣಿನ ದೈತ್ಯ
ಮೈಮೇಲೆ ಬರುವವನಿದ್ದಾನೆ.
ಬಂದೆ ಬರುತ್ತಾನೆ ಪ್ರತಿ ವಸಂತ
ಗೊತ್ತು ನನಗದು ಖಚಿತ
ಹಳೆಯ ಅನುಭವದಿಂದ.
ಇಂದು ಭಾನುವಾರ.
ಸೂರ್ಯನಿಗೆ ಮೈ ಒಡ್ಡುವ
ಅವಕಾಶ ಕೊಟ್ಟಿದ್ದಾರೆ
ಮೊಟ್ಟ ಮೊದಲ ಬಾರಿ.
ಹೊರಗೆ ಹೋದವ ಗರ ಬಡಿದು ನಿಂತುಬಿಟ್ಟೆ.
ಆಕಾಶ ಅದೆಷ್ಟು ದೂರ, ಅದೆಷ್ಟು ನೀಲಿ
ಅದೆಷ್ಟು ಅಗಾಧ
ಅಂತ ಅನ್ನಿಸಿತು ಮೊದಲ ಬಾರಿ.
ನಮ್ರತೆಯಿಂದ ಭೂಮಿಯ ಮೇಲೆ ಕೂತು
ಗೋಡೆಗೊರಗಿದೆ.
ಒಂದು ಗಳಿಗೆ ಏನೇನೂ ಇಲ್ಲ.
ಹೋರಾಟವಿಲ್ಲ, ಬಿಡುಗಡೆ ಇಲ್ಲ, ಮಡದಿ ಇಲ್ಲ.
ಬರೀ ಖುಷಿ.

 

ಕೈದಿಗಳಿಗೆ ಕಿವಿಮಾತು

 

ನಿನ್ನ ಜಗತ್ತು, ನಿನ್ನ ದೇಶ, ನಿನ್ನ ಜನರ ಮೇಲೆ
ಭರವಸೆ ಕಳೆದುಕೊಳ್ಳದೆ ಹೋರಾಡಿದ ತಪ್ಪಿಗೆ
ನೇಣುಗಂಬಕ್ಕೇರಿಸದೆ
ನಿನ್ನನ್ನು ಸೆರೆಮನೆಗೆ ತಳ್ಳಿದರೆ,
ಅಲ್ಲಿ ಹತ್ತೋ ಹದಿನೈದೋ ವರ್ಷ ಕಳೆದರೆ,
“ಅಯ್ಯೋ, ಹಗ್ಗ ಬಿಗಿದು ಪತಾಕೆಯಂತೆ
ಏರಿಸಿದ್ದರೇ ಎಷ್ಟೋ ಭೇಷಿತ್ತು!”
ಅಂತ ಖಂಡಿತ ಹೇಳಬೇಡ.
ಛಲ ಬಿಡದೆ ಬದುಕು.

ಬಲ್ಲೆ, ಅದೇನು ಭಾರಿ ಆನಂದದ ಬದುಕಲ್ಲ.
ಆದರೆ ಅವುಡುಗಚ್ಚಿ ಮತ್ತೂ ಒಂದು ದಿನ
ಬದುಕಿಯೇಬಿಡುವುದು
ನಿನ್ನ ವೈರಿಯ ಹೊಟ್ಟೆ ಉರಿಸಲು
ನೀನು ಮಾಡಲೇಬೇಕಾದ ಕರ್ತವ್ಯ.

ನಿನ್ನಾತ್ಮದ ಒಂದರ್ಧ
ಬಾವಿಯಾಳದಲ್ಲಿ ದಾರಿ ತಪ್ಪಿ
ಒಳಗೊಳಗೇ ಸುತ್ತುವ
ಹಾಡಿನಂತೆ ಏಕಾಕಿ ಇರಬಹುದು.
ಆದರಿನ್ನೊಂದರ್ಧ ಹೊರ ಲೋಕದ
ರಾಗದ್ವೇಷಗಳ ಜೊತೆ ಶ್ರುತಿ ಕೂಡಿಸಿರಲಿ.
ನಲವತ್ತು ದಿನಗಳ ನಡಿಗೆಯಷ್ಟು ದೂರ
ತರಗಲೆ ಅಲ್ಲಾಡಿದರೆ ಧಿಗ್ಗನೆದ್ದು ನಿಲ್ಲಲಿ.

ಪತ್ರಕ್ಕಾಗಿ ಕಾಯುತ್ತಾ
ವಿರಹ ಗೀತೆಗಳ ಗುನುಗುತ್ತಾ
ರಾತ್ರಿಯೆಲ್ಲ ಸೂರು ನೋಡುತ್ತಾ
ಕಾಲ ಕಳೆಯುವ ನೋವು ಮಧುರ.
ಆದರದು ಆರೋಗ್ಯಕ್ಕೆ ಕಂಟಕ.

ದಾಡಿ ಮಾಡುವಾಗ ಕನ್ನಡಿ ನಿರುಕಿಸಿ ನೋಡು,
ಓಡುವ ವಯಸ್ಸಿನ ಚಿಂತೆ ಬಿಟ್ಟುಬಿಡು,
ಹೇನಿದ್ದರೆ ಹೆಕ್ಕಿ ತೆಗೆ,
ಗಮನಿಸು ವಸಂತ ರಾತ್ರಿಗಳ ನಡೆ,
ತಿನ್ನಲು ಮರೆಯಬೇಡ
ರೊಟ್ಟಿಯ ಕಟ್ಟಕಡೆ ತುಣುಕು.
ಎದೆ ಬಿಚ್ಚಿ ನಗುವ ಅಭ್ಯಾಸ
ತಪ್ಪಿ ಹೋಗದಿರಲಿ ಕೊಂಚ ಜೋಕೆ.

ಯಾರಿಗೆ ಗೊತ್ತು!
ನಿನ್ನ ಪ್ರೀತಿಯ ಹುಡುಗಿ
ಸಹವಾಸ ಸಾಕು ಅಂದುಬಿಡಬಹುದು.
ಅದ್ಯಾವ ದೊಡ್ಡ ಮಾತು ಅನ್ನಬೇಡ.
ನಿನ್ನೊಳಗಿನ ಏಕಾಕಿ ಮನುಷ್ಯನಿಗದು
ಚಿಗುರ ಚಿವುಟಿದಂತ ನೋವು.

ಒಳಗಿರುವಾಗ ಗುಲಾಬಿ ತೋಟಗಳ ಯೋಚನೆ ಕೇಡು.
ಅಗಾಧ ಸಮುದ್ರ, ಮೆರೆವ ಮೇರುಗಳ ಯೋಚನೆ ಮೇಲು.
ಎಡೆಬಿಡದೆ ಬರೆ, ಓದು.
ಒಂದಷ್ಟು ಬಟ್ಟೆ ನೇಯಿ, ಕನ್ನಡಿ ಮಾಡು.

ಒಟ್ಟಲ್ಲಿ,
ಹತ್ತು ಹದಿನೈದು ವರ್ಷ ಒಳಗೆ ಕಳೆಯುವುದು
ಅಸಾಧ್ಯವೇನಲ್ಲ,
ನಿನ್ನ ಎದೆಯ ಗೂಡ ಎಡ ಬದಿಯ
ವಜ್ರದ ಮೆರುಪು ಮಂಕಾಗದನಕ.

 

ಜೈಲಿನಿಂದಾಚೆ

ಧಿಗ್ಗನೆದ್ದೆ.
ಎಲ್ಲಿದ್ದೇನೆ?
ಇಲ್ಲೇ, ಮನೆಯಲ್ಲೇ…
ನಿದ್ದೆಯೋ ಎಚ್ಚರವೋ
ಒಟ್ಟಲ್ಲಿ
ಮನೆಯಲ್ಲಿರುವ ಅಭ್ಯಾಸ
ತಪ್ಪಿ ಹೋಗಿದೆ.
ಹದಿಮೂರು ವರ್ಷ
ಜೈಲೊಳಗಿದ್ದು ಬಂದ ಮೇಲೆ
ಎಲ್ಲ ಹೀಗೇ
ಭ್ರಾಂತಿ ದಿಗ್ಭ್ರಾಂತಿಗಳ ಸಾಲು ಸರಮಾಲೆ
ಅರೆ! ಯಾರಿಲ್ಲಿ ಪಕ್ಕದಲ್ಲಿ ?
ಓಹೋ…
ಒಂಟಿತನದ ಕರಿನೆರಳಲ್ಲ.
ಮುಗ್ಧ ಕಿನ್ನರಿಯ ಹಾಗೆ
ಮಲಗಿದ ಮುದ್ದು ಮಡದಿ.
ತುಂಬು ಬಸಿರು
ಅವಳಿಗದೆಷ್ಟು ಒಪ್ಪುತ್ತದಲ್ಲ!
ಗಂಟೆ ಈಗೆಷ್ಟು?
ಮುಂಜಾನೆ ಎಂಟು.
ಸಮಯ ಉಂಟು
ಪರವಾಗಿಲ್ಲ…
ಬೆಳ್ಳಂಬೆಳಕಲ್ಲಿ ಮನೆ ಹೊಗ್ಗುವ ರಿವಾಜು
ನಮ್ಮೂರ ಪೋಲೀಸರಿಗೆ ಇನ್ನೂ ಒಗ್ಗಿಲ್ಲ.
Advertisements

5 ಟಿಪ್ಪಣಿಗಳು »

 1. ಕೆ.ಫಣಿರಾಜ್ said

  ರೀ..ನಿಮ್ಮ ಅನುವಾದ ಹೊಟ್ಟೆಕಿಚ್ಚಾಗುವಷ್ಟು ಚೆನ್ನಾಗಿದೆ.ಪದ ಲಯದ ವ್ಯಸನಕ್ಕೆ ಬೀಳದೆ,ಮೂಲ ಪದ್ಯದ ಧನಿಗೆ ಚ್ಯುತಿಯಾಗದ ಹಾಗೆ ಸರಳ ಆಧುನಿಕ ಕನ್ನಡದಲ್ಲಿ-ಆಡುಭಾಷೆಯ ಧ್ವನಿ ಶಕ್ತಿಯ ಮೇಲೆ ವಿಶ್ವಾಸವಿಟ್ಟು-ಅನುವಾದ ಮಾಡುವ ನಿಮ್ಮ ಪರಿ ನಂಗೆ ತುಂಬ ಇಷ್ಟವಾಗ್ತದೆ. ಹೀಗೆ ಧನಿಲಯವನ್ನು ನೆಚ್ಚಿಕೊಂಡ ಅನುವಾದದ ಬಗೆಯಲ್ಲಿರುವ ಒಂದು ಅಪಾಯವೆಂದರೆ- ಮೂಲದ ಧ್ವನಿ ಉತ್ಪ್ರೇಕ್ಷೆಗೆ ಒಳಗಾಗುವುದು ಅಥವ ತೆಳುಗೊಳ್ಳುವುದು. ಫೈಜನ ನಿಮ್ಮ ಅನುವಾದವನ್ನು ಪೂರ್ತಿ ಒದಿರುವ ನನಗೆ ನಿಮ್ಮ ಅನುವಾದಗಳಲ್ಲಿ ಧ್ವನಿ ಉತ್ಪ್ರೇಕ್ಷೆ ಎಲ್ಲೂ ಕಂಡಿಲ್ಲ. ಕೆಲವು ಕಡೆ ಧ್ವನಿ ಹ್ರಸ್ವವಾಗುವುದಿದೆ (-ಉದಾಹರಣೆಗೆ ಫೈಜನ ’ಆಜ್ ಬಾಜಾರ್ ಮೇ’ ಮತ್ತು ’ಸುಬ್-ಎ-ಆಜಾದಿ’ ಕೆಲವು ಚರಣಗಳು)-ಆದರೆ, ಅವು ತೀರ ವಿರಳ. ಅಷ್ಟಕ್ಕೂ ಯಾವ ಅನುವಾದವೂ ಪೂರ್ಣವಲ್ಲ- ಪೂರ್ಣತೆ ಮನುಷ್ಯರ ಲಕ್ಷಣವೇ ಅಲ್ಲದಿರುವಾಗ ಅನುವಾದಕರ ಲಕ್ಷಣ ಯಾಕಾಗಿರಬೇಕು ಅಲ್ಲ್ವ?ನಿಮ್ಮ ಅನುವಾದ, ಮೂಲದ ಧ್ವನಿಗೆ ಚ್ಯುತಿ ಇಲ್ಲದೆ, ಅಚ್ಚ ಕನ್ನಡದ ಪದ್ಯ ಓದಿದ ಉಲ್ಲಾಸ ಕೊಡುತ್ತದಲ್ಲ-ಅದು ದೊಡ್ಡದು-ಅನುವಾದಕ್ಕೆ ಅದಕ್ಕಿಂತ ದೊಡ್ಡ ಭಾಗ್ಯವಿಲ್ಲ ಅನ್ನೋ ಒಕ್ಕಲಿನವವನು ನಾನು.ಈ ತಾಜ ಅನುವಾದದಲ್ಲೂ ’ ನಲವತ್ತು ದಿನಗಳ ನಡಿಗೆಯಷ್ಟು ದೂರ/ ತರಗಲೆ ಅಲ್ಲಾಡಿದರೆ ಧಿಗ್ಗನೆದ್ದು ನಿಲ್ಲಲಿ’ ಅನ್ನೋ ಪುಟ್ಟ ಊನ ಬಿಟ್ಟರೆ- You have proved it again. ರೀ..ನಿಮ್ಮ ಅನುವಾದದ ಫ್ಯಾನ್ ಕಣ್ರೀ ನಾನು-ಅದೂ ಸೀಲಿಂಗ್ ಫ್ಯಾನ್!
  ನಾನು ಕಮ್ಯುನಿಷ್ಟ್ ಸಾಮೂಹಿಕ ಸಂಘಟನೆಯಲ್ಲಿ ಚಿಲ್ಟು ಚಳುವಳಿಗಾರನಾಗಿದ್ದಾಗ ಹಿಕ್ಮತನ ಕೆಲವು ಪದ್ಯಗಳನ್ನು ಓದಿದ್ದೆ. ಭಾರತದ ಕಮ್ಯುನಿಷ್ಟ್ ಚಳುವಳಿಗಳಲ್ಲಿ ಗಂಡು-ಹೆಣ್ಣಿನ ಪ್ರೀತಿಯ ಬಗ್ಗೆ ಅಂಥ ’ಪ್ರೀತಿ’ ಏನು ಇರುತ್ತಿರಲಿಲ್ಲವಾದ್ದರಿಂದ, ಯೌವನಿಗರಾಗಿದ್ದ ನಾವು ಹುಡುಗಿಯರ ಕಡೆ ಕಣೆತ್ತಿ ಸಹ ನೋಡುತ್ತಿರಲಿಲ್ಲ. ಅಂಥದ್ದರಲ್ಲಿ ಕಮ್ಯುನಿಷ್ಟನಾಗಿದ್ದ ಹಿಕ್ಮತ್ ಪ್ರೇಮ ನಿವೇದನೆಯ ಪದ್ಯ ಬರೆದಿರುವುದನ್ನು ಕಂಡಾಗ ಒಂದು ಕಡೆ ಖುಷಿ-ಪುಳಕಗಳು, ಮತ್ತೊಂದು ಕಡೆ ಕವಿಯ ಕಮಿಟ್ಮೆಂಟ್ ಬಗ್ಗೆ ಅನುಮಾನಗಳೂ ಇಟ್ಟುಕೊಂಡು ಒದ್ದಾಡಿದಿದ್ದೆ.ಫೈಜ್ ಮತ್ತು ನೆರೂದರನ್ನು ಓದಿಕೊಂಡ ನಂತರ ಮೈಚಳಿ ಬಿಟ್ಟಿತ್ತಾದರೂ ಅಷ್ಟು ಹೊತ್ತಿಗೆ ಪ್ರೀತಿಯಿಂದ ಹುಡುಗಿಯರ ಕಡೆ ನೋಡುವ ಮನೋಸ್ಥಿತಿಯೂ ಮರುಗಟ್ಟಿದ್ದರಿಂದ ಹೆಚ್ಚಿನ ಫಾಯ್ದೆಯೇನೂ ಆಗಲಿಲ್ಲ! ಆ ಹೊತ್ತಿನ ಪುಳಕದಲ್ಲಿ, ಕಣೆದುರಿಗೆ ಇರುವ ಸಹಜ ಹುಡುಗಿಯರನ್ನು ಬಿಟ್ಟು, ಇಲ್ಲದ ’ಕ್ರಾಂತಿ ಸುಂದರಿ’ಯನ್ನು ನೆನೆಸಿಕೊಂಡು ಒಂದಷ್ಟು ಪ್ರೇಮಪದ್ಯ ಬರೆದು, ಭಾರಿ ಗುಪ್ತವಲಯದಲ್ಲಿ ಪರಸ್ಪರ ಓದಿಕೊಂಡು, ಪತ್ತೆಯಾಗದ ರೀತಿ ಹರಿದು ಹಾಕಿದ್ದು ಈಗ ನೆನಪಾಗಿ ನಗು ಬರುತ್ತದೆ- ಈ ೫೦ರ ವಯಸ್ಸಲ್ಲಿ ನಕ್ಕು-ಅತ್ತು ಏನು ಫಲ ಅಲ್ಲ್ವ! ಜೋಸೇಫ್ ಸ್ಟ್ಯಾಲಿನನ ಮಗಳು-ಅವಳ ಹೆಸರು ಈಗ ನೆನೆಪಾಗುತ್ತಿಲ್ಲ- ಹಿಕ್ಮತನನ್ನು ’ರೋಮ್ಯಾಂಟಿಕ್ ಕಮ್ಯುನಿಷ್ಟ್’ ಅಂತ ಕರೆದಿದ್ದಳು ಅಂತ, ಅದೇ ಹೆಸರಿನ ಪುಸ್ತಕವನ್ನು ಬೆಂಗಳೂರಿನ ಒಂದು ಪುಸ್ತಕದಂಗಡಿಯಲ್ಲಿ ಕೊಳ್ಳಲಾಗದೆ ನಿಂತಲ್ಲೇ ಒಂದಷ್ಟು ಓದಿದ ನೆನಪು. ಆಗ ಆತ ಪ್ರೇಮದ ಬಗ್ಗೆಯೂ ಬರೆದದ್ದರಿಂದ ಆಕೆ ಹಾಗೆ ಹೇಳಿರಬೇಕು ಅಂದುಕೊಂಡಿದ್ದೆ. ಈಗ ಹಿಂತಿರುಗಿ ನೋಡಿದಾಗ ಆ ಮಾತಿಗೆ ಹೆಚ್ಚು ಅರ್ಥ ಕಟ್ಟುತ್ತಿದೆ. ಆಕೆ ಬಹುಷಃ ಆತ ಸೋವಿಯತ್ತ್ ಯುನಿಯನ್ನಿನ ರೈಟರ್ಸ್ ಬ್ಲಾಕ್ ನ ಸಂದರ್ಭಸಾದಕ ಸಾಹಿತಿಗಳ ತರಹದವನಲ್ಲ ಎಂದು ಆಕೆಯ ಮಾತಿನ ಅರ್ಥ ಇರಬೇಕು. ಯಾಕೆಂದರೆ ಆಳುವ ವರ್ಗಗಳ ದಬ್ಬಾಳಿಕೆಯನ್ನು ಪ್ರತಿರೋಧಿಸಿ ಜೈಲುವಾಸದ ಕಡುಕಷ್ಟ ಅನುಭವಿಸಿದವನಿಗೆ ಸ್ಟ್ಯಾಲಿನನ ಆಟಾಟೋಪವೂ ಇಷ್ಟವಾಗಲಿಲ್ಲ; ಅವನು ಸ್ಟ್ಯಾಲಿನನ ಆಳ್ವಿಕೆಯನ್ನು ಟೀಕಿಸುವ ಒಂದು ನಾಟಕವನ್ನೂ ಬರೆದಿದ್ದಾನೆ ಅಂತ ನೆನಪು-ಅದು ಸೋವಿಯತ್ತ್ ಯೂನಿಯನ್ನಿನಲ್ಲಿ ಜನ ಓದದ ಹಾಗೆ ನೋಡಿಕೊಳ್ಳಲಾಯಿತು. ಫೈಜ್ ಮತ್ತು ಹಿಕ್ಮತರ ’ರೋಮ್ಯಾಂಟಿಸಂ’ ’goody goody’ ಪ್ರೇಮ ಪದ್ಯ ಬರೆಯುವುದರಲ್ಲಿ ಇರಲಿಲ್ಲ- ಅವರು ಮೆಚ್ಚಿದ್ದ ಇಂಗ್ಲೀಷ್ ’ರೋಮ್ಯಾಂಟಿಕ ಕವಿ’ಗಳ ಹಾಗೆ- ಮನುಷ್ಯ-ಮನುಷ್ಯರ ನಡುವಿನ, ವ್ಯಕ್ತಿ ಹಾಗು ಲೋಕದ ನಡುವಿನ ಸಂಬಂಧಗಳನ್ನು ಪರಿವರ್ತಾನಶೀಲವಾಗಿ ಕಲ್ಪಿಸುವ, ನಿರ್ವಚಿಸುವ ಬಗೆಯಲ್ಲಿದೆ. ಖ್ಯಾತ ಮಾರ್ಕ್ಸ್ವಾದಿ ಇತಿಹಾಸಕಾರ ಎರಿಕ್ ಹಾಬ್ಸ್ಬಾಮ್ ಅಂಟೋನಿಯೊ ಗ್ರಾಂಷಿ ಮಾರ್ಕ್ಸ್ವಾದದ ರಾಜಕೀಯ ಶಾಸ್ತ್ರವನ್ನು ಕಟ್ಟಿದ ಅಭಿಜಾತ ರಾಜಕಾರಣಿ ಎನ್ನುತ್ತಾನೆ- ಆ ಮಾತನ್ನೇ ಹಿಡಿದು ಹೇಳುವುದಾದರೆ ಹಿಕ್ಮತ್,ಫೈಜ್, ಬ್ರೆಕ್ಟ್ ಇವರುಗಳು ’ಸಮಾಜವಾದಿ ಸಮಾಜಶಾಸ್ತ್ರ, ನೀತಿಶಾಸ್ತ್ರ’ಗಳ ಕಟ್ಟುವುದಕ್ಕೆ ಪ್ರಯತ್ನಿಸುತ್ತಿದ್ದರು ಎಂದು-ಈಗ ಓದುವಾಗ ಅನಿಸುತ್ತಿದೆ.
  ಎಡೆಬಿಡದೆ ಬರೆ, ಓದು.
  ಒಂದಷ್ಟು ಬಟ್ಟೆ ನೇಯಿ, ಕನ್ನಡಿ ಮಾಡು
  ನಿನ್ನ ಪ್ರೀತಿಯ ಹುಡುಗಿ
  ಸಹವಾಸ ಸಾಕು ಅಂದುಬಿಡಬಹುದು.
  ಅದ್ಯಾವ ದೊಡ್ಡ ಮಾತು ಅನ್ನಬೇಡ.
  ನಿನ್ನೊಳಗಿನ ಏಕಾಕಿ ಮನುಷ್ಯನಿಗದು
  ಚಿಗುರ ಚಿವುಟಿದಂತ ನೋವು.
  ಅನುವಂಥ ಸಾಲುಗಳನಾಗಲಿ,
  ಬೆಳ್ಳಂಬೆಳಕಲ್ಲಿ ಮನೆ ಹೊಗ್ಗುವ ರಿವಾಜು
  ನಮ್ಮೂರ ಪೋಲೀಸರಿಗೆ ಇನ್ನೂ ಒಗ್ಗಿಲ್ಲ.
  ಎಂಬ ಸಾಲುಗಳನ್ನು ’ರೋಮ್ಯಾಂಟಿಕ್ ಕಮ್ಯುನಿಷ್ಟ’ರೇ ಬರೆಯಬಲ್ಲರು, ಅಲ್ಲ್ವಾ.
  ಕನ್ನಡದಲ್ಲಿ ಜೈಲುವಾಸದ ಪದ್ಯಗಳು ಇಲ್ಲದ ಬಗ್ಗೆ ಗಮನ ಸೆಳೆದಿದ್ದೀರಿ. ಈ ಮಾತಿಗೆ ಹೊಳೆದದ್ದು : ’ಕುದುರೆಮುಖ ಗಣಿಗಾರಿಕೆ ವಿರೋಧಿ ಚಳುವಳ” ಹಾಗು ’ಕುದುರೆಮುಖ ರಾಷ್ಟ್ರೀಯ ಉದ್ಯಾನ ವಿರೋಧಿ ಚಳುವಳ” ಗಳಲ್ಲಿ ನನಗೆ ಪರಿಚಯವಾಗಿದ್ದ ಹುಡುಗ ಕೃಷ್ಣಮೂರ್ತಿ ಪದ್ಯಗಳನ್ನು ಬರೆಯುತ್ತಿದ್ದ. ನಂತರ ಆತ ಕರ್ನಾಟಕದಲ್ಲಿ ಸಕ್ರಿಯವಾಗಿರುವ ನಕ್ಸಲೈಟ್ ಸಶಸ್ತ್ರ ಗುಂಪು ಸೇರಿದ್ದಾನೆ ಎಂದು ಪೋಲಿಸರು, ಮಾಧ್ಯಮಗಳು ಹೇಳುತ್ತಿವೆ. ಆತ ಬರೆದ ಕೆಲವು ಪದ್ಯಗಳನ್ನು ’ಗೌರಿ ಲಂಕೇಶ್ ಪತ್ರಿಕೆ’ಯಲ್ಲಿ ಗೆಳಯ ಪಾರ್ವತೀಶ್ ಪುಟ್ಟ ಇಂಟ್ರೋ ಜೊತೆ ಪ್ರಕಟಿಸಿದ್ದರು. ಅವುಗಳಲ್ಲಿ ಕೆಲವು ಪದ್ಯಗಳು ನಿಜಕ್ಕೂ ಚೆನ್ನಾಗಿದ್ದವು. ಈಗ ಕಠಿಣ ಜೈಲುವಾಸಕ್ಕೆ ಅರ್ಹ ಅಂತ ನಮ್ಮ ಪ್ರಭುತ್ವ ನಿರ್ಧರಿಸಬಲ್ಲ ಕಮ್ಯುನಿಷ್ಟರಲ್ಲಿ ಕೃಷ್ಣಮೂರ್ತಿ ಮಸಲ ಇದ್ದರೂ, ಆತ ಪೋಲಿಸರ ಕೈಗೆ ಸಿಕ್ಕರೆ ಜೈಲುವಾಸ ಅನುಭವಿಸಿ ಪದ್ಯ ಬರೆಯುವ ಸಾಧ್ಯತೆ ಇಲ್ಲ ಕಣ್ರಿ-ಯಾಕೆಂದರೆ ನಮ್ಮ ಪೋಲಿಸರಿಗೆ ಕಾನೂನು ಪಾಲನೆಯ ನೈಸಿಟಿಸ್ ಹಿಡಿಸೋದಿಲ್ಲ, ಅವನನ್ನು ಎನ್ಕೌಂಟರಿನಲ್ಲಿ ಮುಗಿಸಿಬಿಡ್ತಾರೆ ಕಣ್ರೀ. ನಿಮ್ಮ ಆಸೆ ಫಲಿಸೋ ಲಕ್ಷಣ ಇಲ್ಲ- ನಿಜಕ್ಕೂ ವ್ಯಂಗ್ಯವಲ್ಲ ಕಣ್ರಿ ಇದು,anguish
  -ಕೆ.ಫಣಿರಾಜ್

  • Bageshree said

   ಫಣಿರಾಜ್ ಮತ್ತು ಶಿವಸುಂದರ್ (ಒಬ್ಬರು ಬರೆದು ಮತ್ತು ಇನ್ನೊಬ್ಬರು ಓರಲ್ ಟ್ರೆಡಿಶನ್ನಿನಲ್ಲಿ) ಚೆಂದ ಇದೆ ಅಂತ ಹೇಳುತ್ತಲೇ (ಥ್ಯಾಂಕ್ಸ್ ಕಣ್ರೀ!) ಕೆಲವು ಕ್ಯಾತೆಗಳನ್ನೂ ತೆಗೆದಿದ್ದಾರೆ (ಅದಕ್ಕೂ ಥ್ಯಾಂಕ್ಸ್). ಅದಕ್ಕೆ ಈ ಪದ್ಯದ ಇನ್ನೊಂದು ವರ್ಶನ್ ಮಾಡುವ ಪ್ರಯತ್ನ ಮಾಡಿದ್ದೇನೆ. ಫಣಿರಾಜ್ ಹೇಳುವ ಹಾಗೆ ಇದೂ ಇನ್ನೊಂದು “ಅಪೂರ್ಣ” ಪ್ರಯತ್ನ.

   ಕೈದಿಗಳಿಗೆ ಕಿವಿಮಾತು

   ಈ ನಿನ್ನ ವಿಶಾಲ ಜಗ,

   ನಿನ್ನ ಊರು, ಕೇರಿಯ ಜನದ ಮೇಲೆ

   ಅಲುಗದ ನಂಬಿಕೆ ಹೊಂದಿದ ತಪ್ಪಿಗೆ

   ಕೊರಳ ಕುಣಿಕೆ ಹೇಗೋ ತಪ್ಪಿ

   ಸೆರೆಮನೆ ವಾಸ ಖಾತ್ರಿಯಾದರೆ,

   ಅಲ್ಲಿ ಹತ್ತಿಪ್ಪತ್ತು ವರ್ಷ ಕಳೆದು

   ಇನ್ನೊಂದಷ್ಟು ಬಾಕಿ ಉಳಿದರೆ,

   “ಅಯ್ಯೋ, ನೇಣುಗಂಬಕ್ಕೆ ಪತಾಕೆಯಂತೆ

   ಹಗ್ಗ ಬಿಗಿದು ಏರಿಸಿದ್ದರೇ ಎಷ್ಟೋ ಭೇಷಿತ್ತು!”

   ಅಂತ ಖಂಡಿತ ಹೇಳಬೇಡ.

   ಛಲ ಬಿಡದೆ ಬದುಕು.

   ಬಲ್ಲೆ, ಅದೇನು ಭಾರಿ ಆನಂದದ ಬದುಕಲ್ಲ.

   ಆದರೆ ಅವುಡುಗಚ್ಚಿ ಮತ್ತೂ ಒಂದು ದಿನ

   ಬದುಕಿಯೇಬಿಡುವುದು

   ನಿನ್ನ ವೈರಿಯ ಹೊಟ್ಟೆ ಉರಿಸಲು

   ನೀನು ಮಾಡಬೇಕಾದ ಕರ್ತವ್ಯ.

   ನಿನ್ನೊಳಗಿನ ಒಂದರ್ಧ
   ಬಾವಿಯೊಳಗಿನ ಬಂಡೆಯಂತೆ

   ತಣ್ಣನೆ ಒಂಟಿಯಾಗಿರಲಿ.

   ಆದರೆ ಇನ್ನರ್ಧ ಹೊರಗಿನ ಬಿರುಗಾಳಿಗೆ

   ನಲವತ್ತು ಹರಿದಾರಿಗಳ ದೂರದಲ್ಲೊಂದು

   ತರಗೆಲೆ ಉದುರಿಬಿದ್ದರೂ ಕಂಪಿಸಲಿ.

   ಪತ್ರಕ್ಕಾಗಿ ಕಾಯುತ್ತಾ

   ವಿರಹ ಗೀತೆಗಳ ಗುನುಗುತ್ತಾ

   ರಾತ್ರಿಯೆಲ್ಲ ಸೂರು ನೋಡುತ್ತಾ

   ಸುಮ್ಮನೆ ಮಲಗುವುದು ಸುಂದರ,

   ಆದರೆ ಅಷ್ಟೇ ಅಪಾಯಕರ.

   ದಾಡಿ ಮಾಡುವಾಗ ಕನ್ನಡಿ ನಿರುಕಿಸಿ ನೋಡು,

   ಮಾಗುತ್ತಿರುವ ವಯಸ್ಸ ಮರೆತುಬಿಡು,

   ಹೇನಿದ್ದರೆ ಹೆಕ್ಕಿ ತೆಗೆ,

   ಗಮನಿಸು ವಸಂತ ರಾತ್ರಿಗಳ ನಡೆ,

   ತಿನ್ನಲು ಮರೆಯಬೇಡ

   ರೊಟ್ಟಿಯ ಕಟ್ಟಕಡೆ ತುಣುಕು.

   ಎದೆ ಬಿಚ್ಚಿ ನಗುವ ಅಭ್ಯಾಸ

   ತಪ್ಪಿ ಹೋಗದಿರಲಿ ಕೊಂಚ ಜೋಕೆ.

   ಯಾರಿಗೆ ಗೊತ್ತು!

   ನಿನ್ನ ಪ್ರೀತಿಯ ಹುಡುಗಿ

   ಸಹವಾಸ ಸಾಕು ಅಂದುಬಿಡಬಹುದು.

   ಅದ್ಯಾವ ದೊಡ್ಡ ಮಾತು ಅನ್ನಬೇಡ.

   ಒಳಗಿನ ಮನುಷ್ಯನಿಗದು

   ಚಿಗುರ ಚಿವುಟಿದಂತ ನೋವು.

   ಒಳಗಿರುವಾಗ ಗುಲಾಬಿ ತೋಟಗಳ ಯೋಚನೆ ಕೇಡು.

   ಅಗಾಧ ಸಮುದ್ರ, ಮೇರುಪರ್ವತಗಳ ಯೋಚನೆ ಮೇಲು.

   ಎಡೆಬಿಡದೆ ಬರೆ, ಓದು.

   ಒಂದಷ್ಟು ಬಟ್ಟೆ ನೇಯಿ, ಕನ್ನಡಿ ಮಾಡು.

   ಒಟ್ಟಲ್ಲಿ,

   ಹತ್ತಿಪ್ಪತ್ತು ವರ್ಷ ಒಳಗೆ ಕಳೆಯುವುದು

   ಆಗದ ಕೆಲಸವೇನಲ್ಲ,

   ನಿನ್ನ ಎದೆಯ ಗೂಡ ಎಡ ಬದಿಯ

   ವಜ್ರದ ಮೆರುಪು ಮಂಕಾಗದನಕ.

   • ಕೆ.ಫಣಿರಾಜ್ said

    ರೀ..ನಿಮ್ಮ ಛಲ ಕಂಡು ಖುಷಿಯಾಗಿ, ವೆಬ್ ನಲ್ಲಿ ಮೂಲ ಇಂಗ್ಲೀಷ್ ಅನುವಾದ ಹುಡುಕಿ, ನಿಮ್ಮ ೨ ವರ್ಷನ್ ನೋಡಿ, ನನ್ನ ಎಡಿಟಿಂಗ್ ಮಾಡಿರುವೆ. ’ಸಾಥಿ ಹಾತ್ ಬಡನಾ..’ ಅಂತ ಸಹೀರ್ ಲುಧಿಯಾನ್ವಿ ಹಾಡಿದೆಯಲ್ಲ, ಆ ಸ್ಪಿರಿಟಲ್ಲಿ- ಅಷ್ಟೇ, ತಪ್ಪು ಭಾವಿಸದಿರಿ. ಒಪ್ಪಿಸಿಕೊಳ್ಳಿ:
    ಕೈದಿಗಳಿಗೆ ಕಿವಿಮಾತು
    ಈ ಲೋಕ,
    ನಿನ್ನ ಊರು, ಕೇರಿಯ ಜನರ ಮೇಲೆ
    ಅಚಲ ನಂಬಿಕೆ ಹೊಂದಿದ ತಪ್ಪಿಗೆ
    ಕೊರಳ ಕುಣಿಕೆ ಹೇಗೋ ತಪ್ಪಿ
    ಸೆರೆಮನೆ ವಾಸ ಖಾತ್ರಿಯಾದರೆ,
    ಅಲ್ಲಿ ಹತ್ತಿಪ್ಪತ್ತು ವರ್ಷ ಕಳೆದು
    ಇನ್ನೊಂದಷ್ಟು ಬಾಕಿ ಉಳಿದರೆ,
    “ಅಯ್ಯೋ, ನೇಣುಗಂಬಕ್ಕೆ ಪತಾಕೆಯಂತೆ
    ಹಗ್ಗ ಬಿಗಿದು ಏರಿಸಿದ್ದರೇ ಎಷ್ಟೋ ಭೇಷಿತ್ತು!”
    ಅಂತ ಖಂಡಿತ ಹೇಳಬೇಡ.
    ಛಲ ಬಿಡದೆ ಬದುಕು.
    ಬಲ್ಲೆ, ಅದೇನು ಭಾರಿ ಆನಂದದ ಬದುಕಲ್ಲ.
    ಆದರೆ ಅವುಡುಗಚ್ಚಿ ಮತ್ತೂ ಒಂದು ದಿನ
    ಬದುಕಿಯೇಬಿಡುವುದು
    ನಿನ್ನ ವೈರಿಯ ಹೊಟ್ಟೆ ಉರಿಸಲು
    ನೀನು ಮಾಡಬೇಕಾದ ಕರ್ತವ್ಯ.

    ನಿನ್ನ ಒಂದರ್ಧ
    ಬಾವಿಯಾಳದಲ್ಲಿ ಹುದುಗಿರುವ ರಾಗದಂತೆ
    ನಿನ್ನೊಳಗೆ ಒಂಟಿಯಾಗಿರಬಹುದು.
    ಆದರಿನ್ನೊಂದರ್ಧ
    ಹೊರಗೆ, ನಲವತ್ತು ಹರಿದಾರಿಗಳ ದೂರದಲ್ಲೊಂದು
    ತರಗೆಲೆಯ ಕಂಪನಕೆ
    ಒಳಗಿರುವ ನೀನೂ ಕಂಪಿಸುವಷ್ಟು
    ಲೋಕದ ರಾಗದ್ವೇಷಗಳ ಜೊತೆ ಶ್ರುತಿ ಕೂಡಿಸಿಕೊಂಡಿರಬೇಕು.

    ಪತ್ರಕ್ಕಾಗಿ ಕಾಯುತ್ತಾ
    ವಿರಹ ಗೀತೆಗಳ ಗುನುಗುತ್ತಾ
    ರಾತ್ರಿಯೆಲ್ಲ ಸೂರು ನೋಡುತ್ತಾ
    ಸುಮ್ಮನೆ ಮಲಗುವುದು ಮಧುರ,
    ಆದರೆ ಅಷ್ಟೇ ಅಪಾಯಕರ.
    ದಾಡಿ ಮಾಡುವಾಗ ಕನ್ನಡಿ ನಿರುಕಿಸಿ ನೋಡು,
    ಓಡುವ ವಯಸ್ಸಿನ ಚಿಂತೆ ಬಿಟ್ಟುಬಿಡು,
    ಹೇನಿದ್ದರೆ ಹೆಕ್ಕಿ ತೆಗೆ,
    ಗಮನಿಸು ವಸಂತ ರಾತ್ರಿಗಳ ನಡೆ,
    ರೊಟ್ಟಿಯ ಕಟ್ಟಕಡೆ ತುಣುಕು ತಿನ್ನಲು
    ಎಂದೂ ಮರೆಯಬೇಡ
    ಹಾಗೆಯೇ ಎದೆ ಬಿಚ್ಚಿ ನಗುವ ಅಭ್ಯಾಸ
    ಮರೆಯದಿರು ಜೋಕೆ.
    ಯಾರಿಗೆ ಗೊತ್ತು!
    ನಿನ್ನ ಪ್ರೀತಿಯ ಹುಡುಗಿ
    ಸಹವಾಸ ಸಾಕು ಅಂದುಬಿಡಬಹುದು.
    ಅದ್ಯಾವ ದೊಡ್ಡ ಮಾತು ಅನ್ನಬೇಡ.
    ನಿನ್ನೊಳಗಿನ ಮನುಷ್ಯನಿಗದು
    ಚಿಗುರ ಚಿವುಟಿದಂತ ನೋವು.
    ಒಳಗಿರುವಾಗ ಗುಲಾಬಿ ತೋಟಗಳ ಯೋಚನೆ ಕೇಡು.
    ಅಗಾಧ ಸಮುದ್ರ, ಮೆರೆವ ಮೇರುಗಳ ಯೋಚನೆ ಮೇಲು.
    ಎಡೆಬಿಡದೆ ಬರೆ, ಓದು.
    ಒಂದಷ್ಟು ಬಟ್ಟೆ ನೇಯಿ, ಕನ್ನಡಿ ಮಾಡು.
    ಒಟ್ಟಲ್ಲಿ, ನಾನು ಹೇಳೋದೇನು ಅಂದ್ರೆ
    ನಿನ್ನೆದೆಯ ವಜ್ರದ ಮೆರುಪು ಮಂಕಾಗದನಕ
    ಹತ್ತಿಪ್ಪತ್ತು ವರ್ಷ ಒಳಗೆ ಕಳೆಯುವುದು
    ಅಸಾಧ್ಯವೇನಲ್ಲ.

 2. ಬಹಳ ಚೆನ್ನಾಗಿದೆ…. ಕವಿಯ ಅನುಭವವು ಕಣ್ಮುಂದೆ ಕಟ್ಟಿದಂತಾಯಿತು. ಅನುವಾದಕ್ಕೆ ಧನ್ಯವಾದಗಳು….ನಾಜೀಮ್ ಹಿಕ್ಮತ್ತರ ಇತರೆ ಪದ್ಯಗಳನ್ನೂ ಓದಬೇಕೆಂದೆನಿಸಿದೆ…..

 3. g.n.nagaraj said

  ನಿಮ್ಮ ಬ್ಲಾಗಿಲನ್ನು ಮೊದಲ ಬಾರಿ ತೆರೆದಿದ್ದೇನೆ. ಕ್ರಾಂತಿಕಾರಿ ಕಾವ್ಯದ ಬಗೆಗಿನ ನಿಮ್ಮ ಮೋಹ ಬೆಳೆಯಲಿ ನಮ್ಮನ್ನೂ ಮೋಹಗೊಳಿಸಲಿ

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: