Archive for ಏಪ್ರಿಲ್, 2014

ಬ್ಲೌಸು ಯಾಕೆ ಹಾಕಬೇಕು?

ಒಂದು ಸೀರೆ ಉಡುವ ಎಪಿಸೋಡಿನಿಂದ ಇನ್ನೊಂದು ಸೀರೆ ಉಡುವ ಎಪಿಸೋಡಿನ ನಡುವೆ ಒಂದು ಸುತ್ತು ದಪ್ಪ ಆಗುವುದು ಪ್ರಕೃತಿಯ ನಿಯಮ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಎಷ್ಟೇ ದಪ್ಪ ಆದರೂ ಕ್ಷಮಿಸಿ ಸಾವಧಾನವಾಗಿ ಸುತ್ತಿಕೊಳ್ಳುತ್ತದೆ ಸೀರೆ. ಆದರೆ ಈ ತರಲೆ ಬ್ಲೌಸು ಸೀರೆಗೆ ಸಿಕ್ಕಾಪಟ್ಟೆ ಕಾಂಟ್ರಾಸ್ಟು. ಎರಡನೆಯ ಪದರ ಚರ್ಮದೋಪಾದಿಯ ಈ ವಸ್ತ್ರ ಅರ್ಧ ಸೆಂಟೀಮೀಟರ್ ದೇಹದ ಸುತ್ತಳತೆ ಹೆಚ್ಚಾದರೂ ತೋಳ ಮೇಲೇರದೆ, ಹುಕ್ಕು ಹಾಕಿಕೊಳ್ಳಲು ಬಿಡದೆ, ಉಸಿರು ಕಟ್ಟಿಸಿ ಸ್ಟ್ರೈಕು ಮಾಡಿಬಿಡುತ್ತದೆ. ಈ ರಗಳೆ ಬಲ್ಲ ಕೆಲ ಜಾಣ ಟೈಲರುಗಳು ಬಿಚ್ಚಿ ಅಗಲ ಮಾಡಿಕೊಳ್ಳುಲು ಅನುಕೂಲ ಆಗುವ ಹಾಗೆ ಮೂರು ಎಕ್ಸಟ್ರಾ ಹೊಲಿಗೆ ಹಾಕಿರುತ್ತಾರೆ.
ಟೈಟಾದ ಬ್ಲೌಸು ತಿಂದ ಪ್ರತಿಯೊಂದು ಬಜ್ಜಿ ಬೋಂಡಾ ನೆನಪು ಮಾಡಿಕೊಳ್ಳುವಂಥ ಸಂದರ್ಭ ತಂದಿಟ್ಟಾಗೆಲ್ಲ “ಅಭಿಜ್ಞಾನ ಶಾಕುಂತಲಾ” ನಾಟಕದ ಮೊದಲ ಅಂಕ ನೆನಪಾಗುತ್ತದೆ. ಕಳ್ಳನ ಹಾಗೆ ಮರದ ಸಂದಿಯಿಂದ ಮೊದಲ ಬಾರಿ ದುಷ್ಯಂತ ಶಕುಂತಲೆಯನ್ನು ನೋಡುವ ದೃಷ್ಯ. ಸ್ನೇಹಿತೆ ಪ್ರಿಯಂವದೆ ವಲ್ಕಲವನ್ನು (ನಾರು ಬಟ್ಟೆ) ಎದೆಯ ಸುತ್ತ ತುಂಬ ಟೈಟ್ ಕಟ್ಟಿಬಿಟ್ಟಿದ್ದಾಳೆ, ಸ್ವಲ್ಪ ಸಡಿಲ ಮಾಡು ಅಂತ ಶಕುಂತಲೆ ಅನಸೂಯೆಯನ್ನು ಕೇಳುತ್ತಾಳೆ. ಆಗ ಪ್ರಿಯಂವದೆ ನನ್ನನ್ಯಾಕೆ ಬೈಯ್ಯುತ್ತೀಯ ಕಣೆ, ತಪ್ಪು ನಿನ್ನ ಉಕ್ಕುವ ಯೌವ್ವನದ್ದು ಅಂತ ನಗುತ್ತಾ ಹೇಳುತ್ತಾಳೆ. ತಕ್ಷಣ ಕ್ಯೂ ಕೊಟ್ಟ ಹಾಗೆ ನಮ್ಮ ದುಷ್ಯಂತ ತನ್ನ ಮಾಮೂಲಿ ಹೆಣ್ಣಿನ ವರ್ಣನೆಗೆ ಇಳಿದುಬಿಡುತ್ತಾನೆ. ದುಂಬಿ ಹೊಡೆಯುವ ಖ್ಯಾತಿಯ ಮಧ್ಯ ವಯಸ್ಕ ಹೀರೋಗೆ (ಅಲ್ಲಿಂದ ಇಲ್ಲಿಯವರೆಗೆ ಮುದಿಯಾಗುತ್ತಿರುವ ಹೀರೋಗಳಿಗೆ ಹದಿ ಹರೆಯದ ಹೀರೋಯಿನ್ನುಗಳೇ!) ಮರುಳಾದ ಆ ಶಕುಂತಲೆ ಅದು ಹೇಗೆ ಎಲ್ಲಿಗೆ ಯಾಕೆ ಕಟ್ಟಿಕೊಂಡಿದ್ದಳೋ ದೇವರೇ ಬಲ್ಲ. ನಮ್ಮ ಕ್ಯಾಲೆಂಡರ್ ಚಿತ್ರಗಳ ಪ್ರಕಾರವಂತೂ ಎದೆಗೆ ಒಂದು ಬಟ್ಟೆ ಸುತ್ತಿ ಹಿಂದೆ ಒಂದು ಗಂಟು ಬಿಗಿಯುವುದು ಆಗಿನ ಸ್ಟೈಲು. ಸಡಿಲ ಮಾಡಲು ಸರಾಗ. ಆ ಚಾಲಕಿ ಮಾತಿನ ಪ್ರಿಯಂವದೆ ಸ್ವಲ್ಪ ತುಪ್ಪ ಹಾಲು ಜಾಸ್ತಿಯಾಗಿ ಊದಿದ್ದೀ ಅಂತಲೇ ಶಕುಂತಲೆಗೆ ಹಿಂಟ್ ಮಾಡುತ್ತಿದ್ದಿರಬೇಕು ಅಂತ ನನ್ನ ಅನುಮಾನ. ಆದರೆ ಪೆದ್ದು ಸದಾಶಿವ ದುಷ್ಯಂತನಿಗೆ ಅದೇ ಧ್ಯಾನ ಆದ್ದರಿಂದ ಈ ಸೂಕ್ಷ್ಮಗಳು ಗೊತ್ತಾಗಿರಲಿಕ್ಕಿಲ್ಲ. ಆಗಿನ ದುಷ್ಯಂತನ ವರ್ಣನೆಯಿಂದ ಹಿಡಿದು ಈಗಿನ “ಚೋಲಿ ಕೆ ಪೀಚೆ”ಯವರೆಗೆ ಮಾಹಾ ಸೂಕ್ಷ್ಮಗೀಕ್ಷ್ಮ ಏನೂ ಇಲ್ಲ.

ಆ ಪುರಾಣ ಎಲ್ಲ ಹಾಗಿರಲಿ, ಈ ನಮ್ಮ ಸಧ್ಯದ ಸುತ್ತಳತೆ ಪ್ರಾಬ್ಲಮ್ ಪರಿಹರಿಸಲಿಕ್ಕೆ ನನ್ನ ಗೆಳತಿಯೊಬ್ಬಳು ಒಳ್ಳೆ ಉಪಾಯ ಕಂಡುಹಿಡಿದಿದ್ದಾಳೆ. ಟೈಟ್ ಆಗಿ ಹಾಕದೇ ಬಿಟ್ಟ ಟೀಶರ್ಟುಗಳನ್ನು ಸೀರೆಯ ಬ್ಲೌಸಿನ ಬದಲು ಹಾಕಿಕೊಳ್ಳುತ್ತಾಳೆ. ಈಗ ಮಾರ್ಕೆಟ್ಟಿನಲ್ಲಿ ಸ್ಟ್ರೆಚ್ ಆಗುವ ಬಟ್ಟೆಯ ಬ್ಲೌಸುಗಳೂ ಇವೆ. ಹಿಂದೆ ಲಾಡಿ ಕಟ್ಟುವ ರಾಜಾಸ್ಥಾನೀ ಸ್ಟೈಲಿನ ಬ್ಲೌಸುಗಳು, ಸ್ಪೆಗೆಟ್ಟಿ ಬ್ಲೌಸುಗಳು ಇವೆಯಾದರೂ ಅವನ್ನು ಹೆಚ್ಚು ಪಾಲು ಹಾಕಿಕೊಳ್ಳುವುದು ಊಟ ಬಿಟ್ಟು ಸೊರಗಿ ಸಣ್ಣಗಾದ ಜೀರೋ ಸೈಜ್ ಹುಡುಗಿಯರೇ ಅನ್ನುವುದು ವಿಪರ್ಯಾಸ! ಇನ್ನು ಶರ್ಟಿನ ಹಾಗೆ ದೊಗಳೆ ದೊಗಳೆ ಇದ್ದ ಬ್ಲೌಸುಗಳ ಕಾಲ ನಮ್ಮಜ್ಜಿಯ ಜೊತೆಗೇ ಮುಗಿದಿದೆ. ಒಟ್ಟಲ್ಲಿ “ಎಲಿಗೆಂಟ್” ಅಂತ ಕರೆಸಿಕೊಳ್ಳುವ ಬಹುಪಾಲು ಬ್ಲೌಸುಗಳು ಉಸಿರು ಕಟ್ಟಿಸುವ ಜಾತಿಯವೇ. “ಯಾರು ಕಂಡುಹಿಡಿದರು ಗೆಳತೀ ಇದೇನಿದು ಕವಚ ಕಂಚುಕ ಕಟ್ಟಿಡುವ ತವಕ, ಬಿಟ್ಟರೆ ಕುಹಕ…” ಅನ್ನುವ ಪ್ರತಿಭಾ ನಂದಕುಮಾರ್ ಸಾಲು ಸೀರೆ ಉಡುವಾಗೆಲ್ಲ ನೆನಪಾಗುತ್ತದೆ.

Read the rest of this entry »

Advertisements

Comments (2)