ಬ್ಲೌಸು ಯಾಕೆ ಹಾಕಬೇಕು?

ಒಂದು ಸೀರೆ ಉಡುವ ಎಪಿಸೋಡಿನಿಂದ ಇನ್ನೊಂದು ಸೀರೆ ಉಡುವ ಎಪಿಸೋಡಿನ ನಡುವೆ ಒಂದು ಸುತ್ತು ದಪ್ಪ ಆಗುವುದು ಪ್ರಕೃತಿಯ ನಿಯಮ ಎಂಬ ನಿರ್ಧಾರಕ್ಕೆ ಬಂದಿದ್ದೇನೆ. ಎಷ್ಟೇ ದಪ್ಪ ಆದರೂ ಕ್ಷಮಿಸಿ ಸಾವಧಾನವಾಗಿ ಸುತ್ತಿಕೊಳ್ಳುತ್ತದೆ ಸೀರೆ. ಆದರೆ ಈ ತರಲೆ ಬ್ಲೌಸು ಸೀರೆಗೆ ಸಿಕ್ಕಾಪಟ್ಟೆ ಕಾಂಟ್ರಾಸ್ಟು. ಎರಡನೆಯ ಪದರ ಚರ್ಮದೋಪಾದಿಯ ಈ ವಸ್ತ್ರ ಅರ್ಧ ಸೆಂಟೀಮೀಟರ್ ದೇಹದ ಸುತ್ತಳತೆ ಹೆಚ್ಚಾದರೂ ತೋಳ ಮೇಲೇರದೆ, ಹುಕ್ಕು ಹಾಕಿಕೊಳ್ಳಲು ಬಿಡದೆ, ಉಸಿರು ಕಟ್ಟಿಸಿ ಸ್ಟ್ರೈಕು ಮಾಡಿಬಿಡುತ್ತದೆ. ಈ ರಗಳೆ ಬಲ್ಲ ಕೆಲ ಜಾಣ ಟೈಲರುಗಳು ಬಿಚ್ಚಿ ಅಗಲ ಮಾಡಿಕೊಳ್ಳುಲು ಅನುಕೂಲ ಆಗುವ ಹಾಗೆ ಮೂರು ಎಕ್ಸಟ್ರಾ ಹೊಲಿಗೆ ಹಾಕಿರುತ್ತಾರೆ.
ಟೈಟಾದ ಬ್ಲೌಸು ತಿಂದ ಪ್ರತಿಯೊಂದು ಬಜ್ಜಿ ಬೋಂಡಾ ನೆನಪು ಮಾಡಿಕೊಳ್ಳುವಂಥ ಸಂದರ್ಭ ತಂದಿಟ್ಟಾಗೆಲ್ಲ “ಅಭಿಜ್ಞಾನ ಶಾಕುಂತಲಾ” ನಾಟಕದ ಮೊದಲ ಅಂಕ ನೆನಪಾಗುತ್ತದೆ. ಕಳ್ಳನ ಹಾಗೆ ಮರದ ಸಂದಿಯಿಂದ ಮೊದಲ ಬಾರಿ ದುಷ್ಯಂತ ಶಕುಂತಲೆಯನ್ನು ನೋಡುವ ದೃಷ್ಯ. ಸ್ನೇಹಿತೆ ಪ್ರಿಯಂವದೆ ವಲ್ಕಲವನ್ನು (ನಾರು ಬಟ್ಟೆ) ಎದೆಯ ಸುತ್ತ ತುಂಬ ಟೈಟ್ ಕಟ್ಟಿಬಿಟ್ಟಿದ್ದಾಳೆ, ಸ್ವಲ್ಪ ಸಡಿಲ ಮಾಡು ಅಂತ ಶಕುಂತಲೆ ಅನಸೂಯೆಯನ್ನು ಕೇಳುತ್ತಾಳೆ. ಆಗ ಪ್ರಿಯಂವದೆ ನನ್ನನ್ಯಾಕೆ ಬೈಯ್ಯುತ್ತೀಯ ಕಣೆ, ತಪ್ಪು ನಿನ್ನ ಉಕ್ಕುವ ಯೌವ್ವನದ್ದು ಅಂತ ನಗುತ್ತಾ ಹೇಳುತ್ತಾಳೆ. ತಕ್ಷಣ ಕ್ಯೂ ಕೊಟ್ಟ ಹಾಗೆ ನಮ್ಮ ದುಷ್ಯಂತ ತನ್ನ ಮಾಮೂಲಿ ಹೆಣ್ಣಿನ ವರ್ಣನೆಗೆ ಇಳಿದುಬಿಡುತ್ತಾನೆ. ದುಂಬಿ ಹೊಡೆಯುವ ಖ್ಯಾತಿಯ ಮಧ್ಯ ವಯಸ್ಕ ಹೀರೋಗೆ (ಅಲ್ಲಿಂದ ಇಲ್ಲಿಯವರೆಗೆ ಮುದಿಯಾಗುತ್ತಿರುವ ಹೀರೋಗಳಿಗೆ ಹದಿ ಹರೆಯದ ಹೀರೋಯಿನ್ನುಗಳೇ!) ಮರುಳಾದ ಆ ಶಕುಂತಲೆ ಅದು ಹೇಗೆ ಎಲ್ಲಿಗೆ ಯಾಕೆ ಕಟ್ಟಿಕೊಂಡಿದ್ದಳೋ ದೇವರೇ ಬಲ್ಲ. ನಮ್ಮ ಕ್ಯಾಲೆಂಡರ್ ಚಿತ್ರಗಳ ಪ್ರಕಾರವಂತೂ ಎದೆಗೆ ಒಂದು ಬಟ್ಟೆ ಸುತ್ತಿ ಹಿಂದೆ ಒಂದು ಗಂಟು ಬಿಗಿಯುವುದು ಆಗಿನ ಸ್ಟೈಲು. ಸಡಿಲ ಮಾಡಲು ಸರಾಗ. ಆ ಚಾಲಕಿ ಮಾತಿನ ಪ್ರಿಯಂವದೆ ಸ್ವಲ್ಪ ತುಪ್ಪ ಹಾಲು ಜಾಸ್ತಿಯಾಗಿ ಊದಿದ್ದೀ ಅಂತಲೇ ಶಕುಂತಲೆಗೆ ಹಿಂಟ್ ಮಾಡುತ್ತಿದ್ದಿರಬೇಕು ಅಂತ ನನ್ನ ಅನುಮಾನ. ಆದರೆ ಪೆದ್ದು ಸದಾಶಿವ ದುಷ್ಯಂತನಿಗೆ ಅದೇ ಧ್ಯಾನ ಆದ್ದರಿಂದ ಈ ಸೂಕ್ಷ್ಮಗಳು ಗೊತ್ತಾಗಿರಲಿಕ್ಕಿಲ್ಲ. ಆಗಿನ ದುಷ್ಯಂತನ ವರ್ಣನೆಯಿಂದ ಹಿಡಿದು ಈಗಿನ “ಚೋಲಿ ಕೆ ಪೀಚೆ”ಯವರೆಗೆ ಮಾಹಾ ಸೂಕ್ಷ್ಮಗೀಕ್ಷ್ಮ ಏನೂ ಇಲ್ಲ.

ಆ ಪುರಾಣ ಎಲ್ಲ ಹಾಗಿರಲಿ, ಈ ನಮ್ಮ ಸಧ್ಯದ ಸುತ್ತಳತೆ ಪ್ರಾಬ್ಲಮ್ ಪರಿಹರಿಸಲಿಕ್ಕೆ ನನ್ನ ಗೆಳತಿಯೊಬ್ಬಳು ಒಳ್ಳೆ ಉಪಾಯ ಕಂಡುಹಿಡಿದಿದ್ದಾಳೆ. ಟೈಟ್ ಆಗಿ ಹಾಕದೇ ಬಿಟ್ಟ ಟೀಶರ್ಟುಗಳನ್ನು ಸೀರೆಯ ಬ್ಲೌಸಿನ ಬದಲು ಹಾಕಿಕೊಳ್ಳುತ್ತಾಳೆ. ಈಗ ಮಾರ್ಕೆಟ್ಟಿನಲ್ಲಿ ಸ್ಟ್ರೆಚ್ ಆಗುವ ಬಟ್ಟೆಯ ಬ್ಲೌಸುಗಳೂ ಇವೆ. ಹಿಂದೆ ಲಾಡಿ ಕಟ್ಟುವ ರಾಜಾಸ್ಥಾನೀ ಸ್ಟೈಲಿನ ಬ್ಲೌಸುಗಳು, ಸ್ಪೆಗೆಟ್ಟಿ ಬ್ಲೌಸುಗಳು ಇವೆಯಾದರೂ ಅವನ್ನು ಹೆಚ್ಚು ಪಾಲು ಹಾಕಿಕೊಳ್ಳುವುದು ಊಟ ಬಿಟ್ಟು ಸೊರಗಿ ಸಣ್ಣಗಾದ ಜೀರೋ ಸೈಜ್ ಹುಡುಗಿಯರೇ ಅನ್ನುವುದು ವಿಪರ್ಯಾಸ! ಇನ್ನು ಶರ್ಟಿನ ಹಾಗೆ ದೊಗಳೆ ದೊಗಳೆ ಇದ್ದ ಬ್ಲೌಸುಗಳ ಕಾಲ ನಮ್ಮಜ್ಜಿಯ ಜೊತೆಗೇ ಮುಗಿದಿದೆ. ಒಟ್ಟಲ್ಲಿ “ಎಲಿಗೆಂಟ್” ಅಂತ ಕರೆಸಿಕೊಳ್ಳುವ ಬಹುಪಾಲು ಬ್ಲೌಸುಗಳು ಉಸಿರು ಕಟ್ಟಿಸುವ ಜಾತಿಯವೇ. “ಯಾರು ಕಂಡುಹಿಡಿದರು ಗೆಳತೀ ಇದೇನಿದು ಕವಚ ಕಂಚುಕ ಕಟ್ಟಿಡುವ ತವಕ, ಬಿಟ್ಟರೆ ಕುಹಕ…” ಅನ್ನುವ ಪ್ರತಿಭಾ ನಂದಕುಮಾರ್ ಸಾಲು ಸೀರೆ ಉಡುವಾಗೆಲ್ಲ ನೆನಪಾಗುತ್ತದೆ.

ಕಂಡು ಹಿಡಿದದ್ದು ಯಾರು ಅಂತ ಅಷ್ಟೊಂದು ಸ್ಪಷ್ಟ ಯಾರಿಗೂ ಗೊತ್ತಿದ್ದ ಹಾಗಿಲ್ಲ. ಹೊಲಿದ ಬಟ್ಟೆಗಳನ್ನು ತೊಡುವ ಸಂಪ್ರದಾಯ ಭಾರತಕ್ಕೆ ಬಂದದ್ದು ಲೇಟಾಗಿ ಅನ್ನುವುದು ಒಂದು ವಾದ. ವಿಧವಿಧವಾದ ಬಟ್ಟೆ ಹೊಲಿಯುವ ವಿನ್ಯಾಸಗಳು ಬಂದದ್ದು ಮುಘಲರೊಂದಿಗೆ ಅನ್ನುತ್ತಾರೆ. ಮುಂದೆ ವಿಕ್ಟೋರಿಯಾ ಕಾಲದ ಮಡಿವಂತ ಬ್ರಿಟೀಶರು ನಮ್ಮ ಮೇಲೆ ನೀತಿ-ಅನೀತಿಗಳ ಹೊಸ ಮಾನದಂಡಗಳನ್ನು ಹೇರುತ್ತಾ ಹೋದ ಹಾಗೆ ಈ ಬ್ಲೌಸು, ಸೆರಗು ಇತ್ಯಾದಿ “ಮಾನ ಮುಚ್ಚುವ” ವಸ್ತ್ರಗಳ ಮಹತ್ವವೂ ಏರುತ್ತಾ ಹೋಯಿತು. ಮೈತುಂಬ ಸೆರಗು ಹೊದ್ದ ಗುಬ್ಬಳಿ ತೋಳಿನ ಬ್ಲೌಸಿನ ರಾಜಮನೆತನದ ಹೆಂಗಸರ ಹಳೆಯ ಫೋಟೋಗಳಲ್ಲಿ ಈ ವಿಕ್ಟೋರಿಯನ್ ಛಾಪು ಕಾಣುತ್ತದೆ. ಹಾಗೆ ಆದಾಗ ಮುಚ್ಚಿದ್ದರ ಬಗೆಗಿನ ಕುತೂಹಲವೂ ಹೆಚ್ಚುತ್ತಾ ಹೋಗಿರಲೇಬೇಕು. ಬಿಳಿ ಸೀರೆ ಉಡಿಸಿ, ಮೇಲೆ ಮಳೆ ಸುರಿಸಿ ನೃತ್ಯ ಮಾಡಿಸುವ  ನಮ್ಮ ಭವ್ಯ ಪರಂಪರೆಯೇ ಅದಕ್ಕೆ ಸಾಕ್ಷಿ. ಇನ್ನೊಂದು ವಾದದ ಪ್ರಕಾರ “ಚೋಲಿ” ಅನ್ನುವ ಪದದ ಮೂಲ ದಕ್ಷಿಣದ ಚೋಳಾ ರಾಜವಂಶ. ಕಲ್ಹಣನ ‘ರಾಜತರಂಗಿಣಿ’ಯಲ್ಲಿ ದಕ್ಷಿಣದಲ್ಲಿ ಪ್ರಚಲಿತವಿದ್ದ ಹೆಂಗಸರ ಮೇಲು ಉಡುಗೆ  ರಾಜನ ಫಾರ್ಮಾನಿನ ಅನ್ವಯ ಕಾಶ್ಮೀರದಲ್ಲಿ ಬಳಕೆಗೆ ಬಂದು ಅಂತ ಉಲ್ಲೇಖವಿದೆಯಂತೆ! ನಾನು ಕಲ್ಹಣನನ್ನು ಓದಿಲ್ಲ. ಅದೇನಿದ್ದರೂ “ಗೂಗಲ್ ಸರ್ಚ್”ದತ್ತ ಜ್ಞಾನ. ಆದ್ದರಿಂದ ಈ ಚೋಳರ ಕಥೆಯ ಬಗ್ಗೆ ಗಟ್ಟಿ ಗೊತ್ತಿಲ್ಲ.

ಕಂಡುಹಿಡಿದದ್ದು ಯಾರೇ, ಯಾವಾಗಲೇ ಇರಲಿ, ಒಂದಂತೂ ಖಚಿತ. ನಮ್ಮ ದೇಶದಲ್ಲಿ ಏನನ್ನಾದರೂ — ಪುಟಗೋಸಿ ಬ್ಲೌಸೂ ಸೇರಿದಂತೆ — ಕೆಳಜಾತಿಯವರಿಗೆ, ಹೆಂಗಸರಿಗೆ ಕಾಟ ಕೊಡಲಿಕ್ಕೆ ಬಳಸಿಕೊಳ್ಳಬಹುದು. ಕೆಲವು ಜಾತಿಯ ಹೆಂಗಸರು ಬ್ಲೌಸು ಹಾಕುವ ಹಾಗಿಲ್ಲ, ಗಂಡ ಸತ್ತವರು ಬ್ಲೌಸು ಹಾಕುವ ಹಾಗಿಲ್ಲ ಇತ್ಯಾದಿ ನಿಯಮಗಳಿದ್ದ ಕಾಲ ಬಹಳ ಹಿಂದಿನದೇನೂ ಅಲ್ಲ. ಬ್ಲೌಸು ಬೇಡ ಅಂದರೆ ಒಂದು ಕಾಟ ತಪ್ಪಿ ಉಸಿರಾಟ ನಿರಾಳ ಆಯಿತಲ್ಲ ಅನ್ನುವ ಹಾಗೂ ಇಲ್ಲ. ಮಾನಮರ್ಯಾದೆ ಇರುವವರು ಬ್ಲೌಸು ಹಾಕಿಕೊಳ್ಳುತ್ತಾರೆ ಅಂತ ಹೇಳಿ ನಂತರ ಕೆಲವರು ಮಾತ್ರ ಹಾಕಿಕೊಳ್ಳಬಾರದು ಅಂತ ನಿಷೇಧ ಹೇರಿದರೆ ಏನರ್ಥ?

ಇದಕ್ಕೆ ಒಂದು ಉದಾಹರಣೆ ಕೇರಳದ ಟ್ರಾವೆಂಕೂರಿನಲ್ಲಿ ಮೇಲು ವಸ್ತ್ರ ಧರಿಸುವ ಹಕ್ಕಿಗಾಗಿ ನಾಡಾರ್ ಮಹಿಳೆಯರು ನಡೆಸಿದ ಹೋರಾಟ. ಕೇರಳದಲ್ಲಿ ೧೯ನೇ ಶತಮಾನದವರೆಗೂ ಕೆಳಜಾತಿಯ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಮೇಲ್ಜಾತಿಯವರ ಎದುರು ಮೇಲು ವಸ್ತ್ರ ತೊಟ್ಟು ಓಡಾಡುವ ಹಕ್ಕು ಇರಲಿಲ್ಲ. ಹಾಗೆ ತೊಡುವುದು ಮೇಲ್ಜಾತಿಗೆ ಅವಮಾನ ಮಾಡಿದಂತೆ ಎಂದು ಪರಿಗಣಿಸಲಾಗುತ್ತಿತ್ತು. ಇದಕ್ಕೆ ವಿರುದ್ಧವಾಗಿ ಅನೇಕ ನಾಡಾರರು ಕ್ರಿಶ್ಚಿಯನ್ ಧರ್ಮ ಸ್ವೀಕರಿಸಿದ್ದೂ ಹೌದು. “ಚನ್ನಾರ್ ರಿವೋಲ್ಟ್” ಎಂದು ಪ್ರಸಿದ್ಧವಾದ ಈ ಹೋರಾಟದಲ್ಲಿ ಮೇಲುವಸ್ತ್ರ ಧರಿಸಿದ ಮಹಿಳೆಯರನ್ನು ಬೆತ್ತಲುಗೊಳಿಸುವ ಪ್ರಕರಣಗಳೂ ನಡೆದವು. ೧೮೫೯ರಲ್ಲಿ ನಾಡಾರ್ ಮಹಿಳೆಯರೆಲ್ಲರಿಗೂ ಮೇಲುವಸ್ತ್ರ ತೊಡುವ ಹಕ್ಕು ಇದೆ ಎಂದು ರಾಜ ಘೋಷಿಸುವವರೆಗೂ ಗಲಾಟೆ, ಹಿಂಸೆ ನಡೆಯಿತು. ನಾಯರ್ ಮಹಿಳೆಯರೂ ೨೦ನೆಯ ಶತಮಾನದ ಮೊದಲ ಭಾಗದವರೆಗೆ ಮೇಲುವಸ್ತ್ರ ತೊಡುತ್ತಿರಲಿಲ್ಲ. ಇನ್ನೂ ಕೆಳಗಿನ ಸ್ತರದ ಮಹಿಳೆಯರ ಬ್ಲೌಸು ತೊಡುವ ಅಥವಾ ಬಿಡುವ ಹಕ್ಕು, ಆಯ್ಕೆಗಳ ಬಗ್ಗೆಯಂತೂ ಪ್ರಶ್ನೆ ಕೇಳುವ ಹಾಗೂ ಇಲ್ಲ…

ನಿಜವಾಗಿಯೂ “ಚೋಲಿ ಕೆ ಪೀಚೆ” ಜಾತಿ, ಜನಾಂಗ, ಧರ್ಮ, ಸಂಸ್ಕೃತಿ ಎಲ್ಲ ಹೊಸೆದುಕೊಂಡು ಕಗ್ಗಂಟಾದ ನೀತಿ-ಅನೀತಿ-ನೈತಿಕತೆಗಳ ಬೆಟ್ಟದಷ್ಟು ದೊಡ್ಡ ಮುಗಿಯದ ಕಥನವೇ ಇದೆ!

ಈಗ, ನಮ್ಮ ಆಧುನಿಕ ಯುಗದಲ್ಲಿ, ಸರ್ವತಂತ್ರ ಸ್ವತಂತ್ರ ಭಾರತದಲ್ಲಿ ಹೆಂಗಸರ ಮೇಲಿನ ಅತ್ಯಾಚಾರ ಅನಾಚಾರಗಳಿಗೆ ಯಾವ ಬರ ಇಲ್ಲವಾದರೂ ಬ್ಲೌಸು ಯಾರು ಹಾಕಬಹುದು ಯಾರು ಹಾಕಬಾರದು ಅಂತಲಂತೂ ರೂಲ್ಸು ಇಲ್ಲದಿರುವುದು ಹೆಣ್ಣು ಜನ್ಮದ ಪುಣ್ಯ. ಸದಾ ಸುತ್ತಳತೆಯ ಪ್ರಾಬ್ಲಮ್ ಎದುರಿಸುವ ಹೆಂಗೆಳೆಯರು ಹಳ್ಳಿಯಿಂದ ದಿಲ್ಲಿಯವರೆಗೆ ಫ್ರೀ ಸೈಜ್ ಚೂಡಿದಾರಿನಲ್ಲಿ  ಫ್ರೀಡಂ ಕಂಡುಕೊಂಡಿದ್ದೇವೆ. ಆದರೆ ಬ್ರಾ ಬರ್ನಿಂಗ್ ರೀತಿಯಲ್ಲಿ ಇನ್ನೂ (ಮಂದಿರಾ ಬೇಡಿಯೂ ಸೇರಿದಂತೆ) ಯಾರೂ ಬ್ಲೌಸ್ ಬರ್ನಿಂಗ್ ಮಾಡುವ ಸಾಹಸಕ್ಕೆ ಕೈ ಹಾಕಿಲ್ಲ. ಆಗೀಗ ಯಾರದೋ ಮದುವೆಗೋ, ಅಥವಾ ಸೀರೆಯೆಂಬ ಶ್ರೇಷ್ಠ ವಸ್ತ್ರ ಕತ್ತೆಗೂ ಸೌಂದರ್ಯ ತಂದುಕೊಡಬಲ್ಲದು  ಅನ್ನುವ ಭ್ರಮೆಯಲ್ಲೋ,  ಸೀರೆ-ಬ್ಲೌಸು ಧರಿಸುತ್ತೇವೆ — ಆ ಜಾಣ ಟೈಲರ್ರಿಗೆ ಉಧೋ ಹೇಳಿ.

Advertisements

2 ಟಿಪ್ಪಣಿಗಳು »

 1. Phaniraj said

  ಬಾಗೇಶ್ರೀಯವರ ಎಲ್ಲ ಬರಹಗಳ ಹಾಗೆ, ಈ ಬರಹವೂ ತುಂಬಾ ಷಾರ್ಪ್ ಅಂಡ್ ವಿಟ್ಟಿಯಾಗಿದೆ. ಹಲವಾರು ಬರಹಗಾರರೂ ಘನವಾದ್ದದನ್ನು ಹೇಳುವ ಗಾಂಭೀರ‍್ಯದಲ್ಲಿ, ಬಾಷೆಯನ್ನೂ, ವಿಷಯ ನಿರೂಪಣೆಯನ್ನೂ ಒಣ ಒಣ ಠಣ ಠಣ ಮಾಡಿಬಿಡುತ್ತಾರೆ; ಮತ್ತೆ ಕೆಲವರು ಹಗುರವಾಗಿ ಓದಿದಸಿಕೊಳ್ಳಲಿ ಎಂದು ವಿಷಯದ ಘನತೆಯನ್ನೂ ಹಗುರಗೊಳಿಸಿ ಭಾಷೆಯನ್ನೂ ನಿರೂಪಣೆಯನ್ನೂ ದೇಶಾವರಿ ಮಟ್ಟಕ್ಕೆ ಇಳಿಸಿಬಿಡುತ್ತಾರೆ. ವಿಷಯವನ್ನು ಹಗುರಗೋಳಿಸದೇ, ಲವಲವಿಕೆಯ ಭಾಷೆಯಲ್ಲಿ ನಿರೂಪಿಸುವ ಬಾಗೇಶ್ರೀ ಶೈಲಿ ಮಾತ್ರ ತಮ್ಮನ್ನೇ ತಾವು ’ಬರಹಗಾರರು” ಅಂದುಕೊಂಡಿರುವವರಲ್ಲಿ ಹೊಟ್ಟಕಿಚ್ಚು ಹುಟ್ಟಿಸುತ್ತದೆ. ಬಾಗೇಶ್ರೀ ತಮ್ಮನ್ನೇ ತಾವು ಹಂಗಿಸಿಕೊಳ್ಳುವ (ಸೆಲ್ಫ್ ಹ್ಯುಮರ್), ಸುತ್ತಲಿನ ಸಮಾಜವನ್ನು ವಕ್ರತೆಯಲ್ಲಿ ಕಂಡು ಹಂಗಿಸುವ ಛಾತಿ ಇರುವ (ಬ್ಲಾಕ್ ಹ್ಯುಮರ್) ಬರಹಗಾರರ ಪೈಕಿ-ಹಾಗೆಂದೇ ಅವರ ಬರಹಗಳು ಲವಲವಿಕೆಯಿಂದ ಓದಿಸಿಕೊಳ್ಳುತ್ತಾ, ಓದುವವರ ಅರಿವನ್ನು ಎತ್ತರಿಸುತ್ತವೆ. ladiesfinger.com ಎಂಬ ಬ್ಲಾಗ್‌ನಲ್ಲಿ ಇಂಥ ಬರಹಗಳನ್ನು ಬರೆಯುವ ಲೇಖಕಿಯರ ಒಂದು ಸಣ್ಣ ಗುಂಪೊಂದೊಂದಿದೆ-ಆ ಬರಹಗಳನ್ನು ಓದುವುದು, ಅರಿವನ್ನು ಹೆಚ್ಚಿಸಿಕೊಳ್ಳುವುದೇ ಒಂದು ಖುಷಿಯ ಕೆಲಸ. ’ಚಲ್ ಮೇರಿ ಲೂನ’ ದ ನಿರ್ಮಲ, ಪ್ರತಿಭಾ, ’ನಿಮ್ಮಿ’ ಹಾಗು ಬಾಗೇಶ್ರೀಯವರ ಬರಹಗಳು ಕನ್ನಡದ ಬರವಣಿಗೆಗೂ, ಸಾಮಾಜಿಕ ಅರಿವಿಗೂ ಹೊಸ ಉತ್ಸಾಹವನ್ನು ನೀಡುವ ಕಸುವು ಉಳ್ಳವು. Really enviable ಕಣ್ರೀ.

 2. G.Rajashekhar said

  ಈ ಬರಹದ ದುಶ್ಯಂತ ಶಕುಂತಲೆಯರ ಪ್ರಸ್ತಾಪ ನನಗೆ ’ಶಾಕುಂತಲ ಕಾಲದಿಂದ ಕಾಲಕ್ಕೆ
  ರೂಪಾಂತರಗೊಳ್ಳುತ್ತಿರುವ ಒಂದು ರಾಜಕೀಯ ಟೆಕ್ಸ್ಟ್ ಕೂಡ ಹೌದು’ ಎಂಬ ರೊಮಿಲ್ಲ
  ಥಾಪರ್ ಅವರ ವಾದಕ್ಕೆ ಕ್ಯಾತೆ ತೆಗೆದ ರಸಿಕರನ್ನು ನೆನಪಿಸಿತು.ಅವರ ಪ್ರಕಾರ ಅದು ಅಭಿ
  ಜ್ನಾನ ಶಾಕುಂತಲ ಅಂದರೆ ಶಕುಂತಲೆಯ ಬಗೆಗಿನ [ ದುಶ್ಯಂತನ] ನೆನಪಿನ ನಾಟಕ ಮಾತ್ರ.
  ಆದರೆ ದುಶ್ಯಂತ ಗಂಡು ಮತ್ತು ದೊರೆಯಾಗಿರುವ ಕಾರಣಕ್ಕೆ ಅವನು ಶಕುಂತಲೆಯನ್ನು ಪ್ರೀ
  ತಿಸಿ ಆನಂತರ ಅದನ್ನು ಮರೆಯಬಲ್ಲ.ಶಕುಂತಲೆ ಹಾಗೆ ಎಂದಾದರೂ ಮರೆಯಲು ಸಾಧ್ಯವೆ?
  ಒಂದೊಮ್ಮೆ ಅವಳು ಮರೆತರೂ ಅವಳ ಹೊಟ್ಟೆ’ಮರೆತೇನೆಂದರು ಮರೆಯಲಿ ಹ್ಯಾಂಗ?’ಎಂದು
  ಅದನ್ನು ನೆನಪಿಸುವುದಿಲ್ಲವೆ?ನೆನಪು ಒಂದು ಸಾಮಾಜಿಕ/ಸಾಂಸ್ಕ್ರತಿಕ ಉತ್ಪನ್ನ.ಅದು ಲಿಂಗ
  ಆಧಾರಿತವೂ ಹೌದು.ನಿಮ್ಮ ಬರಹ ಓದಿದ ಮೇಲೆ ಶಾಕುಂತಲ ಒಂದು ಲಿಂಗ ರಾಜಕೀಯ
  ಕುರಿತ ಕಥನವೂ ಹೌದು ಎಂದು ಹೊಳೆಯಿತು.

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: