ಇಂದು ಮೂವತ್ತೊಂದು

ಒಂದಷ್ಟು ವಯಸ್ಸಾದ ಮೇಲೆ ಉರುಳುತ್ತಿರುವ ವರ್ಷಗಳತ್ತ ಬೊಟ್ಟು ಮಾಡುವ ಹೊಸವರ್ಷ, ಹುಟ್ಟು ಹಬ್ಬ ಇತ್ಯಾದಿ ಎಲ್ಲಾ ಮೈಲಿಗಲ್ಲುಗಳ ಮೇಲೂ ಒಂದು ದುಃಖದ ಛಾಯೆ ಇದ್ದೇ ಇರುತ್ತದೆ.

“ಯುಗಯುಗಾದಿ ಕಳೆದರೂ ಯುಗಾದ ಮರಳಿ ಬರುತಿದೆ…” ಅಂತ ಸಂಭ್ರಮಿಸುವ ಬೇಂದ್ರೆಯ ಹಾಡನ್ನೂ ಕೊನೆಯ ಸಾಲಿನಲ್ಲಿ ಆವರಿಸುವುದು ಈ ಛಾಯೆಯೇ. ಈ ವರ್ಷವಂತೂ  ಈ ಬಾಂಬ್ ಬೆದರಿಕೆಯ ದೆಸೆಯಿಂದಾಗಿ ಎಂ ಜಿ ರೋಡಿನಲ್ಲಿ ಕುಡಿದು, ಕುಣಿದು, ಕುಪ್ಪಳಿಸುವ ಇಪ್ಪತ್ತರ ಆಸುಪಾಸಿನ ಹೈಕಳಿಗೂ ಕೊಂಚ ದುಃಖದ ಛಾಯೆ ಆವರಿಸಿದಂತಿದೆ. ಪಾರ್ಟಿ ಮಾಡಿದರೂ ಈ ವರ್ಷ ಸಾವಿರಾರು ಪೋಲೀಸರ, ಡ್ರೋನ್ ಕ್ಯಾಮರಾಗಳ ಕಣ್ಗಾವಲಿನಲ್ಲಿ ಮಾಡಬೇಕು. ಹೈಕಳಿಗೆ ಇದೇ ಒಂದು ಹೊಸ ರೀತಿಯ ಕಿಕ್ಕು ಅನ್ನಿಸಬಹುದೇ? ಯಾರಿಗೆ ಗೊತ್ತು?! ರಾತ್ರಿ ಆಗುವ ಹೊತ್ತಿಗೆ ಉಮೇದು ಬಂದು “ಇಂದು ಇಂದಿಗೆ ನಾಳೆ ನಾಳೆಗೆ” ಅಂತ ಹೊರಡಬಹುದು…

ಸಧ್ಯಕ್ಕೆ, ನಲವತ್ತರಾಚೆಯ ಮಂದಿಗೆ, ಒಂದೆರಡು ಪೆಗ್ ಹಾಕುತ್ತಾ ಬರೆಯದ ಲೇಖನ, ಓದದ ಪುಸ್ತಕ, ಆಡದ ಮಾತು, ಆಡಿದ ಮಾತು, ಕಳೆದು ಹೋದ ಪ್ರೀತಿ, ಹಿಂತೆಗೆಯಲಾಗದ ತಪ್ಪು ಹೆಜ್ಜೆ, ಮಾತು ಕೇಳದ ಮಗಳು, ರಿಪೇರಿ ಮಾಡದ ನಲ್ಲಿ, ಒಂದನೇ ತಾರೀಕಿಗೂ ಹೋಗಬೇಕಾದ ಆಫೀಸು… ಹೀಗೆ ಅವರವರ ಭಾವಕ್ಕೆ ತಕ್ಕ ಜಾಡು ಹಿಡಿದು ದುಃಖಿಸುವ ಸುಖಕ್ಕಾಗಿ ಎರಡು ಪದ್ಯಗಳು.

As usual, ಸ್ವಂತದ್ದಲ್ಲ. ಅನುವಾದಗಳು.

ಡಿಸೆಂಬರ್ ಮೂವತ್ತೊಂದು

ಮಾಡಿಯೂ ಮಾಡದ ನನ್ನೆಲ್ಲ ಕೆಲಸಗಳು
ಬಟ್ಟೆ ಕಳಚಿಟ್ಟು
ಕ್ಯಾಲೆಂಡರಿನ ತುಂಬ ಗಸ್ತು ತಿರುಗುತ್ತಿವೆ.
ಅಲ್ಲಿಲ್ಲಿ ಅಂಡಲೆಯುವ
ನರಪೇತಲ ಬೇಡರು, ಬೇಡುವವರು,
ಹರಡುತ್ತಿರುವ ಹಿಮ…

ಹೊಸ ವರುಷದ ಮಡಿಕೆಯಲ್ಲಡಗಿದ
ಭವಿಷ್ಯದೆಡೆಗೆ ಮುಗ್ಗರಿಸಿ, ಗುಂಡುಸೂಜಿ ಚುಚ್ಚಿ
ಜನವರಿಯ ಹಾಳೆ ಭದ್ರ ಮಾಡುತ್ತೇನೆ
ಹದಿನೇಳನೆ ಶತಮಾನದ ಸ್ಥಿರ ಚಿತ್ರ :
ಒಂದು ತಲೆಬುರುಡೆ, ಒಂದು ಕನ್ನಡಿ
ಪರ್ಸಿನಿಂದ ಚೆಲ್ಲಿದ ಚಿಲ್ಲರೆ, ಒಂದು ಹೂವು.

ಮೂಲ: ರಿಚರ್ಡ್ ಹಾಫ್ ಮನ್

ಉರಿದು ಹೋದ ವರ್ಷ

ಅಕ್ಷರಗಳು ಕ್ಷಣಗಳಲ್ಲಿ ಸ್ವಾಹಾ
ಗೆಳೆಯರು ಬಾಗಿಲಿಗೆ ಅಂಟಿಸಿ ಹೋದ
ತೆಳ್ಳನ ಪುಟ್ಟ ಪಿಂಕ್ ಹಾಳೆ
ಪತಂಗದ ರೆಕ್ಕೆಯ ಹಾಗೆ
ಬುರಬುರನೆ ಉರಿದು ಮತ್ತೆ ಬರೀ ಗಾಳಿ

ವರ್ಷದಲ್ಲದೆಷ್ಟೋ ಉರವಲು
ದಿನಸಿಯ ಪಟ್ಟಿ, ಅರ್ಧ ಬರೆದ ಪದ್ಯಗಳು
ಎದ್ದೆದ್ದು ಕುಸಿವ
ಕೆನ್ನಾಲಿಗೆಯಂತ ದಿನಗಳು…
ಗಟ್ಟಿ ಕಲ್ಲುಗಳು ವಿರಳ

ಇದ್ದದ್ದು ಇದ್ದಕ್ಕಿದ್ದಂತೆ ಇಲ್ಲ
ಇಲ್ಲದ್ದು ಸೊಕ್ಕಿ, ಚೀರಾಡಿ ಜಾಗ ಖಾಲಿ ಮಾಡಿದ ಮೇಲೆ
ಸಣ್ಣ ಸಂಖ್ಯೆಗಳಿಂದ ಮತ್ತೆ ಲೆಕ್ಕ ಶುರು ಮಾಡಿದ್ದೇನೆ
ಒಂದು ಹೆಜ್ಜೆ ನೃತ್ಯ,
ಕೆಳೆದ, ಉಳಿದ ಎಲೆಗಳ ಆಟ

ಧಗಧಗ ಬೆಂಕಿ ಉರಿದು ಆರಿದ ಮೇಲೆ
ಚಟಪಟಗುಟ್ಟುತ್ತಿರುವುದು
ಮಾಡದ ಕೆಲಸಗಳ ಕೆಂಡ

ಮೂಲ: ನವೋಮಿ ಶಿಹಾಬ್ ನೈ

 

Advertisements

2 ಟಿಪ್ಪಣಿಗಳು »

  1. ಕೆ.ಫಣಿರಾಜ್ said

    ಅನುವಾದವಾದರೇನು. ಪದ್ಯಗಳು ಇಲ್ಲಿ ಈ ಊರಲ್ಲಿ, ಕನ್ನಡ ಮಾತನಾಡುವವರ ಇರುವಿಕೆಯ ಸ್ಥಿತಿಯನ್ನು ಕಟ್ಟಿಕೊಟ್ಟಿವೆ-ಈ ಯುಗದಲ್ಲಿ ಅನುಭಾವ,ಅನುಭವಗಳು ಅಂಥಾ ಪ್ರಾದೇಶಿಕವೇನೂ ಅಲ್ಲ. ಹಾಗೆಯೇ, ತಮ್ಮ ಪ್ರವೇಶಿಕೆಯ ಮಾತುಗಳ ಹಗುರ ಪಂಚ್-ಲೈಟ್ ವೇಟ್ ಬಾಕ್ಸರನ ಪಂಚುಗಳ ಹಾಗೆ- ನಮ್ಮ ಇರುವಿಕೆಯ ಅರಿವಿಗೆ ಹೊಂದಿಕೊಂಡಂತ್ತಿವೆ. ಭಾವಗಳನ್ನು ಆಡಾಡಿಕೊಂಡು ಭಾಷೆಯಲ್ಲಿ ಇಳಿಸುವ ಕಲೆ ನಿಮಗೆ ಒಲಿದಿದೆ. ಸಾಧ್ಯವಾದಷ್ಟು ಬರೆಯುತ್ತಿರಿ-ಎನ್ನುವುದು ಬೇಡುವವರ ಒಣ ಮಾತು-ಒಣದಾದರೂ, ಹೊಸ ವರ್ಷದ ಮಾತು.

  2. ಸಹಜವಾಗಿವೆ. ಅಭಿನಂದನೆಗಳು

RSS feed for comments on this post · TrackBack URI

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

Connecting to %s

%d bloggers like this: