ಕೆಲವನ್ನು ಹಿಡಿದು, ಹಲವನ್ನು ಬಿಟ್ಟು… ಗಾಲಿಬನ ಕೆಲ ದ್ವಿಪದಿಗಳು

ಗಾಲಿಬ್ ಪುಸ್ತಕ ಹಿಡಿದು ಕೂತಾಗ ಕೆಲವು ಸಾಲುಗಳನ್ನು ಕನ್ನಡದಲ್ಲಿ ಹೇಗೆ ಹೇಳಿದರೆ ಚೆಂದ ಇರಬಹುದು ಅಂತ ಅನ್ನಿಸುತ್ತಿದೆ. ಗಾಲಿಬನಂತಹ ಕ್ಲಿಷ್ಟ, ಪದದ ಜೊತೆ ನಾಜೂಕು ಆಟವಾಡುವ, ಅನೇಕ ಅರ್ಥಗಳನ್ನು ಒಂದೇ ಪದದಲ್ಲಿ ಹೊಳೆಸುವ (ನಮ್ಮ ಬೇಂದ್ರೆಯ ಹಾಗೆ!) ಕವಿಯನ್ನು ಬೇರೆ ಭಾಷೆಯಲ್ಲಿ ಅನುಕರಿಸುವುದು, ಅನುಸರಿಸಿವುದು, ಅನುವಾದಿಸುವುದು ಕಷ್ಟ. ಪದದ ಅರ್ಥ ಹಿಡಿದು ಹೊರಟಾಗ ಅದರ ಒಟ್ಟಂದ ತಪ್ಪಿಹೋದಂತೆಯಯೂ, ಒಟ್ಟಂದಕ್ಕೆ ಗಂಟು ಬಿದ್ದರೆ ಶಬ್ದಗಳ ಸತ್ಯ ನುಣುಚಿ ಹೋದಂತೆಯೂ ಅನ್ನಿಸುತ್ತದೆ. ಎಲ್ಲಾ ಅನುವಾದದ ಕಷ್ಟ ಇದೇ ಆದರೂ ಗಾಲಿಬನಂತವರಲ್ಲಿ ಇದು ನೂರ್ಮಡಿಯಾಗುತ್ತದೆ…

 

“ಎಷ್ಟಂದ್ರೂ ಒರಿಜಿನಲ್ ಥರ ಮಾಡಕ್ಕಾಗಲ್ಲ ಬಿಡಿ” ಅನ್ನುವ ಮೂದಲಿಕೆಗೆ ಹೆದರಿ ನನ್ನಂತ ಅನುವಾದಕರು ಬೇರೆಯವರು ಏನನ್ನೂ ಹೇಳುವುದಕ್ಕೆ ಮೊದಲೇ ತಮಗೆ ತಾವೇ ಚಾಟಿ ಏಟು ಕೊಟ್ಟುಕೊಳ್ಳುತ್ತಾ “ಸಾರಿ ಕಣ್ರೀ ಒರಿಜಿನಲ್ಲಿನ ಕಾಲು ಕಸವೇ ಇದು, ಅದರೂ ಪ್ಲೀಸ್ ಓದಿ!” ಅಂತ ಹೇಳುವುದುಂಟು. ಅಂಥದೇ ಒಂದು ಪ್ರಯತ್ನ ಇಲ್ಲಿದೆ. ಗಾಲಿಬನ ಕೆಲವು ದ್ವಿಪದಿಗಳನ್ನು ಅನುಸರಿಸುವ ಪ್ರಯತ್ನದ ಕನ್ನಡದ ಸಾಲುಗಳು.

* * *

ನೋಟಕ್ಕೆ ನೂರು ಬಣ್ಣ

ಹೊಳೆಯಲ್ಲಿ ಲೀನವಾಗುವುದು ಹನಿಗೆ ಆನಂದ
ಮೇರೆ ಮೀರಿದ ನೋವು ನೋವಿಗೆ ಮದ್ದು

ನನ್ನ ನಿನ್ನ ಮಿಲನ ಬೀಗ-ಕೀಲಿಯ ಹಾಗೆ
ಕೂಡಿದ ಮರುಗಳಿಗೆ ವಿರಹ ಹಣೆಬರಹ

ದಿನದಿನದ ಜಂಜಾಟಕ್ಕೆ ಸಿಕ್ಕು ನಲುಗಿದೆ ಹೃದಯ
ಉಜ್ಜುಜ್ಜಿ ಸಿಕ್ಕಾದ ಗಂಟು ಬಿಚ್ಚುವುದು ಕಠಿಣ

ಪ್ರೀತಿಯಿರಲಿ, ನಾನೀಗವನ ಹಿಂಸೆಗೂ ಪಾತ್ರಳಲ್ಲ
ಆ ಖದರಿನ ಒಲುಮೆ ಈ ಕಹಿಗೆ ತಿರುಗಿದ್ದು ಹೇಗೆ?

ಅಳುವ ಶಕ್ತಿ ಕಳೆದು ಹೋಗಿ ಬರೀ ನಿಟ್ಟಿಸಿರು ಉಳಿದಿದೆ
ಕುದಿದ ನೀರು ಆವಿಯಾಗಿ ತಣಿವುದರ್ಥವಾಗಿದೆ

ನಿನ್ನ ಬೆರಳ ನೇವರಿಕೆಯ ನೆನಪಳಿಸುವುದು ಕಷ್ಟ
ಚರ್ಮದಿಂದ ಉಗುರ ಸುಲಿದು ಬಿಸುಡುವ ಯಾತನೆ

ಮುಂಗಾರ ಮಳೆ ನಿಂತ ಈ ಶಾಂತ ನಿರ್ವಾತ
ಗೋಳಾಡಿ ಅತ್ತತ್ತು ಸುಸ್ತಾಗಿ ಸತ್ತು ಹೋದಂತೆ

ಹೂವಿನ ಗಂಧ ನಿನ್ನ ಮನೆಯ ದಾರಿ ಮರೆತಿದೆ
ಏರುವ ಧೂಳು ನಿನ್ನ ಅಂಗಳಕ್ಕೆ ದೌಡಿಟ್ಟಿದೆ

ನಿನ್ನ ತಾಕಲು ಕಾತರಿಸುವ ಕಾಡಗಂಧದ ಗಾಳಿ
ಈ ಮಳೆಗಾಲ ಕನ್ನಡಿಯ ಮುಖಕ್ಕೂ ಹಸಿರು ಬಳಿದಿದೆ

ಕೆಂಪು ಹೂವಿನ ರಂಗು ಎಲ್ಲೆಲ್ಲೂ ಚೆಲುವ ತುಂಬಿದೆ
ಹಸಿದ ನೋಟಕ್ಕೆ ನೂರು ಬಣ್ಣಗಳ ಒಡನಾಟ ಬೇಕಿದೆ

* * *

ಅನುವಾದದ ಅಂಕುಡೊಂಕು, ಅಂಕೆಶಂಕೆಗಳಿಗೆ ಅದ್ಯಾಕೋ ಮತ್ತೆ ಮತ್ತೆ ಮನಸ್ಸು ಮರಳುತ್ತಲೇ ಇರುತ್ತದೆ! ಮೂಲ ಮತ್ತು ಅನುವಾದದ ನಡುವಿನ ಸಂಬಂಧ ಎಷ್ಟು ವಿಚಿತ್ರ ಅನ್ನುವುದಕ್ಕೆ ಈ ಎರಡು ಸಾಲುಗಳ ಅನುವಾದದ ಉದಾಹರಣೆಗಳನ್ನು ನೋಡಿ:

ಮೂಲ ಸಾಲುಗಳು:

Taa kay tujh pur khulay eijaz e hawa-e-saiqqal
Deikh barsaat mein sabz aainay ka hoo jana

ತಾಕೆ ತುಜ್ ಪರ್ ಖುಲೇ ಐಜಾಜ್ ಎ ಹವಾ-ಎ-ಸಯ್ಕಲ್
ದೇಖ್ ಬರಸಾತ್ ಮೇ ಸಬ್ಜ್ ಆಯಿನಾ ಕ ಹೋ ಜಾನ

ಮೊದಲ ಅನುವಾದ:

So that you may be acquainted with the miracle of air, pure and clean
See in the monsoon, how, even the mirror turns green

ಎರಡನೆಯ ಅನುವಾದ:

We make the back of the mirror green in order to see our faces
Sometimes nature makes the front of the mirror green as well

ಮೂರನೆಯ ಅನುವಾದ:

So that you begin to understand the miracle of altering winds
You should see how the mirror becomes green in spring

ನಾಲ್ಕನೆಯ ಅನುವಾದ:

Would you riddle the miracle of the wind’s shaping?
Watch how a mirror greens in spring

ಐದನೆಯ ಅನುವಾದ:

In the spring the mirror turns green
Holding a miracle
Change the shining wind

ಗಾಲಿಬನ ಬಗ್ಗೆ ತುಂಬ ಚೆಂದದ ಪುಸ್ತಕ ಸಂಕಲನ ಮಾಡಿರುವ ಐಜಾಜ್ ಅಹಮದ್ ಈ “ಸಯ್ಕಲ್” ಪದಕ್ಕೆ ಅನುವಾದ ಹುಡುಕುವುದು ಕಷ್ಟ ಅಂತ ವಿವರಿಸುತ್ತಾರೆ. ಗಾಜಿನ ಬೆನ್ನಿಗೆ ಹಸಿರು ಮಿಶ್ರಣ (ತವರ ಮತ್ತು ಪಾದರಸದ ಮಿಶ್ರಣ) ಬಳಿದು ಕನ್ನಡಿ ಮಾಡುವ ಕ್ರಮಕ್ಕೆ ಈ ಹೆಸರಂತೆ. ಹೀಗಾಗಿ ಎರಡನೆಯ ಸಾಲಿನಲ್ಲಿ ಬರುವ ಹಸಿರಿನ ಪ್ರಸ್ತಾಪ ಉರ್ದು ಓದುಗರಿಗೆ ಮೊದಲ ಸಾಲಿನ ಜೊತೆ ವಿಶೇಷವಾಗಿ ಕನೆಕ್ಟ್ ಆಗುತ್ತದೆ, ಇದು ಅನುವಾದದಲ್ಲಿ ಸಾಧ್ಯವಿಲ್ಲ. ಹೀಗಾಗಿ ಇಲ್ಲಿರುವ ಎರಡನೆಯ ಅನುವಾದ ಮೂಲಕ್ಕೆ ತುಂಬ ದೂರ ಅನ್ನಿಸಿದರೂ ಈ ಹಸಿರನ್ನು ಇಂಗ್ಲಿಷಿಗೆ ತರುವುದರಲ್ಲಿ ಯಶಸ್ವಿಯಾಗಿದೆ… ಹೀಗೆ ಒಂದು ಹಿಡಿದರೆ ಇನ್ನೊಂದು ಬಿಟ್ಟು ಹೋಗುವುದು ಅನುವಾದದ ಪಾಡು.
P.S.: ಅನುವಾದದ ಮೊದಲ ಡ್ರಾಫ್ಟ್ ಓದಿದ ಎಂ.ಎಸ್. ಪ್ರಭಾಕರ ಅವರಿಗೆ ಥ್ಯಾಂಕ್ಸ್!

Advertisements

1 ಟಿಪ್ಪಣಿ »

 1. Phaniraj said

  ಪದ್ಯಗಳ ಅನುವಾದವನ್ನು ಒಂದು ಕಲೆ ಎಂದು ಎಷ್ಟು ಮಂದಿ ನಂಬುತ್ತಾರೋ ತಿಳಿಯದು. ಆದರೆ, ಸ್ವಂತದ ಪದ್ಯ ಬರೆಯುವುದಕ್ಕಿಂತ ಅನುವಾದ ತ್ರಾಸದ ಕೆಲಸ. ಅದೊಂಥರ ಲ್ಯಾಂಡ್‌ಮೈನ್‌ಗಳು ತುಂಬಿದ ಬಯಲಲ್ಲಿ ಕಾಲಿಟ್ಟ ಹಾಗೆ. ಅನುವಾದ ಓದಿದವರು ’ಚೆನ್ನಾಗಿದೆ’ ಅಂದರೆ, ಯಾಕೆ ಚೆನ್ನಾಗಿದೆ ಅನ್ನುತ್ತಾರೆ? ಮೂಲ ಪದ್ಯವನ್ನು ಮೂಲ ಭಾಷೆಯಲ್ಲಿ ಇವರು ಓದಿರಬಹುದೋ? ಅಂತೆಲ್ಲ ಅನುಮಾನಗಳು ಶುರುವಾಗುತ್ತವೆ. ’ಚೆನ್ನಾಗಿಲ್ಲ’ ಅಂದ್ರೆ, ಯಾಕೆ ಅಂತ ಕೇಳುವ ಹಾಗಿಲ್ಲ;ಕೆಟ್ಟ ಮೂಡಿನಲ್ಲಿದ್ದರೆ ’ಚೆನ್ನಾಗಿಲ್ವಂತೆ! ನೀವು ಮಾಡಿ ತೋರ್ಸಿ ನೊಡೋಣಾ!’ ಅನ್ನೋ ಸ್ವಗತವೂ ಆಗ್ಬಿಡಬಹುದು. ಅದಕ್ಕೆನೇ, ’ಅನುವಾದ ಯಾವತ್ತೂ ಅಪೂರ್ಣ’ , ’ಮತ್ತೊಂದು ಅನುವಾದವೂ ಸಾಧ್ಯ’ ಅನ್ನೋ ಟ್ಯಾಗ್ ಲೈನ್ ಹಾಕ್ಕೊಂಡೆ ಇರೋದು ಒಳ್ಳೇದು. ಸುಖವಿಲ್ಲದ ಕಾಯಕ ಅನಿಸಿದ್ರೂ, ಅದು ಹೆಂಡದ ಹಾಗೆ! ಓದಿದೊಂದು ಪದ್ಯ ಹಿಡಿಸಿಬಿಟ್ಟರೆ, ಅದರ ಅನುವಾದ ಕೊಡೋ ಸುಖ, ಸ್ವಂತದ ಪದ್ಯದ ಬರೆದಾಗಲೂ ಸಿಗೋದಿಲ್ಲ. ಜಗಳವಾಡಿ ಮೂತಿ ತಿರುಗಿಸಿಕೊಂಡವರ ಜೊತೆಗೇ, ಹೆಚ್ಚು ಮಾತಾಡಬೇಕು ಅನ್ನಿಸೋ ವಾಂಛೆಯ ಹಾಗೆ.
  ಅನುವಾದಕರಲ್ಲಿ, ತುಂಬ ಕುತೂಹಲ ಹುಟ್ಟಿಸೋದು ಎ.ಕೆ.ರಾಮಾನುಜನ್. ಅವರು ಬೇರೆ ಭಾಷೆಯ ತಮಗಿಷ್ಟವಾದ ಪದ್ಯಗಳನ್ನು, ಅದರ ದನಿ/ಭಾವವನ್ನು ಹಿಡಿದು, ಸ್ವತಂತ್ರ ಪದ್ಯದ ಹಾಗೆ ಬರೆದು, ಕೊನೆಯಲ್ಲಿ ಅದಕ್ಕೆ ತಮ್ಮ ಕಾವ್ಯ ಪ್ರತಿಕ್ರಿಯೆಯನ್ನು ಸೇರಿಸಿ, ’ಇಂಥ ಪದ್ಯವನ್ನು ಓದಿ’ ಅಥವ ’ಇಂಥ ಪದ್ಯದ ಭಾವ ಹಿಡಿದು’ ಅಂತ ಕಾಣಿಸಿಬಿಡ್ತಾರೆ. ಆದರೆ, ಕನ್ನಡದಿಂದ ಇಂಗ್ಲೀಷಿಗೆ ಅನುವಾದ ಮಾಡೋವಾಗ, ಅವರು ’ಲಿಟರಲ್ ಟ್ರಾಸಿಲೇಷನ್‌’ನ್ನೇ ನೆಚ್ಚಿಕೊಳ್ತಾರೆ. ಅವರ ’Lord of meeting rivers’ ನಂಥ ಅನುವಾದದ ಬಗ್ಗೆ ಬಂದ ಅನುಮೋದನೆ, ಟೀಕೆಗಳು ಗೊತ್ತಿರುವಂತದೇ. It’s interesting.
  ಬ್ರೆಕ್ಟನ ಅನುವಾದ ಸಿದ್ಧಾಂತವೂ ಕುತೂಹಲ ಹುಟ್ಟಿಸುತ್ತದೆ. ಆತ ತನ್ನ ಪದ್ಯಗಳಲ್ಲಿ ಭಾಷೆ ’gest’ [’ಚಿತ್ರಕ’-ಓದಿದಾಗ, ಭಾವ, ದನಿಲಯಗಳೆರಡೂ, ಮನದಲ್ಲಿ ಚಿತ್ರ ಸರಣಿಯ ಹಾಗೆ ಬಿಚ್ಚಿಕೊಳ್ಳುವುದು] ಆಗಿರಬೇಕು ಎಂದು ನಂಬಿ ಬಳಸುತ್ತಾನೋ, ಅನುವಾದದ ಭಾಷೆಯೂ ಹಾಗೇ ಇರಬೇಕು ಎಂದು ವಾದಿಸುತ್ತಾನೆ. 1200ಕ್ಕೂ ಮಿಕ್ಕಿ ಪದ್ಯಗಳನ್ನು ಬರೆದ, ಜರ್ಮನಿಯಲ್ಲಿ ಗಯ್ತೆಯ ಸಾಲಿನಲ್ಲಿ ನಿಲ್ಲಬಲ್ಲ ಕವಿ ಎಂಬ ಖ್ಯಾತಿಯನ್ನು ಪಡೆದವನು, ತನ್ನ ರಂಗಭೂಮಿಗೆ ಷೇಕ್‌ಸ್ಪಿರನ ನಾಟಕವನ್ನೋ, ಹಳೆಯ ಗ್ರೀಕ್ ನಾಟಕಗಳನ್ನೋ ಅನ್ವಯಿಸಿಕೊಳ್ಳುವಾಗ, ಆ ನಾಟಕಗಳ ಪದ್ಯಗಳನ್ನು ’gest’ ಅನುಸರಿಸಿ, ನಿಮ್ಮ ಭಾಷೆಗೆ ಅನುವಾದಿಸಿಕೊಳ್ಳಬೇಕು ಎನ್ನುತ್ತಾನೆ. ಅವನು ’gest’ಗೆ ಕೊಡುವ ಉದಾಹರಣೆಗಳು interesting ಆಗಿವೆ. ದಿನಪತ್ರಿಕೆ ಮಾರುವವರು, ಅಂದಿನ ಪತ್ರಿಕೆಯ ಮುಖ್ಯ ಸುದ್ಧಿಗಳನ್ನು ರಾಗವಾಗಿ, ಧ್ವನಿಯ ಏರಿಳಿತಗಳಲ್ಲಿ ಹೇಳುವಾಗ, ಅದು ಪ್ರಕಟಿತ ಸುದ್ಧಿಯ ಬಗ್ಗೆ ಒಂದು ಹೊಸ ನೋಟವನ್ನೇ ಕೊಟ್ಟುಬಿಡ್ತದೆ; ಹಾಗೆಯೇ, ಮೆರವಣಿಗೆ ಹೊರಟ ಕಾರ್ಮಿಕರು, ತಮ್ಮ ಬೇಡಿಕೆಗಳನ್ನು, ಘೋಷಣೆಯಾಗಿ ದನಿ ಏರಿಳಿತಗಳಲ್ಲಿ ಹೇಳುವಾಗ, ಸಾಮಾನ್ಯ ಸಾಲುಗಳಿಗೆ ಹೊಸ ಅರ್ಥವೇ ಬಂದುಬಿಡುತ್ತದೆ-ತಾನು ’gest’ನ್ನು ಅರಿತದ್ದು ಹೀಗೆ ಅನ್ನುತ್ತಾನೆ.
  ಕಾವ್ಯಪರಿಣಿತಿಯೂ ಇಲ್ಲದ, ಅನುವಾದ ಕಲೆಯಲ್ಲೂ ಅಂಥ ಪರಿಣಿತನೇನೂ ಅಲ್ಲದ ನನಗೆ, ನಿಮ್ಮ ಬರಹವನ್ನು ಓದಿದಾಗ ಹೊಳೆದ ಇಷ್ಟನ್ನು ಹಂಚಿಕೊಳ್ಳಬೇಕು ಅನಿಸಿತು.
  -ಕೆ.ಫಣಿರಾಜ್

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: